ಒಕ್ಕಣೆ ಎಂದರೆ ಸಿಪ್ಪೆ/ಹೊಟ್ಟುಗಳು ಮತ್ತು ಹುಲ್ಲುಗಳಿಂದ (ಧಾನ್ಯವು ಅದಕ್ಕೆ ಜೋಡಣೆಗೊಂಡಿರುತ್ತದೆ) ಧಾನ್ಯದ (ಅಥವಾ ಇತರ ಬೆಳೆಯ) ತಿನ್ನಲರ್ಹ ಭಾಗವನ್ನು ಸಡಿಲಗೊಳಿಸುವ ಪ್ರಕ್ರಿಯೆ. ಧಾನ್ಯ ತಯಾರಿಕೆಯಲ್ಲಿ ಇದು ಕೊಯ್ಲಿನ ನಂತರ ಮತ್ತು ಕೇರುವಿಕೆಯ (ಇದು ಧಾನ್ಯವನ್ನು ಹೊಟ್ಟಿನಿಂದ ಪ್ರತ್ಯೇಕಿಸುತ್ತದೆ) ಮೊದಲಿನ ಹಂತ. ಒಕ್ಕಣೆಯು ಧಾನ್ಯದಿಂದ ತೌಡನ್ನು ತೆಗೆಯುವುದಿಲ್ಲ. ಒಕ್ಕಣೆ ನೆಲದ ಮೇಲೆ ಬಡಿಗೋಲನ್ನು ಬಳಸಿ ಧಾನ್ಯವನ್ನು ಹೊಡೆದು ಒಕ್ಕಣೆಯನ್ನು ಮಾಡಬಹುದು. ಗಟ್ಟಿಯಾದ ಮೇಲ್ಮೈ ಮೇಲೆ ಹರಡಿದ ಧಾನ್ಯದ ಮೇಲೆ ಕತ್ತೆಗಳು ಅಥವಾ ಎತ್ತುಗಳನ್ನು ವರ್ತುಲಾಕಾರದಲ್ಲಿ ನಡೆಸುವುದು ಒಕ್ಕಣೆಯ ಮತ್ತೊಂದು ಸಾಂಪ್ರದಾಯಿಕ ವಿಧಾನವಾಗಿದೆ. ಇದರ ಒಂದು ಆಧುನಿಕ ರೂಪಾಂತರದಲ್ಲಿ ಕೆಲವು ಪ್ರದೇಶಗಳಲ್ಲಿ ಗ್ರಾಮೀಣ ರಸ್ತೆಯ ಮೇಲ್ಮೈ ಮೇಲೆ ಧಾನ್ಯವನ್ನು ಹರಡುವುದು, ಇದರಿಂದ ಸಾಗುವ ವಾಹನಗಳ ಚಕ್ರಗಳಿಂದ ಧಾನ್ಯದ ಒಕ್ಕಣೆಯಾಗುತ್ತದೆ.[೧]

ಕೈ ಒಕ್ಕಣೆಯು ಶ್ರಮದಾಯಕವಾಗಿತ್ತು, ಮತ್ತು ಒಂದು ಬುಷಲು ಗೋಧಿ ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತಿತ್ತು. ೧೮ನೇ ಶತಮಾನದ ಕೊನೆಯ ಭಾಗದಲ್ಲಿ, ಒಕ್ಕಣೆಯು ಯಾಂತ್ರೀಕೃತವಾಗುವುದಕ್ಕೆ ಮೊದಲು, ಕೃಷಿ ಶ್ರಮದ ಸುಮಾರು ನಾಲ್ಕನೇ ಒಂದು ಭಾಗ ಇದಕ್ಕೆ ಮೀಸಲಾಗಿತ್ತು. ಒಕ್ಕಣೆಯ ಕೈಗಾರಿಕೀಕರಣವು ೧೭೮೬ರಲ್ಲಿ ಸ್ಕಾಟ್ಲಂಡ್‍ನ ಆ್ಯಂಡ್ರ್ಯೂ ಮೆಯ್ಕಲ್ ಮಾಡಿದ ಒಕ್ಕಣೆ ಯಂತ್ರದ ಆವಿಷ್ಕಾರದೊಂದಿಗೆ ಆರಂಭವಾಯಿತು. ಇಂದು, ಅಭಿವೃದ್ಧಿಹೊಂದಿದ ಪ್ರದೇಶಗಳಲ್ಲಿ, ಒಕ್ಕಣೆಯನ್ನು ಬಹುತೇಕವಾಗಿ ಯಂತ್ರದಿಂದ ಮಾಡಲಾಗುತ್ತದೆ, ಸಾಮಾನ್ಯವಾಗಿ ಸಂಯುಕ್ತ ಕಟಾವು ಯಂತ್ರ ಬಳಸಿ. ಇದು ಧಾನ್ಯವು ಗದ್ದೆಯಲ್ಲಿ ಇನ್ನೂ ಇರುವಾಗಲೇ ಅದನ್ನು ಕಟಾವು ಮಾಡಿ, ಒಕ್ಕಣೆ ಮಾಡಿ ಕೇರುತ್ತದೆ. ಧಾನ್ಯವನ್ನು ಕಣಜ ಅಥವಾ ಹಗೇವುಗಳಲ್ಲಿ ಸಂಗ್ರಹಿಸಿಡಬಹುದು.

ಸಾಂಪ್ರದಾಯಿಕವಾಗಿ ಒಕ್ಕಣೆ ಕೂಟವು ಸ್ಥಳೀಯ ಜನರು ಒಟ್ಟು ಸೇರಿ ಕೈಜೋಡಿಸಿ ಆ ವರ್ಷದ ಒಕ್ಕಣೆಯನ್ನು ಮುಗಿಸುವ ಕೂಟವಾಗಿತ್ತು. ಅಂತಹ ಕೂಟಗಳು ಕೆಲವೊಮ್ಮೆ ಹಬ್ಬಗಳು ಅಥವಾ ದೊಡ್ಡ ಸುಗ್ಗಿ ಹಬ್ಬಗಳಲ್ಲಿನ ಘಟನೆಗಳಾಗಿದ್ದವು. ಇಂದು ಅದರ ಮೂಲ ಉದ್ದೇಶವು ಹೆಚ್ಚಾಗಿ ತ್ಯಕ್ತವಾದರೂ, ಹಬ್ಬದ ಸಂಪ್ರದಾಯವು ಹಿಂದಿನದನ್ನು ಸ್ಮರಿಸುವ ಕೆಲವು ಆಧುನಿಕ ಉದಾಹರಣೆಗಳಲ್ಲಿ ಇನ್ನೂ ಉಳಿದಿದೆ. ಇದರಲ್ಲಿ ಬಯಲು ಮಾರುಕಟ್ಟೆಗಳು, ಹಂದಿ ಹಿಡಿಯುವ ಆಟಗಳು ಮತ್ತು ಕುಣಿತಗಳು ಸೇರಿವೆ.

ಉಲ್ಲೇಖಗಳು ಬದಲಾಯಿಸಿ

  1. M. Partridge, Farm Tools through the Ages (1973)
"https://kn.wikipedia.org/w/index.php?title=ಒಕ್ಕಣೆ&oldid=859344" ಇಂದ ಪಡೆಯಲ್ಪಟ್ಟಿದೆ