ಅಫೀಮು

ಅಫೀಮು ಗಸಗಸೆ ಗಿಡದಿಂದ ಪಡೆದ ಒಣಗಿಸಿದ ಸಸ್ಯಕ್ಷೀರ

ಅಫೀಮು ಗಸಗಸೆ ಗಿಡದಿಂದ ಪಡೆದ ಒಣಗಿಸಿದ ಸಸ್ಯಕ್ಷೀರ.[೧] ಅಫೀಮು ಸಸ್ಯಕ್ಷೀರ ಸುಮಾರು ಶೇಕಡ ೧೨ರಷ್ಟು ನೋವು ನಿವಾರಕ ಕ್ಷಾರಾಭ ಮಾರ್ಫ಼ೀನ್‍ನ್ನು ಹೊಂದಿರುತ್ತದೆ. ಔಷಧೀಯ ಬಳಕೆ ಮತ್ತು ಅಕ್ರಮ ಮಾದಕದ್ರವ್ಯ ವ್ಯಾಪಾರಕ್ಕಾಗಿ ಇದನ್ನು ರಾಸಾಯನಿಕವಾಗಿ ಸಂಸ್ಕರಿಸಿ ಬ್ರೌನ್ ಶುಗರ್ ಮತ್ತು ಇತರ ಸಂಶ್ಲೇಷಿತ ಓಪಿಯಾಯ್ಡ್‌ಗಳನ್ನು ಉತ್ಪಾದಿಸಲಾಗುತ್ತದೆ. ಸಸ್ಯಕ್ಷೀರವು ನಿಕಟವಾಗಿ ಸಂಬಂಧಿಸಿದ ಓಪಿಯೇಟ್‍ಗಳಾದ ಕೋಡೀನ್ ಮತ್ತು ಥೆಬೇಯ್ನ್, ಮತ್ತು ಪ್ಯಾಪವೆರಿನ್ ಹಾಗೂ ನೋಸ್ಕೆಪೈನ್‍ನಂತಹ ನೋವುನಿವಾರಕವಲ್ಲದ ಕ್ಷಾರಾಭಗಳನ್ನೂ ಹೊಂದಿರುತ್ತದೆ. ಅಪಕ್ವ ಬೀಜಕೋಶಗಳನ್ನು ಕೈಗಳಿಂದ ಕೆರೆದು ಸಸ್ಯಕ್ಷೀರವನ್ನು ಪಡೆಯುವುದು ಸಾಂಪ್ರದಾಯಿಕ, ಶ್ರಮಿಕ ಪ್ರಧಾನ ವಿಧಾನವಾಗಿದೆ. ಹೀಗೆ ಮಾಡುವುದರಿಂದ ಸಸ್ಯಕ್ಷೀರವು ಜಿನುಗಿ ಒಣಗಿದಾಗ ಅಂಟಂಟಾಗಿರುವ ಹಳದಿ ಶೇಷ ಸಿಗುತ್ತದೆ ಮತ್ತು ಇದನ್ನು ನಂತರ ಹೆರೆದು ನಿರ್ಜಲೀಕರಿಸಲಾಗುತ್ತದೆ. ಅಫೀಮಿನ ಉತ್ಪಾದನೆ ಪ್ರಾಚೀನ ಕಾಲದಿಂದ ಬದಲಾಗಿಲ್ಲ. ಗಸಗಸೆ ಗಿಡದ ಆಯ್ದ ತಳಿಗಳ ಮೂಲಕ, ಫ಼ನ್ಯಾಂಥರೀನ್ ಕ್ಷಾರಾಭಗಳಾದ ಮಾರ್ಫೀನ್, ಕೋಡೀನ್, ಥೆಬೇಯ್ನ್‌ಗಳ ಪ್ರಮಾಣವನ್ನು ಬಹಳವಾಗಿ ಹೆಚ್ಚಿಸಲಾಗಿದೆ.

ಗಸಗಸೆ ಬೀಜದ ಕೋಶವು ಒಂದು ಕಚ್ಚಿನಿಂದ ಸಸ್ಯಕ್ಷೀರವನ್ನು ಸ್ರವಿಸುತ್ತಿದೆ

ಅಕ್ರಮ ಮಾದಕದ್ರವ್ಯ ವ್ಯಾಪಾರಕ್ಕಾಗಿ, ಅಫೀಮಿನಿಂದ ಮಾರ್ಫೀನನ್ನು ಹೊರತೆಗೆಯಲಾಗುತ್ತದೆ. ಇದರಿಂದ ಒಟ್ಟು ತೂಕ ಶೇಕಡ ೮೮ರಷ್ಟು ಕಡಿಮೆಯಾಗುತ್ತದೆ. ನಂತರ ಇದನ್ನು ಬ್ರೌನ್ ಶುಗರ್ ಆಗಿ ಪರಿವರ್ತಿಸಲಾಗುತ್ತದೆ. ಇದು ಎರಡರಿಂದ ನಾಲ್ಕು ಪಟ್ಟು ಪ್ರಬಲವಾಗಿರುತ್ತದೆ, ಮತ್ತು ಮೌಲ್ಯವನ್ನು ಎರಡರಿಂದ ನಾಲ್ಕು ಪಟ್ಟು ಹೆಚ್ಚಿಸುತ್ತದೆ. ಕಡಿಮೆಯಾದ ತೂಕ ಮತ್ತು ಗಾತ್ರ ಕಳ್ಳಸಾಗಣೆ ಮಾಡಲು ಸುಲಭವಾಗಿಸುತ್ತದೆ.

ಭಾರತದಲ್ಲಿ ಅಫೀಮಿನ ಕಾನೂನುಬದ್ಧ ಉತ್ಪಾದನೆಯು ಹೆಚ್ಚು ಪಾರಂಪರಿಕವಾಗಿದೆ. ೨೦೦೮ರ ವೇಳೆಗೆ, ಅಫೀಮನ್ನು ರೈತರಿಂದ ಸಂಗ್ರಹಿಸಲಾಗುತ್ತಿತ್ತು. ಈ ರೈತರು ೦.೧ ಹೆಕ್ಟೇರ್ ಗಸಗಸೆ ಗಿಡಗಳನ್ನು ಬೆಳೆಸಲು ಪರವಾನಗಿ ಪಡೆದಿರುತ್ತಾರೆ ಮತ್ತು ಪರವಾನಗಿಯನ್ನು ಕಾಪಾಡಿಕೊಳ್ಳಲು ೫೬ ಕೆ.ಜಿ ಯಷ್ಟು ಕಲಬೆರಕೆಯಿಲ್ಲದ ಕಚ್ಚಾ ಅಫೀಮು ಪೇಸ್ಟ್ ಅನ್ನು ಮಾರಾಟ ಮಾಡಬೇಕು. ಪಡೆದ ಅಫೀಮು ಪೇಸ್ಟಿನ ಗುಣಮಟ್ಟ ಮತ್ತು ಪ್ರಮಾಣದ ಪ್ರಕಾರ, ಸರ್ಕಾರವು ಅದರ ಬೆಲೆಯನ್ನು ನಿರ್ಧರಿಸುತ್ತದೆ. ಸರಾಸರಿಯಾಗಿ ಕೆಜಿಗೆ ಸುಮಾರು ೧೫೦೦ ರೂಪಾಯಿ ಸಿಗುತ್ತದೆ. ಗಿಡದ ಬೀಜಕೋಶಗಳನ್ನು ಒಣಗಿಸಿ ಬೀಜಗಳನ್ನು ಸಂಗ್ರಹಿಸಿಯೂ ಸ್ವಲ್ಪ ಹೆಚ್ಚುವರಿ ಹಣವನ್ನು ಮಾಡಿಕೊಳ್ಳಲಾಗುತ್ತದೆ, ಮತ್ತು ಹಿಸ್ಸೆ ಮೀರಿ ಸಣ್ಣ ಪ್ರಮಾಣದ ಅಫೀಮನ್ನು ಸ್ಥಳೀಯವಾಗಿ ಸೇವಿಸಬಹುದು. ಅಫೀಮಿನ ಪೇಸ್ಟನ್ನು ಒಣಗಿಸಿ ಸರ್ಕಾರಿ ಅಫೀಮಾಗಿ ಸಂಸ್ಕರಿಸಲಾಗುತ್ತದೆ, ನಂತರ ೬೦ ಕೆಜಿ ಚೀಲಗಳಲ್ಲಿ ತುಂಬಿಸಿ ರಫ್ತು ಮಾಡಲಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. "Opium definition". Drugs.com. Retrieved February 28, 2015.
"https://kn.wikipedia.org/w/index.php?title=ಅಫೀಮು&oldid=794803" ಇಂದ ಪಡೆಯಲ್ಪಟ್ಟಿದೆ