ಅಭಿಧಮ್ಮ ಬೌದ್ಧ ಧರ್ಮದ ಪ್ರಕ್ರಿಯೆಯಲ್ಲಿ ಜಿಜ್ಞಾಸೆಯ ಆಳವಾದ ಪ್ರಕಾರಕ್ಕೆ ಈ ಹೆಸರಿದೆ (ಅಭಿಧರ್ಮ). ತ್ರಿಪಿಟಕಗಳಲ್ಲಿ ಇದೂ ಒಂದು (ವಿನಯ, ಸುತ್ತ, ಅಭಿಧಮ್ಮ).

ಧರ್ಮಸ್ಕಂಧ ಬದಲಾಯಿಸಿ

ಪಿಟಕಗಳಲ್ಲಿ ಮೊದಲನೆಯದು ಭಿಕ್ಷುಗಳ ನಡೆವಳಿಕೆಗೆ ಸಂಬಂಧಿಸಿದುದೆಂದೂ ಎರಡನೆಯದು ಎಲ್ಲರಿಗೂ ಅಗತ್ಯವಾದ ಸಾಮಾನ್ಯ ಧರ್ಮವೆಂದೂ ಮೂರನೆಯದು ಕುತೂಹಲಿಗಳಿಗೆ ಮಾತ್ರ ಉಪಯುಕ್ತವಾದ ಹೆಚ್ಚಿನ ತತ್ತ್ವಗಳೆಂದೂ ಸ್ಥೂಲವಾಗಿ ನಿರ್ದೇಶಿಸಬಹುದು. ಬೌದ್ಧರಲ್ಲಿ ಧರ್ಮವೆಂಬ ಪದಕ್ಕೆ ಹಲವಾರು ಅರ್ಥಗಳು ಪ್ರಚಲಿತವಾಗಿವೆ. ಸಾಮಾನ್ಯವಾದ ಆಗುಹೋಗುಗಳಿಗೆ ಧರ್ಮವೆಂದು ಹೆಸರು (ಯೇ ಧರ್ಮಾ ಹೇತು ಪ್ರಭವಾ..... ಇತ್ಯಾದಿ). ಯೋಗ್ಯವಾದ ನಡೆವಳಿಕೆಯೂ ಧರ್ಮವೇ (ಏನ ಧಮ್ಮೋ ಸನಂತನೋ). ಜಗತ್ತಿನ ವ್ಯಾಪಾರಕ್ಕೆ ಮೂಲಭೂತವಾದ ಸೂಕ್ಷ್ಮಪ್ರವೃತ್ತಿಗಳು ಧರ್ಮ (ಧರ್ಮಸಮುದಾಯ). ಬುದ್ಧ ಮಾಡಿದ ಉಪದೇಶವೂ ಧರ್ಮವೆನಿಸಿಕೊಳ್ಳುತ್ತದೆ (ಬುದ್ಧ ಧರ್ಮ). ಈ ಉಪದೇಶಗಳ ಸಮಷ್ಟಿಯೂ ಧರ್ಮ (ಧರ್ಮಸ್ಕಂಧ). ಸಾಮಾನ್ಯವಾಗಿ ಬುದ್ಧನ ದೇಶನವನ್ನು ಧರ್ಮವೆಂದು ಹೇಳುತ್ತಾರೆ. ಅಭಿ ಎಂಬ ಪದಕ್ಕೆ ಹೆಚ್ಚಿನದು, ಮೀರಿದುದು. ವಿಶಿಷ್ಟವಾದುದು ಎಂಬ ಅರ್ಥವಿದೆ. ಧರ್ಮಕ್ಕೆ ಸಂಬಂಧಿಸಿದುದು ಅಭಿಧರ್ಮ ಎಂಬುದೂ ಸಮಂಜಸವೇ. ಸುತ್ತಪಿಟಕಕ್ಕೆ ವಸ್ತುವಾದ ಧರ್ಮಗಳಲ್ಲಿ ಮೂಲಭೂತವಾಗಿ ಅಂತರ್ಗತವಾದ ತತ್ತ್ವವಿವೇಚನೆಯೇ ಅಭಿಧರ್ಮವೆಂದು ಸಾಂಪ್ರದಾಯಿಕವಾದ ನಿರೂಪಣೆ.[೧]

ಬೋಧನೆ ಬದಲಾಯಿಸಿ

ಶಾಕ್ಯಮುನಿ ಬುದ್ಧನಾದ ಮೇಲೆ ಸಂಬೋಧಿ ಒದಗಿದ ನಾಲ್ಕನೆಯ ವಾರದಲ್ಲಿ ಅಭಿಧರ್ಮವನ್ನು ಸ್ವೋಪಜ್ಞೆಯಿಂದ ಗ್ರಹಿಸಿದನೆಂದು ಸಂಪ್ರದಾಯ ಹೇಳುತ್ತದೆ. ತಾವತಿಂಸವೆಂಬ ಸ್ವರ್ಗದಲ್ಲಿ ಇದ್ದ ತನ್ನ ತಾಯಿಗೆ ಮೂರು ತಿಂಗಳ ಕಾಲ ಅಭಿಧರ್ಮವನ್ನು ಬೋಧಿಸಿದನೆಂದೂ ಸಂಪ್ರದಾಯದ ನಂಬಿಕೆ. ಆದರೆ ಅಭಿಧರ್ಮ ಬುದ್ಧ ವಚನದಲ್ಲಿಲ್ಲ. ಬುದ್ಧನ ಅನಂತರ ಬಂದ ದಾರ್ಶನಿಕರು ಬುದ್ಧವಚನಗಳಲ್ಲಿ ಅಡಗಿದ್ದ ತತ್ತ್ವಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ವಿನಯಪಿಟಕ ಸುತ್ತ ಪಿಟಕದಷ್ಟು ಅಭಿಧರ್ಮಪಿಟಕ ಪ್ರಾಚೀನವಲ್ಲವೆಂದು ಶೈಲಿಯಿಂದಲೂ ವಾಙ್ಮಯದಿಂದಲೂ ಸಂದರ್ಭಕಥನದಿಂದಲೂ ಸ್ಪಷ್ಟವಾಗುತ್ತದೆ. ಸಂಪ್ರದಾಯದಲ್ಲೇ ಒಂದು ವಿವರಣೆಯಿದೆ. ಅಭಿಧರ್ಮವನ್ನು ಬುದ್ಧ ತನ್ನ ಪ್ರೌಢಶಿಪ್ಯನಾದ ಶಾರಿಪುತ್ರನಿಗೆ ಮಾತೃಕೆಗಳಲ್ಲಿ ಸೂಕ್ಷ್ಮವಾಗಿ ಬೋಧಿಸಿದನೆಂದೂ ಸಮುದ್ರದ ಅಂಚಿನಲ್ಲಿ ನಿಂತು ಸಮುದ್ರದೆಡೆ ಕೈತೋರಿಸಿದಂತೆ ಶಾರಿಪುತ್ರ ತನ್ನ ಐನೂರು ಶಿಷ್ಯರಿಗೆ ಬೋಧಿಸಿದನೆಂದೂ ಅಟ್ಠಸಾಲಿನಿಯಲ್ಲಿ ಬರುವ ನಿರೂಪಣೆ. ಈ ಕಾರ್ಯದಲ್ಲಿ ಅವನ ಸತೀರ್ಥನಾಗಿದ್ದ ಮಹಾಕೊಟ್ಠಿತ ನೆರವಾದನಂತೆ. ಅಭಿಧಮ್ಮದ ಸಂಗ್ರಹಕಾರ್ಯ ಶಾರಿಪುತ್ರನಿಂದ ಆಯಿತೆಂದು ವ್ಯಾಖ್ಯಾನಕಾರನಾದ ಬುದ್ಧ ಘೋಷಾಚಾರ್ಯ ಒಪ್ಪುತ್ತಾನೆ; ಅಭಿಧರ್ಮಪಿಟಕದ ವಾಙ್ಮಯದಲ್ಲಿ ಏಳು ಪ್ರಕರಣ ಗ್ರಂಥಗಳಿವೆ. ಧರ್ಮಸಂಗಣಿ, ವಿಭಂಗ, ಧಾತುಕಥಾ, ಪುಗ್ಗಲಪಙÐತ್ತಿ, ಕಥಾಮತ್ಥು, ಯಮಕ ಮತ್ತು ಪಟ್ಠಾನ-ಇವೇ ಆ ಏಳು.[೨]

ವ್ಯಾಖ್ಯಾನ ಬದಲಾಯಿಸಿ

ಈ ಗ್ರಂಥಗಳಲ್ಲದೆ ಪಿಟಕೇತರ ವಾಙ್ಮಯದಲ್ಲಿ ಮಿಳಿಂದ ಪ್ರಶ್ಮೆಯೆಂಬ ಉದ್ಗ್ರಂಥ ಅಭಿಧರ್ಮವನ್ನು ಕುರಿತದ್ದು. ಗಂಧಾರ ದೇಶದಲ್ಲಿ ಕ್ರಿಸ್ತಾಬ್ದ ಮೊದಲನೆಯ ಶತಮಾನದ ಸುಮಾರಿಗೆ ರಾಜನಾಗಿದ್ದ ಮಿನಾನ್ದ್ರೊಸ್ (ಪಾಳಿಯಲ್ಲಿ ಮಿಳಿಂದ) ಎಂದು ಗ್ರೀಕ್ ಜನಾಂಗದ ಜಿಜ್ಞಾಸುವೊಬ್ಬ ಬೌದ್ಧಭಿಕ್ಷುವಾಗಿದ್ದ ನಾಗಸೇನನೆಂಬ ಪ್ರತಿಭಾಸಂಪನ್ನನೊಂದಿಗೆ ನಡೆಸಿದ ಸಂವಾದಗಳ ಸಂಗ್ರಹವೇ ಈ ಗ್ರಂಥ. ಬುದ್ಧಘೋಷನ ವಿಶುದ್ಧಿ ಮಗ್ಗ ಮತ್ತೊಂದು ಮೈಲಿಗಲ್ಲು. ಕ್ರಿಸ್ತಾಬ್ದ ನಾಲ್ಕನೆಯ ಶತಮಾನದಲ್ಲಿದ್ದ ಈತ ಬೋಧಿಮಂಡದ ಸಮೀಪದಲ್ಲಿ ಹುಟ್ಟಿಬೆಳೆದು ಸಿಂಹಳದಲ್ಲಿ ಅನುರಾಧಪುರದ ಮಹಾವಿಹಾರಕ್ಕೆ ಹೋಗಿ ಅಲ್ಲಿ ವಿಶುದ್ಧಿ ಮಗ್ಗವನ್ನೂ ಅಟ್ಠ ಕಥೆಗಳನ್ನೂ ಬರೆದ. ಇಡೀ ಅಭಿಧರ್ಮಪಿಟಕಕ್ಕೆ ಸಮಷ್ಟಿಯಾಗಿ ಪರಮತ್ಥ ಕಥಾ ಎಂಬ ಹೆಸರಿನಿಂದ ವ್ಯಾಖ್ಯಾನವೊಂದನ್ನೂ ಧರ್ಮಸಂಗಣಿಗೆ ಪ್ರತ್ಯೇಕವಾಗಿ ಅಟ್ಠಸಾಲಿನಿ ಎಂಬ ವ್ಯಾಖ್ಯಾನವನ್ನೂ ವಿಭಂಗಕ್ಕೆ ಸಮ್ಮೋಹವಿನೋದಿನೀ ಎಂಬ ವ್ಯಾಖ್ಯಾನವನ್ನೂ ಈತ ಬರೆದಿದ್ದಾನೆ. ಇವನ ಸಮಸಾಮಯಿಕನಾದ ಕಾಂಚೀಪುರದ ಬುದ್ಧದತ್ತ ಅಭಿಧರ್ಮಾವತಾರ, ರೂಪಾರೂಪವಿಭಾಗ ಎಂಬ ಎರಡು ಶ್ರೇಷ್ಠಗ್ರಂಥಗಳಿಗೆ ಕರ್ತೃ. ಹನ್ನೆರಡನೆಯ ಶತಮಾನದಲ್ಲಿ ತಂಜಾವೂರಿನವನಾದ ಅನುರುದ್ಧನೆಂಬ ಭಿಕ್ಷು ಅಭಿಧರ್ಮತ್ಥ ಸಂಗ್ರಹವೆಂಬ ಗ್ರಂಥವನ್ನು ನಿರ್ಮಿಸಿದ್ದಾನೆ. ಇದು ಥೇರವಾದದ ಬೌದ್ಧರಲ್ಲಿ ತುಂಬ ಪ್ರಚಲಿತವಾದ ಪ್ರಕರಣಗ್ರಂಥ. ಸಿಂಹಳದಲ್ಲೂ ಬರ್ಮದಲ್ಲೂ ಇದಕ್ಕೆ ಹಲವಾರು ಟೀಕೆಗಳು ಕಾಣಿಸಿಕೊಂಡಿವೆ. ಇವುಗಳಲ್ಲಿ ಸುಮಂಗಲ ಥೇರನೆಂಬ ಸಿಂಹಳದ ಭಿಕ್ಷು ಬರೆದ ವಿಭಾವಿನೀ ಟೀಕೆ ಪ್ರಸಿದ್ಧವಾದುದು. ಅನುರುದ್ಧನೇ ಬರೆದ ಇನ್ನೊಂದು ಅಭಿಧಮ್ಮದ ಗ್ರಂಥವೆಂದರೆ ನಾಮರೂಪ ಪರಿಚ್ಛೇದ.[೩]

ನಿರೂಪಣೆ ಬದಲಾಯಿಸಿ

ಧರ್ಮವೆಂದರೆ ದೇಶನವೆಂದೂ ಉಪದೇಶವೆಂದೂ ಅರ್ಥ ಹೇಳಿ ಅಭಿಧರ್ಮವನ್ನು ವೈಯಾಕರಣ (ವ್ಯಾಕರಣ-ತಾತ್ಪರ್ಯ ನಿರೂಪಣೆ, ವಿವರಣೆ) ಎನ್ನುತ್ತಾರೆ. ಎಂದರೆ ಬುದ್ಧನ ಮಾತುಗಳನ್ನು ಎತ್ತಿಕೊಂಡು ಅವುಗಳಿಗೆ ಸಮಾನ ಪದಗಳನ್ನು ಹೇಳಿ ಅರ್ಥವನ್ನು ವ್ಯುತ್ಪತ್ತಿಯಿಂದ ನಿರೂಪಿಸಿ, ಸಂದರ್ಭಕ್ಕೆ ಸರಿಯಾದ ಅರ್ಥವನ್ನು ಅಳವಡಿಸುವುದೇ ಅಭಿಧರ್ಮದ ಪದ್ಧತಿ. ನಿದರ್ಶನಕ್ಕೆ ಧರ್ಮಸಂಗಣಿಯಲ್ಲಿ ಪ್ರಸ್ತಾಪಿಸಿರುವ ಎಲ್ಲ ವಸ್ತುವನ್ನು ಹದಿನೈದು ಪರಿಚ್ಛೇದಗಳಲ್ಲಿ 220 ಪ್ರಸಂಗಗಳಾಗಿ ಅವಕ್ಕೆ ಮಾತೃಕೆಯ ರೂಪಕೊಟ್ಟಿದ್ದಾರೆ. ಅನಂತರ ಒಂದೊಂದು ಅಧಿಕರಣವನ್ನೂ ಕೂಲಂಕಷವಾಗಿ ವ್ಯುತ್ಪತ್ತಿ, ವಿವರಣೆ, ವಿಭಜನೆಗಳ ಮೂಲಕ ನಿರೂಪಿಸಿದ್ದಾರೆ. ಹೀಗೆ ಮಾಡುವಾಗ ಪ್ರಶ್ನೆ (ಪುಚ್ಚಾ), ಸಂದರ್ಭ ನಿರುಪಣೆ (ಸಮಯನಿದ್ದೇಸ), ತತ್ತ್ವಸಂಖ್ಯಾನ, (ಧಮ್ಮುದ್ದೇಸ) ಮತ್ತು ಸಮಾಸಕಥನ (ಅಪ್ಪನಾ)-ಈ ರೀತಿಯನ್ನು ಅನುಸರಿಸಿದ್ದಾರೆ. ಹೀಗೆ ಮಾನಸಿಕ ವ್ಯಾಪಾರಗಳು, ಪುದ್ಗಲ, ಸ್ಕಂಧಗಳು, ಭವಂಗ, ಆತ್ಮಭಾವ, ಆಯತನ, ವಿಜ್ಞಾನ, ಧಾತುಕಥೆ, ಆಲಂಬನ, ತದಾಲಂಬನ (ಪ್ರತ್ಯಕ್ಷ), ಚರಿತ, ನಿರ್ವಾಣ ಮುಂತಾದ ಗಹನವಿಚಾರಗಳನ್ನು ಖಚಿತವಾಗಿ, ತರ್ಕಬದ್ಧವಾಗಿ, ಪಿಟಕಪುಷ್ಟವಾಗಿ ವಿವರಿಸಿದ್ದಾರೆ. ಈ ಸಂಪ್ರದಾಯದಿಂದ ಬೌದ್ಧ ದರ್ಶನಕ್ಕೆ ಗಾಢವಾದ ಬೌದ್ಧಿಕ ಕಳೆ ಒದಗಿದೆ.[೪]

ಪ್ರಖ್ಯಾತಿ ಬದಲಾಯಿಸಿ

ಥೇರವಾದದವರಂತೆ ಮಹಾಯಾನದವರೂ ಅಭಿಧರ್ಮವನ್ನು ಎತ್ತಿಹಿಡಿದಿದ್ದಾರೆ. ಮಹಾಯಾನದ ಉಗಮವಾಗುವಲ್ಲೇ ಕ್ರಿಸ್ತಾಬ್ದ ಮೊದಲ ಮತ್ತು ಎರಡನೆಯ ಶತಕಗಳಲ್ಲಿ ಅಸಂಗನೆಂಬ ಪುರುಷಪುರದ ಬ್ರಾಹ್ಮಣ ಭಿಕ್ಷು ಯೋಗಾಚಾರ (ಅಥವಾ ಯೋಗಚರ್ಯಾ) ಎಂಬ ವಿಜ್ಞಾನವಾದದ ಪ್ರಕಾರವೊಂದನ್ನು ನಿರೂಪಿಸಿದ. ಪಂಚಭೂಮಿ, ಅಭಿಧರ್ಮಸಮುಚ್ಛಯ, ಮಹಾಯಾನಸಂಗ್ರಹ ಎಂಬ ಮೂರು ಗ್ರಂಥಗಳನ್ನು ಆತ ಬರೆದಿದ್ದಾನೆಂದು ಟಿಬೆಟನ್ ಭಾಷೆಯ ಬು-ಸ್ಟೋನ್ ಹೇಳುತ್ತದೆ. ಇವುಗಳನ್ನು ಮೊದಲನೆಯದನ್ನು ರಾಹುಲಸಾಂಕೃತ್ಯಾಯನವರು ಟಿಬೆಟ್ಟಿನ ಸ-ಸ್ಕ್ಯಮಠದ ತಾಳಪತ್ರ ಸಂಗ್ರಹದಿಂದ ಸಂಶೋಧಿಸಿದ್ದಾರೆ. ಇದರಲ್ಲಿ ಪುದ್ಗಲ ಮತ್ತು ಆಲಂಬನಗಳ ವಿಚಾರವಾಗಿ ಸುದೀರ್ಘ ವಿವರಣೆಯಿದೆ. ಎರಡನೆಯದನ್ನು ಹುಯೆನ್ ತ್ಸಾಂಗ್ ಚೀಣೀ ಭಾಷೆಗೆ ಪರಿವರ್ತಿಸಿದ್ದಾನೆ. ಇದರಲ್ಲಿ ಪ್ರತೀತ್ಯಸಮುತ್ಪಾದ, ಸಂಜ್ಞಾ-ಸಂಸ್ಕಾರ ಸ್ಕಂಧಗಳು, ವಿಜ್ಞಾನ ಇವುಗಳನ್ನು ಕುರಿತು ಪ್ರೌಢವಿವೇಚನೆಯಿದೆ. ಅಸಂಗನ ತಮ್ಮನೆಂದು ಪ್ರಸಿದ್ಧನಾದ ವಸುಬಂಧುವಿನ ಅಭಿಧರ್ಮಕೋಶ ಹೀನಯಾನ-ಸರ್ವಾನ್ತಿವಾದಿಗಳ ಪಕ್ಷವನ್ನು ಹಿಡಿದು ಬರೆದುದಾದರೂ ಮಹಾಯಾನದ ಅಭಿಧರ್ಮ ಸಂಪ್ರದಾಯದಲ್ಲಿ ಇದೊಂದು ಮೈಲಿಗಲ್ಲು. ವಸುಬಂಧುವಿನ ಶಿಷ್ಯನಾದ ದಿಙïನಾಗತರ್ಕ, ನ್ಯಾಯಶಾಸ್ತ್ರಗಳ ವಿಶೇಷ ಪರಿಶ್ರಮದಿಂದ ಮಹಾಯಾನದ ಅಭಿಧರ್ಮ ಸಂಪ್ರದಾಯವನ್ನು ಸುದೃಢವನ್ನಾಗಿ ಮಾಡಿದ. ಕ್ರಿಸ್ತಾಬ್ದ 600ರ ಸುಮಾರಿಗೆ ನಳಂದ ವಿದ್ಯಾಲಯದ ಅಧಿಪತಿಯಾಗಿದ್ದ ಧರ್ಮಪಾಲ ವಸುಬಂಧುವಿನ ಪಾದಗಳನ್ನು ಪುಷ್ಟಿಗೊಳಿಸಿ ವಿಜ್ಞಪ್ತಿ ಮಾತ್ರತಾಸಿದ್ಧ ವಾಖ್ಯೆಯನ್ನು ರಚಿಸಿದ. ಈ ಧರ್ಮಪಾಲನನ್ನು ಹುಯೆನ್ ತ್ಸಾಂಗ್ ಬೋಧಿಸತ್ವನೆಂದು ಕರೆದಿದ್ದಾನೆ. ಧರ್ಮಪಾಲನ ಶಿಷ್ಯನಾಗಿದ್ದ ಧರ್ಮಕೀರ್ತಿ (625) ಪ್ರಮಾಣವಾರ್ತಿಕವನ್ನು ರಚಿಸಿ ಮಹಾಯಾನಶಾಸ್ತ್ರವನ್ನು ಊರ್ಜಿತಗೊಳಿಸಿದ. ಅಭಿಧರ್ಮಪದ್ಧತಿಯ ವಸ್ತುವಿನ್ಯಾಸ ಈ ಕಾಲದಲ್ಲಿ ವೇದಾಂತದ ಪ್ರಕ್ರಿಯೆಯನ್ನು ಸ್ಪಷ್ಟಗೊಳಿಸಿತು[೫]

ಉಲ್ಲೇಖಗಳು ಬದಲಾಯಿಸಿ

  1. https://accesstoinsight.org/tipitaka/abhi/index.html
  2. https://www.budsas.org/ebud/whatbudbeliev/67.htm
  3. https://plato.stanford.edu/entries/abhidharma/
  4. http://www.abhidhamma.com/Abhid-Lectures-3.pdf
  5. "ಆರ್ಕೈವ್ ನಕಲು". Archived from the original on 2020-01-11. Retrieved 2020-01-11.
"https://kn.wikipedia.org/w/index.php?title=ಅಭಿಧಮ್ಮ&oldid=1162698" ಇಂದ ಪಡೆಯಲ್ಪಟ್ಟಿದೆ