ಇಳಂಗೋ ಅಡಿಗಳ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಇಳಂಗೋ ಅಡಿಗಳ್ ''' ತಮಿಳಿನಲ್ಲಿ ಲಭ್ಯವಿರುವ ಮೊತ್ತಮೊದಲಿನ ಸ್ವತಂತ್ರ ಶ್ರೇ...
( ಯಾವುದೇ ವ್ಯತ್ಯಾಸವಿಲ್ಲ )

೦೪:೪೯, ೧೨ ಜನವರಿ ೨೦೨೦ ನಂತೆ ಪರಿಷ್ಕರಣೆ

ಇಳಂಗೋ ಅಡಿಗಳ್ ತಮಿಳಿನಲ್ಲಿ ಲಭ್ಯವಿರುವ ಮೊತ್ತಮೊದಲಿನ ಸ್ವತಂತ್ರ ಶ್ರೇಷ್ಠ ಕಾವ್ಯವಾದ ಶಿಲಪ್ಪದಿಗಾರಂ ಎಂಬುದರ ಕರ್ತೃ. ಕ್ರಿ.ಶ. ಸುಮಾರು 465 ಇವರ ಕಾಲವೆಂದು ಹೇಳಲಾಗಿದೆ. [೧]ಇವರು ಸಂಗಂ ಕಾಲದ ಅನಂತರದ ಕವಿ. ಮಣಿಮೇಖಲೈ ಎಂಬ ಬೌದ್ಧಕಾವ್ಯವನ್ನು ಬರೆದ ಶೀತ್ತಲೈಚ್ಚಾತ್ತನಾರರೂ ಇಳಂಗೋ ಅಡಿಗಳೂ ಸಮಕಾಲೀನರು. ಇಳಂಗೋ ಅಡಿಗಳ ಕಾಲ ಕ್ರಿ.ಶ. 2ನೆಯ ಶತಮಾನವೆಂದೂ ಒಂದು ಮತ.

ವ್ಯಕ್ತಿ

ಇಳಂಗೋ ಅಡಿಗಳು ಸಾಮಾನ್ಯರಲ್ಲ. ರಾಜಾನುಗ್ರಹವನ್ನೇ ನಂಬಿ ಬದುಕಿದ ಬಡ ಕವಿಯಲ್ಲ. ಅವರೊಬ್ಬ ರಾಜಕುಮಾರ. ಇಳಂಗೋ ಅಡಿಗಳ್ ಎಂಬುದನ್ನು ಇಳಂ+ಕೋ+ಅಡಿಗಳ್ ಎಂದು ಬಿಡಿಸಿ, ಎಳೆಯ ಯುವರಾಜ ಎಂದು ಅರ್ಥ ಮಾಡಬಹುದು. ಚೇರ ರಾಜ್ಯದ ದೊರೆಯಾಗಿದ್ದ ಸೆಂಗುಟ್ಟುವನ್ ಎಂಬಾತ ಇವರ ಅಣ್ಣ.

ಶಿಲಪ್ಪದಿಗಾರಂನಲ್ಲಿ ಇವರು ತಮ್ಮ ಕಥೆಯನ್ನು ಹೇಳಿಕೊಂಡಿದ್ದಾರೆ. ಚಿಕ್ಕಂದಿನಲ್ಲಿ ಇವರು ನೋಡಲು ಬಲು ಮುದ್ದಾಗಿದ್ದರು. ಇವರೂ ಇವರ ಅಣ್ಣನೂ ತಮ್ಮ ತಂದೆಯೊಂದಿಗಿದ್ದಾಗ ತಂದೆಯ ಆಸ್ಥಾನಕ್ಕೆ ನೈಮಿತ್ತಿಕನೊಬ್ಬ ಬಂದ; ಇವರ ಮೋಹಕ ವ್ಯಕ್ತಿತ್ವವನ್ನು ಕಂಡು ಕೊಂಡಾಡಿದ. ಮುಂದೆ ಇವರೇ ಸಿಂಹಾಸನವನ್ನೇರುವರೆಂದು ಹಿಂದೆ ಮುಂದೆ ನೋಡದೆ ಹೇಳಿದ. ಈ ಮಾತು ಕೇಳಿದಾಗ ಇವರ ಅಣ್ಣನಿಗೆ ಕೊರಗು ತಟ್ಟಿತು. ಅಣ್ಣನ ಅಳಲನ್ನರಿತ ಇಳಂಗೋ ಅಡಿಗಳು ನೊಂದು ಕೊಂಡರು. ತಾವು ದೊರೆತನವನ್ನೆಂದಿಗೂ ಬಯಸುವುದೇ ಇಲ್ಲವೆಂದು ಪ್ರತಿಜ್ಞೆ ಮಾಡಿದರು. ತಾವು ಮದುವೆಯಾದರೆ ತಮ್ಮ ಮಕ್ಕಳು ಸಿಂಹಾಸನಕ್ಕಾಗಿ ಅಣ್ಣನ ಮಕ್ಕಳೊಂದಿಗೆ ಸ್ಪರ್ಧಿಸಬಹುದಾದ್ದರಿಂದ ಎಲ್ಲವನ್ನೂ ತ್ಯಾಗಮಾಡಿ ಸನ್ಯಾಸಿಯಾಗಿ ಗುಣವಾಯಿರ್‍ಕೋಟ್ಟಂ ಎಂಬಲ್ಲಿ ತಪಸ್ಸು ಮಾಡಿದರು. ಈ ಕಾರಣದಿಂದ ಇವರನ್ನು ಅಡಿಗಳ್ ಅಥವಾ ಸಂತರೆಂದು ಕರೆಯುವುದು ರೂಢಿಯಾಯಿತು.[೨]

ಹಿನ್ನೆಲೆ

ಇಳಂಗೋ ಅಡಿಗಳು ಚೇರನಾಡಿನವರು, ಸಂಗೀತ ಸಾಹಿತ್ಯ ನಾಟಕಗಳಲ್ಲಿ ಬಲ್ಲಿದರು. ಚೇರ, ಚೋಳ, ಪಾಂಡ್ಯ ರಾಜ್ಯಗಳನ್ನು ಚೆನ್ನಾಗಿ ತಿಳಿದಿದ್ದವರು. ಪರಮತ ದ್ವೇಷವಿಲ್ಲದವರು. ಈ ಅಂಶಗಳೂ ಶಿಲಪ್ಪದಿಗಾರಂ ಕಾವ್ಯದಿಂದಲೇ ತಿಳಿದುಬರುತ್ತವೆ. ಈ ಕಾವ್ಯದಲ್ಲಿ ಕೆಲವೆಡೆಗಳಲ್ಲಿ ಜೈನಮತ ತತ್ತ್ವಗಳ ವಿಶೇಷವಾದ ವಿವರಣೆಗಳಿರುವುದರಿಂದ ಇವರು ಜೈನಮತಸ್ಥರೆಂದು ಊಹಿಸಲು ಸಾಧ್ಯವಿದೆ.

ಶಿಲಪ್ಪದಿಗಾರಂ

ತಮಿಳಿನ ಐದು ಮಹಾಕಾವ್ಯಗಳಲ್ಲಿ ಒಂದೆಂದು ಭಾವಿಸಲ್ಪಟ್ಟಿದೆ. ಇದರಲ್ಲಿ ಜೈನಧರ್ಮದ ಬಗೆಗೆ ಒಲವು ಕಂಡರೂ ಆಗಿನ ಕಾಲದ ಧಾರ್ಮಿಕ ಪ್ರವೃತ್ತಿಗಳನ್ನೆಲ್ಲ ಇದು ಬಿಂಬಿಸುತ್ತದೆ.

ತಮಿಳುನಾಡಿನಲ್ಲಿ ಜನಪ್ರಿಯವಾದ ಕಣ್ಣಗಿಯ ಕಥೆಯೇ ವಸ್ತುವಾಗಿ ಉಳ್ಳ ಶಿಲಪ್ಪದಿಗಾರಂನಲ್ಲಿ ಮೂರು ಕಾಂಡಗಳಿವೆ. ಮೊದಲನೆಯ ಪುಗಾರ್ ಕಾಂಡದಲ್ಲಿ ಚೋಳನಾಡಿನ ಹಿರಿಮೆಯನ್ನೂ ಅದರ ಮುಖ್ಯ ಪಟ್ಟಣವಾದ ಪೂಂಬುಗಾರ್ ಅಥವಾ ಕಾವೇರಿ ಪೊಂಬಟ್ಟನದ ಸಮೃದ್ಧಿಯನ್ನು ಎರಡನೆಯ ಮಧುರೈ ಕಾಂಡದಲ್ಲಿ ಪಾಂಡ್ಯ ನಾಡಿನ ಮೇಲ್ಮೆಯನ್ನೂ ಅದರ ಮುಖ್ಯ ಪಟ್ಟಣವಾದ ಮಧುರೈ ಮಹಾನಗರದ ಸಂಪತ್ತನ್ನೂ ಮೂರನೆಯ ವಂಜಿ ಕಾಂಡದಲ್ಲಿ ಚೇರನಾಡಿನ ಹಿರಿಮೆಯನ್ನೂ ಅದರ ರಾಜಧಾನಿಯಾದ ವಂಜಿನಗರದಲ್ಲಿ ಕಣ್ಣಗಿ ಪ್ರತಿಷ್ಠಿತಳಾಗಿದ್ದ ರೀತಿಯನ್ನೂ ವರ್ಣಿಸಿದೆ.[೩]

==ಶಿಲಪ್ಪದಿಗಾರಂ ಕಾವ್ಯದ ಕಥಾವಸ್ತು==ಚೋಳನಾಡಿನ ಕಾವೇರಿಪೊಂಬಟ್ಟನದಲ್ಲಿ ವಾಸಿಸುತ್ತಿದ್ದ ಕೋವಲನಿಗೂ ಕಣ್ಣಗಿಗೂ ವಿವಾಹ ಬೆಳೆದು, ಇಬ್ಬರೂ ಸುಖವಾಗಿ ಸಂಸಾರ ಮಾಡುತ್ತಿದ್ದಾಗ ಕೋವಲನಿಗೆ ಮಾದವಿಯೆಂಬ ಗಣಿಕಾಸ್ತ್ರೀಯಲ್ಲಿ ಆಸಕ್ತಿಯುಂಟಾಗುತ್ತದೆ. ಆಕೆಯ ಸಹವಾಸದಲ್ಲಿ ಅವನು ತನ್ನ ಐಶ್ವರ್ಯವೆಲ್ಲವನ್ನೂ ಕಳೆದುಕೊಂಡು ಆಕೆಯ ಮನಸ್ತಾಪಕ್ಕೆ ಗುರಿಯಾಗಿ ಕಣ್ಣಗಿಯ ಬಳಿಗೆ ತಿರುಗಿ ಬರುತ್ತಾನೆ. ಕಣ್ಣಗಿಯ ಬಳಿಯಲ್ಲಿದ್ದದ್ದು ಆಗ ಎರಡು ಕಾಲ್ಬಳೆಗಳು ಮಾತ್ರ. (ಶಿಲಂಬು; ಶಿಲಂಬು + ಅಧಿಕಾರಂ; ಆದ್ದರಿಂದ ಶಿಲಪ್ಪದಿಗಾರಂ). ಅವನ್ನೇ ಕಣ್ಣಗಿ ತನ್ನ ಗಂಡನಿಗೆ ಕೊಡುತ್ತಾಳೆ. ಹೆಂಡತಿಯೊಂದಿಗೆ ಅವನು ಮಧುರೈಗೆ ಹೋಗಿ, ಅಲ್ಲಿ ಅವಳ ಕಾಲ್ಬಳೆಯೊಂದನ್ನು ವಿಕ್ರಯಿಸಲು ಹೋದಾಗ ಕಳ್ಳತನದ ಸುಳ್ಳು ಅಪವಾದಕ್ಕೆ ಗುರಿಯಾಗಿ ಮರಣದಂಡನೆಗೆ ಬಲಿಯಾಗುತ್ತಾನೆ. ಈ ವಾರ್ತೆ ಕೇಳಿದ ಪತಿವ್ರತಾ ಶಿರೋಮಣಿಯಾದ ಕಣ್ಣಗಿ ಕೋಪೋದ್ರಿಕ್ತಳಾಗಿ ಪಾಂಡ್ಯರಾಜನ ಆಸ್ಥಾನ ಪ್ರವೇಶಮಾಡಿ ತನ್ನ ಪತಿ ನಿರಪರಾಧಿಯೆಂದೂ ಅನ್ಯಾಯವಾಗಿ ಅವನ ಕಗ್ಗೊಲೆಯಾಯಿತೆಂದೂ ನಿರೂಪಿಸುತ್ತಾಳೆ. ತಾನು ವಿಚಾರಿಸದೆ ವಿಧಿಸಿದ ಶಿಕ್ಷೆಯ ಘೋರ ಅಪರಾಧವನ್ನರಿತ ಪಾಂಡ್ಯರಾಜ ಕೂಡಲೇ ಸತ್ತು ಬೀಳುತ್ತಾನೆ. ಅವನ ರಾಣಿಯಾದ ಕೋಪ್ಪರುಂದೇವಿಯೂ ತತ್‍ಕ್ಷಣವೇ ಪತಿಯನ್ನನುಸರಿಸುತ್ತಾಳೆ. ಆದರೂ ಕಣ್ಣಗಿಯ ಕೋಪ ತಣ್ಣಗಾಗುವುದಿಲ್ಲ. ಮಧುರೈ ನಗರವೇ ಸುಟ್ಟು ಭಸ್ಮವಾಗಲೆಂದು ಶಪಿಸುತ್ತಾಳೆ. ಮಧುರೈ ನಗರ ನಿರ್ನಾಮವಾಗುತ್ತದೆ. ಅಲ್ಲಿಂದ ಅವಳು ಚೇರನಾಡಿಗೆ ಹೋಗಿ ಇಂದ್ರ ಕಳುಹಿಸಿದ ವಿಮಾನವನ್ನೇರಿ ದೇವಲೋಕಕ್ಕೆ ಪ್ರಯಾಣ ಮಾಡುತ್ತಾಳೆ.[೪]

ಭಾರತೀಯ ಸಾಹಿತ್ಯದಲ್ಲಿ ದುರಂತ ಕಾವ್ಯಗಳು ತೀರ ವಿರಳ. ಇಳಂಗೋ ಅಡಿಗಳ್ ರಚಿಸಿದ ಈ ಕಾವ್ಯ ಒಂದು ಉತ್ತಮ ದುರಂತಕಾವ್ಯ. ರಾಜ ರಾಣಿಯರನ್ನಾಗಲಿ ಪುರಾಣ ವ್ಯಕ್ತಿಗಳನ್ನಾಗಲಿ ಕಥಾನಾಯಕ ನಾಯಕಿಯರೆಂದು ಆರಿಸಿಕೊಳ್ಳದೆ ಕಣ್ಣಗಿಯಂಥ ಸಾಮಾನ್ಯ ವ್ಯಕ್ತಿಗಳನ್ನೇ ಆರಿಸಿಕೊಂಡು ಬರೆದ ಈ ಕಾವ್ಯ ಇಳಂಗೋ ಅಡಿಗಳ ನವೀನ ದೃಷ್ಟಿಗೆ ಸಾಕ್ಷಿಯಾಗಿದೆ. ಕಾವ್ಯದಲ್ಲಿ ಕಣ್ಣಗಿಯ ಪಾತ್ರವೇ ಪ್ರಧಾನ. ಬಂಧದ ದೃಷ್ಟಿಯಿಂದ ಈ ಕೃತಿ ತೀರ ಸಡಿಲವೆನಿಸಬಹುದಾದರೂ ಇದರ ಕಾವ್ಯಗುಣವೂ ಪಾತ್ರಚಿತ್ರಣವೂ ಉತ್ಕøಷ್ಟವಾಗಿದೆ. ವಿಧಿಗೆ ಅತಿ ಹೆಚ್ಚಿನ ಪ್ರಾಧಾನ್ಯ ಕೊಟ್ಟಿರುವುದೇ ಇದರ ಒಂದು ದೊಡ್ಡ ದೋಷವೆಂದು ಕೆಲವು ವಿಮರ್ಶಕರ ಮತ.

ಶಿಲಪ್ಪದಿಗಾರಂ ಹಾಗೂ ಮಣಿಮೇಖ

ಈ ಎರಡು ಕಾವ್ಯಗಳೂ ಸೇರಿ ಆರಮ್, ಪೊರುಳ್, ಇನ್ಬಮ್, ವಿಡು ಎಂಬ ಚತುರ್ವಿಧ ಪುರುಷಾರ್ಥಗಳನ್ನು ಪ್ರತಿಪಾದಿಸುತ್ತವೆಯೆಂದೂ ಮೊದಲನೆಯ ಮೂರು ಪುರುಷಾರ್ಥಗಳ ಪ್ರತಿಪಾದನೆ ಶಿಲಪ್ಪದಿಗಾರಂ ಕೃತಿಯಲ್ಲೂ ನಾಲ್ಕನೆಯದು ಮಣಿಮೇಖಲೈ ಕೃತಿಯಲ್ಲೂ ಎದ್ದು ಕಾಣುವುವೆಂದೂ ಹೇಳಲಾಗಿದೆ. ಆದರೆ ಮಣಿಮೇಖಲೈ ಬೌದ್ದಧರ್ಮದ ಉತ್ಕøಷತೆಯನ್ನೇ ಪ್ರಚಾರ ಮಾಡುತ್ತದೆ. ಶಿಲಪ್ಪದಿಗಾರಂ ಕೃತಿಯಲ್ಲಿ ಕವಿಯ ಜೈನಧರ್ಮದ ಒಲವು ತೋರಿಬರುವುದಾದರೂ ಇದರಲ್ಲಿ ಕಲೆಯದೇ ಮೇಲುಗೈ ಆಗಿದೆ. ಇದು ಇಳಂಗೋ ಅಡಿಗಳರ ಉದಾತ್ತ ದೃಷ್ಟಿಯ ಪ್ರತೀಕವಾಗಿದೆ. [೫]

  1. https://books.google.com/books?id=HWPg7EvPirgC
  2. https://books.google.com/books?id=GV3abjkKdB4C
  3. https://books.google.com/books?id=Uu3QelRpmsgC
  4. https://librivox.org/author/8437
  5. https://en.wikipedia.org/wiki/Ilango_Adigal#CITEREFKamil_Zvelebil1973