ಜೀವತ್‌ರಾಮ್ ಕೃಪಲಾನಿ


ಆಚಾರ್ಯ ಕೃಪಲಾನಿ ಎಂದೇ ಪ್ರಖ್ಯಾತರಾದ ಜೀವತ್ ರಾಮ್ ಭಗವಾನ್ ದಾಸ್ ಕೃಪಲಾನಿ (ನವೆಂಬರ್ ೧೧, ೧೮೮೮ - ಮಾರ್ಚ್ ೧೯, ೧೯೮೨) ಮಹಾನ್ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಪರಿಸರವಾದಿಗಳಾಗಿ, ಆಧ್ಯಾತ್ಮಿಗಳಾಗಿ ಮತ್ತು ಜನಹಿತಚಿಂತಕಾರಾಗಿ ಭಾರತೀಯ ಸಮುದಾಯದಲ್ಲಿ ಪ್ರಖ್ಯಾತರಾಗಿದ್ದಾರೆ.

ಜೀವತ್ ರಾಮ್ ಭಗವಾನ್ ದಾಸ್ ಕೃಪಲಾನಿ
ಆಚಾರ್ಯ ಕೃಪಲಾನಿ ಅವರು ಗಾಂಧೀಜಿ ಮತ್ತು ಮೌಲಾನಾ ಆಜಾದ್ ಅವರೊಂದಿಗೆ
ಜನನನವೆಂಬರ್ ೧೧, ೧೮೮೮
ಹೈದರಾಬಾದ್ ಸಿಂದ್, ಬಾಂಬೆ ಪ್ರೆಸಿಡೆನ್ಸಿ
ಮರಣಮಾರ್ಚ್ ೧೯, ೧೯೮೨
ಉದ್ಯೋಗವಕೀಲರು
ಇದಕ್ಕೆ ಖ್ಯಾತರುಭಾರತೀಯ ಸ್ವಾತಂತ್ರ್ಯ ಹೋರಾಟಗಾರರು
ಜೀವನ ಸಂಗಾತಿಸುಚೇತ ಕೃಪಲಾನಿ

ಜೀವನ ಬದಲಾಯಿಸಿ

ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಪರಿಸರವಾದಿ, ಅಧ್ಯಾತ್ಮಿ, ಜನಪರ ಹಿತಚಿಂತಕರಾದ ಆಚಾರ್ಯ ಜೀವತ್ ರಾಮ್ ಕೃಪಲಾನಿ ಅವರು ಜನಿಸಿದ ದಿನ ನವೆಂಬರ್ ೧೧, ೧೮೮೮. ಅವರು ಹುಟ್ಟಿ ಬೆಳೆದ ಊರು ಆಗಿನ ಭಾರತದ ಭಾಗವಾಗಿದ್ದ ಸಿಂದ್ ಪ್ರಾಂತ್ಯದ ಹೈದರಾಬಾದು. ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಪದವಿ ಪಡೆದು ಶಿಕ್ಷಕರಾಗಿದ್ದವರು ಮಹಾತ್ಮ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಬಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಾಗ ತಮ್ಮ ಹುದ್ಧೆಯನ್ನು ಬಿಟ್ಟು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಳಿದರು.

ಸ್ವಾತಂತ್ರ್ಯ ಚಳುವಳಿಯಲ್ಲಿ ಬದಲಾಯಿಸಿ

೧೯೨೦ರ ಬ್ರಿಟಿಷರ ವಿರುದ್ಧದ ಅಸಹಕಾರ ಚಳುವಳಿಯಿಂದ ಮೊದಲುಗೊಂಡಂತೆ ಎಂಭತ್ತರ ದಶಕದ ತುರ್ತುಪರಿಸ್ಥಿತಿಯವರೆಗೆ ಅವರು ಅಧಿಕಾರಶಾಹಿಯೊಂದಿಗಿನ ತಮ್ಮ ಭಿನ್ನಾಭಿಪ್ರಾಯಗಳ ಮೂಲಕ ಭಾರತೀಯ ಜನತೆಗೆ ಚಿರಪರಿಚಿತರಾದವರು. ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ಕಾರ್ಯಕರ್ತರಾಗಿ ದುಡಿದವರು. ಹಲವಾರು ಸೆರೆವಾಸಗಳಿಗೆ ಒಗ್ಗಿಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ನಿರಂತರ ತಮ್ಮನ್ನು ತೊಡಗಿಸಿಕೊಂಡವರು.

ಸ್ವಾತಂತ್ರ್ಯಾನಂತರದಲ್ಲಿ ಬದಲಾಯಿಸಿ

ಸ್ವಾತಂತ್ರ್ಯ ಬರುವ ವೇಳೆಗೆ ಯಾರು ಮುಂದಿನ ಪ್ರಧಾನಿ ಎಂಬ ಕಾಂಗ್ರೆಸ್ಸಿನ ಮತ ಚಲಾವಣೆಯಲ್ಲಿ ಮೊದಲು ಪಟೇಲರು ನಂತರದಲ್ಲಿ ಆಚಾರ್ಯ ಕೃಪಲಾನಿ ಅವರು ಅತ್ಯಧಿಕ ಮತ ಗಳಿಸಿದ್ದರೂ ಮಹಾತ್ಮ ಗಾಂಧೀಜಿಯವರ ಇಚ್ಚೆಯನ್ನು ಮನ್ನಿಸಿದ ಈ ಈರ್ವರೂ ನೆಹರೂ ಅವರ ನೇತೃತ್ವವನ್ನು ಒಪ್ಪಿಕೊಂಡರು. ಕೃಪಲಾನಿಯವರು ಭಾರತಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು.

ಮುಂದೆ ೧೯೫೦ರ ಅವಧಿಯಲ್ಲಿ ನೆಹರೂ ಅವರ ಬೆಂಬಲ ಹೊಂದಿದ್ದರೂ ಪಟೇಲರ ಆತ್ಮೀಯರಾದ ಟಾಂಡನ್ ಅವರ ವಿರುದ್ಧ ಅಧ್ಯಕ್ಷ ಚುನಾವಣೆಯಲ್ಲಿ ಸೋಲುಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ತೊರೆದು ರೈತ ಕಾರ್ಮಿಕರ ಪ್ರಜಾ ಪಕ್ಷ ಸ್ಥಾಪಿಸಿ ನಂತರ ಅದನ್ನು ಪ್ರಜಾ ಸೋಷಿಯಲಿಸ್ಟ್ ಪಕ್ಷದಲ್ಲಿ ವಿಲೀನಗೊಳಿಸಿದರು. ಅವರ ಪತ್ನಿ ಸುಚೇತ ಕೃಪಲಾನಿ ಅವರು ಕಾಂಗ್ರೆಸ್ ಪಕ್ಷದಲ್ಲೇ ಇದ್ದು ಹಲವಾರು ಅವಧಿಯವರೆಗೆ ವಿವಿಧ ಮಂತ್ರಿಪದವಿಗಳಲ್ಲಿ ರಾರಾಜಿಸಿದ್ದರು. ಆಕೆ ಉತ್ತರ ಪ್ರದೇಶದ ಪ್ರಥಮ ಮಹಿಳಾ ಮುಖ್ಯಮಂತ್ರಿಯೂ ಆಗಿದ್ದರು. ೧೯೬೩ರಲ್ಲಿ ಭಾರತವು ಚೈನಾ ದೇಶದ ವಿರುದ್ಧದ ಯುದ್ಧದಲ್ಲಿ ಹೀನಾಯವಾದ ಸೋಲುಂಡ ಹಿನ್ನೆಲೆಯಲ್ಲಿ ಆಚಾರ್ಯ ಕೃಪಲಾನಿ ಅವರು ನೆಹರೂ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದರು.

ನಿರಂತರವಾಗಿ ನೆಹರೂ ಅವರ ಆಡಳಿತ ಮತ್ತು ನೀತಿಗಳನ್ನು ವಿರೋಧಿಸುತ್ತಾ ಬಂದ ಕೃಪಲಾನಿಯವರು ಜೊತೆ ಜೊತೆಗೆ ಪರಿಸರ, ಆಧ್ಯಾತ್ಮ ಮುಂತಾದ ವಿಚಾರಗಳ ಜೊತೆಗೆ ಕಾಳಜಿ ವಹಿಸುತ್ತಾ ವಿನೋಬಾ ಭಾವೆಯವರ ಆದರ್ಶಗಳತ್ತ ನಡೆಯ ತೊಡಗಿದರು.

ತುರ್ತುಪರಿಸ್ಥಿತಿಯಲ್ಲಿ ಬದಲಾಯಿಸಿ

ಇಂದಿರಾ ಗಾಂಧಿಯವರ ಧೋರಣೆಗಳನ್ನು ನಿರಂತರವಾಗಿ ವಿರೋಧಿಸುತ್ತಾ ಬಂದ ಕೃಪಲಾನಿ ಅವರನ್ನು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮೊದಲ ದಿನದಿಂದಲೇ ಕಾರಾಗ್ರಹದಲ್ಲಿ ಇರಿಸಲಾಗಿತ್ತು. ಮುಂದೆ ಜಯಪ್ರಕಾಶ್ ನಾರಾಯಣ ಮತ್ತು ಆಚಾರ್ಯ ಕೃಪಲಾನಿ ಅವರು ಜನತಾ ಪಕ್ಷದ ಮುಖೇನ ಭಾರತದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಕೇಂದ್ರ ಸರ್ಕಾರವನ್ನು ಸ್ಥಾಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

ವಿದಾಯ ಬದಲಾಯಿಸಿ

ಆಚಾರ್ಯ ಕೃಪಲಾನಿಯವರು ೧೯೮೨ರ ವರ್ಷದ ಮಾರ್ಚ್ ತಿಂಗಳ ೧೯ರಂದು ತಮ್ಮ ೯೪ನೆಯ ವಯಸ್ಸಿನಲ್ಲಿ ನಿಧನರಾದರು.

ಉಲ್ಲೇಖ ಬದಲಾಯಿಸಿ

  1. ಇಂಗ್ಲಿಷ್ ವಿಕಿಪೀಡಿಯಾದಲ್ಲಿ
  2. [inc.in/organization/105-J.B.-Kripalani/profile]
  3. [www.thefamouspeople.com/profiles/j-b-kirpalani-5303.php]
  4. [www.liveindia.com/freedomfighters/JBKripalani.html]