ಅನಿಯತಶ್ರಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ''' ಅನಿಯತಶ್ರಮ''' ಇದು, ವರ್ಷದ ಎಲ್ಲ ಕಾಲಗಳಲ್ಲೂ ಏಕಪ್ರಕಾರವಾಗಿ ಪಡೆಯಲಾರದ ಹಾಗ...
( ಯಾವುದೇ ವ್ಯತ್ಯಾಸವಿಲ್ಲ )

೦೦:೦೫, ೧೨ ಜನವರಿ ೨೦೨೦ ನಂತೆ ಪರಿಷ್ಕರಣೆ

ಅನಿಯತಶ್ರಮ ಇದು, ವರ್ಷದ ಎಲ್ಲ ಕಾಲಗಳಲ್ಲೂ ಏಕಪ್ರಕಾರವಾಗಿ ಪಡೆಯಲಾರದ ಹಾಗೂ ನಿಯತವಲ್ಲದ ಉದ್ಯೋಗಗಳಲ್ಲಿ ನೇಮಿತವಾಗುವವರ ಶ್ರಮವನ್ನು ಅನಿಯತಶ್ರಮ (ಕ್ಯಾಷುಅಲ್ ಲೇಬರ್) ಎನ್ನುತ್ತಾರೆ. ಇದು ಎಲ್ಲ ಉದ್ಯಮಗಳಲ್ಲೂ ಕಾಣಬರುತ್ತದೆ. ಇದರ ಪ್ರಮಾಣ ಕೆಲವು ಅಂಶಗಳಿಂದ ನಿರ್ಧರಿಸಲ್ಪಡುತ್ತದೆ. ಮೊದಲನೆಯದಾಗಿ ಇದು ದೇಶದ ನಿರುದ್ಯೋಗಪರಿಸ್ಥಿತಿಯನ್ನು ಅವಲಂಬಿಸಿದೆ. ಅಂದರೆ ನಿರುದ್ಯೋಗದ ಪ್ರಮಾಣ ಹೆಚ್ಚಾದ ಹಾಗೆಲ್ಲ ಅನಿಯತಶ್ರಮದ ಪ್ರಮಾಣವೂ ಹೆಚ್ಚಾಗುತ್ತದೆ. ಎರಡನೆಯದಾಗಿ ಉದ್ಯಮಗಳ ಲಕ್ಷಣಗಳಿಗನುಸಾರವಾಗಿ ಅನಿಯತಶ್ರಮದ ಪ್ರಮಾಣದಲ್ಲಿ ವ್ಯತ್ಯಾಸಗಳುಂಟಾಗುತ್ತವೆ. ಉದಾಹರಣೆಗಾಗಿ ಹಡಗುಕಟ್ಟೆಗಳಲ್ಲಿ ಸರಕು ಸಾಗಾಣಿಕೆಯ ಕಾರ್ಯದಲ್ಲಿ ಹವಾಮಾನ ವ್ಯತ್ಯಾಸಗಳಿಂದಾಗಿ ಏರುಪೇರುಂಟಾದಲ್ಲಿ ಅಲ್ಲಿ ನೇಮಿತವಾಗುವ ಅನಿಯತಶ್ರಮದ ಪ್ರಮಾಣದಲ್ಲಿಯೂ ಅದೇರೀತಿ ವ್ಯತ್ಯಾಸಗಳುಂಟಾಗುತ್ತವೆ. ಆದರೆ ನಿಯತಕಾಲಿಕವಾಗಿ ಪುನರಾವರ್ತಿಸುವ ಋತುಮಾನ ಉದ್ಯಮಗಳಲ್ಲಿ ಅಂದರೆ ವ್ಯವಸಾಯ ಇತ್ಯಾದಿ ಉದ್ಯಮಗಳಲ್ಲಿ ಉತ್ಪಾದನಾಕಾರ್ಯಗಳು ಹೆಚ್ಚು ಏರುಪೇರುಗಳಿಗೆ ಅಧೀನವಾಗಿಲ್ಲದಿರುವುದರಿಂದ ಅವುಗಳಲ್ಲಿ ನಿರತವಾಗಿರುವ ಅನಿಯತಶ್ರಮದ ಪ್ರಮಾಣದಲ್ಲಿ ಹೆಚ್ಚು ವ್ಯತ್ಯಾಸಗಳಿರುವುದಿಲ್ಲ. ಆದರೂ ಒಟ್ಟಿನಲ್ಲಿ ಅನಿಯಶ್ರಮ ಋತುಮಾನ ಹಾಗೂ ವರ್ಷಪೂರ್ತಿ ಏಕಪ್ರಕಾರವಾಗಿ ಕೆಲಸವಿಲ್ಲದಿರುವ ಉದ್ಯಮಗಳಲ್ಲಿ ಅಂದರೆ ಕಟ್ಟಡನಿರ್ಮಾಣ, ಉಡುಪುತಯಾರಿಕೆ, ವ್ಯವಸಾಯ, ಹಡಗುಕಟ್ಟೆಗಳಲ್ಲಿ ಹಡಗುಗಳಿಗೆ ಸರಕುಗಳನ್ನು ಭರ್ತಿಮಾಡುವುದು ಮತ್ತು ಅವುಗಳಿಂದ ಇಳಿಸಿಕೊಳ್ಳುವುದು-ಇವೇ ಮುಂತಾದ ಉದ್ಯಮಗಳಲ್ಲಿ ಮಾತ್ರ ಅಧಿಕಪ್ರಮಾಣದಲ್ಲಿ ಕಾಣಬರುವುದು.[೧]

ಹಿನ್ನೆಲೆ

ಅನಿಯತಶ್ರಮಗಾರ ಸಾಮಾನ್ಯವಾಗಿ ಅನುಕ್ರಮವಾಗಿ ಪುನರಾವರ್ತಿಸುವ ಅಲ್ಪಕಾಲದ ಉದ್ಯೋಗಗಳಲ್ಲಿ ನೇಮಿಸಲ್ಪಡುವ ಶ್ರಮಗಾರ. ಅವನು ಸಾಮಾನ್ಯವಾಗಿ ಕಾಯಂ ಶ್ರಮಗಾರನಂತೆ ತನ್ನ ಕೆಲಸದಲ್ಲಿ ಸಂಪೂರ್ಣ ನೈಪುಣ್ಯ ಹೊಂದಿರುವುದಿಲ್ಲ ಮತ್ತು ಅವನಂತೆ ವರ್ಷದ ಎಲ್ಲ ಕಾಲಗಳಲ್ಲೂ ಏಕಪ್ರಕಾರವಾಗಿ ಉದ್ಯೋಗವನ್ನು ಹೊಂದಿರುವುದಿಲ್ಲ. ಬಹಳಮಟ್ಟಿಗೆ ಮಧ್ಯಮರೀತಿಯ ನೈಪುಣ್ಯ ಹೊಂದಿದ ಕೆಲಸಗಾರನಾಗಿಯೊ ನೈಪುಣ್ಯ ಹೊಂದಿದ ಬರಿಯ ದೈಹಿಕ ಶ್ರಮಗಾರನಾಗಿಯೊ ಇರುತ್ತಾನೆ. ಅನೇಕವೇಳೆ ಅವನು ಉದ್ಯೋಗಗಳಲ್ಲಿ ನೇಮಿತವಾಗುವ ರೀತಿಯನ್ನು ನೋಡಿದರೆ, ಅವನಿಗೆ ಬೆಳಗ್ಗೆ ಕೆಲಸವಿದ್ದರೆ ಅಂದೇ ಮಧ್ಯಾಹ್ನ ಕೆಲಸವಿಲ್ಲದೆ ಇರುವುದನ್ನು ಕಾಣಬಹುದು. ಇದಕ್ಕೆ ನಿದರ್ಶನವಾಗಿ ಹಡಗುಕಟ್ಟೆಗಳಲ್ಲಿ ಕೆಲಸಮಾಡುವ ಅನಿಯತಕೂಲಿಗಾರರನ್ನು ಉದಾಹರಿಸಬಹುದು. ಹಡಗುಕಟ್ಟೆಗಳಲ್ಲಿ ಹಡಗುಗಳಲ್ಲಿ ತರುವ ಮತ್ತು ಸಾಗಿಸುವ ಸರಕುವ್ಯಾಪಾರದ ಪ್ರಮಾಣ ಹವಾಮಾನ ಇತ್ಯಾದಿ ಕಾರಣಗಳಿಂದ ಏರುಪೇರುಗಳಿಗೊಳಗಾಗಿರುತ್ತದೆ. ಹವಾಮಾನ ಚೆನ್ನಾಗಿದ್ದು ಹೆಚ್ಚು ಸಂಖ್ಯೆಯಲ್ಲಿ ಹಡಗುಗಳು ಸರಕುಗಳನ್ನು ಹೊತ್ತು ಕಟ್ಟೆಗೆ ಅಥವಾ ಕಟ್ಟೆಯಿಂದ ಹೊರಗೆ ಹೊರಟಾಗ, ಇಂಥ ಶ್ರಮಗಾರರಿಗೆ ಹೆಚ್ಚು ಬೇಡಿಕೆ ಉಂಟಾಗುತ್ತದೆ. ಆದರೆ ಸರಕು ಸಾಗಾಣಿಕೆಯ ಪ್ರಮಾಣ ಮೇಲೆ ಹೇಳಿದ ಕಾರಣಗಳಿಂದ ಕಡಿಮೆಯಾದಾಗ ಈ ಶ್ರಮಗಾರರಿಗೆ ಬೇಡಿಕೆ ಕಡಿಮೆಯಾಗುತ್ತದೆ ಅಥವಾ ಇಲ್ಲವಾಗುತ್ತದೆ. ಇದೇ ರೀತಿಯಲ್ಲಿ ಋತುಮಾನ ಉದ್ಯಮಗಳಾದ ವ್ಯವಸಾಯ ಇತ್ಯಾದಿ ಉದ್ಯಮಗಳಲ್ಲಿಯೂ ಅನಿಯತ ಶ್ರಮಗಾರರಿಗೆ ವರ್ಷಪೂರ್ತಿ ಏಕಪ್ರಕಾರವಾಗಿ ಕೆಲಸವಿರುವುದಿಲ್ಲ.

ಅನಿಯತಶ್ರಮದ ಪರಿಣಾಮ

ಅಧಿಕಸಂಖ್ಯೆಯಲ್ಲಿರುವ ಅನಿಯತಕೂಲಿಗಾರವರ್ಗ ಮಾರುಕಟ್ಟೆಗೋಸ್ಕರ ಉತ್ಪಾದನೆಯನ್ನು ಕೈಗೊಳ್ಳುವ ಬಂಡವಾಳಶಾಹೀ ಉತ್ಪಾದನೆಯ ಆರಂಭಕಾಲದಿಂದಲೂ ಅಸ್ತಿತ್ವಕ್ಕೆ ಬಂದಿತೆಂದು ಹೇಳಬಹುದು. ರೈಲು ಮತ್ತು ಹಡಗು ಮಾರ್ಗಗಳ ಸಹಾಯದಿಂದ ಮಾರುಕಟ್ಟೆಯ ವೈಶಾಲ್ಯ ಹೆಚ್ಚಿ ಅನಿಯತಕೂಲಿಗಾರವರ್ಗದ ಪ್ರಮಾಣ ಗಂಭೀರಮಟ್ಟವನ್ನು ಮುಟ್ಟಿತು. ಮಾರುಕಟ್ಟೆಯ ವೈಶಾಲ್ಯ ಹೆಚ್ಚಿದಂತೆಲ್ಲ ಅಧಿಕಪ್ರಮಾಣದ ಉತ್ಪಾದನೆ ಮತ್ತು ತಾಂತ್ರಿಕe್ಞÁನದ ಶೀಘ್ರಬೆಳೆವಣಿಗೆಯಾಗಿ ಮಾರುಕಟ್ಟೆಯಲ್ಲಿ ಒಂದು ಅನಿಶ್ಚಿತ ಪರಿಸ್ಥಿತಿ ಉಂಟಾಯಿತು. ಪ್ರತಿಯೊಂದು ಉದ್ಯಮಸಂಸ್ಥೆಯೂ ತನ್ನ ವ್ಯಾಪಾರದ ಏರುತಗ್ಗುಗಳನ್ನು ತನ್ನ ಉದ್ಯಮಕ್ಷೇತ್ರದ ಇನ್ನೊಂದು ಸಂಸ್ಥೆಯ ಸಹಕಾರವಿಲ್ಲದೆ ತಾನೇ ಅನುಭವಿಸಬೇಕಾಯಿತು. ಹೀಗೆ ಪ್ರತಿಯೊಂದು ಉದ್ಯಮಸಂಸ್ಥೆಯೂ ತನ್ನ ಸಿದ್ಧವಸ್ತುಗಳ ಬೇಡಿಕೆಯ ವ್ಯತ್ಯಾಸಗಳಿಗೆ ತಾನೇ ಸ್ವತಂತ್ರವಾಗಿ ಒಳಪಟ್ಟಿರುವುದರಿಂದ ತನ್ನ ವ್ಯಾಪಾರದಲ್ಲಿ ಅತಿ ಹೆಚ್ಚು ಹೊರೆಯುಂಟಾದಾಗ ಆ ಹೊರೆಯನ್ನು ತಾನೇ ಯಶಸ್ವಿಯಾಗಿ ಹೊರುವುದಕ್ಕೋಸ್ಕರ ಯಾವಾಗಲೂ ಸಾಕಷ್ಟು ಪ್ರಮಾಣದಲ್ಲಿ ಶ್ರಮಗಾರರನ್ನು ತನ್ನ ಅಧೀನದಲ್ಲಿ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸುತ್ತದೆ. ಇಂಥ ಪರಿಸ್ಥಿತಿಯಲ್ಲಿ ನೈಪುಣ್ಯವನ್ನು ಹೊಂದದ ಅಥವಾ ಅಪೂರ್ಣ ನೈಪುಣ್ಯ ಹೊಂದಿರುವ ಶ್ರಮಗಾರರ ಮೀಸಲುಗುಂಪಿನ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಕೆಲಸದ ಒತ್ತಡ ಹೆಚ್ಚಿದ ಹಾಗೆಲ್ಲ ಈ ಗುಂಪಿನವರಿಗೆ ಉದ್ಯೋಗ ದೊರೆಯುತ್ತದೆ; ಒತ್ತಡ ಕಡಿಮೆಯಾದಾಗ ಉದ್ಯೋಗವಿರುವುದಿಲ್ಲ. ಆದರೆ ಇವರಲ್ಲಿ ಯಾರೂ ವರ್ಷಪೂರ್ತಿ ನಿರುದ್ಯೋಗಿಗಳಾಗಿರುವುದಿಲ್ಲ.[೨]

ತೊಂದರೆಗಳು

ಅನಿಯತಶ್ರಮಗಾರರು ಉದ್ಯೋಗಕ್ಕೆ ಅನರ್ಹರೇನೂ ಅಲ್ಲ. ಆದರೆ ಅವರು ವರ್ಷಪೂರ್ತಿ ನಿರುದ್ಯೋಗಿಗಳಾಗಿರದೆ ಕೆಲವುಕಾಲ ಉದ್ಯೋಗದಲ್ಲಿರುವುದು ಅವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಉದ್ಯೋಗವನ್ನು ಹುಡುಕಿಕೊಂಡು ಹೋಗುವುದನ್ನು ತಡೆಗಟ್ಟಿದೆಯೆಂದು ಹೇಳಬಹುದು. ಈ ಕಾರಣದಿಂದ ಅವರು ಒಂದು ವ್ಯವಸ್ಥಿತ ಜೀವನವನ್ನು ನಡೆಸಲು ಸಾಧ್ಯವಾಗಿಲ್ಲ. ಅವರ ಗಳಿಕೆ ಅವರ ಕುಟುಂಬಕ್ಕೆ ಯೋಗ್ಯರೀತಿಯ ಜೀವನವನ್ನು ನಡೆಸಲು ಶಕ್ತಿಯನ್ನು ಒದಗಿಸಿ ಕೊಡುವುದಿರಲಿ ಅನೇಕವೇಳೆ ಅದು ಒಬ್ಬನ ಜೀವನ ನಿರ್ವಹಿಸಲೂ ಸಾಲದಾಗಿರುತ್ತದೆ. ಇದರಿಂದ ಅನಿಯತಕೂಲಿಗಾರರಿಗೆ ನಿಶ್ಚಿತರೀತಿಯಲ್ಲಿ ತಮ್ಮ ಜೀವನ ನಡೆಸಲು ಕಷ್ಟವಾಗುತ್ತದೆ. ಅವರ ಜೀವನದ ಆಗುಹೋಗುಗಳು ದುಷ್ಪರಿಣಾಮಕಾರಿಯಾಗಿವೆ. ಅವ್ಯವಸ್ಥಿತ ಉದ್ಯೋಗ ಹಾಗೂ ಅನಿಶ್ಚಿತಗಳಿಕೆಗಳಿಂದಾಗಿ ಅನಿಯತಶ್ರಮಗಾರ ಅನೇಕ ತೊಂದರೆಗಳಿಗೆ ಒಳಗಾಗುತ್ತಾನೆ. ಹೆಚ್ಚುಕಾಲ ಕೆಲಸವಿಲ್ಲದಿರುವುದರಿಂದ ಅವನು ಸೋಮಾರಿಯಾಗುವ ಸಂಭವವೂ ಉಂಟು. ಹೀಗೆ ಕೆಲಸವಿಲ್ಲದೆ ಸೋಮಾರಿಯಾಗುವುದರಿಂದ ಮತ್ತು ಅವನ ಗಳಿಕೆ ಅವನಿಗೆ ಸಾಲದುದರಿಂದ ಅವನು ಕೆಲವು ಸಮಾಜಘಾತಕ ಕೆಲಸಗಳಿಗೆ ಇಳಿಯುವುದು ಅಸಂಭವವೇನೂ ಅಲ್ಲ.[೩]

ಕಾನೂನು

ಮೇಲೆ ಹೇಳಿದ ಕಷ್ಟ ಪರಿಸ್ಥಿತಿಗಳಿಂದ ಅನಿಯತಕೂಲಿಗಾರರಲ್ಲಿ ಒಂದು ವಿಧವಾದ ಅಸಮಾಧಾನವುಂಟಾಗಿ ಅವರಿಗೆ ಯಾವ ಉದ್ಯಮದಲ್ಲಾಗಲಿ, ಕಾರ್ಮಿಕಸಂಘ ಚಟುವಟಿಕೆಗಳಲ್ಲಾಗಲಿ ಪಾರ್ಲಿಮೆಂಟರಿ ಕಾರ್ಯವಿಧಾನಗಳಲ್ಲಿಯಾಗಲಿ ಆಸಕ್ತಿ ಇರುವುದಿಲ್ಲ. ಇತ್ತೀಚೆಗೆ ಇಂಗ್ಲೆಂಡ್, ಆಸ್ಟ್ರೇಲಿಯ, ಭಾರತ-[೪]ಇವೇ ಮುಂತಾದ ದೇಶಗಳಲ್ಲಿ ಅನಿಯತಕೂಲಿಗಾರರ ಕಾರ್ಮಿಕಸಂಘಗಳು ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ. ಇವುಗಳಿಗೆ ಇಂಗ್ಲೆಂಡಿನ ನ್ಯೂ ಯೂನಿಯನಿಸಂ, ಭಾರತ ಮತ್ತು ಆಸ್ಟ್ರೇಲಿಯ ದೇಶಗಳ ಹಡಗುಕಟ್ಟೆಗಳ ಕಾರ್ಮಿಕಸಂಘಗಳು ನಿದರ್ಶನವಾಗಿವೆ.[೫]

ಕೈಗಾರಿಕೆಯಲ್ಲಿ ಅನಿಯತಶ್ರಮ

ಕೆಲವು ಉದ್ಯಮಸಂಸ್ಥೆಗಳಲ್ಲಿನ ಪ್ರಸ್ತುತಬೆಳೆವಣಿಗೆಗಳು ಅನಿಯತಶ್ರಮದ ಭಾಗಶಃ ವಿಸರ್ಜನೆಯತ್ತ ವಾಲಿದೆ. ಉತ್ಪಾದನಾವಿಧಾನಗಳಲ್ಲಿ ಹೆಚ್ಚು ಹೆಚ್ಚು ಯಾಂತ್ರೀಕರಣ, ಉದ್ಯಮಗಳಲ್ಲಿ ವರ್ಷಪೂರ್ತಿ ನಿಶ್ಚಿತ ಉತ್ಪಾದನೆ ಮತ್ತು ವ್ಯವಸಾಯದಲ್ಲಿ ಬೆಳೆಗಳ ವೈವಿಧ್ಯ- ಇವುಗಳ ಮೂಲಕ ಅನಿಯತಕೆಲಸಗಾರರ ಸಮಸ್ಯೆ ಬಹುಮಟ್ಟಿಗೆ ಪರಿಹಾರವಾಗುತ್ತಿದೆಯೆಂದು ಹೇಳಬಹುದು. ಇದಕ್ಕೆ ನಿದರ್ಶನವಾಗಿ ಕೆಲವು ಪಾಶ್ಚಾತ್ಯ ಉಡುಪುತಯಾರಿಕಾಸಂಸ್ಥೆಗಳಲ್ಲಿ ಕಾರ್ಮಿಕಸಂಘಗಳ ನೇತೃತ್ವದಲ್ಲಿ ಕೆಲಸಮಾಡುವ ಕೇಂದ್ರೀಯ ಉದ್ಯೋಗವ್ಯವಸ್ಥೆಯೂ ಕಾರ್ಮಿಕಮಾಲೀಕರುಗಳ ಜಂಟೀ ಮೇಲ್ವಿಚಾರಣೆಯಲ್ಲಿ ನಡೆಯಲ್ಪಡುವ ನಿರುದ್ಯೋಗಿ ವಿಮೆಯ ಏರ್ಪಾಡೂ ಅನಿಯತಕೂಲಿಗಾರರ ಸಂಖ್ಯೆಯನ್ನು ಕಡಿಮೆ ಮಾಡಿರುವುದಲ್ಲದೆ ಆ ಗುಂಪಿಗೆ ಹೊಸಬರು ಸೇರಿ ಅವರ ಸಂಖ್ಯೆಯನ್ನು ಹೆಚ್ಚಿಸದಂತೆ ತಡೆಗಟ್ಟಿದೆ.

ಮಾನವೀಯತೆ ಮತ್ತು ಅನಿಯತಶ್ರಮ

ಕೆಲವು ಉದ್ಯಮಗಳ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿದಾಗ ಅನಿಯತಶ್ರಮಗಾರರ ಸೇವೆ ದೇಶದಲ್ಲಿ ಅನಿವಾರ್ಯವೆಂಬುದು ತಿಳಿಯುತ್ತದೆ. ಆದುದರಿಂದಲೇ ಅಭಿವೃದ್ಧಿ ಹೊಂದಿದ ಪಾಶ್ಚಾತ್ಯ ರಾಷ್ಟ್ರಗಳ ಸುವ್ಯವಸ್ಥಿತ ಕೈಗಾರಿಕೋದ್ಯಮಗಳಲ್ಲೂ ಅನಿಯತಶ್ರಮಗಾರರ ಗುಂಪಿನ ಸಂಪೂರ್ಣ ವಿಸರ್ಜನೆ ಸಾಧ್ಯವಾಗುವುದಿಲ್ಲ. ಅದು ಸರಿಯೂ ಅಲ್ಲವೆನಿಸುತ್ತದೆ. ಆದ್ದರಿಂದಲೇ ಅನಿಯತಶ್ರಮಗಾರರ ಸಂಖ್ಯೆಯನ್ನು ಪ್ರತಿಯೊಂದು ದೇಶದಲ್ಲೂ ಕನಿಷ್ಠಮಟ್ಟಕ್ಕೆ ಇಳಿಸಬೇಕೆಂದು ಅರ್ಥಶಾಸ್ತ್ರಜ್ಞರ ಅಭಿಪ್ರಾಯ. ಹೀಗೆ ಅವರ ಸಂಖ್ಯೆಯನ್ನು ಕನಿಷ್ಠಮಟ್ಟಕ್ಕೆ ತಂದಮೇಲೆ ಮಾನವೀಯದೃಷ್ಟಿಯಿಂದ ಅವರ ಕಷ್ಟಪರಿಸ್ಥಿತಿಗಳನ್ನು ಹೋಗಲಾಡಿಸಿ ಅವರು ಯೋಗ್ಯ ರೀತಿಯ ಜೀವನವನ್ನು ನಡೆಸಲು ತಕ್ಕ ಅವಕಾಶಗಳನ್ನು ಕಲ್ಪಿಸಿಕೊಡುವುದು ಸರ್ಕಾರದ ಮತ್ತು ಖಾಸಗಿ ಉದ್ಯಮಿಗಳ ಕರ್ತವ್ಯ.[೬]

ಭಾರತದಲ್ಲಿ ಅನಿಯತಶ್ರಮ

ಭಾರತದಲ್ಲಿ ಅಧಿಕಪ್ರಮಾಣದ ನಿರುದ್ಯೋಗಸಮಸ್ಯೆ, ಜನಸಂಖ್ಯೆಯ ಏರುವಿಕೆ, ಆರ್ಥಿಕ ಹಿಂದುಳಿಕೆ-ಇವೇ ಮೊದಲಾದ ಕಾರಣಗಳಿಂದ ಅನಿಯತಶ್ರಮಗಾರರ ಸಂಖ್ಯೆ ಅಧಿಕವಾಗಿದೆಯೆಂದು ಹೇಳಬಹುದು. ಇದರ ಭಾಗವಾದ ಬದಲಿಪದ್ಧತಿ ಅಂದರೆ ಕಾಯಂ ಕೆಲಸಗಾರರು ಉದ್ಯಮ ಸಂಸ್ಥೆಗಳಲ್ಲಿ ದೀರ್ಘಕಾಲ ರಜ ತೆಗೆದುಕೊಂಡು ಹೋದರೆ ಅವರ ಸ್ಥಾನಗಳಲ್ಲಿ ಅನಿಯತಶ್ರಮಗಾರರನ್ನು ತಾತ್ಕಾಲಿಕವಾಗಿ ನೇಮಿಸುವುದು-ಈ ಪದ್ಧತಿ ಸಮಸ್ಯೆ ಅನಿಯತಕೆಲಸಗಾರರ ಸಂಖ್ಯೆ ಹೆಚ್ಚಿದ ಹಾಗೆಲ್ಲ ಉಲ್ಬಣವಾಗುತ್ತಿದೆ. ಈ ಸಮಸ್ಯೆಯನ್ನು ಆದಷ್ಟು ಶೀಘ್ರವಾಗಿ ಬಗೆ ಹರಿಸುವ ದೃಷ್ಟಿಯಿಂದ ಕೇಂದ್ರೀಯ ಉದ್ಯೋಗ ಮತ್ತು ಪುನರ್ವಸತಿ ಡೈರಕ್ಟರ್ ಜನರಲ್ ಅವರ ಅಧೀನದಲ್ಲಿ ನಾಡಿನಾದ್ಯಂತ ಪಸರಿಸಿ ಕೆಲಸಮಾಡುವ ಉದ್ಯೋಗವಿನಿಮಯ ಕೇಂದ್ರಗಳು ಹೆಚ್ಚುತ್ತಿವೆ. ಈ ಕೇಂದ್ರಗಳು ಅನಿಯತಶ್ರಮಗಾರರ ಹೆಸರುಗಳನ್ನು ರಿಜಿಸ್ಟರ್ ಮಾಡಿಕೊಳ್ಳುವ ಮತ್ತು ಅವರನ್ನು ಅವರ ಯೋಗ್ಯತೆಗೆ ತಕ್ಕಂಥ ಕೆಲಸಗಳಲ್ಲಿ ನಿಯಮಿಸುವ ಕಾರ್ಯಗಳ ಮೂಲಕ ಅನಿಯತಕೆಲಸಗಾರರನ್ನು ನಿಯತಕೆಲಸಗಾರರನ್ನಾಗಿ ಪರಿವರ್ತಿಸುವುದಕ್ಕೆ ಪ್ರಯತ್ನ ಮಾಡುತ್ತಿವೆ. ಈ ಪ್ರಯತ್ನದಲ್ಲಿ ಗಮನಾರ್ಹಪ್ರಗತಿಯನ್ನು ಸಾಧಿಸಿವೆ. ಇಷ್ಟೇ ಅಲ್ಲದೆ ಅನಿಯತಕೆಲಸಗಾರರನ್ನು ಅವರ ನಿರುದ್ಯೋಗಕಾಲದಲ್ಲಿ ಇತರ ನಿರುದ್ಯೋಗಿಗಳ ಜೊತೆಗೆ ಸೇರಿಸಿ ಅವರಿಗೆಲ್ಲ ನಿರುದ್ಯೋಗವಿಮೆಯ ಸೌಕರ್ಯವನ್ನು ಒದಗಿಸಿ ಕೊಡುವುದು ತುಂಬ ಸೂಕ್ತವಾಗಿದೆ.[೭]


ಉಲ್ಲೇಖಗಳು

  1. http://www.businessdictionary.com/definition/casual-labor.html
  2. https://www.youngbhartiya.com/article/india-s-casual-workforce-no-longer-a-casual-matter-1
  3. https://www.wisegeek.com/what-is-casual-labor.htm
  4. https://labour.gov.in/sites/default/files/INDUSTRIALEMPLOYMENT(STANDINGORDERS)1CENTRALRULES1946.pdf
  5. https://www.daemen.edu/about/working-daemen/employee-policies/policy-casual-labor-and-seasonal-help
  6. https://employeasepayroll.com/2019/03/18/how-should-you-pay-casual-labor/
  7. https://www.edd.ca.gov/pdf_pub_ctr/de231k.pdf