ಮೈಸೂರು ಒಡೆಯರ ರಾಜ್ಯ ನಿರ್ಮಾಣದೊಂದಿಗೆ ಗಂಡಬೇರುಂಡ ಲಾಂಛನವು ಜೊತೆಯಾಗಿ ಬಂದು, ಇಂದಿನ ಕರ್ನಾಟಕ ಸರ್ಕಾರದ ಹಾಗೂ ಸಾರಿಗೆ ಸಂಸ್ಥೆಯ ಲಾಂಛನವಾಗಿ ಮನ್ನಣೆ ಗಳಿಸಿ ಉಳಿದುಕೊಂಡು ಬಂದಿದೆ.

ಮೈಸೂರು ಅರಸರ ಲಾಂಛನ
ಮೈಸೂರು ಅರಸರ ಲಾಂಛನ
Left:Gandaberunda as roof sculpture, Rameshwara temple, ಕೆಳದಿ, ಶಿವಮೊಗ್ಗ ಜಿಲ್ಲೆ. Right:Decorative motif in the ceiling of ಬೃಹದೀಶ್ವರ ದೇವಾಲಯ
ಗಂಡಭೇರುಂಡ ಚಿಹ್ನೆ

ಪ್ರಸ್ತಾವನೆ ಬದಲಾಯಿಸಿ

ಈ ಪಕ್ಷಿಯ ಪರಿಕಲ್ಪನೆ ಆರ್ವಾಚಿನವಾದುದು. ಇದರ ಭೌಗೋಳಿಕ ವ್ಯಾಪ್ತಿ ಬಹು ವಿಶಾಲ. ಕ್ರಿ.ಪೂ.೧೦೦೦ವರ್ಷಗಳಿಗಿಂತಲೂ ಮುಂಚಿನ ಕೆಲವು ಹಿಟ್ನೆಟ್ ಕಲಾಕೇಂದ್ರಗಳಲ್ಲಿ ಗಂಡಭೇರುಂಡ ಪಕ್ಷಿಯ ಶಿಲೆ ಇದೆ. ಈಜಿಪ್ಟ್, ಅಸ್ಸೀರಿಯಾ ವೊದಲಾದ ದೇಶಗಳಲ್ಲಿ ಇದು ಫಲವಂತಿಕೆಯ ಆರಾಧನೆಗೆ(ಫರ್ಟಿಲಿಟಿ ಕಲ್ಟ್) ಸಂಬಂಧ ಪಟ್ಟ ಚಿಹ್ನೆಯಾಗಿತ್ತು ಎಂದು ಊಹಿಸಲಾಗಿದೆ. ಸಿಥಿಯನ್ನರಿಂದ ಇದು ರಷ್ಯಾ,ಜರ್ಮನಿ ಮೊದಲಾದ ದೇಶಗಳಿಗೆ ಹರಡಿತೆಂದು ಹೇಳಲಾಗಿದೆ. ತಕ್ಷಶಿಲೆಯಲ್ಲಿ ದೊರಕಿರುವ ಕ್ರಿಸ್ತಶಕಾರಂಭದ ಒಂದು ಶಿಲ್ಪ ಅತ್ಯಂತ ಪ್ರಾಚೀನವಾದುದೆಂದು ನಂಬಲಾಗಿದೆ. ಇದು ನಿಜವಾದ ಪಕ್ಷಿಯೋ, ಕಾಲ್ಪನಿಕ ಪಕ್ಷಿಯೋ ಎಂಬ ಬಗ್ಗೆ ವಿದ್ವಾಂಸರಲ್ಲಿ ಜಿಜ್ಞಾಸೆ ಇದೆ.

ಗಂಡಭೇರುಂಡ ಪಕ್ಷಿಯ ಇತಿವೃತ್ತ ಬದಲಾಯಿಸಿ

ಗಂಡಭೇರುಂಡ ಪಕ್ಷಿ ಭೌತಿಕವಾಗಿ ಅದನ್ನು ಅವಲೋಕಿಸಿದರೆ ಸಯಾಮಿ ಪಕ್ಷಿಯಂತೆ ಗೋಚರಿಸಿ ವಿಶೇಷವೆನಿಸುತ್ತದೆ. ಪಕ್ಷಿಯು ಎರಡು ತಲೆ, ಚೂಪಾದ ಕೊಕ್ಕು, ಎರಡು ತಲೆಯು ಎರಡು ದಿಕ್ಕಿಗೆ ಪರಸ್ಪರ ವಿರುದ್ದವಾಗಿ ನಿಂತಿದ್ದು ಒಂದೇ ಶರೀರವನ್ನು ಹೊಂದಿದೆ. ಶಿವವೊಗ್ಗ ಜಿಲ್ಲೆಯ ಬಳ್ಳಿಗಾವಿಯಲ್ಲಿರುವ ಗಂಡಭೇರುಂಡ ಪಕ್ಷಿಯ ಪ್ರತಿಮೆ ಕರ್ನಾಟಕದ ಗಂಡಭೇರುಂಡ ಶಿಲ್ಪಗಳಲ್ಲಿ ಅತ್ಯಂತ ಪ್ರಾಚೀನವಾದುದು. ಎತ್ತರವಾದ ಸ್ತಂಭದ ಮೇಲೆ ನಿಂತಿರುವ ಈ ಶಿಲ್ಪದ ಶರೀರ ಮಾನವಾಕಾರವನ್ನು ಹೊಂದಿದ್ದು, ಕಂಠದ ಮೇಲೆ ಮಾತ್ರ ಗಿಡುಗ ಪಕ್ಷಿಯ ರೀತಿಯ ಎರಡು ತಲೆಗಳಿವೆ. ಈ ಪಕ್ಷಿ ರಾಕ್ಷಸರನ್ನು ನುಂಗುತ್ತಿರುವಂತೆ ಚಿತ್ರಿತವಾಗಿದೆ. ಈ ಸ್ತಂಭದ ಅಡಿಯಲ್ಲಿರುವ ಶಾಸನದಲ್ಲಿ ಇದನ್ನು 'ಭೇರುಂಡೇಶ್ವರ' ಹೆಸರಿಸಿದೆ. ಇದನ್ನು ಕಲ್ಯಾಣ ಚಾಳುಕ್ಯರ ಮಹಾಮಂಡಲೇಶ್ವರನಾಗಿದ್ದ ಚಾವುಂಡರಾಯರಸ ಶಕ ೯೬೯ರಲ್ಲಿ ಇದನ್ನು ಸ್ಥಾಪಿಸಿದನೆಂದು ಅದೇ ಶಾಸನ ತಿಳಿಸುತ್ತದೆ.

ಪುರಾಣ ಹಿನ್ನೆಲೆ ಬದಲಾಯಿಸಿ

ಋಗ್ವೇದದಲ್ಲಿ ಬರುವ ಎರಡು ಹಕ್ಕಿಗಳು, ವಿಷ್ಣುವಿನ ವಾಹನವಾದ ಗರುಡ ಇವುಗಳಿಂದ ಗಂಡಭೇರುಂಡ ಪಕ್ಷಿ ವಿಕಾಸಗೊಂಡಿರ ಬಹುದೆಂದು ಊಹಿಸಲಾಗಿದೆ.ಅಲ್ಲದೆ ವಿಷ್ಣು ನರಸಿಂಹಾವತಾರವನ್ನೆತ್ತಿ ಹಿರಣ್ಯಕಶಪುವನ್ನು ಸಂಹಾರ ಮಾಡಿದ ಮೇಲೂ ಅವನ ಕೋಪ ತಣ್ಣಗಾಗಲಿಲ್ಲವಂತೆ. ಅವನಿಂದ ಇಡೀ ವಿಶ್ವವೇ ನಾಶವಾದಿತೆಂದು ಅಂಜಿ ದೇವತೆಗಳು ಶಿವನನ್ನು ಪ್ರಾರ್ಥಿಸಿದಾಗ ಶಿವ ಶರಭಾವತಾರ ಎತ್ತಿ ನರಸಿಂಹನನ್ನು ಎದುರಿಸಿದ,ಆಗ ವಿಷ್ಣು ಶರಭನನ್ನು ಅಡಗಿಸಲು ಗಂಡಭೇರುಂಡ ಪಕ್ಷಿಯಾದನು ಎಂಬ ಕಥೆ ಕೆಲವು ಜನ ಮಾನಸದಲ್ಲಿದೆ.ಆದರೆ ಇದು ಬರೀ ಊಹಾಪೋಹ.ಸರಿಯಾದ ಅಧಾರವಿಲ್ಲದ್ದು.ಕಾಲ್ಪನಿಕ ಕಥೆಯಾಗಿದ್ದು ಯಾವ ಪೌರಾಣಿಕ ಆಧಾರಗಳೂ ಇದಕ್ಕಿಲ್ಲ.ವೇದ,ಪುರಾಣ,ಹಾಗೂ ಇನ್ಯಾವ ಹಿಂದೂ ಗ್ರಂಥಗಳಲ್ಲೂ ಇದು ಉಲ್ಲೇಖಿತವಾಗಿಲ್ಲ.

ಇತಿಹಾಸದಲ್ಲಿ ಗಂಡಭೇರುಂಡ ಪಕ್ಷಿ ಬದಲಾಯಿಸಿ

ಕರ್ನಾಟಕದಲ್ಲಿ ಗಂಡಭೇರುಂಡವನ್ನು ಲಾಂಛನವಾಗಿ ಬಳಸಲು ಆರಂಭವಾದ್ದು ೧೩ನೇ ಶತಮಾನದ ಉತ್ತರಾರ್ಧದಲ್ಲಿ. ಹೊಯ್ಸಳ ಅರಸ ೩ನೇ ನರಸಿಂಹ(೧೨೫೩-೧೨೯೩), ಮತ್ತು ೩ನೇ ಬಲ್ಲಾಳ(೧೨೯೩-೧೩೪೨) ಇವರ ಕಾಲದಲ್ಲಿ ಕೆಲವು ಶಿಲಾಶಾಸನಗಳ ಮೇಲೆ ಗಂಡಭೇರುಂಡ ಚಿತ್ರವಿದೆ. ವಿಜಯನಗರದ ಸಾಮ್ರಾಟನಾಗಿದ್ದ ಅಚ್ಯುತರಾಯ (೧೫೩೦-೧೫೪೨)ನ ಚಿನ್ನ ಮತ್ತು ತಾಮ್ರದ ನಾಣ್ಯಗಳ ಮೇಲೆ ಗಂಡಭೇರುಂಡದ ಮುದ್ರೆಯಿದೆ. ಇದರಲ್ಲಿ ಸೊಂಡಿಲು ಬಾಲವನ್ನೆತ್ತಿಕೊಂಡಿರುವ ಭಯಗ್ರಸ್ತವಾದ ಆನೆಗಳನ್ನು ಆ ಪಕ್ಷಿ ತನ್ನೆರಡು ಕಾಲುಗಳಲ್ಲಿ ಸಿಕ್ಕಿಸಿ ಕೊಂಡಿದೆ. ನಂತರ ಮಧುರೆಯ ನಾಯಕರು, ಕೆಳದಿಯ ಅರಸರು ಗಂಡಭೇರುಂಡವನ್ನು ಲಾಂಛನವಾಗಿ ಬಳಸಿದರು. ಮೈಸೂರು ಒಡೆಯರು ವಿಜಯನಗರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಾಗ ತಮ್ಮ ಧ್ವಜದ ಮೇಲೆ ಗಂಡಭೇರುಂಡವನ್ನು ಪ್ರತಿಷ್ಠಾಪಿಸಿಕೊಂಡರು. ಅಂದಿನಿಂದ ಇಂದಿನವರೆವಿಗೂ ಇದು ಮೈಸೂರು ಒಡೆಯರ ಲಾಂಛನವಾಗಿ ಉಳಿದು ಬೆಳೆದು ಬಂದಿದೆ.

ಪರಿಸಮಾಪ್ತಿ ಬದಲಾಯಿಸಿ

ಹೊಯ್ಸಳರ ಕಾಲದ 'ನಾಶದ ಸರಪಣಿ'ಯ ಶಿಲ್ಪದಲ್ಲಿ ಗಂಡಭೇರುಂಡಕ್ಕೆ ಉಚ್ಚ ಸ್ಥಾನವನ್ನು ನೀಡಲಾಗಿದೆ. ಬೇಲೂರಿನ ಚನ್ನಕೇಶವ ದೇಗುಲ ಮತ್ತು ಕೋರಮಂಗಲದ ಬೂಜೇಶ್ವರ ದೇವಾಲಯಗಳಲ್ಲಿ ಇದನ್ನು ನೋಡಬಹುದು. ಗಂಡಭೇರುಂಡ ಚಿತ್ರ ಪ್ರಾಚೀನ ಕಾಲದಿಂದಲೂ ಪ್ರಭುತ್ವದ ಲಾಂಛನವಾಗಿ ಕರ್ನಾಟಕದ ಹಲವು ರಾಜವಂಶಗಳಲ್ಲಿ ಪ್ರಚಲಿತವಾಗಿತ್ತು. ಗಂಡಭೇರುಂಡ ಶಕ್ತಿಯ ಪರಾಕಾಷ್ಠೆಯ ಚಿಹ್ನೆ. ಬಹುಶ: ಆ ಕಾರಣಕ್ಕಾಗಿಯೋ ಏನೋ ರಾಜರು ಗಂಡಭೇರುಂಡವನ್ನು ರಾಜ ಚಿಹ್ನೆಯಾಗಿ ಬಳಸಿಕೊಂಡಿರಬಹುದು. ಮೈಸೂರು ರಾಜ್ಯ ನಿರ್ಮಾಣದೊಂದಿಗೆ ಈ ಲಾಂಛನವು ಉಳಿದು ಬಂದು ಇಂದಿನ ಕರ್ನಾಟಕ ಸರ್ಕಾರದ ಲಾಂಛನವಾಗಿ ಮನ್ನಣೆ ಗಳಿಸಿದೆ.

ಆಕರ ನೆರವು ಬದಲಾಯಿಸಿ

  • ಕನ್ನಡ ವಿಷಯ ವಿಶ್ವಕೋಶ-ಸಂಪುಟ-೧.

ಬಾಹ್ಯ ಕೊಂಡಿಗಳು ಬದಲಾಯಿಸಿ

ಬಳ್ಳಿಗಾವಿಯ ಒಂದು ವಿಶೇಷ ಗಂಡುಭೇರುಂಡದ ಶಿಲಾಮೂರ್ತಿ

ಉಲ್ಲೇಖ ಬದಲಾಯಿಸಿ

[೧][೨][೩][೪]

  1. http://kn.wikipedia.org/wiki/%E0%B2%B5%E0%B2%B0%E0%B3%8D%E0%B2%97:%E0%B2%95%E0%B2%BE%E0%B2%B2%E0%B3%8D%E0%B2%AA%E0%B2%A8%E0%B2%BF%E0%B2%95_%E0%B2%B8%E0%B2%82%E0%B2%97%E0%B2%A4%E0%B2%BF%E0%B2%97%E0%B2%B3%E0%B3%81
  2. "ಆರ್ಕೈವ್ ನಕಲು". Archived from the original on 2016-03-06. Retrieved 2017-01-09.
  3. "ಆರ್ಕೈವ್ ನಕಲು". Archived from the original on 2017-12-16. Retrieved 2017-01-09.
  4. http://kannada.eenaduindia.com/News/TopNews/2014/09/27202818/Gandaberunda-arising-from-Mysore-logo-on-paper.vpf[ಶಾಶ್ವತವಾಗಿ ಮಡಿದ ಕೊಂಡಿ]