ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್‌ಇ) ಸೊಸೈಟಿ

ಕೆಎಲ್‌ಇ ಸೊಸೈಟಿಗೆ ಶತಮಾನೋತ್ಸವ ಬದಲಾಯಿಸಿ

  • ದಿನಾಂಕ 12 ನವೆಂಬರ್ 2016 ಗುರುವಾರ ದಂದು ಕರ್ನಾಟಕದ ಬೆಳಗಾವಿಯಲ್ಲಿರುವ 'ಕೆಎಲ್‌ಇ ಸಂಸ್ಥೆ'ಯ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ "ನನ್ನ ಪ್ರೀತಿಯ ಬಂಧು ಭಗಿನಿಯರೇ...ನಿಮಗೆಲ್ಲಾ ನನ್ನ ನಮಸ್ಕಾರಗಳು" ಎಂದು ಕನ್ನಡದಲ್ಲಿ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿದರು. 'ಉತ್ತಮ ಶಿಕ್ಷಕರು ಹಲವರಿರುತ್ತಾರೆ. ಆದರೆ ಅಮರ ಶಿಕ್ಷಕರು ಕೆಲವರು ಮಾತ್ರ ಇರುತ್ತಾರೆ. ಲೋಕಮಾನ್ಯ ತಿಲಕ್ ಹಾಗೂ ಕ್ರಾಂತಿಯೋಗಿ ಬಸವಣ್ಣ ಅವರ ಸ್ಫೂರ್ತಿಯಿಂದ ಕೆಎಲ್‍ಇ ಆರಂಭವಾಗಿದೆ. ಇಂದು ದೇಶದ ಮೂಲೆ ಮೂಲೆಯಲ್ಲಿಯೂ ಕೆಎಲ್‍‍ಇ ವಿದ್ಯಾರ್ಥಿಗಳಿದ್ದಾರೆ. ಯಾವುದೇ ಕೆಲಸದ ಸಂದರ್ಶನದಲ್ಲಿ ಭಾಗಿಯಾದರೂ ವಿದ್ಯಾರ್ಥಿಗಳು ಹೆಮ್ಮೆಯಿಂದ ಕೆಎಲ್‍ಇ ಬಗ್ಗೆ ಹೇಳಿಕೊಳ್ಳುತ್ತಾರೆ. ದೇಶದ ಅಭಿವೃದ್ಧಿಗಾಗಿ ಕೆಎಲ್‍ಇ ಮತ್ತಷ್ಟು ಕೊಡುಗೆಯನ್ನು ನೀಡಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೆ ಕೆಎಲ್‍ಇ ಸಂಸ್ಥೆ ಸ್ಫೂರ್ತಿಯಾಗಿದೆ' ಎಂದು ಮೋದಿ ಶ್ಲಾಘಿಸಿದರು.
  • ಕೆಎಲ್‌ಇ ಸಂಸ್ಥೆ ಶತಮಾನೋತ್ಸವ ಸ್ಮರಣಾರ್ಥ ನಿರ್ಮಿಸಿರುವ ಸಂಗ್ರಹಾಲಯ [೧] Archived 2016-11-19 ವೇಬ್ಯಾಕ್ ಮೆಷಿನ್ ನಲ್ಲಿ.

ಇತಿಹಾಸ ಬದಲಾಯಿಸಿ

  • ಸಂಸ್ಥೆಯ ಸ್ಥಾಪನೆ (1916ರ ನ.13)
  • 19ನೇ ಶತಮಾನದ ಉತ್ತರಾರ್ಧದಲ್ಲಿ ಮುಂಬಯಿ- ಕರ್ನಾಟಕದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ದೂರದ ಪುಣೆ, ಮುಂಬಯಿಗೆ ಹೋಗಬೇಕಾದ ಅನಿವಾರ್ಯವಿತ್ತು. ಅಂದು ಪುಣೆಯ ಫರ್ಗ್ಯುಸನ್ ಮತ್ತು ಡೆಕ್ಕನ್ ಕಾಲೇಜುಗಳು ಉತ್ತಮ ಪ್ರಾಧ್ಯಾಪಕರಿಗೆ ಹೆಸರುವಾಸಿ. ಪಂಡಿತಪ್ಪ ಚಿಕ್ಕೋಡಿ ಮತ್ತು ಎಂ.ಆರ್. ಸಾಖರೆ, ಫರ್ಗ್ಯುಸನ್ ಕಾಲೇಜಿನಲ್ಲಿ, ಎಚ್.ಎಫ್. ಕಟ್ಟಿಮನಿ, ಶಿ.ಶಿ. ಬಸವನಾಳ, ಬಿ.ಎಸ್. ಹಂಚಿನಾಳ ಮತ್ತು ಬಿ.ಬಿ. ಮಮದಾಪುರ ಡೆಕ್ಕನ್ ಕಾಲೇಜು, ವೀರನಗೌಡ ಪಾಟೀಲರು ಸರ್ಕಾರಿ ಕೃಷಿ ಕಾಲೇಜಿನಲ್ಲಿ ಓದುತ್ತಿದ್ದರು. ಅವರೆಲ್ಲರೂ ಪುಣೆಯಲ್ಲಿ ಸೇರಿದ್ದ ಸಂದರ್ಭದಲ್ಲಿ ಕೆ.ಎಲ್.ಇ ಸಂಸ್ಥೆ ಸ್ಥಾಪಿಸುವ ಯೋಜನೆ ಸಿದ್ಧವಾಯಿತು. ಅವರು ಹಾಕಿದ ಅಡಿಪಾಯದ ಮೇಲೆ ಸಂಸ್ಥೆಯನ್ನು ನಂತರದ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಕಟ್ಟುತ್ತಾ ಬಂದಿದ್ದರಿಂದ ಬಲಿಷ್ಠ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ.
  • ಶಿಕ್ಷಣ ಮುಗಿಸಿದ ಈ ಏಳು ಮಂದಿ ಬೆಳಗಾವಿಯಲ್ಲಿ ರಾವ್‌ ಬಹಾದ್ದೂರ್‌ ಅರಟಾಳ ರುದ್ರಗೌಡರ ಅಧ್ಯಕ್ಷತೆಯಲ್ಲಿ 1916ರ ನ. 13ರಂದು ‘ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್‌ಇ) ಸೊಸೈಟಿ’ ಆರಂಭಿಸಿದರು. ಕೋಟೆ ಆವರಣದಲ್ಲಿ ಬಾಡಿಗೆ ಕಟ್ಟಡದಲ್ಲಿ ಗಿಲಗಂಚಿ ಅರಟಾಳ ಪ್ರೌಢಶಾಲೆ ಆರಂಭಿಸಿ ಅವರೇ ಪಾಠ ಮಾಡಿದರು, ಬೆಳೆಸಿದರು. ಹೀಗಾಗಿ, ಸಂಸ್ಥೆಯಲ್ಲಿ ಆ ಏಳು ಮಂದಿಯನ್ನು ಸಂಸ್ಥೆಯಲ್ಲಿ ‘ಸಪ್ತರ್ಷಿಗಳು’ ಎಂದೇ ಕರೆಯಲಾಗುತ್ತದೆ. ರಾವ್‌ ಬಹಾದ್ದೂರ್‌, ಸರದಾರ ವಿ.ಜಿ. ನಾಯಕ, ಬಹಾದ್ದೂರ್‌ ದೇಸಾಯಿ, ರಾವ ಬಹಾದ್ದೂರ್‌, ಪಿ.ಎ. ಅನಿಗೋಳ, ಅರಟಾಳ ರುದ್ರಗೌಡ, ಲಿಂಗರಾಜ ಸರದೇಸಾಯಿ, ಸರದಾರ ರಾಜಾ ಲಖಮಗೌಡ ಸರದೇಸಾಯಿ, ಬಿ.ವಿ. ಭೂಮರಡ್ಡಿ ಸಂಸ್ಥೆ ಬೆಳೆಸಲು ಕೈಜೋಡಿಸಿದರು. ಪ್ರಸ್ತುತ ಕಾರ್ಯಾಧ್ಯಕ್ಷರಾಗಿರುವ ಪ್ರಭಾಕರ ಕೋರೆ ಅವರು ಸಂಸ್ಥೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ.
 
KLE hospital

ಸೇವೆಗಳು ಬದಲಾಯಿಸಿ

  • ಶಿಕ್ಷಣ ಪ್ರಸಾರ, ಆರೋಗ್ಯ ಸೇವೆ: ಬೊಗಸೆಯಷ್ಟು ಪ್ರಮಾಣದ ನೀರಿನೊಂದಿಗೆ ಹುಟ್ಟಿ ಸಮುದ್ರ ಸೇರುವಾಗ ವಿಶಾಲವಾದ ನದಿಯಾಗಿ ಹರಿಯುವ ಕೃಷ್ಣೆಯಂತೆ ಕೆಎಲ್‌ಇ ಸಂಸ್ಥೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡ ಪರಿ ಬೆರಗು ಹುಟ್ಟಿಸುತ್ತದೆ. ಶಿಕ್ಷಣ ಪ್ರಸಾರ ಹಾಗೂ ವಿವಿಧ ಆಸ್ಪತ್ರೆಗಳ ಸ್ಥಾಪನೆ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಾ ಸಮಾಜದಲ್ಲಿ ಗುಣಾತ್ಮಕ ಬದಲಾವಣೆ ತರುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಈ ಸಂಸ್ಥೆಯ ಅಕ್ಷರ ದಾಸೋಹ ಮಹತ್ವದ್ದಾಗಿದೆ. ಸತ್ಯ, ಪ್ರೇಮ, ಸೇವೆ, ತ್ಯಾಗ – ಎನ್ನುವ ಘೋಷವಾಕ್ಯದೊಂದಿಗೆ ಸಾಗುತ್ತಿರುವ ಸಂಸ್ಥೆಯ ತೆಕ್ಕೆಯಲ್ಲಿ ಹಲವು ಅಂಗಸಂಸ್ಥೆಗಳು ಕವಲೊಡೆದಿವೆ.
  • 1982ರಲ್ಲಿ ಪ್ರಭಾಕರ ಕೋರೆ ಅವರು ಆಡಳಿತ ಮಂಡಳಿ ಪ್ರವೇಶಿಸಿದರು. 1984ರಲ್ಲಿ ಪ್ರಭಾಕರ ಕೋರೆ ಅವರು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸಂಸ್ಥೆಗೆ ಹೊಸ ಆಯಾಮ ದೊರೆಯಿತು. ಅಂದು ಕೆಎಲ್‌ಇ ವ್ಯಾಪ್ತಿಯಲ್ಲಿ 34 ಶಿಕ್ಷಣ ಸಂಸ್ಥೆಗಳಿದ್ದವು. ನಂತರ ಹಂತಹಂತವಾಗಿ ಹೆಮ್ಮರವಾಗಿ ಬೆಳೆದಿದೆ. ಪ್ರಸ್ತುತ ಕರ್ನಾಟಕ, ಮಹಾರಾಷ್ಟ್ರ, ಮುಂಬಯಿ, ನವದೆಹಲಿ, ದುಬೈ ಸೇರಿದಂತೆ 252 ಶಿಕ್ಷಣ ಸಂಸ್ಥೆಗಳಿವೆ. 16,000ಕ್ಕೂ ಅಧಿಕ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ಸ್ನಾತಕೋತ್ತರ ಹಂತದವರೆಗೆ 1.25 ಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ’.

ಶಿಶುವಿಹಾರದಿಂದ ಸ್ನಾತಕೋತ್ತರದವರೆಗೆ ಬದಲಾಯಿಸಿ

 
ಕೆ.ಎಲ್.ಇ. ವೈದ್ಯಕೀಯ ಕಾಲೇಜು (KLE MC)

ಕಲಾ, ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್, ಕಾನೂನು, ಹೋಟೆಲ್ ನಿರ್ವಹಣೆ, ವ್ಯವಸ್ಥಾಪನಾ ಅಧ್ಯಯನ, ಶಿಕ್ಷಣ ಮಹಾವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ... ಹೀಗೆ ಹಲವು ಅಂಗ ಸಂಸ್ಥೆಗಳು ಕೆಎಲ್‌ಇ ಸಂಸ್ಥೆಯ ಕಿರಣದಲ್ಲಿ ಅರಳುತ್ತಿವೆ. ಶೈಕ್ಷಣಿಕವಾಗಿ ಹಿಂದುಳಿದ ಚಿಕ್ಕೋಡಿ, ಅಥಣಿ, ಸವದತ್ತಿ, ನಿಪ್ಪಾಣಿ ಮೊದಲಾದ ಸ್ಥಳಗಳಲ್ಲಿ ಪ್ರೌಢಶಾಲೆ, ಕಾಲೇಜುಗಳನ್ನು ಸ್ಥಾಪಿಸಿದೆ. ಬೆಳಗಾವಿಯಲ್ಲಿ ಪ್ರಭಾಕರ ಕೋರೆ ವೈದ್ಯಕೀಯ ಮತ್ತು ಸಂಶೋಧನಾ ಆಸ್ಪತ್ರೆ ನಿರ್ಮಿಸಿ ಉತ್ತರ ಕರ್ನಾಟಕದ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಸೇವಾ ಸೌಲಭ್ಯಗಳನ್ನು ಒದಗಿಸುತ್ತಿದೆ.

ಹಳೆಯಪ್ರತಿಭಾನ್ವಿತ ವಿದ್ಯಾರ್ಥಿಗಳು ಬದಲಾಯಿಸಿ

  • ಇನ್ಫೊಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ, ಮಾಜಿ ಕ್ರಿಕೆಟ್‌ ಆಟಗಾರ ಸುನೀಲ್ ಜೋಶಿ, ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ವಿಜ್ಞಾನಿ ಡಾ.ಶಿವಾನಂದ ಪಾಟೀಲ, ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ ಕೆಎಲ್‌ಇ ಸೊಸೈಟಿಯ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ. ಇವರೊಂದಿಗೆ ಲಕ್ಷಾಂತರ ಮಂದಿ ಇಲ್ಲಿ ಶಿಕ್ಷಣ ಪಡೆದಿದ್ದಾರೆ.

ಶಿಕ್ಷಣ ಸೇವೆಯ ಕೊಡಿಗೆ ಬದಲಾಯಿಸಿ

  • ಕೆಎಲ್ಇ ರಾಜ್ಯದ ಅತಿದೊಡ್ಡ ಸಂಸ್ಥೆ. ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಈ ಸಂಸ್ಥೆಯು ನೀಡಿರುವ ಕೊಡುಗೆ ಅಪಾರವಾದುದು. ಅಂದಿನ ಕಾಲಕ್ಕೆ ಹೊರಗಡೆ ಹೋಗಿ ವಿದ್ಯಾಭ್ಯಾಸ ಮಾಡುವುದಕ್ಕೆ ಎಲ್ಲರಿಗೂ ಶಕ್ತಿ ಇರಲಿಲ್ಲ. ಊರೂರಿಗೆ ಶಾಲಾ–ಕಾಲೇಜು, ಹಾಸ್ಟೆಲ್‌ಗಳನ್ನು ಸ್ಥಾಪಿಸಿ ವಿದ್ಯಾಭ್ಯಾಸಕ್ಕೆ ನೆರವಾದ ಸಂಸ್ಥೆ. ದೂರದ ನಗರಗಳಿಗೆ ಹೋಗಿ ಓದಲು ಶಕ್ತಿ ಇಲ್ಲದವರಿಗೆ ನೆರವಾಗಿದೆ. ಕೆಲವು ಶಿಕ್ಷಣ ಪ್ರೇಮಿಗಳು ಜನಸಾಮಾನ್ಯರಿಗೋಸ್ಕರ ದಾನ ನೀಡಿ ಕಟ್ಟಿ ಬೆಳೆಸಿದ ಸಂಸ್ಥೆ. ಹೀಗಾಗಿ,ಕೆಎಲ್‌ಇ ಬಗ್ಗೆ ಜನರಿಗೆ ಬಹಳ ಗೌರವವಿದೆ.

ಶತಮಾನೋತ್ಸವದಲ್ಲಿ ಸೇವೆ ಬದಲಾಯಿಸಿ

  • ಶತಮಾನೋತ್ಸವವನ್ನು ಕೇವಲ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ ಸೇವಾ ಚಟುವಟಿಕೆಗಳನ್ನು ನಡೆಸಲಾಗಿದೆ. ವರ್ಷದಿಂದೀಚೆಗೆ ವಿವಿಧೆಡೆ 27 ಆರೋಗ್ಯ ಶಿಬಿರಗಳನ್ನು ನಡೆಸಲಾಗಿದೆ. 1,02,000 ರೋಗಿಗಳನ್ನು ತಪಾಸಣೆ ಮಾಡಲಾಗಿದೆ. 6132 ಮಂದಿಗೆ ಚಿಕಿತ್ಸೆ ನೀಡಲಾಗಿದೆ. 510 ಮಂದಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ದಂತ ಚಿಕಿತ್ಸಾ ಶಿಬಿರಗಳನ್ನು ನಡೆಸಲಾಗಿದೆ. ಸಾವಿರಾರು ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಆಡಳಿತ ಬದಲಾಯಿಸಿ

  • ಸಂಸ್ಥೆಯ ಮತ್ತೊಂದು ವಿಶೇಷವೆಂದರೆ, ಆಡಳಿತ ಮಂಡಳಿ ನಿರ್ದೇಶಕರನ್ನು ಪ್ರಜಾಪ್ರಭುತ್ವದ ತಳಹದಿಯಲ್ಲಿ ಅಂದರೆ ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ. 1982ರಲ್ಲಿ ಆಡಳಿತ ಮಂಡಳಿ ಪ್ರವೇಶಿಸಿದ ಪ್ರಭಾಕರ ಕೋರೆ, 1984ರಿಂದೀಚೆಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಾ ಬಂದಿದ್ದಾರೆ.

ಶತಮಾನೋತ್ಸವ ಮ್ಯೂಸಿಯಂ ಬದಲಾಯಿಸಿ

  • ಕೆಎಲ್ಇ ಸಂಸ್ಥೆಯ ವಸ್ತುಸಂಗ್ರಹಾಲಯವು ಶತಮಾನೋತ್ಸವ ಸಂದರ್ಭದಲ್ಲಿ ಲೋಕಾರ್ಪಣೆಗೊಂಡಿದೆ. ಬೆಳಗಾವಿ ನಗರದ ಲಿಂಗರಾಜ ಕಾಲೇಜಿನ ಆವರಣದಲ್ಲಿ ಸ್ಥಾಪಿಸಿರುವ ವಸ್ತುಸಂಗ್ರಹಾಲಯ ಸಂಸ್ಥೆಯ ಶತಮಾನದ ಭವ್ಯ ಪರಂಪರೆಯನ್ನು ಸಾರಿ ಹೇಳುತ್ತಿದೆ. ಸಂಸ್ಥೆಯ ಸಂಸ್ಥಾಪಕರ ಕಂಚಿನ ಮೂರ್ತಿಗಳನ್ನು, ಅವರು ಉಪಯೋಗಿಸಿದ ಮೌಲಿಕ ವಸ್ತುಗಳು, ಗ್ರಂಥಗಳು ಹಾಗೂ ಇನ್ನಿತರ ದಾಖಲಾರ್ಹ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.
  • ಶತಮಾನೋತ್ಸವ ಸ್ಮರಣಾರ್ಥ ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಬಿ.ವಿ. ಭೂಮರಡ್ಡಿ ತಾಂತ್ರಿಕ ಹಾಗೂ ಎಂಜಿನಿಯರಿಂಗ್‌ ಮಹಾವಿದ್ಯಾಲಯದ ಆವರಣದಲ್ಲಿ ಬಿ.ವಿ. ಭೂಮರಡ್ಡಿ ಅವರ ಪ್ರತಿಮೆ ಅನಾವರಣಗೊಳಿಸಲಾಗಿದೆ. ಇದೇ 15ರಂದು ಬೆಳಗಾವಿಯ ಲಿಂಗರಾಜ ಕಾಲೇಜು ಉದ್ಯಾನದಲ್ಲಿ ಕಾಲೇಜಿನ ಸ್ಥಾಪನೆಯ ರೂವಾರಿ ಹಾಗೂ ಮುಂಬಯಿ ಕರ್ನಾಟಕ ಪ್ರಾಂತದ ಶಿಕ್ಷಣ ಸಚಿವರಾಗಿದ್ದ ಸರ್‌ ಸಿದ್ದಪ್ಪ ಕಂಬಳಿ ಅವರ ಪ್ರತಿಮೆ ಅನಾವರಣಗೊಳ್ಳಲಿದೆ. ‘ಕೆಎಲ್‌ಇ ಶತಮಾನೋತ್ಸವ ಮಾಲಿಕೆ’ಯಲ್ಲಿ 100 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಸಂಸ್ಥೆಗಳ ವಿವರ ಬದಲಾಯಿಸಿ

ವಿವರ ಅಂಕೆ-ಸಂಖ್ಯೆ
ಕೆ.ಎಲ್.ಇ.ಸೊಸೈಟಿಯ ಶಿಕ್ಷಣ ಸಂಸ್ಥೆಗಳು 252
ಸಂಸ್ತೆಯಲ್ಲಿರುವ ಬೋಧಕ ಸಿಬ್ಬಂದಿವರ್ಗ 16 ಸಾವಿರ
ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 1.25 ಲಕ್ಷ
ಕೆ.ಎಲ್.ಇ.ಸೊಸೈಟಿಯ ಸದಸ್ಯರು 13 ಸಾವಿರ

[೧][೨][೩]

ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. About Us
  2. A Global leader in Education
  3. ದಾಸೋಹಕ್ಕೆ 100;ಎಂ. ಮಹೇಶ;15 Nov, 2016;ಪ್ರಜಾವಾಣಿ[ಶಾಶ್ವತವಾಗಿ ಮಡಿದ ಕೊಂಡಿ]