ಅತಿರಕ್ತವಿಕಿರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಅತಿರಕ್ತ ವಿಕಿರಣ 1800ನೆಯ ಇಸವಿಯಲ್ಲಿ ಸೂರ್ಯರಶ್ಮಿಯ ರೋಹಿತವನ್ನು ಪರಿಶೀಲಿಸ...
( ಯಾವುದೇ ವ್ಯತ್ಯಾಸವಿಲ್ಲ )

೨೨:೫೨, ೧೧ ಜನವರಿ ೨೦೨೦ ನಂತೆ ಪರಿಷ್ಕರಣೆ

ಅತಿರಕ್ತ ವಿಕಿರಣ

1800ನೆಯ ಇಸವಿಯಲ್ಲಿ ಸೂರ್ಯರಶ್ಮಿಯ ರೋಹಿತವನ್ನು ಪರಿಶೀಲಿಸುತ್ತಿದ್ದ ಇಂಗ್ಲೆಂಡಿನ ಖ್ಯಾತ ಖಗೋಳಶಾಸ್ತ್ರಜ್ಞ ಸರ್ ವಿಲಿಯಂ ಹರ್‍ಷೆಲ್ ಬೆಳಕಿನ ಭಾಗದಲ್ಲಿ ಮಾತ್ರವಲ್ಲದೆ ಅದರ ಆಚೆಯೂ ಸೂರ್ಯ ರಶ್ಮಿಯ ಶಕ್ತಿ ರೋಹಿತದಲ್ಲಿದೆ ಎಂಬ ಒಂದು ವಿಶೇಷವನ್ನು ಕಂಡ. ಬಿಳಿ ಬೆಳಕಿನ ರೋಹಿತದಲ್ಲಿ ನೀಲಿಯಿಂದ ರಕ್ತ ಬಣ್ಣದವರೆಗೂ ವಿವಿಧ ವರ್ಣಗಳು ಕಾಣಿಸುತ್ತವೆ. ರಕ್ತವರ್ಣಕ್ಕೂ ಆಚೆ ಇರುವ ರಶ್ಮಿಗಳನ್ನು ಅತಿರಕ್ತವಿಕಿರಣಗಳು (ಇನ್ಫ್ರ ರೆಡ್ ರೇಡಿಯೇಷನ್) ಎಂದು ಕರೆದ. ಸೂರ್ಯರಶ್ಮಿಗಳಲ್ಲಿ ಸುಮಾರು 60% ಅತಿರಕ್ತವಿಕಿರಣಗಳಾಗಿವೆ.[೧]

ವಿದ್ಯುತ್ಕಾಂತ ವಿಕಿರಣಗಳಲ್ಲಿ ಅತಿರಕ್ತರಶ್ಮಿಗಳ ಸ್ಥಾನ : ಅತಿರಕ್ತರಶ್ಮಿಪುಂಜ ನಮ್ಮ ಚರ್ಮದ ಮೇಲೆ ಬಿದ್ದಾಗ ಶಾಖದ ಅನುಭವವುನ್ನುಂಟುಮಾಡುತ್ತದೆ. ದೃಷ್ಟಿಗೋಚರ ರಶ್ಮಿಗಳಿಗೆ ಇರುವ ಗುಣಗಳೆಲ್ಲವೂ ಈ ರಶ್ಮಿಗಳಿಗೂ ಇರುತ್ತವೆ; ಆದರೆ ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ. ಇದರ ಚಲಿಸುವ ವೇಗವೂ ಬೆಳಕಿನ ವೇಗದಷ್ಟೇ. ಅಂದರೆ 3(1010ಸೆಂ.ಮೀ./ಸೆ. ಈ ಕಿರಣಗಳೂ ಕೆಲವು ಪಾರಕ ವಸ್ತುಗಳ ಮೂಲಕ ಹಾಯಬಲ್ಲುವು. ಅಪಾರಕ ವಸ್ತುಗಳು ಇವನ್ನು ಪ್ರತಿಫಲಿಸುತ್ತವೆ. ಆದರೆ ಬೆಳಕಿಗೆ ಪಾರಕವಾದ ವಸ್ತುಗಳು ಅತಿರಕ್ತರಶ್ಮಿಪುಂಜಕ್ಕೆ ಅಪಾರಕವಾಗಿಯೂ ಬೆಳಕಿಗೆ ಅಪಾರಕವಾದ ವಸ್ತುಗಳು ಅತಿರಕ್ತರಶ್ಮಿಪುಂಜಕ್ಕೆ ಪಾರಕವಾಗಿಯೂ ಇರುವುದೂ ಉಂಟು.[೨]

ರಶ್ಮಿಪುಂಜಗಳು

ಹಲವು ಸಾಮಾನ್ಯ ಗುಣಗಳನ್ನುಳ್ಳ ವಿದ್ಯುದ್ಕಾಂತ ಸೂತ್ರವನ್ನು ಪರಿಪಾಲಿಸುವ ಹಲವು ರಶ್ಮಿಪುಂಜಗಳನ್ನು ಒಂದು ಪಂಗಡಕ್ಕೆ ಸೇರಿಸಿ ಇವನ್ನು ವಿದ್ಯುದಯಸ್ಕಾಂತ ರಶ್ಮಿಪುಂಜಗಳೆಂದು ಹೆಸರಿಸುತ್ತೇವೆ. ಈ ಹಲವು ರಶ್ಮಿಗಳ ಮೂಲವೂ ಕಂಡು ಹಿಡಿಯುವ ಸಾಧನಗಳಲ್ಲಿ ಕೆಲವು ಗುಣಗಳೂ ಬೇರೆ ಬೇರೆಯಾಗಿದ್ದರೂ ಇವೆಲ್ಲ ಒಂದೇ ಬಗೆಯ ಅಲೆಗಳಾಗಿವೆ. ಅಲೆಗಳ ತರಂಗದೂರದ ವ್ಯತ್ಯಾಸವೇ ಹಲವು ರಶ್ಮಿಗಳ ಗುಣಗಳ ವೈವಿಧ್ಯಕ್ಕೆ ಕಾರಣ. ಅತಿ ಹ್ರಸ್ವತರಂಗದೂರದ ರಶ್ಮಿಪುಂಜಗಳು ಗ್ಯಾಮ ರಶ್ಮಿಪುಂಜಗಳಾಗಿದ್ದು, ಅತಿ ದೀರ್ಘ ತರಂಗಮಾನದವು ರೇಡಿಯೋ ರಶ್ಮಿಪುಂಜಗಳಾಗಿರುತ್ತವೆ. ಈ ಎರಡು ತುದಿಗಳ ನಡುವೆ ಎಕ್ಸ್-ಕಿರಣ, ಅತಿನೇರಿಳೆ ವಿಕಿರಣ, ದೃಷ್ಟಿಗೋಚರ ಬೆಳಕು, ಅತಿರಕ್ತವಿಕಿರಣ, ರೇಡಿಯೋ ಅಲೆಗಳು ಕ್ರಮವಾಗಿ ಬರುತ್ತವೆ.

ಅಳತೆಗೋಲುಗಳು

ಅತಿರಕ್ತವಿಕಿರಣದ ತರಂಗದೂರವನ್ನು ಮೈಕ್ರಾನ್‍ಮಾನಗಳಲ್ಲಿ ಅಳೆಯುತ್ತೇವೆ. ಇದನ್ನು ಸೂಚಿಸುವ ಚಿಹ್ನೆ ಗ್ರೀಕ್ ಅಕ್ಷರವಾದ μ(ಮ್ಯೂ) 1ಮೀಟರ್ = 1,000,000 μ; 1ಮಿಲಿ ಮೀಟರ್ = 1000 μ; 1 μ= 10,000 ಆಂಗ್‍ಸ್ಟ್ರಾಂ ಮಾನಗಳು. 0.8-2.5 μ ವರೆಗಿರುವ ಕಿರಣಗಳಿಗೆ ಮಧ್ಯಾತಿರಕ್ತಕಿರಣಗಳು, 50-1,000 μ ವರೆಗಿರುವ ಕಿರಣಗಳಿಗೆ ದೂರಾತಿರಕ್ತಕಿರಣಗಳು ಎಂದು ಹೆಸರು.

ಅತಿರಕ್ತವಿಕಿರಣದ ಮೂಲಗಳು

ಕೃಷ್ಣ ವಸ್ತುವಿನ ರಶ್ಮಿಪುಂಜ ಮತ್ತು ಸೂರ್ಯರಶ್ಮಿಪುಂಜದಲ್ಲಿ ಅತಿರಕ್ತ ರಶ್ಮಿಗಳು ಹೇರಳವಾಗಿವೆ. ಬಿಸಿಯಾದ (ಎಂದರೆ 00Κ ಉಷ್ಣತೆಗಿಂತ ಹೆಚ್ಚಾದ ಉಷ್ಣತೆಯನ್ನುಳ್ಳ) ಎಲ್ಲ ವಸ್ತುಗಳೂ ಅತಿರಕ್ತವಿಕಿರಣವನ್ನು ಉತ್ಸರ್ಜಿಸುತ್ತವೆ. ವಸ್ತುವಿನ ಉಷ್ಣತೆಯನ್ನು ಅವಲಂಬಿಸಿ ಹಾಗೂ ಅದರ ಮೇಲ್ಮೈಯ ಗುಣಗಳಿಗೆ ಹೊಂದಿಕೊಂಡು ರಶ್ಮಿಗಳು ಯಾವ ಯಾವ ತರಂಗದೂರದಲ್ಲಿ ಯಾವ ಯಾವ ಪ್ರಮಾಣದಲ್ಲಿ ಇರುತ್ತವೆಯೆಂಬುದು ನಿಶ್ಚಿತವಾಗುತ್ತದೆ. ಸಂಪೂರ್ಣ ಕೃಷ್ಣ ವಸ್ತುವಿನ ಉತ್ಸರ್ಜನೆಯೇ ಈ ವಸ್ತುಗಳ ಉತ್ಸರ್ಜನೆಗೆಲ್ಲ ಮಾದರಿಯಾಗಿರುತ್ತದೆ. ಉಷ್ಣತೆ ಹೆಚ್ಚಾಗಿದ್ದಾಗ ಅತಿನೇರಿಳೆ ರಶ್ಮಿಗಳು ಮತ್ತು ದೃಷ್ಟಿಗೋಚರ ರಶ್ಮಿಗಳು ಅಧಿಕವಾಗಿದ್ದು ಅತಿರಕ್ತರಶ್ಮಿಗಳ ಪ್ರಮಾಣ ಸ್ವಲ್ಪವಾಗಿರುತ್ತದೆ. ಉಷ್ಣತೆ ಕಡಿಮೆಯಾದ ಹಾಗೆಲ್ಲ ಹೆಚ್ಚು ಹೆಚ್ಚು ಪ್ರಮಾಣದ ಶಕ್ತಿ ಅತಿರಕ್ತರಶ್ಮಿಗಳ ರೂಪದಲ್ಲಿ ಉತ್ಸರ್ಜಿತವಾಗುತ್ತದೆ. ಸುಮಾರು 1000Κ ಗಿಂತ ಕಡಿಮೆ ಉಷ್ಣತೆಯ ವಸ್ತುವಿನಲ್ಲಿ ದೃಷ್ಟಿಗೋಚರ ಶಕ್ತಿ ಅತ್ಯಲ್ಪವಾಗಿದ್ದು ಅತಿರಕ್ತರಶ್ಮಿಪುಂಜವೇ ಹೆಚ್ಚಾಗಿ ಹೊರ ಬೀಳುತ್ತದೆ.

ಆದ್ದರಿಂದ ಕಾದ ವಸ್ತುಗಳೆಲ್ಲವೂ ಅತಿರಕ್ತರಶ್ಮಿಪುಂಜದ ಮೂಲವಾಗಿ ಪರಿಣಮಿಸುತ್ತವೆ. ಉದಾಹರಣೆಗೆ, ನರ್ನ್‍ಸ್ಟ್ ಫಿಲಮೆಂಟ್ ದೀಪದಲ್ಲಿ ವಿದ್ಯುಚ್ಫಕ್ತಿಯಿಂದ ಕಾಯಿಸಲಾದ ಒಂದು ತಂತಿ ಅತಿರಕ್ತರಶ್ಮಿಪುಂಜದ ಮೂಲವಾಗಿರುತ್ತದೆ. ಮಾನವನ ಶರೀರವೂ ಅತಿರಕ್ತರಶ್ಮಿಪುಂಜಗಳನ್ನು ಹೊರಸೂಸುತ್ತದೆ.

ಉಷ್ಣತೆಯಿಂದೊಡಗೂಡಿದ ಘನವಸ್ತುಗಳಲ್ಲದೆ ಹಲವು ಅನಿಲಗಳೂ ತಮ್ಮಲ್ಲಿರುವ ಅಣುಗಳು ಉದ್ರಿಕ್ತಗೊಂಡಾಗ ನಿರ್ದಿಷ್ಟತರಂಗದೂರದ ಅತಿರಕ್ತರಶ್ಮಿಪುಂಜವನ್ನು ಹೊರಸೂಸುತ್ತವೆ.

ಲೀಸóರ್ ಉಪಕರಣಗಳು ಏಕವರ್ಣೀಯವಾದ (ಎಂದರೆ ಒಂದೇ ತರಂಗದೂರದ) ಅತಿರಕ್ತರಶ್ಮಿಪುಂಜದ ಪ್ರಬಲಮೂಲಗಳಾಗಿವೆ. ವಾತಾವರಣದಲ್ಲಿ ಅತಿರಕ್ತರಶ್ಮಿಪುಂಜದ ಪ್ರಸಾರ : ಬೆಳಕಿನಂತೆಯೇ ಅತಿರಕ್ತ ರಶ್ಮಿಗಳೂ ವಾತಾವರಣದಲ್ಲಿ ಬೆಳಕಿನ ವೇಗದಲ್ಲಿ ಚಲಿಸುತ್ತವೆ. ಆದರೆ ವಾತಾವರಣದಲ್ಲಿರುವ ನೀರಿನ ಹಬೆ ಅತಿರಕ್ತರಶ್ಮಿಯ ಕೆಲವು ಭಾಗಗಳನ್ನು ಹೀರುವುದರಿಂದ ಅತಿರಕ್ತರಶ್ಮಿಗಳ ಕೆಲವು ತರಂಗದೂರಗಳು ಮಾತ್ರ ವಾತಾವರಣದ ಮೂಲಕ ಪ್ರಸಾರವಾಗುತ್ತವೆ. ಇವನ್ನು ವಿಕಿರಣ ಪಾರಕ ಕಿಟಕಿಗಳೆಂದು ಕರೆಯುತ್ತಾರೆ. ಇತರ ಯಾವ ತರಂಗಾಂತರಗಳೂ ಪ್ರಸಾರವಾಗದೆ ಜೀರ್ಣವಾಗಿ ಹೋಗುತ್ತವೆ. ಉದಾಹರಣೆಗೆ, Sμ-13 μ ಮಧ್ಯೆ ಇಂಥ ಮುಖ್ಯವಾದ ಒಂದು ಕಿಟಕಿ ಇದೆ.

ಪಾರಕತೆ

ಬೇರೆ ಬೇರೆ ವಸ್ತುಗಳು ಬೇರೆ ಬೇರೆ ಪ್ರಮಾಣದಲ್ಲಿ ಅತಿರಕ್ತಕಿರಣಗಳು ಮತ್ತು ಬೆಳಕು ಪ್ರಸಾರವಾಗಲು ಅವಕಾಶ ಮಾಡಿಕೊಡುತ್ತವೆ. ಉದಾಹರಣೆಗೆ, ಬೆಳಕಿಗೆ ಪೂರ್ಣಪಾರಕವಾದ ಸಾಧಾರಣವಾದ ಗಾಜು ಅತಿರಕ್ತಕಿರಣಗಳ ಮುಖ್ಯಾಂಶಗಳಿಗೆ ಅಪಾರಕವಾಗಿದೆ; ಬೆಳಕಿಗೆ ಅಪಾರಕವಾದ ಜರ್ಮೇನಿಯಂ ಧಾತು ಪಾರಕವಾಗಿದೆ. ಈ ಗುಣಗಳನ್ನು ಪಾರಗಮ್ಯತೆ (ಟ್ರಾನ್ಸ್‍ಮಿಟೆನ್ಸ್) ಮತ್ತು ಹೀರುವ ಶಕ್ತಿ (ಅಬ್ಸಾರ್‍ಪ್ಟ) ಎಂಬ ಮಾನಗಳಿಂದ ಅಳೆಯಬಹುದು. ಅತಿರಕ್ತವಿಕಿರಣವನ್ನು ಗುರುತಿಸುವಿಕೆ: ಎರಡು ಮುಖ್ಯವಾದ ತತ್ತ್ವಗಳನ್ನು ಉಪಯೋಗಿಸಿಕೊಂಡು ಅತಿರಕ್ತವಿಕಿರಣವನ್ನು ಪತ್ತೆಮಾಡಬಹುದು ಹಾಗೂ ಅಳೆಯಬಹುದು.

ಉಷ್ಣತೆಯ ತತ್ತ್ವವನ್ನು ಉಪಯೋಗಿಸಿಕೊಂಡು ಹಲವು ಯಂತ್ರಗಳು ಅತಿರಕ್ತವಿಕಿರಣವನ್ನು ಪತ್ತೆಮಾಡಿ ಅಳೆಯುತ್ತವೆ. ಇವುಗಳಲ್ಲಿ ವಿಕಿರಣದಿಂದ ಉಂಟಾದ ಉಷ್ಣತೆಯನ್ನು ವಿವಿಧ ವಿಧಾನಗಳಿಂದ ಅಳೆಯಲಾಗುತ್ತದೆ.

ರಶ್ಮಿಪುಂಜ ಥರ್ಮೋಪೈಲ್

ಎರಡು ವಿವಿಧ ಲೋಹಗಳ ಕಂಬಿಗಳನ್ನು ತುದಿಗಳಲ್ಲಿ ಸೇರಿಸಿ ಆ ಎರಡು ಸಂಗಮಗಳ(ಜಾಯಿಂಟ್ಸ್) ನಡುವಿನ ಉಷ್ಣತೆಯನ್ನು ವ್ಯತ್ಯಾಸ ಮಾಡಿದರೆ ಸಂಗಮಗಳ ನಡುವೆ ವಿದ್ಯುತ್‍ಪ್ರವಾಹ ಉಂಟಾಗುತ್ತದೆ. ಇದನ್ನು ಥರ್ಮೋಕಪಲ್ ಎಂದು ಕರೆಯುತ್ತೇವೆ. ಹಲವು ಥರ್ಮೋಕಪಲ್‍ಗಳನ್ನು ಅವುಗಳ ತಂಪು ಸಂಗಮಗಳು ಹಾಗೂ ತಪ್ತ ಸಂಗಮಗಳು ಸಮನಾದ ಉಷ್ಣತೆಗಳಲ್ಲಿ ಇರುವಂತೆ ಮಾಡಿದರೆ ಆಗ ವಿದ್ಯುತ್ಪ್ರವಾಹ ಇನ್ನೂ ಅಧಿಕವಾಗುತ್ತದೆ. ಈ ಥರ್ಮೋಕಪಲ್‍ಗಳ ಸಮೂಹವನ್ನು ಥರ್ಮೋಪೈಲ್ ಎಂದು ಕರೆಯುತ್ತೇವೆ. ತಪ್ತ ಸಂಗಮಗಳನ್ನೆಲ್ಲಾ ಒಳಬರುವ ರಶ್ಮಿಪುಂಜಕ್ಕೆ ಎದುರಾಗಿದ್ದರೆ ರಶ್ಮಿಪುಂಜದಿಂದುಂಟಾದ ಉಷ್ಣತೆಯನ್ನು ಅಳೆಯಬಹುದು. ಇದರ ಪ್ರಭಾವ ಹೆಚ್ಚಾಗಬೇಕಾದರೆ ಬಿಸಿಸಂಗಮಗಳಿಗೆ ಕಪ್ಪು ಬಣ್ಣವನ್ನು ಬಳಿಯಬಹುದು. ಕಪ್ಪುಬಣ್ಣ ರಶ್ಮಿಪುಂಜವನ್ನೆಲ್ಲ ಚೆನ್ನಾಗಿ ಹೀರಿ ಉಷ್ಣತೆಯನ್ನು ಹೆಚ್ಚಾಗಿ ಒದಗಿಸುತ್ತದೆ. ಗಾತ್ರದಲ್ಲಿ ದೊಡ್ಡದಾಗಿರುವ ಈ ಯಂತ್ರ ಸೂಕ್ಷ್ಮವಾದ ರಶ್ಮಿಪುಂಜವನ್ನು ಪತ್ತೆ ಹಚ್ಚುತ್ತದೆ.

ಬೋಲೋಮೀಟರ್

ಉಷ್ಣತೆಯಿಂದ ಸೂಕ್ಷ್ಮವಾದ ಪ್ರತಿರೋಧ ತಂತಿಯಲ್ಲಿ ವಿದ್ಯುತ್‍ಪ್ರತಿರೋಧ ಹೆಚ್ಚಾದುದನ್ನು ಅಳೆಯುವುದರಿಂದ ರಶ್ಮಿಪುಂಜದ ಶಕ್ತಿಯನ್ನು ಅಳೆಯಬಹುದು. ಇದು ಬಹು ಸುಟಿಯಾದ ಸಣ್ಣ ಉಪಕರಣ. ಉಷ್ಣತೆಯಿಂದ ವ್ಯತ್ಯಾಸವಾಗುವ ಥರ್ಮಿಸ್ಟರ್ ಎಂಬ ವಿದ್ಯುತ್‍ಪ್ರತಿರೋಧ ಸಲಕರಣೆಗಳನ್ನೂ ಈ ಯಂತ್ರದಲ್ಲಿ ಉಪಯೋಗಿಸಲಾಗಿದೆ. ಕ್ವಾಂಟಂ ಸಾಧನೆಗಳು : ಅತಿರಕ್ತರಶ್ಮಿಪುಂಜಶಕ್ತಿಯ ಕ್ವಾಂಟಂಗಳು (ಶಕ್ತಿಯ ಅತಿಸಣ್ಣವಾದ ರೂಪ, ಶಕಲ) ಒಂದು ವಿಶೇಷ ಸಾಧನದಿಂದ ವಿದ್ಯುತ್ಪ್ರವಾಹವಾಗಿ ಪರಿಣಮಿಸುತ್ತವೆ. ವಿದ್ಯುತ್ಪ್ರವಾಹದ ಶಕ್ತಿ ರಶ್ಮಿಪುಂಜದ ಶಕ್ತಿಯನ್ನು ಅಳೆಯುತ್ತದೆ. ಈಚೆಗೆ ಇವುಗಳ ಬಳಕೆ ಹೆಚ್ಚಿದೆ.[೩]

ಪೋಟೋವೊಲ್ಟಾಯಿಕ್ ಕೋಶಗಳು

ಈ ಕೋಶಗಳಲ್ಲಿರುವ ಲೆಡ್ ಸಲ್ಫೈಡ್, ಲೆಡ್ ಸೆಲೆನೈಡ್ ಮೊದಲಾದ ವಸ್ತುಗಳ ಮೇಲೆ ಬೆಳಕು ಅಥವಾ ಅತಿರಕ್ತರಶ್ಮಿಪುಂಜ ಬಿದ್ದರೆ ವಿದ್ಯುತ್ಪ್ರವಾಹ ಉತ್ಪತ್ತಿಯಾಗುತ್ತದೆ. ಈ ಕ್ರಮದಿಂದಲೂ ಅತಿರಕ್ತರಶ್ಮಿಪುಂಜವನ್ನು ಗುರುತಿಸಬಹುದು.[೪]

ಜರ್ಮೇನಿಯಂ, ಸಿಲಿಕಾನ್ ಮೊದಲಾದ ಅರೆವಾಹಕಗಳನ್ನು (ಸೆಮಿ ಕಂಡಕ್ಟರ್) ಉಪಯೋಗಿಸಿ ತಯಾರಿಸಿದ ಡಯೋಡ್ ಮತ್ತು ಟ್ರಾನ್ಸಿಸ್ಟರುಗಳಲ್ಲಿನ ವಿದ್ಯುತ್ ಪ್ರತಿರೋಧದ ಮೇಲೆ ಅತಿರಕ್ತರಶ್ಮಿಪುಂಜಗಳು ಪರಿಣಾಮಬೀರುತ್ತದೆ. ಈ ಪರಿಣಾಮದಿಂದಾಗಿ ಅತಿರಕ್ತರಶ್ಮಿಪುಂಜಗಳನ್ನು ಪತ್ತೆ ಮಾಡುವಲ್ಲಿ ಅತಿವಾಹಕಗಳನ್ನು ಉಪಯೋಗಿಸಲಾಗುತ್ತಿದೆ.

ಉಪಯೋಗಗಳು

ಅತಿರಕ್ತರಶ್ಮಿಪುಂಜದ ಉಪಯೋಗಗಳಿಗೆ ಮಿತಿಯೇ ಇಲ್ಲ. ಕೆಲವು ಮುಖ್ಯ ಉಪಯೋಗಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ.

ಬಿಸಿಲಿನ ಮೂಲಕ

ಸೂರ್ಯನ ಬಿಸಿಲನ್ನು ನಾವು ಲೆಕ್ಕವಿಲ್ಲದಷ್ಟು ವಿಧಗಳಲ್ಲಿ ಉಪಯೋಗಿಸುತ್ತೇವೆ. ಬಿಸಿಲಿನ ಶಾಖದಿಂದ ಬಟ್ಟೆಗಳನ್ನು ಒಗೆದ ಅನಂತರ ಅವುಗಳನ್ನು ಒಣಗಿಸಲು, ತರಕಾರಿಗಳನ್ನು ಒಣಗಿಸಿ ಬಾಳಕಮಾಡಲು, ಹಪ್ಪಳ, ಸಂಡಿಗೆಗಳನ್ನು ತಯಾರಿಸಲು ಅಥವಾ ಸೌರ ಒಲೆ ಮೊದಲಾದ ಉಪಕರಣಗಳಲ್ಲಿ ನೀರನ್ನು ಕಾಯಿಸಲು ಶಾಖ ನೀಡುವ ಅತಿರಕ್ತ ವಿಕಿರಣಗಳ ಬಳಕೆಯಾಗುತ್ತದೆ.

ಕೃತಕಮೂಲಗಳಿಂದ

ವಿವಿಧ ಅತಿರಕ್ತ ದೀಪಗಳು, ವಿದ್ಯುತ್ಪ್ರವಾಹದಿಂದಲೊ ಬೇರೆ ವಿಧಾನದಿಂದಲೊ ಕಾದ ಲೋಹದಿಂದಲೊ ಅತಿರಕ್ತರಶ್ಮಿಪುಂಜ ಉತ್ಪತ್ತಿಯಾಗಿ ಒಣಗಿಸುವ, ಕಾಯಿಸುವ, ಕೆಲವು ರಾಸಾಯನಿಕ ಕ್ರಿಯೆಗಳನ್ನು ಪ್ರಚೋದಿಸುವ ಅಥವಾ ವೈದ್ಯಕೀಯ ಕಾರ್ಯಗಳು- ಹೀಗೆ ಅನೇಕ ಉಪಯೋಗಕ್ಕೆ ಬರುತ್ತವೆ. ಲೇಸರ್ ಉಪಕರಣವನ್ನು ಬಳಸಿ ಈ ರಶ್ಮಿಪುಂಜವನ್ನು ಪಡೆಯಬಹುದು.

ಕತ್ತಲಲ್ಲಿ ನೋಡುವ ದೃಷ್ಟಿ

ಕಳೆದ ಮಹಾಯುದ್ಧದಲ್ಲಿ ಕತ್ತಲಲ್ಲಿ ಶತ್ರುಗಳಿಗೆ ಗೊತ್ತಾಗದಂತೆಯೇ ಅವರನ್ನೂ ಅವರ ವಾಹನ ಶಸ್ತ್ರಾದಿಗಳನ್ನೂ ಕಂಡು ಹಿಡಿಯುವ ಮತ್ತು ಕತ್ತಲಲ್ಲಿ ಬೆಳಕಿನ ಉಪಯೋಗವಿಲ್ಲದೆಯೇ ವಾಹನಗಳನ್ನು ಓಡಿಸಲು ಸಹಾಯಮಾಡುವ ಯಂತ್ರಗಳನ್ನು ತಯಾರಿಸಲು ಈ ಪುಂಜವನ್ನು ಉಪಯೋಗಿಸಲಾಯಿತು. ಇವುಗಳಲ್ಲಿ ಸ್ನೂಪರ್‍ಸ್ಕೋಪ್ ಮತ್ತು ಸ್ನೈಪರ್‍ಸ್ಕೋಪ್ ಪ್ರಸಿದ್ಧವಾಗಿವೆ. ಈ ಯಂತ್ರಸಾಧನಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

====ಸಾಕ್ಷಿಯಂತ್ರಗಳು====ಈ ಯಂತ್ರಗಳು ಶತ್ರುಗಳೂ ಅವರ ವಾಹನಾದಿಗಳೂ ಹೊರಸೂಸುವ ಅತಿರಕ್ತಕಿರಣಗಳನ್ನು ಉಪಯೋಗಿಸಿಕೊಂಡು ಇವನ್ನು ವಿಶೇಷಸಾಧನಗಳಿಂದ ದೃಗ್ಗೋಚರ ಬೆಳಕಿಗೆ ಪರಿವರ್ತಿಸಿ ನೋಡುವುದಕ್ಕೆ ಅವಕಾಶವನ್ನುಂಟುಮಾಡುತ್ತವೆ. ಈ ಸಾಧನೆಯಲ್ಲಿನ ಮುಖ್ಯಭಾಗವೆಂದರೆ ಪ್ರತಿಬಿಂಬವನ್ನು ಮಾರ್ಪಡಿಸುವ ಕೊಳವೆ.

ಪ್ರತಿಬಿಂಬವನ್ನು ಮಾರ್ಪಡಿಸುವ ಕೊಳವೆ

ಇದು ಒಂದು ವಿಧವಾದ ಶೂನ್ಯ ನಳಿಕೆ. ಮೃದಂಗದ ಆಕಾರವನ್ನು ಹೊಂದಿದ ಈ ಸಣ್ಣ ಸಾಧನದ ಒಂದು ಪಾಶ್ರ್ವದ ಮೇಲೆ ಬಿದ್ದ ಅತಿರಕ್ತರಶ್ಮಿಗಳಿಂದ ಉಂಟಾದ ಚಿತ್ರ ಅದರ ಎದುರು ಪಾಶ್ರ್ವದ ಮೇಲೆ ದೃಗ್ಗೋಚರ ಬೆಳಕಿನ ಚಿತ್ರವಾಗಿ ಮಾರ್ಪಡುತ್ತದೆ. ಮೊದಲ ಪಾಶ್ರ್ವದ ಒಳಭಾಗದಲ್ಲಿನ ಅತಿರಕ್ತರಶ್ಮಿಪುಂಜಕ್ಕೆ ಪ್ರತಿಕ್ರಿಯೆ ತೋರುವ ವಸ್ತುವೊಂದನ್ನು ಲೇಪನಮಾಡಿರಲಾಗುತ್ತದೆ. ಅತಿರಕ್ತರಶ್ಮಿಪುಂಜಗಳು ಬಿದ್ದ ಎಲ್ಲ ಭಾಗಗಳಿಂದಲೂ ರಶ್ಮಿಗಳ ತೀವ್ರತೆಗೆ ಅನುಗುಣವಾದ ಸಂಖ್ಯೆಯ ಎಲೆಕ್ಟ್ರಾನ್‍ಗಳನ್ನು ಆ ವಸ್ತು ಹೊರದೂಡುತ್ತದೆ. ಹೊರಬಿದ್ದ ಎಲೆಕ್ಟ್ರಾನ್‍ಗಳನ್ನು ವಿದ್ಯುಚ್ಫಕ್ತಿಯಿಂದ ಆಕರ್ಷಿಸಿ ಎದುರು ಪಾಶ್ರ್ವದ ಮೇಲೆ ಬೀಳುವಂತೆ ಮಾಡಲಾಗುತ್ತದೆ. ಈ ಪಾಶ್ರ್ವದಲ್ಲಿ ಜಿಂಕ್ ಸಲ್ಫೈಡ್ ಮೊದಲಾದ ವಸ್ತುಗಳನ್ನು ಉಪಯೋಗಿಸಿ ತಯಾರಿಸಿದ ಪರದೆಯೊಂದು ಇರುತ್ತದೆ. ಎಲೆಕ್ಟ್ರಾನ್‍ಗಳು ತಗುಲಿದ ಭಾಗಗಳಲ್ಲೆಲ್ಲಾ ಎಲೆಕ್ಟ್ರಾನ್‍ಗಳ ಸಂಖ್ಯೆಗನುಗುಣವಾದ ತೀವ್ರತೆಯ ಬೆಳಕಿನ ಚುಕ್ಕೆಗಳು ಕಾಣಿಸುತ್ತವೆ. ಮೊದಲು ಪಾಶ್ರ್ವದ ಮೇಲೆ ಬಿದ್ದ ಈ ಚುಕ್ಕೆಗಳಿಂದಾದ ಅತಿರಕ್ತರಶ್ಮಿಪುಂಜದ ಚಿತ್ರವನ್ನು ಭೂತಗನ್ನಡಿಯ ಸಹಾಯದಿಂದ ದೊಡ್ಡದನ್ನಾಗಿಸಿ ನೋಡಬಹುದು. ಈ ಸಾಧನಕ್ಕೆ ಹೆಚ್ಚಿನ ವಿದ್ಯುತ್ಪ್ರವಾಹ ಅವಶ್ಯಕ.

ಕಾರ್ಯಕಾರಿ ಯಂತ್ರಗಳು

ಇವು ಸಾಕ್ಷಿಯಂತ್ರಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿವೆ. ಏಕೆಂದರೆ ಇವು ಅತಿರಕ್ತರಶ್ಮಿಪುಂಜ ದೀಪಗಳನ್ನು ಉಪಯೋಗಿಸಿ ನೋಡಬೇಕಾದ ಕ್ಷೇತ್ರವನ್ನು ಬೆಳಗುತ್ತವೆ. ದೀಪದ ಮುಂದೆ ಇರುವ ಒಂದು ಶೋಧಕ ಅತಿರಕ್ತಪುಂಜವನ್ನು ಮಾತ್ರ ಹೊರಸೂಸುತ್ತಿರುವುದರಿಂದ ಈ ಬೆಳಕು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ಪ್ರತಿಬಿಂಬ ಮಾರ್ಪಡಿಸುವ ಕೊಳವೆಗೆ ಮಾತ್ರ ಕಾಣಿಸುತ್ತದೆ. ಈ ಬಗೆಯ ಯಂತ್ರಗಳ ಉಪಯೋಗಗಳಲ್ಲಿ ಮೊದಲನೆಯದು-ಕತ್ತಲಲ್ಲಿಯೇ ವಾಹನಸಂಚಾರ. ವಾಹನದ ತಲೆದೀಪಗಳಲ್ಲಿ ಶೋಧಕಗಳನ್ನು (ಫಿಲ್ಟರ್) ಜೋಡಿಸಿ ಅವು ಅತಿರಕ್ತರಶ್ಮಿಪುಂಜವನ್ನು ಮಾತ್ರ ಹೊರಗೆಡಹುವಂತೆ ಮಾಡಿ ಚಾಲಕ ಪ್ರತಿಬಿಂಬ ಮಾರ್ಪಡಿಸುವ ಕೊಳವೆಗಳನ್ನೊಳಗೊಂಡ ಕನ್ನಡಕಗಳನ್ನು ಧರಿಸಿಕೊಂಡರೆ ಅವನಿಗೆ ರಸ್ತೆಚೆನ್ನಾಗಿ ಕಾಣುತ್ತದೆ. ಇತರರಿಗೆ ಕಾಣುವುದಿಲ್ಲ.[೫]

ಆಕಾಶದಲ್ಲಿ ವೇಗದಿಂದ ಚಲಿಸುವ ವಿಮಾನ ಮುಂತಾದವುಗಳನ್ನು ಹಿಂಬಾಲಿಸಿಕೊಂಡು ಹೋಗಿ ಅವನ್ನು ನಾಶಪಡಿಸಬಲ್ಲ ರಾಕೆಟ್ಟುಗಳನ್ನು ಅತಿರಕ್ತರಶ್ಮಿಪುಂಜದ ಸಹಾಯದಿಂದ ತಯಾರಿಸಲಾಗಿದೆ. ಉದಾಹರಣೆಗೆ, ವಿಮಾನದಿಂದ ವಿಮಾನಕ್ಕೆ ಹಾರುವ ಸೈಡ್‍ವೈಂಡರ್ ಎಂಬ ಅಮೆರಿಕದ ಶಸ್ತ್ರ; ಹಿಂದೆ ರಷ್ಯದಲ್ಲಿ ಅಮೆರಿಕದ ಯು-2 ವಿಮಾನವನ್ನು ಹೊಡೆದುರುಳಿಸಿದ--ನೆಲದಿಂದ ವಿಮಾನಕ್ಕೆ ಹಾರುವ ಶಸ್ತ್ರ. ಈ ಶಸ್ತ್ರಗಳಲ್ಲಿ ಅತಿರಕ್ತರಶ್ಮಿಪುಂಜವನ್ನು ಪತ್ತೆಮಾಡುವ ಸಾಧನವಿರುತ್ತದೆ. ವಿಮಾನ ಮೊದಲಾದ ಗುರಿಗಳು ಅತಿರಕ್ತರಶ್ಮಿಪುಂಜದ ಆಕರಗಳಾಗಿರುವುದರಿಂದ ಅವುಗಳನ್ನು ಇಂಥ ಶಸ್ತ್ರಗಳು ಗುರುತಿಸುತ್ತವೆ. ಶಸ್ತ್ರದಲ್ಲಿರುವ ಯಂತ್ರವಿಶೇಷಗಳು ಅದರ ಚಲನೆಯ ಗತಿಯನ್ನು ಗುರಿಯ ದಿಕ್ಕಿಗೇ ತಿರುಗಿಸುತ್ತವೆ. ಶಸ್ತ್ರದ ವೇಗ ಗುರಿಯ ವೇಗಕ್ಕಿಂತ ಹೆಚ್ಚಾಗಿರುವುದರಿಂದ ಹಾಗೂ ಚಲನೆಯ ಗತಿ ಶೀಘ್ರವಾಗಿ, ಎಡೆಬಿಡದೆ ಗುರಿಯನ್ನೇ ಅನುಸರಿಸುವುದರಿಂದ ಗುರಿಗೆ ಪೆಟ್ಟು ಬಿದ್ದೇ ಬೀಳುತ್ತದೆ.

ಸಂಪರ್ಕ ಸಾಧನಗಳು

ಟಿವಿಯ ರಿಮೋಟ್ ಇದರ ಅತಿ ಹೆಚ್ಚು ಬಳಕೆಯ ಸಾಧನ. ಮೊದಲ ವಿಶ್ವಯುದ್ಧದಲ್ಲಿ ಜರ್ಮನಿಯ ಸೈನ್ಯ ಆಫ್ರಿಕಾದಲ್ಲಿ ಅತಿರಕ್ತರಶ್ಮಿಪುಂಜವನ್ನು ಸಂಪರ್ಕಸಾಧನಗಳ ತಯಾರಿಕೆಗೆ ಉಪಯೋಗಿಸಿತ್ತು. ಸುದ್ದಿಯ ಪ್ರೇಷಕಸ್ಥಾನದಲ್ಲಿ ಅತಿರಕ್ತದ ಒಂದು ಪ್ರಬಲವಾದ ದೀಪದಿಂದ ಕಿರಣವೊಂದನ್ನು 4-5 ಮೈಲಿ ದೂರದಲ್ಲಿದ್ದ ಗ್ರಾಹಕ ಸ್ಥಾನಕ್ಕೆ ಕಳುಹಿಸಿ ಅಲ್ಲಿ ಅದನ್ನು ಪತ್ತೆ ಮಾಡುವ ಯಂತ್ರಗಳಿಂದ ಸ್ವೀಕರಿಸಲಾಯಿತು.[೬] ಕಳುಹಿಸಬೇಕಾದ ಸಂಕೇತದ ರೂಪದಂತೆಯೇ ಕಿರಣದ ಶಕ್ತಿಯನ್ನೂ ಬದಲಿಸಿದರೆ ಗ್ರಾಹಕಸ್ಥಾನದಲ್ಲಿ ಕಿರಣದ ಬದಲಾಗುವ ರೂಪಗಳಿಂದ ಸಂಕೇತವನ್ನು ಪಡೆಯಬಹುದು. ಸಂಕೇತ ಸಂಜ್ಞೆಗಳು ಧ್ವನಿಯ ರೂಪವನ್ನು ತಳೆದಿದ್ದರೆ, ಸ್ವೀಕೃತವಾದ ಕಿರಣದಲ್ಲಿಯೂ ಧ್ವನಿಸಂಕೇತಗಳು ದೊರೆಯುತ್ತವೆ. ಧ್ವನಿಯ ಸಂಕೇತವನ್ನು ವಿದ್ಯುಚ್ಫಕ್ತಿಯ ಸಂಕೇತವಾಗಿ ಪರಿವರ್ತಿಸಲು ಸೂಕ್ಷ್ಮ ಧ್ವನಿವರ್ಧಕವನ್ನು ಉಪಯೋಗಿಸಬಹುದು. ಈ ವಿದ್ಯುಚ್ಫಕ್ತಿಯ ಸಂಕೇತವನ್ನೇ ದೀಪದಲ್ಲಿ ಉಪಯೋಗವಾಗುತ್ತಿರುವ ವಿದ್ಯುಚ್ಫಕ್ತಿಯ ಜೊತೆಗೆ ಸೇರಿಸಿದರೆ ಧ್ವನಿಸಂಕೇತ ಕಿರಣದ ಮೇಲೆ ಹೇರಲ್ಪಡುತ್ತದೆ. ಗ್ರಾಹಕ ಕೇಂದ್ರದಲ್ಲಿ ಅತಿರಕ್ತರಶ್ಮಿಗಳನ್ನು ಸ್ವೀಕರಿಸುವ ಶಕ್ತಿಯನ್ನುಳ್ಳ ದ್ಯುತಿವಿದ್ಯುತ್ ಮಾರ್ಪಡಿಸಬಹುದು. ವಿದ್ಯುತ್ಪ್ರವಾಹವನ್ನು ಧ್ವನಿವರ್ಧಕದ ಮೂಲಕ ಧ್ವನಿಯನ್ನಾಗಿ ಬದಲಾಯಿಸಬಹುದು. ವಿದ್ಯುತ್ಪ್ರವಾಹಗಳು ಸೂಕ್ಷ್ಮವಾಗಿದ್ದಾಗ ಅವುಗಳ ಶಕ್ತಿಯನ್ನು ಹೆಚ್ಚಿಸಲು ಸೂಕ್ತರೀತಿಯ ಪ್ರವರ್ಧಕಗಳನ್ನು ಉಪಯೋಗಿಸಬಹುದು.[೭]

ಅತಿರಕ್ತ ಟೆಲಿವಿಷನ್

ಅತಿರಕ್ತರಶ್ಮಿಪುಂಜವನ್ನುಪಯೋಗಿಸುವ ಟೆಲಿವಿಷನ್ ಬಿಂಬಗ್ರಾಹಿಯನ್ನು (ಕ್ಯಾಮರ) ಉಪಯೋಗಿಸಿ ರಾತ್ರಿವೇಳೆಯೂ ಬೆಳಕಿನ ಸಹಾಯವಿಲ್ಲದೆಯೇ ಟೆಲಿವಿಷನ್ ಚಿತ್ರಗಳನ್ನು ಪಡೆಯಲು ಅವಕಾಶವಾಗಿದೆ.

ವಿಞ್ನಾನಕ್ಕೆ ಉಪಯೋಗಗಳು

ವಿಞ್ನಾನಕ್ಕೆ, ಕೈಗಾರಿಕೆಯಲ್ಲೂ ಈ ರಶ್ಮಿಪುಂಜದ ಉಪಯೋಗ ಅನೇಕ ವಿಧಗಳಲ್ಲಾಗಿದೆ. ಇವುಗಳಲ್ಲಿ ಒಂದನ್ನು ಮಾತ್ರ ಇಲ್ಲಿ ಕೊಡಲಾಗಿದೆ.

ಅತಿರಕ್ತರೋಹಿತದರ್ಶಕ (ಸ್ಪೆಕ್ಟ್ರಾಸ್ಕೋಪ್)

ಇಪ್ಪತ್ತನೆಯ ಶತಮಾನದ ಮೊದಲಲ್ಲಿ ನಿರ್ಮಿಸಲಾದ ಈ ಯಂತ್ರ ರಸಾಯನಶಾಸ್ತ್ರದ ಅತಿಪ್ರಬಲ ಮತ್ತು ಪ್ರಚಲಿತ ಯಂತ್ರಗಳಲ್ಲೊಂದಾಗಿದೆ. ರಸಾಯನ ವಸ್ತುಗಳನ್ನು ಪತ್ತೆಮಾಡುವುದರಲ್ಲಿ, ಅವುಗಳ ಪ್ರಮಾಣಗಳನ್ನು ಅಳೆಯುವುದರಲ್ಲಿ ಇದು ಸಹಾಯಕಾರಿಯಾಗಿದೆ. ಯಂತ್ರದ ಮುಖ್ಯಭಾಗಗಳೆಂದರೆ--ಅತಿರಕ್ತದ ಮೂಲಭೂತ ವಿಶೇಷದೀಪ. ಇದು ವಿದ್ಯುತ್ಪ್ರವಾಹದಿಂದ ಕಾದ ತಂತಿ. ಮೂಲದಿಂದ ಹೊರಟ ರಶ್ಮಿಪುಂಜವನ್ನು ಒಂದೇ ದಿಕ್ಕಿನಲ್ಲಿ ಹೋಗುವ ಕಿರಣವನ್ನಾಗಿ ಪರಿವರ್ತಿಸುವ ಭೂತ ಕನ್ನಡಿಗಳು. ರಶ್ಮಿಪುಂಜದ ವಿವಿಧ ಅಲೆಯುದ್ದದ ಶಕ್ತಿಯನ್ನು ವಿವಿಧ ದಿಕ್ಕುಗಳಲ್ಲಿ ವಿಂಗಡಿಸುವ ಜಾಳಿಗೆ (ಗ್ರೇಟಿಂಗ್). ಪರಿಶೀಲನೆಗೊಳಗಾದ ವಸ್ತುವನ್ನು ಧರಿಸಿದ ಪಾರಕ ಪಾತ್ರೆ. ವಸ್ತುವಿನ ಮೂಲಕ ಹಾಯ್ದ ರಶ್ಮಿಯನ್ನು ಅಳೆಯುವ ಪತ್ತೇದಾರ (ಥರ್ಮೋಪೈಲ್ ಅಥವಾ ಥರ್ಮಿಸ್ಟರ್). ಪತ್ತೇದಾರಕ ವಿದ್ಯುತ್ಪ್ರವಾಹವನ್ನು ವರ್ಧಿಸುವ ಪ್ರವರ್ಧಕ. ರಶ್ಮಿಯ ಶಕ್ತಿಯನ್ನು ಬರೆದಿಡುವ ಲೇಖಕ. ನಾಳಿ (ಡ್ರಮ್) ಜಾಳಿಗೆಯನ್ನು ಮತ್ತು ಲೇಖಕನಾಳಿಯನ್ನು ನಿಧಾನವಾಗಿ ತಿರುಗಿಸುವ ಮೋಟರ್ ಯಂತ್ರಗಳು.[೮]

ಆಧುನಿಕ ವೈದ್ಯಶಾಸ್ತ್ರದಲ್ಲಿ ಈ ರಶ್ಮಿಪುಂಜವನ್ನು ಉಳುಕಿದ ಅಥವಾ ಹೊರಳಿದ ಮಾಂಸಖಂಡಗಳ ಮತ್ತು ನರಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಇದಕ್ಕಾಗಿ ವಿಶೇಷ ದೀಪಗಳ ರಚನೆಯಾಗಿದೆ. ಲೇಸóರ್ ಉಪಕರಣದಿಂದ ಈ ರಶ್ಮಿಪುಂಜವನ್ನು ತೀವ್ರವಾದ ಹಾಗೂ ಪ್ರಬಲಕಿರಣವನ್ನಾಗಿ ಪರಿವರ್ತಿಸಬಹುದು. ರಕ್ತ ವಿಕಿರಣವನ್ನು ಶಸ್ತ್ರಕ್ರಿಯೆಗಳಲ್ಲಿ ಉಪಯೋಗಿಸಿ ಪರಿವರ್ತಿಸಬಹುದು. ಇಂಥ ಕಿರಣವನ್ನು ಶಸ್ತ್ರಕ್ರಿಯೆಗಳಲ್ಲಿ ಉಪಯೋಗಿಸಿ ಅಪಾಯಕಾರಿಯಾದ ದುರ್ಮಾಂಸದಿಂದ ದೇಹದ ಇತರ ಪ್ರದೇಶಗಳ ಆರೋಗ್ಯಯುತವಾದ ಅವಯವಗಳಿಗೆ ಯಾವ ಕುಂದೂ ಆಗದಂತೆ ಕತ್ತರಿಸಿಹಾಕಬಹುದು.

ಲೇಸರ್ ಉಪಕರಣದ ಪ್ರಯೋಜನಗಳು ಹಲವು. ಇದನ್ನು ರೇಡಾರಿನಂತೆ ಯುದ್ಧದಲ್ಲಿಯೂ ಇತರ ಕ್ಷೇತ್ರಗಳಲ್ಲಿಯೂ ಗುರಿಗಳ ದೂರ ಹಾಗೂ ರೂಪಗಳನ್ನು ಅಳೆಯಲು ಉಪಯೋಗಿಸಲಾಗಿದೆ. ಸುಳ್ಳು ಪತ್ರಗಳನ್ನು ಹಾಗೂ ಮೊದಲಿದ್ದ ಸಹಿಯನ್ನು ಅಳಿಸಿಹಾಕಿ ಸುಳ್ಳು ರುಜುಮಾಡಿರುವುದನ್ನು ಪತ್ತೆ ಹಚ್ಚುವಲ್ಲಿ ಇದು ಯಶಸ್ವಿಯಾಗಿ ಬಳಕೆಯಾಗುತ್ತಿದೆ. ಕೈಗಾರಿಕೆ, ವೈದ್ಯಶಾಸ್ತ್ರ, ಸಂವಹನ ಕ್ಷೇತ್ರಗಳಲ್ಲಿ ಇದರ ಉಪಯೋಗ ಯಾವ ರೀತಿ ಆಗಬಹುದೆಂದು ಊಹಿಸಲೂ ಸಾಧ್ಯವಾಗದಷ್ಟು ಉತ್ತಮ ಭವಿಷ್ಯ ಈ ಸಾಧನಕ್ಕಿದೆ.


ಉಲ್ಲೇಖಗಳು

  1. https://www.livescience.com/50260-infrared-radiation.html
  2. https://www.britannica.com/science/infrared-radiation
  3. https://circuitglobe.com/bolometer.html
  4. https://whatis.techtarget.com/definition/photovoltaic-cell-PV-Cell
  5. https://kolarivision.com/articles/choosing-a-filter/
  6. https://encyclopedia.1914-1918-online.net/article/communication_technology
  7. https://learn.sparkfun.com/tutorials/ir-communication/all
  8. https://amazing-space.stsci.edu/resources/explorations/groundup/lesson/basics/g23/