ಕಂಠೀರವ ನರಸಿಂಹರಾಜ ಒಡೆಯರ್

ಕಂಠೀರವ ನರಸಿಂಹರಾಜ ಒಡೆಯರ್ (೧೮೮೮-೧೯೪೦), ಮೈಸೂರಿನ ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರ ಎರಡನೆಯ ಮಗ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಮ್ಮ. ಮೈಸೂರಿನ ಯುವರಾಜರಾಗಿದ್ದರು.

ನರಸಿಂಹರಾಜ ಒಡೆಯರ್
GCIE, KCIE
ಮೈಸೂರು ಸಂಸ್ಥಾನದ ಯುವರಾಜ

ಕಂಠೀರವ ನರಸಿಂಹರಾಜ ಒಡೆಯರ್
ಗಂಡ/ಹೆಂಡತಿ ಕೆಂಪು ಚೆಲುವಾಜಮ್ಮಣ್ಣಿ
ಪೂರ್ಣ ಹೆಸರು
ಕಂಠೀರವ ನರಸಿಂಹರಾಜ ಒಡೆಯರ್
ಮನೆತನ ಒಡೆಯರ್
ತಂದೆ ಹತ್ತನೇ ಚಾಮರಾಜೇಂದ್ರ ಒಡೆಯರ್
ತಾಯಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ್ ಸನ್ನಿಧಾನ
ಜನನ (೧೮೮೮-೦೬-೦೫)೫ ಜೂನ್ ೧೮೮೮
ಬ್ರಿಟಿಷ್ ಭಾರತ
ಮರಣ 11 March 1940(1940-03-11) (aged 51)
ಮುಂಬೈ,ಮುಂಬೈ ಪ್ತಾಂತ್ಯ, ಬ್ರಿಟಿಷ್ ಭಾರತ

ಜನನ ಮತ್ತು ಶಿಕ್ಷಣ ಬದಲಾಯಿಸಿ

೧೮೮೮ರ ಜುಲೈ ೫ರಂದು ಇವರು ಜನಸಿದರು. ತನ್ನ ಹಿರಿಯ ಸಹೋದರನೊಂದಿಗೆ ಸರ್ ಸ್ಟ್ಯೂಯರ್ಟ್ ಫ್ರೇಸರ್ ಅವರಲ್ಲಿ ಶಿಕ್ಷಣ ಪಡೆದರು. ಪಿ.ರಾಘವೇಂದ್ರರಾವ್ ಇವರ ಇನ್ನೊಬ್ಬ ಗುರು. ರಾಜಯೋಗ್ಯವಾದ ಇತರ ವಿಷಯಗಳಲ್ಲೂ ಇವರಿಗೆ ಶಿಕ್ಷಣ ದೊರಕಿತು. ಓದಿನ ಜೊತೆಗೆ ಅಂಗಸಾಧನೆ, ಕುದುರೆ ಸವಾರಿ, ಶಿಕಾರಿ, ಕ್ರಿಕೆಟ್, ಟೆನಿಸ್, ಪೋಲೋ ಮೊದಲಾದ ಕ್ರೀಡೆಗಳಲ್ಲಿ ಒಡೆಯರಿಗೆ ವಿಶೇಷ ಆಸಕ್ತಿಯಿತ್ತು. ಚಿಕ್ಕ ವಯಸ್ಸಿನಲ್ಲೇ ರಾಜ್ಯದಲ್ಲೆಲ್ಲ ಪರ್ಯಟನ ಕೈಗೊಂಡದ್ದರಿಂದ ದೇಶದ ಸ್ಥಿತಿಯೂ ಜನಜೀವನದ ಪರಿಚಯವೂ ದೊರಕಿದ್ದುವು. ಅಣ್ಣನೊಂದಿಗೆ ಬರ್ಮದಲ್ಲಿ ಸಂಚರಿಸಿ ಬಂದರು. ೧೯೦೩ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಜ್ಮೇರ್ ನ ಮೇಯೋ ಕಾಲೇಜನ್ನು ಸೇರಿದರೂ ಅನಾರೋಗ್ಯದ ದೆಸೆಯಿಂದ ಮರು ವರ್ಷ ಮೈಸೂರಿಗೆ ಮರಳಿ ಅಲ್ಲೇ ಕ್ಯಾಪ್ಟನ್ ಆರ್.ಜೆ.ಡಬ್ಲ್ಯು. ಹೀಲ್ ಮತ್ತು ಎಂ.ಎ.ನಾರಾಯಣ ಐಯಂಗಾರ್ಯರಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು.೧೯೦೮ರಲ್ಲಿ ಕರ್ನಲ್ ಡ್ರೇಕ್ಬ್ರಾಕ್ಮನ ಜೊತೆಯಲ್ಲಿ ಕಾಶ್ಮೀರ ಪ್ರವಾಸ ಮಾಡಿದ್ದರು.

ವಿವಾಹ ಜೀವನ ಬದಲಾಯಿಸಿ

ಕಂಠೀರವ ನರಸಿಂಹರಾಜ ಒಡೆಯರ್ ಅವರ ವಿವಾಹವು ೧೯೧೦ರಲ್ಲಿ ಸರದಾರ್ ದಳವಾಯಿ ದೇವರಾಜೇ ಅರಸರ ನಾಲ್ಕನೆಯ ಮಗಳು ಕೆಂಪು ಚೆಲುವಾಜಮ್ಮಣ್ಣಿಯೊಂದಿಗೆ ನಡೆಯಿತು.ಕೃಷ್ಣರಾಜ ಒಡೆಯರ ಅನಂತರ ಮೈಸೂರು ಸಂಸ್ಥಾನದ ರಾಜರಾದ ಜಯಚಾಮರಾಜ ಒಡೆಯರ್ ಇವರ ಪುತ್ರ (ಜನನ ೧೯೧೮ರ ಜುಲೈ ೧೮).

ಕಾರ್ಯ ಚಟುವಟಿಕೆಗಳು ಬದಲಾಯಿಸಿ

ನಾಲ್ಮಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ರಾಜಸೂತ್ರ ವಹಿಸಿದಾಗ (೧೯೦೨) ಇವರು ಯುವರಾಜ ಪದವಿಯನ್ನಲಂಕರಿಸಿದರು. ೧೯೦೮-೦೯ರಲ್ಲಿ ಜಪಾನ್ ದೇಶಕ್ಕೆ ಭೇಟಿಯಿತ್ತು ಆ ದೇಶದ ತಾಂತ್ರಿಕ ಮುನ್ನಡೆಯನ್ನು ಸಂದರ್ಶಿಸಿ ಹಿಂತಿರುಗಿದರು. ೧೯೧೧ರಲ್ಲಿ ಇವರು ದೆಹಲಿಯಲ್ಲಿ ನಡೆದ ಬ್ರಿಟಿಷ್ ದೊರೆ ಐದನೇ ಜಾರ್ಜ್ ಅವರ ದರ್ಬಾರಿಗೆ ಅಣ್ಣನೊಡನೆ ಹೋಗಿದ್ದರು.[೧] ಬ್ರಿಟಿಷ್ ದೊರೆಯಿಂದ ಇವರಿಗೆ ನೈಟ್ ಕಮಾಂಡರ್ ಪ್ರಶಸ್ತಿ ದೊರಕಿತ್ತು. ೧೯೧೩ರಲ್ಲಿ ಐರೋಪ್ಯ ಪ್ರವಾಸ ಕೈಗೊಂಡು ಇಂಗ್ಲೆಂಡ್, ಫ್ರಾನ್ಸ್‌, ಸ್ವಿಟ್ಸರ್ಲೆಂಡ್ ಮತ್ತು ಬೆಲ್ಜಿಯಂ ರಾಷ್ಟ್ರಗಳನ್ನು ಸಂದರ್ಶಿಸಿದರು. ಪ್ರವಾಸದಿಂದ ಹಿಂತಿರುಗಿದ ಅನಂತರ ಇವರಿಗೆ ಮಹಾರಾಜರ ಸಚಿವ ಮಂಡಲಿಯ ವಿಶೇಷ ಸದಸ್ಯತ್ವ ದೊರಕಿತು. ಸೇನಾ ಖಾತೆಯನ್ನು ಇವರಿಗೆ ವಹಿಸಲಾಯಿತು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಸೈನ್ಯ ಸರಬರಾಜಿನ ಕಾರ್ಯವನ್ನು ಯಶಸ್ವಿಯಾಗಿ ಇವರು ನೆರವೇರಿಸಿದರು. ೧೯೧೫ರಲ್ಲಿ ಬ್ರಿಟಿಷ್ ಸರ್ಕಾರದಿಂದ ಇವರಿಗೆ ಜಿ.ಸಿ.ಐ.ಇ. ಬಿರುದೂ ೧೯೧೮ರಲ್ಲಿ ಹಿಸ್ ಹೈನೆಸ್ ಪ್ರಶಸ್ತಿಯೂ ಲಭ್ಯವಾದುವು.

ಕಂಠೀರವ ನರಸಿಂಹರಾಜ ಒಡೆಯರಿಗೆ ಸಂಸ್ಥಾನದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಕಾರ್ಯಗಳಲ್ಲಿ ವಿಶೇಷ ಆಸಕ್ತಿಯಿತ್ತು. ಇವರು ಸಂಸ್ಥಾನದ ಸ್ಕೌಟ್ ಚಳವಳಿಯ ಮುಖ್ಯರಾಗಿದ್ದುದಲ್ಲದೆ ರೆಡ್ಕ್ರಾಸ್ ಸಂಸ್ಥೆಯ ಸದಸ್ಯರಾಗಿದ್ದರು. ಗರ್ಭಿಣಿ ಮತ್ತು ಶಿಶು ಸಂರಕ್ಷಣ ಕಾರ್ಯದಲ್ಲಿ ವಿಶೇಷ ಆಸ್ಥೆ ವಹಿಸಿದ್ದು ಈ ಕ್ಷೇತ್ರದಲ್ಲಿ ಅನೇಕ ಚಿಕಿತ್ಸಾಲಯಗಳ ಸ್ಥಾಪನೆಗೆ ಕಾರಣರಾದರು. ಕಿವುಡ ಮತ್ತು ಕುರುಡರ ಶಿಕ್ಷಣಕ್ಕೆ ಇದರಿಂದ ವಿಶೇಷ ಪ್ರೋತ್ಸಾಹ ಲಭಿಸಿತು. ಸಂರಕ್ಷಣ ಕಾರ್ಯದಲ್ಲಿ ವಿಶೇಷ ಪ್ರೋತ್ಸಾಹ ಲಭಿಸಿತು. ದೀನದಲಿತರಲ್ಲಿ ಇವರು ತೋರಿಸುತ್ತಿದ್ದ ಔದಾರ್ಯ ವಿಶೇಷ. ಆ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಹಲವು ಕಡೆಗಳಲ್ಲಿ ಸ್ಥಾಪಿತವಾದ ಹರಿಜನ ವಿದ್ಯಾರ್ಥಿ ನಿಲಯಗಳಿಗೆ ಇವರಹೆಸರನ್ನಿಡಲಾಗಿದೆ. ಸಂಗೀತ ಮತ್ತು ಸಾಹಿತ್ಯದಲ್ಲಿ ಇವರಿಗೆ ಹೆಚ್ಚಿನ ಅಭಿರುಚಿಯಿತ್ತು. ಕಂಠೀರವ ನರಸಿಂಹರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ-ಅಧ್ಯಕ್ಷರೂ ಮಿಥಿಕ್ ಸೊಸೈಟಿಯ ಮುಖ್ಯ ಉಪಪೋಷಕರೂ ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.-ಛಾನ್ಸೆಲರೂ ಆಗಿದ್ದರು. ಕಂಠೀರವ ನರಸಿಂಹರಾಜ ನಾಮಾಂಕಿತ ಕಟ್ಟಡಗಳೂ ರಸ್ತೆಗಳೂ ಬಡಾವಣೆಗಳೂ ಗ್ರಾಮಗಳೂ ಹಳೆಯ ಮೈಸೂರಿನಲ್ಲಿವೆ.

ಇವರು 1940ರ ಮಾರ್ಚ್ 11ರಂದು ಮುಂಬೈಯಲ್ಲಿ ನಿಧನ ಹೊಂದಿದರು.[೨]

ಉಲ್ಲೇಖಗಳು ಬದಲಾಯಿಸಿ

  1. http://4dw.net/royalark/
  2. https://news.google.com/newspapers?id=1rE-AAAAIBAJ&sjid=QkwMAAAAIBAJ&pg=4967%2C5527931