ಗೂಬೆಗಳು ೨೦೦ ಅಸ್ತಿತ್ವದಲ್ಲಿರುವ ಹಿಂಸ್ರಪಕ್ಷಿ ಪ್ರಜಾತಿಗಳನ್ನು ಹೊಂದಿರುವ ಸ್ಟ್ರಿಜಿಫೋರ್ಮೀಸ್ ಗಣಕ್ಕೆ ಸೇರಿದ ಪಕ್ಷಿಗಳ ಒಂದು ಗುಂಪು. ಬಹುತೇಕ ಪಕ್ಷಿಗಳು ಒಂಟಿ ಹಾಗು ಇರುಳಿನ ಪಕ್ಷಿಗಳು, ಆದರೆ ಕೆಲವು ಅಪವಾದಗಳಿವೆ (ಉದಾ. ಉತ್ತರ ಗಿಡುಗ ಗೂಬೆ). ಗೂಬೆಗಳು ಹೆಚ್ಚಾಗಿ ಚಿಕ್ಕ ಸಸ್ತನಿಗಳು, ಕೀಟಗಳು, ಮತ್ತು ಇತರ ಪಕ್ಷಿಗಳನ್ನು ಬೇಟೆಯಾಡುತ್ತವೆ, ಆದರೆ ಕೆಲವೇ ಕೆಲವು ಪ್ರಜಾತಿಗಳು ಮೀನುಗಳನ್ನು ಬೇಟೆಯಾಡುವುದರಲ್ಲಿ ಪರಿಣತಿ ಪಡೆದಿವೆ.

ಗೂಬೆ
Temporal range: Late Paleocene–Recent
Little owl (Athene noctua)
Otus jolandae call
Scientific classification e
Unrecognized taxon (fix): Strigiformes
Families

Strigidae
Tytonidae
Ogygoptyngidae (fossil)
Palaeoglaucidae (fossil)
Protostrigidae (fossil)
Sophiornithidae (fossil)

Range of the owl, all species.
Synonyms

Strigidae sensu Sibley & Ahlquist


ಲಕ್ಷಣಗಳು ಬದಲಾಯಿಸಿ

ಸ್ಟ್ರಿಜಿಫಾರ್ಮೀಸ್ ಗಣದ ಟೈಟಾನಿಡೀ ಮತ್ತು ಸ್ಟ್ರಿಜಿಡೀ ಕುಟುಂಬಗಳಿಗೆ ಸೇರಿದ ಸುಮಾರು 133 ಪ್ರಭೇದಗಳ ಹಕ್ಕಿಗಳಿಗಿರುವ ಸಾಮಾನ್ಯ ಹೆಸರು (ಗೂಗೆ). ಎಲ್ಲ ಪ್ರಭೇದಗಳಿಗೂ ಸಮಾನವೆನಿಸುವ ಕೆಲವು ವಿಚಿತ್ರ ಲಕ್ಷಣಗಳಿವೆ. ಇವುಗಳಲ್ಲಿ ಮುಖ್ಯವಾದವು - ತಟ್ಟೆಯಂತೆ ಅಗಲವಾಗಿರುವ ಮುಖ, ಮುಖದ ಮುಂಭಾಗದಲ್ಲಿರುವ ದೊಡ್ಡ ಕಣ್ಣುಗಳು, ದಪ್ಪತಲೆ, ಮೋಟು ಕತ್ತು, ಮೃದುವಾದ ತುಪ್ಪಳದಂಥ ರೆಕ್ಕೆಪುಕ್ಕಗಳು. ಗೂಬೆಗಳು ತಮ್ಮ ಕೊಕ್ಕೆಯಂಥ ಕೊಕ್ಕು ಮತ್ತು ಬಲವಾದ ಕಾಲುಗಳಿಂದ ಜೀವಂತ ಆಹಾರ ಪ್ರಾಣಿಗಳನ್ನು ಬೇಟೆಯಾಡಿ ತಿಂದು ಜೀವಿಸುತ್ತವೆ. ಇದರಿಂದಾಗಿ ಇವು ಹದ್ದು, ಗಿಡುಗಗಳಂತೆಯೇ ಹಿಂಸ್ರ ಪಕ್ಷಿಗಳು ಅನ್ನಿಸಿಕೊಂಡಿವೆ. ಈ ಕಾರಣದಿಂದಲೇ ಹಿಂದೆ ಇವನ್ನು ಹದ್ದು ಮತ್ತು ಗಿಡುಗಗಳ ಗುಂಪಿಗೆ ಸೇರಿಸಲಾಗಿತ್ತು. ಆದರೆ ಈ ಲಕ್ಷಣ ಹದ್ದು ಮತ್ತು ಗೂಬೆಗಳ ಸಮಾಂತರ ವಿಕಾಸವನ್ನು ತೋರಿಸುವುದೇ ಹೊರತು ಇವುಗಳ ಸಂಬಂಧವನ್ನಲ್ಲ. ಗೂಬೆಗಳ ಅಂಗರಚನೆ ಮತ್ತು ಸ್ವಭಾವಗಳಿಗೂ ಹದ್ದುಗಳ ಗುಣ ಲಕ್ಷಣಗಳಿಗೂ ಅನೇಕ ವ್ಯತ್ಯಾಸಗಳಿವೆ. ಹದ್ದುಗಳು ಹಗಲಿನಲ್ಲಿ ಬೇಟೆಯಾಡುವುವಾದರೆ ಗೂಬೆಗಳ ಚಟುವಟಿಕೆ ರಾತ್ರಿಯಲ್ಲಿ ಮಾತ್ರ. ಇದಕ್ಕೆ ಕಾರಣ ಗೂಬೆಗಳ ಪ್ರಮುಖ ಆಹಾರವಾದ ಇಲಿ, ಹೆಗ್ಗಣಗಳು ನಿಶಾಚರಿಗಳು. ಇವು ರಾತ್ರಿ ಬೇಟೆಯಾಡುವುದರಿಂದ ಗೂಬೆಗಳಿಗೆ ಬೆಳಗಿನ ಸಮಯ ಕಣ್ಣು ಕಾಣುವುದಿಲ್ಲ ಎಂಬ ತಪ್ಪು ಕಲ್ಪನೆ ಜನರಲ್ಲಿ ಮನೆ ಮಾಡಿದೆ. ವಾಸ್ತವದಲ್ಲಿ ಗೂಬೆಗಳಿಗೆ ಕಣ್ಣು, ಕಿವಿ ಬಹಳ ಚುರುಕಾಗಿರುತ್ತವೆ.

ಪ್ರಭೇದಗಳು ಬದಲಾಯಿಸಿ

ಅಂಟಾರ್ಕ್ಟಿಕ ಮತ್ತು ಪ್ರಮುಖ ಖಂಡಗಳಿಂದ ಬಲುದೂರವಿರುವ ಕೆಲವು ದ್ವೀಪಗಳನ್ನು ಬಿಟ್ಟು ಪ್ರಪಂಚದ ಎಲ್ಲ ಪ್ರದೇಶಗಳಲ್ಲೂ ಗೂಬೆಗಳು ಕಂಡುಬರುತ್ತವೆ. ಇವಕ್ಕೆ ಹೆಚ್ಚು ಕಡಿಮೆ ಎಲ್ಲ ಬಗೆಯ ಪರಿಸರಗಳಿಗೂ - ಮರುಭೂಮಿಯ ಬಂಜರು ವಾತಾವರಣದಿಂದ ಹಿಡಿದು ಉತ್ತರ ಮೇರು ಪ್ರದೇಶದ ತಂಡ್ರಾ ಪ್ರದೇಶ ಹಾಗೂ ಉಷ್ಣವಲಯದ ಮಳೆಕಾಡುಗಳ ತೇವಪೂರಿತ ವಾತಾವರಣದ ವರೆಗೂ - ಹೊಂದಿಕೊಂಡು ಜೀವಿಸುವ ಸಾಮರ್ಥ್ಯವಿದೆ. ಮೇಲೆ ಹೇಳಿದಂತೆ ಗೂಬೆಗಳು ಟೈಟಾನಿಡೀ ಮತ್ತು ಸ್ಟ್ರಿಜಿಡೀ ಕುಟುಂಬಗಳಿಗೆ ಸೇರಿವೆ. ಮೊದಲನೆಯ ಕುಟುಂಬಕ್ಕೆ ಕಣಜದ ಗೂಬೆಯ ವಿವಿಧ ಪ್ರಭೇದಗಳೂ (ಬಾರ್ನ್ ಔಲ್) ಎರಡನೆಯ ಕುಟುಂಬಕ್ಕೆ ಪ್ರರೂಪೀ ಗೂಬೆಗಳ (ಟಿಪಿಕಲ್ ಔಲ್ಸ್‌) ಸುಮಾರು 122 ಪ್ರಭೇದಗಳೂ ಸೇರಿವೆ.


ಸ್ಟ್ರಿಜಿಡೀ ಕುಟುಂಬಕ್ಕೆ ಸೇರಿದ ಗೂಬೆಗಳು ಪ್ರರೂಪೀ (ಟಿಪಿಕಲ್) ಬಗೆಯವು ಎನಿಸಿಕೊಂಡಿವೆ. ಇವುಗಳಲ್ಲಿ ಹೆಚ್ಚು ಕಡಿಮೆ ಎಲ್ಲ ಪ್ರಭೇದಗಳೂ ನಿಶಾಚರಿಗಳು. ಈ ಲಕ್ಷಣಕ್ಕೆ ಅಪವಾದವಾಗಿ ಉತ್ತರಮೇರು ಪ್ರದೇಶಗಳಲ್ಲಿ ಕಂಡುಬರುವ ಮಂಜಿನ ಗೂಬೆ (ನಿಕ್ಟಿಯ ಸ್ಕ್ಯಾಂಡಿಯಾಕ್) ಮಾತ್ರ ಹಗಲಿನಲ್ಲಿ ಬೇಟೆಯಾಡಬಲ್ಲದು. ಇದು ವಾಸಿಸುವ ನೆಲೆಯಲ್ಲಿ ವರ್ಷದಲ್ಲಿ ಆರು ತಿಂಗಳು ಕಾಲ ಸೂರ್ಯ ಮುಳುಗದೇ ಇರುವುದೇ ಇದರ ಈ ಗುಣಕ್ಕೆ ಕಾರಣವಿರಬಹುದು. ಉಳಿದೆಲ್ಲ ಗೂಬೆಗಳಲ್ಲಿ ಅವುಗಳ ನಿಶಾಚರ ಜೀವನಕ್ಕೆ ಅನುಕೂಲವಾಗುವಂತೆ ಅತ್ಯಂತ ಚುರುಕಾದ ದೃಷ್ಟಿಶಕ್ತಿ ಮತ್ತು ಶಬ್ದ ಗ್ರಹಣಶಕ್ತಿಗಳಿವೆ. ಗೂಬೆಗಳ ಕಣ್ಣುಗಳಂತೂ ಬಲುದೊಡ್ಡಗಾತ್ರದವು. ಹೊರಗೆ ಸಾಕಷ್ಟು ದೊಡ್ಡದಾಗಿ ಕಾಣುವ ಇವು ನಿಜವಾಗಿ ಇನ್ನೂ ದೊಡ್ಡಗಾತ್ರದವು. 60 ಸೆಂಮೀ ಉದ್ದವಿರುವ ಮಂಜಿನ ಗೂಬೆಯ ಕಣ್ಣುಗುಡ್ಡೆಯ ಗಾತ್ರ ಸರಿಸುಮಾರು ಮನುಷ್ಯನ ಕಣ್ಣುಗುಡ್ಡೆಯ ಗಾತ್ರದಷ್ಟಿರುತ್ತದೆ. ಗೂಬೆಗಳ ಕಿವಿಯೂ ಬಲು ಚುರುಕು. ಹಲವಾರು ಪ್ರಭೇದಗಳು ಎರೆಪ್ರಾಣಿಗಳ ಓಡಾಟದ ಸದ್ದಿನ ಮೇಲೆಯೆ ಅವನ್ನು ಪತ್ತೆಹಚ್ಚಿ ಅವುಗಳ ಮೇಲೆರಗಿ ಹಿಡಿಯುತ್ತವೆ. ಹೀಗೆ ಶಬ್ದವನ್ನು ಗ್ರಹಿಸಲು ಅನುಕೂಲವಾಗಲೆಂದೇ ಗೂಬೆಗಳ ಮುಖ ಅಗಲವಾದ ತಟ್ಟೆಯಂತಿದೆಯೆಂದು ನಂಬಲಾಗಿದೆ. ಗೂಬೆಗಳ ಕಿವಿ ದೊಡ್ಡಗಾತ್ರದವು; ಇವನ್ನು ಚರ್ಮದ ಮಡಿಕೆಯೊಂದು ಭಾಗಶಃ ಮುಚ್ಚಿರುತ್ತದೆ. ಗೂಬೆಗಳ ಇನ್ನೊಂದು ಮುಖ್ಯ ಲಕ್ಷಣ ನಿಶ್ಯಬ್ದ ಹಾರಾಟ. ಇವು ಹಾರುವಾಗ, ಎರೆಪ್ರಾಣಿಯ ಮೇಲೆ ಎರಗುವಾಗ ಸ್ವಲ್ಪವೂ ಸದ್ದು ಮಾಡುವುದಿಲ್ಲ. ಇವುಗಳ ರೆಕ್ಕೆಗಳಲ್ಲಿನ ಮತ್ತು ದೇಹದ ಇತರ ಭಾಗಗಳಲ್ಲಿನ ಗರಿಗಳ ಬುಡದಲ್ಲಿ ಸದ್ದನ್ನು ಅಡಗಿಸುವಂಥ ಮೃದುವಾದ ತುಪ್ಪುಳಿನ ರೀತಿಯ ತಂತುಗಳಿರುವುದೇ ಇದಕ್ಕೆ ಕಾರಣ.


ಪ್ರರೂಪೀ ಗೂಬೆಗಳ ಹಲವಾರು ಪ್ರಭೇದಗಳ ತಲೆಯ ಮೇಲೆ ಕೊಂಬುಗಳಂತೆ ಕಾಣುವ ಕರಿಗಳ ಎರಡು ಗುಚ್ಚಗಳಿವೆ. ಉದಾ : ಕೊಂಬಿನ ಗೂಬೆ (ಯುರೇಷಿಯನ್ ಔಲ್). ಗೂಬೆಗಳ ಕತ್ತು ಮೋಟಾಗಿರುವಂತೆ ಕಂಡರೂ ವಾಸ್ತವವಾಗಿ ಉದ್ದವಾಗಿಯೇ ಇದೆ. ಕತ್ತಿನ ಸುತ್ತ ಉದ್ದವಾದ ಮತ್ತು ಸಡಿಲವಾಗಿ ಜೋಡಣೆಗೊಂಡ ಪುಕ್ಕಗಳಿರುವುದರಿಂದ ಕತ್ತು ಮೋಟಾಗಿರುವಂತೆ ಕಾಣುತ್ತದೆ. ಅಲ್ಲದೆ ಕತ್ತು ಯಾವ ಕಡೆಗೆ ಬೇಕಾದರೂ ಸುಲಭವಾಗಿ (ಸುಮಾರು 2700) ಬಾಗಬಲ್ಲದು. ಗೂಬೆಗಳ ಕಣ್ಣುಗಳು ಮನುಷ್ಯರಲ್ಲಿರುವಂತೆ ಮುಖದ ಮುಂಭಾಗದಲ್ಲಿರುವುದರಿಂದಲೂ ಕಣ್ಣುಗುಡ್ಡೆಗಳು ಅವುಗಳ ಗುಣಿಗಳಲ್ಲಿ ಆಚೀಚೆ ಹೆಚ್ಚು ಚಲಿಸಲಾರವಾದ್ದ ರಿಂದಲೂ ಗೂಬೆಗಳು ತಮ್ಮ ಅಕ್ಕಪಕ್ಕಗಳಲ್ಲಿ ಅಥವಾ ಹಿಂಭಾಗದೆಡೆ ನೋಡಬೇಕಾದರೆ ಈ ತೆರನ ಬಳುಕುವ ಕತ್ತು ಬಹಳ ಅನುಕೂಲ. ಗೂಬೆಗಳ ಆಹಾರ ಸೇವನೆಯ ಕ್ರಮವೂ ವಿಚಿತ್ರವೇ. ಇವು ತಮ್ಮ ಆಹಾರವನ್ನು ಹದ್ದು, ಗಿಡುಗಗಳಂತೆ ಕಿತ್ತು ತಿನ್ನದೆ, ಇಡಿಯಾಗಿ ನುಂಗಿಬಿಡುತ್ತವೆ. ಇಲಿ, ಹೆಗ್ಗಣ, ಹಾವು, ಹಕ್ಕಿಗಳು ಇವುಗಳ ಮುಖ್ಯ ಆಹಾರ. ಇವುಗಳ ಜಠರರಸ ಅತ್ಯಂತ ತೀಕ್ಷ್ಣ ರೀತಿಯದಾಗಿದ್ದು ಆಹಾರದ ಬಹುಪಾಲನ್ನು ಜೀರ್ಣಿಸಿಬಿಡುತ್ತದೆ. ಜೀರ್ಣವಾಗದೆ ಉಳಿಯುವ ಮೂಳೆ, ತುಪ್ಪುಳು, ಗರಿ ಮುಂತಾದ ವಸ್ತುಗಳನ್ನು ಸಣ್ಣ ಗುಳಿಗೆಗಳ ರೂಪದಲ್ಲಿ ಬಾಯಿಂದ ಉಗುಳಿಬಿಡುತ್ತವೆ. ಈ ಪರಿಪಾಠವನ್ನು ಗಳುಮುಳುಕ ಮತ್ತಿತರ ಹಕ್ಕಿಗಳಲ್ಲೂ ಕಂಡುಬರುತ್ತದೆ. ಜೀರ್ಣವಾಗದ ಎಲುಬು ಮತ್ತಿತರ ವಸ್ತುಗಳು ಸೇರಿ ಗುಳಿಗೆಗಳಾಗಲು ಸಹಾಯಕವಾಗುವಂತೆ ಗಳುಮುಳುಕ ತನ್ನದೇ ಪುಕ್ಕವನ್ನು ಕಿತ್ತು ನುಂಗುತ್ತದೆ. ಸಾಮಾನ್ಯವಾಗಿ ಗೂಬೆಗಳು ತಾವು ಬೇಟೆಯಾಡಿದ ಆಹಾರವನ್ನು ಹಿಡಿದ ಸ್ಥಳದಲ್ಲಿಯೇ ತಿನ್ನದೆ ತಮ್ಮ ಮೆಚ್ಚಿನ ಸ್ಥಳಗಳಿಗೆ ತಂದು ತಿನ್ನುತ್ತವೆ. ಇಂಥ ಜಾಗಗಳ ನೆಲದ ಮೇಲೆ ನೂರಾರು ವಿಸರ್ಜಿತ ಆಹಾರದ ಗುಳಿಗೆಗಳನ್ನು ಕಾಣಬಹುದು. ಇಂಥ ಗುಳಿಗೆಗಳನ್ನು ಬಿಡಿಸಿ ನೋಡಿದರೆ ಗೂಬೆಗಳ ಆಹಾರಪ್ರಾಣಿಗಳು ಯಾವುವು ಎಂಬುದನ್ನು ಪತ್ತೆಹಚ್ಚಬಹುದು. ಅನೇಕ ಸಲ ಈ ಶೋಧನೆಗಳು ಮಾನವನಿಗೆ ಗೊತ್ತಿರದಿದ್ದ ಹಲವಾರು ಜಾತಿಯ ಪ್ರಾಣಿಗಳ ಇರವನ್ನು ಬೆಳಕಿಗೆ ತಂದಿವೆ. ಗೂಬೆಗಳ ಕೂಗು ಬಲು ಭಯಾನಕ. ಒಮ್ಮೊಮ್ಮೆ ದೀರ್ಘವಾಗಿ ಗೂಕ್ ಗೂಕ್ ಎಂದೊ ಹ್ರಸ್ವವಾಗಿ ಲೊಚಗುಟ್ಟುವಂತೆಯೊ ಗೊರಕೆ ಹೊಡೆಯುವಂತೆಯೊ ಬುಸುಗುಟ್ಟು ವಂತೆಯೊ ಹಲವಾರು ಬಗೆಗಳಲ್ಲಿ ವಿಚಿತ್ರವಾಗಿ ಸದ್ದುಮಾಡುತ್ತವೆ.


ಗೂಬೆಗಳು ಮರದ ಪೊಟರೆ, ಪ್ರಪಾತಗಳಲ್ಲಿನ ಸಂದುಗಳು, ನೆಲದ ಮೇಲಿನ ಗುಳಿಗಳು ಮುಂತಾದ ಸ್ವಾಭಾವಿಕ ನೆಲೆಗಳನ್ನು ಗೂಡುಗಳನ್ನಾಗಿ ಮಾಡಿಕೊಳ್ಳುತ್ತವೆ. ಕೆಲವು ಸಲ ಗಿಡುಗ ಇಲ್ಲವೆ ಕಾಗೆಗಳಿಂದ ತೊರೆಯಲ್ಪಟ್ಟ ಗೂಡುಗಳನ್ನೂ ಬಳಸುವು ದುಂಟು. ಸಾಮಾನ್ಯವಾಗಿ ಇಂಥ ನೆಲೆಗಳನ್ನು ಅವು ಹೇಗಿರುತ್ತವೋ ಹಾಗೆಯೇ ಉಪಯೋಗಿಸುತ್ತವೆ; ಎಲ್ಲ ಬಗೆಯ ಗೂಬೆಗಳೂ ಗುಂಡನೆಯ ಮತ್ತು ಅಚ್ಚ ಬಿಳಿಯ ಬಣ್ಣದ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳ ಸಂಖ್ಯೆ ಸಾಮಾನ್ಯವಾಗಿ ಒಂದು ಸಲಕ್ಕೆ 1-7 ಅಥವಾ ಹೆಚ್ಚು. ಕಾವು ಕೊಡುವುದನ್ನು, ಮರಿಗಳ ಪಾಲನೆಯನ್ನು ಗಂಡು ಮತ್ತು ಹೆಣ್ಣುಗಳೆರಡೂ ನಿರ್ವಹಿಸುತ್ತವೆ. ಉತ್ತರಮೇರು ಪ್ರದೇಶದ ಮಂಜಿನ ಗೂಬೆಗಳಲ್ಲಿ ಮಾತ್ರ ಕಾವುಕೊಡುವ ಕೆಲಸ ಹೆಣ್ಣಿನದು. ಹೀಗೆ ಕಾವುಕೂತ ಹೆಣ್ಣಿಗೆ ಗಂಡುಗೂಬೆ ಆಹಾರವನ್ನೊದಗಿಸುತ್ತದೆ.

ಕಣಜದ ಗೂಬೆ ಬದಲಾಯಿಸಿ

ಕಣಜದ ಗೂಬೆ ಬಲು ಸಾಮಾನ್ಯವಾಗಿ ಕಾಣಬರುವ ಗೂಬೆ. ಮೇರು ಪ್ರದೇಶಗಳು, ನ್ಯೂಜಿಲೆಂಡ್, ಹವಾಯ್, ಮಲಯ ಪರ್ಯಾಯ ದ್ವೀಪಗಳನ್ನು ಬಿಟ್ಟು ಉಳಿದೆಲ್ಲ ಪ್ರದೇಶಗಳಲ್ಲೂ ಈ ಗೂಬೆ ಇದೆ. ಇದರ ಮುಖ ಗುಂಡಿಗೆಯಾಕಾರದ ತಟ್ಟೆಯಂತಿದ್ದು ಸೆಡೆತಿರುವ ಗರಿಗಳ ಅಂಚಿನಿಂದ ಕೂಡಿದೆ. ಮುಖದ ಬಣ್ಣ ಬಿಳಿ. ಇದರಿಂದಾಗಿ ಈ ಗೂಬೆಯ ಮುಖ ಹೆಚ್ಚು ಕಡಿಮೆ ಕೋತಿಯ ಮುಖವನ್ನೆ ಹೋಲುತ್ತದೆ. ಆದ್ದರಿಂದ ಈ ಗೂಬೆಗೆ ಕೋತಿಮುಖದ ಗೂಬೆ ಎಂಬ ಹೆಸರೂ ಇದೆ. ಉದ್ದನೆಯ ಕಾಲುಗಳು, ಪಾದದವರೆಗೂ ಇರುವ ಗರಿಗಳು, ಮೋಟುಬಾಲ, ನಡುಬೆರಳಿನ ಮೇಲೆ ಏಣುಗಳುಳ್ಳ ಹಣಿಗೆಯಂಥ ರಚನೆ ಇರುವುದು - ಇವು ಕಣಜದ ಗೂಬೆಯ ಇತರ ಪ್ರಮುಖ ಲಕ್ಷಣಗಳು. ಈ ಗೂಬೆ 35-45 ಸೆಂಮೀ ಉದ್ದ ಇರುತ್ತದೆ ; ಹೆಣ್ಣು ಗೂಬೆ ಗಂಡಿಗಿಂತ ದೊಡ್ಡದು. ದೇಹದ ಬಣ್ಣ ಬಂಗಾರ ಮತ್ತು ಬೂದಿಗಳ ಮಿಶ್ರಣ. ಅಲ್ಲದೆ ಕಪ್ಪು ಮತ್ತು ಬಿಳಿಯ ಮಚ್ಚೆಗಳಿವೆ. ಸ್ವಾಭಾವಿಕವಾಗಿ ಮರದ ಪೊಟರೆಗಳನ್ನೂ ಪ್ರಪಾತಗಳ ಸಂದಿಗಳನ್ನೂ ಗೂಡುಗಳನ್ನಾಗಿ ಮಾಡಿಕೊಳ್ಳುವುದಾದರೂ ಕೆಲವೊಮ್ಮೆ ಹದ್ದು, ಗಿಡುಗ ಮುಂತಾದವುಗಳ ಗೂಡನ್ನು ಬಳಸುವುದುಂಟು. ಹಳೆಯ ಮನೆ, ಚರ್ಚುಗಳ ಗೋಪುರಗಳು, ಕಣಜಗಳಲ್ಲಿನ ಚಾವಣಿ ಮುಂತಾದ ಸ್ಥಳಗಳಲ್ಲೂ ಗೂಡು ಕಟ್ಟುವುದುಂಟು. ಪಾಳುಬಿದ್ದ ಕಟ್ಟಡಗಳಂತೂ ಇದಕ್ಕೆ ಬಲು ಅಚ್ಚುಮೆಚ್ಚಿನ ಸ್ಥಳ. ಇಂಥ ಸ್ಥಳಗಳಲ್ಲಿ ಗೂಡು ನಿರ್ಮಿಸಿಕೊಂಡು ಕರ್ಕಶವಾಗಿ ದೀರ್ಘವಾಗಿ ಕಿರಿಚುತ್ತಲೊ, ಲೊಚಗುಟ್ಟುವಂತೆ ಇಲ್ಲವೆ ಗೊರಕೆಯಂತೆ ಕೇಳಿಸುವ ಸದ್ದುಮಾಡುತ್ತಲೊ ಇರುವುದರಿಂದ ತಾನಿರುವ ನೆಲೆಯ ಭೀಕರತೆಯನ್ನು ಹೆಚ್ಚಿಸುತ್ತದೆ. ವರ್ಷ ವರ್ಷವೂ ಒಂದೇ ಸ್ಥಳವನ್ನು ತನ್ನ ನೆಲೆಯಾಗಿ ಉಪಯೋಗಿಸುವುದು ಗೂಬೆಯ ಇನ್ನೊಂದು ವಿಚಿತ್ರ ಲಕ್ಷಣ.


ಕಣಜದ ಗೂಬೆ ಅಪ್ಪಟ ನಿಶಾಚಾರಿ. ಹಗಲಿನಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಮುಸ್ಸಂಜೆಯ ವೇಳೆ ಬೇಟೆಗೆಂದು ಹೊರಬರುತ್ತದೆ. ಹುಲ್ಲು ಮತ್ತು ಕುಳ್ಳುಪೊದೆಗಳಿಂದ ಕೂಡಿದ ಬಯಲು ಪ್ರದೇಶ ಇದರ ಅಚ್ಚು ಮೆಚ್ಚಿನ ಬೇಟೆಯ ಪ್ರದೇಶ. ಇಲಿಗಳೇ ಇದರ ಪ್ರಮುಖ ಆಹಾರ. ಇದರಿಂದಾಗಿ ರೈತನ ಸ್ನೇಹಿತ ಎನಿಸಿಕೊಂಡಿದೆ. ಕಣಜದ ಗೂಬೆಗೆ ಇತರ ಗೂಬೆಗಳಂತೆಯೆ ಅತ್ಯಂತ ಚುರುಕಾದ ದೃಷ್ಟಿಯಿರುವುದಾದರೂ ಬೇಟೆಯಾಡಲು ಕಿವಿಗಳನ್ನೆ ಹೆಚ್ಚು ಅವಲಂಬಿಸಿದೆ.


ಕಣಜದ ಗೂಬೆಯ (ಟೈಟೊಆಲ್ಬ) ಸಂತಾನೋತ್ಪತ್ತಿಯ ಕಾಲ ನಿರ್ದಿಷ್ಟವಾಗಿ ಗೊತ್ತಿಲ್ಲ. 4-7 ಗುಂಡನೆಯ ಮತ್ತು ಬಿಳಿಯ ಬಣ್ಣದ ಮೊಟ್ಟೆಗಳನ್ನಿಡುತ್ತದೆ. ಗಂಡು, ಹೆಣ್ಣುಗಳೆರಡೂ ಕಾವು ಕೊಟ್ಟು ಮರಿಮಾಡುತ್ತವೆ. ಕಣಜದ ಗೂಬೆಯ ಆಯಸ್ಸು 15 ವರ್ಷಗಳು. ಈ ಜಾತಿಯ ಇನ್ನೂ ಎರಡು ಪ್ರಭೇದದ ಕಣಜಗೂಬೆಗಳು ಭಾರತದಲ್ಲಿ ಕಂಡುಬರುತ್ತದೆ. ಅವೆಂದರೆ ಗರಿಕೆ ಗೂಬೆ (ಗ್ರಾಸ್ ಔಲ್-ಟೈಟೊ ಕ್ಯಾಪೆನ್ಸಿಸ್) ಮತ್ತು ಪುರ್ವದ ಕಣಜ ಗೂಬೆ (ಓರಿಯಂಟಲ್ ಬೇ ಔಲ್ - ಫೊಡಿಲಸ್ ಬಾಡಿಯಸ್) ಗೂಬೆಗಳಲ್ಲಿ ಹಲವಾರು ಬಗೆಗಳಿವೆ ಎಂದು ಮೊದಲೇ ಹೇಳಲಾಗಿದೆ. ಇವುಗಳಲ್ಲಿ ಮುಖ್ಯವಾದ ಕೆಲವನ್ನು ಮಾತ್ರ ಸಂಕ್ಷೇಪವಾಗಿ ವಿವರಿಸಲಾಗಿದೆ.

ಕೊಂಬಿನ ಗೂಬೆ ಬದಲಾಯಿಸಿ

ಕೊಂಬಿನ ಗೂಬೆ (ಯುರೇಷಿಯಸ್ ಈಗಲ್ಔಲ್) : ಬ್ಯೂಬೊ ಎಂಬ ವೈಜ್ಞಾನಿಕ ಹೆಸರಿನ ಗೂಬೆ ಇದು ; ಸುಮಾರು 11 ಪ್ರಭೇದಗಳನ್ನೊಳಗೊಂಡಿದೆ. ಪ್ರಪಂಚಾದ್ಯಂತ ಇದರ ವ್ಯಾಪ್ತಿ ಇದೆ. ಭಾರತದಲ್ಲಿ ಬ್ಯೂಬೊ ಬ್ಯೂಬೊ ಎಂಬ ಪ್ರಭೇದವಿದೆ. ಹದ್ದಿನಷ್ಟು ದೊಡ್ಡದಿರುವ ಇದರ ಬಣ್ಣ ಕಂದು. ತಲೆಯ ಮೇಲೆ ಎರಡು ಕೊಂಬುಗಳಿವೆ. ಕಣ್ಣುಗಳು ಹಳದಿ ಬಣ್ಣದವು. ಬೆಟ್ಟಗಳಲ್ಲಿನ ಕಲ್ಲುಬಂಡೆಗಳ ಪೊಟರೆಗಳಲ್ಲಿ ವಾಸಿಸುತ್ತದೆ. ಕೆಲವು ಸಲ ಬೃಹದ್ಗಾತ್ರದ ಮರಗಳಲ್ಲಿರುವುದುಂಟು. ಸಣ್ಣ ಸಸ್ತನಿಗಳು, ಹಕ್ಕಿಗಳು, ಇಲಿಗಳು, ಓತಿಕೇತ, ಏಡಿ, ಕೆಲವು ಬಗೆಯ ಕೀಟಗಳು ಇದರ ಪ್ರಧಾನ ಆಹಾರ.

ಮಂಜಿನಗೂಬೆ ಬದಲಾಯಿಸಿ

ಮಂಜಿನಗೂಬೆ (ಸ್ನೋಯಿ ಔಲ್) : ಇದು ಉತ್ತರ ಮೇರು ಪ್ರದೇಶದ ಗೂಬೆ. ಉತ್ತರ ಸ್ಕಾಂಡಿನೇವಿಯ, ರಷ್ಯದ ಉತ್ತರಭಾಗ, ಆಲಾಸ್ಕ, ಗ್ರೀನ್ಲೆಂಡಿನ ಉತ್ತರಭಾಗಗಳಲ್ಲಿ ವಾಸಿಸುತ್ತದೆ. ವಿಪರೀತ ಚಳಿಯಿದ್ದಾಗ ಆಹಾರದ ಕೊರತೆಯುಂಟಾಗುವುದರಿಂದ ದಕ್ಷಿಣಕ್ಕೆ-ಬ್ರಿಟಿಷ್ ದ್ವೀಪಗಳು, ಮಧ್ಯ ರಷ್ಯ, ಜಪಾನ್, ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಧ್ಯಭಾಗ, ಜರ್ಮನಿಗಳಿಗೆ-ವಲಸೆ ಬರುತ್ತದೆ. ಲೆಮಿಂಗ್ ಎಂಬ ಪ್ರಾಣಿ, ಅರ್ಕ್ಟಿಕ್ ಮೊಲ ಮತ್ತು ಬಾತುಕೋಳಿಗಳು ಇದರ ಮುಖ್ಯ ಆಹಾರ.

ಮೀನು ತಿನ್ನುವ ಗೂಬೆ (ಬ್ರೌನ್ ಫಿಶ್ ಔಲ್) ಬದಲಾಯಿಸಿ

ಭಾರತದಲ್ಲೆಲ್ಲ ಇದು ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಕೆಟುಪ ಜೈಲೊನೆನ್ಸಿಸ್. ಕೊಂಬಿನ ಗೂಬೆಯ ಗಾತ್ರದಷ್ಟಿದೆ. ಅದರಂತೆಯೇ ಇದರ ದೇಹದ ಬಣ್ಣವೂ ಕಂದು. ನೀರ ಬಳಿ ಬೆಳೆಯುವ ದೊಡ್ಡ ಗಾತ್ರದ ಮರಗಳಲ್ಲಿ ಇದರ ವಾಸ. ಮೀನು, ಕಪ್ಪೆ, ಏಡಿ, ಹಕ್ಕಿಗಳು ಮುಂತಾದವನ್ನು ತಿನ್ನುತ್ತದೆ.

ಕುಬ್ಜಗೂಬೆ (ಪಿಗ್ಮಿ ಔಲ್) ಬದಲಾಯಿಸಿ

15-20 ಸೆಂಮೀ ಉದ್ದದ ಸಣ್ಣ ಗೂಬೆ ಇದು. ಉತ್ತರ ಮತ್ತು ದಕ್ಷಿಣ ಅಮೆರಿಕ, ಆಫ್ರಿಕ ಮತ್ತು ಯುರೋಪ್‍ಗಳಲ್ಲಿ ಕಾಣ ದೊರೆಯುತ್ತದೆ. ಕೀಟಗಳು, ಸಣ್ಣಪುಟ್ಟ ಹಕ್ಕಿಗಳು, ಉರಗಗಳು ಇದರ ಮುಖ್ಯ ಆಹಾರ. ಚುರುಕಾಗಿ ಹಾರಬಲ್ಲ ಇದು ಹಾರುತ್ತಿರುವ ಹಕ್ಕಿಗಳನ್ನು ಹಿಡಿಯಬಲ್ಲದು.

ಮೇಲೆ ಹೇಳಿದ ಗೂಬೆಗಳಲ್ಲದೆ ಭಾರತದಲ್ಲಿ ಆಥೀನೆ ಬ್ರಾಮ ಮತ್ತು ಗ್ಲಾಸಿಡಿಯಂ ರೇಡಿಯೇಟಂ ಎಂಬ ಶಾಸ್ತ್ರೀಯ ಹೆಸರಿನ ಕಿರುಗೂಬೆಗಳೂ (ಔಲೆಟ್ಸ್‌) ಕಂಡುಬರುತ್ತವೆ. ಇವಕ್ಕೆ ಹಾಲಹಕ್ಕಿಗಳೆಂಬ ಸಾಮಾನ್ಯ ಹೆಸರಿದೆ.

ಗೂಬೆಗಳ ಕುರಿತಾಗಿ ಹಲವು ಮೂಢನಂಬಿಕೆಗಳಿವೆ. ಭಾರತದ ಕೆಲವು ಭಾಗಗಳಲ್ಲಿ ಇವನ್ನು ಅಪಶಕುನ ಎಂದು ಭಾವಿಸಿದರೆ, ಮತ್ತೆ ಕೆಲವೆಡೆ ಇದು ಶುಭವೆಂದು ಪರಿಗಣಿಸಲಾಗಿದೆ. ಕೆಲವು ರಾಷ್ಟ್ರಗಳಲ್ಲಿ ಗೂಬೆ ಸಂಕೇತವಾಗಿದೆ.

ವೈಜ್ಞಾನಿಕವಾಗಿ ಮೂಷಿಕ ಹಾಗೂ ಸರೀಸೃಪಗಳ ಸಂಖ್ಯೆಯನ್ನು ಒಂದು ಅಂಕೆಯಲ್ಲಿಡುವ ಪರಿಸರ ವ್ಯವಸ್ಥೆಯ ಒಂದು ಸೂಕ್ಷ್ಮ ಕೊಂಡಿ, ಗೂಬೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ

Eurasia:

North America:

Oceania:

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
 
 
"https://kn.wikipedia.org/w/index.php?title=ಗೂಬೆ&oldid=1169278" ಇಂದ ಪಡೆಯಲ್ಪಟ್ಟಿದೆ