ಅನಿಶ್ಚಿತತ್ವವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಅನಿಶ್ಚಿತತ್ವವಾದ''' ಇದು ಪಾಶ್ಚಾತ್ಯ ತತ್ತ್ವಶಾಸ್ತ್ರದಂತೆ ಅಗ್ನಾಸ್ಟಿಸ...
( ಯಾವುದೇ ವ್ಯತ್ಯಾಸವಿಲ್ಲ )

೦೦:೨೧, ೧೨ ಜನವರಿ ೨೦೨೦ ನಂತೆ ಪರಿಷ್ಕರಣೆ

ಅನಿಶ್ಚಿತತ್ವವಾದ ಇದು ಪಾಶ್ಚಾತ್ಯ ತತ್ತ್ವಶಾಸ್ತ್ರದಂತೆ ಅಗ್ನಾಸ್ಟಿಸಿಸಂ ವಾದಕ್ಕೆ ಸಮಾನವಾದುದು.

ಪದದ ಬಳಕೆ

ಅಗ್ನಾಸ್ಟಿಸಿಸಂ ಎಂಬ ಪದವನ್ನು ಮೊಟ್ಟಮೊದಲಿಗೆ ಉಪಯೋಗಿಸಿದ ಹಕ್ಸ್ಲೆ ಅದು ಹುಟ್ಟಿದ ಬಗೆಯನ್ನು ಈ ರೀತ ವಿವರಿಸಿರುತ್ತಾನೆ: ನಾನು ನಿರೀಶ್ವರವಾದಿಯೆ (ಏಥಿಯಿಸ್ಟ್)? ಸೇಶ್ವರವಾದಿಯೆ (ಥೀಯಿಸ್ಟ್)? ವಿಶ್ವದೇವೈಕ್ಯವಾದಿಯೆ (ಪ್ಯಾನ್‍ಥೀಯಿಸ್ಟ್)? ಭೌತವಾದಿಯೆ (ಮೆಟೀರಿಯಲಿಸ್ಟ್)? ಧೈಯವಾದಿಯೆ (ಐಡಿಯಲಿಸ್ಟ್)? ಕ್ರೈಸ್ತ ಮತಾವಲಂಬಿಯೆ (ಕ್ರಿಶ್ಚಿಯನ್)? ಸ್ವತಂತ್ರವಾದಿಯೆ (ಫ್ರೀಥಿಂಕರ್)? ನನ್ನ ವಿಚಾರ ಪ್ರಜ್ಞೆ ಹೆಚ್ಚಿದಷ್ಟೂ ಆ ಪ್ರಶ್ನೆಗಳಿಗೆ ಉತ್ತರ ಕೊಡಲು ನಾನು ಹಿಂತೆಗೆಯಬೇಕಾಯಿತು. ಕೊನೆಗೆ ಕಟ್ಟಕಡೆಯ ವಾದವನ್ನು ಬಿಟ್ಟರೆ ಉಳಿದ ಯಾವ ವಾದದಲ್ಲೂ ನನ್ನ ಮನಸ್ಸು ನೆಲೆಸಲು ಸಾಧ್ಯವಿಲ್ಲವೆಂದು ತೀರ್ಮಾನಿಸಿದೆ. ಯಾವ ಒಂದರಲ್ಲಿ ಅನೇಕ ಸಭ್ಯರು ಒಮ್ಮತ ಪಡೆದಿದ್ದರೋ ಆ ಒಂದರಲ್ಲಿ ನನ್ನ ಅಭಿಪ್ರಾಯ ಭಿನ್ನವಾಗಿತ್ತು. ಅವರು ಆಧ್ಯಾತ್ಮರಹಸ್ಯವನ್ನು ತಿಳಿದಿದ್ದೇವೆಂಬ ಭರವಸೆ ಪಡೆದಿದ್ದರು; ಇರವಿನ ಸಮಸ್ಯೆಯನ್ನು ಹೆಚ್ಚು ಕಡಿಮೆ ಬಗೆಹರಿಸಿದ್ದೇವೆಂದು ನಂಬಿದ್ದರು. ನನಗಾದರೋ ಆ ನೆಚ್ಚಿಗೆ ಇರಲಿಲ್ಲ; ಆ ಸಮಸ್ಯೆ ಬಗೆಹರಿಸಲಾಗದ ಸಮಸ್ಯೆಯೆಂಬುದು ನನ್ನ ನೆಚ್ಚಿಕೆ. ಹ್ಯೂಂ ಮತ್ತು ಕ್ಯಾಂಟ್ ಅಭಿಪ್ರಾಯ ನನ್ನ ಪರವಾಗಿದ್ದದ್ದರಿಂದ ಹಾಗೆ ನಾನು ನೆಚ್ಚಿದ್ದು ದುರಹಂಕಾರದಿಂದ ಎಂದು ನಾನು ಭಾವಿಸಲಿಲ್ಲ. ಮೆಟಫಿಸಿಕಲ್ ಸೊಸೈಟಿಯ (ಆಧ್ಯಾತ್ಮ ವಿಚಾರಸಂಸ್ಥೆ) ನನ್ನ ಜೊತೆಯ ಸದಸ್ಯರು ಒಂದಲ್ಲ ಒಂದು ಬಗೆಯ 'ಇಸ್ಟ್ ' ಎಂಬ ಹೆಗ್ಗುರುತನ್ನು ಪಡೆದಿದ್ದರು.[೧] ಇಂಥ ಉದ್ದನೆಯ ಬಾಲವುಳ್ಳವರ ಮುಂದೆ ಅದಿಲ್ಲದ ನನಗೆ ಕಥಾಪ್ರಸಿದ್ಧವಾದ ಬಾಲವಿಲ್ಲದ ನರಿಯಂತೆ ಕಾಣಿಸಿಕೊಳ್ಳಲು ನಾಚಿಕೆಯಾಗುತ್ತಿತ್ತು. ಆದ್ದರಿಂದ ಯೋಚಿಸಿ ನನಗೆ ಉಚಿತವೆಂದು ತೋರಿದ ಅಗ್ನಾಸ್ಟಿಕ್ ಎಂಬ ಬಿರುದಾಂಕಿತವನ್ನು ಸೃಷ್ಟಿಸಿಕೊಂಡೆ. ಅದು ಕ್ರೈಸ್ತಚರ್ಚಿನ ಚರಿತ್ರೆಯಲ್ಲಿ ಬಳಕೆಯಾದ ಗ್ನಾಸ್ಟಿಕ್ ಎಂಬ ಪದಕ್ಕೆ ವಿರೋಧ ಸೂಚಕವಾಗಿಯೂ ಇತ್ತು. ನನಗೂ ಅವರಂತೆಯೇ ಬಾಲವಿದೆ ಎಂದು ತೋರಿಸಲು ಅದನ್ನು ನನ್ನ ಸೊಸೈಟಿಯವರ ಮುಂದೆ ಮೆರೆಯಿಸಿದೆ. ಆ ಪದ ಜನರಿಗೆ ಹಿಡಿಸಿದ್ದರಿಂದ ನನಗೆ ತುಂಬ ಸಮಾಧಾನವಾಯಿತು.

ವಿಮರ್ಶೆ

ಸ್ಪೆಕ್ಟೇಟರ್ ಪತ್ರಿಕೆಯೂ ಅದರ ವಿಚಾರದಲ್ಲಿ ಜವಾಬ್ದಾರಿ ವಹಿಸಿದ್ದರಿಂದ ಆ ಮಾತಿನ ಕರ್ತೃವಿನ ಹೆಸರು ಕೇಳಿ ಮರ್ಯಾದಸ್ಥರಲ್ಲಿ ಹುಟ್ಟಬಹುದಾದ ಸಂದೇಹಕ್ಕೆ ಎಡೆ ಇಲ್ಲದಾಯಿತು (ಎಸ್ಸೇಸ್, ಸಂಪುಟ 5). ಅನಿಶ್ಚಿತತ್ವವಾದ ಪರಮಸಂಶಯವಾದದಿಂದ (ಸ್ಕೆಪ್ಟಿಸಿಸಂ) ಭಿನ್ನವಾದದ್ದು. ಪರಮಸಂಶಯವಾದ ಯಾವ ಬಗೆಯಾದ ಜ್ಞಾನವೂ ನಿಶ್ಚಯವಲ್ಲವೆಂದು ಹೇಳುತ್ತದೆ. ಆದರೆ ಅನಿಶ್ಚಿತವಾದ ಎಲ್ಲ ಬಗೆಯ ಜ್ಞಾನವೂ ಸಂಶಯಾಸ್ಪದವೆಂದು ಹೇಳುವುದಿಲ್ಲ; ಆತ್ಮ, ಈಶ್ವರಿ ಇತ್ಯಾದಿ ಲೋಕಾತೀತ ವಸ್ತುಗಳ ವಿಷಯದಲ್ಲಿ ಮಾತ್ರ ನಮ್ಮ ಜ್ಞಾನ ಆನಿಶ್ಚಿತವಾದದ್ದು ಎಂದು ಹೇಳುತ್ತದೆ. ಹಕ್ಸ್ಲೆಯ ಕಾಲದಲ್ಲಿ ಒಂದು ಗುಂಪಿನ ತಾತ್ತ್ವಿಕರು ಭೌತವಸ್ತುವೇ (ಮ್ಯಾಟರ್) ಅಂತಿಮದಲ್ಲಿ ನಿಶ್ಚಿತವಾದದ್ದು ಮತ್ತು ಸತ್ಯವಾದದ್ದು ಎಂದೂ ಇನ್ನೊಂದು ಗುಂಪಿನವರು ಚಿದ್ವಸ್ತುವೇ (ಮೈಂಡ್)ಅಂತಿಮದಲ್ಲಿ ನಿಶ್ಚಿತವಾದದ್ದು ಮತ್ತು ಸತ್ಯವಾದದ್ದು ಎಂದೂ ವಾದಿಸುತ್ತಿದ್ದರು. ಮೊದಲನೆಯ ಗುಂಪಿನವರು ಭೌತವಾದಿಗಳು (ಮೆಟೀರಿಯಲಿಸ್ಟ್ಸ್). ಈ ಎರಡೂ ನಿಶ್ಚಿತವಲ್ಲವೆಂಬುದು ಹಕ್ಸ್ಲೆಯ ವಾದ. ಆತನ ವಾದ ಈ ರೀತಿ ಇದೆ: ಈ ಪ್ರಚಂಡ ಭೌತವಸ್ತುವಿನ ಬಗ್ಗೆ ನಾವು ತಿಳಿದಿರುವುದಾದರೂ ಏನು ? ನಮ್ಮ ಮಾನಸಿಕ ವೃತ್ತಿಗಳಿಗೆ ಔಪಾಧಿಕ (ಹೈಪೊತೆಟಿಕಲ್) ವಾದ ಮತ್ತು ಅಜ್ಞಾತವಾದ (ಅನ್‍ನೋನ್) ಕಾರಣವೆಂದು ಹೇಳುವ ಅದರ ವಿಚಾರವಾಗಿ ಅದು ಒಂದು ನಾಮಮಾತ್ರ ಎಂಬುದಕ್ಕಿಂತ ಹೆಚ್ಚಿಗೆ ಏನಾದರೂ ನಮಗೆ ತಿಳಿದಿದೆಯೆ ? ಭೌತವಾದವನ್ನು ಒಪ್ಪಿದರೆ ಚಿದ್ವಸ್ತು ವಿನಾಶವಾಗುವುದೆಂದು ಭಯಗೊಂಡು ಚೀತ್ಕಾರ ಮಾಡುತ್ತೇವಲ್ಲ, ಆ ಚಿದ್ವಸ್ತು ಕೂಡ ನಮ್ಮ ಚಿತ್ತವೃತ್ತಿಗಳಿಗೆ ಔಪಾಧಿಕವಾದ ಮತ್ತು ಅಜ್ಞಾತವಾದ ಕಾರಣಕ್ಕೆ ಕೇವಲ ಒಂದು ನಾಮಧೇಯ ಎಂಬುದಕ್ಕಿಂತ ಹೆಚ್ಚಿನದಾದರೂ ನಮಗೆ ತಿಳಿದಿದೆಯೆ ? ವಾಸ್ತವಾಂಶ (ಫ್ಯಾಕ್ಟ್) ಎಂದರೆ ಏನು ಎಂಬುದನ್ನು ನಾನು ತಿಳಿದಿದ್ದೇನೆ. ನಿಯಮ (ಲಾ) ಎಂದರೆ ಏನು ಎಂಬುದನ್ನು ನಾನು ತಿಳಿದಿದ್ದೇನೆ, ಆದರೆ `ನಿಯತಿ' (ನೆಸಿಸಿಟಿ) ಎಂಬುದು ನನ್ನ ಮನಸ್ಸಿನಲ್ಲಿ ಉದ್ಭವವಾದ ಒಂದು ನಿರ್ಗುಣ ಛಾಯೆ (ಎಂಪ್ಟಿ ಷ್ಯಾಡೊ) ಎಂದು ನನ್ನ ಭಾವನೆ. [೨]ಭೌತವ್ಯಾಪಾರಗಳನ್ನು ಚೇತನಕ್ಕೆ ಸಂಬಂಧಿಸಿದ ಮಾತುಗಳಲ್ಲಿ ವಿವರಿಸುವುದು ಎಷ್ಟು ಅನುಚಿತವೊ ಚೇತನವೃತ್ತಿಗಳನ್ನು ಭೌತವಸ್ತುವಿಗೆ ಸಂಬಂಧಿಸಿದ ಮಾತುಗಳಲ್ಲಿ ವಿವರಿಸುವುದೂ ಅಷ್ಟೇ ಅನುಚಿತ. ಆ ಒಂದೊಂದು ವಿವರಣೆಯೂ ಒಂದು ಸಾಪೇಕ್ಷವಾದ ಸತ್ಯವನ್ನು ಮಾತ್ರ ಪಡೆದಿದೆ (ಕಲೆಕ್ಟೆಡ್ ಎಸ್ಸೇಸ್). ಹೀಗೆ ಚಿದ್ವಸ್ತು ಮತ್ತು ಭೌತವಸ್ತು ಎರಡೂ ಕೇವಲ ನಾಮಧೇಯಗಳು ಎಂದು ಒಂದರ ಪರವಾದ ಪರಿಭಾಷೆಯಲ್ಲಿ, ಇನ್ನೊಂದನ್ನು ವಿವರಿಸುವುದು ಅಪ್ರಕೃತ ಎಂದು ಹಕ್ಸ್ಲೆ ಹೇಳಿದರೂ ಅವನು ವೈಜ್ಞಾನಿಕ ವಿಷಯಗಳನ್ನು ವಿವರಿಸುವಾಗ ಭೌತಶಾಸ್ತ್ರಪರಿಭಾಷೆಯ ಬಳಕೆ ಸರ್ವವಿಧದಲ್ಲೂ ಉತ್ತಮವೆಂದು ಕೆಲವೊಮ್ಮೆ ಹೇಳಿರುತ್ತಾನೆ. ಈ ಹೇಳಿಕೆ ಅವನು ಭೌತವಾದಿಗಳ ಪರ ವಹಿಸಿ ಮಾತನಾಡಿದಂತೆ ತೋರುತ್ತದೆ. ಆದರೆ ಭೌತವಾದಿಗಳ ಪಕ್ಷವನ್ನು ಎತ್ತಿ ಹಿಡಿಯಬೇಕೆಂಬುದು ಹಕ್ಸ್ಲೆಯ ಅಭಿಮತವಲ್ಲ.

ಅನುಭವಾರೂಢವಾಸ್ತವವಾದ

ಭೌತವಸ್ತುವೇ ಪರಮವೆಂಬ ತತ್ತ್ವ ಚಿದ್ವಸ್ತು ಪರಮವೆಂಬ ತತ್ತ್ವದಷ್ಟೇ ಅನಿಶ್ಚಿತವೆಂಬುದು ಅವನ ಸ್ಥಿರವಾದ ನಿಲುವು ನಿಜವಾಗಿಯೂ ಅವನು ಅನುಭವಾರೂಢವಾದ ವಾಸ್ತವವಾದಿ (ಪಾಸಿಟಿವಿಸ್ಟ್). [೩]ಹಕ್ಸ್ಲೆ ವಾಸ್ತವವಾದದ ಪರವಾಗಿ ಹ್ಯೂಮ್ ಮತ್ತು ಕ್ಯಾಂಟರ ವಾದವನ್ನು ಕರೆಯುತ್ತಾನೆ. ಆದರೆ ಕ್ಯಾಂಟ್ ಮತ್ತು ಹ್ಯೂಮ್ ಕೂಡ ಆತ್ಮತತ್ತ್ವವನ್ನೂ ಈಶ್ವರತತ್ತ್ವವನ್ನೂ ವಾದದಿಂದ (ರೀಸನಿಂಗ್) ಸಮರ್ಥಿಸಲಾಗದಿದ್ದರೂ ಆ ನಂಬಿಕೆಗಳು ಜೀವನಕ್ಕೆ ಅಗತ್ಯವೆಂದು ತಮ್ಮ ತತ್ತ್ವವನ್ನು ಪರಿಸಮಾಪ್ತಿಗೊಳಿಸಿರುತ್ತಾರೆ. ಅಪ್ಪಟ ವಿಚಾರಚೇತನದೃಷ್ಟಿಯಿಂದ (ಪ್ಯೂರ್ ರೀಸನಿಂಗ್) ಸಾಧಿಸಲಾಗದ ಆತ್ಮ ಮತ್ತು ಈಶ್ವರತತ್ತ್ವಗಳು ಧಾರ್ಮಿಕ ವಿಚಾರ ಚೇತನದೃಷ್ಟಿಯಿಂದ ಅಗತ್ಯವೆಂದು ಹೇಳಿರುತ್ತಾನೆ. ಹೀಗೆ ಹಕ್ಸ್ಲೆ ಮತ್ತು ಕ್ಯಾಂಟ್ ಅವರಿಂದ ಆಚೆಗೆ ಬಂದ ಅಗಸ್ಟ ಕಾಂಟ್ ಮತ್ತು ಹರ್ಬರ್ಟ್ ಸ್ಪೆನ್ಸರ್ ಮುಂತಾದವರ ಅನುಭವಾರೂಢವಾಸ್ತವವಾದಕ್ಕೆ ದಾರಿ ಮಾಡಿಕೊಟ್ಟರು. ಭಾರತದಲ್ಲಿ ಅನಿಶ್ಚಿತತ್ವವಾದ ತುಂಬ ಹಿಂದಿನದು, ಅನೇಕ ಬಗೆಯದು. ಸಾಂಖ್ಯದರ್ಶನ ಈಶ್ವರನ ವಿಷಯದಲ್ಲಿ ಮಾತ್ರ ಅನಿಶ್ಚಿತತ್ವವನ್ನು ಒಪ್ಪುತ್ತದೆ. ಅದರ ಪ್ರಕಾರ ಈಶ್ವರಭಾವನೆ ವಿಚಾರಚೇತನದಿಂದ ಸಿದ್ಧವಲ್ಲ. ಆದರೆ ಪ್ರಕೃತಿ ಮತ್ತು ಪುರುಷ ಎಂಬ ಎರಡು ಅಂತಿಮ ತತ್ತ್ವಗಳನ್ನು ಅದು ಒಪ್ಪುತ್ತದೆ.

ಸ್ವಭಾವವಾದ

ಸ್ವಭಾವವಾದ ಕೂಡ ಈಶ್ವರತತ್ತ್ವವನ್ನು ಅನುಮಾನದಿಂದ ಸಾಧಿಸಲಾಗುವುದಿಲ್ಲವೆಂದು ಹೇಳುತ್ತದೆಯಲ್ಲದೆ, ಅನುಮಾನದಿಂದ ಏರ್ಪಟ್ಟ ಅನುಭವಾರೂಢ ಪ್ರತಿಜ್ಞೆಗಳು ಸಂಭಾವ್ಯವೇ (ಪ್ರಾಬಬಲ್) ಹೊರತು ಪರಮನಿಶ್ಚಯವಲ್ಲ ಎಂದು ಭಾವಿಸುತ್ತದೆ. ಜೈನದರ್ಶನ ಕೂಡ ಅನುಭವಾತೀತವಾದ ಪರಮವನ್ನು (ಆಬ್ಸೊಲ್ಯೂಟ್) ಒಪ್ಪುವುದಿಲ್ಲ. ಒಂದು ವಿಷಯವನ್ನು ಕುರಿತು ನಾವು ಯಾವ ಪ್ರತಿಜ್ಞೆಯನ್ನು ಮಾಡಿದರೂ ಅದರ ಅಂತ್ಯ ಸಾಪೇಕ್ಷವೇ ಹೊರತು ಪರಮವಲ್ಲ. ಬುದ್ಧನ ವಾದವನ್ನೂ ಕೂಡ ಅನಿಶ್ಚಿತತ್ವವಾದವೆಂದು ಹೇಳುವುದುಂಟು. ಬುದ್ಧ ಆತ್ಮ, ಈಶ್ವರ, ಪರಲೋಕ ಮುಂತಾದವುಗಳ ವಿಚಾರವಾಗಿ ಉತ್ತರ ಕೊಡದೆ ಮೌನ ತಾಳಿದ್ದರಿಂದ ಅವನು ಅನಿಶ್ಚಿತತ್ವವಾದಿಯೆಂದು ಕೆಲವರು ಅಭಿಪ್ರಾಯ ಪಟ್ಟಿರುತ್ತಾರೆ. ಆತ ಈ ಅಂಶಿಮ ತತ್ತ್ವಗಳ ವಿಚಾರವಾಗಿ ತರ್ಕಿಸಲು ನಿರಾಕರಿಸಿದುದಕ್ಕೆ ಕನಿಷ್ಠಪಕ್ಷ ಎರಡು ವಿವರಣೆಗಳಿವೆ. ಬುದ್ಧ ಮುಖ್ಯವಾಗಿ ಜನರಿಗೆ ಬೋಧಿಸಿದ್ದು ದುಃಖದ ವಾಸ್ತವಿಕತೆ, ಅದಕ್ಕೆ ಕಾರಣ ಮತ್ತು ಅದರ ನಿವಾರಣೋಪಾಯಗಳನ್ನು. ಇವುಗಳನ್ನು ತಿಳಿದುಕೊಳ್ಳಲು ತಮ್ಮ ಅಂತರಂಗ ಪರೀಕ್ಷೆ ಮತ್ತು ಅದರಲ್ಲಿ ಕಂಡುಬರುವ ಕಾಮ, ಲೋಭ, ಮದ, ಮಾತ್ಸರ್ಯಗಳನ್ನು ತಡೆದು ತಿದ್ದಿಕೊಳ್ಳುವುದೇ ನೇರವಾದ ಮಾರ್ಗ. ನೇರವಾದ ವಾಸ್ತವಾಂಶಗಳಲ್ಲಿ ನಮ್ಮ ತಿಳಿವನ್ನು ಕೇಂದ್ರೀಕರಿಸುವುದನ್ನು ಬಿಟ್ಟು, ಅತೀತವಿಷಯಗಳನ್ನು ಕುರಿತ ಶುಷ್ಕತರ್ಕದಲ್ಲಿ ನಮ್ಮ ಮನಸ್ಸು ಸಿಕ್ಕಿಕೊಂಡರೆ ಅದು ದಿಕ್ಕು ತೋಚದೆ ಅಲೆದಾಡಿ ಬಳಲಿ ಬೆಂಡಾಗುತ್ತದೆ. ಬುದ್ಧನೂ ಉದಾಹರಣೆಯನ್ನು ಕೊಟ್ಟು ಇದನ್ನು ಸ್ಪಷ್ಟಪಡಿಸಿದ್ದಾನೆ : ಬಾಣ ತಗುಲಿ ರಕ್ತ ಸುರಿದು ಸಾಯುವ ಸ್ಥಿತಿಯಲ್ಲಿರುವಾತ ಈ ಬಾಣವನ್ನು ಹೊಡೆದವನು ಯಾರು, ಯಾವ ಊರಿನವನು, ಅವನ ತಂದೆ ಯಾರು, ತಾತ ಯಾರು, ಎಂಬೆಲ್ಲ ವಿವರಗಳನ್ನು ತಿಳಿದ ಹೊರತು ಚಿಕಿತ್ಸೆ ಮಾಡಿಕೊಳ್ಳುವುದಿಲ್ಲವೆಂದು ಹಠ ಹಿಡಿದರೆ, ಇದನ್ನೆಲ್ಲ ವಿಚಾರಿಸುವುದರಲ್ಲಿ ಸತ್ತು ಹೋಗುತ್ತಾನೆ. ಹಾಗೆ ಧಾರ್ಮಿಕಜೀವನ ವಿಚಾರದಲ್ಲೂ ನೇರವಾಗಿ ನಮ್ಮ ಮುಂದಿರುವ ಮುಖ್ಯ ಸಮಸ್ಯೆಯೆಂದರೆ ನಮ್ಮನ್ನಿರಿಯುತ್ತಿರುವ ದುಃಖದ ಕಾರಣವನ್ನೂ ಅದರ ಪರಿಹಾರವನ್ನೂ ನೇರವಾಗಿ ತಿಳಿದು ಅದರಿಂದ ಪಾರಾಗುವುದು. ಇದೇ ನಾವು ಬಯಸಬೇಕಾದ ಬಿಡುಗಡೆ. ಅದನ್ನು ಬಿಟ್ಟು ದೂರದ ಪರತತ್ತ್ವಜಿಜ್ಞಾಸೆಯಿಂದ ನೇರವಾದ ದಾರಿ ಮರೆಯಾಗುತ್ತದೆ. ಸ್ವಾರ್ಥ (ಈಗೋಯಿಸಂ) ನೇರವಾಗಿ ನಮ್ಮ ಮುಂದಿರುವ ಶತ್ರು; ನಮ್ಮಿಂದಲೇ ಕಲ್ಪಿತವಾದ ಶತ್ರು. ನಮ್ಮಿಂದಲೇ ನಮ್ಮ ಪ್ರಯತ್ನದಿಂದಲೇ ಪರಿಹಾರವಾಗತಕ್ಕದ್ದು. ಸ್ವಾನುಭವದಿಂದ, ಸ್ವಪ್ರಯತ್ನದಿಂದ ಸ್ವಂತವಾಗಿ ಪರಿಹರಿಸಿಕೊಳ್ಳಬೇಕಾದ್ದನ್ನು, ಬಾಹ್ಯಪ್ರಮಾಣಗಳನ್ನು ನೆಚ್ಚಿ ಅನುಭವಾತೀತವಾದ ವಸ್ತುಗಳನ್ನು ಹುಡುಕಿಕೊಂಡು ನಡೆಸುವ ಮಾನಸಿಕ ಅಲೆದಾಟದಿಂದ ಪರಿಹರಿಸಿಕೊಳ್ಳಲಾಗುವುದಿಲ್ಲ. ಸ್ವಾರ್ಥವನ್ನು ಗೆದ್ದು ನಿಷ್ಕಾಮ ಕರ್ಮಗಳನ್ನು ಅವಲಂಬಿಸದಿದ್ದವನಿಗೆ ಈಶ್ವರ, ಪರಲೋಕ ಇತ್ಯಾದಿಗಳನ್ನು ನಂಬಿದರಿಂದ ಶ್ರೇಯಸ್ಸಾಗುವುದಿಲ್ಲ. ಇದು ಎಲ್ಲದರ ತಳಹದಿಯಾದ ಸಾರ್ವತ್ರಿಕ ಸ್ವಾನುಭವ ಧರ್ಮ. ಆದ್ದರಿಂದ ಬುದ್ಧ ತನ್ನ ಗಮನವನ್ನೆಲ್ಲ ಇದರಲ್ಲಿ ಕೇಂದ್ರೀಕರಿಸಲು ಪ್ರಯತ್ನಪಟ್ಟ. ಇದಕ್ಕೆ ತಡೆಯಾಗುವ ಇತರ ವಿಷಯಗಳಿಗೆ ಲಕ್ಷ್ಯ ಕೊಡಕೂಡದೆಂದು ಬೋಧಿಸಿದ.

ಬೌದ್ಧಧರ್ಮ

ಆದರೆ ಬೇರೆ ಕಡೆಗಳಲ್ಲಿ ಬುದ್ಧ ತನಗೆ ತಿಳಿದಿರುವುದೆಲ್ಲ ಇಷ್ಟೇ ಎಂದು ಭಾವಿಸಬಾರದೆಂದು ಎಚ್ಚರಿಕೆ ಕೊಟ್ಟಿದ್ದಾನೆ. ತಾನು ವೇದಜ್ಞನೆಂದೂ ಬ್ರಹ್ಮಜ್ಞನೆಂದೂ ಸ್ಪಷ್ಟವಾಗಿ ತಿಳಿಸಿರುತ್ತಾನೆ. ನಾಲ್ಕು ಬ್ರಹ್ಮ ವಿಹಾರಗಳನ್ನು ವರ್ಣಿಸಿರುತ್ತಾನೆ. ಅವನು ವರ್ಣಿಸಿರುವ ನಿರ್ವಾಣ ಶೂನ್ಯವಲ್ಲ. ಭೂಮಿಸ್ಥಿತಿ ಇಂದೂ ನಾಶಹೊಂದುವುದು ಆತ್ಮವಲ್ಲ, ಅಹಂಕಾರಯುತವಾದ ಸ್ವಾರ್ಥಮಾತ್ರವೆಂದೂ ಭಾವಿಸಲಾಗಿದೆ. ಇದು ಅಜ್ಞಾತತ್ವ ವಾದವಲ್ಲ. ನಿರ್ವಾಣದ ವಿಚಾರವಾಗಿ ಅವನು ಅದು ಅನಿರ್ವಚನೀಯವೆಂದು ಹೇಳಿರುವುದುಂಟು, ವಿಶ್ವದ ಹೊರವಸ್ತುಗಳಂತೆ ಅದು ಇದೆ ಎಂದಾಗಲಿ ಅದು ಇಲ್ಲ ಎಂದಾಗಲಿ ವರ್ಣಿಸುವುದಕ್ಕಾಗುವುದಿಲ್ಲ ಎಂದ ಮಾತ್ರಕ್ಕೆ ಅದರ ಸಿದ್ಧಿರೂಪವಿಲ್ಲವೆಂದು ಅವನು ಹೇಳಲಿಲ್ಲ. ಈ ಸಿದ್ಧಿರೂಪ ಸಾಮಾನ್ಯ ಜ್ಞಾನ ರೂಪಕ್ಕಿಂತ ಕಡಿಮೆಯದಲ್ಲ, ಹೆಚ್ಚಿನದು, ಅದರ ತಿಳಿವು ತಾರ್ಕಿಕವಾದ ಪರೋಕ್ಷ ಜ್ಞಾನವಲ್ಲ, ಈ ದೃಷ್ಟಿಯಿಂದ ಬುದ್ಧನ ಬೋಧೆ ಅನಿಶ್ಚಿತತ್ವವಾದವೆಂದು ಪರಿಗಣಿಸಲಾಗುವುದಿಲ್ಲ. ಬುದ್ಧನ ತತ್ತ್ವ ಅನಿಶ್ಚಿತತ್ವವಾದವೆಂಬ ಪ್ರತೀತಿ ಹುಟ್ಟುವುದಕ್ಕೆ ಕಾರಣ ಅವನ ಅನಂತರ ಹುಟ್ಟಿಕೊಂಡ ಒಂದು ಬಗೆಯ ಮಾಧ್ಯಮಿಕ ವಾದ. ಮಾಧ್ಯಮಿಕರೆಲ್ಲರೂ ನಿರ್ವಾಣವನ್ನು ಕೇವಲ ಶೂನ್ಯವೆಂದು ಹೇಳುವುದಿಲ್ಲ. ಅದು ಉಪನಿಷತ್ತುಗಳಲ್ಲಿ ವರ್ಣಿಸಿರುವ ಭೂಮಸ್ಥಿತಿಯೆಂದು ಹೇಳುವ ಮಾಧ್ಯಮಿಕರೂ ಇದ್ದಾರೆ. ಒಟ್ಟಿನಲ್ಲಿ ಬುದ್ಧನ ಮುಖ್ಯ ಉದ್ದೇಶ ಸ್ವಾರ್ಥತ್ಯಾಗಸಿದ್ಧಿಯನ್ನೂ ಸಾರ್ವತ್ರಿಕ ಪ್ರೇಮಜೀವನವನ್ನೂ ಎತ್ತಿಹಿಡಿಯುವುದು. ಈ ಸಿದ್ಧಿಗೆ ನೇರವಾಗಿ ಸಂಬಂಧಿಸಿದನ್ನು, ಫಲಪ್ರದವಾದ ಜ್ಞಾನವನ್ನು ಅವನು ವಿರೋಧಿಸಲಿಲ್ಲ.


ಉಲ್ಲೇಖಗಳು

[[ವರ್ಗ:ಧರ್ಮ]

  1. https://global.oup.com/academic/product/the-metaphysical-society-1869-1880-9780198846499
  2. http://users.ox.ac.uk/~sfop0426/nothing.pdf
  3. https://www.britannica.com/topic/positivism