ಪೀಠಿಕೆ ಬದಲಾಯಿಸಿ

ಜ್ಯೂನಿಪರ್ ಎಂಬ ನಿತ್ಯ ಹಸಿರಿನ ಕುರುಚಲು ಗಿಡವು ಹಿಮಾಲಯದಲ್ಲಿ ಕುಮಾವುನ್‌ನಿಂದ ಪಶ್ಚಿಮದ ಕಡೆಗೆ ೧,೫೨೦-೪,೨೭೦ ಮೀಟರ್ ಎತ್ತರದಲ್ಲಿ ಬೆಳೆಯುತ್ತದೆ. ಕೆಲವೊಮ್ಮೆ ಇದು ಚಿಕ್ಕ ಮರದ ಎತ್ತರಕ್ಕೆ ಬೆಳೆಯುತ್ತದೆ. ಮುಂಡ ನೇರವಾಗಿದ್ದು ರೆಂಬೆಗಳು ಹರಡಿಕೊಂಡಿರುತ್ತವೆ ಮತ್ತು ತೊಗಟೆ ಛಿದ್ರವಾಗಿರುತ್ತದೆ. ಅಂಡಾಕಾರದ ನೇರ ಮತ್ತು ಗಡುಸಾದ ಎಲೆಗಳು ೬-೧೩ ಮಿ.ಮೀಟರ್ ಉದ್ದವಾಗಿದ್ದು ಅದಕ್ಕೆ ಮೊನಚಾದ ಮುಳ್ಳಿನಂತಹ ತುದಿಗಳಿರುತ್ತದೆ. ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಬರುವ ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಗಿಡಗಳಲ್ಲಿ ಬಿಡುತ್ತದೆ. ಗಂಡು ಹೂಗಳು ಚಿಕ್ಕ ಗೊಂಚಲುಗಳಲ್ಲಿಯೂ, ಹೆಣ್ಣು ಹೂಗಳು ಚಿಕ್ಕ ಶಂಕುವಿನಾಕಾದ ಗೊಂಚಲುಗಳಲ್ಲಿಯೂ ಬಿಡುತ್ತವೆ. ತಿರುಳು ಹೆಚ್ಚಿರುವ ಸಣ್ಣ ಹಣ್ಣುಗಳು ಎರಡನೆಯ ವರ್ಷದವರೆಗೆ ಪಕ್ವವಾಗುವುದಿಲ್ಲ. ಸುಮಾರು ದುಂಡಾಗಿರುವ ಹಣ್ಣು ೧೦-೧೩ ಮಿ.ಮೀಟರ್ ವ್ಯಾಸ ಹೊಂದಿರುತ್ತದೆ. ಪಕ್ವವಾದಾಗ ಕಡು ನೇರಳೆ ಬಣ್ಣದ್ದಾಗಿರುತ್ತದೆ. ಮೇಲೆ ಮೇಣದಂತಹ ಕಳೆಯಿರುತ್ತದೆ; ಮೇಲ್ಭಾಗ ಮೂರು ಪದರಗಳು ಕೆಲವೊಮ್ಮೆ ಬಿಚ್ಚಿಕೊಂಡಿದ್ದು, ಒಳಗಿನ ಬೀಜಗಳು ಕಾಣುತ್ತಿರುತ್ತವೆ. ಉದ್ದವಾದ ಅಂಡಾಕಾರದ ಎಲುಬಿನಂತಹ ಬೀಜಗಳು ಕಂದು ಬಣ್ಣದ ತಿರುಳಿನಲ್ಲಿ ಹುದುಗಿರುತ್ತವೆ. ಗಿಡವೂ ಅನೇಕ ಭೌಗೋಳಿಕ ಮತ್ತು ತೋಟದ ಬಗೆಗಳನ್ನು ಹೊಂದಿರುತ್ತದೆ; ನೆಲದ ಮೇಲೆ ಹರಡಿಕೊಳ್ಳುತ್ತದೆ. ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ೬೦-೯೦ ಸೆಂ.ಮೀ. ಎತ್ತರ ಮಾತ್ರ ಬೆಳೆಯುತ್ತದೆ. ಗಿಡವು ಮಾರ್ಚ್-ಎಪ್ರೀಲ್‌ನಲ್ಲಿ ಹೂ ಬಿಡುತ್ತದೆ ಮತ್ತು ಹಣ್ಣುಗಳು ಎರಡನೆಯ ವರ್ಷದ ಆಗಸ್ಟ್- ಸೆಪ್ಟೆಂಬರ್‌ನಲ್ಲಿ ಪಕ್ವವಾಗುತ್ತವೆ. ಸಹಜ ಪರಿಸ್ಥಿತಿಯಲ್ಲಿ ಹಣ್ಣುಗಳನ್ನು ನುಂಗುವ ಪಕ್ಷಿಗಳು ಬೀಜಗಳನ್ನು ವಿಸರ್ಜಿಸಿ ಹರಡುತ್ತವೆ. ಜ್ಯೂನಿಪರ್ ಹಣ್ಣುಗಳಿಗೆ ಜಿನ್‌ನಂತಹ ವಾಸನೆಯೂ ಮತ್ತು ಮಧುರ ಟರ್ಪೆಂಟೈನ್‌ನಂತಹ ರುಚಿಯೂ, ನಂತರ ಬರುವ ರುಚಿ ಸ್ವಲ್ಪ ಕಹಿಯಾಗಿಯೂ ಇರುತ್ತವೆ. ವ್ಯಾಪಾರದ ಜ್ಯೂನಿಪರ್ ಕಾಯಿಗಳನ್ನು ಪಕ್ವವಾದ ಜ್ಯೂನಿಪರ್ ಹಣ್ಣುಗಳನ್ನು ಒಣಗಿಸಿ ಪಡೆಯುತ್ತಾರೆ. ಈ ಕಾಯಿಗಳನ್ನು ಭಟ್ಟಿಗೆ ಹಾಕಿ ಹೆಚ್ಚು ಬೇಡಿಕೆ ಇರುವ ತೈಲವನ್ನು ಪಡೆಯುತ್ತಾರೆ.

ಸಂಯೋಜನೆ ಬದಲಾಯಿಸಿ

ಹಣ್ಣುಗಳಲ್ಲಿ, ತೈಲವಲ್ಲದೆ, ಹುದುಗೇಳುವ ಸಕ್ಕರೆಗಳು (೩೩%), ರಾಳ (೮%) ಜೂನಿವೆರಿನ್ ಎಂಬ ಟ್ಯಾನಿನ್-ಸಕ್ಕರೆ ಮಿಶ್ರಣ (೦.೩೬%), ಸ್ಥಿರಎಣ್ಣೆ, ಸಸಾರಜನಕ ಪದಾರ್ಥ, ಮೇಣ, ಅಂಟು, ಪೆಕ್ಟಿನ್, ಸಾವಯವ ಆಮ್ಲಗಳು (ಫಾರ್ಮಿಕ್, ಅಸೆಟಿಕ್, ಮೇಲಿಕ್, ಆಕ್ಸಾಲಿಕ್ ಮತ್ತು ಗೈಕಾಲಿಕ್) ಮತ್ತು ಪೊಟ್ಯಾಷಿಯಂ ಲವಣಗಳು ಇರುತ್ತವೆ. ಆ್ಯಸ್ಕಾರಿಬಿಕ್ ಆಮ್ಲ ಹೆಚ್ಚಾಗಿರುತ್ತದೆ.

  1. ಕಲಬೆರಕೆ: ಹಿಂದೆ ಜ್ಯೂನಿಪರ್ ಕಾಯಿಗಳನ್ನು ಕಡಿಮೆ ದರ್ಜೆಯ ಕೆಲವು ಕಾಯಿಗಳಿಂದ ಕಲಬೆರಕೆ ಮಾಡಿತ್ತಿದ್ದರು; ೧)ಜ್ಯೂ, ಕಮ್ಯೂನಿಸ್ ವಾಲ್ ‘ನಾನ್’ …ಲೌಡ್, ೨)ಜ್ಯೂ, ಆಕ್ಸೀಡ್ರಸ್…ಲಿನ್. ಆದರೆ,ಈಗ ಈ ಕಾಡು ಕಾಯಿಗಳನ್ನು ಎತ್ತರ ಪ್ರದೇಶಗಳಿಂದ ಕಿತ್ತು ತರುವ ಖರ್ಚು ಹೆಚ್ಚಾಗಿರುವುದರಿಂದ ಮತ್ತು ಗುಣಲಕ್ಷಣಗಳನ್ನು ನಿರ್ಧಾರ ಮಾಡಿ ಕಡ್ಡಾಯ ಪಡಿಸುವುದರಿಂದ, ಈ ರೀತಿಯ ಕಲಬರಕೆ ನಿಂತು ಹೋಗಿದೆ.
  2. ಚಂಚಲ ತೈಲ: ಜ್ಯೂನಿಪರ್ ತೈಲವನ್ನು ಹಣ್ಣುಗಳು ಹಬೆ ಭಟ್ಟಿಯಿಂದ ಪಡೆಯುತ್ತಾರೆ. ಹಣ್ಣುಗಳ ಗುಣಕ್ಕೆ ತಕ್ಕಂತೆ ೦.೮% ರಿಂದ ೧.೬% ತೈಲದ ಇಳುವರಿಯಾಗುತ್ತದೆ. ಪಕ್ವವಾಗದ ಕಾಯಿಗಳಿಂದ ಬರುವ ತೈಲ ಕೆಳ ದರ್ಜೆಯದು; ಬಹಳ ಪಕ್ವವಾಗಿದ್ದರೆ ತೈಲವು ರಾಳವಾಗುತ್ತದೆ. ಮದ್ಯಸಾರಯುಕ್ತ ಪಾನೀಯಗಳನ್ನು ಭಟ್ಟಿ ಹಾಕಿ ಪಡೆಯುವಾಗ ಜ್ಯೂನಿಪರ್ ತೈಲವು ಉಪ-ಉತ್ಪನ್ನವಾಗಿ ದೊರೆಯುತ್ತದೆ.ಆದರೆ ಈ ತೈಲವು ಹಣ್ಣುಗಳ ನೇರ ಭಟ್ಟಿಯಿಂದ ಬರುವ ತೈಲಕ್ಕಿಂತ ಕಡಿಮೆ ದರ್ಜೆಯದು. ಇದರಲ್ಲಿ ಸುವಾಸನೆಯ ಸಹಜ ಆಮ್ಲಜನಕಯುಕ್ತ ಸಂಯುಕ್ತಗಳು ಕಡಿಮೆಯಾಗಿರುತ್ತವೆ.
  3. ತೈಲದ ಸಂಯೋಜನೆ: ಜ್ಯೂನಿಪರ್ ತೈಲವು ಬಣ್ಣರಹಿತವಾಗಿ, ಇಲ್ಲ ತಿಳಿ ಹಸಿರು-ಹಳದಿ ಬಣ್ಣದಾಗಿರುತ್ತದೆ. ಇದಕ್ಕೆ ಹಣ್ಣಿನ ವಿಶಿಷ್ಟ ವಾಸನೆಯೂ ಖಾರ ಮತ್ತು ಕಹಿ ರುಚಿಯೂ ಇರುತ್ತವೆ. ಹೆಚ್ಚುಕಾಲ ಇಟ್ಟಾಗ ತೈಲ ಮಂದವಾಗಿ ಟರ್ಪೆಂಟೈನ್‌ನಂತಹ ವಾಸನೆ ಪಡೆಯುತ್ತದೆ. ಪಕ್ವವಾದ ಹಣ್ಣುಗಳನ್ನು ಭಟ್ಟಿಗೆ ಹಾಕುವುದರಿಂದ ಬರುವ ತೈಲವು ಈ ಲಕ್ಷಣಗಳನ್ನು ಹೊಂದಿರುತ್ತದೆ- ಸಾಪೇಕ್ಷ ಸಾಂದ್ರತೆ (೧೫); ೦.೮೬೭-೦.೮೮೨; ವಕ್ರೀಕರಣ ಸೂಚ್ಯಂಕ (೨೦); ೧.೪೭೨-೧.೪೮೪; ದೃಕ್ ಪರ್ಯಾಯ;-೧೩(ಕೆಲವೊಮ್ಮೆ ಇದು ಬಲ ಪರ್ಯಾಯದಲ್ಲಿ ಆಗುತ್ತದೆ); ಆ್ಯಸಿಡ್ ಸಂಖ್ಯೆ;೩ರವರೆಗೆ; ಎಸ್ಟರ್ ಸಂಖ್ಯೆ; ೧-೧೨; ಅಸಿಟಿಲೇಶನ್ ಆದ ಮೇಲೆ ಎಸ್ಟರ್ ಸಂಖ್ಯೆ; ೧೯-೩೧; ೯೦% ಮದ್ಯಸಾರದಲ್ಲಿ ವಿಲೀನತ್ವ: ೧ ಭಾಗ ೫-೧೦ ಅಳತೆಯಲ್ಲಿ ವಿಲೀನವಾಗುತ್ತದೆ. ಹಳೆಯದಾದಂತ ಈ ವಿಳೀನತ್ವ ಕಡಿಮೆಯಾಗುತ್ತಾ ಹೋಗುತ್ತದೆ.

ಉಪಯೋಗಗಳು ಬದಲಾಯಿಸಿ

  1. ಆಹಾರವಾಗಿ ಮತ್ತು ರಿಚಿಕಾರಕವಾಗಿ: ಈ ಹಣ್ಣುಗಳನ್ನು ಜಿನ್ ಪಾನೀಯದ ಮತ್ತು ಆಹಾರ ಪದಾರ್ಥಗಳ ರುಚಿಕಾರಕವಾಗಿ, ಕೆಲವೊಮ್ಮೆ ಆಹಾರವಾಗಿಯೂ ಉಪಯೋಗಿಸುತ್ತಾರೆ. ಯೂರೋಪಿನಲ್ಲಿ ಹೆಚ್ಚಿನ ಪ್ರಮಾಣದ ಹಣ್ಣನ್ನು ಜಿನ್ ಮಾದರಿಯ ಮದ್ಯಪಾನೀಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದಕ್ಕೆ ಹಣ್ಣುಗಳನ್ನು ಜಜ್ಜಿ ಬಿಸಿ ನೀರಿನಲ್ಲಿ ಇಟ್ಟು ಹುದುಗು ಬರಲು ಬಿಡುತ್ತಾರೆ; ಹುದುಗು ಬಂದ ಮಿಶ್ರಣವನ್ನು ಭಟ್ಟಿ ಇಳಿಸಿ, ಶುದ್ಧಗೊಳಿಸುತ್ತಾರೆ. ೧೦೦೦ಕಿ ಲೊ ಹಣ್ಣು ೧೬-೧೮ ಲೀಟರ್ ಪಾನೀಯ (ಇದರಲ್ಲಿ ೪೦-೫೦% ಮದ್ಯಸಾರವಿರುತ್ತದೆ) ಮತ್ತು ೫-೬ಕಿಲೊ ತೈಲ ಕೊಡುತ್ತದೆ. ಜ್ಯೂನಿಪರ್ ತೈಲವನ್ನು ಹೆಚ್ಚಾಗಿ ಜಿನ್ ರಿಚಿಕಾರಕ ಮಿಶ್ರಣಗಳನ್ನಲ್ಲಿ, ಮದ್ಯಸಾರಯುಕ್ತ ಪಾನೀಯಗಳಲ್ಲಿ ಮತ್ತು ಸಿಹಿ ಮಾಡಿದ ಮದ್ಯಗಳಲ್ಲಿ ಬಳಸುತ್ತಾರೆ. ಎರಡು ಸಾರಿ ಶುದ್ಧೀಕರಿಸಿದ ತೈಲಕ್ಕೆ ಹೆಚ್ಚು ರುಚಿಕಾರಕ ಗುಣವಿರುತ್ತದೆ. ಕೃತಕ ಜೂನಿಪರ್ ತೈಲಗಳನ್ನು ಮಾಡಿರುವರು. ಮರದ ಎಲ್ಲಾ ಭಾಗಗಳಲ್ಲೂ ತೈಲ ಇರುತ್ತದೆ. ಟರ್ಪೆನ್‌ಟೈನ್ ವಾಸನೆಯ ರಸವು ಮರದಿಂದ ಒಸರಿ ತೊಗಟೆಯ ಮೇಲೆ ಗಟ್ಟಿಯಾಗುತ್ತದೆ; ಇದನ್ನು ತಪ್ಪಾಗಿ ಗಮ್ ಸ್ಯಾಂರ‍್ಯಾಕ್ ತದ್ರೂಪವೆಂದು ಪರಿಗಣಿಸಿದ್ದಾರೆ.
  2. ವೈದ್ಯದಲ್ಲಿ: ಹಣ್ಣು ಮತ್ತು ತೈಲಕ್ಕೆ ವಾತಹರ, ಉತ್ತೇಜಕ ಮತ್ತು ಮೂತ್ರವರ್ಧಕ ಗುಣಗಳಿವೆ. ಇವನ್ನು ವಿವಿಧ ಬಗೆಯ ಜುಲೋದರ ರೋಗಗಳ ಚಿಕಿತ್ಸೆಯಲ್ಲಿ, ಮುಖ್ಯವಾಗಿ ಇತರ ಔಷಧಗಳೊಂದಿಗೆ ಉಪಯೋಗಿಸಿವುದು ಲಾಭಕರ. ಇವನ್ನು ಮೂತ್ರಜನಕಾಂಕ ಭಾಗದ ರೋಗಗಳಾದ ಗೊನೋರಿಯಾ, ಗ್ಲೀಚ್ ಮತ್ತು ಗ್ಲೂಕೋರಿಯಾಗಳ ಚಿಕಿತ್ಸೆಯಲ್ಲಿ ಉಪಯೋಗಿಸಿತ್ತಾರೆ. ಜ್ಯೂನಿಪರ್ ತೈಲವು ಬಹು ಹಿಂದಿನಿಂದ ಮೂತ್ರವರ್ಧಕವೆಂದು ತಿಳಿದಿದೆ. ಆದರೆ ಇದಕ್ಕೆ ಹುಣ್ಣಾದ ಅವಯವಗಳ ಉರಿಬರಿಸುವ ಗುಣವಿರುವುದರಿಂದ ಪ್ರಮಾಣದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು.

ಉಲ್ಲೇಖಗಳು ಬದಲಾಯಿಸಿ

  1. ಜೆ.ಎಸ್.ಪೃಥಿ, ಸಾಂಬಾರ ಜಿನಸಿಗಳು ಮತ್ತು ರುಚಿಕಾರಕಗಳು, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, ೧೯೯೫.
  2. ಡಾ.ರಾಜೇಶ್ವರಿ, ಮನೆಯಲ್ಲಿ ಪ್ರಕೃತಿ ಚಿಕಿತ್ಸೆ, ಸಪ್ನ ಬುಕ್ ಹೌಸ್, ಬೆಂಗಳೂರು, ೧೯೯೮.
"https://kn.wikipedia.org/w/index.php?title=ಜೂನಿಪರ್&oldid=1152553" ಇಂದ ಪಡೆಯಲ್ಪಟ್ಟಿದೆ