ಭಾವಗೀತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Protected "ಭಾವಗೀತೆ": Excessive vandalism ([ಸಂಪಾದನೆ=ಹೊಸ ಸದಸ್ಯರನ್ನು ಮತ್ತು ನೋಂದಾವಣೆ ಆಗಿಲ್ಲದವರನ್ನು ತಡೆಹಿಡಿ] (ಅನಿರ್ದಿ...
ಮೈಸೂರು ವಿ.ವಿ. ವಿಶ್ವಕೋಶದ ಲೇಖನದಿಂದ ಮಾಹಿತಿ ಸೇರ್ಪಡೆ
೧ ನೇ ಸಾಲು:
'''ಭಾವಗೀತೆ'''ಯು ವೈಯಕ್ತಿಕ ಭಾವನೆಗಳನ್ನು ಅಭಿವ್ಯಕ್ತಿಸುವ ಕಿರುಕವನ (ಲಿರಿಕ್). ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಭಾರತಾದ್ಯಂತ ಬೀಸಿದ ಪುನರುಜ್ಜೀವನದ ಗಾಳಿಯಲ್ಲಿ ಕನ್ನಡವೂ ತನ್ನ ಹೊಸತನ ಕಂಡುಕೊಂಡು ಸೃಷ್ಟಿಸತೊಡಗಿದ ನವೋದಯ ಕಾವ್ಯ ಪ್ರಕಾರವನ್ನು ನಿರ್ದೇಶಿಸಲು ಹುಟ್ಟಿಕೊಂಡ ಪದ ಭಾವಗೀತೆ. ಇದು ಇಂಗ್ಲಿಷಿನ ಲಿರಿಕ್ ಎಂಬುದಕ್ಕೆ ಸಂವಾದಿಪದ. ನವೋದಯ ಕಾವ್ಯ ಪಾಶ್ಚಾತ್ಯ ರೊಮ್ಯಾಂಟಿಕ್ ಕವಿಗಳ ಲಿರಿಕ್ ಕಾವ್ಯದ ಪ್ರೇರಣೆ ಪ್ರಚೋದನೆಗಳ ಪರಿಣಾಮವಾದುದರಿಂದ ವಸ್ತು, ರೀತಿ ಹಾಗೂ ದೃಷ್ಟಿಯಲ್ಲಿ ಹಿಂದಿನ ಕನ್ನಡ ಕಾವ್ಯ ಪ್ರಕಾರಗಳಿಂದ ಬೇರೆಯೆಂದೇ ತೋರುವ ಈ ನವೋದಯ ಕಾವ್ಯಪ್ರಕಾರವನ್ನು ಹೆಸರಿಸಲು ಲಿರಿಕ್ ಎಂಬ ಪದದ ಅನುವಾದದಂತಿದೆ ಭಾವಗೀತೆ.
{{ಅಳಿಸುವಿಕೆ|ಮಾಹಿತಿಗಳು ಸರಿಯಿಲ್ಲ. ಸೂಕ್ತ ಉಲ್ಲೇಖಗಳೂ ಇಲ್ಲ. ಈ ಲೇಖನವನ್ನು ಸಂಪೂರ್ಣ ಹೊಸದಾಗಿ ಬರೆಯಬೇಕು}}
 
ಪಾಶ್ಚಾತ್ಯ ವಿಮರ್ಶಕರು ಕಾವ್ಯ ಪ್ರಕಾರವನ್ನು ಮೂರು ತೆರನಾಗಿ ವಿಂಗಡಿಸಿದ್ದಾರೆ : 1. ಕವಿ ತನ್ನಿಂದ ಹೊರಗೆ ನಿಂತು ಬಹಿರಂಗದ ಸಿದ್ಧವಸ್ತುವೊಂದನ್ನು ಆಶ್ರಯಿಸಿ ಅನುಭವವನ್ನು ಕವನ ರೂಪದಲ್ಲಿ ನಿರೂಪಿಸಿದರೆ ಅದು ವಸ್ತುನಿಷ್ಠ ಕಾವ್ಯ. ಇದು ಒಂದು ವಿಶೇಷ ಶ್ರೋತೃ ಸಮೂಹ ಕುರಿತು ಹೇಳಿದ್ದು. 2. ಕವಿ ಬಹಿರಂಗದ ವಸ್ತುವನ್ನು ಆಶ್ರಯಿಸದೆ ನೇರವಾಗಿ ತನ್ನ ಅಂತರಂಗದ ಭಾವಾನುಭವಗಳಿಗೆ ರೂಪು ಕೊಟ್ಟರೆ ಅದು ವ್ಯಕ್ತಿನಿಷ್ಠ ಕಾವ್ಯ. ಇದರ ರೀತಿ ಕವಿ ಬಲುಮಟ್ಟಿಗೆ ತನಗೆ ತಾನೇ ಮಾತಾಡಿಕೊಂಡ ಹಾಗೆ ಇರುತ್ತದೆ. ಇದೇ ಭಾವಗೀತೆ ಎಂದು ಕರೆಯುವ ಕಾವ್ಯಪ್ರಕಾರ. 3. ಈ ಎರಡೂ ರೀತಿಗಳನ್ನು ಮಿಲನಗೊಳಿಸಿ ಕ್ರಿಯೆಯೊಂದನ್ನು ಅಭಿನಯಯೋಗ್ಯವಾದ ರೂಪದಲ್ಲಿ ಪಾತ್ರಗಳ ಮೂಲಕ ರೂಪುಕೊಟ್ಟರೆ ಅದು ದೃಶ್ಯಕಾವ್ಯ ಅಥವಾ ನಾಟಕ ಸಾಹಿತ್ಯ ಎನಿಸಿತ್ತದೆ.
 
ಲಿರಿಕ್ ಅಥವಾ ಭಾವಗೀತೆ ಹದಿನೆಂಟನೆಯ ಶತಮಾನದ ರೊಮ್ಯಾಂಟಿಕ್ ಕವಿಗಳಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ತನ್ನ ಅಗ್ಗಳಿಕೆಯನ್ನು ಗಳಿಸಿಕೊಂಡಿತಾದರೂ ಅದು ಮೂಲತಃ ಕ್ರಿಸ್ತಪೂರ್ವ ಏಳು ಎಂಟನೆಯ ಶತಮಾನದಷ್ಟು ಹಿಂದೆಯೇ ಗ್ರೀಸ್ ದೇಶದ ಸಾಫೋ, ಪಿಂಡಾರ್ ಮೊದಲಾದ ಕವಿಗಳ ಕೈಯಲ್ಲಿ ಪಳಗಿತ್ತು. ಭಾವಗೀತೆ ಎಂದರೇನು, ಅದರ ಲಕ್ಷಣಗಳೇನು, ಎನ್ನುವ ಬಗೆಗೆ ಪಾಶ್ಚಾತ್ಯರಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಆ ಎಲ್ಲ ಚರ್ಚೆಗಳ ಪ್ರಕಾರ ಅದರ ಲಕ್ಷಣವನ್ನು ಒಂದು ಮಾತಿನಲ್ಲಿ ಸಂಗ್ರಹಿಸಿ ಹೀಗೆ ಹೇಳಬಹುದು: ಕವಿಯ ವ್ಯಕ್ತಿನಿಷ್ಠ ಅನುಭವದ ತೀವ್ರ ಸಂವೇದನಾರೂಪವಾದ ಕೆಲವು ರಸಕ್ಷಣಗಳ ಗೇಯರೂಪದ ಆತ್ಯಂತ ಸಂಗ್ರಹವೂ ಸಶಕ್ತವೂ ಆದ ಒಂದು ಅಭಿವ್ಯಕ್ತಿ ವಿಶೇಷವೇ ಭಾವಗೀತೆ.
 
==ಲಕ್ಷಣಗಳು==
ಭಾವಗೀತೆಯಲ್ಲಿ ಗಮನಾರ್ಹವಾದ ಮೊದಲ ಲಕ್ಷಣ ಅದು ವ್ಯಕ್ತಿನಿಷ್ಠ ಎನ್ನುವುದು. ಹಿಂದಿನ ಕಾವ್ಯಪದ್ಧತಿಯೆಲ್ಲ ಬಲುಮಟ್ಟಿಗೆ ವಸ್ತುನಿಷ್ಠವೆ. ಎಂದರೆ ಕವಿ ಲೋಕಸಿದ್ಧವಾದ, ಲೋಕಪ್ರಸಿದ್ಧವಾದ ವಸ್ತುವೊಂದನ್ನು ಪೂರ್ವಕವಿಗಳ ಕಾವ್ಯದಿಂದಲೋ ಪುರಾಣೇತಿಹಾಸದಿಂದಲೋ ಎತ್ತಿಕೊಂಡು ಪರಿಭಾವಿಸಿ ನಿರ್ವಹಿಸಬೇಕಾಗಿತ್ತು. ಅಲ್ಲಿ ಕವಿ ತನ್ನ ವೈಯಕ್ತಿಕವಾದ ಭಾವ ಭಾವನೆಗಳಿಗೆ, ಅಭಿಪ್ರಾಯ ಆಲೋಚನೆಗಳಿಗೆ ನೀಡುವ ಅವಕಾಶ ಕಡಿಮೆ. ಭಾವಗೀತೆಯಲ್ಲಾದರೊ ವ್ಯಕ್ತಿಯೇ ಕೇಂದ್ರವಾದುದರಿಂದ ಕವಿ ಯಾವ ಬಹಿರಂಗದ ವಸ್ತುವನ್ನೂ ಪ್ರಧಾನವನ್ನಾಗಿಸುವ ಅನಿವಾರ್ಯತೆಗೆ ಬದ್ಧನಾಗದೆ ತನ್ನ ಭಾವಾನುಭವಗಳಿಗೆ ನೇರವಾದ ಅಭಿವ್ಯಕ್ತಿ ನೀಡುವ ಸ್ವಾತಂತ್ರ್ಯ ವಿಶೇಷವಾಗಿದೆ. ಹಾಗೆಂದ ಮಾತ್ರಕ್ಕೆ ವಸ್ತುನಿಷ್ಠವೆಂದು ನಾವು ಕರೆಯುವ ಕೃತಿಗಳಲ್ಲೆಲ್ಲ ಕವಿಯ ವ್ಯಕ್ತಿನಿಷ್ಠ ಭಾವನಗಳ ನೇರವಾದ ಪ್ರಕಟನೆ ಇಲ್ಲವೇ ಇಲ್ಲವೆಂದಾಗಲಿ ಅದಕ್ಕೆ ಅವಕಾಶವೇ ಇರಲಿಲ್ಲವೆಂದಾಗಲಿ ಅರ್ಥವಲ್ಲ. ಹಾಗೆ ನೋಡಿದರೆ ಶೇಕ್ಸ್‍ಪಿಯರ್, ಕಾಳಿದಾಸ, ಪಂಪ ಮೊದಲಾದ ಎಲ್ಲ ಉತ್ತಮ ಕವಿಗಳ ಕೃತಿಗಳಲ್ಲಿಯೂ ವ್ಯಕ್ತಿನಿಷ್ಠವೆಂದು ಗುರುತಿಸಬಹುದಾದ ಭಾಗಗಳು, ಸಂದರ್ಭಗಳು ಇಲ್ಲವೇ ಇಲ್ಲ. ಹಾಗೆಯೇ ಭಾವಗೀತೆ ಕವಿ ಬಹಿರಂಗದ ವಸ್ತುವನ್ನು ಆಶ್ರಯಿಸುವುದೇ ಇಲ್ಲವೆಂದೂ ಭಾವಗೀತೆಯಲ್ಲಿಯೂ ತಕ್ಕಮಟ್ಟಿನ ವಸ್ತುನಿಷ್ಠತೆ ಇಲ್ಲವೆಂದೂ ಅರ್ಥವಲ್ಲ. ವ್ಯಕ್ತಿನಿಷ್ಠ ಕೃತಿಯೋ ವಸ್ತುನಿಷ್ಠ ಕೃತಿಯೋ ಎರಡನ್ನೂ ಬರೆದಾತ ಕವಿಯೇ. ಅದರ ಹಿಂದೆ ಇರುವುದು ಕವಿಯ ವ್ಯಕ್ತಿತ್ವವೇ. ಒಂದರಲ್ಲಿ ಅದು ಪ್ರತ್ಯಕ್ಷವಾಗಿ ಸ್ಪಷ್ಟವಾಗಿ ತಾನೇತಾನಾಗಿ ಗೋಚರಿಸಿದರೆ ಮತ್ತೊಂದರಲ್ಲಿ ಪರೋಕ್ಷವಾಗಿ, ಅಸ್ಪಷ್ಟವಾಗಿ ಸಂದರ್ಭಾನುಸಾರ ಗೋಚರಿಸುತ್ತದೆ. ಹೀಗಿರುವಾಗ ಕೃತಿಗಳನ್ನು ವಸ್ತುನಿಷ್ಠ, ವ್ಯಕ್ತಿನಿಷ್ಠ ಎಂದು ಗೆರೆ ಎಳೆದು ತೋರಿಸಿವುದು ಕೇವಲ ಔಪಚಾರಿಕ. ಆದರೆ ಭಾವಗೀತೆ ವ್ಯಕ್ತಿನಿಷ್ಠ ಎಂದರೆ, ಭಾವಗೀತೆಯಲ್ಲಿ ಕವಿಯ ಭಾವ ಅತ್ಯಂತ ವೈಯಕ್ತಿಕ ಹಾಗೂ ವ್ಯಕ್ತಿನಿಷ್ಠ ಎಂದು ಕಾಣುವಷ್ಟರಮಟ್ಟಿಗೆ, ವಸ್ತುನಿಷ್ಠವಾದ ಮಹಾಕಾವ್ಯ ನಾಟಕಾದಿಗಳಲ್ಲಿ ಎದ್ದು ಕಾಣುವುದಿಲ್ಲ ಎನ್ನುವುದೇ ಇದರ ಸಾರಾಂಶ. ಭಾವಗೀತೆಯಲ್ಲಿ ಕಂಡುಬರುವ ವ್ಯಕ್ತಿನಿಷ್ಠತೆ ಕೇವಲ ವೈಯಕ್ತಿಕವಾಗಿರದೆ ಸಾಧಾರಣೀಕೃತವಾಗಿರದೆ ಭಾವದ ನಿಲುವಿನಲ್ಲಿ ಪ್ರಕಟವಾಗುತ್ತದೆ.
 
ಭಾವಗೀತೆಯ ಮತ್ತೊಂದು ಲಕ್ಷಣ, ಅದು ಗೇಯ ರೂಪವಾದುದು ಅಥವಾ ಹಾಡಲು ಬರುವಂತಿರಬೇಕು ಎನ್ನುವುದು. ಭಾವಗೀತೆ ಅಥವಾ ಲಿರಿಕ್ ಎಂಬ ಪದವೇ ಸೂಚಿಸುವಂತೆ ಅದು ಲೈರ್ ಎಂಬ ತಂತೀ ವಾದ್ಯದೊಡನೆ ಹಾಡಬಹುದಾದ ಗೀತೆ ಎಂದೇ ಅರ್ಥ. ಲಿರಿಕ್ ಎಂಬ ಈ ಕಾವ್ಯಜಾತಿ ಮೂಲತಃ ಹಾಡುಗಬ್ಬವಾಗಿಯೇ ಗ್ರೀಸ್ ದೇಶದಲ್ಲಿ ಹುಟ್ಟಿಕೊಂಡಿತ್ತು. ಭಾವಗೀತೆ ಮೂಲತಃ ಗೀತೆ. ಅದಕ್ಕೆ ಗೀತಗುಣ ಅನಿವಾರ್ಯವೆಂದೂ ಭಾವಗೀತೆ ಹಾಡಲು ಬರುವಂತಿರಬೇಕು ಎನ್ನುವುದು ನಿಯತವಾದ ನಿಯಮವೆಂದೂ ಅಭಿಪ್ರಾಯ ಭೇದಗಳಿವೆ. ಭಾವಗೀತೆ ಹಾಡಲು ಬರುವಂತಿರಬೇಕು ಎನ್ನುವುದು ಸಮರ್ಪಕ ಲಕ್ಷಣವೇನಲ್ಲ. ಏಕೆಂದರೆ ಉತ್ತಮ ಕವಿತೆ ಮನಸ್ಸಿನಲ್ಲಿ ಮೌನವಾಗಿ ಓದಿಕೊಂಡಾಗಲೂ ಮಾಡಬೇಕಾದ ಪರಿಣಾಮ ಮಾಡಿಯೇ ಮಾಡುತ್ತದೆ; ಎಂಥ ಸಪ್ಪೆಯಾದ ಪದ್ಯವೂ ಎಷ್ಟೋ ಸಲ ಸಂಗೀತಕ್ಕೆ ಅಳವಡಿಸಿ ಕೇಳಿದಾಗ ಅರ್ಥದ ದೃಷ್ಟಿಯಿಂದಲೂ ಚೆನ್ನಾಗಿದೆ ಎಂಬ ಭ್ರಮೆ ಕವಿಸುವುದುಂಟು. ಆದರೆ ನಿಜವಾದ ಕವಿತೆಗೆ ಇರುವ ಸಂಗೀತ ಬಹಿರಂಗದ್ದಲ್ಲ, ಅಂತರಂಗದ್ದು. ಸಂಗೀತದ ಸಹಾಯವಿಲ್ಲದೆಯೂ ಒಳ್ಳೆಯ ಭಾವಗೀತೆ, ಭಾವಪೂರ್ಣ ವಾಚನ ಮಾತ್ರದಿಂದಲೇ ತಕ್ಕ ಪರಿಣಾಮವನ್ನುಂಟುಮಾಡುತ್ತದೆ. ಬಹಿರಂಗದ ಸಂಗೀತ ಅಂತರಂಗದ ಸಂಗೀತವನ್ನು ತೆರೆದು ತೋರುವಂತಿದ್ದರೆ ಮಾತ್ರ ಅದು ಅಪೇಕ್ಷಣೀಯ. ಆದರೆ ಕಡ್ಡಾಯವಾಗಿ ಹಾಡಿ ಕವಿತೆಯ ಅರ್ಥವನ್ನು ಸಂಗೀತದಿಂದ ಮುಳುಗಿಸುವ ಪ್ರಯತ್ನ ದೂಷ್ಯವಾದುದು. ಇದಲ್ಲದೆ ಹಾಡುವುದಕ್ಕಾಗಿಯೇ ರಚಿತವಾದ ಗೀತೆಗಳಿದ್ದರೆ ಅವುಗಳ ಮಾತು ಬೇರೆ. ಹಾಗಲ್ಲದೆ ಭಾವಗೀತೆಗೆ ಸಂಗೀತದ ದೀಕ್ಷೆಯನ್ನು ಬಲವಂತವಾಗಿ ಕೊಡುವ ಅಗತ್ಯವಿಲ್ಲ. ಈ ಬಗೆಯ ವಿಚಾರಗಳ ಪರಿಣಾಮವಾಗಿ ಪಾಶ್ವಾತ್ಯರಲ್ಲಿ ಭಾವಗೀತೆ ಕ್ರಮೇಣ ಸಂಗೀತಕ್ಕೆ ಶರಣು ಹೊಡೆಯಿತು. ಭಾವಗೀತೆಗೆ ಇತಿಹಾಸವೆಂದರೆ ಭಾವಗೀತೆ ಹೆಜ್ಜೆಹೆಜ್ಜೆಗೂ ಸಂಗೀತದ ಸೆರೆಯಿಂದ ಪಾರಾಗುವ ಹೋರಾಟವನ್ನು ಹೇಗೆ ಹೂಡಿತು ಎನ್ನುವುದರ ಚರಿತ್ರೆಯೇ ಆಗಿದೆ. ಭಾವಗೀತೆಗೆ ಸಂಗೀತದೊಂದಿಗೆ ಇದ್ದ ಸಾಹಚರ್ಯ ಬಿಡಿಸಿ, ಕಾವ್ಯಭಾಷೆಯನ್ನು ಜನರ ಆಡುಮಾತಿನ ಹತ್ತಿರಕ್ಕೆ ತರುವುದೇ ಇತ್ತೀಚಿನ ಕವಿಗಳ ಸತತ ಪ್ರಯತ್ನವಾಗಿದೆ ಎನ್ನುವುದು ಗಮನಿಸಬೇಕಾದ ಅಂಶ.
 
ಭಾವಗೀತೆಯ ಬಲುಮುಖ್ಯವಾದ ಲಕ್ಷಣ ಅವುಗಳ ಗಾತ್ರ ಕುರಿತದ್ದು. ಇದರ ಗಾತ್ರ ಕಿರಿಯದು. ಅಡಕ, ಅಚ್ಚುಕಟ್ಟು, ನಯ, ನುಣುಪು ಇದರ ಲಕ್ಷಣ. ವಸ್ತುನಿಷ್ಠ ಕೃತಿಗಳಾದ ಮಹಾಕಾವ್ಯ ನಾಟಕಗಳು ಸುದೀರ್ಘವಾದವು, ಭಾವಗೀತೆಗಳು ಹ್ರಸ್ವವಾದವು. ಮಹಾಕಾವ್ಯಾದಿಗಳ ರೀತಿ ಕಾಡು ಬೆಳೆದ ಹಾಗೆ, ಭಾವಗೀತೆಯದು ಉಪವನ ನಿರ್ಮಿಸಿದ ಹಾಗೆ. ಮಹಾಕಾವ್ಯ ನಾಟಕಾದಿಗಳಲ್ಲಿ ಕವಿಯ ಭಾವನೆ ಘಟನೆಯಿಂದ ಘಟನೆಗೆ ಪಾತ್ರದಿಂದ ಪಾತ್ರಕ್ಕೆ ಕಥನರೂಪದಲ್ಲಿ ಸಂಚರಿಸಿದರೆ, ಭಾವಗೀತೆಯಲ್ಲಿ ಕವಿಯ ಭಾವ ಹರಳುಗೊಂಡು ಮಿರುಗುತ್ತ ಮಡುಗಟ್ಟಿ ಒಂದೆಡೆ ನಿಲ್ಲುತ್ತದೆ. ಭಾವಗೀತೆ ಕವಿಯ ಕೆಲವು ರಸಕ್ಷಣಗಳ ಪರಿಣಾಮವಾದ್ದರಿಂದ, ಒಂದು ಭಾವವೋ ಒಂದುಗೂಡಿದ ಭಾವಗಳೋ ಸಹಜವಾಗಿಯೇ ಹ್ರಸ್ವರೂಪ ತಾಳುವುದು ಅನಿವಾರ್ಯ. ಹೀಗಾಗಿ ಅಲ್ಪದಲ್ಲಿ ಕಲ್ಪವನ್ನು ಕೆತ್ತುವ ಕಲೆಗಾರಿಕೆ ಇದರದು. ಭಾವಗೀತೆ ಹ್ರಸ್ವವಾಗಿರುತ್ತದೆ ಎಂದರೆ, ಎಷ್ಟು ಹ್ರಸ್ವಎನ್ನುವ ಪ್ರಶ್ನೆ ಏಳುತ್ತದೆ. ಎರಡು ಪಂಕ್ತಿಯಿಂದ ಇನ್ನೂರು ಪಂಕ್ತಿಯವರೆಗೂ ಇದರ ಗಾತ್ರ ಹೋಗಬಹುದು. ಆದರೆ ಯಾವ ಒಂದು ಹಿತ ಮಿತಿಯಲ್ಲಿದ್ದರೆ ಭಾವಗೀತೆ ಅಸ್ವಾದ್ಯವಾಗಬಹುದೋ ಅಂಥ ಒಂದು ಮಿತಿಯಲ್ಲಿರ ಬೇಕು ಎಂದು ಹೇಳಬಹುದು. ಹಿತವಾದ ಮಿತಿ ಏನೆಂಬುದನ್ನು ನಿಜವಾದ ಕವಿ ಬಲ್ಲ, ನಿಜವಾದ ಓದುಗ ಬಲ್ಲ.
 
==ಭಾವಗೀತೆ ಮತ್ತು ಕಾವ್ಯದ ನಡುವಿನ ವ್ಯತ್ಯಾಸ==
ಭಾವಗೀತೆ ಹ್ರಸ್ವವಾಗಿರಲು ಕವಿಗೆ ಒದಗುವ ಭಾವ ತೀವ್ರತೆಯ ಹ್ರಸ್ವತೆಯೇ ಕಾರಣ ಎನ್ನುವವರಿದ್ದಾರೆ. ಕವಿಗೆ ಒದಗುವ ಭಾವ ತೀವ್ರತೆ ಸ್ವರೂಪತಃ ಹೆಚ್ಚು ಹೊತ್ತು ನಿಲ್ಲತಕ್ಕದ್ದಲ್ಲವಾದ್ದರಿಂದ, ಅದು ಭಾವಗೀತಾತ್ಮಕವಾಗಿಯೆ ಅಭಿವ್ಯಕ್ತಿಗೊಳ್ಳಬೇಕು. ಹೀಗಾಗಿ ಕಿರಿದಾಗಿ ಅಭಿವ್ಯಕ್ತಗೊಂಡ ಕಾವ್ಯವೇ ನಿಜವಾದ ಕಾವ್ಯ, ದೀರ್ಘವಾದುದು ಕಾವ್ಯವೇ ಅಲ್ಲ ಎಂಬ ವಾದವೂ ಒಂದುಂಟು. ಈ ವಾದದ ಪ್ರಕಾರ ಭಾವಗೀತೆಯೇ ನಿಜವಾದ ಕಾವ್ಯ, ಶುದ್ಧ ಕಾವ್ಯ. ಆದಕಾರಣ ಕಾವ್ಯ ಎಂದರೆ ಭಾವಗೀತೆ. ಭಾವಗೀತೆಯನ್ನು ಒಂದು ಕಾವ್ಯ ಪ್ರಕಾರವೆಂದು ಕರೆಯುವುದು ಅರ್ಥವಿಲ್ಲದ ಮಾತು. ಹಾಗಾದರೆ ಮಹಾಕಾವ್ಯ ನಾಟಕಾದಿಗಳಿಂದ ರಸಾನುಭವಾಗುವುದಿಲ್ಲವೆ ಎಂದರೆ ಈ ವಾದದ ಉತ್ತರ ಹೀಗೆ : ಮಹಾಕಾವ್ಯವೋ ನಾಟಕವೋ ಇವುಗಳೆಲ್ಲ ಕವಿ ಒಂದು ಸಿದ್ಧವಸ್ತು ಕುರಿತು ಪರಿಭಾವಿಸಿ ಬೇರೆ ಬೇರೆಯ ಕಾಲದಲ್ಲಿ ಅನುಭವಿಸಿದ ತೀವ್ರ ರಸಲಕ್ಷಣಗಳ ಅಭಿವ್ಯಕ್ತಿಯ ಒಂದು ಸರಣಿ ಮಾತ್ರ. ಮಹಾಕಾವ್ಯ ನಾಟಕಾದಿಗಳೆಲ್ಲವೂ ಅನೇಕ ಭಾವಗೀತಾತ್ಮಕ ತುಣುಕುಗಳ ಪರಂಪರೆ, ಇವುಗಳನ್ನೆಲ್ಲ ನಡುನಡುವೆ ಗದ್ಯವೆಂಬಂಥ ಕೊಂಡಿಗಳು ಸೇರಿಸಿರುತ್ತವೆ ಅಷ್ಟೆ. ಆದಕಾರಣ ಎಲ್ಲ ಕಾವ್ಯವೂ ಭಾವಗೀತೆಯೇ. ಇದು ಒಂದುವಾದ. ಈ ವಾದ ವಿಚಿತ್ರವಾಗಿ ತೋರುತ್ತದೆ. ನಿಜ, ಮಹಾಕಾವ್ಯ ನಾಟಕಾದಿಗಳಲ್ಲಿ ಭಾವಗೀತಾತ್ಮಕವಾದ ಭಾಗಗಳು ಉಂಟು; ಆದರೆ ಮಹಾಕಾವ್ಯ ನಾಟಕಾದಿಗಳು ಕೇವಲ ಇಂಥ ಭಾವಗೀತಾತ್ಮವಾದ ಭಾಗಗಳ ಒಂದು ಹೆಣಿಗೆ ಎನ್ನುವುದು ಒಪ್ಪತಕ್ಕಮಾತಲ್ಲ. ಮಹಾಕಾವ್ಯ ನಿರ್ಮಾಣಕ್ಕೆ ಬೇಕಾದ ಶಕ್ತಿ ಸಾಮಥ್ರ್ಯ, ದೃಷ್ಟಿ, ಉದ್ದೇಶ ಇವು ಭಾವಗೀತೆಯ ಕವಿಗೆ ಇರುವ ಶಕ್ತಿಸಾಮಥ್ರ್ಯ ಉದ್ದೇಶ ಇವುಗಳಿಂದ ಖಂಡಿತವಾಗಿಯೂ ಬೇರೆಯ ಸ್ವರೂಪದ್ದೆಂದು ಹೇಳಬಹುದು.
 
ಭಾವಗೀತೆಯಲ್ಲಿ ಕಂಡುಬರುವ ವಸ್ತು ಸ್ವಾತಂತ್ರ್ಯ ಬಲು ಮಹತ್ತ್ವದ್ದಾಗಿದೆ. ಹಿಂದಿನ ಕವಿಗಳಿಗೆ ಇಂಥದೇ ವಸ್ತುವಾಗಬೇಕು, ಇಂಥದೇ ರೀತಿಯಾಗಬೇಕು ಎನ್ನುವ ನಿರ್ಬಂಧ ಕಾಡುತ್ತಿತ್ತು. ಆದರೆ ಭಾವಗೀತೆಯ ಕವಿಗೆ ಜೀವನದಲ್ಲಿಯ ಒಂದು ರಸನಿಮಿಷ, ಪ್ರಕೃತಿಯ ಒಂದು ರಮ್ಯ ವಿವರ, ದುರ್ದಮ್ಯವಾಗಿ ಉಕ್ಕಿ ಬರುವ ಯಾವುದೋ ಒಂದು ಭಾವನೆ, ಅಪೂರ್ವವಾಗಿ ಮೂಡಿಬಂದ ಒಂದು ವಿಚಾರ, ಮನುಷ್ಯ ಜೀವನದ ಒಂದು ಸಣ್ಣ ಘಟನೆ ಯಾವುದೇ ಆದರೂ ಕೇಂದ್ರ ಬಿಂದುವಾಗಿ ಕವಿಯ ಭಾವದಲ್ಲಿ ಪುಟಗೊಂಡು ಗೀತವಾಗಿ ಮೂಡಬಹುದು ಎಂಬ ಸಂಗತಿ ಹೊಸದು. ಜೊತೆಗೆ ಹಾಗೆ ರೂಪುಗೊಳ್ಳುವ ರೀತಿಯೂ ವ್ಯಕ್ತಿ ವಿಶಿಷ್ಟವಾಗಿ ವೈವಿಧ್ಯಮಯವಾಗಿದೆ. ಈ ವೈವಿಧ್ಯವನ್ನು ತರುವುದರಲ್ಲಿ ಅದು ತಾಳಿದ ಹಲವು ರೂಪಗಳೆಂದರೆ ಹಲವು ಪ್ರಕಾರದ ಭಾವಗೀತೆಯ ಜೊತೆಗೆ ಪ್ರಗಾಥ, ಚರಮಗೀತೆ, ಸುನೀತ ಮತ್ತು ಕಥನ ಕವನಗಳು. ಇವುಗಳಲ್ಲಿ ಸುನೀತ ಅಥವಾ ಸಾನೆಟ್‍ಗಳಲ್ಲಿ ಕಂಡುಬರುವ ರಚನೆಯಲ್ಲಿರಬಹುದಾದ ಬುದ್ದಿ ಪ್ರಧಾನತೆಯಿಂದ ಮತ್ತು ಕಥನ ಕವನಕ್ಕೆ ಅನಿವಾರ್ಯವಾದ ದೀರ್ಘತೆಯಿಂದ ಈ ಎರಡನ್ನೂ ಭಾವಗೀತೆಗಳೆಂದು ಕರೆಯಬಹುದೆ ಎಂಬ ಪ್ರಶ್ನೆ ಚರ್ಚೆಗೆ ಬರುತ್ತದೆ.
 
==ಭಾರತದಲ್ಲಿ ಭಾವಗೀತೆ==
ಭಾವಗೀತೆ ಎಂಬ ಮಾತು ಭಾರತೀಯರಿಗೆ ಹೊಸತು. ಆದರೆ ಭಾವಗೀತಾತ್ಮಕವಾದ ಭಾಗಗಳು ಭಾರತೀಯ ಸಾಹಿತ್ಯದಲ್ಲಿ ಇರಲಿಲ್ಲವೆಂದೇನೂ ಅರ್ಥವಲ್ಲ. ವೇದಗಳಲ್ಲಿ, ಉಪನಿಷತ್ತುಗಳಲ್ಲಿ, ಸ್ತೋತ್ರಗಳಲ್ಲಿ ಭಾವಗೀತೆಯ ಲಕ್ಷಣಗಳನ್ನು ಕಾಣಬಹುದು. ವಸ್ತುನಿಷ್ಠ ಕಾವ್ಯಗಳಲ್ಲಿಯೂ ಭಾವಗೀತಾತ್ಮಕವಾದ ಎಷ್ಟೋ ಭಾಗಗಳಿವೆ. ಮುಕ್ತಕವೆಂಬ ಹೆಸರಿನಿಂದ ದೊರೆತಿರುವ ಸಾಹಿತ್ಯ ಪ್ರಕಾರ ಬಲುಮಟ್ಟಿಗೆ ಭಾವಗೀತೆಯನ್ನೇ ಹೋಲುತ್ತದೆ. ಕನ್ನಡ ಜನಪದಕಾವ್ಯ ಸಹಜವಾದ ಭಾವಗೀತೆಗಳೇ ಆಗಿವೆ. ಆನು ಒಲಿದಂತೆ ಹಾಡುವೆ ಎಂದು ವಚನ ರಚನೆಗೆ ತೊಡಗಿದ ಬಸವಣ್ಣನವರ ವಚನಗಳಲ್ಲೂ ದಾಸರ ಪದಗಳಲ್ಲೂ ಇರುವ ವ್ಯಕ್ತಿನಿಷ್ಠತೆ ಮತ್ತು ಅಭಿವ್ಯಕ್ತಿಯ ರೀತಿ ಭಾವಗೀತೆಯ ಲಕ್ಷಣಕ್ಕೆ ಅನುಸಾರವಾಗಿವೆ.
 
ಹೊಸಗನ್ನಡದಲ್ಲಿ ಭಾವಗೀತೆಯ ಹೊಸ ಹಾದಿ ನಿರ್ಮಾಣವಾದದ್ದು ಆಚಾರ್ಯ ಶ್ರೀಯವರ ಇಂಗ್ಲಿಷ್ ಗೀತೆಗಳಿಂದಲೇ ಎನ್ನಬೇಕು. ಶ್ರೀಯವರಿಗೆ ಮೊದಲೇ ಇಂಗ್ಲೀಷ್ ಕಾವ್ಯದ ಪ್ರೇರಣೆ ಪ್ರಚೋದನೆಗಳಿಂದ ಅನುವಾದ ಹಾಗೂ ಸ್ವಂತವಾದ ಭಾವಗೀತೆಗಳ ರಚನೆಯ ಪ್ರಯತ್ನ ಎಸ್. ಜಿ. ನರಸಿಂಹಾಚಾರ್. ಹಟ್ಟಿಯಂಗಡಿ ನಾರಾಯಣರಾಯರು, ಪಂಜೆ ಮಂಗೇಶರಾಯರು ಮೊದಲಾದವರಿಂದ ನಡೆದಿದ್ದರೂ ಶ್ರೀಯವರ ಸಮಕಾಲೀನರಾದ ಕೆಲವು ತರುಣ ಕವಿಗಳೂ ಈ ಪ್ರಯತ್ನದಲ್ಲಿದ್ದರೂ ಶ್ರೀಯವರ ಇಂಗ್ಲಿಷ್ ಗೀತೆಗಳೆ ಭಾವಗೀತೆಯ ಹೆದ್ದಾರಿಯೊಂದನ್ನು ತೆರೆದು ಉಳಿದವರಿಗೆ ಪ್ರೇರಣೆಯನ್ನು ಕೊಟ್ಟದ್ದು. ಇಂಗ್ಲಿಷ್ ಗೀತೆಗಳಲ್ಲಿ ಕಂಡುಬರುವ ಅಶೃಂಖಲತೆ, ಹೊಸಗನ್ನಡ ಭಾಷೆಯ ಹದ, ಹೊಸ ಛಂದೋಲಯಗಳ ಆವಿಷ್ಕಾರ-ಇವು ಹೊಸ ಭರವಸೆಯನ್ನು ಬಿತ್ತಿದುವು. ಅನಂತರ ಕೇಳಿದ್ದು ನೂರು ಸ್ವರ, ಒಂದೊಂದೂ ಅತಿಮಧುರ.
 
ಕನ್ನಡ ಭಾವಗೀತೆ ಮೂರು ಕಡೆಯಿಂದ ತನ್ನ ಪ್ರೇರಣೆಯನ್ನು ಸಾಮಗ್ರಿಗಳನ್ನೂ ಬಳಸಿಕೊಂಡು ಬೆಳೆಯಿತು. ಆಂಗ್ಲ ಸಾಹಿತ್ಯದಿಂದ ಅಭಿವ್ಯಕ್ತಿಯ ವಿಶೇಷತೆಗಳನ್ನೂ ಸಂಸ್ಕøತದಿಂದ ಪರಂಪರೆಯನ್ನೂ ಜನಪದ ಕಾವ್ಯದಿಂದ ಸತ್ತ್ವವನ್ನೂ ಮೈಗೂಡಿಸಿಕೊಂಡಿತು. ಕುವೆಂಪು, ಬೇಂದ್ರೆ, ಪುತಿನ, ರಾಜರತ್ನಂ, ಶ್ರೀನಿವಾಸ, ವಿನಾಯಕ, ಕೆಎಸ್‍ನ, ಕಡೆಂಗೋಡ್ಲು, ಅಡಿಗ, ಎಕ್ಕುಂಡಿ, ಕಣವಿ, ಶಿವರುದ್ರಪ್ಪ ಮೊದಲಾದ ಕವಿಗಳಿಂದ ಕನ್ನಡ ಭಾವಗೀತೆಯ ಸಾಹಿತ್ಯ ಸಮೃದ್ಧವಾಗಿ ಬೆಳೆದು ತಕ್ಕಷ್ಟು ಫಲವನ್ನು ಕೊಟ್ಟಿದೆ.
 
ಕನ್ನಡ ಭಾವಗೀತೆ ಹೊಸಕಾಲದ ಆಶೋತ್ತರಗಳ ಪೂರೈಕೆಯಾಗಿದೆ. ಹಳೆಯ ನಂಬಿಕೆಗಳನ್ನು ತಲೆಕೆಳಗು ಮಾಡುವ ಹೊಸ ವಿಚಾರಗಳು. ಸಾಮಾಜಿಕವಾದ ಅನೇಕ ಬದಲಾವಣೆಗಳು, ವಿಜ್ಞಾನ ತೆರೆದು ತೋರಿರುವ ವಿಸ್ಮಾಯಾದ್ಭುತಗಳು, ಪ್ರಪಂಚಾದ್ಯಂತ ನಡೆಯುತ್ತಲಿರುವ ರಾಜಕೀಯ ಚಳವಳಿ-ವಿಪ್ಲವಗಳಿಂದ ಜನತೆ ಆಲೋಚನೆ, ಸಿದ್ದಾಂತಗಳು, ವಿವೇಕಾನಂದ, ಗಾಂಧಿ, ಅರವಿಂದರು ಮೊದಲಾದ ವ್ಯಕ್ತಿಗಳ ಪ್ರಭಾವಗಳು ಇವುಗಳಿಂದ ಎಚ್ಚರಗೊಂಡ ಹೊಸ ಯುಗದ ಅಭಿವ್ಯಕ್ತಿಯಾಗಿದೆ ಭಾವಗೀತೆ.
 
ಭಾವಗೀತೆ ಪ್ರಧಾನವಾದ ಆಂಗ್ಲ ರೊಮ್ಯಾಂಟಿಕ್ ಕವಿಗಳಿಂದ ಪ್ರಚೋದನೆಯನ್ನು ಪಡೆದು ಮೂಡಿದರೂ ಅದು ಪಾಶ್ಚಾತ್ಯ ರೊಮ್ಯಾಂಟಿಕ್ ಕಾವ್ಯದ ಅನುಕರಣವಾಗದೆ, ಸಹಜವಾದ ಪ್ರಯೋಗಶೀಲತೆಯಿಂದ ಹಾಗೂ ಭಾರತೀಯ ಪರಂಪರೆಯ ಪ್ರಜ್ಞೆಯಿಂದ, ಇಂಗ್ಲಿಷ್ ಕವಿತೆ ಸಾಧಿಸಿದ್ದಕ್ಕಿಂತ ಒಂದು ಹೆಜ್ಜೆ ಮುಂದೆಯೇ ಹೋಯಿತೆಂದು ಹೇಳಲು ಅಡ್ಡಿಯಿಲ್ಲ. ಕನ್ನಡದಲ್ಲಿ 1950 ರಿಂದ ಈಚೆಗೆ ಭಾವಗೀತೆಯಿಂದ ಬೇರೆಯಾದ ಕವಲೊಂದು ನವ್ಯ ಕಾವ್ಯ ಎಂಬ ಹೆಸರಿನಿಂದ ಮುಂದೆ ಬರುತ್ತಿದೆಯಾದರೂ ಭಾವಗೀತೆಯ ಬಗೆಗೆ ಒಲವು ಇಂಗಿಲ್ಲ. ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಈ ಕಾವ್ಯಪ್ರಕಾರ ನಡೆಸಿದ ಪ್ರಯೋಗ, ಸಾಧಿಸಿದ ಸಾಧನೆಗಳನ್ನು ತೂಗಿ ನೋಡಿದರೆ ಯಾರಾದರೂ ಖಂಡಿತ ಬೆರಗಾಗಲೇಬೇಕು.
 
ನಾಟಕೀಯ ಏಕವ್ಯಕ್ತಿ ಭಾಷಣ (ಡ್ರಾಮಾಟಿಕ್ ಮೋನೋಲೋಗ್) ಎಂಬ ಕವನ ಪ್ರಕಾರ ಉಂಟು. ಇದರಲ್ಲಿ ಒಂದು ವಿಷಿಷ್ಟ ಸನ್ನಿವೇಷದಲ್ಲಿ ಒಂದು ಪಾತ್ರ ಮಾತನಾಡುತ್ತದೆ. ಇದು ಸ್ವಗತವಲ್ಲ. ಸ್ವಗತದಲ್ಲಿ ಪಾತ್ರ ಇನ್ನೊಬ್ಬರನ್ನು ಉದ್ದೇಶಿಸಿ ಮಾತನಾಡುವುದಿಲ್ಲ, ತನಗೇ ಹೇಳಿಕೊಳ್ಳುತ್ತದೆ. ನಾಟಕೀಯ ಏಕವೃತ್ತಿ ಭಾಷಣದಲ್ಲಿ ಕೇಳುವ ಪಾತ್ರ ಒಂದಿರುತ್ತದೆ. ಅದು ಯಾರು ಎಂಬುದು ನಮಗೆ ತಿಳಿಯುತ್ತದೆ, ಆದರೆ ಅದು ಮಾತನಾಡನಾಡುವುದಿಲ್ಲ. ಈ ಭಾಷಣವೂ ಒಂದು ವಿಶಿಷ್ಟ ಸಂದರ್ಭದಲ್ಲಿನ ಮಾತು, ಆದುದರಿಂದಲೇ ಕವನ ನಾಟಕೀಯ ಎಲ್ಲ ಭಾವಗೀತೆಗಳು ನಾಟಕೀಯ ಏಕ ವೃತ್ತಿ ಭಾಷಣಗಳು ಎನ್ನುವ ಮಾತಿದೆ. ಏಕೆಂದರೆ ಒಬ್ಬ ಕವಿಯೇ ತನ್ನ ಬೇರೆ ಬೇರೆ ಭಾವಗೀತೆಗಳಲ್ಲಿ ವಿಭಿನ್ನವಾದ ಕೆಲವೊಮ್ಮೆ ಪರಸ್ಪರ ವಿರೋಧವಾದ ಭಾವನೆಗಳನ್ನು ( ಉದಾಹರಣೆಗೆ ಪುಲಿಯಾದ ಬರವಸೆ, ಗಾಢವಾದ ನಿರಾಸೆ) ವ್ಯಕ್ತ ಪಡಿಸಬಹುದು. ಪ್ರತಿಯೊಂದು ಭಾವಗೀತೆಯೂ ಒಂದು ವಿಶಿಷ್ಟ ಸಂದರ್ಭದಲ್ಲಿ ಉದಾ: ಸೂರ್ಯೋದಯ, ಒಂದು ಹಕ್ಕಿಯ ಹಾಡನ್ನು ಆಲಿಸುವುದು, ರಾತ್ರಿ ಎಲ್ಲಿಯೋ ಮಗುವಿನ ಅಳುವನ್ನು ಕೇಳುವುದು, ಒಂದು ಹುಡುಗಿಯಲ್ಲಿ ಪ್ರೇಮ ಕವಿ ಪ್ರೀತಿಸಿದ ಸ್ಪಂದನಕ್ಕೆ ಶಬ್ದ ಶರೀರವನ್ನು ನೀಡುತ್ತದೆ. ಆದರೆ ಕವಿ ಶ್ರೇಷ್ಠ ಕವಿಯಾದರೆ ಅವನ ಎಲ್ಲ ಭಾವಗೀತೆಗಳನ್ನು ಓದಿದಾಗ ಅವನ ಸಮಗ್ರ ಸ್ಪಂದನ ನಮಗೆ ಅರಿವಾಗುತ್ತದೆ.)
 
ಇಂಗ್ಲಿಷ್ ಕಾವ್ಯವು ಭಾವಗೀತೆಯ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕೆಂದು ವಾಲ್ಟರ್ ಪೇಟರ್ ಎಂಬ ವಿಮರ್ಶಕ ಬಯಸಿದ. ದೀರ್ಘ ಕವನದ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕೆಂದು ಮ್ಯಾಥ್ಯೂ ಆರ್ನಾಲ್ಡ್ ಬಯಸಿದ. ಆ ಕಾವ್ಯವು ಭಾವಗೀತೆಯತ್ತಲೇ ಮಾತ್ರವೇ ಒಲಿಯಿತು. ಆದರೆ ಕನ್ನಡ ಕಾವ್ಯವು ಇವರಡರಲ್ಲಿ ಸಮತೋಲನವನ್ನು ಸಾಧಿಸಿದೆ. ಕವಿಗಳು ಭಾವಗೀತೆಯಂತೆ ದೀರ್ಘ ಕವನಕ್ಕೂ ಒಲವು ತೋರಿದ್ದಾರೆ. ಶ್ರೀ ಅವರ ಇಂಗ್ಲಿಷ್ ಗೀತೆಗಳ ಭಾವಗೀತೆಗಳೆಲ್ಲ ಒಟ್ಟಿನಲ್ಲಿ ಒಂದು 'ಮೂಡ್ ಅಥವಾ ಮನಸ್ಥಿತಿಗೆ ಅಭಿವ್ಯಕ್ತಿ ನೀಡುತ್ತವೆ. ಬದಲಾಗುವ ಮೂಡ್‍ಗಳಿಗೆ ಪ್ರಗಾಥವನ್ನು ಬಳಸುವುದು 19ನೆ ಯ ಶತಮಾನದ ಅಂತ್ಯದವರೆಗೆ ಇಂಗ್ಲಿಷ್ ಕಾವ್ಯದ ಪದ್ಧತಿ. ಆದರೆ ಕನ್ನಡ ಕವಿಗಳು ಪ್ರಗಾಥವನ್ನು ಬಳಸದೆಯೇ ಭಾವಗೀತೆಗೆ ಸಂಕೀರ್ಣತೆಯನ್ನು ತಂದುಕೊಂಡಿದ್ದಾರೆ.
 
==ಪ್ರಕಾರಗಳು==
ಮಾನವ ಹೃದಯಸಹಜವಾದ ಅನೇಕ ಭಾವಗಳನ್ನು ಅನುಸರಿಸಿ ಕವನಗಳಲ್ಲಿ ಅವುಗಳ ಪ್ರಾಮುಖ್ಯ ಗಮನಿಸಿ ಭಕ್ತಿಗೀತೆಗಳು, ಪ್ರೇಮಗೀತೆಗಳು, ಶೋಕಗೀತೆಗಳು ಎಂಬುದಾಗಿ ಸ್ಥೂಲವಾಗಿ ವಿಭಾಗ ಮಾಡಿರುವುದು ಒಂದು ಕ್ರಮ. ಸಂಪ್ರದಾಯವನ್ನು ಅನುಸರಿಸಿ ಎಲಿಜಿ (ಶೋಕಗೀತೆ), ಓಡ್ (ಪ್ರಗಾಥ), ಇಡಿಲ್ (ಕಿರುಚಿತ್ರ), ಸಾನೆಟ್ (ಸುನೀತ) ಎಂದು ಮುಂತಾಗಿ ವಿಭಾಗಿಸಿರುವುದು ಮತ್ತೊಂದು ಕ್ರಮ. ಈ ಎರಡೂ ಕ್ರಮಗಳು ಸಮರ್ಪಕವಲ್ಲದ ಕಾರಣ ಭಾವಗೀತೆಗಳ ಪ್ರಮುಖ ಭಾವಗಳನ್ನು ಮುಖ್ಯವಾಗಿರಿಸಿಕೊಂಡು ಪ್ರಕೃತಿಗೀತೆಗಳು, ಪ್ರೇಮಗೀತೆಗಳು, ಕೌಟುಂಬಿಕ ಗೀತೆಗಳು, ಸಾಮಾಜಿಕ ಗೀತೆಗಳು, ದೇಶ ಮತ್ತು ಭಾಷಾಗೀತೆಗಳು, ಗಣ್ಯವ್ಯಕ್ತಿಗೀತೆಗಳು, ಹಾಸ್ಯಗೀತೆಗಳು, ಕಥನ ಕವನಗಳು, ತತ್ತ್ವಚಿಂತನ ಗೀತೆಗಳು, ಅಧ್ಯಾತ್ಮಗೀತೆಗಳು ಎಂದು ಮುಂತಾಗಿ ವರ್ಗೀಕರಿಸಲಾಗಿದೆ.
 
===ಕನ್ನಡದಲ್ಲಿ ಭಾವಗೀತೆ===
ಕವಿ ತನ್ನ ವ್ಯಕ್ತಿತ್ವದ ಪ್ರಭಾವವನ್ನು ಅತ್ಯಂತ ಸರಳವಾಗಿ ಅಚ್ಚಳಿಯದಂತೆ ಮುದ್ರೆಯೊತ್ತುವುದು 'ಭಾವನಿಷ್ಟ' ಕಾವ್ಯಾದಲ್ಲಿ. ಈ ಬಗೆಯ ಕವ್ಯದ ಶ್ರೇಷ್ಟ ನಿದರ್ಶನ ಅಥವಾ ಏಕೈಕ ನಿದರ್ಶನ ಭಾವಗೀತೆ. "ಕವಿಯ ಆತ್ಮವು ರಾಷ್ಟ್ರದ ಪೂರ್ಣ ಜೀವನದಿಂದ, ಅದರ ಸ್ತಿತಿಗತಿಗಳಿಂದ, ಅದರ ಇಚ್ಛೆ ಮತ್ತು ಅಭಿಪ್ರಾಯಗಳಿಂದ, ಅದರ ಭವಿಷ್ಯದಿಂದ ಬೇರೆಯಾಗಿ ನಿಲ್ಲಲು ಸಮರ್ಥವಾದಾಗ, ಕವಿಯ ಚೇತನದಲ್ಲೇ ಅವನ ಸ್ವಂತ ಇಚ್ಛೆ ಮತ್ತು ಭಾವತ್ರಿವ ವಿಭಜನೆ ನಡೆಯಬಲ್ಲ ಶಕ್ತಿ ಉದ್ಬವವಾದಾಗ ಭಾವಗೀತೆ ಮತ್ತು ನಾಟಕಗಳು ಸ್ರಷ್ಟಿಯಾಗಿ ಮಹಾಕಾವ್ಯಾದ ಸ್ತಾನದಲ್ಲಿ ನಿಂತು ಸಂಪದ್ಯುಕ್ತವಾದ ಅಭಿವ್ರುದ್ದಿಯನ್ನು ಪಡೆಯುತ್ತವೆ...... ವ್ಯಕ್ತಿ ಜೀವನ ಸ್ವತಂತ್ರವಾದ ಲೋಕದಲ್ಲಿ ಅಭಿವ್ಯಕ್ತಿಗೊಳ್ಳಲು, ತನ್ನ ಸ್ವಂತ ದರ್ಶನ, ಚಿಂತನ, ಭಾವನ ಇವುಗಳ ಪೂರ್ಣ ವಿಕಾಸಕ್ಕೆ ಅಭಿವ್ಯಕ್ತಿ ನೀಡಲು ನೀಡಲು ಹವಣಿಸುತ್ತೆವೆ. ತನ್ನ ಅತ್ಮಾನುಭವದ ವಸ್ತುವಿಗೆ ಮನದಿಂದ ಭಾವಗೀತಾತ್ಮಕವಾದ ಅಭಿವ್ಯಕ್ತಿಯನ್ನು ನೀಡುತ್ತದೆ.
 
==ಭಾವಗೀತೆಯ ಉಗಮ ಮತ್ತು ಬೆಳವಣಿಗೆ.==
ಇಂಗ್ಲಿಷಿನ ಲಿರಿಕ್(ಳ್ಯ್ರಿಚ್) ಎಂಬ ಪದಕ್ಕೆ ಸರಿಸಮವಾದ ಅರ್ಥಕೊಡುವಂತೆ ಕನ್ನಡದಲ್ಲಿ 'ಭಾವಗೀತೆ' ಎಂಬ ಪದವನ್ನು ನಾವು ಉಪಯೊಗಿಸುತ್ತಿದ್ದೆವೆ. ಆದುದರಿಂದ ಈ ಭಾಷೆಯಲ್ಲಿ ಇದರ ಅರ್ಥವೇನು ಎಂಬುದನ್ನು ವಿವೆಚೀಸಬೇಕಾದದ್ದು ಅಗತ್ಯವಾಗಿದೆ.ಇದರ ವಿಷಯದಲ್ಲಿ ಇಂಗ್ಲೀಷ ಸಾಹಿತ್ಯ ನಮಗೆ ಪ್ರೇರಕ ಶಕ್ತಿಯಾದಂತೆ ಆ ಸಹಿತ್ಯಕ್ಕೆ ಮೂಲ ಪ್ರೇರಣೆ ದೊರೆತದ್ದು ಗ್ರೀಕ್ ಸಹಿತ್ಯದಿಂದ. ಪದ ಕೂಡ ಇದುವರೆಗೆ ನಮಗೆ ತಿಳಿದಿರುವಂತೆ ಅವರದ್ದೆ. ಗ್ರೀಕ್ ಭಾಷೇಯಲ್ಲಿ ಭಾವಗೀತಕಾರ ಎಂದು ಅರ್ಥಕೊಡುವ ಪದ ಲೂರಿಕೋಸ್ ಎಂಬುದು. ಇದು ಲೂರ ಎಂದರೆ ತಂತೀವಾದ್ಯ ಎಂಬ ಪದದಿಂದ ಜನಿಸಿದಿದುದು. ತಂತಿವಾದ್ಯದ ಹಿನ್ನೆಲೆಯಲ್ಲಿ ಹಾಡುವುದಗೋಸ್ಕರವಾಗಿಯೇ ಈ ಗೀತೆಗಳನ್ನು ರಚಿಸುತ್ತಿದ್ದರಿಂದೈವಕ್ಕೆ ಈ ಹೆಸರು ಬಂದಿತು ಎನ್ನಬಹುದು.
 
ಇಂಗ್ಲಿಷಿನ ಲಿರಿಕ್(ಳ್ಯ್ರಿಚ್) ಎಂಬ ಪದಕ್ಕೆ ಸರಿಸಮವಾದ ಅರ್ಥಕೊಡುವಂತೆ ಕನ್ನಡದಲ್ಲಿ 'ಭಾವಗೀತೆ' ಎಂಬ ಪದವನ್ನು ನಾವು ಉಪಯೊಗಿಸುತ್ತಿದ್ದೆವೆ. ಆದುದರಿಂದ ಈ ಭಾಷೆಯಲ್ಲಿ ಇದರ ಅರ್ಥವೇನು ಎಂಬುದನ್ನು ವಿವೆಚೀಸಬೇಕಾದದ್ದು ಅಗತ್ಯವಾಗಿದೆ.ಇದರ ವಿಷಯದಲ್ಲಿ ಇಂಗ್ಲೀಷ ಸಾಹಿತ್ಯ ನಮಗೆ ಪ್ರೇರಕ ಶಕ್ತಿಯಾದಂತೆ ಆ ಸಹಿತ್ಯಕ್ಕೆ ಮೂಲ ಪ್ರೇರಣೆ ದೊರೆತದ್ದು ಗ್ರೀಕ್ ಸಹಿತ್ಯದಿಂದ. ಪದ ಕೂಡ ಇದುವರೆಗೆ ನಮಗೆ ತಿಳಿದಿರುವಂತೆ ಅವರದ್ದೆ. ಗ್ರೀಕ್ ಭಾಷೇಯಲ್ಲಿ ಭಾವಗೀತಕಾರ ಎಂದು ಅರ್ಥಕೊಡುವ ಪದ ಲೂರಿಕೋಸ್ ಎಂಬುದು. ಇದು ಲೂರ ಎಂದರೆ ತಂತೀವಾದ್ಯ ಎಂಬ ಪದದಿಂದ ಜನಿಸಿದಿದುದು. ತಂತಿವಾದ್ಯದ ಹಿನ್ನೆಲೆಯಲ್ಲಿ ಹಾಡುವುದಗೋಸ್ಕರವಾಗಿಯೇ ಈ ಗೀತೆಗಳನ್ನು ರಚಿಸುತ್ತಿದ್ದರಿಂದೈವಕ್ಕೆ ಈ ಹೆಸರು ಬಂದಿತು ಎನ್ನಬಹುದು.
 
ಭಾವಗೀತೆಗಳಲ್ಲಿ ವಿವಿದ ಪ್ರಕಾರಗಳು:
 
೧.# ಎಲಿಜಿ ಅಥವಾ ಶೋಕಗೀತೆ
೨.# ಸಾನೆಟ್
೩.# ಓಡ್ ಅಥವಾ ಪ್ರಗಾಥ
೪.# ಹಾಡು
೫.# ಇಡಿಲ್ ಅಥವಾ ಕಿರುಚಿತ್ರ
೬.# ಸೀಸ ಪದ್ಯ
೭.# ಮುಕ್ತಗಳು
೮.# ವಚನ ಕವನಗಳು
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾವಗೀತೆ}}
 
[[ವರ್ಗ:ಕನ್ನಡ ಕಾವ್ಯ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಭಾವಗೀತೆ" ಇಂದ ಪಡೆಯಲ್ಪಟ್ಟಿದೆ