ಉದ್ದರಿ ಎಂದರೆ ತತ್ಕ್ಷಣದಲ್ಲಿ ಪಡೆದ ಹಣ, ಸರಕು ಅಥವಾ ಸೇವೆಗೆ ಪ್ರತಿಯಾಗಿ ಭವಿಷ್ಯದಲ್ಲಿ ಹಣದ ಅಥವಾ ಪದಾರ್ಥದ ರೂಪದಲ್ಲಿ ಪಾವತಿ ಮಾಡುವುದಾಗಿ ನೀಡಿದ ವಾಗ್ದಾನ (ಕ್ರೆಡಿಟ್). ಈ ಭರವಸೆಯ ಮೇಲೆ ಸರಕು ಮಾರುವ, ಸೇವೆ ಸಲ್ಲಿಸುವ ಅಥವಾ ಹಣವನ್ನು ಸಾಲವಾಗಿ ಕೊಡುವ ವ್ಯಕ್ತಿಯೇ ಧಣಿ ಅಥವ ಲೇಣೆದಾರ (ಕ್ರೆಡಿಟರ್). ಈತ ಹೀಗೆ ನೀಡುವ ಉದ್ದರಿ ಪಡೆಯುವಾತನೇ ಋಣಿ ಅಥವಾ ಸಾಲಗಾರ (ಡೆಟರ್). ಋಣಿ ಹೀಗೆ ಪಡೆದ ಉದ್ದರಿ ಅಥವಾ ಸಾಲದ ಮೊಬಲಗನ್ನು ಮುಂದೆ ಪಾವತಿ ಮಾಡಲು ಕಾನೂನು ಪ್ರಕಾರ ಬದ್ಧ. ಈ ಋಣ, ಸಾಲ ಅಥವಾ ಉದ್ದರಿಯ ಅವಧಿಯಲ್ಲಿ ಇದರ ಮೇಲೆ ಬಡ್ಡಿ ಪಡೆಯುವ ಹಕ್ಕು ಧಣಿಗೆ ಸಾಮಾನ್ಯವಾಗಿ ಉಂಟು. ಉದ್ದರಿಗೆ ಸಾಕ್ಷ್ಯಾಧಾರವಾಗಿ ಒಂದು ಋಣಪತ್ರ ಅಥವಾ ಉದ್ದರಿಪತ್ರ ಇರಲೇಬೇಕೆಂಬ ಕಡ್ಡಾಯವೇನೂ ಇಲ್ಲ.

ಉದ್ದರಿಯ ಉದ್ಭವಕ್ಕೆ ಕಾರಣವಾದ ವಹಿವಾಟುಗಳಿಗೆ ಅನುಗುಣವಾಗಿ ಇದನ್ನು ನಾನಾ ಬಗೆಯಾಗಿ ವಿಂಗಡಿಸುವುದು ಸಾಧ್ಯ. ಬ್ಯಾಂಕು ತನ್ನ ಠೇವಣಿದಾರರಿಗೆ ನೀಡುವ ಸಾಲವೇ ಬ್ಯಾಂಕು ಉದ್ದರಿ. ಒಂದು ಉದ್ಯಮ ಸಂಸ್ಥೆಯ ತಾತ್ಕಾಲಿಕ ಹಣದ ಅಗತ್ಯ ಪುರೈಸಲು ಅದು ಪಡೆದ ಕಿರುವಾಯಿದೆ ಸಾಲವನ್ನು ವಾಣಿಜ್ಯ ಉದ್ದರಿ ಎನುತ್ತಾರೆ. ಅನುಭೋಗ ವಸ್ತುಗಳನ್ನೂ ಸೇವೆಗಳನ್ನೂ ಕೊಳ್ಳಲೆಂದು ಅನುಭೋಗಿಗಳಿಗೆ ನೀಡಿದ್ದು ಅನುಭೋಗಿ ಉದ್ದರಿ. ಕಂತು ವಿಕ್ರಯ (ಇನ್ ಸ್ಟಾಲ್ ಮೆಂಟ್ ಸೇಲ್) ಮತ್ತು ಬಾಡಿಗೆ-ಕೊಳ್ಳಿಕೆ (ಹೈರ್-ಪರ್ಚೇಸ್) ಇನ್ನೆರಡು ಬಗೆಯ ಉದ್ದರಿ ವ್ಯವಹಾರಗಳು. (ವಿವರಗಳಿಗೆ ಆಯಾ ಶೀರ್ಷಿಕೆಗಳನ್ನು ನೋಡಿ) (ನೋಡಿ-ಕಂತು-ವಿಕ್ರಯ) (ನೋಡಿ-ಬಾಡಿಗೆ-ಕೊಳ್ಳಿಕೆ)

ಉದ್ದರಿ ನಿರ್ಮಾಣ: ಉದ್ದರಿಯ ನಿರ್ಮಾಣಕ್ಕೂ ಆರ್ಥಿಕಾಭಿವೃದ್ದಿಗೂ ನೇರವಾದ ಸಂಬಂಧವುಂಟು. ಪದಾರ್ಥೋತ್ಪಾದನೆ ಹಾಗೂ ಮಾರಾಟ ಸುಸೂತ್ರವಾಗಲು ಉದ್ದರಿಯ ಸೌಲಭ್ಯವೇ ಕೀಲೆಣ್ಣೆ. ಉದ್ದರಿಯ ಆಧಾರದ ಮೇಲೆ ನಿಜ ಬಂಡವಾಳದ ಸಂಗ್ರಹ ಹಾಗೂ ವಿಸ್ತರಣೆ ಸಾಧ್ಯ. ಉಳಿತಾಯಗಾರರಲ್ಲಿ ಸಂಗ್ರಹವಾದ ಕೊಳ್ಳುವ ಶಕ್ತಿಯನ್ನು ಬಂಡವಾಳ ನಿಯೋಜಕರಿಗೆ ವರ್ಗಾಯಿಸಲು ಇದು ಸಾಧನ. ಒಂದು ಅರ್ಥವ್ಯವಸ್ಥೆಯಲ್ಲಿ ಜಾರಿಯಲ್ಲಿರುವ ಉದ್ದರಿ ವಿಧಾನಗಳೂ ಇದನ್ನು ಎಷ್ಟರಮಟ್ಟಿಗೆ ಬಳಸಿಕೊಳ್ಳಲಾಗುತ್ತಿದೆ ಯೆಂಬುದೂ ಆ ಜನಾಂಗದ ಬೆಳೆವಣಿಗೆಗೆ ದ್ಯೋತಕ. ಮಧ್ಯಕಾಲದಲ್ಲಿ ಪ್ರಚಲಿತವಿದ್ದದ್ದು ಬಹುತೇಕವಾಗಿ ಅನುಭೋಗಿ ಉದ್ದರಿ. ಅಂತಾರರಾಷ್ಟ್ರೀಯ ವ್ಯಾಪಾರ ಬೆಳೆದಂತೆ ಕಿರುವಾಯಿದೆಯ ವಾಣಿಜ್ಯಉದ್ದರಿ ಪ್ರಮುಖವಾಯಿತು. ಇದರೊಂದಿಗೆ ನಿಡುವಾಯಿದೆಯ (ದೀರ್ಘಾವಧಿ) ಉದ್ದರಿಯೂ ಬೆಳೆದದ್ದು ಕೈಗಾರಿಕೆಕ್ರಾಂತಿ ಸಂಭವಿಸಿದ ಮೇಲೆ. ರೈಲುಮಾರ್ಗ ನಿರ್ಮಾಣವೇ ಮುಂತಾದ ಸಾರ್ವಜನಿಕೋಪಯುಕ್ತ ಕಾರ್ಯಗಳಿಗಾಗಿ ನಿಡುವಾಯಿದೆ ಋಣಪತ್ರಗಳನ್ನು ನೀಡುವ ಪದ್ಧತಿ ಬೆಳೆಯಿತು. ಕೈಗಾರಿಕೆಗಳ ತಾತ್ಕಾಲಿಕ ಅಗತ್ಯಗಳೂ ಬೆಳೆದದ್ದರಿಂದ ಕಿರುವಾಯಿದೆ ಉದ್ದರಿ ಇವಕ್ಕೆ ಅನುವಾಗಿ ಬಂತು. ಕಾರು, ರೇಡಿಯೋ, ಅಣಿಕಟ್ಟು ಮುಂತಾದ ಬಾಳಿಕೆ-ಬಳಕೆಯ (ಡ್ಯೂರಬಲ್ ಯೂಸ್) ಪದಾರ್ಥ ಕೊಳ್ಳಲಿಕ್ಕಾಗಿ ಕಂತು ಬಿಕರಿ ಹಾಗೂ ಬಾಡಿಗೆ-ಕೊಳ್ಳಿಕೆ ವಿಧಾನಗಳು ಜನಪ್ರಿಯವಾದದ್ದು 20ನೆಯ ಶತಮಾನದಲ್ಲಿ.

ಮುಂದುವರಿದ ಸಮಾಜಗಳಲ್ಲಿ ಚಲಾವಣೆಯಲ್ಲಿರುವ ಹಣದ ಬಹು ಭಾಗ ಉದ್ದರಿಪತ್ರಗಳ ರೂಪದಲ್ಲಿವೆ. ಒಂದು ದೇಶದ ಕೇಂದ್ರೀಯ ಬ್ಯಾಂಕು ನೀಡುವ ನೋಟುಗಳು ವಾಸ್ತವವಾಗಿ ಅವುಗಳಲ್ಲಿ ನಮೂದಿಸಿರುವಷ್ಟು ಹಣವನ್ನು ಅವುಗಳ ಧಾರಕರಿಗೆ ಪಾವತಿ ಮಾಡುವುದಾಗಿ ನೀಡುವ ವಚನಪತ್ರಗಳೇ. ಚೆಕ್ಕಂತೂ ಅದನ್ನು ಬರೆದಾತ ತನ್ನ ಬ್ಯಾಂಕಿಗೆ ಅಷ್ಟು ಹಣ ಕೊಡಬೇಕೆಂದು ನೀಡಿದ ಆದೇಶ. ಅದೊಂದು ಉದ್ದರಿ ವ್ಯವಹಾರ. ಬ್ಯಾಂಕಿನಲ್ಲಿ ಆ ಗ್ರಾಹಕ ಇಟ್ಟ ಠೇವಣಿಯೂ (ಡಿಪಾಸಿಟ್) ಉದ್ದರಿಯೇ. ಒಂದು ದೇಶದ ಆರ್ಥಿಕ ವ್ಯವಹಾರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅವುಗಳ ಹಿಂದೆ ಉದ್ದರಿಯ ಮಹಾ ಸೌಧವೊಂದು ನಿರ್ಮಿತವಾಗಿರುವುದು ವೇದ್ಯವಾಗುತ್ತದೆ. ಇದರದು ತಲೆಕೆಳಗಾದ ಪಿರಮಿಡ್ಡಿನ ಆಕಾರ. ಎಲ್ಲಕಿಂತ ಕೆಳಗಿನದು ಗಟ್ಟಿ ಭಾಗ. ಖಜಾನೆಯ ವಶದಲ್ಲಿರುವ ಚಿನ್ನ ಮುಂತಾದ ಅಮೂಲ್ಯ ಲೋಹಗಳೂ ವಿದೇಶೀ ಹಣವೂ ಉದ್ದರಿ ನಿರ್ಮಾಣಕ್ಕೆ ಆಧಾರ. ತನ್ನಲ್ಲಿರುವ ಚಿನ್ನದ ಕೋಶ, ವಿದೇಶೀ ವಿನಿಮಯ ಹಾಗೂ ಸರ್ಕಾರೀ ವಚನಪತ್ರಗಳ ಆಧಾರದ ಮೇಲೆ ಕೇಂದ್ರೀಯ ಬ್ಯಾಂಕು ನೋಟುಗಳನ್ನು ಚಲಾವಣೆ ಮಾಡುತ್ತದೆ. ಗ್ರಾಹಕರಿಂದ ತಮ್ಮಲ್ಲಿಗೆ ಠೇವಣಿಯ ರೂಪದಲ್ಲಿ ಬಂದ ಹಣದ ತಳಹದಿಯ ಮೇಲೆ ವಾಣಿಜ್ಯ ಬ್ಯಾಂಕುಗಳು ಉದ್ದರಿ ನಿರ್ಮಾಣಕಾರ್ಯದಲ್ಲಿ ತೊಡಗುತ್ತವೆ. ಹೀಗೆ ಕ್ರಮವಾಗಿ ಬೆಳೆಯುವ ಉದ್ದರಿಯ ಸೌಧದ ಬುಡ ಸಣ್ಣವೂ ತಲೆ ದಪ್ಪವೂ ಆಗಿರುವುದರಿಂದ ಇದನ್ನು ಹತೋಟಿಗೆ ಒಳಪಡಿಸದಿದ್ದರೆ ಕುಸಿಯಬಹುದು. ಇದರಿಂದ ಉಪಕಾರದ ಬದಲು ಅಪಾಯವೇ ಆಗುವ ಸಂಭವ ಹೆಚ್ಚು.

ಉದ್ದರಿ ನಿರ್ಮಾಣಕಾರ್ಯದಲ್ಲಿ ನಿರತವಾದ ನಾನಾ ಸಂಸ್ಥೆಗಳ ಪೈಕಿ ವಾಣಿಜ್ಯ ಬ್ಯಾಂಕುಗಳದೇ ಪ್ರಧಾನ ಪಾತ್ರ. ಇವುಗಳ ಗ್ರಾಹಕರಿಂದ ಪಡೆದ ಠೇವಣಿಯ ಹಣವೇ ಅಲ್ಲದೆ ಇವು ಸ್ವತಃ ಹಣ ನಿರ್ಮಾಣಕಾರ್ಯದಲ್ಲಿ ನಿರತವಾಗಿರುತ್ತವೆ. ಇದೆಲ್ಲ ಉದ್ದರಿ ಹಣವೇ. ಠೇವಣಿ ಪಡೆಯುವುದೂ ಸಾಲ ನೀಡುವುದೂ ಬ್ಯಾಂಕುಗಳ ಎರಡು ಪ್ರಮುಖ ಕಾರ್ಯಭಾರ. ಗ್ರಾಹಕರಿಂದ ತಾವು ಠೇವಣಿಯಾಗಿ ಪಡೆದ ಹಣವನ್ನು ಅವು ಇತರರಿಗೆ ಬಡ್ಡಿಯ ಮೇಲೆ ಸಾಲವಾಗಿ ಕೊಡುತ್ತವೆ. ತಾನು ಇಟ್ಟ ಹಣವನ್ನು ಠೇವಣಿದಾರ ತಕ್ಷಣವೇ ಹಿಂದೆ ಪಡೆಯುವುದಿಲ್ಲವೆಂದು ಬ್ಯಾಂಕಿಗಿರುವ ಭರವಸೆಯೂ ತಾನಿಟ್ಟ ಹಣವನ್ನು ತನಗೆ ಬೇಕಾದಾಗ ಪಡೆಯಬಹುದೆಂದು ಠೇವಣಿದಾರ ಬ್ಯಾಂಕಿನಲ್ಲಿಟ್ಟಿರುವ ನಂಬಿಕೆಯೂ ಬ್ಯಾಂಕು ಉದ್ದರಿ ವ್ಯವಹಾರಕ್ಕೆ ತಳಹದಿ. ಒಬ್ಬ ಠೇವಣಿದಾರ 1,000 ರೂ. ತಂದು ಬ್ಯಾಂಕಿನಲ್ಲಿಟ್ಟರೆ ಇದರಲ್ಲಿ ಸುಮಾರು ಹತ್ತನೆಯ ಒಂದು ಭಾಗವನ್ನು ಅದು ನಗದಾಗಿ ಉಳಿಸಿಕೊಂಡು ಉಳಿದ 900 ರೂ.ಗಳನ್ನು ಇತರರಿಗೆ ಸಾಲ ಕೊಡಬಹುದು. ಆದರೆ ಹೀಗೆ ಸಾಲ ಪಡೆದವರು ಹಣವನ್ನು ಬ್ಯಾಂಕಿನಿಂದ ನಗದು ರೂಪದಲ್ಲಿ ಪಡೆಯುವ ವಾಡಿಕೆಯಿಲ್ಲ. ಅವರಿಗೆ ನೀಡಿದ ಈ ಉದ್ದರಿಯ ಹಣವನ್ನು ಆ ಗ್ರಾಹಕರ ಠೇವಣಿ ಲೆಕ್ಕದಲ್ಲಿ ಜಮಾ ಮಾಡುವುದೇ ಸಾಮಾನ್ಯ. ತಮಗೆ ಬೇಕಾದಾಗ ಅವರು ಚೆಕ್ಕು ಮೂಲಕ ಈ ಹಣ ಪಡೆಯಬಹುದು. ಆದ್ದರಿಂದ ಬ್ಯಾಂಕು ಕೊಟ್ಟ ಸಾಲದ ಹಣ ಹೊರಕ್ಕೆ ಹೋದಂತಾಗುವುದಿಲ್ಲ. ಇದೇ ರೀತಿ ಬ್ಯಾಂಕು ಅನೇಕರಿಗೆ ಸಾಲ ಕೊಡಬಹುದು. ಅದು ನಗದು ಠೇವಣಿಯಾಗಿ ಪಡೆದ ಪ್ರತಿ ಹತ್ತು ರೂಪಾಯಿಗೂ ಸುಮಾರು ಒಂದು ಸಾವಿರ ರೂಪಾಯಿಯವರೆಗೆ ಠೇವಣಿ ನಿರ್ಮಿಸಬಹುದಾಗಿದೆ. ಸಾಲ ನೀಡುವುದರಿಂದಲೇ ಅಲ್ಲದೆ ಬಂಡವಾಳ ಪತ್ರಗಳನ್ನು (ಸೆಕ್ಯೂರಿಟೀಸ್) ಕೊಳ್ಳುವುದರಿಂದಲೂ ಬ್ಯಾಂಕುಗಳು ಉದ್ದರಿ ನಿರ್ಮಾಣಮಾಡಬಹುದು. ಈ ಪತ್ರಗಳನ್ನು ಮಾರಾಟ ಮಾಡಿದವರಿಗೆ ಅದು ತನ್ನ ಮೇಲೆಯೇ ಚೆಕ್ಕುಗಳನ್ನು ಬರೆದು ಕೊಟ್ಟಾಗ ಅವರು ಸಾಮಾನ್ಯವಾಗಿ ಇವನ್ನು ತಮ್ಮ ಬ್ಯಾಂಕು ಲೆಕ್ಕಕ್ಕೆ ಜಮಾ ಮಾಡುತ್ತಾರೆ. ಆಗ ಬ್ಯಾಂಕಿನಿಂದ ಹಣ ಹೋಗುವ ಬದಲು ಬ್ಯಾಂಕಿನ ಋಣ (ಉದ್ದರಿ) ಅಷ್ಟರಮಟ್ಟಿಗೆ ಹೆಚ್ಚುತ್ತದೆ. ಇಂಥ ನಾನಾ ವಹಿವಾಟುಗಳ ಫಲವಾಗಿ ಒಂದು ಅರ್ಥವ್ಯವಸ್ಥೆಯಲ್ಲಿ ಚಲಾವಣೆಗೆ ಬರುವ ಠೇವಣಿ ಹಣದ ಅಥವಾ ಉದ್ದರಿಯ ಪರಿಮಾಣ ಅಗಾಧ.

ದೇಶದಲ್ಲಿ ಆರ್ಥಿಕ ವ್ಯವಹಾರಗಳಿಗೆ ಉತ್ತೇಜಕ ಸ್ಥಿತಿಯಿದ್ದು ಹಣದ ಚಲಾವಣೆ ಪದ್ಧತಿಯಲ್ಲಿ ಜನಕ್ಕೆ ನಂಬಿಕೆಯಿದ್ದು, ಸಟ್ಟಾ ವ್ಯಾಪಾರ ಹುರುಪುಗೊಂಡು, ವಾಣಿಜ್ಯೋದ್ಯಮಗಳು ಲಾಭದಾಯಕವಾಗಿ ಪರಿಣಮಿಸಿದಾಗ ಉದ್ದರಿ ಮೊತ್ತ ಹಿಗ್ಗುವುದು ಸಾಮಾನ್ಯ. ಇವು ಪ್ರತಿಕೂಲವಾದಾಗ ಇದು ಹಿಗ್ಗುವುದು ಕಷ್ಟಸಾಧ್ಯವಷ್ಟೇ ಅಲ್ಲ, ಪ್ರತಿಯಾಗಿ ಕುಗ್ಗಲೂಬಹುದು.

ಹೀಗೆ ಸುರುಳಿ ಸುರುಳಿಯಾಗಿ ಬೆಳೆದ ಉದ್ದರಿ ಠೇವಣಿಯಿಂದ ಚೆಕ್ಕಿನ ಬಳಕೆ ಅಧಿಕವಾಗಿ ಬೆಳೆಯುವುದು. ಆದ್ದರಿಂದ ಅಧಿಕ ಪರಿಮಾಣದಲ್ಲಿ ನಾಣ್ಯವನ್ನು ಚಲಾವಣೆಗೆ ತರುವ ಅಗತ್ಯವಿರುವುದಿಲ್ಲ. ನಾಣ್ಯಚಲಾವಣೆಯ ವೆಚ್ಚದ ಮಿಗಿತಾಯವಾಗುತ್ತದೆ. ಕೈಗಾರಿಕೆ ಹೆಚ್ಚು ಹಣ ಒದಗಿಸುವುದು ಸಾಧ್ಯ. ಹುಂಡಿ, ಡ್ರಾಪ್ಟ್‌ ಮುಂತಾದ ಪತ್ರಗಳ ಮೂಲಕ ಅಂತಾರಾಷ್ಟ್ರೀಯ ಹಣಪಾವತಿ ಸಾಧ್ಯವಾಗಿ ಆ ಬಗೆಗೆ ವಿದೇಶೀ ವಿನಿಮಯ ಅಥವಾ ಬಂಗಾರದ ಸಂದಾಯ ಅತ್ಯಲ್ಪ ಪ್ರಮಾಣಕ್ಕೆ ಇಳಿಯುತ್ತದೆ. ಇವೆಲ್ಲ ಉದ್ದರಿ ನಿರ್ಮಾಣದ ಪ್ರಯೋಜನಗಳೆನ್ನಬಹುದು. ಆದರೆ ಇವುಗಳಿಂದ ವಿಕಟ ವಿಪತ್ತುಗಳು ಸಂಭವಿಸುವುದೂ ಸಾಧ್ಯ. ಆದ್ದರಿಂದ ಉದ್ದರಿ ಸೌಕರ್ಯವನ್ನು ಒಂದು ಮಿತಿಯಲ್ಲಿ ಉಪಯೋಗಿಸಬೇಕು. ಉದ್ದರಿಯ ಪ್ರಮಾಣ ಆ ಮಿತಿಯನ್ನು ಮೀರಿ ಎಷ್ಟೆಷ್ಟು ಬೆಳೆಯುತ್ತದೊ ಅಷ್ಟಷ್ಟೂ ಅಪಾಯ ಕಾರಿಯಾಗಬಲ್ಲದು. ಬೆಲೆ ಏರಿಕೆ, ವ್ಯಾಪಾರ ಕ್ಷೇತ್ರದಲ್ಲಿನ ಅನಿಶ್ಚಿತತೆ, ವ್ಯಾಪಾರ ಉಚ್ಛ್ರಾಯ ಸ್ಥಿತಿಗೇರಿತೆಂಬ ಭ್ರಾಂತಿಯ ನಿರ್ಮಾಣ-ಇವು ಅರ್ಥವ್ಯವಸ್ಥೆಯನ್ನು ಅಪಾಯದ ಅಂಚಿಗೆ ದೂಡಬಹುದು. ಅಗ್ಗವಾಗಿ ದೊರೆತ ಬ್ಯಾಂಕುಸಾಲವನ್ನು ವ್ಯಾಪಾರಿಗಳು ಅಪ್ರಯೋಜಕ ಉದ್ಯಮಗಳಲ್ಲಿ ಹೂಡಬಹುದು. ಮತ್ತೊಂದು ಕಡೆ ಸರ್ಕಾರವೂ ತಿಳಿಗೇಡಿ ವೆಚ್ಚದ ಸುಳಿಮಡುವಿನಲ್ಲಿ ಸಿಕ್ಕಿಬೀಳುವ ಅಪಾಯವುಂಟು. ಅಳಿದೇ ಹೋಗಬೇಕಾಗಿದ್ದ ಹಲವಾರು ವ್ಯಾಪಾರಿ ಸಂಸ್ಥೆಗಳು ಒಂದು ಕಡೆ ಅಗ್ಗದ ಉದ್ದರಿಯ ಸೌಕರ್ಯದಿಂದಾಗಿ ದಕ್ಷತೆಯ ಸೋಗನ್ನು ತಾಳಿಕೊಂಡು ಉಳಿದು ದೇಶದ ಆರ್ಥಿಕ ರಚನೆಗೇ ಕುಟ್ಟೆ ಹಿಡಿಸಿದರೆ, ಮತ್ತೊಂದು ಕಡೆ ತಾವೇ ಸರ್ವೇಶ್ವರರೆಂದು ವರ್ತಿಸಿ ಸಾರ್ವಜನಿಕರ ಶೋಷಣೆಯನ್ನು ನಡೆಸುವ ಏಕಸ್ವಾಮ್ಯಗಳು ಹುಟ್ಟಿಕೊಳ್ಳುತ್ತವೆ. ಉದ್ದರಿ ಸೌಲಭ್ಯದ ಬೆಳೆವಣಿಗೆ ಎಷ್ಟು ಸತ್ಫಲದಾಯಕವೊ, ಎಲ್ಲೆ ಮೀರಿದಾಗ ಅಷ್ಟೇ ಅನಿಷ್ಟಕಾರಕವೂ ಹೌದು.

ಆಧುನಿಕ ಅರ್ಥ ವ್ಯವಸ್ಥೆಯಲ್ಲಿ ಉದ್ದರಿಯ ಬಳಕೆ ಮತ್ತು ಪರಿಮಾಣ ಕೆಲವು ವೇಳೆ ಏರುತ್ತಲೂ ಕೆಲವು ವೇಳೆ ಇಳಿಯುತ್ತಲೂ ನಡೆದಿವೆ. ಪರಿಣಾಮವಾಗಿ ಅದರ ಅನಿಷ್ಟಗಳನ್ನು ಹೋಗಲಾಡಿಸಿ, ಅನುಗ್ರಹಗಳನ್ನು ಮಾತ್ರ ಅನುಭವಿಸಲು ಸಹಾಯಕವಾಗುವಂಥ ಹಂಚಿಕೆ ಗಳನ್ನು ಹಂಚಿಕೊಳ್ಳುತ್ತಲೂ ಬರಲಾಗಿದೆ. ಇದು ಕೇಂದ್ರೀಯ ಬ್ಯಾಂಕಿನ ಹೆಗಲ ಮೇಲೆ ಬಿದ್ದ ಹೊಣೆ. ಈ ಹೊಣೆ ತುಂಬ ಭಾರವಾದದ್ದು. ಬ್ಯಾಂಕು ಇಡೀ ರಾಷ್ಟ್ರದ ಆರ್ಥಿಕ ಭದ್ರತೆಯನ್ನು ನೋಡಿಕೊಳ್ಳಬೇಕು; ಹಣಕಾಸಿನ ದೃಢತೆಯನ್ನು ಕಾಯ್ದುಕೊಳ್ಳಬೇಕು; ಅಲ್ಲದೆ, ಬ್ಯಾಂಕಿಂಗ್ ವ್ಯವಸ್ಥೆಯನ್ನು ಜನತೆಗೆ ನೆಚ್ಚಿಕೆಯಾಗಿರುವಂತೆ ಇಟ್ಟುಕೊಂಡಿರಬೇಕು. ಅದರ ಈ ಜವಾಬ್ದಾರಿಗಳ ನಿರ್ವಹಣೆ ಯಶಸ್ವಿಯಾಗಬೇಕಾದರೆ ಉದ್ದರಿಯ ಪ್ರವಾಹ ಅತಿಯಾದ ಉಬ್ಬರವಿಳಿತಗಳಿಗೆ ಪಕ್ಕಾಗದಂತೆ ಅದನ್ನು ಅಂಕೆಯಲ್ಲಿ ಇಟ್ಟುಕೊಳ್ಳಬೇಕು. ಈ ಉದ್ದೇಶ ಸಾಧನೆಗಾಗಿ ಕೇಂದ್ರೀಯ ಬ್ಯಾಂಕು ಸೂಕ್ತ ನಿಯಂತ್ರಣ ಕ್ರಮಗಳನ್ನು ರೂಪಿಸಿ ಜಾರಿಗೆ ತರುವುದು ಅತ್ಯವಶ್ಯ. ಈ ಕ್ರಮಗಳು ಸರ್ಕಾರದ ನೀತಿಗೆ ಹೊಂದಿಕೊಂಡಿರಬೇಕಾದದ್ದು ಅಗತ್ಯ.

"https://kn.wikipedia.org/w/index.php?title=ಉದ್ದರಿ&oldid=848359" ಇಂದ ಪಡೆಯಲ್ಪಟ್ಟಿದೆ