ಗಂತಿಯು (ಗಡ್ಡೆ, ಗಂಟು) ಮೈಯಲ್ಲಿ ಎಲ್ಲಾದರೂ ಯಾವ ಅಂಗಾಂಶದಿಂದಲಾದರೂ ಏಳುವ ಬಾವು ಇಲ್ಲವೇ ಗಡ್ಡೆ. ವೈದ್ಯಶಾಸ್ತ್ರದಲ್ಲಿ ಗಂತಿ (ಟ್ಯೂಮರ್) ಪದಕ್ಕೆ ಒಂದು ಗೊತ್ತಾದ ಅರ್ಥವಿದೆ. ಮೈಯಲ್ಲಿನ ಕೆಲವು ಜೀವಕಣಗಳು ಯಾವ ಕಾರಣವಾಗಲೀ ಉದ್ದೇಶವಾಗಲೀ ಇಲ್ಲದೆ ಅವಷ್ಟಕ್ಕವೇ ತಡೆಯಿಲ್ಲದೆ ಸಿಕ್ಕಾಬಟ್ಟೆ, ಅಸಹಜವಾಗಿ, ಸರಿಪಡಿಸಲಾಗದಷ್ಟು ಶಾಶ್ವತವಾಗಿ ಅಂಗಾಂಶದಲ್ಲಿ ಬೆಳೆದಿರುವುದಕ್ಕೆ ಮಾತ್ರ ಗಂತಿ ಎನ್ನುತ್ತಾರೆ. ಬಹುಮಟ್ಟಿಗೆ, ಎಲ್ಲ ಬೆನ್ನುಲುಬಿಗಳಲ್ಲೂ ಕೆಲವು ಕೀಟಗಳಲ್ಲೂ ಗಿಡಮರಗಳಲ್ಲೂ ಗಂತಿಗಳು ಏಳುತ್ತವೆ. ಹಲವು ಜೀವಕೋಶಗಳಿರುವ ಎಲ್ಲ ಜೀವಿಗಳಲ್ಲು ಇದು ಸಾಮಾನ್ಯ, ಮುಖ್ಯವಾಗಿ ಹುಸಿಗಂತಿಗಳು (ವಿಷಮವಲ್ಲದ ಬಾವುಗಳು), ನಿಜಗಂತಿಗಳು (ವಿಷಮವಾದವು) ಎಂಬಂತೆ ಗಂತಿಗಳಲ್ಲಿ ಎರಡು ಬಗೆಗಳಿವೆ.

ಗಲ್ಲದ ಚರ್ಮದ ಮೇಲೆ ಗಂತಿ

ಗಂತಿಗಳನ್ನು ಹೀಗೆ ವಿಂಗಡಿಸಲು ಅವುಗಳ ಜೀವಕಣಗಳ ಸ್ವರೂಪವೇ ಕಾರಣ. ಇವನ್ನು ಗುರುತಿಸಿದಾಗಲೇ ಊದಿರುವ ಒಂದು ಅಂಗಾಂಶದ ಹುಟ್ಟು, ಗುಣ, ಪ್ರಮಾಣಗಳನ್ನು ಖಚಿತವಾಗಿ ನಿರ್ಧರಿಸುವಂತಾಗಿದೆ. ಆದ್ದರಿಂದ ಅಂಗಾಂಶಗಳಲ್ಲಿ ಎಂದಿನ ಆರೋಗ್ಯದ ಹಾಗೆಯೇ ಅಸಹಜವಾದ, ಇಲ್ಲವೇ ಹೊರಗಿಂದ ಬಂದ ಜೀವಕಣಗಳು ಇರಬಹುದು. ಅಸಹಜವಾದವೂ ಮೊದಲು ಆರೋಗ್ಯವಾಗಿದ್ದ ಜೀವಕಣಗಳೇ ಆದರೂ ಆಕಾರ, ರೂಪ, ಗುಣ, ಜೋಡಣೆಗಳಲ್ಲಿ ಮಾತ್ರ ಇದ್ದಕ್ಕಿದ್ದಹಾಗೆ ಬದಲಾವಣೆಗಳು ಕಂಡುಬರುತ್ತವೆ. ಹೀಗೇಕಾಯಿತೆನ್ನುವುದೇ ಇನ್ನೂ ಗೊತ್ತಿಲ್ಲ.

ಊತದಲ್ಲಿನ ಒಂದೊಂದು ಜೀವಕಣದ ಗಾತ್ರ ದೊಡ್ಡದಾಗಿದ್ದರೆ ಮಲೆತ (ಹೈಪರ್‍ಟ್ರೋಫಿ) ಎನ್ನಿಸಿಕೊಳ್ಳುವುದು. ನಿಜಗಂತಿಗಳಲ್ಲಿ ಇದು ಸಾಮಾನ್ಯವಾದರೂ ಬೇರೆ ಬೇನೆಗಳಲ್ಲೂ ಇದನ್ನು ಕಾಣಬಹುದು. ಒಂದೆಡೆಯ ಜೀವಕಣಗಳು ಗುಣಿತವಾಗಿ ಹೆಚ್ಚಿಕೊಂಡಿದ್ದಕ್ಕೆ ಹೆಗ್ಗುಣಿತ (ಹೈಪರ್‍ಪ್ಲೇಸಿಯ) ಎಂದಿದೆ. ಎಷ್ಟೋ ವೇಳೆ ಗಂತಿಯನ್ನು ಗುರುತಿಸಲು ಇದೊಂದೇ ಗುಣ ಸಾಕು. ಹುಟ್ಟುಮರಳಿಕೆಯಲ್ಲಿ (ಅನಪ್ಲೇಸಿಯ) ಜೀವಕಣದ ಆಕಾರ. ಗಾತ್ರಗಳಲ್ಲಿ ಇನ್ನೂ ಹಿಂಗಾಲದ ರೂಪ ತಾಳಿರುತ್ತದೆ. ಆರೋಗ್ಯದಲ್ಲೂ ರೋಗಗಳಲ್ಲೂ ಹೀಗಾಗುವುದು ಕೆಲವೇಳೆ ಕಂಡರೂ ವಿಷಮ ಗಂತಿಗಳಲ್ಲಿ ಯಾವಗಲೂ ಹೀಗೇ ಇರುವುದು. ಒಟ್ಟಿನಲ್ಲಿ, ನಿಜಗಂತಿಗಳಲ್ಲಿ ಎಂದಿನಂತಿರದ ಈ ಅಸಹಜ ಗುಣಗಳೊಂದಿಗೆ ಜೀವಕಣಗಳು ಬೆಳೆಯುತ್ತಿರುವುವು.

ಹುಸಿ ಗಂತಿಗಳು : ಕಾರಣ, ಹುಟ್ಟು ಎರಡೂ ಚಿನ್ನಾಗಿ ಗೊತ್ತಿರುವ ಈ ಗಂತಿಗಳು ಹಲವು ತೆರನಾಗಿರುತ್ತವೆ. ಹೆಸರೇ ಹೇಳುವಂತೆ, ಇವು ಕೇವಲ ಬಾವುಗಳೇ ಹೊರತು ನಿಜವಾದ ಗಂತಿಗಳಲ್ಲ.

ಕೆರಳಿಕೆಗಳ ಎದುರಿನ ಪ್ರತಿಕ್ರಿಯೆಯಾಗಿ ಉರಿತದಿಂದೇಳುವ (ಇನ್‍ಫ್ಲಮೇಟರಿ) ಊತ. ಗಾಯ ಪೆಟ್ಟುಗಳಾದರೆ, ಮೃಗಾಗದ ಜೀವಕಣಗಳಿಂದೇಳುವ ಊತವಿದು. ಪೆಟ್ಟಾದ ಜಾಗದಲ್ಲಿ ತರಚಿ, ಜಜ್ಜಿ, ರಕ್ತ ಕಟ್ಟಿಕೊಂಡು ಗಂತಿಯೋ (ಹೆಮಟೋಮ) ಉಳುಕೋ ಆಗಬಹುದು. ಗಾಯ ವಾಸಿಯಾದೆಡೆ ಏಳುವ ಗಡಸುಗಂಟುಗಳು (ಕ್ಯಾಲಸಸ್), ದಿಂಚೀಲಉರಿತ (ಬರ್ಸೈಟಿಸ್), ಮುರಿದ ಮೂಳೆ ಸರಿಯಾಗಿ ಕೂಡದಡೆಯಲ್ಲಿ ಹೆಚ್ಚಿಗೆ ಬೆಳೆವುದೂ ಬೇರೂರಿದ ಊತಗಳ ಉದಾಹರಣೆಗಳು, ಕುರು, ಕೀವುಕುರು, ಉಗುರುಸುತ್ತು, ಊದಿದ ಅದಗಳ್ಳೆಗಳು-ಇವೆಲ್ಲ ಸೊಂಕು ಹತ್ತಿದ್ದರಿಂದ ಕೂಡಲೇ ಏಳುವ ಊತಗಳು. ಸಾಮಾನ್ಯವಾಗಿ ಕ್ಷಯ, ಉಪದಂಶ, ಕುಷ್ಠ ಮುಂತಾದವುಗಳಿಂದ ಏಳುವ ಗಂತಿಗಳು ಬಹುಕಾಲ ಇರುತ್ತವೆ.

ಒಂದು ಅಂಗದ ಇಲ್ಲವೇ ಅಂಗಭಾಗದ ಜೀವಕಣಗಳ ಗಾತ್ರ ಹೆಚ್ಚಿಯೋ ಅಂಕಿ ಗುಣಿತವಾಗೋ ದೊಡ್ಡದಾಗಿ ಬೆಳೆದವು ಮಲೆತದ (ಹೈಪರ್‍ಟ್ರೋಫಿಕ್) ಊತಗಳು. ಸಾಮು, ದಂಡೆ ಹೊಡೆವ ಕುಸ್ತಿ ಜಟ್ಟಿಗಳ ತೋಳು, ತೊಡೆ, ಹೆಗಲುಗಳ ಸ್ನಾಯುಗಳು ಮಿತಿಮೀರಿ ದಪ್ಪವಾಗಿ ಬೆಳೆದಿರುವುದು ಇದರ ಉದಾಹರಣೆ. ಬುಸುರಿಯಲ್ಲಿ ಮೊಲೆಗಳು ಗರ್ಭಕೋಶವೊ ದೊಡ್ಡವಾಗುವುದೂ ಹೀಗೇ. ಇವೆಲ್ಲ ಮೈಯ ಎಂದಿನ ನಿಜಗೆಲಸಗಳಿಗೆ ಸಂಬಂಧಿಸಿವೆಯೇ ಹೊರತು ರೋಗಗಳಲ್ಲವಾದ್ದರಿಂದ ಇವು ನಿಜಗಂತಿಗಳಲ್ಲ.

ಬದುಕಿರುವ ಜೀವಿಗಳು ಮೈ ಒಳಹೊಕ್ಕು ಅಲ್ಲೇ ದೊಡ್ಡದಾಗಿ ಬೆಳೆವವು ಪರಪಿಂಡಿಗಳ ಊತಗಳು. ನೀರ್ದೊಟ್ಟಿನ ರೋಗದಲ್ಲಿ, ಮುಖ್ಯವಾಗಿ ಈಲಿಯಂಥ ಕೆಲವೇ ಅಂಗಗಳಲ್ಲಿ ಜಿಟ್ಟಿಗಳು (ಸಿಸ್ಟ್ಸ್) ಬೆಳೆವುದು ಸಾಮಾನ್ಯ ಉದಾಹರಣೆ. ಜಿಟ್ಟಿಗಳ ಗೋಡೆಯೂ ಒಳಗಿರುವ ರಸವೂ ಹೊರಗಿನ ಜೀವಿಯಂದಾದವು. ಜಿಟ್ಟಿಯ ಸುತ್ತಲೂ ಒಂದಿಷ್ಟು ಉರಿತದ ಪ್ರತಿಕ್ರಿಯೆ ಕಾಣುತ್ತದೆ.

ಕೊಳೆತ ಜೀವಕಣಗಳಿಂದಾದ ರಸ ತುಂಬಿರುವ, ಚಂಡಿನಾಕಾರದಲ್ಲಿ ಬೆಳೆದ ಜಿಟ್ಟಿಗಳಲ್ಲಿ ಹಲ ಬಗೆಗಳಿವೆ. ಕೆಲವು ನಿಜಗಂತಿಗಳು ಜಿಟ್ಟಿಗಳ ಆಕಾರದಲ್ಲಿರಲೂಬಹುದು. ನಿಜಗಂತಿಯೊಳಗೆ ಗಟ್ಟಿಯಾಗಿರುವ ಭಾಗ ಕೊಳೆತು ಜಿಟ್ಟಿಗಳ ಹಾಗೆ ಕಾಣಬಹುದು. ಇನ್ನು ಕೆಲವು ಜಿಟ್ಟೆಗಳು ಗಂತಿಗಳೇ ಅಲ್ಲ. ಇದಕ್ಕೆ ಉದಾಹರಣೆಗಳು ಹಲವಾರಿವೆ. ಹೊರಸಾಗಿಸುವ ನಾಳಕ್ಕೆ ಅಡ್ಡಿಯಾಗಿ ಗ್ರಂಥಿಯೇ ಹಿಗ್ಗಿರುವ ಹಿಡಿದಿಟ್ಟ ಜಿಟ್ಟೆಯ ಉದಾಹರಣೆ ಮೈಜಿಡ್ಡಿನ ಜಿಟ್ಟೆ (ಸೆಬೇಷಿಯಸ್ ಸಿಸ್ಟ್). ಸಾಮಾನ್ಯವಾಗಿ ಕೊಂಚವೇ ರಸವಿರುವ ಚೀಲದಲ್ಲಿ ನೀರ್ದುಂಬಿ ಬಿರುದುಂಬಿದ ಜಿಟ್ಟಿಯ ಉದಾಹರಣೆ ಚೇರು (ಹೈಡ್ರೋಸಿಲ್). ಹುಟ್ಟುವಾಗಲೇ ಹಸುಗೂಸಿನಲ್ಲಿ ಕಂಡುಬರದಿದ್ದರೂ ಪಿಂಡದಲ್ಲಿದ್ದ ಕೆಲವು ರಚನೆ ಕಟ್ಟುಗಳು ವಿಕಾಸವಾಗದೆ ಮೊಳಕೆಯಾಗೇ ಉಳಿದಿದ್ದು ಮುಂದೆಂದಾರು ತೋರುವುದರ ಉದಾಹರಣೆ ಗುರಾಣಿಕೆ ನಾಲಗೆಯ (ತೈರೊಗ್ಲಾಸಲ್) ಜಿಟ್ಟೆ. ಪರಪಿಂಡಿ ಜಿಟ್ಟೆಯನ್ನು ಆಗಲೇ ವಿವರಿಸಿದೆ. ಅನುವಳಿಕ (ಡಿಜನರೇಟಿವ್) ಜಿಟ್ಟಿಯ ಉದಾಹರಣೆ ರಕ್ತದ ಜಿಟ್ಟಿ. ಎಲ್ಲ ಜಿಟ್ಟಿಗಳಲ್ಲೂ ಒಳಗಡೆ ಇರುವ ರಕ್ತ. ಲೋಳೆ, ರಸ ನೀರುನೀರಾಗಿರುವುದು. ಚರ್ಮದ ಮೇಲಿರುವ ಜಿಟ್ಟೆಗಳಲ್ಲಿ ಹಾಲುರಸದಂಥ ತಿಳಿರಸವಿದ್ದರೆ ಅವುಗಳ ಮೂಲಕ ಬೆಳಕು ಹಾಯುವಂತಿರುವುದು. ಒಂದು ಬಾವು ಜಿಟ್ಟಿಯೋ ಅಲ್ಲವೋ ತಿಳಿಯಲು ಕೊಳವೆಸೂಜಿ ಹಾಕಿನೋಡಬೇಕು. ರಸ ಹೊರಸುರಿದರೆ ಅದು ಜಿಟ್ಟಿ. ಶಸ್ತ್ರಕ್ರಿಯೆಯಿಂದ ಕೊಯ್ದು ತೆಗೆಯಬಹುದು ಇವುಗಳ ಚಿಕಿತ್ಸೆ.

ಗೋಡೆಗಳೋ ಹೊದಿಕೆಕವಚವೋ ಕೊಳೆತು ಮೆತ್ತಗಾಗವುದರಿಂದ ಪೊಳ್ಳಾಗಿರುವ ಅಂಗವೋ ಅಂಗಾಂಶವೋ ಬಿರಿದುಂಬಿದರೆ ಅನುವಳಿಕೆ ಜಿಟ್ಟಿಗಳಾಗುತ್ತವೆ : ಅಗಲುಬ್ಬು (ಅನ್ಯೂರಿಸಂ), ವಕ್ರಸಿರೆ (ವೆರಿಕೋಸ್ ವೆಯ್ನ), ಬೂರು (ಹರ್ನಿಯ). ತಿರುಚೀಲ (ಡೈವರ್ಟಿಕ್ಯುಲಂ) ಇಂಥವು.

ಕೆಲವೇಳೆ ಏನೂ ಊದಿರದಿದ್ದರು ಊತವಿದ್ದ ಹಾಗೇ ತೋರುವುದುಂಟು. ಮೈ ಬಡಕಲಾಗಿ ಸೊರಗಿರುವಾಗ ಒಳಾಂಗಗಳು ಎದ್ದು ತೋರಿದಾಗ ಬಾವುಗಳಾಗಿ ಕಾಣುತ್ತವೆ.

ಕೆಲವು ಬಾವುಗಳ ಹುಟ್ಟು, ಗುಣಗಳ ವಿಚಾರವಾಗಿ ಒಮ್ಮತವಿಲ್ಲ. ಇವು ನಿಜಗಂತಿಗಳೋ ಉರಿತಗಳೋ ಅನುವಳಿಕೆಗಳೋ (ಡಿಜನರೇಷನ್ಸ್) ಇನ್ನೂ ಖಚಿತವಿಲ್ಲ. ಹಾಲುರಸ ಗ್ರಂಥಿಗಳಿಗೆ ಹತ್ತುವ ಹಾಡ್ಜ್‍ಕಿನ್ನನ ರೋಗ ಇಂಥದೊಂದು.

ತಾನು ಬಸುರಾಗಿರುವೆನೆಂದು ಭ್ರಮಿಸುವ ಹೆಣ್ಣಿನ ಕೆಳಹೊಟ್ಟೆ ದಪ್ಪವಾಗಿರುವಂತೆ ತೋರುವುದಕ್ಕೆ ತೋರ್ಕೆ (ಫ್ಯಾಂಟಂ) ಗಂತಿ ಎಂದಿದೆ. ಇದರೊಂದಿಗೇ ಬಸುರಿಯ ಬಯಕೆಗಳು ಮತ್ತಿತರ ಲಕ್ಷಣಗಳೂ ತೋರುವುದುಂಟು. ಅರಿವು ತಪ್ಪಿಸಿದರೆ, ಪರವಶತೆಯಿಂದ (ಹಿಪ್ನೋಟಿಸಂ) ತೋರ್ಕೆ ಗಂತಿ ಮಾಯವಾಗುತ್ತದೆ.

ನಿಜಗಂತಿಗಳು : ಮೈಯಲ್ಲಿ ಮೊದಲೇ ಇರುವ ಜೀವಕಣಗಳಿಂದೆದ್ದ, ಬೇಗನೇ ಬೆಳೆವ, ಅಂಗಾಂಶ ಜೀವಕಣಗಳ ಗಂಟುಗಳಿರುವವೇ ನಿಜವಾದ ಗಂತಿಗಳು, ಕೆಲವೇಳೆ ಯಾವ ಜೀವಕಣಗಳಿಂದ ಹುಟ್ಟಿದವೋ ಅವುಗಳ ಹಾಗೇ ಎಂದಿನಂತಿರುತ್ತವೆ, ಗಂತಿಯ ಈ ಜೀವಕಣಗಳು. ಸಾಮಾನ್ಯವಾಗಿ ಇಂಥವು ನಿರಪಾಯಕರ. ಇವಕ್ಕೆ ಮೆಲುಪಿನವು (ಬಿನ್ಯನ್) ಎಂದಿದೆ. ಆದರೆ ನಿಜಗಂತಿಗಳಲ್ಲಿನ ಜೀವಕಣಗಳ ರೂಪ, ಗಾತ್ರ, ಆಕಾರ, ರಚನೆ ಎಂದಿನಂತಿರವು. ಇವೆಲ್ಲ ವಿಷಮ (ಮೆಲೆಗ್ನೆಂಟ್) ಗಂತಿಗಳು. ಇವು ಬಲು ಹಾನಿಕಾರವಾದವು. ಜೀವಕಣಗಳ ಬೆಳೆತದಲ್ಲಿ ಸಾಮಾನ್ಯವಾಗಿ ಹುಟ್ಟು ಮರಳಿಕೆ ಹೆಗ್ಗುಣವಾಗಿರುವುದು.

ಈ ಗಂತಿಗಳು ಏಳಲು ಕಾರಣವೇ ಖಚಿತವಿಲ್ಲ. ಆರೋಗ್ಯವಂತರಲ್ಲಿ ಎಲ್ಲರಲ್ಲೂ ಆಗುವ ಹಾಗೇ ಜೀವಕಣಗಳು ವೆಗ್ಗಳಿಸುವುದರಿಂದಲೇ (ಪ್ರೊಲಿಫೆರೇಷನ್) ಗಂತಿಗಳು ಬೆಳೆಯುತ್ತವೆ. ಎಲ್ಲ ಜೀವಿಗಳಂತೆ ಮೈಯ ಜೀವಕಣಗಳಿಗೂ ಕೆಲವು ದಿನಗಳಿಂದ ಹಿಡಿದು ವರ್ಷಗಳ ತನಕದ ಪ್ರಾಣವಿರುತ್ತದೆ. ಕಾಲಕಾಲಕ್ಕೆ ಸತ್ತು ಬಿದ್ದುಹೋದವುಗಳ ಬದಲು ಬೇರೆ ಹುಟ್ಟಿಕೊಳ್ಳುತ್ತವೆ. ಹೊಸ ಜೀವಕಣಗಳು ಹೊಸದಾಗಿ ಹುಟ್ಟುವು. ಇರುವ ಕಣವೇ ಇಪ್ಪಾಲಾಗಿ ಒಡೆದು ಹೊಸಕಣಗಳು ಹುಟ್ಟುತ್ತವೆ. ಸುಟ್ಟಗಾಯದಲ್ಲಿ ಆಗುವಂತೆ, ಚರ್ಮ ಬಿದ್ದುಹೋದರೆ, ಅಕ್ಕಪಕ್ಕದ ಜೀವಕಣಗಳು ಗುಣಿತವಾಗಿ ಆ ಜಾಗವನ್ನು ತುಂಬುತ್ತವೆ. ಉದ್ದೇಶ ನೆರವೇರಿದ ಒಡನೆಯೇ ಕಣಗಳ ಬೆಳೆತ ತಾನೇ ತಾನಾಗಿ ನಿಂತುಹೋಗುತ್ತದೆ. ಗಾಯ ವಾಸಿಯಾಗಲು ಹೀಗಾಗುವುದೇನೋ ಸರಿಯೆ. ಕಿತ್ತು ಹೋದ ಜಾಗ ಸರಿಯಾಗಿ ತುಂಬಿದೆ ಕೂಡಲೇ ಜೀವಕಣಗಳ ಬೆಳೆತಕ್ಕೆ ಸರಕ್ಕನೆ ತಡೆಯಾಗುವ ಉಪಾಯವಂತೂ ಬಲು ಸೋಜಿಗ. ಹೀಗೆ ಜೀವಕಣಗಳು ಗುಣಿತವಾಗಲು ಸಹಜ ಚೋದನೆಯೇನೋ ಇರಬೇಕು. ಅದೇ ತೆರನಾಗಿ ಜೀವಕಣಗಳ ಗುಣಿತ ಸರಕ್ಕನೆ ನಿಲ್ಲುವುದಕ್ಕು ಅಂಥದೇ ಸಹಜ ಚೋದನೆಯೊಂದು ಇರಬೇಕು.

ಸಹಜವಾದ ಅಂಥ ಯಾವ ಚೋದನೆಯೂ ಇಲ್ಲದೆ ಜೀವಕಣಗಳು ಗುಣಿತವಾಗುವುದರಿಂದಲೋ ಅಸಹಜ ಚೋದನೆಯಿಂದಲೋ ಗಂತಿಗಳು ಏಳುವುವು. ಈ ಚೋದನೆಗಳು ಎಂಥವು ಎಂಬುದು ಮಾತ್ರ ಗೊತ್ತಿಲ್ಲ. ಗೊತ್ತಾಗುವ ಹಾಗೆ ಯಾವ ಕಾರಣವೋ ಇರದೆಯೇ ಒಂದು ಅಂಗದ ಊತಕದ ಜೀವಕಣಗಳು ಇದ್ದಕ್ಕಿದ್ದಂತೆ ಗುಣಿತವಾಗಿ ಇರುವ ಜಾಗವನ್ನೇ ಆಕ್ರಮಿಸುತ್ತವೆ. ಸಹಜವಾಗಿ ಗಾಯ ವಾಸಿಯಾಗುವಾಗ ಆಗುವುದಕ್ಕೂ ಇದಕ್ಕೂ, ಒಂದು ಮುಖ್ಯ ವ್ಯತ್ಯಾಸವಿದೆ. ತಾಯಿ ಜೀವಕಣದಿಂದ ವಿಕಾಸವಾದ ಮರಿಕಣ ತಾಯಿ ಕಣವನ್ನೂ ಹೋಲದೆ ಇನ್ನು ಹಿಂದಿನ ಆದಿಕಣದ ಹಾಗಿರುತ್ತದೆ.

ಗಂತಿಗಳು ಏಳಲು ಕೆಲವು ಅಂಶಗಳು ಕಾರಣಗಳಂತೆ ತೋರಬಹುದು. ಬೇರೂರಿದ ಕೆರಳಿಕೆ (ಇರಿಟೇಷನ್) ಅಂಥ ಒಂದು ಅಂಶ. ಕಸಬು, ಜೀವನದ ಕ್ರಮಗಳಿಗೆ ತಕ್ಕಂತೆ ಬಗೆ ಬಗೆಯ ಗಂತಿಗಳನ್ನು ಕಾಣಬಹುದು.

ಚಳಿಗಾಲದಲ್ಲಿ ಬೆಚ್ಚಗಿರಲು ಕಾಶ್ಮೀರದ ಜನ ಉರಿಕೆಂಡಗಳಿರುವ ಮಡಕೆಗಳನ್ನು (ಕಾಂಗ್ರಿ) ಯಾವಾಗಲೂ ಹೊಟ್ಟೆಗೆ ಕಟ್ಟಿಕೊಂಡಿರುವುದರಿಂದ ಹೊಟ್ಟೆಯ ಮೇಲೆ ಕಾಂಗ್ರಿ ಏಡಿಗಂತಿ ಏಳುತ್ತದೆ. ಆಂಧ್ರಪ್ರದೇಶದಲ್ಲಿ ಹೆಂಗಸರು ಚುಟ್ಟದ ಉರಿವ ಕೊನೆಗಳನ್ನು ಬಾಯೊಳಗೆ ಇರಿಸಿಕೊಂಡು ಹೊಗೆ ಸೇದುವುದರಿಂದ ಬಾಯಲ್ಲಿ ಏಡಿಗಂತಿ ಏಳವುದು. ಹಲ್ಲು ಸವೆದು ಚೂಪಾಗಿ ಒಳದವಡೆಗೆ ಉಜ್ಜಿದಾಗ ಬಾಯೊಳಗೆ ಏಡಿಗಂತಿ ಏಳಬಹುದು. ಅತಿ ನೇರಳೆ ಕಿರಣಗಳು, ಎಕ್ಸ್ ಕಿರಣಗಳು, ವಿಕಿರಣಶೀಲ ಸಮಸ್ಥಾನಿಗಳು (ಐಸೊಟೋಪ್ಸ್) ರಕ್ತದಲ್ಲಿ ಗಂತಿಗಳೇಳಲು ಕಾರಣವಾಗಬಹುದು. ಗಡಿಯಾರದ ರೇಡಿಯಂ ಸೂಚೀಬಿಲ್ಲೆ (ಡಯಲ್) ತಯಾರಕರಲ್ಲಿ ಮೂಳೆ ಏಡಿಗಂತಿ ಏಳುತ್ತದೆ. ಯುರೇನಿಯಂ ಗಣಿ ಕೆಲಸಗಾರರಲ್ಲಿ ಪುಪ್ಪುಸದ ಏಡಿಗಂತಿ ಸಾಮಾನ್ಯ. ಯಾವಾಗಲೂ ಇಲ್ಲಣವನ್ನು ಮೈಗೆ ತಾಕಿಸಿಕೊಳ್ಳುವವರಲ್ಲಿ ಚರ್ಮದಲ್ಲು ಸಿಗರೇಟು ವಿಪರೀತ ಸೇದುವವರಲ್ಲಿ ಪುಪ್ಪುಸದಲ್ಲೂ ಅನಿಲೀನ್ ಬಣ್ಣವಸ್ತು ತಯಾರಕರಲ್ಲಿ ಕಂಕೋಶದಲ್ಲೂ ಹೊಗೆಸೊಪ್ಪಿನೊಂದಿಗೆ ಎಲೆಅಡಿಕೆಯನ್ನು ಯಾವಾಗಲೂ ಜಗಿಯುತ್ತ ದವಡೆಗೆ ಒತ್ತಲಿಸುವವರಲ್ಲಿ ಒಳ ಬಾಯಿ ನಾಲಗೆಗಳಲ್ಲೂ ಏಡಿಗಂತಿ ಏಳುವುದು.

ಅಂತಃಸ್ರಾವೀ ರಸಗಳಾದ ಹಾರ್ಮೋನುಗಳ ಪ್ರಯೋಗವಾದಾಗ ಪ್ರಾಣಿಗಳಲ್ಲಿ ಗಂತಿಗಳಾಗಿವೆಯಾದರೂ ಗಂತಿಗಳ ಮೇಲೆ ಅವುಗಳ ಪರಿಣಾಮವೆಷ್ಟು ಎನ್ನುವುದು ಖಚಿತವಾಗಿಲ್ಲ.

ನಿಜಗಂತಿಗಳಿಗೆ ವಯಸ್ಸಿನ ಜನಾಂಗದ ಅಡ್ಡಿ ಇಲ್ಲವಾದರೂ ವಯಸ್ಸು ಹೆಚ್ಚಿದ ಹಾಗೆಲ್ಲ ಇವುಗಳ ಬೆಳವಣಿಗೆಯೂ ಏರುತ್ತ ಹೋಗುತ್ತದೆ. ಕೆಲವಕ್ಕೆ ಆಗ ಹುಟ್ಟಿದ ಹಸುಗೂಸೂ ಹೊರತಲ್ಲ. ವಿಷಮಗಂತಿಗಳು ಮುಖ್ಯವಾಗಿ ಕೆಲವು ತಲೆಮಾರುಗಳಲ್ಲಿ ಏಳುವಂತೆ ತೋರುವುದು. ಹೀಗುವುದನ್ನು ಚಿಟ್ಟಿಲಿಗಳ ಮೇಲಿನ ಪ್ರಯೋಗಗಳಿಂದ ಸ್ಥಿರಪಡಿಸಲಾಗಿದೆ. ತಲೆಮಾರಿನಲ್ಲಿ ತೋರುವ ಈ ಗುಣ ಏಡಿಗಂತಿ ಏಳುವುದರಲ್ಲಿನ ಬಲು ಸಣ್ಣ ಅಂಶ. ಪ್ರಾದೇಶಿಕ ವೈಶಿಷ್ಟ್ಯಗಳನ್ನು ಗಮನಿಸವುದಾದರೆ ಮೊಲೆಯ ಏಡಿಗಂತಿ ಅಮೇರಿಕದ ಹೆಂಗಸರಲ್ಲಿ ಹೆಚ್ಚಾದರೆ, ಜಪಾನೀ ಹೆಂಗಸರಲ್ಲಿ ಬಲು ವಿರಳ. ಹಾಗೆಯೇ ಏಷ್ಯದವರಲ್ಲಿ ಈಲಿಯ ಏಡಿಗಂತಿ ಸಾಮಾನ್ಯ ; ಬಿಳಿಯರಲ್ಲ ಕಡಿಮೆ. ಅವರಲ್ಲಿ ಸಾಮಾನ್ಯವಾಗಿ ಏಳುವ ಚರ್ಮದ ಏಡಿಗಂತಿ ಕರಿಯರಲ್ಲಿ ಅಷ್ಟಾಗಿಲ್ಲ.

ಕೆಲವು ಗಂತಿಗಳು ಗಂಡು ಮತ್ತು ಹೆಣ್ಣುಗಳಲ್ಲಿ ವ್ಯತ್ಯಾಸ ತೋರುವುವು. ತುಟಿಯ ಏಡಿಗಂತಿ ಹೆಂಗಸರಲ್ಲಿ ವಿರಳ ; ಗುರಾಣಿಕೆ ಗ್ರಂಥಿಯ ಗಂತಿಗಳು ಹೆಂಗಸರಲ್ಲೇ ಹೆಚ್ಚು. ಕೆಲವು ಅಂಗಗಳು ಗಂತಿಗಳಿಗೆ ಈಡಾಗುವುದು ಹೆಚ್ಚು. ಜಠರ, ಅನ್ನನಾಳ, ನೆಟ್ಟಗರಳು (ರೆಕ್ಟಂ), ಪುಪ್ಪುಸ, ಹೆಂಗಸಿನ ಮೊಲೆ ಮತ್ತು ಜನನಾಂಗಳಲ್ಲಿ ಸಾಮಾನ್ಯ ; ಗುಂಡಿಗೆ, ತೊರಳೆಯಂಥವಲ್ಲಿ ವಿರಳ. ರೋಗಿಗಳಲ್ಲಿ. ಚಟ್ಟೆಹುಳುಗಳಿಂದ (ಫ್ಲೂಕ್ಸ್) ಈಲಿ, ಕಂಕೋಶಗಳಲ್ಲಿ ಏಡಿಗಂತಿ ಏಳಬಹುದು.

ಜೀವಾಣುಗಳಿಂದ ಆಗುವ ಸೋಂಕು ಗಂತಿಗಳಿಗೆ ಕಾರಣವಲ್ಲ. ಸೋಸಬಹುದಾದ ಒಂದು ವಿಷಕಣದಿಂದ ಕೋಳಿಯಲ್ಲಿ ಕೆಲವು ಗಂತಿಗಳನ್ನು ಎಬ್ಬಿಸಬಹುದು. ಮಕ್ಕಳಲ್ಲಿ ಮೆತು ನರೂಲಿಗಳು (ವಾರ್ಟ್‍ಸ್) ಹೀಗೆಯೇ ಏಳುವುದಾದರೂ ನರೂಲಿಗಳು ಗಂತಿಗಳೇ ಎಂಬ ವಿಷಯ ಶಂಕಾಸ್ಪದ.

ಮುಖ್ಯವಾಗಿ, ಕೆಲಸಗಾರರ ಪರಿಹಾರ ಮಂಡಲಿಯ ಗಮನಕ್ಕೆ ಕೆಲವೇಳೆ ಬಂದಿರುವಂತೆ ಗಾಯ, ಪೆಟ್ಟಿಂದ ಗಂತಿ ಏಳುತ್ತದೆ. ಎಂದು ಹೇಳಿರುವುದುಂಟು. ಸಾಮಾನ್ಯವಾಗಿ, ಮಾಂಸಗಂತಿ (ಸಾರ್ಕೋಮ) ತೆರನ ಗಂತಿಗಳು ಗಾಯ, ಪೆಟ್ಟಿಂದ ಕೆಲವೇಳೆ ಏಳಬಹುದೆಂಬ ಅನುಮಾನವಿದ್ದರೂ ಇನ್ನೂ ಖಚಿತವಾಗಿಲ್ಲ.

ಕೆಡಕು : ಮೈಗೆ ಕೆಡಕಾಗುವ ಹೊತ್ತಿನಲ್ಲಿ ಕಾಪಿಡುವ ಮರುಕ್ರಿಯೆ ಒಂದು ಹಂತವಾಗಿರುವುದರಿಂದ ಸಹಜವಾದ ಉರಿತದ ಊತಗಳು ಮೈಗೆ ಅನುಕೂಲಕರ. ನಿಜಸಂಗತಿಗಳಿಗೆ ಈ ತೆರನ ಯಾವ ಉದ್ದೇಶವೂ ಇಲ್ಲ ; ಅರ್ಥವೂ ಇಲ್ಲ. ಇವುಗಳ ಪಾತ್ರ ಕೇವಲ ರೋಗಿಯನ್ನು ಸಾಯಿಸುವುದರಲ್ಲಿದೆ. ರೋಗಿಗೆ ಏನಾದರೂ ಸರಿಯೆ, ಇವಷ್ಟಕ್ಕೆ ಇವು ಬೆಳೆಯುತ್ತ ಹೋಗುತ್ತವೆ. ಇರುವಡೆಯಿಂದ ಇವು ಏಡಿಯ ಕಾಲುಗಳ ಹಾಗೆ ಎಲ್ಲ ದಿಕ್ಕುಗಳೂ ಹರಡಿಕೊಳ್ಳುವುದರಿಂದಲೇ ಇವಕ್ಕೆ ಏಡಿಗಂತಿ (ಕ್ಯಾನ್ಸರ್) ಎಂಬ ಹೆಸರಾಗಿದೆ.

ಉರಿತದ ಊತಗಳು ರೂಪಿಸುವ ಕ್ರಿಯೆಯ ತೀವ್ರತೆ ಮೈ ಆರೋಗ್ಯಕ್ಕೆ ತಕ್ಕ ಹಾಗೆ ಇರುತ್ತದೆ. ಬಡಕಲು. ಸಣಕಲ ಮೈಯವರಲ್ಲಿ ಉರಿತದ ಪ್ರತಿಕ್ರಿಯೆ ಕೊಂಚ ಇಲ್ಲವೇ ಏನೂ ಇಲ್ಲವಾಗಬಹುದು. ನಿಜಗಂತಿ ಬೆಳೆತಕ್ಕೆ ಮೈ ಆರೋಗ್ಯ ಲೆಕ್ಕಕ್ಕೇ ಇಲ್ಲ. ಆದ ಗಾಯ ವಾಸಿಯಾಗುವ ಕುರುಹೇ ಇಲ್ಲದಷ್ಟು ಮೈ ಸೊರಗಿದ್ದರೂ ಮೈಯಲ್ಲಿದ್ದ ನಿಜಗಂತಿ ಮಾತ್ರ ಜೀವಕಣ ಗುಣಿತದಿಂದ ಬೆಳೆಯುತ್ತಲೇ ಹೋಗುವುದು. ಈ ವಿಷಯದಲ್ಲಿ ಗಂತಿಗಳು ಪರಪಿಂಡಿಗಳಂತೆ ವರ್ತಿಸುತ್ತವೆ.

ರೋಗಲಕ್ಷಣಗಳು : ಹೊಸದಾಗಿ ಬೆಳೆದ ಗಂತಿಯ ಜೀವಕಣಗಳ ತಂಡ ಒಂದೆಡೆಯಲ್ಲಿ ಹೆಪ್ಪುಗಟ್ಟಿ ಊತವಾಗಿರುವುದು. ಚರ್ಮದಲ್ಲೋ ಅದರ ಹತ್ತಿರವೊ ಎದ್ದಿದ್ದರೆ ಕೈಗೆ ಮುಟ್ಟಲು ಸಿಗುವುದು, ಇಲ್ಲವೇ ಕಣ್ಣಿಗೆ ಎದ್ದುತೋರುವುದು. ಮೈಯಲ್ಲಿ ಯಾವ ಅಂಗದಲ್ಲಾದರೂ ಸರಿಯೆ ಗಂತಿಗಳು ಹುಟ್ಟಬಹುದಾದ್ದರಿಂದ ಎಲ್ಲ ಗಂತಿಗಳೂ ಕೈಗೆ ಮುಟ್ಟಲು ಸಿಗಲಾರವು.

ಮುಖ್ಯವಾಗಿ ವಿಷಮವಾದ ಕೆಲವು ಗಂತಿಗಳು ಬರೀ ಗಡ್ಡೆಯ ಹಾಗಿರಬೇಕಾದುದೆಲ್ಲ. ಹುಣ್ಣು. ಒಣಬಿರುಕು, ಸೀಳುಗಳಾಗೂ ನರೂಲಿ ತೆರನ ಚಾಚುಗಳಾಗೂ ಹರಡಿಕೊಂಡೂ ಅವು ಕಾಣಬರುವುದುಂಟು. ಎಂದಿನ ಜೀವಕಣಗಳ ಬದಲಾಗಿ ಗಂತಿಯ ಜೀವಕಣಗಳು ಹುಟ್ಟಿಕೊಂಡಿರಬಹುದು. ಎಂದಿನ ಜೀವಕಣಗಳೂ ಹಾಳಾಗುವುದೂ ಹೊಸ ಗಂತಿಯವು ಅವುಗಳ ಜಾಗಕ್ಕೆ ಬರುವುದೂ ಒಂದೇ ಜೀವಕಣಗಳು ಹಾಳಾಗುವುದೂ ಹೊಸ ಗಂತಿಯವು ಅವುಗಳ ಜಾಗಕ್ಕೆ ಬರುವುದೂ ಒಂದೇ ಸಮವಾಗಿದ್ದರೆ ಊತಕಮೆತುವೋ ಗಡುಸೋ ಆಗಬಹುದೇ ಹೊರತು ಅಂಗದ ಗಾತ್ರ ಅಷ್ಟೇನೂ ವ್ಯತ್ಯಾಸವಾಗದು ಮಿಕ್ಕ ಗಂತಿಗಳಲ್ಲಿ ಗಂತಿಯ ಜೀವಕಣಗಳಿಗಿಂತಲೂ ಬೇಗ ಬೇಗನೆ ಎಂದಿನ ಜೀವಕಣಗಳು ಹಾಳಾಗುವುವು. ಆಗ ಮೊಲೆಯಲ್ಲೇಳುವ ಕೆಲವು ಏಡಿಗಂತಿಗಳಲ್ಲೂ ಕರುಳಿನ ಸುತ್ತಲು ಸುತ್ತುವರಿದ ಏಡಿಗಂತಿಯಲ್ಲೂ ಇತರ ಗಂತಿಯಲ್ಲಾಗುವಂತೆ ಗಂತಿಯೆದ್ದ ಭಾಗ ಸಣ್ಣದಾಗುತ್ತದೆ.

ಮೈಯಲ್ಲಿ ಕೊಳವೆಗಳ ಹಾಗಿರುವ ಕರುಳು, ಅನ್ನನಾಳ, ಪಿತ್ತನಾಳ, ಮೂತ್ರಕ ನಾಳಗಳೇ ಮುಂತಾದವಲ್ಲಿ ಏಳುವ ಗಂತಿಗಳಿಂದ ತೀರ ಅಡ್ಡಗಟ್ಟಿದಂತಾಗಿ ಅವುಗಳಲ್ಲಿ ಏನೂ ಮುಂದೆ ಸಾಗದಂತಾಗುತ್ತದೆ. ಅಂಥ ಗಂತಿಗಳು ಸಾಗುನಾಳಗಳ ಗೋಡೆಯಲ್ಲಿ ಇರುವುದರಿಂದದ ಅವು ಒಡೆದುಕೊಂಡರೆ ಸಾಗುನಾಳಕ್ಕೆ ರಕ್ತಸುರಿಯುತ್ತದೆ. ಏಡಿಗಂತಿ ಹೀಗೆ ಎದ್ದಿರುವಾಗ ಸಹಜ ಕಂಡಿಗಳಿಂದ ರಕ್ತ ಹೊರಬೀಳಲು ಇದೇ ಕಾರಣ, ಜಠರದ ಏಡಿಗಂತಿಯಿಂದ ರಕ್ತವಾಂತಿಯಾಗುವುದು. ಮೂತ್ರಪಿಂಡ, ಕಂಕೋಶಗಳಲ್ಲಿ ಗಂತಿ ಎದ್ದಿದರೆ ಉಚ್ಚೆಯಲ್ಲಿ ರಕ್ತಹೋಗುವುದು. ಗಂತಿಯಲ್ಲಿ ಕೀವು ಗೂಡಿದರೆ ಚರ್ಮದ ಮೇಲೆ ಒಡೆದುಕೊಂಡು ಹುಣ್ಣಾಗಿ ಕೀವು ಸೋರಬಹುದು.

ಎದೆಗೂಡು, ತಲೆಬುರುಡೆ, ಬೆನ್ನುಗಂಬಗಳೇ ಮುಂತಾದ ಹಿಗ್ಗಿಸಲಾಗದ ಪೊಳ್ಳುಗಳೊಳಗೆ ಬೆಳೆದ ಗಂತಿಯಿಂದ ಮೂಳೆಯೇ ನಿರ್ಬಲವಾಗಿ ಮುರುಟಿಕೊಳ್ಳಬಹುದು, ಬಾಗಬಹುದು, ಮುರಿಯಲೂಬಹುದು. ಹೀಗಾಗುವಾಗ ಅಕ್ಕಪಕ್ಕದಲ್ಲಿರುವ ಗುಂಡಿಕೆ, ಪುಪ್ಪಸ, ಮಿದುಳು, ಬೆನ್ನಹುರಿಯಂಥ ಜೀವಾಳದ ಅಂಗಗಳು ಕುಗ್ಗಿ ಸೊರಗಬಹುದು. ಯಾವ ಅಂಗಾಂಶದಲ್ಲಿ ಗಂತಿ ಬೆಳೆಯುತ್ತದೋ ಅದರ ಕೆಲಸ ಕೆಡಬಹುದು. ಕಣ್ಣಲ್ಲಿ ಗಂತಿ ಎದ್ದರೆ ಆ ಭಾಗದ ಕಣ್ಣು ಕುರುಡಾಗುತ್ತದೆ.

ಎಲ್ಲ ಗಂತಿಗಳೂ ನೋವು ಕೊಡವು. ಬೆನ್ನುಗಂಬದಲ್ಲಿನ ಗಂತಿ ಹತ್ತಿರದ ನರಜಾಡನ್ನು ಕೆರಳಿಸುವುದರಿಂದಲೋ ಒತ್ತಡ ನೇರವಾಗಿ ಅದರ ಮೇಲೆ ಬೀಳುವುದರಿಂದಲೊ ನೋವೇಳುತ್ತದೆ. ತಲೆಬುರುಡೆಯಂಥ ಹಿಗ್ಗದ ಪೊಳ್ಳಿನಲ್ಲಿ ಮಿದುಳಿನಗಂತಿ ಒತ್ತಡ ಹೆಚ್ಚಿದರೆ ತಲೆನೋವು ತೋರುವುದು. ಕರುಳಿನಲ್ಲಿ ಗಂತಿ ಎದ್ದರೆ ಹೊಟ್ಟೆಶೂಲೆ ಕಾಣಿಸಿಕೊಳ್ಳಬಹುದು. ಆದ್ದರಿಂದ ಗಂತಿಗಳು ಮೊದಮೊದಲು ಎಳೆಯದಾಗಿರುವಾಗ ನೋವೇ ತೋರದು. ಇದನ್ನು ಮಹಾದುರಷ್ಟೆ ಎನ್ನಬಹುದು. ಎಷ್ಟೇ ದೊಡ್ಡ ಗಡ್ಡೆ ಎಲ್ಲೇ ಎದ್ದಿರಲಿ, ನೋವಿಲ್ಲವಾದರೆ ರೋಗಿ ವೈದ್ಯನಲ್ಲಿ ಸಲಹೆ ಪಡೆಯದೆ ತೆಪ್ಪನಿದ್ದುಬಿಡುತ್ತಾನೆ. ಗಂತಿಗಳು ಎಷ್ಟೇ ದೊಡ್ಡವಾಗಿರಲಿ ಆ ಜಾಗದ ನಿಜಗೆಲಸಕ್ಕೆ ಅಡ್ಡಿಯಾಗದಿದ್ದರೆ ನೋವು ಇನಿತೂ ಕಾಣಬರದು. ಆದರೆ ವಿಷಮಗಂತಿ ಬಲಿತ ಹಾಗೆಲ್ಲ ಸಾಮಾನ್ಯವಾಗಿ ನೇರವಾಗಿ ನರಗಳಲ್ಲಿ ಹರಡಿಕೊಂಡೋ ಮೂಳೆಯನ್ನು ಹಾಳಿಬಿಟ್ಟೊ ನೋವು ಕೊಡುತ್ತದೆ ; ನರಗಳಲ್ಲಿ ಏಳುವವನ್ನೂ ಬಿಟ್ಟರೆ ಉಳಿದ ಗಂತಿಗಳಲ್ಲಿ ನರಗಳೇ ಇರವು.

ವಿಂಗಡಣೆ : ಮೈಯಲ್ಲಿ ಯಾವ ಅಂಗ, ಅಂಗಾಂಶ, ಜೀವಕಣಗಳಲ್ಲಿ ಎಷ್ಟು ವಿಷಮವಾಗಿ ಏಳುವುದೆಂಬುದನ್ನು ಗಮನಿಸಿ ಗಂತಿಗಳನ್ನು ವಿಂಗಡಿಸಬಹುದು. ಆದರೆ ಕೆಲವು ಗಂತಿಗಳ ಜೀವಕಣಗಳು ಯಾವ ಮೂಲಕಣಗಳಿಂದ ಏಳುತ್ತವೆಂದು ಗುರುತಿಸುವುದು ಕಷ್ಟವಾದ್ದರಿಂದ ವಿಂಗಡಣೆ, ಕೆಲವೇಳೆ ಖಚಿತವಾಗಿರದು. ಗಂತಿಗಳೆಲ್ಲ ಜೀವಕಣಗಳಿಂದ ಆಗಿರುವುದರಿಂದ ಹೆಚ್ಚಾಗಿರುವುದರಿಂದ ಹೆಚ್ಚಾಗಿರುವ ಜೀವಕಣಗಳ ಬಗೆಯಂತೆ ವಿಂಗಡಿಸುವುದು. ವಾಡಿಕೆ. ಅಂದರೆ, ಇದು ಅಂಗಾಂಶದ ಮೇಲಿನ ವಿಂಗಡಣೆ ಎಂದಾಯಿತು. ಮೈಯಲ್ಲಿ ಮುಖ್ಯವಾಗಿ ಎರಡು ಬಗೆಯ ಅಂಗಾಂಶಗಳಿವೆ ಮೈಮೇಲೂ ನಾಳಗಳೊಳಗೂ ಗ್ರಂಥಿಗಳೊಳಗು ಇರುವ ಮೇಲು ಪೊರೆಯ (ಎಪಿತೀಲಿಯಲ್) ಅಂಗಾಂಶ ಒಂದು. ಮುಖ್ಯವಾಗಿ ಅಂಗಗಳಿಗೆ ಆಸರೆಯಾಗಿರುವ ಕೂಡಿಸುವ ಅಂಗಾಂಶ ಇನ್ನೊಂದು. ಆದ್ದರಿಂದ ಗಂತಿಗಳನ್ನು ಮೇಲುಪೊರೆಯವು, ಕೂಡಿಸುವ ಅಂಗಾಂಶದವು, ಇವೆರಡೂ ಬೆರೆತವು-ಹೀಗೆ 3 ವಿಭಾಗಗಳಾಗಿ ವಿಂಗಡಿಸಬಹುದು.

ವಿಷಮ ಗಂತಿಗಳು : ಸೂಕ್ಷ್ಮದರ್ಶದ ಬಳಕೆಗೆ ಬರುವ ಮುನ್ನ ರೋಗಿಯ ಕೊನೆಯ ಪಾಡು ಏನಾಯಿತೆನ್ನುವುದಕ್ಕೆ ತಕ್ಕಂತೆ ವೈದ್ಯರು ಗಂತಿಗಳನ್ನು ವಿಷಮ ಮತ್ತು ಮೆಲುಪಿನವು ಎಂಬುದಾಗಿ ವಿಂಗಡಿಸುತ್ತಿದ್ದರು. ಚಿಕೆತ್ಸೆ ದಕ್ಕದಿದ್ದಾಗ, ಎಳಸಿನಲ್ಲೇ ವಿಷಮಗಂತಿಗಳನ್ನು ಬುಡಮಟ್ಟ ತೆಗೆದುಹಾಕದಿದ್ದಲ್ಲಿ ಸಾಮಾನ್ಯವಾಗಿ ರೋಗಿ ಸಾಯುತ್ತಾನೆ.

ಏಕೆಂದರೆ ಗಂತಿಯಲ್ಲಿನ ವಿಷಮ ಜೀವಕಣಗಳು ಮೈಯಲ್ಲಿ ಎಲ್ಲೆಲ್ಲೋ ಕಾಳ್ಗಿಚ್ಚಂತೆ ಹರಡಿ ರೋಗಿಯನ್ನು ಸಾಯಿಸುತ್ತವೆ. ಹಾಲುರಸನಾಳಗಳು ಮತ್ತು ರಕ್ತನಾಳಗಳ ಮೂಲಕವಲ್ಲದೆ ಸಾಧಾರಣ ಸಾಗುನಾಳ ದಾರಿಗಳು ಮತ್ತು ಪೊಳ್ಳುಗಳ ಮೂಲಕವೂ ಈ ವಿಷಕಣಗಳು ಹರಡಬಹುದು.

ವಿಷಮಗಂತಿಗಳ ಇನ್ನೊಂದು ಹೆಗ್ಗುಣವೆಂದರೆ ಅವು ಹುಟ್ಟಿದಡೆಯಿಂದ ಎತ್ತೆತ್ತಲೋ ಹರಡಿ ಮೈಯಲ್ಲಿನ ಎಲ್ಲ ಅಂಗಾಂಶಗಳು, ಅಂಗಗಳಲ್ಲೂ ಗೂಳೆಯಗಳನ್ನು (ಮೆಟಸ್ಟೇಸಸ್) ಹೂಡಬಹುದು. ಹೀಗೆ ಹಬ್ಬಿದ ಗಂತಿಗಳಲ್ಲಿ ಒಂದೊಂದರ ಆಕಾರ ಗಾತ್ರಗಳು ಬೇರೆ ಬೇರೆಯಾಗಿರಬಹುದು. ಮೆಲುಪಿನ ಗಂತಿಯಲ್ಲಿ ಜೀವಕಣಗಳೆಲ್ಲ ಒಂದುಗೂಡಿ ಒಂದೇ ಮುದ್ದೆಗಟ್ಟಿರುವುದರಿಂದ ಅವನ್ನು ಶಸ್ತ್ರಕ್ರಿಯೆಯಿಂದ ಬುಡಮಟ್ಟ ತೆಗೆದುಹಾಕಬಹುದು ಆದರೆ ವಿಷಮಗಂತಿಯನ್ನು ಮಾತ್ರ ತೀರ ಎಳಸಾಗಿರುವಾಗ ಬುಡಮಟ್ಟ ತೆಗೆಯಬಹುದೇ ವಿನಾ ಬೆಳೆದು ಹರಡಿದ ಮೇಲೆ ಒಂದೇ ಶಸ್ತ್ರಕ್ರಿಯೆಯಿಂದ ನಿರ್ಮೂಲ ಮಾಡುವುದು ಕಷ್ಟ..

ಮೆಲುಪಿನ ಗಂತಿ ವಿಷಮಕ್ಕೆ ತಿರುಗುವುದೂ ಒಬ್ಬನಲ್ಲೇ. ಒಂದೇ ಹೊತ್ತಿನಲ್ಲಿ ಎರಡು ಬಗೆಯವೂ ಇರುವುದೂ ಬಲು ಅಪರೂಪವೇ.

ಮೆಲುಪಿನ ಗಂತಿಗಳು : ಸಾಮಾನ್ಯವಾಗಿ 4 ವರ್ಷದೊಳಗಿನ ಎಳೆಯರಲ್ಲಿ ಈ ಗಂತಿಗಳು ಎದ್ದು ಬಲು ನಿಧಾನವಾಗಿ ಬೆಳೆಯುತ್ತವೆ. ಇವುಗಳ ಜೀವಕಣಗಳು ಅರೋಗ್ಯವಂತರ ಅಂಗಾಂಶದಲ್ಲಿ ಇರುವವುಗಳ ಹಾಗೇ ಇರುತ್ತವೆ. ಸಾಮಾನ್ಯವಾಗಿ ಇವುಗಳಿಂದ ಏನೂ ಹಾನಿಯಾಗದು. ಯಾರನ್ನು ಇವು ಸಾಯಿಸವು. ಜೀವಕಣಗಳ ಬೆಳೆತ, ಜೋಡಣೆ ಅಡ್ಡಾದಿಡ್ಡಿಯಾಗಿದ್ದರೂ ಹುಟ್ಟಿದ ಜಾಗವನ್ನು ಬಿಟ್ಟು ಬೇರೆಲ್ಲೂ ಹೊರಡವು. ಒತ್ತೊತ್ತಾಗಿ ಬೆಳೆದು ದೊಡ್ಡವಾದ ಹಾಗೆಲ್ಲ ಅಕ್ಕಪಕ್ಕದ ಅಂಗಾಂಶಗಳನ್ನು ಒತ್ತರಿಸುವುವೇ ಹೊರತು ವಿಷಮಗಂತಿಗಳ ಹಾಗೆ ಒಳನುಗ್ಗವು.

ಎಷ್ಟೋ ಮೆಲುಪಿನ ಗಂತಿಗಳಿಗೆ ಕವಚವಿರುತ್ತದೆ. ಗಂತಿಯ ಸುತ್ತಲೂ ಇರುವ ರಚನೆUಟ್ಟುಗಳಿಂದ ಬರುವ ಕೂಡಿಸುವ ಅಂಗಾಂಶ ಕವಚವಾಗಿರುತ್ತದೆ. ಕವಚಗಂತಿಯ ಮೇರೆಯನ್ನು ತೋರುವುದೇ ಹೊರತು, ಅದರ ಮಿತಿಗಟ್ಟುವುದಿಲ್ಲ. ವಿಷಮ ಗಂತಿಗಳಲ್ಲಿ ಈ ತೆರನ ಕವಚಗಳಿಲ್ಲ. ಆದರೆ ವಿಷಮವಾದ ಮಾಂಸಗಂತಿಗಳಲ್ಲಿ ಕೆಲವಕ್ಕೆ ಮೊದಮೊದಲು ಹುಸಿಗವಚ ಇರುವುದು. ಕವಚವಿದ್ದರೆ ಗಂತಿಯನ್ನು ಅತ್ತಿತ್ತ ಆಡಿಸಬಹುದು. ಜರುಗಿಸಬಹುದು. ಚೆನ್ನಾಗಿ ಕವಚ ಮುಚ್ಚಿರುವ ಗಂತಿಗಳು ಸುತ್ತ ಮುತ್ತಣ ಅಂಗಾಂಶಗಳಿಗೆ ಅಂಟಿರವು. ಮೊಲೆಯಲ್ಲಿ ಏಳುವ ತಂತುಗ್ರಂಥಿ ಗಂತಿಯನ್ನು (ಫೈಬ್ರೊಅಡಿನೋಮ) ಪುಟಿಸಬಹುದು. ಮೂಳೆಗಳಲ್ಲಿ ಗಂತಿ ಎದ್ದಿದ್ದರೆ (ಎಲುಗಂತಿ), ಅದರ ಸುತ್ತ ಇರುವ ಸ್ನಾಯುಗಳನ್ನೂ ಕಂಡರಗಳನ್ನೂ ಅದರ ಮೇಲೆ ಸರಾಗವಾಗಿ ಅತ್ತಿಂದಿತ್ತ ಆಡಿಸಬಹುದು. ಹಲವಾರು ಮೆಲುಪಿನ ಗಂತಿಗಳು ಮೈಯಲ್ಲಿ ಬೇರೆ ಬೇರೆಯಾಗಿ ಒಂದೇ ಬಾರಿ ಇಲ್ಲವೇ ಒಂದಾದ ಮೇಲೊಂದಾಗಿ ಏಳಬಹುದು. ಆ ಗಂತಿಗಳೆಲ್ಲ ಒಂದೇ ತೆರನಾಗಿರುತ್ತವೆ.

ಕೂಡಿಸುವ ಅಂಗಾಂಶ ಮೂಲದವು : ಕೊಬ್ಬುಗಂತಿ (ಅಡೆನೋಮ) : ಅರೋಗ್ಯದ ಕೊಬ್ಬಿನ ಜೀವಕಣಗಳ ಹಾಗಿರುವ ಕೊಬ್ಬಿನ ಜೀವಕಣಗಳಿಂದೇಳುವ, ತೀರ ಸಾಮಾನ್ಯವಾದ ಗಂತಿಯಿದು. ಇದರೆ ಸುತ್ತ ತೆಳ್ಳನೆಯ ಕವಚ ಸುತ್ತವರಿದಿದ್ದು ಹಾಲೆಗಳಾಗೂ (ಲೋಬ್ಸ್) ವಿಂಗಡವಾಗಿರುತ್ತವೆ. ವಿಂಗಡಣೆ, ಗುರುತಿಸಬಹುದಾದ ಮಿತಿಗೆರೆ-ಇದರ ಹೆಗ್ಗುಣಗಳು. ಕೊಬ್ಬುಗಂತಿಗಳಲ್ಲಿ ಸಣ್ಣವು ಚಪ್ಪಟೆಯಾಗೂ ದೊಡ್ಡವು ಅರೆಗೋಳದ ಹಾಗೂ ಉಳಿದವು ತೊಂಗಿ ಬಿದ್ದೂ ಇರುತ್ತವೆ. ಎಳೆಯದರಲ್ಲಿ ಕೆಲವೇಳೆ ಬಿಗುವಾಗಿದ್ದರೂ ಬೆಳೆದ ಮೇಲೆ ಮೆತ್ತಗಿರುತ್ತವೆ ಇವು ನೋಯುವುದು ಬಲು ಅಪರೂಪ. ಹಾಗೇನಾದರೂ ನೋವು ಕಂಡರೆ ಇವುಗಳೊಳಗೆ ಸುಣ್ಣಗೂಡಿರಬೇಕು. ಮೈಕಾನಿನ ಮಟ್ಟದಲ್ಲಿ ಕೊಬ್ಬು ನೀರಂತಿರುವುದರಿಂದ ಮೈ ಮೇಲೆ ಕಾಣುವ ಕೊಬ್ಬು ಗಂತಿಗಳ ಮೂಲಕ ಜೋರಾದ ಬೆಳಕನ್ನು ಮಸಕಾಗಿ ಹಾಯಿಸಬಹುದು. ಮೈಯಲ್ಲಿ ಕೊಬ್ಬು ಇರುವೆಡೆಗಲ್ಲೆಲ್ಲ ಇದು ಏಳಬಹುದು. ಚರ್ಮದಡಿಯಲ್ಲಿ ಏಳುವುದೇ ತೀರ ಸಾಮಾನ್ಯ. ಇದು ಒಂಟಿಯಾಗಿ ಇರಬಹುದದಾರೂ ಹತ್ತಾರು ಒಟ್ಟಿಗೇ ಇರಲೂ ಬಹುದು. ಕಡಲೆಕಾಳಿನಿಂದ ಹಿಡಿದು ಕುಂಬಳ ಕಾಯಿ ಗಾತ್ರಕ್ಕೆ ಇದು ಬೆಳೆಯುವುದುಂಟು. ಯಾರಲ್ಲದರೂ ಏಳಬಹುದಾದರೂ ಎಳೆ ಮಕ್ಕಳಲ್ಲಿ ವಿರಳ. ಇವೆಂದಿಗೂ ವಿಷಮವಾಗವು.

ನೋಡಲು ವಿಕಾರವಾಗಿ ತೋರುವಾಗ, ಒಂದೆಡೆಯ ಕೆಲಸಕ್ಕೆ ಅಡ್ಡಿಯಾದಾಗ ಶಸ್ತ್ರಕ್ರಿಯೆಯಿಂದ ಕೊಯ್ತೆಗೆವುದೇ ಇದರ ಚಿಕಿತ್ಸೆ. ಕರುಳೂಳಗೋ ಬೆನ್ನುಗಂಬದಲ್ಲೋ ಇದ್ದು ಒತ್ತುತ್ತಿದ್ದರೆ ತೆಗೆದೆಸೆಯಬೇಕಾಗುತ್ತದೆ. ಬುಡಮುಟ್ಟ ಕಿತ್ತು ಹಾಕುವುದು ಸುಲಭ. ತೆಗೆದ ಮೇಲೆ ಎಂದಿಗೂ ಮರುಕಳಸದು.

ತಂತು ಗಂತಿ (ಫೈಬ್ರೋಮ) : ದಪ್ಪನೆಯ ಗಟ್ಟಿ ಕವಚವಿರುವ ಬಿಳಿಯ ತಂತು ಅಂಗಾಂಶದ ಅಪರೂಪ ಗಂತಿಯದು. ಮುಖ್ಯವಾಗಿ ಒಸಡು, ಮೂಗಂಟಲ್ಕುಳಿ (ನೇಸೂಫ್ಯಾರಂಕ್ಸ್), ಮಣಿಕಟ್ಟಿನ ಹಿಂಭಾಗ, ಕಂಡರಚೀಲ, ಮೊಲೆ, ಅಂಡಾಶಯ, ವೃಷಣಗಳಂಥ ಕೆಲವು ಗ್ರಂಥಿಗಳು ಮತ್ತು ನರಗಳಲ್ಲಿ ಈ ಗಂತಿ ಕಾಣಿಸಿಕೊಳ್ಳುತ್ತದೆ. ನರಗಳಲ್ಲಿ ಏಳುವುವು ಸಾಮಾನ್ಯ. ನರಕವಚದಲ್ಲಿ ಏಳುವುದರಿಂದ ನರದ ನಿಜಕೆಲಸಕ್ಕೆ ಹಾನಿಯಿಲ್ಲ. ಚರ್ಮದಡಿಯಲ್ಲಿರುವ ನರಗಳ ಸಂಬಂಧವಾಗಿ ನೂರಾರು ಸಾವಿರಾರು ಸಣ್ಣಸಣ್ಣ ತಂತುಗಂತಿಗಳೆದ್ದು, ಧರ್ಮ ಅಲ್ಲಲ್ಲಿ ಬಣ್ಣಗಟ್ಟಿರುವುದಕ್ಕೆ ಫಾನ್ ರೆಕ್ಲಿಂಗ್‍ಹಾಸೆನ್ನನ ರೋಗ ಎಂದಿದೆ. ಈ ರೋಗ ಹಲವು ತಲೆಮಾರುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಲೋಳೆಗಂತಿಯಾಗಿ (ಮಿಕ್ಸೋಮ) ಹಾಳಾಗುವುದೂ ಮಾಂಸಗಂತಿಯಾಗಿ ಮಿಷಮಕ್ಕೆ ತಿರುಗುವುದೂ ತಂತುಗಂತಿಗಳ ತೊಡಕುಗಳು. ಒಂಟಿಯಾಗಿ ದೊಡ್ಡವಾಗಿದ್ದವನ್ನು ಕೊಯ್ತೆಗೆಯಬೇಕು. ಸಣ್ಣ ಸಣ್ಣವು ನೂರಾರಾಗಿದ್ದರೆ ಸರಿಯಾದ ಚಿಕೆತ್ಸೆಯಿಲ್ಲ.

ನಾಳ ಗಂತಿ (ಅಂಜಿಯೋಮ) : ನಾಳಗಳೇ ಹೆಚ್ಚಾಗಿರುವ ಈ ಗಂತಿಯಲ್ಲಿ ಎರಡು ಬಗೆಗಳಿವೆ : ರಕ್ತನಾಳಗಂತಿ (ಹೀಮಾಂಜಿಯೋಮ), ಹಾಲುರಸನಾಳಗಂತಿ (ಲಿಂಫಾಂಜಿಯೋಮ). ರಕ್ತನಾಳಗಂತಿಯಲ್ಲೂ ಯಾವ ತೆರನ ರಕ್ತನಾಳದಿಂದ ಹುಟ್ಟಿದ ಎನ್ನುವುದಕ್ಕೆ ತಕ್ಕಂತೆ ಮೂರು ಬಗೆಗಳಿವೆ : ಲೋಮನಾಳದ್ದು (ಕೆಪಿಲರಿ). ಗೂಡಾಗೂಡಾದ್ದು (ಕೆವರ್ನಸ್), ಹೆಣೆಲುರೂಪಿ (ಪ್ಲೆಕ್ಸಿಫಾರಂ).

ಹುಟ್ಟುಮಚ್ಚೆಯ ಬಲು ಸಾಧಾರಣವಾದ ರೂಪವೇ ಲೋಮನಾಳದ ರಕ್ತನಾಳ ಗಂತಿ. ಇದರಲ್ಲಿ ಲೋಮನಾಳಗಳೂ ರಕ್ತವೂ ಕೆಂಪಗೆ ಒರಟೊರಟಾಗಿ ನೋವಿಲ್ಲದ. ಎತ್ತರಿಸಿದ, ಹಲವೇಳೆ ಮೇರಿಯಿಲ್ಲದ ಮಚ್ಚೆಯಾಗಿರುವುದು. ಗಂತಿಯೊಳಗಿನ ರಕ್ತವನ್ನು ಬೆರಳಿಂದೊತ್ತಿ ಬಿಳಿಸಬಹುದು. ಈ ಗಂತಿಗೆ ಕವಚವಿಲ್ಲ. ಹುಟ್ಟಿದ ಕೆಲಕಾಲದಲ್ಲೇ ಒಂದೋ ಹಲವಾರೋ ಎದ್ದು ತಿಂಗಳುಗಳಲ್ಲಿ ಹೆಚ್ಚುತ್ತಹೋಗುತ್ತವೆ. ಇವುಗಳಲ್ಲಿ ಎಷ್ಟೋ ಅವಕ್ಕವೇ ಕರಗಿಹೋಗುವುವು. ಇವಕ್ಕೆ ಗಾಯವಾದರೆ ಪೆಟ್ಟಾದರೆ ರಕ್ತಸುರಿದರೆ, ಎಕ್ಸ್‍ಕಿರಣಗಳು ಮತ್ತು ರೇಡಿಯಮುಗಳಿಂದ ಚಿಕೆತ್ಸೆ ಆಗಬೇಕು. ಒಂದು ಬಾರಿ ಕಿತ್ತೊಗೆದರೆ ಈ ಗಂತಿ ಮರುಕಳಿಸದು.

ಗೂಡುಗೂಡಾದ ರಕ್ತನಾಳಗಂತಿಯ ತುಂಬ ಸಿರದ (ವೀನಸ್) ರಕ್ತನಾಳಗಳಿರುತ್ತವೆ. ಚರ್ಮದ ಮೇಲೆ ಕಂಡಾಗ ಅದು ಮೆತುವಾದ, ನೋವಿಲ್ಲದ, ನೀಲಿ ಬಣ್ಣದ, ಹುಳು ತುಂಬಿರುವಂತೆ ತೋರುವ, ಒತ್ತಿದರೆ ಬರಿದಾಗಿ, ಕೆಳಕ್ಕೆ ಇಳಿಬಿಟ್ಟರೆ ಮತ್ತೆ ತುಂಬುವಂತಿರುವುದು. ಮುಂಡದ ಮೇಲೆ ಎದ್ದಿದ್ದರೆ ಕೆಮ್ಮಿದಾಗ ಉಬ್ಬುತ್ತದೆ. ಚರ್ಮದಡಿಯಲ್ಲಿ, ಸ್ನಾಯುಗಳಲ್ಲಿ, ಒಳಾಂಗಗಳಲ್ಲಿ, ಮೂಳೆಗಳಲ್ಲೂ ಒಂಟಿಯಾಗಿ ಏಳುತ್ತದೆ. ಮೂಳೆಯಲ್ಲಿ ಎದ್ದಾಗ, ಮೂಳೆ ಸೆವೆದು ಹೋಗಿ ಬಾಗಬಹುದು. ಇಲ್ಲವೇ ಸಣ್ಣ ಪೆಟ್ಟಿಯಿಂದಲೇ ಮುರಿಯಬಹುದು. ಆಗುವುದಾರೆ ಕೊಯ್ತೆಗೆಯಬೇಕು, ಇಲ್ಲವಾದರೆ ಬೆನ್ನುಗಂಬದಲ್ಲಿ ಎದ್ದಿರುವಾಗಿನಂತೆ ವಿಕಿರಣ ಚಿಕೆತ್ಸೆಗೊಡಬೇಕು.

ಧಮನಿ (ಆರ್ಟರಿ) ರಕ್ತನಾಳಗಳು ಕಂತೆಗಟ್ಟಿರುವುದು ಹೆಣೆಲುರೂಪಿ ರಕ್ತನಾಳಗಳ ಗಂತಿ ಕೆಲವೇಳೆ ದೊಡ್ಡ ಸಿರಗಳೂ ಇದರಲ್ಲಿರಬಹುದು. ಕಪೋಲದಲ್ಲಿ ಏಳುವುದೇ ತೀರ ಸಾಮಾನ್ಯ, ಅಲ್ಲಿ ಧರ್ಮವನ್ನೂ ಮೂಳೆಯನ್ನೂ ಸವೆಸಬಹುದು. ಹುಷಾರಾಗಿ ಪೂರ್ತಿಕೊಯ್ತಗೆಯುವುದೇ ಚಿಕಿತ್ಸೆ.

ಹಾಲುರಸನಾಳಗಂತಿಗಳು ಅಪರೂಪದವು. ರಕ್ತನಾಳಗಂತಿಗಳಲ್ಲಿ ಇದ್ದ ಹಾಗೆ ಇವಲ್ಲೂ ಮೂರು ಬಗೆಗಳಿವೆ. ಮುಖ್ಯವಾಗಿ ತುಟಿ, ನಾಲಗೆ ತುದಿಗಳೆಲ್ಲೇಳುವ ಸಾಸಿವೆಕಾಳಿನ ಗಾತ್ರದ ಪುಟಾಣಿ ಮುತ್ತಿನಂಥ ಕಿರುಕೋಶಗಳು ಲೋಮನಾಳದ ಹಾಲುರಸನಾಳಗಂತಿಯಲ್ಲಿ ತುಂಬಿರುತ್ತವೆ. ತೇವಗಂತಿ (ಸಿಸ್ಟಿಕ ಹೈಗ್ರೋಮ) ಎಂದೂ ಹೆಸರಿರುವ, ಗೂಡುಗೂಡಾದ ಬಗೆಯದರಲ್ಲಿ ದೊಡ್ಡ, ತೆಳುಗೋಡೆಯ ಬೆಳಕು ಹಾಯಿಬಿಡುವ ಹಾಲುರಸದ ಜಿಟ್ಟಿಗಳಿರುತ್ತವೆ. ಕೊರಳಲ್ಲಿ ಇವು ಸಾಮಾನ್ಯ. ಸೊಟ್ಟಾಪಟ್ಟೆ ಹಿಗ್ಗಿದ ಹಾಲುರಸನಾಳಗಳಿರುವ ಹೆಣೆಲುರೂಪಿ ಹಾಲುರಸನಾಳಗಂತಿಗಳೂ ತುಟಿ, ನಾಲಗೆಗಳಲ್ಲಿ ಏಳುತ್ತವೆ. ಹಾಲುರಸನಾಳಗಂತಿಗಳನ್ನು ಕೊಯ್ತೆಗೆಯಬೇಕು ಇಲ್ಲವೇ ವಿಕಿರಣಕ್ಕೊಡ್ಡಬೇಕು. ಇವಾದಕ್ಕೂ ಕವಚಗಳಿಲ್ಲ.

ಮಲ್ಲೆಲುಗಂತಿ (ಕಾಂಡ್ರೋಮ) : ಪಿಂಡದಲ್ಲಿ ಮೂಳೆ ವಿಕಸಿಸುವ ಗಾಜಂದ (ಹಯಲೀನ್) ಮೆಲ್ಲೆಲುಬಿನ ಗಂತಿಯಿದು. ಕೇವಲ ಮೂಳೆಗಳಲ್ಲೇ ಏಳುವುದಾದರೂ ಈ ಗಂತಿ ಮೆತ್ತನೆಯ ಬೇರೆಡೆಗಳಲ್ಲೂ ಏಳಬಹುದು. ಇದಕ್ಕೆ ದಪ್ಪನೆಯ ಕವಚವಿದ್ದು ಹಾಲೆಗಳಾಗಿರುತ್ತ ತೊಳೆಗಳ ಹಾಗಿರುವುದು. ಕಂಕಾಲದ (ಸ್ಕೇಲಿಟಲ್) ಚಪ್ಪಟೆ ಮೂಳೆಗಳ ಮೇಲೆ ಹೊರಚಾಚಿ ಒಂಟಿಯಾಗಿ ಬೆಳೆವುದು ಹೊರ ಮೆಲ್ಲೆಲು ಗಂತಿ (ಎಕ್ಕಾಂಡ್ರೋಮ). ಅಕ್ಕಪಕ್ಕದ ರಚನೆಗುಟ್ಟುಗಳನ್ನು ದೂರ ತಳ್ಳಿ ಸುಮಾರು ತೆಂಗಿನಕಾಯಿ ಗಾತ್ರಕ್ಕೆ ಬೆಳೆಯುತ್ತದೆ. ಸಾಮಾನ್ಯವಾಗಿ ಬೆರಳು, ಬೆಟ್ಟುಗಳಂಥ ಸಣ್ಣ ಉದ್ದನೆಯ ಮೂಳೆಗಳ ಒಳಗಡೆ ಬೆಳೆವವು ಒಳಮೆಲ್ಲೆಲುಗಂತಿಗಳು (ಎನ್ ಕಾಂಡ್ರೋಮ). ಇವು ಹಲವಾರು ಒಟ್ಟಿಗಿದ್ದು ಮೈಯ ಎರಡು ಪಕ್ಕಗಳಲ್ಲೂ ಇರುತ್ತವೆ. ಬೆಳೆದಂತೆಲ್ಲ ಮೂಳೆಯ ಗೋಡೆಗಳನ್ನು ತೆಳುಸಿಪ್ಪೆಯಾಗಿಸಿ ಸಾಕಷ್ಟು ವಿಕಾರಗೊಳಿಸುತ್ತವೆ. ಮೂಳೆ ಸೀಳಿಕೊಂಡು ಹೊರಗೂ ತಲೆಹಾಕಬಹುದು. ಮೆಲ್ಲೆಲುಗಂತಿಗಳೆಲ್ಲ ನೋವಿಲ್ಲದವು. ಆದರೆ ಲೋಳೆಗಂತಿಯಾಗೋ ವಿಷಮ ಮಾಂಸಗಂತಿಯಾಗೋ ಬದಲಾಗುವ ಅಪಾಯವಿದೆ. ಇವನ್ನು ಶಸ್ತ್ರಕ್ರಿಯೆಯಿಂದ ತೆಗೆವುದೊಂದೇ ಚಿಕಿತ್ಸೆ.

ಎಲುಗಂತಿ (ಆಸ್ಟಿಯೋಮ) : ಬರೀ ಮೂಳೆಯಿಂದೇಳುವ ಗಂತಿಯಿದು. ಸ್ಪಂಜಾಲರಿನದು (ಕ್ಯಾನ್ಸೆಲಸ್), ಒತ್ತಾದದ್ದು (ಕಾಂಪ್ಯಾಕ್ಟ್) ಎಂಬ ಎರಡು ಬಗೆಗಳಿವೆ. ಸ್ಪಂಜಾಲರಿನದರಲ್ಲಿ ಉದ್ದ ಮೂಳೆಯ ಇಡೀ ತಾಳಿನ ಸ್ಪಂಜಿನಂಥ ಕುಸುರಿನೊಂದಿಗೆ ಗಡಸಾದ ಒತ್ತೊತ್ತಾಗಿರುವ ಮೂಳೆಯ ರಗಟೆಯೂ (ಕಾರ್ಟೆಕ್ಸ್) ಇರುತ್ತದೆ. ಹೊರನೋಟಕ್ಕೆ ಒಂದು ಕಡೆ ಮೂಳೆ ಬುಡ್ಡೆಯಾಗಿ ಹೊರಕ್ಕೆ ಚಾಚಿಕೊಂಡ ಹಾಗಿರುತ್ತದೆ. ಕಂಕಾಲಕ್ಕೆ ಬಲವಾಗಿ ಹತ್ತಿರುವ ಗಟ್ಟೆಗಡ್ಡೆಗಳಾಗಿದ್ದು ಅವುಗಳ ಮೇಲ್ಗಡೆಯಿರುವ ರಚನೆಗಟ್ಟುಗಳನ್ನು ದೂರ ತಳ್ಳಿರುವುದು. ಎಷ್ಟೋ ವೇಳೆ ಇದರ ತುದಿಯಲ್ಲಿ ಮೇಲೆದ್ದಿರುವ ದಿಂಚೀಲದಲ್ಲಿ (ಬರ್ಸ) ಆಗಾಗ್ಗೆ ಉರಿತವಾಗಿ ನೋವು ಕೊಡುತ್ತದೆ. ಮೂಳೆಬೆಳೆವ ವಯಸ್ಸಲ್ಲಿ ಮಾತ್ರ ಈ ಗಂತಿಗಳು ತೋರುವುದರಿಂದ ಮೂಳೆ ವಿಕಾಸ ಕೆಟ್ಟು ಹೀಗಾಗಬಹುದು. ತಾಯಿ ಮೂಳೆಯ ಬೆಳವಣಿಗೆ ನಿಂತು ಹೋದ ಮೇಲೆ ಈ ಗಂತಿ ಬೆಳೆತವೂ ನಿಲ್ಲುವುದು. ಹಲವಾರು ಒಂಟೊಂಟೆಯಾಗಿ ಏಳಬಹುದು. ಇವನ್ನು ಶಸ್ತ್ರಚಿಕಿತ್ಸೆಯಿಂದ ಕೊಯ್ತೆಗೆವುದೇ ಚಿಕಿತ್ಸೆ.

ಮೂಳೆಯ ಗಡಸು ಭಾಗವಾದ ರಗಟೆಯಿಂದ ಮಾತ್ರ ಒತ್ತೊತ್ತಾದ ಎಲುಗಂತಿ ವಿಕಾಸವಾಗುತ್ತದೆ. ಇದು ಯಾವಾಗಲೂ ಒಂಟಿಯಾಗಿ ಬೆಳೆವುದು. ಇದರಷ್ಟು ಗಡಸಾದ ಗಂತಿ ಮೈಯಲ್ಲಿಲ ಮತ್ತಲ್ಲೂ ಬೆಳೆಯದು. ಮುಖ್ಯವಾಗಿ ತಲೆಚಿಪ್ಪು, ದವಡೆ ಮೂಳೆಗಳಂಥ ಚಪ್ಪಟೆ ಮೂಳೆಗಳ ಮೇಲೆ ಏಳುತ್ತದೆ. ತಲೆಚಿಪ್ಪಿನ ಒಳಗೋ ಹೊರಗೋ ಇಬ್ಬದಿಗಳಲ್ಲೋ ಯಾವ ವಯಸ್ಸಲ್ಲಾದರೂ ಏಳಬಹುದು. ತಲೆ ಬುರುಡೆಯೊಳಗೆ ಎದ್ದರೆ ಮಿದುಳನ್ನು ಒತ್ತರಿಸುತ್ತದೆ. ತಲೆಚಿಪ್ಪಿನ ಹೊರಗೆ ಎದ್ದ ಎಲುಗಂತಿ ಗಡುಸಾಗಿದ್ದು ಅದರ ಮೇಲೆ ನೆತ್ತಿ ಧರ್ಮ ಸರಾಗವಾಗಿ ಆಡುವಂತಿರುವುದು. ಗಂತಿ ಎದ್ದಿರುವ ಇಡೀ ಮೂಳೆ ಭಾಗದೊಂದಿಗೇ ಅದನ್ನು ತೆಗೆದುಹಾಕುವುದೇ ಚಿಕೆತ್ಸೆ.

ಅಪರೂಪದ ಲೋಳೆಗಂತಿಯ ತುಂಬ (ಜಿಲ್ಲೆ) ತೆರನ ಕೂಡಿಸುವ ಅಂಗಾಂಶವಿರುತ್ತದೆ.

ನರಜೀವಕಣಗಳೂ ನರತಂತೂ ಕೂಡಿರುವ ನರಗಂತಿಯೂ (ನೊರೋಮ) ಅಷ್ಟೇ ಅಪರೂಪ.

ಕೇವಲ ಸ್ನಾಯುಗಳೇ ಇರುವ ಸ್ನಾಯುಗಂತಿಯೂ (ಮಯೋಮ) ಬಲು ಅಪರೂಪ. ನಯ ಸ್ನಾಯುಗಳಿಂದ ಕೂಡಿದ್ದು ನಯಸ್ನಾಯುಗಂತಿ (ಲಿಯೋಮಯೋಮ) ; ಪಟ್ಟೆ ಸ್ನಾಯುಗಳಿಂದ ತುಂಬಿದ್ದು ಪಟ್ಟೆಸ್ನಾಯುಗಂತಿ (ರ್ಯಾಬ್ಡೊಮಯೋಮ).

ತಂತುಸ್ನಾಯುಗಂತಿ (ಫೈಬ್ರೊಮಯೋಮ) ಕೂಡಿಸುವ ಅಂಗಾಂಶಗಳಾದ ತಂತುಗಳೂ ಸ್ನಾಯುಗಳೂ ಇರುವ ಗಂತಿ ಇದು. ಅಚ್ಚು ತಂತುಗಂತಿ, ಸ್ನಾಯುಗಂತಿಗಳಿಗಿಂತ ಇದೇ ಹೆಚ್ಚು ಸಾಮಾನ್ಯ. ಗರ್ಭಕೋಶದಲ್ಲಿ ಏಳುವ ಗಂತಿಗಳಲ್ಲೆಲ್ಲ ಇದು ಬಲು ಹೆಚ್ಚಿನದು. ಸಾಧಾರಣವಾಗಿ ಇದನ್ನು ನಾರುಗಂತಿ (ಫ್ರೈಬ್ರಾಯ್ಡ್) ಎನ್ನುವುದುಂಟು. ಹೆಣ್ಣು ಮೈನರೆವ ವಯಸ್ಸು ದಾಟಿದ ಮೇಲೆ ಮಾತ್ರ ಏಳುವುದು. ಗರ್ಭಕೋಶದಲ್ಲಿ ಇವು ಹೊರಚಾಚಿಕೊಂಡೋ ಒಳಚಾಚಿಕೊಂಡು ಕೆಲವೇಳೆ ರಕ್ತಸುರಿಸುತ್ತಲೋ ಇರಬಹುದು. ಇಲ್ಲವೇ ಇಡೀ ಗರ್ಭಕೋಶವನ್ನೇ ಹಿರಿಹಿಗ್ಗಿಸಬಹುದು. ಈ ಗಂತಿಗಳು ಆಗಾಧ ಬೆಳೆಯಬಲ್ಲವು ಗಂತಿ ಸರಳ ಅನುವಳಿಕೆಗಳಿಂದ ಕೆಟ್ಟು ಹಾಳಾಗಬಹುದು. ಇಲ್ಲವೇ ವಿಷಮಗಂತಿಯಾಗಿ ಮಾರ್ಪಡಬಹುದು. ಅಂದರೆ ಏಡಿಗಂತಿಯಾಗಬಹುದು. ಶಸ್ತ್ರಕ್ರಿಯೆ ಒಂದೇ ಇದರ ನಿರ್ಮೂಲನ ಚಿಕಿತ್ಸೆ. ಗರ್ಭಕೋಶದಲ್ಲಿ ಅಲ್ಲಲ್ಲಿ ಹಲವಾರು ಇದ್ದರೆ ಇಡೀ ಗರ್ಭಕೋಶವನ್ನೇ ತೆಗೆದುಹಾಕಬೇಕಾಗಬಹುದು.

ಎಲುಮೆಲ್ಲೆಲುಗಂತಿ (ಆಸ್ಟಿಯೊಕಾಂಡ್ರೋಮ) : ಎಲುಗಂತಿ, ಮೆಲ್ಲೆಲುಗಂತಿಗಳು ಕೂಡಿ ಆಗಿರುವ ಗಂತಿ. ಆದರೂ ಮೆಲ್ಲೆಲುಗಂತಿಗಳ ಹಾಗೇ ಇದ್ದು ಇವು ಏಳುವ ಜಾಗಗಳಲ್ಲೇ ಏಳುತ್ತವೆ ಶಸ್ತ್ರಕ್ರಿಯೆಯಿಂದ ಕೊಯ್ತೆಗೆವುದೇ ಚಿಕಿತ್ಸೆ.

ರಕ್ತನಾಳಗೊಂಡಗಂತಿ (ಗ್ಲೋಮಸ್‍ಟ್ಯೂಮರ್): ಸಾಮಾನ್ಯವಾಗಿ ಬೆರಳುಗಳ ಮೇಲೇಳುವ ಈ ವಿಚಿತ್ರಗಂತಿಯ ತುಂಬ ರಕ್ತನಾಳಗಳು, ನರಕಣಗಳು ನರತಂತುಗಳು, ಮೇಲುಪೊರೆತೆರನ ಜೀವಕಣಗಳೂ ಇರುತ್ತವೆ. ಚರ್ಮದಡಿಯಲ್ಲೋ ಉಗುರ, ಕಣ್ಣಲ್ಲೋ ವಿಪರೀತ ನೋವಿಡುವ ಕೆಂಪು ಮಚ್ಚೆಯಾಗಿ ಕಾಣುತ್ತವೆ. ಗೋದಿಕಾಳುಗಾತ್ತ ಮೀರದ ಈ ಮಚ್ಚೆ ಮೊದಲು ಗೊತ್ತಾಗವುದು. ಬೆರಳಾಡಿಸಿದರೆ ಏಳುವ ಇದರ ಉರಿ, ಚಳುಕುಗಳಿಂದ. ಶಸ್ತ್ರಕ್ರಿಯೆಯಿಂದ ಕೊಯ್ತೆಗೆವುದು ಇದರ ಚಿಕಿತ್ಸೆ.

ಮೇಲುಪೊರೆ ಅಂಗಾಂಶ ಮೂಲದವು ಹೀಗೆವೆ : ಚೂಚಕಗಂತಿ (ಪೆಪಿಲೋಮ) : ಮೇಲ್ಮೈ ಮೇಲುಪೊರೆಯಿಂದ ಹೊಸದಾಗೇಳುವ ಗಂತಿಯಿದು. ಯಾವ ತೆರನ ಮೇಲುಪೊರೆಯಿಂದ ಹುಟ್ಟಿದ ಎನ್ನುವುದಕ್ಕೆ ತಕ್ಕಂತೆ ಇದರ 3 ಬಗೆಗಳಿವೆ. ಪದರಗಟ್ಟಿದ ಹೊದಿಕೆಯ ಮೇಲುಪೊರೆಯಿಂದ ಹೂರಿಕೆಯ ಚೂಚಗಂತಿ ಚರ್ಮದಲ್ಲಿ ಏಳುತ್ತದೆ. ನಾಲಗೆ, ಬಾಯಿ, ದನಿತಂತುಗಳ ಮೇಲೂ ಬೆಳೆವುದುಂಟು. ಚೆನ್ನಾಗಿ ಬೆಳೆದುದಕ್ಕೆ ನರೂಲಿ ಎಂದಿದೆ. ಕೆಲವೇಳೆ ಒಟ್ಟಗೇ ಹಲವಾರು ಬೆಳೆಯುತ್ತವೆ. ಶಸ್ತ್ರಕ್ರಿಯೆ ಇಲ್ಲವೇ ವಿಕಿರಣಗಳಿಗೊಡ್ಡುವುದು ಚಿಕಿತ್ಸೆ,

ನಡುತರದ (ಟ್ರಾನ್ಸಿಷನಲ್) ಚೂಚುಕಂತಿಗಳು ಮೂತ್ರಪಿಂಡ, ಮೂತ್ರಕನಾಳ, ಕಂಕೋಶಗಳಲ್ಲಿ ಮಾತ್ರ ಏಳುವುವು. ಇವುಗಳ ತುಂಬ ರಕ್ತನಾಳಗಳು ಹರಡಿದ್ದು ಸುತ್ತಲೂ ಮೇಲುಪೊರೆಯ ನಾಜೂಕಿನ ಪದರವಿರುವುದರಿಂದ ಸುಲಭವಾಗಿ ರಕ್ತ ಸುರಿಸುತ್ತವೆ. ನೋವೇ ಇರದೆ ಉಚ್ಚೆಯಲ್ಲಿ ರಕ್ತ ಹೊರಬೀಳುವುದೇ ಮೊದಲ ಕುರುಹಾಗಿರಬಹುದು. ಅಲ್ಲದೆ ಉಚ್ಚೆ ಬರದಂತಾಗಿ ಸೊಂಕು ಹತ್ತಬಹುದು. ನಡಂತರದ ಚೂಚುಕಗಂತಿಗಳೆಲ್ಲ ಎಂದಿದ್ದರೂ ವಿಷಮವಾಗುವವೇ. ಆದ್ದರಿಂದ, ಇವಿರುವುದು ಗೊತ್ತಾದ ಕೂಡಲೇ ಕಿತ್ತೊಗೆಯುವುದೇ ಲೇಸು. ಕಂಕೋಶದಲ್ಲಿ ಎದ್ದಿದ್ದರೆ, ಬರೆಗುಳದಿಂದ (ಕಾಟರಿ) ಸುಟ್ಟುಹಾಕಬಹುದು.

ಕಂಬಾಕಾರಿ (ಕಲಮ್ನಾರು) ಜೀವಕಣ ಚೂಚಗಂತಿಗಳು ಕರುಳು, ಮೊಲೆಯ ದೊಡ್ಡ ಸಾಗುನಾಳ ಮತ್ತು ಕೆಲವು ಜಿಟ್ಟಿಗಳ ಗೋಡೆಗಳಲ್ಲಿ ಹುಟ್ಟಿ ಅವುಗಳೊಳಕ್ಕೆ ತೊಂಗಿ ಬೀಳುತ್ತವೆ. ಬಲು ಸುಲಭವಾಗಿವು ರಕ್ತ ಸುರಿಸುತ್ತವೆ. ಇವೆಲ್ಲ ವಿಷಮವಾಗಬಲ್ಲವು ಆದ್ದರಿಂದ ಗೊತ್ತಾದ ಕೂಡಲೇ ಇವನ್ನು ಶಸ್ತ್ರಕ್ರಿಯೆಯಿಂದ ಕಿತ್ತೊಗೆಯಬೇಕು.

ಗ್ರಂಥಿಗಂತಿ (ಆಡೆನೋಮ) : ಗ್ರಂಥಿಗಳ ಜೀವಕಣಗಳು ಕಿರುನಾಳಗಳು ಇವಿಂದೇಳುವ, ವಿರಳವಾಗಿ ತಲೆದೋರುವ ಗ್ರಂಥಿ, ಅನ್ನದ ಸಾಗುನಾಳ, ಲೋಳೆ ಮತ್ತು ಚರ್ಮದ ಗ್ರಂಥಿಗಳು, ಅಂತಃಸ್ರಾವೀ ಗ್ರಂಥಿಗಳಲ್ಲಿ ಹುಟ್ಟುತ್ತವೆ. ಸುತ್ತಲೂ ಕವಚವಿರುವ, ದುಂಡಗಿರುವ, ನೋವಿಲ್ಲದ ಸಣ್ಣ ಗಡ್ಡೆಯಿದು. ಗುರಾಣಿಕ, ಉಪಗುರಾಣಿಕ, ತೆಮಡಿಕ, ಮಾಂಸಲಿಗಳ ತೆರನ ಗ್ರಂಥಿಗಳಲ್ಲಿ ಇದು ಎದ್ದರೆ ಆಯಾ ಗ್ರಂಥಿಗಳ ರಸಸುರಿತ ವಿಪರೀತ ಹೆಚ್ಚಿ ಬೇನೆಗಳಾಗುವುವು. ಬೇರೆಡೆಗಳಲ್ಲಿ ಇವು ರಕ್ತಸುರಿಸಬಲ್ಲವು. ಕರುಳಲ್ಲಿ ಎದ್ದಿದ್ದರೆ ಆತಂಕ ಒಡ್ಡಬಹುದು.

ಒಳನಾಟದ ಇಡುಜಿಟ್ಟ (ಇಂಪ್ಲಾಂಟೇಷನ್ ಡರ್ಮಾಯ್ಡ್) : ಸಾಧಾರಣವಾಗಿ ಬೆರಳು, ಅಂಗೈಗಳಲ್ಲಿ ಏಳುವ ಇದು ಜಿಟ್ಟ ರೂಪದಲ್ಲಿದ್ದು , ಪಿಂಡ ವಿಕಾಸದಲ್ಲಿ ಚರ್ಮದ ಒಂದು ಸಣ್ಣ ಚೂರು, ಚರ್ಮದಲ್ಲಿ ಆಳವಾಗಿ ನಾಟಿದ್ದರಿಂದ ಇದು ಏಳುವುದೆಂಬ ನಂಬುಗೆ ಇದೆ. ಇದರ ತುಂಬ ಮೇಲುಪೊರೆಯ ಒಡೆಗೆಲಸು (ಡೆಬ್ರಿ) ಇರುತ್ತದೆ. ಗಜ್ಜುಗದ ಗಾತ್ರ ಮೀರದೆ, ನೋವಿಲ್ಲದೆ, ವಿಷಮವಾಗದೆ ಬೆಳೆದಿರುತ್ತದೆ. ಕೊಯ್ದು ತೆಗೆದು ಹಾಕುವುದೇ ಸರಿಯಾದ ಚಿಕಿತ್ಸೆ :

ಹಲವು ಅಂಗಾಂಶಗಳ ಮೂಲದವು ಹೀಗಿವೆ :

ಹಲ್ಲುಗಂತಿ (ಓಡೊಂಟೋಮ) : ಹಲ್ಲಿನ ಭಾಗಗಳಿಂದ ಏಳುವ ಈ ಗಂತಿ ದವಡೆಗಳಲ್ಲಿ ಮಾತ್ರ ಹುಟ್ಟುವುದು. ಮೇಲುಪೊರೆಯ ಅಲ್ಲದೆ ಕೂಡಿಸುವ ಅಂಗಾಂಶಗಳೆರಡರಿಂದಲೂ ಹಲ್ಲುಗಳು ಹುಟ್ಟುವುದರಿಂದ ಹಲತೆರನ ಹಲ್ಲುಗಂತಿಗಳು ಏಳಬಹುದಾದರೂ ರೋಗಿಗಳಲ್ಲಿ ಮೇಲುಪೊರೆ ಮೂಲದವೇ ಸಾಮಾನ್ಯ. ಹಲ್ಲು ಬೆಳೆತದ ಯಾವ ಹಂತದಲ್ಲಾದರೂ ಗಂತಿ ವಿಕಾಸವಾಗಬಹುದು. ಆದ್ದರಿಂದ, ಮುಖ್ಯವಾಗಿ 3 ಬಗೆಯ ಹಲ್ಲುಗಂತಿಗಳನ್ನು ಗುರುತಿಸಬಹುದು : ದವಡೆಯ ತಂತುಜಿಟ್ಟಿಯ (ಫೈಬ್ರೊಸಿಸ್ಟಿಕ್) ರೋಗ, ಹಲ್ಲುಗೂಡಿದ (ಡೆಂಟಿಜರಸ್) ಜಿಟ್ಟೆ, ಹಲ್ಲಿನ (ಡೆಂಟಲ್) ಜಿಟ್ಟೆ, ಇವು ಎದ್ದಿರುವಾಗ ದವಡೆ ಮೂಳೆ ಬಾತುಕೊಂಡು ನೋಯುತ್ತದೆ. ಇವನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಬಹುದು.

ತಂತುಗ್ರಂಥಿಗಂತಿ (ಫೈಬ್ರೊಅಡನೋಮ) : ಬರಿಯ ತಂತುಗಂತಿ, ಗ್ರಂಥಿಗಂತಿಗಳಿಗಿಂತಲೂ ಈ ಬೆರಕೆಗಂತಿಯೇ ಸಾಮಾನ್ಯ, ಇದರಲ್ಲಿ ಬಿಳಿಯ ತಂತು ಅಂಗಾಂಶವೂ ಒಂದು ರಸಸುರಿಕ ಗ್ರಂಥಿಯ ಮೇಲುಪೊರೆಯ ಜೀವಕಣಗಳೂ ಇರುತ್ತವೆ. ದುಂಡಗೆ, ನೋವಿಲ್ಲದೆ, ಮುಟ್ಟಲು ಬಿಗುವಾಗೂ ದಪ್ಪ ಕವಚಗೂಡಿ, ಮೊಲೆ, ಮುನ್ನಿಲುಗಗಳಲ್ಲಿ ಕೆಲವೇಳೆ ಹಲವಾರು ಇರುವುವು. ಮೊಲೆಯಲ್ಲಿ ತೀರ ಸಾಮಾನ್ಯವಾಗಿರುವ ಈ ಗಂತಿಗೂ ಏಡಿಗಂತಿಗೂ ವ್ಯತ್ಯಾಸವಿದೆ. ಒಂದು ಇಲ್ಲವೇ ಎರಡೂ ಮೊಲೆಗಳಲ್ಲಿ ಒಂದೋ ಹೆಚ್ಚಿಗೋ ಇರಬಹುದು. 35 ವರ್ಷ ಮೀರದವರಲ್ಲಿ ಹೆಚ್ಚು ಸಾಮಾನ್ಯ, ಮೊಲೆಯೊಳಗಡೆ ಇದು ಎತ್ತೆಂದರತ್ತ ಸರಾಗವಾಗಿ ಆಡಿಸುವಂತಿರುವುದು. ಗಡಸಾದ್ದು, ಮೆತ್ತನೆಯದು, ಜಿಟ್ಟೆಯದು ಎಂಬ 3 ಬಗೆಗಳಿವೆ. ಮೊದಲನೆಯದು ಕಿತ್ತಳೆಹಣ್ಣಿನ ಗಾತ್ರ ಮೀರದು. ಉಳಿದವರೆಡೂ ಕುಂಬಳಕಾಯಿ ಗಾತ್ರಕ್ಕೆ ಬೆಳೆಯಬಹುದು. ತಂತುಗ್ರಂಥಿಗಂತಿಗಳಲ್ಲಿ ಎಲ್ಲೋ ಒಂದೊಂದು ವಿಷಮವಾಗಬಲ್ಲದು. ಗೊತ್ತಾದ ಕೂಡಲೇ ಇದನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಬೇಕು.

ನಿದಾನ : ಗಂತಿಗಳು ಇರುವುದನ್ನೂ ಯಾವ ಬಗೆಯದು ಎನ್ನುವುದನ್ನು ಗುರುತಿಸಲೂ ಎರಡು ವಿಧಾನಗಳಿವೆ. ಮೊದಲನೆಯದು ಗಂತಿಯ ಲಕ್ಷಣಗಳು, ಚರಿತ್ರೆ ಮುಂತಾದುವನ್ನು ವಿಚಾರಿಸಿ ನೋಡುವುದು. ಎರಡನೆಯದು ಇನ್ನೂ ವೈಜ್ಞಾನಿಕವಾಗಿ, ಗಂತಿಯ ಒಂದು ಚೂರನ್ನು ಕೊಯ್ದು ಬಿಡಿಸಿ ನೋಡುವುದು.

ಮೊದಲಾಗಿ, ಕಣ್ಣಿಂದ ನೋಡಿ ತಿಳಿದು ಗಂತಿಯ ಗುಣಗಳು, ಆದರಿಂದೇಳುವ ಲಕ್ಷಣಗಳು, ಎದ್ದಿರುವ ಜಾಗ, ಬೆಳದು ಹರಡಿದ ರೀತಿ, ಅಕ್ಕಪಕ್ಕಗಳ ರಚನೆಗಟ್ಟುಗಳ ಮೇಲೂ ಅವುಗಳ ಕೆಲಸದ ಮೇಲೂ ಬೀರುವ ಪ್ರಭಾವ-ಇವನ್ನು ವಿಚಾರಿಸಬೇಕು. ಈ ವಿಧಾನಕ್ಕೆ ವೈದ್ಯನ ತಿಳಿವಳಿಕೆ, ಅನುಭವ, ವಿವೇಚನೆ ಚೆನ್ನಾಗಿರಬೇಕು. ಕೆಲವೇಳೆ, ಹೊರಗೆ ಚೆನ್ನಾಗಿ ಕಾಣದ, ಕೈಯಿಂದ ಮುಟ್ಟಲಾಗದ ಮೂಳೆಗಳಲ್ಲಿ ಕರುಳು ಇಲ್ಲವೇ ಆಳದ ಒಳಾಂಗಗಳಲ್ಲಿ ಗಂತಿಗಳ ಎಕ್ಸ್‍ಕಿರಣ ಪರೀಕ್ಷೆಯೂ ಇದರೊಂದಿಗೇ ಆಗಬಹುದು.

ಗಂತಿಯ ಒಂದು ಸಣ್ಣ ಮಾದರಿ ಚೂರನ್ನು ಕೊಯ್ದು ತೆಗೆದು ತೆಳು ಸಿಪ್ಪೆಯಷ್ಟನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿಟ್ಟು ಪರೀಕ್ಷಿಸುವುದಕ್ಕೆ ಜೀವುಂಡಿಗೆ (ಬಯಾಪ್ಸಿ) ಎಂದಿದೆ. ಗಂತಿಯ ನಿಜವಾದ ಗುಣ, ರಚನೆಗಳು ಇದರಿಂದ ಖಚಿತವಾಗಬಹುದು. ಗಂತಿಯ ಪತ್ತೆ, ಗುರುತು ಸರಿಯಾಗಿ ಸಿಕ್ಕದಾಗ ಚಿಕೆತ್ಸೆಯನ್ನು ಆರಿಸಿಕೊಳ್ಳಬೇಕಾದಾಗ, ಬಲು ದೊಡ್ಡ ಶಸ್ತ್ರಕ್ರಿಯೆಗೆ ರೋಗಿಯನ್ನು ಈಡಾಗಿಸಬೇಕಾದಾಅ ಇದನ್ನು ಮಾಡಲೇಬೇಕಾಗುತ್ತದೆ. ಕೆಲವಕ್ಕೆ ಶಸ್ತ್ರಕ್ರಿಯೆ, ಕೆಲವಕ್ಕೆ ವಿಕಿರಣಚಿಕಿತ್ಸೆ, ಇನ್ನೂ ಕೆಲವಕ್ಕೆ ಇವೆರಡನ್ನೂ ಕೈಗೊಳ್ಳಬೇಕಾಗುವುದು. ಯಾವ ಚಿಕಿತ್ಸೆ ಮಾಡಬೇಕುನ್ನುವುದಕ್ಕೆ ಸಾಧಾರಣವಾಗಿ ಜೀವುಂಡಿಗೆ ಉತ್ತರ ನೀಡುವುದು. ಖಚಿತ ನಿದಾನಕ್ಕಾಗಿ ಇದನ್ನು ನೆಚ್ಚಿಕೊಳ್ಳಬಹುದಾದರೂ ಗಂತಿ ವಿಷಮವಾಗುವು ಜಾತಿಯದ್ದಾಗಿದ್ದರೆ, ಇದು ನೇರ ಉತ್ತರ ನೀಡಲಾರದು.

ಗಂತಿಗಳನ್ನು ಗುರುತಿಸಲು ಇನ್ನೂ ಕೆಲವು ವಿಧಾನಗಳು ಬಳಕೆಯಲ್ಲಿವೆ. ಎಲ್ಲ ಗಂತಿಗಳೂ ಒಂದೇ ಒಂದು ಜೀವರಾಸಾಯನಿಕ ಪರೀಕ್ಷೆ ಇಲ್ಲವಾದರೂ ಕೆಲವು ಬಗೆಯ ಗಂತಿಗಳು, ಮುಖ್ಯವಾಗಿ ಮಾಂಸಲಿ ಇಲ್ಲವೇ ಉಪಗುರಾಣಿಕ ಗ್ರಂಥಿಗಂತಿಗಳು, ಇರುವುದನ್ನು ಒಳಸಾಗಿಯಾದರೂ ಕಂಡುಕೊಳ್ಳಬಹುದು. ಗಂತಿಗಳನ್ನು ಎಳೆಯದರಲ್ಲೇ ಕಂಡುಹಿಡಿಯುವುದು ಮುಖ್ಯವಾಗಿ ರೋಗಿಯ ಕೈಲೇ ಇದೆ. ಗಂತಿ ಎದ್ದಿರುವ ಅನುಮಾನ ಬಂದ ಕೂಡಲೇ ತಡಮಾಡದೆ ವಿವರವಾದ ವೈದ್ಯಪರೀಕ್ಷೆ ಮಾಡಿಸಿಬಿಡಬೇಕು. ಯಾವಾಗಲೂ ಮೆಲುಪಿನವಾಗಿದ್ದ ಗಂತಿತಯಳು ಕೆಲವು ವಿಷಮಕ್ಕೆ ತಿರುಗುತ್ತವೆ. ಆದರೆ ಬಹು ಕಾಲದಿಂದಲೂ ಇದ್ದ ಗಂತಿಗಳಲ್ಲಿ ಮಾತ್ರ ಹೀಗಾಗುವುದರಿಂದ, ಚಿಕಿತ್ಸೆಯಿಂದ ಪೂರ್ತಿ ವಾಸಿಯಾಗಬೇಕಾದರೆ ಎಳಸಿನಲ್ಲೇ ಗಂತಿಯ ಗುರುತು ಪತ್ತ ಆಗಿಯೇ ತೀರಬೇಕು.

ಏಡಿಗಂತಿಗಳ ತೆರನ ವಿಷಮ ಗಂತಿಗಳಿಂದ ಲಕ್ಷಾನುಕೋಟಿ ಮಂದಿ ಅಸು ನೀಗುತ್ತಿರುವುದರಿಂದ ಗಂತಿಗಳ ಗುಟ್ಟುಗಳನ್ನು ಹೊರಗೆಳೆಯಲು ಅಪಾರ ಯತ್ನಗಳಾಗುತ್ತಿವೆ. ಗಂತಿಗಳು ಏಳುವ ಕಾರಣಗಳು, ಹರಡುವ ಬಗಗಳು, ಬೆಳೆಯಲು ಬೇಕಾದ ಅನುಕೂಲಾಂಶಗಳು, ನಿರ್ಮೂಲಗೊಳಿಸುವ ವಿಧಾನಗಳು-ಇವೆಲ್ಲ ಆಳವಾದ ಪರಿಶೀಲನೆಗೊಳಾಗಗಿವೆ. ಇದಕ್ಕಾಗಿ ಅಂಗಾಂಶಶಾಸ್ತ್ರ, ಜೀವರಸಾಯನಶಾಸ್ತ್ರ, ಭೌತಕ ರಸಾಯನಶಾಸ್ತ್ರ, ಅಂಗಾಂಶದ ತಳಿ ಎಬ್ಬಿಕೆ, ಏಕಾಣುಜೀವಶಾಸ್ತ್ರ, ವಿಕಿರಣಶಾಸ್ತ್ರ, ಪ್ರಾಣಿಗಳ ಮೇಲಿನ ಪ್ರಯೋಗಗಳು, ಶಸ್ತ್ರವೈದ್ಯ, ರೋಗಿಗಳ ಪರೀಕ್ಷೆ, ಜೀವಾಳದ ಅಂಕಿಅಂಶಗಳು, ಜನಾರೋಗ್ಯ ಸಮೀಕ್ಷೆಗಳು-ಇವುಗಳೆಲ್ಲೆಲ್ಲ ಸಂಶೋಧನೆ ನಡೆಯುತ್ತಿದೆ. ಮುಖ್ಯವಾಗಿ ವಿಷಮಗಂತಿಗಳ ನಿಜವಾದ ಕಾರಣ ಇನ್ನೂ ಗೊತ್ತಾಗಿಲ್ಲ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗಂತಿ&oldid=1172954" ಇಂದ ಪಡೆಯಲ್ಪಟ್ಟಿದೆ