ಸರೀಸೃಪವರ್ಗಕ್ಕೆ ಸೇರಿದ ಒಂದು ಜಾತಿಯ ಮೊಸಳೆ.

ಅಮೆರಿಕದ ಸಂಯುಕ್ತಸಂಸ್ಥಾನಗಳ ದಕ್ಷಿಣಭಾಗ ಮತ್ತು ಚೀನ ದೇಶಗಳಲ್ಲಿ ಜೀವಿಸುತ್ತದೆ. ತಲೆ ಅಗಲ ಮತ್ತು ಚಿಕ್ಕದಾಗಿಯೂ ಮೂತಿ ಮೊಂಡಾಗಿಯೂ ಇದೆ. ಕೆಳದವಡೆಯ ನಾಲ್ಕನೆಯ ಹಲ್ಲು ಮೇಲ್ದವಡೆಯಲ್ಲಿರುವ ಗುಳಿಯಲ್ಲಿ ಹುದುಗಿದೆ. ಆದರೆ ಇತರ ಮೊಸಳೆಗಳಲ್ಲಿ ನಾಲ್ಕನೆಯ ಹಲ್ಲು ಮೇಲ್ದವಡೆಯ ಒಂದು ಸಂದಿಯಲ್ಲಿ ಸೇರಿಕೊಂಡಿದೆ. ಉಳಿದ ಮೊಸಳೆಗಳಂತೆ ಕಾಲಿನ ಪಾದದಲ್ಲಿ ಹಲ್ಲೊಡೆದ ಅಂಚು ಇರುವುದಿಲ್ಲ; ಜಲಪಾದ ಕಾಲು ಬೆರಳುಗಳ ತುದಿಯವರೆಗೂ ಆವರಿಸಿರುವುದಿಲ್ಲ.

ಅಲಿಗೇಟರುಗಳು ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿರುವ ತ್ಯೆಮಾನ್ಗಳನ್ನು ಕೆಲವು ವಿಧಗಳಲ್ಲಿ ಹೋಲುತ್ತವೆ. ಇವು ಸಾಮಾನ್ಯವಾಗಿ ಅಪಾಯಕಾರಿ ಪ್ರಾಣಿಗಳು. ಬಲಿತ ದೊಡ್ಡದಾದ ಅಲಿಗೇಟರುಗಳು ಮಕ್ಕಳನ್ನು ಹಿಡಿದು ಕೊಂದುಹಾಕಿದ್ದೂ ಉಂಟು. ಆದರೆ ಈಗ 7 ಅಡಿಗಿಂತ ಉದ್ದದ ಅಲಿಗೇಟರುಗಳು ಅತಿ ವಿರಳ. ಇದರ ಮಾಂಸವನ್ನು ತಿನ್ನುವುದಕ್ಕೂ ಚರ್ಮವನ್ನು ಸೊಂಟಪಟ್ಟಿ, ಕೈಚೀಲ ತಯಾರಿಸುವುದಕ್ಕೂ ಉಪಯೋಗಿಸುತ್ತಾರೆ.

ಅಲಿಗೇಟರ್ ಮರಳಲ್ಲಿ ಮೊಟ್ಟೆ ಇಡುತ್ತದೆ. ಸುಮಾರು 3 ತಿಂಗಳು ಕಾವು ಕೂತಮೇಲೆ ಮೊಟ್ಟೆ ಒಡೆದು ಮರಿ ಹೊರಬರುವುದು. ಮೀನು, ಟರ್ಟಲ್ ಮುಂತಾದ ಶತ್ರುಗಳಿಂದ ಮರಿಗಳನ್ನು ಕಾಪಾಡಲು ತಾಯಿ ಮುತುವರ್ಜಿ ವಹಿಸುತ್ತದೆ. ಆ್ಯಲಿಗೇಟರ್ ನೀರಿನಲ್ಲಿ ಈಜುವಾಗ ಅದರ ಬಾಲದ ಚಲನೆಯಿಂದ ಶಬ್ದವಾಗುತ್ತದೆ.

ಪ್ರಭೇದಗಳು ಬದಲಾಯಿಸಿ

 
ಅಲಿಗೇಟರ್ ಮೊಸಳೆ

ಅಲಿಗೇಟರ್ ಮೊಸಳೆಗಳಲ್ಲಿ ಎರಡು ಪ್ರಭೇದಗಳು :

  1. ಉತ್ತರ ಅಮೆರಿಕದ ದಕ್ಷಿಣ ಭಾಗದಲ್ಲಿರುವ ಮಿಸಿಸಿಪ್ಪಿಯ ಆ್ಯಲಿಗೇಟರ್
  2. ಚೀನ ದೇಶದ ಯಾಂಗ್ಟ್ ಜಿಕಿಯಾಂಗ್ ಭಾಗದಲ್ಲಿರುವ ಸೈನೆಸಿಸ್ ಆ್ಯಲಿಗೇಟರ್.