ಕನ್ಯಾಶುಲ್ಕ : ಮದುವೆಯ ಕಾಲದಲ್ಲಿ ಗಂಡು ಹೆಣ್ಣಿನ ಕಡೆಯವರಿಗೆ ತೆರುವ ಶುಲ್ಕ.

ಭಾರತೀಯ ಪರಂಪರೆಯಲ್ಲಿ ಬದಲಾಯಿಸಿ

ಸಮಾಜಶಾಸ್ತ್ರಕಾರನಾದ ಮನು ಸಮಾಜಸಮ್ಮತವಾದ ನಾಲ್ಕು ವಿವಾಹಪದ್ದತಿಗಳನ್ನು; ನಿರೂಪಿಸಿದ್ದಾನೆ. ಅವು ಪ್ರಾಜಾಪತ್ಯ. ಆರ್ಪ, ದೈವ ಮತ್ತು ಬ್ರಾಹ್ಮ ವಿವಾಹಗಳು. ಆರ್ಪವಿವಾಹದಲ್ಲಿ ಕನ್ಯಾಪಿತೃ ವರನ ಕಡೆಯಿಂದ ಒಂದು ಜೊತೆ ಗೋವುಗಳನ್ನು ತೆಗೆದುಕೊಂಡು ಅವಳನ್ನು ಅವನಿಗೆ ಒಪ್ಪಿಸುತ್ತಾನೆ. ಹೀಗೆ ತೆಗೆದುಕೊಳ್ಳುವುದನ್ನು ಕನ್ಯಾಶುಲ್ಕವೆಂದು ಕರೆಯಲಾಗಿದೆ. ಇದರಲ್ಲಿ ಕನ್ಯೆಯನ್ನು ವಿಕ್ರಯಮಾಡುವ ಉದ್ದೇಶವಿದ್ದಂತೆ ಕಾಣುವುದಿಲ್ಲ. ಏಕೆಂದರೆ ಗೋವುಗಳನ್ನು ಯಜ್ಞಕ್ಕಾಗಿ ತೆಗೆದುಕೊಳ್ಳಲಾಗುತ್ತಿತ್ತೇ ಹೊರತು ಲಾಭಕ್ಕಾಗಿ ಅಲ್ಲ. ಮತ್ತು ಅದು ಕನ್ಯೆಯ ಬೆಲೆಯೂ ಅಲ್ಲ. ಅವನ್ನು ಪುನಃ ಕನ್ಯೆಯೊಂದಿಗೆ ದಾನಮಾಡಲಾಗುತ್ತಿತ್ತು. ಆಶ್ವಲಾಯನ, ಬೌಧಾಯನ ಮತ್ತು ಆಪಸ್ತಂಬ ಸ್ಮೃತಿಗಳೂ ಕನ್ಯಾಶುಲ್ಕವನ್ನು ಪ್ರಸ್ತಾಪಿಸಿವೆ.

ಕನ್ಯಾಶುಲ್ಕವನ್ನು ತೆಗೆದುಕೊಳ್ಳುವ ಪದ್ದತಿ ಯಜ್ಞಯಾಗಾದಿಗಳ ಪ್ರಾಬಲ್ಯ ಕಡಿಮೆಯಾದ ಮೇಲೆ ಕ್ರಮೇಣ ನಿಂತುಹೋದಂತೆ ತೋರುತ್ತದೆ. ದಾನವನ್ನು ಕೊಡುವಾಗ ಯಾವ ನಿಬಂಧನೆಯೂ ಇರಕೂಡದೆಂಬ ಭಾವನೆ ಬಂದದೂ ಇದು ನಿಂತುಹೋಗುವುದಕ್ಕೆ ಕಾರಣವೆನ್ನಬಹುದು. ತ್ರಿವರ್ಣಗಳಲ್ಲಿ ಕಾಣಬರದಿದ್ದರೂ ಶೂದ್ರವರ್ಣದಲ್ಲಿ ಇದು ಈಗ ವಾಡಿಕೆಯಲ್ಲಿದೆ ಎನ್ನಬಹುದು.

ವಿದೇಶಗಳಲ್ಲಿ ಬದಲಾಯಿಸಿ

ಉತ್ತರ ಅಮೆರಿಕದ ಅನೇಕ ಪ್ರಾಚೀನ ಜನರಲ್ಲಿ ವಿವಾಹದ ಎರಡು ಕುಲಗಳೂ ಸಮಾನಬೆಲೆಯುಳ್ಳ ವಸ್ತ್ರಾಭರಣಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಕನ್ಯಾಶುಲ್ಕವನ್ನೂ ವರದಕ್ಷಿಣೆಯನ್ನೂ ಸರಿಹೊಂದಿಸುವ ಈ ಪದ್ಧತಿಯನ್ನು ಕನ್ಯಾವಿಕ್ರಯವೆನ್ನಲಾಗುವುದಿಲ್ಲ. ಕನ್ಯಾಶುಲ್ಕಕ್ಕೆ ಬದಲಾಗಿ ಏನನ್ನೂ ಪಡೆಯದಿದ್ದಲ್ಲಿ, ಪತಿಗೆ ಕೆಲವು ವಿಶೇಷ ಹಕ್ಕುಗಳು ದೊರೆಯುತ್ತವೆ. ನ್ಯೂ ಗಿನಿಯಲ್ಲಿ, ಪತ್ನಿ ದ್ರೋಹ ಮಾಡಿದರೆ ಪತಿ ಕನ್ಯಾಶುಲ್ಕವನ್ನು ಹಿಂದಕ್ಕೆ ಪಡೆಯುತ್ತಾನೆ. ಆದರೆ ಅವಳಿಗೆ ಸೇರಿದ ಆಸ್ತಿ ಮತ್ತು ಮಕ್ಕಳ ಮೇಲೆ ಅವನಿಗೆ ಯಾವ ಅಧಿಕಾರವೂ ಇಲ್ಲ.

ಉತ್ತರ ನೈಲ್ ಪ್ರದೇಶದಲ್ಲಿ, ಮಕ್ಕಳನ್ನು ಪಡೆಯುವವರೆಗೂ ವಧುವನ್ನು ಪತ್ನಿಯೆಂದು ಪರಿಗಣಿಸಲಾಗುವುದಿಲ್ಲ. ಅನಂತರ ಅವಳಿಗೆ ಕೊಡಬೇಕಾದ ಶುಲ್ಕವನ್ನು ಅವಳ ತಾಯಿಗೆ ಕೊಡಲಾಗುತ್ತದೆ. ಅದನ್ನು ಅವಳ ಸಹೋದರ ಕ್ರಮವಾಗಿ ತನ್ನ ವಧುವಿಗೆ ಕೊಡಬೇಕಾಗುತ್ತದೆ. ಸ್ತ್ರೀ ಪತಿವಂಚಕಳಾದರೆ ಅವಳ ಶುಲ್ಕವನ್ನು ಹಿಂತಿರುಗಿಸಬೇಕಾಗುತ್ತದೆ. ಅಥವಾ ಅವಳ ಸಹೋದರನ ಮಕ್ಕಳನ್ನೋ ಮಕ್ಕಳಿಲ್ಲದ ಪಕ್ಷದಲ್ಲಿ ಅವನ ಪತ್ನಿಯನ್ನೋ ಒಪ್ಪಿಸಬೇಕಾಗುತ್ತದೆ. ಕನ್ಯಾವಿಕ್ರಯ ಸ್ತ್ರೀಯ ಸ್ಥಾನಮಾನಗಳಿಗೆ ಅವಹೇಳನ ಮಾಡಿದಂತಾಗಿರದೆ ಒಂದು ವಿಧದಲ್ಲಿ ಗೌರವಾರ್ಹವೆಂದೆಣಿಸಲಾಗಿದೆ. ಮಂಟಾನ ಪಂಗಡದಲ್ಲಿ ಕನ್ಯಾಶುಲ್ಕವನ್ನು ನೀಡುವುದು ಅವಳ ಸೌಶೀಲ್ಯಕ್ಕೆ ಪ್ರಶಸ್ತಿಪತ್ರದಂತೆ ಎಂದು ಪರಿಗಣಿಸಲಾಗಿದೆ.

ಆಫ್ರಿಕದಲ್ಲಿ ಕನ್ಯಾಶುಲ್ಕವನ್ನು ಕೊಡುವಷ್ಟು ಹಣವಂತರಾದವರು ಮಾತ್ರ ಅನೇಕ ಪತ್ನಿಯರನ್ನು ಪಡೆಯುವರು.

ಇಸ್ಲಾಂಧರ್ಮದಂತೆ ಸೈಬೀರಿಯದ ತುರ್ಕಿಯವ ತನ್ನ ಪತ್ನಿಯನ್ನು ಇಚ್ಚೆ ಬಂದಾಗ ವಿಚ್ಚೇದ ಮಾಡಬಲ್ಲನಾದರೂ ತನ್ನಿಂದ ಅವಳ ಕಡೆಯವರು ಪಡೆದ ಅನೇಕ ಪಶುಪ್ರಾಣಿಗಳಿಗಾಗಿ ಹೀಗೆ ಮಾಡಲು ಆತ ಹಿಂತೆಗೆಯುತ್ತಾನೆ. ಮತ್ತೊಂದು ಪಂಗಡದಲ್ಲಿ ಕನ್ಯೆಗಾಗಿ ಅನೇಕ ಕುದುರೆಗಳನ್ನು ನೀಡುವ ಪದ್ದತಿಯೂ ಇದೆ.

ಅಚರಣೆಯಲ್ಲಿ ಬದಲಾಯಿಸಿ

ಕೆಲವು ವೇಳೆ ಕನ್ಯಾಶುಲ್ಕ ವಿವಾಹಕ್ಕೆ ಅಡ್ಡಬರುವಷ್ಟು ಅಧಿಕವಾಗಿರಬಹುದು. ಅದನ್ನು ಕೊಡುವುದು ಕಷ್ಟಸಾಧ್ಯವಾಗಿರುವಲ್ಲಿ ವಿವಾಹವಾಗುವವರ ವಯಸ್ಸು ಮೀರಬಹುದು. ಕೆಲವು ಸಮಾಜಗಳಲ್ಲಿ ವರದಕ್ಷಿಣೆಯಂತೆಯೇ ಇದೂ ಎಷ್ಟೋ ಮಂದಿ ಅವಿವಾಹಿತ ರಾಗಿರುವುದಕ್ಕೆ ಕಾರಣವಾಗಬಹುದು. ಕನ್ಯಾಶುಲ್ಕವನ್ನು ಒಟ್ಟಿಗೆ ಕೊಡಲು ಕಷ್ಟಸಾಧ್ಯ ವಾಗಿರುವುದರಿಂದ ಕೆಲವು ಪಂಗಡಗಳಲ್ಲಿ ಅದನ್ನು ವಿಭಾಗಿಸಿ, ವಿವಾಹಕಾಲದಲ್ಲಿ ಮತ್ತೆ ಸಂತಾನ ಪಡೆದಾಗ ಕೊಟ್ಟು ತೀರಿಸಲಾಗುತ್ತದೆ. ಕನ್ಯಾಶುಲ್ಕವನ್ನು ಕೊಡಲಾಗದಿದ್ದವರು ಸಮೀಪಬಂಧುಗಳಲ್ಲಿಯೇ ವಿವಾಹವಾಗುವುದೂ ಉಂಟು.

ಭಾರತದಲ್ಲಿ ಮತ್ತು ಯುರೋಪಿನಲ್ಲಿ ಕನ್ಯಾಶುಲ್ಕಕ್ಕಿಂತಲೂ ವರದಕ್ಷಿಣೆಯೇ ಹೆಚ್ಚು ರೂಢಿಯಲ್ಲಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: