ಗಿರ್ನಾರ್ ಗುಜರಾತ್ ರಾಜ್ಯದ ಸೌರಾಷ್ಟ್ರ ವಿಭಾಗದ ದಕ್ಷಿಣ ಭಾಗದಲ್ಲಿರುವ ಮುಖ್ಯ ಪರ್ವತ; ಜೈನರ ಸಿದ್ಧ ಕ್ಷೇತ್ರ. ಉ.ಅ. 29° 39', ಪು.ರೇ. 78° 42', ಮಧ್ಯೆ, ಜುನಾಗಢದಿಂದ 16 ಕಿಮೀ ಅಂತರದಲ್ಲಿದೆ; ಇತರ ಪರ್ವತಗಳ ಸಾಲಿನಲ್ಲಿರದೆ ಪ್ರತ್ಯೇಕವಾಗಿ ಹಬ್ಬಿದೆ. ಹಿಂದೆ ಈ ಪರ್ವತ ಒಂದು ಜ್ವಾಲಾಮುಖಿಯಾಗಿತ್ತೆನ್ನಲಾಗಿದೆ. ಗುಜಾರಾತಿನಲ್ಲೆ ಅತ್ಯುನ್ನತವಾದ ಈ ಪರ್ವತದ ಸರಾಸರಿ ಎತ್ತರ 1,060 ಮೀ. ಅಂಬಾ, ಗೋರಖ್ನಾಥ್, ಕಾಳಿಂಕಾ, ಗುರುನೇಮಿನಾಥ್ ಇವು ಪ್ರಸಿದ್ಧವಾದ ಶಿಖರಗಳು. ಅತ್ಯುನ್ನತ ಶಿಖರ ಗೋರಖ್ನಾಥ್ (1,117ಮೀ). ಉಷ್ಣತೆ 25° ಸೆಂ,- 35° ಸೆಂ, ವಾರ್ಷಿಕ ಮಳೆ 60-80 ಸೆಂಮೀ. ಸುವರ್ಣರೇಖಾ, ಗುಡಾಜಲೀ ಮತ್ತು ಕಾಲವೋ ನದಿಗಳ ಉಗಮಸ್ಥಾನ ಗಿರ್ನಾರ್. ಹಿಂದಿನ ಕಾಲದಲ್ಲಿ ಇದಕ್ಕೆ ಉಜ್ವಯಂತ, ರೈವತಕ ಪರ್ವತ, ಪ್ರಭಾಸ್ ಪರ್ವತ, ವಸ್ತ್ರಾಪಥ ಕ್ಷೇತ್ರ ಎಂಬ ಹೆಸರುಗಳಿದ್ದವು.

ಗಿರ್ನಾರ್

ಗಿರ್ನಾರ್ ವಿಶೇಷತೆ ಬದಲಾಯಿಸಿ

  • ಹಿಂದೂ, ಜೈನ, ಇಸ್ಲಾಂ ಸಂಸ್ಕೃತಿ ಪ್ರವಾಹಗಳು ಇಲ್ಲಿ ಸಂಗಮಿಸಿವೆ. ಗಿರ್ನಾರ್ ಶಿಖರಗಳ ಮೇಲೆ ಗೋರಖ್ನಾಥ್, ದತ್ತಾತ್ರೇಯ, ಅಂಬಾದೇವಿ ಮುಂತಾದ ದೇವಾಲಯಗಳೂ ಶ್ರಾವಕರ ದೇವಸ್ಥಾನಗಳೂ ಜೈನ ಧರ್ಮಶಾಲೆಗಳೂ ಇವೆ. 52 ಶಕ್ತಿಪೀಠಗಳ ಪೈಕಿ ಇಲ್ಲಿಯ ಅಂಬಾ ದೇವಿಯ ಗುಡಿಯೂ ಒಂದು. ಇಷ್ಟಲ್ಲದೆ ಇಲ್ಲಿ ಗೋಮುಖಿ, ಹನುಮಾನ್ಧಾರಾ, ಕಮಂಡಲು ಎಂಬ ಮೂರು ಜಲಕುಂಡಗಳಿವೆ. ಅಶೋಕ ಮೌರ್ಯನ ಶಿಲಾಶಾಸನವೂ, ಕ್ಷತ್ರಪ ರುದ್ರದಾಮನನ ಶಾಸನಗಳೂ ಇಲ್ಲುಂಟು. ಅಶೋಕನ ಶಾಸನ (ಪ್ರ.ಶ.ಪು. 250) ಅತ್ಯಂತ ಪ್ರಾಚೀನ. ಗಿರ್ನಾರ್ ಸುತ್ತಮುತ್ತಣ ಪ್ರದೇಶದಲ್ಲಿ ಅಶೋಕನ ಕಾಲದಲ್ಲಿ ಬೌದ್ಧಧರ್ಮ ಪ್ರಚಾರವಾಗಿ ಅಲ್ಲಿ ಬೌದ್ಧವಿಹಾರಗಳು ಸ್ಥಾಪನೆಯಾಗಿದ್ದುವೆಂಬುದು ಈ ಶಾಸನದಿಂದ ತಿಳಿದು ಬರುತ್ತದೆ.
  • ಯುವಾನ್ಚಾಂಗ್ ಪ್ರ.ಶ. 7ನೆಯ ಶತಮಾನದಲ್ಲಿ ಗಿರ್ನಾರನ್ನು ಸಂದರ್ಶಿಸಿದಾಗ ಅಲ್ಲಿ ಮಹಾಯಾನ ಬೌದ್ಧ ಪಂಥದ ಸ್ಥವಿರ ಶಾಖೆಯ ಐವತ್ತು ಗವಿ ಮಠಗಳಿದ್ದುದಾಗಿಯೂ ಬೆಟ್ಟದ ತುದಿಯಲ್ಲಿಯ ಬಂಡೆಯನ್ನು ಕೊರೆದು ಒಂದು ಮಠವನ್ನು ನಿರ್ಮಿಸಲಾಗಿತ್ತೆಂದೂ ವರ್ಣಿಸಿದ್ದಾನೆ. 1889ರಲ್ಲಿ ಗಿರ್ನಾರ್ ಬೆಟ್ಟದ ಇಳಿಜಾರಿನಲ್ಲಿ ಒಂದು ಸ್ತೂಪದ ಭಗ್ನಾವಶೇಷ ಪತ್ತೆಯಾಯಿತು. ರುದ್ರದಾಮನನ ಶಾಸನ ಗಿರ್ನಾರ್ ಬಳಿಯಲ್ಲಿ ದೊರೆತಿರುವ ಮತ್ತೊಂದು ಐತಿಹಾಸಿಕ ದಾಖಲೆ. ಇದನ್ನು ಅಶೋಕನ ಶಾಸನದ ಬಂಡೆಗಲ್ಲಿನಲ್ಲಿಯೇ ಪ್ರ.ಶ.150 ರಲ್ಲಿ ಕೆತ್ತಲಾಯಿತು. ರುದ್ರದಾಮನ್ ಶಾತಕರ್ಣಿಯನ್ನು ಸೋಲಿಸಿದ ಹಾಗೂ ಗಿರ್ನಾರ್ ಬಳಿಯಿರುವ ಅಶೋಕನ ಕಾಲದಲ್ಲಿ ಕಟ್ಟಲಾಗಿದ್ದ ಸೇತುವೆಯನ್ನು ದುರಸ್ತು ಮಾಡಿಸಿದ ಸಂಗತಿಗಳನ್ನು ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ.
  • ಇಲ್ಲಿಯ ಸುದರ್ಶನ ಜಲಾಶಯವನ್ನು ಚಂದ್ರಗುಪ್ತನ (ಪ್ರ.ಶ.ಪು. 322-298) ಆಜ್ಞಾನುಸಾರ ನಿರ್ಮಿಸ ಲಾಯಿತೆಂದು ಉಲ್ಲೇಖಿವಿದೆ. ಇದು ಶಿಥಿಲಗೊಂಡು ಅಪ್ರಯೋಜಕವಾಗಿತ್ತೆಂದೂ ರುದ್ರದಾಮನ್ ಇದನ್ನು ದುರಸ್ತಿ ಮಾಡಿಸಿ ಮತ್ತೆ ಉಪಯುಕ್ತವಾಗುವಂತೆ ಮಾಡಿದನೆಂದೂ ಹೇಳಿದೆ. ಅದೇ ಬಂಡೆಯ ಮೇಲೆ ಗುಪ್ತ ಚಕ್ರವರ್ತಿ ಸ್ಕಂದಗುಪ್ತನೂ ಪ್ರ.ಶ. 457 ರಲ್ಲಿ ತನ್ನ ಶಾಸನವನ್ನು ಕೆತ್ತಿಸಿದ್ದಾನೆ. ಈ ಶಾಸನದ ಪ್ರಕಾರ ಸ್ಕಂದಗುಪ್ತನೂ ಸುದರ್ಶನ ಜಲಾಶಯಕ್ಕೆ ಆವಶ್ಯಕವಿದ್ದ ದುರಸ್ತಿ ಕಾರ್ಯವನ್ನು ಮಾಡಿಸಿದ. ಅಲ್ಲಿ ದೊರೆತಿರುವ ಶಾಸನಗಳಿಂದಲೂ ಕಾಣಬರುವ ಭಗ್ನಾವಶೇಷಗಳಿಂದಲೂ ಗಿರ್ನಾರ್ ಅತ್ಯಂತ ಪ್ರಾಚೀನ ಕಾಲದಿಂದಲೂ ಇತಿಹಾಸ ಪ್ರಸಿದ್ಧ ಸ್ಥಳವಾಗಿತ್ತೆಂಬುದರಲ್ಲಿ ಸಂಶಯವಿಲ್ಲ. ಅಲ್ಲಿ ಹೆಚ್ಚು ಸಂಖ್ಯೆಯಲ್ಲಿ ದೇವಾಲಯಗಳೂ ಗುಹಾಲಯಗಳು ನಿರ್ಮಾಣವಾದವು.
  • 400 ವರ್ಷಗಳ ಕಾಲ ಗಿರ್ನಾರ್ ಪ್ರದೇಶ ಮಹಮ್ಮದೀಯರ ಆಳ್ವಿಕೆಗೊಳಪಟ್ಟಿತ್ತು. ಅಲ್ಲಿಯ ಹೆಚ್ಚು ಸ್ಮಾರಕಗಳು ನಾಶವಾದುವು. ಅಲ್ಲಿಯ ಉಪರ್ ಕೋಟೆಯಲ್ಲಿ ಅಥವಾ ಕೋಟೆಯ ಪ್ರದೇಶದಲ್ಲಿ ಅಶೋಕ ಚಕ್ರವರ್ತಿಯ ಕಾಲದಲ್ಲೇ ಬೌದ್ಧ ಗುಹಾಲಯಗಳು ಕೊರೆಯಲ್ಪಟ್ಟವು. ಅವನ್ನು ಗುರುತಿಸುವುದು ಸಾಧ್ಯವಾಗಿಲ್ಲ. ಗಿರ್ನಾರ್ ಪ್ರದೇಶ ಕ್ಷತ್ರಪರ ಆಳ್ವಿಕೆಗೊಳಗಾಗಿದ್ದಾಗ ಅಲ್ಲಿ ಜೈನಮತೀಯರಿಂದ ಅನೇಕ ಗುಹಾಲಯಗಳು ನಿರ್ಮಾಣವಾದವು. ಗಿರ್ನಾರ್ ಬೆಟ್ಟದ ತುದಿಯಿಂದ ಸುಮಾರು 210 ಮೀಟರ್ಗಳ ಕೆಳಗೆ ಹಾಗೂ ಸಮುದ್ರಮಟ್ಟದಿಂದ 1050 ಮೀಟರ್ಗಳ ಮೇಲೆ ಹದಿನಾರು ಗುಹಾಲಯಗಳನ್ನೂ ಕೊರೆಯಲಾಗಿದೆ. ಅವುಗಳಲ್ಲಿ ಅತ್ಯಂತ ದೊಡ್ಡದೂ ಪ್ರಾಚೀನವೂ ಆದ್ದು ನೇಮಿನಾಥ ದೇವಾಲಯ. ಇದು 68.25 ಮೀಟರ್ ಉದ್ದವಾಗಿಯೂ 45 ಮೀಟರ್ ಅಗಲವಾಗಿಯೂ ಇದೆ.
  • ದೇವಾಲಯದ ಅಂಗಳದಲ್ಲಿ ತೀರ್ಥಂಕರರ ಮತ್ತು ಯಕ್ಷರ ವಿಗ್ರಹಗಳನ್ನು ಕೆತ್ತಲಾಗಿದೆ. ನೇಮಿನಾಥ ದೇವಾಲಯದ ದ್ವಾರದ ಬಳಿ 1230 ರಲ್ಲಿ ತೇಜಪಾಲ ಮತ್ತು ವಸ್ತುಪಾಲರು ಕೆತ್ತಿಸಿದ ಚಿಕ್ಕ ತ್ರಿಕೂಟಾಲಯವೊಂದಿದೆ. ಇದರ ಮುಖ್ಯ ಗರ್ಭಗುಡಿಯಲ್ಲಿ 19ನೆಯ ತೀರ್ಥಂಕರನಾದ ಮಲ್ಲಿ ನಾಥನ ವಿಗ್ರಹವುಂಟು. ಚಾಳುಕ್ಯರ ಕಾಲದಲ್ಲಿ ನಿರ್ಮಿತವಾದ ದೇವಸ್ಥಾನಗಳು ಸುಂದರವಾಗಿದ್ದವು. ಗಿರ್ನಾರದಲ್ಲಿ ಪ್ರಾಚೀನ ಕಾಲದಲ್ಲಿ ಶಾಕ್ತಪಂಥೀಯರು ವಾಸವಾಗಿದ್ದರು. ಕಾರ್ತಿಕ ಶುದ್ಧ ಏಕಾದಶಿಯ ದಿನ ಅಲ್ಲಿ ಜಾತ್ರೆ ನಡೆಯುತ್ತದೆ. ಈ ಜಾತ್ರೆ ಶ್ರೀಕೃಷ್ಣನ ಕಾಲದಿಂದಲೂ ನಡೆದು ಬಂದಿದೆಯೆಂಬುದು ಪ್ರತೀತಿ. ದಕ್ಷಿಣದ ಗಿರ್ ಬೆಟ್ಟ ಅರಣ್ಯಮಯ, ಭಾರತದ ಸಿಂಹಗಳ ನೆಲೆಯಿದು ಗಿರ್ ಅರಣ್ಯ.
  • ಇಪ್ಪತೆರಡನೆಯ ತೀರ್ಥಂಕರನಾದ ನೇಮಿನಾಥ ಗಿರ್ನಾರ್ ಪರ್ವತದ ಮೇಲೆ ದೀಕ್ಷೆಯನ್ನು ಪಡೆದು, ತಪಸ್ಸು ಮಾಡಿ ಮುಕ್ತಿಯನ್ನು ಹೊಂದಿದ. ಅವನಿಗೆ ನಿಶ್ಚಯಿಸಿದ ವಧು ರಾಜೀಮತಿ ಇಲ್ಲಿಯೇ ದೀಕ್ಷೆಯನ್ನು ಕೈಗೊಂಡಳು. ಮೊದಲನೆಯ ಪರ್ವತದ ಮೇಲೆ ಒಂದು ಗುಹೆಯಲ್ಲಿ ರಾಜೀಮ ತಿಯ ಮೂರ್ತಿ ಇದೆ. ಈ ಪರ್ವತದ ಮೇಲೆ ಬೇರೆ ಜೈನಮುನಿಗಳು ಮುಕ್ತಿಯನ್ನು ಹೊಂದಿದ ಪರಂಪರೆಯುಂಟು. ಐದನೆಯ ಪರ್ವತ ಅತ್ಯಂತ ಎತ್ತರವಾಗಿದೆ. ಮತ್ತು ಅದರ ಮೇಲೆ ನೇಮಿನಾಥನ ಚರಣ ಚಿಹ್ನೆಗಳಿವೆ. ನೇಮಿನಾಥ ಮತ್ತು ರಾಜೀಮತಿಯ ಚರಿತ್ರೆ ಅತ್ಯಂತ ರೋಮಾಂಚ ನ ಕಾರಿಯಾಗಿದ್ದರಿಂದ ಈ ಕ್ಷೇತ್ರಕ್ಕೆ ವಿಶೇಷ ಮಹತ್ತ್ವ ಬಂದಿದೆ. ವಿವಾಹದಲ್ಲಿ ಪ್ರಾಣಿ ಹಿಂಸೆಯಾಗುವುದನ್ನು ನೋಡಿದ ನೇಮಿನಾಥ ವಿವಾಹದ ವಿಚಾರವನ್ನು ಬಿಟ್ಟು ದೀಕ್ಷೆಯನ್ನು ಪಡೆದನೆಂಬ ಪ್ರತೀತಿ. ನಿಯೋಜಿತ ಪತಿ ದೀಕ್ಷೆ ಕೈಗೊಂಡಿದ್ದರಿಂದ ರಾಜೀಮತಿಯೂ ದೀಕ್ಷೆ ಪಡೆದಳಂತೆ.