ಕ್ರಿಮಿಯವು ಸೋವಿಯೆತ್ ಒಕ್ಕೂಟದ ಐರೋಪ್ಯ ಭಾಗದಲ್ಲಿ ತೀರ ದಕ್ಷಿಣಕ್ಕಿರುವ ಪರ್ಯಾಯದ್ವೀಪ. ಉಕ್ರೇನ್ ರಾಜ್ಯಕ್ಕೆ ಸೇರಿದೆ. ಇದರ ಒಟ್ಟು ವಿಸ್ತೀರ್ಣ ಸು. 10,000 ಚ.ಮೈ. ರಷ್ಯನರು ಇದನ್ನು ಕ್ರಿಮ್ ಎಂದು ಕರೆಯುತ್ತಾರೆ. ಐದು ಮೈ. ಅಗಲದ ಪೆರಿಕೋಪ್ ಭೂಸಂಧಿಯಿಂದಾಗಿ ಇದು ಉಕ್ರೇನಿನ ಮುಖ್ಯ ಭೂಭಾಗದೊಂದಿಗೆ ಸೇರಿದೆ. ಇದಕ್ಕೆ ಪಶ್ಚಿಮ ದಕ್ಷಿಣಗಳಲ್ಲಿ ಕಪ್ಪುಸಮುದ್ರವೂ ಈಶಾನ್ಯದಲ್ಲಿ ಅಝೊವ್ ಸಮುದ್ರವೂ ಇದೆ.

ಕ್ರಿಮಿಯದ ಭೌಗೋಳಿಕ ಸ್ಥಾನ
ಕ್ರಿಮಿಯ ಪರ್ಯಾಯದ್ವೀಪದ ಉಪಗ್ರಹಚಿತ್ರ

ಸ್ವಾಭಾವಿಕ ವಿಭಾಗಗಳು ಬದಲಾಯಿಸಿ

ಕ್ರಿಮಿಯ ಪರ್ಯಾಯದ್ವೀಪದಲ್ಲಿ ಮೂರು ಮುಖ್ಯ ಸ್ವಾಭಾವಿಕ ವಿಭಾಗಗಳುಂಟು. ಉತ್ತರದ ಮುಕ್ಕಾಲು ಭಾಗ ಅರೆಬೆಂಗಾಡು ಪ್ರದೇಶ. ಆಗ್ನೇಯ ಭಾಗದ ತೀರಪ್ರದೇಶದ ಟರ್ಷಿಯರಿ ಯುಗಕ್ಕೆ ಸೇರಿದ ಯೈಲ ಪರ್ವತಗಳಿಂದ ಆವೃತವಾಗಿದೆ. ಇವನ್ನು ಕ್ರಿಮಿಯನ್ ಆಲ್ಪ್ಸ್ ಎಂದೂ ಕರೆಯುತ್ತಾರೆ. ಇವುಗಳ ಎತ್ತರ 2,000'-5,000'. ಪೂರ್ವಭಾಗದಲ್ಲಿ ಕೆರ್ಚ್ ಪರ್ಯಾಯದ್ವೀಪದ ಸಣ್ಣಸಣ್ಣ ಪರ್ವತಗಳುಂಟು. ಯೈಲ ಪರ್ವತಗಳಿಂದಾಗಿ ಪರಸ್ಪರವಾಗಿ ತೀರ ವಿಭಿನ್ನವಾದ ಎರಡು ವಾಯುಗುಣಗಳು ಇಲ್ಲಿ ಕಂಡುಬರುತ್ತವೆ. ಉತ್ತರದ ಬೆಂಗಾಡು ಪ್ರದೇಶದ್ದು ವೈಪರೀತ್ಯದ ವಾಯುಗುಣ. ಅಲ್ಲಿ ಜನವರಿಯ ಚಳಿಗಾಲದ ಉಷ್ಣತೆ 76º ಫ್ಯಾ. ಆದರೆ ಜುಲೈ ಬೇಸಗೆಯ ಉಷ್ಣತೆ 76º ಫ್ಯಾ. ಅಲ್ಲಿ ಮಳೆಯಾಗುವುದು ಬಹುತೇಕ ಬೇಸಗೆಯಲ್ಲಿ. ಪರ್ವತ ಪ್ರದೇಶಕ್ಕೆ ದಕ್ಷಿಣದಲ್ಲಿ ಮೆಡಿಟರೇನಿಯನ್ ವಾಯುಗುಣ ಕಂಡುಬರುತ್ತದೆ. ಉತ್ತರದಿಂದ ಬೀಸುವ ಶೀತ ಮಾರುತಕ್ಕೆ ಯೈಲ ಪರ್ವತಗಳು ತಡೆಯೊಡ್ಡುತ್ತವೆ. ದಕ್ಷಿಣ ಕ್ರಿಮಿಯ ಅನೇಕ ವಿಹಾರಸ್ಥಳಗಳಿಗೂ ಆರೋಗ್ಯಧಾಮಗಳಿಗೂ ಪ್ರಸಿದ್ಧ. ಯೈಲ ಪರ್ವತಪ್ರದೇಶದಲ್ಲಿ ಪರ್ಣಪಾತಿ ಕಾಡುಗಳುಂಟು. ಇಲ್ಲಿ ಓಕ್, ಬೀಚ್, ಮೇಪಲ್ ಮುಂತಾದ ಮರಗಳು ವಿಶೇಷ. ಹುಲ್ಲುಗಾವಲು ವ್ಯಾಪಕವಾಗಿದೆ. ದಕ್ಷಿಣದ ತೀರಪ್ರದೇಶದಲ್ಲಿ ಜೂನಿಪರ್ಸ್, ಮ್ಯಾಸ್ಟಿಕ್, ಸೈಪ್ರೆಸ್, ಮ್ಯಾಗ್ನೋಲಿಯ ಮುಂತಾದ, ಮೆಡಿಟರೇನಿಯನ್ ಮಾದರಿಯ ಮರಗಳಿವೆ. ದ್ರಾಕ್ಷಿ, ಒಂದು ಮುಖ್ಯ ಬೆಳೆ. ಸೇಬು, ಪಿಯರ್ಸ್, ಚೆರಿ, ಬಾದಾಮಿ ಮುಂತಾದವನ್ನು ಹೇರಳವಾಗಿ ಬೆಳೆಸುತ್ತಾರೆ. ಹೊಗೆಸೊಪ್ಪೂ ಹೆಚ್ಚಾಗಿ ಬೆಳೆಯುತ್ತದೆ.

ಮಧ್ಯಕ್ರಿಮಿಯದ ಪರ್ವತಪ್ರದೇಶದಲ್ಲಿ ಕುರಿ ಸಾಕುವುದು ಜನರ ಮುಖ್ಯ ಕಸಬು. ಹೆರಿಂಗ್ ಜಾತಿಯ ಮೀನುಗಳಿಗೆ ಕೆರ್ಚ್ ಪ್ರಸಿದ್ಧ. ಕೆರ್ಚ್ ಪ್ರದೇಶದಲ್ಲಿ ಕಬ್ಬಿಣದ ಅದುರು ವಿಶೇಷವಾಗಿ ಸಿಗುತ್ತದೆ. ಉತ್ತರದ ಕರಾವಳಿಯಲ್ಲಿ ಬ್ರೊಮಿನ್, ಮೆಗ್ನೀಸಿಯಂ ಮುಂತಾದ ಮೂಲವಸ್ತುಗಳಿಂದ ಕೂಡಿದ ಲವಣಗಳ ನಿಕ್ಷೇಪಗಳುಂಟು. ಇಲ್ಲಿ ಅನೇಕ ರಾಸಾಯನಿಕ ಕೈಗಾರಿಕೆಗಳು ಬೆಳೆದಿವೆ

ಪಟ್ಟಣಗಳು ಬದಲಾಯಿಸಿ

ಸಿಂಫರಾಪಲ್ ಕ್ರಿಮಿಯಾದ ದೊಡ್ಡ ಕೈಗಾರಿಕಾ ಪಟ್ಟಣ, ಆಡಳಿತ ಕೇಂದ್ರ, ಸೆವಾಸ್ಟೊಪಾಲ್, ಕೆರ್ಚ್, ಫಿಯೋದೊಸಿಯ, ಯೆಫ್‍ಪಾತೋರಿಯ ಮತ್ತು ಯಾಲಟ ಇತರ ಪ್ರಮುಖ ಪಟ್ಟಣಗಳು.

ಇತಿಹಾಸ ಬದಲಾಯಿಸಿ

ಕ್ರಿಮಿಯಕ್ಕೆ ವೈವಿಧ್ಯಪೂರ್ಣವಾದ ದೀರ್ಘ ಇತಿಹಾಸವಿದೆ. ಕ್ರಿ.ಪೂ. 7ನೆಯ ಶತಮಾನದಲ್ಲಿ ಸಿಥಿಯನರು ಇಲ್ಲಿದ್ದ ಸೆಮೇರೀಯನ್ ಮತ್ತು ಕೆಲ್ಟಿಕ್ ಜನಾಂಗವನ್ನು ಹೊಡೆದೋಡಿಸಿದರು. ಅವರಲ್ಲಿ ಕೆಲವರು ಪರ್ವತಪ್ರದೇಶಗಳಲ್ಲಿ ಆಶ್ರಯ ಪಡೆದರು. ಅವರೇ ತೌರಿಗಳೆಂದು ಪ್ರಸಿದ್ಧರಾದರು. ಇವರಿಂದಾಗಿಯೇ ಪರ್ಯಾಯದ್ವೀಪಕ್ಕೆ ತಾರಿಸ್ ಎಂಬ ಪ್ರಾಚೀನ ಹೆಸರು ಬಂದದ್ದು. ಕ್ರಿ.ಪೂ. ಸು.600ರಿಂದ ಇಲ್ಲಿಯ ತೀರಪ್ರದೇಶದುದ್ದಕ್ಕೂ ಗ್ರೀಕ್ ವಸಾಹತುಗಳು ಆರಂಭವಾದುವು. ಹಲವಾರು ಶತಮಾನಗಳ ಕಾಲ ಅವು ಸಣ್ಣಪುಟ್ಟ ಗ್ರೀಕ್ ಪಾಳೆಯಪಟ್ಟುಗಳಾಗಿದ್ದುವು. ಒಳನಾಡಿನ ಬಹುಪಾಲು ಪ್ರದೇಶಗಳನ್ನು ಸಿಥಿಯನರೆ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಕೆರ್ಚ್ ಮತ್ತು ಸೆವಾಸ್ಟೊಪಾಲ್‍ಗಳ ನೆರೆಯ ಪ್ರದೇಶದ ಉತ್ಖನನದಲ್ಲಿ ಸಮಾಧಿ ಸುರಂಗಗಳು ಮತ್ತು ಭಿತ್ತಿಚಿತ್ರಗಳನ್ನು ಒಳಗೊಂಡ ಹಲವಾರು ಪ್ರಾಚೀನ ಗ್ರೀಕ್ ಪಟ್ಟಣಗಳ ಅವಶೇಷಗಳು ಕಂಡುಬಂದಿವೆ. ಕ್ರಿ.ಪೂ. 63 ರಿಂದ ಕ್ರಿ.ಶ. 250ರ ವರೆಗೆ ಕ್ರಿಮಿಯದ ಗ್ರೀಕ್ ಭಾಗ ರೋಮನ್ ರಕ್ಷಣೆಗೆ ಒಳಪಟ್ಟಿತ್ತು. ಮುಂದಿನ ಸಹಸ್ರ ವರ್ಷಗಳಲ್ಲಿ ಈ ಪ್ರದೇಶ ಅನೇಕ ಜನಾಂಗಗಳ ಧಾಳಿಗೆ ಒಳಗಾಯಿತು. 13ನೆಯ ಶತಮಾನದಲ್ಲಿ ವಿನಿಷಿಯನ್ನರು ಜಿನೋಯಿ ವ್ಯಾಪಾರಸ್ಥರ ಪ್ರದೇಶಗಳನ್ನು ವಶಪಡಿಸಿಕೊಂಡು, ಅದರ ಬಹುಭಾಗವನ್ನು ನಾಶಗೊಳಿಸಿದರು. ಈ ಗೊಂದಲದ ಕಾಲದಲ್ಲಿ ಪರ್ಯಾಯದ್ವೀಪದ ಉತ್ತರ ಮತ್ತು ಮಧ್ಯಪ್ರದೇಶಗಳ ಬಹುಪಾಲನ್ನು ತಾತಾರರು ವಶಪಡಿಸಿಕೊಂಡರು. 1395ರಲ್ಲಿ ಕ್ರಿಮಿಯ ತೈಮೂರನ ದಾಳಿಗೆ ತುತ್ತಾಗಿ ಅದರ ಬಹುಭಾಗ ನಾಶವಾಯಿತು. ಈ ದಾಳಿಯ ಅನಂತರ ತಾತಾರರು ಕ್ರಿಮಿಯವನ್ನು ತಮ್ಮದೇ ಆದ ಒಂದು ಪ್ರಾಂತ್ಯವನ್ನಾಗಿ ರಚಿಸಿಕೊಂಡರು. ಇವರು ಆಟೋಮನ್ ಸಾಮ್ರಾಜ್ಯಕ್ಕೆ ಅಧೀನರಾಗಿದ್ದರು.

ಕ್ಯಾಥರಿನ್ ಮಹಾಶಯೆಯ ಆಳ್ವಿಕೆಯ ಆರಂಭಕಾಲದಿಂದಲೂ (1783) ಕ್ರಿಮಿಯ ರಷ್ಯನರ ಆಧಿಪತ್ಯಕ್ಕೆ ಒಳಪಟ್ಟಿತ್ತು. 1854-1856ರ ಕ್ರಿಮಿಯನ್ ಯುದ್ಧದ ಅವಧಿಯಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಪಡೆಗಳು ಕ್ರಿಮಿಯದ ಬಂದರುಗಳನ್ನು ವಶಪಡಿಸಿಕೊಂಡುವು. 1917ರ ನವೆಂಬರ್ ತಿಂಗಳ ರಷ್ಯನ್ ಕ್ರಾಂತಿಯ ತರುವಾಯ ಮೊದಲು ಜನರಲ್ ಅಂತೋನ್ ಇವಾನೊವಿಚ್ ಡೆನಿಕಿನನ ನೇತೃತ್ವದಲ್ಲಿ, ಅನಂತರ ಪೀಟರ್ ನಿಕೊಲಾಯೆವಿಚ್ ರಾಂಗೆಲ್‍ನ ನೇತೃತ್ವದಲ್ಲಿ, ಹ್ವೈಟ್ ರಷ್ಯನ್ ಪಡೆಗಳು ದಕ್ಷಿಣ ರಷ್ಯದ ಬಹುಭಾಗದ ಜೊತೆಗೆ ಕ್ರಿಮಿಯವನ್ನೂ ವಶಪಡಿಸಿಕೊಂಡುವು. ಕೊನೆಗೆ 1920ರ ನವೆಂಬರಿನಲ್ಲಿ ಸೋವಿಯೆತ್ ಪಡೆಗಳು ರ್ಯಾಂಗೆಲನ ಸೇನೆಯನ್ನು ಹೊಡೆದಟ್ಟಿದುವು. ಎರಡನೆಯ ಮಹಾಯುದ್ಧದಲ್ಲಿ ಜರ್ಮನರು ಕ್ರಿಮಿಯದ ಬಹುಭಾಗವನ್ನು ಆಕ್ರಮಿಸಿಕೊಂಡಿದ್ದರು (1941). 1944 ಮೇ 9ರಂದು ಸೋವಿಯತ್ ಸೈನ್ಯಗಳು ಮತ್ತೆ ಸೆವಾಸ್ಟೊಪಾಲನ್ನು ಪ್ರವೇಶಿಸಿ ಜರ್ಮನ್ ರುಮೇನಿಯನ್ ಪಡೆಗಳನ್ನು ಸೋಲಿಸಿದುವು. ಎರಡನೆಯ ಮಹಾಯುದ್ಧ ಕಾಲದಲ್ಲಿ ಮಿತ್ರರಾಷ್ಟ್ರಗಳು ಯೂರೋಪಿನಲ್ಲಿ ಅಂತಿಮ ವಿಜಯ ಸಾಧಿಸುವುದಕ್ಕೆ ನಾಲ್ಕು ತಿಂಗಳುಗಳ ಮುಂಚೆ (ಫೆಬ್ರುವರಿ 1945) ಅಮೆರಿಕ ಸಂಯುಕ್ತ ಸಂಸ್ಥಾನಾಧ್ಯಕ್ಷ ರೂಸ್ವೆಲ್ಟ್, ಬ್ರಿಟಿಷ್ ಪ್ರಧಾನಿ ಚರ್ಚಿಲ್, ಸೋವಿಯೆತ್ ಪ್ರಧಾನಿ ಸ್ಟಾಲಿನ್ ಇವರು ಕ್ರಿಮಿಯದ ಯಾಲ್ಟ ನಗರದಲ್ಲಿ ಸಭೆ ಸೇರಿದ್ದರು.


 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕ್ರಿಮಿಯ&oldid=777959" ಇಂದ ಪಡೆಯಲ್ಪಟ್ಟಿದೆ