ಎಲೆತೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "Plant": unwanted link. (TW)
ಚು Wikipedia python library
೧೬ ನೇ ಸಾಲು:
}}
'''ಎಲೆತೋಟ''': ವೀಳ್ಯದೆಲೆಯ ಬಳ್ಳಿಗಳನ್ನು ಹೆಚ್ಚಾಗಿ ಹಾಗೂ ಪ್ರತ್ಯೇಕವಾಗಿ ಬೆಳೆಸುವ ಪ್ರದೇಶವನ್ನು ಎಲೆತೋಟವೆನ್ನುತ್ತಾರೆ. ಮೆಣಸಿನಂತೆ ವೀಳ್ಯದೆಲೆಯ ಬಳ್ಳಿಯನ್ನೂ ಅಧಿಕ ಪ್ರಮಾಣದಲ್ಲಿ ತೋಟಗಳಲ್ಲಿ ಬೆಳೆಸುತ್ತಾರೆ. ಇದರ ವ್ಯವಸಾಯ ಮತ್ತು ಉಪಯೋಗ ಏಷ್ಯದಲ್ಲಿ ಪ್ರಾಚೀನಕಾಲದಿಂದಲೂ ಇದೆ. ಇದರ ಮೂಲಸ್ಥಾನ ಮಲೇಸಿಯ ಎಂದು ಹೇಳಲಾಗಿದೆ. ಭಾರತ, ಶ್ರೀಲಂಕಾ, ಮಲೇಷ್ಯಗಳಲ್ಲಿಯೂ ತಾಂಬೂಲ ಚರ್ವಣ ಬಹು ಹಳೆಯ ಸಂಪ್ರದಾಯ. ಇಲ್ಲಿನ ಸಾಮಾಜಿಕ ಹಾಗೂ ಧಾರ್ಮಿಕ ಅಚಾರಗಳಲ್ಲೂ ತಾಂಬೂಲಕ್ಕೆ ಅಗ್ರಸ್ಥಾನವಿರುವುದು ಕಂಡುಬಂದಿದೆ (ನೋಡಿ- ತಾಂಬೂಲ).
 
ವೀಳ್ಯದೆಲೆಯನ್ನು ಭಾರತ ದೇಶದ ಎಲ್ಲ ಪ್ರಾಂತ್ಯಗಳಲ್ಲೂ ಕರ್ನಾಟಕ ರಾಜ್ಯದ ಮೈದಾನ ಪ್ರದೇಶಗಳಲ್ಲಿ ವಿಶೇಷವಾಗಿಯೂ ಬೆಳೆಸುತ್ತಾರೆ. ಬೆಂಗಳೂರು, ಚಿತ್ರದುರ್ಗ ಮೈಸೂರು, ಮಂಡ್ಯ, ಹಾಸನ, ಧಾರವಾಡ ಮುಂತಾದ ಜಿಲ್ಲೆಗಳ ಎಲೆ ಹೆಸರು ಪಡೆದಿದೆ. ಇತರ ಜಿಲ್ಲೆಗಳಲ್ಲಿ ಇದರ ವ್ಯವಸಾಯ ಗಣನೀಯ ಪ್ರಮಾಣದಲ್ಲಿಲ್ಲ.
 
ನೆಲದಲ್ಲಿ ತೇವಾಂಶವಿದ್ದು ಹವೆ ಶುಷ್ಕವಾಗಿರುವಲ್ಲಿ ಎಲೆ ಸೊಗಸಾಗಿ ಬೆಳೆಯುತ್ತದೆ. 45-90 ಸೆಂಮೀ ಅಂಗುಲದಿಂದ ಮೂವತ್ತು ಅಂಗುಲ ಮಳೆ ಬೀಳುವ ಪ್ರದೇಶಗಳು ಎಲೆಯ ಬೇಸಾಯಕ್ಕೆ ಉತ್ತಮ. ಸಾಮಾನ್ಯವಾಗಿ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನೀರಾವರಿ ಅನುಕೂಲ ಇರಬೇಕು. ಇದು ಒಣಹವೆಯಲ್ಲಿ ಚೆನ್ನಾಗಿ ಬೆಳೆಯುತ್ತದಾದರೂ ಭೂಮಿಯಲ್ಲಿ ತೇವಾಂಶ ಚೆನ್ನಾಗಿರಬೇಕು. ಸೂರ್ಯನ ತಾಪವನ್ನು ಇದು ತಡೆಯುವುದಿಲ್ಲ. ಆದ್ದರಿಂದ ನೆರಳು ಅತ್ಯಾವಶ್ಯಕ. ಇದು ಬಳ್ಳಿಯಾಗಿರುವುದರಿಂದ ಹಬ್ಬುವುದಕ್ಕೆಂದು ನೆಟ್ಟ ಮರಗಳು ನೆರಳನ್ನು ಒದಗಿಸುತ್ತವೆ. 150-250 ಸೆಂ. ಉಷ್ಣತೆ ಇದಕ್ಕೆ ಸರಿಯಾದುದು. ಅಲ್ಲದೆ ಎಲೆ ವ್ಯವಸಾಯ ಬಹು ನಾಜೂಕಿನ ಕೆಲಸ. ನೆಲ, ನೀರು, ಬಿಸಿಲು, ಗೊಬ್ಬರ, ಕಟಾವು-ಇತ್ಯಾದಿಯಾಗಿ ಎಲ್ಲ ಅಂಶಗಳಲ್ಲೂ ಬಹು ಎಚ್ಚರಿಕೆಯಿಂದಿರಬೇಕಾಗುತ್ತದೆ.
 
ಆಳವಾದ ಜೌಗಿಲ್ಲದ ಕಪ್ಪು ಮಣ್ಣು ಎಲೆಯ ತೋಟಮಾಡಲು ಉತ್ಕೃಷ್ಟವಾದ್ದು. ದೀರ್ಘ ಕಾಲದ ಬೆಳೆಯಾದ್ದರಿಂದ ಹೆಚ್ಚು ಫಲವತ್ತಾದ ಮಣ್ಣುಬೇಕು. ಸಸ್ಯಗಳಿಂದ ಕೊಳೆತು ಹೆಚ್ಚು ಫಲವತ್ತಾಗಿರುವ ಕೆಂಪು ಗೋಡು ಭೂಮಿ ಚೆನ್ನಾಗಿ ಫಸಲನ್ನು ಕೊಡುತ್ತದೆ. 6-7ರವರೆಗೆ ಪಿ.ಎಚ್.ಉಳ್ಳ ಮಣ್ಣು ಸರಿಹೊಂದುತ್ತದೆ. ಮಣ್ಣಿಗೆ ತೇವಾಂಶವನ್ನು ಚೆನ್ನಾಗಿ ತಡೆದು ಇಟ್ಟುಕೊಳ್ಳುವ ಶಕ್ತಿ ಇರಬೇಕು. ನೀರು ಹೆಚ್ಚು ಬೇಕಿದ್ದರೂ ಬುಡದಲ್ಲಿ ನಿಲ್ಲಬಾರದು, ಬಿದ್ದ ನೀರು ಬಸಿದು ಹೋಗಲು ಅನುಕೂಲವಾಗುವಂತೆ ಇಂಗು ಕಾಲುವೆಗಳನ್ನು ತೆಗೆಯಬೇಕು.
 
ಬಳ್ಳಿಯನ್ನು ಹಂಬುಗಳಿಂದ ವೃದ್ಧಿ ಮಾಡುತ್ತಾರೆ. ಸಾಮಾನ್ಯವಾಗಿ ಮುಂಗಾರು ಮಳೆಯ ಮಧ್ಯದಲ್ಲಿ ಹಂಬು ನೆಡುವುದು ವಾಡಿಕೆ. ಸು. 1ವರ್ಷ ವಯಸ್ಸಾಗಿದ್ದು ಚೆನ್ನಾಗಿ ಬಲಿತಿರುವ ಹಂಬುಗಳನ್ನು ಸು. 1ಮೀ ಉದ್ದ ಗೆಣ್ಣುಗಳು ಬರುವಂತೆ ಕತ್ತರಿಸಿಕೊಂಡು ನೆಡಬೇಕು.
 
ವೀಳ್ಯದೆಲೆಯ ಹಂಬುಗಳಲ್ಲಿರುವ ಜಾತಿಗಳನ್ನು ಇದುವರೆಗೆ ವೈಜ್ಞಾನಿಕ ರೀತಿಯಿಂದ ವಿಂಗಡಿಸಿಲ್ಲ. ಎಲೆಯ ರುಚಿ, ವಾಸನೆ, ಕಟುತ್ವ, ಗಾತ್ರ ಇವುಗಳ ಮೇಲೆ ಕರಿಎಲೆ, ನಾಗವಲ್ಲಿ ಎಲೆ, ಅಂಬಾಡಿ ಎಲೆ, ಮದ್ರಾಸು ಎಲೆ, ಕಣಿಗೆ ಎಲೆ-ಎಂದು ಸ್ಥೂಲವಾಗಿ ವಿಂಗಡಿಸಲಾಗಿದೆ.
 
ಕರಿಎಲೆ ಜಾತಿ ಮೈಸೂರು ದೇಶದಲ್ಲಿ ಅದರಲ್ಲೂ ತರೀಕೆರೆ, ಶಿವಮೊಗ್ಗ, ಹಾಸನ, ಅಜ್ಜಂಪುರ ಮತ್ತು ಮಲೆನಾಡಿನ ಇತರ ಭಾಗಗಳಲ್ಲಿ ಹೆಚ್ಚಿನ ಬೇಸಾಯದಲ್ಲಿದೆ. ಇಳುವರಿ ಚೆನ್ನಾಗಿದೆ. ಇತರ ಜಾತಿಗಳಿಗಿಂತ ಕಪ್ಪಗಿರುವುದರಿಂದ ಇದಕ್ಕೆ ಈ ಹೆಸರು, ಈ ಜಾತಿಯ ತೊಟ್ಟು ಉದ್ದ. ಎಳೆಯದಾಗಿದ್ದಾಗ ಎಲೆ ಹೆಚ್ಚು ಕಾರವಾಗಿರುತ್ತದೆ. ಬಲಿತಾಗ ಬಹು ಒರಟು, ಇದನ್ನು ಹೆಚ್ಚು ದಿವಸ ಇಡಬಹುದು. ಬೇರೆ ಜಾತಿಯ ಎಲೆಗಳಿಗಿಂತ ಇದರ ಬೆಲೆ ಕಡಿಮೆ. ನಾಗವಲ್ಲಿ ಎಲೆಯನ್ನು ಏಲಕ್ಕಿ ಎಲೆ ಎಂದೂ ಕರೆಯುತ್ತಾರೆ. ಎಲೆ ಗಾತ್ರದಲ್ಲಿ ಚಿಕ್ಕದಾಗಿದ್ದು ನಾಗರಹಾವಿನ ಹೆಡೆಯನ್ನು ಹೋಲುತ್ತದೆ. ಈ ಎಲೆ ಕಾರವಾಗಿಲ್ಲ, ಸ್ವಲ್ಪ ಸಿಹಿಯಾಗಿದೆ. ಬಹು ಮೃದು, ಬಣ್ಣ ಬಿಳುಪಿನಿಂದ ಕೂಡಿದ ತಿಳಿ ಹಸುರು. ಮೈಸೂರಿನ ಸುತ್ತಮುತ್ತ ಈ ಜಾತಿ ಯನ್ನು ಹೆಚ್ಚಾಗಿ ಬೆಳೆಸುತ್ತಾರೆ. ಇಳುವರಿ ಕಡಿಮೆ. ಅದರೂ ಈ ಎಲೆಗೆ ಒಳ್ಳೆಯ ಬೆಲೆ ಇದೆ.
 
ಅಂಬಾಡಿ ಎಲೆಗೆ ಕರ್ಪುರದ ವಾಸನೆ ಇದೆ. ಬಣ್ಣ ತೆಳುಹಸುರು, ಅಗಲ ಕಡಿಮೆ, ಉದ್ದ ಹೆಚ್ಚು, ಸ್ವಲ್ಪ ಒರಟು, ಹೆಚ್ಚು ದಿವಸ ಇಡಬಹುದು, ತಿಂದಾಗ ಬಾಯಲ್ಲಿ ಚರಟು ಉಳಿಯುತ್ತದೆ. ಮಲೆನಾಡು ಪ್ರದೇಶಗಳಲ್ಲಿ ಇದರ ಬೇಸಾಯ ಹೆಚ್ಚಾಗಿದೆ.
 
ಮದರಾಸು ಎಲೆ ಅದರ ಹೆಸರೇ ಸೂಚಿಸುವಂತೆ ಚೆನ್ನೈ ಪ್ರಾಂತ್ಯದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಹೆಚ್ಚು ದಿನ ಇಟ್ಟರೂ ಎಲೆ ಬಾಡದು. ಜಾತಿ ಉತ್ತಮವಾದ್ದರಿಂದ ಹೆಚ್ಚಿನ ಬೆಲೆಯೂ ಬೇಡಿಕೆಯೂ ಇದೆ.
 
ವೀಳ್ಯದೆಲೆಯ ಹಂಬನ್ನು ಬೆಳೆಸುವ ಮೊದಲು ಭೂಮಿಯನ್ನು ಚೆನ್ನಾಗಿ ಹದಮಾಡಬೇಕು. ಬೇಸಗೆ ಬರುವ ಮೊದಲೆ ನೆಲವನ್ನು ಆಳವಾಗಿ ಅಗೆದು ಬಿಸಿಲಿನ ತಾಪಕ್ಕೆ ಬಿಡಬೇಕು. ಮುಂಗಾರು ಮಳೆಯ ಪ್ರಾರಂಭದಲ್ಲಿ ಹೆಂಟೆಗಳನ್ನು ಚೆನ್ನಾಗಿ ಪುಡಿ ಮಾಡಿ ಮಟ್ಟಸಮಾಡಬೇಕು. ಗರಿಕೆ, ಕೆಳೆ, ಕಲ್ಲು ಇತ್ಯಾದಿಗಳನ್ನು ತೆಗೆದುಹಾಕಿ ಶುದ್ಧಮಾಡಬೇಕು. ಭದ್ರವಾದ ಬೇಲಿಯನ್ನು ಸಿದ್ಧ ಮಾಡಬೇಕು. ನೀರಾವರಿಗೋಸ್ಕರ ಬಾವಿ ಮತ್ತು ಕಾಲುವೆಗಳನ್ನು ಮಾಡಬೇಕು. ತೋಟದ ಸುತ್ತಲೂ ಗಾಳಿತಡೆಯನ್ನು ನಿರ್ಮಿಸಬೇಕು.
 
ಮೊದಲು ಹಂಬುಗಳನ್ನು ಹಬ್ಬಿಸಲು ಅಗಸೆ, ಬೂರುಗ, ನುಗ್ಗೆ, ಪಾರಿಜಾತ ಮುಂತಾದ ಬೀಜಗಳನ್ನು ಸಾಲುಗಳಲ್ಲಿ ನೆಡುವುದರಿಮದ ಬೇಸಾಯ ಪ್ರಾರಂಭವಾಗುತ್ತದೆ. ಬೀಜಗಳನ್ನು ಬಿತ್ತನೆ ಮಾಡುವುದಕ್ಕೆ ಮುಂಚೆ ಅನುಕೂಲತೆಗೆ ತಕ್ಕ ಹಾಗೆ 1ಮೀ ಅಗಲದ ಉದ್ದನೆಯ ಪಾತಿಗಳನ್ನು ಮಾಡಬೇಕು. ಪ್ರತಿ ಎರಡು ಪಾತಿಗಳಿಗೆ ನಡುವೆ 1.3ಮೀ ಅಗಲವಿರುವ ಚೌಗು ಕಾಲುವೆಗಳನ್ನು ನಾಲ್ಕು ಮೀ ಉದ್ದಕ್ಕೂ ಮಾಡಬೇಕು. ಅನಂತರ ಅಂತರದಲ್ಲಿ ಸಾಲುಗಳಾಗಿ ನೆರಳಿನ ಮರಗಳನ್ನು ಎಬ್ಬಿಸಬೇಕು. ಅಗಸೆ, ಬೂರುಗ, ನುಗ್ಗೆ, ಪಾರಿಚಾತ, ಹಾಲಿವಾಣ ಇವು ಒಳ್ಳೆಯ ನೆರಳು ಕೊಡುವ ಮರಗಳು. ಅನೇಕ ವೇಳೆ ಬೆಳೆದ ಅಡಕೆ ಮತ್ತು ತೆಂಗುಗಳಿಗೂ ಬಳ್ಳಿಯನ್ನು ಹಬ್ಬಿಸುವುದುಂಟು. ಎರಡು ಅಥವಾ ಮೂರು ತಿಂಗಳಲ್ಲಿ ನೆರಳು ಗಿಡಗಳು 1.3-1.6ಮೀ ಎತ್ತರಕ್ಕೆ ಬೆಳೆಯುತ್ತವೆ. ಇವುಗಳ ಮಧ್ಯದಲ್ಲಿನ ಪಾತಿಯಲ್ಲಿ ಆಗಸ್ಟ್‌ ತಿಂಗಳಲ್ಲಿ ಹಂಬುಗಳ ತುಂಡುಗಳನ್ನು ನೆಡುವುದು ವಾಡಿಕೆ. ಸಾಲಿನಲ್ಲಿ ಒತ್ತಾಗಿರುವ ಸಸಿಗಳನ್ನು ಕಿತ್ತುಹಾಕಬೇಕು. ಅಂಟುಗಳು ಚಿಗುರುವವರೆಗೆ ನೀರು ಹೊತ್ತು ಹಾಕುವುದು ಅಗತ್ಯ. ಸರಿಯಾದ ನೆರಳನ್ನೂ ಒದಗಿಸಬೇಕು.
 
ಅನಂತರವೂ ಕಾಲಕ್ಕೆ ಸರಿಯಾಗಿ ನೀರು ಹಾಯಿಸುವುದು ಮುಖ್ಯ. ಕಳೆ ಕಿತ್ತು ಸ್ವಚ್ಚ ಮಾಡುವುದರಿಂದ ತೋಟಕ್ಕೆ ರೋಗಗಳು ಹರಡುವ ಸಂಭವ ಕಡಿಮೆಯಾಗುತ್ತದೆ. ತುಂಬ ನೆರಳು ಕಟ್ಟಿರುವಲ್ಲಿ ಹೆಚ್ಚಿನ ರೆಂಬೆಗಳನ್ನು ಕತ್ತರಿಸಿ ಹಾಕಬೇಕು. ಉತ್ತಮ ಫಸಲನ್ನು ಪಡೆಯಲು ಪ್ರತಿ ಎರಡು ತಿಂಗಳಿಗೊಮ್ಮೆ ಪಾತಿ ಒಂದಕ್ಕೆ 10ಕಿಗ್ರಾಂನಷ್ಟು ಚೆನ್ನಾಗಿ ಕೊಳೆತ ಗೊಬ್ಬರವನ್ನು ಹಾಕಬೇಕು. ವರ್ಷಕ್ಕೊಂದುಸಾರಿ ಹೆಚ್ಚು ಬೆಳೆದಿರುವ ಹಂಬುಗಳನ್ನು ಸುತ್ತಿ ಪಕ್ಕದ ಪಾತಿಗಳಿಗೆ ಬದಲಾಯಿಸಬೇಕು. ಸುತ್ತಿದ ಹಂಬುಗಳನ್ನು ಪಾತಿಯಲ್ಲಿಟ್ಟು ಸರಿಯಾಗಿ ನಿಲ್ಲುವಂತೆ ಮಣ್ಣು ಉಂಡೆಗಳನ್ನು ಇಡಬೇಕು. ಅನಂತರ ಅವು ಬೆಳೆದಂತೆಲ್ಲ ಆಶ್ರಯದ ಮರಗಳಿಗೆ ಕಟ್ಟಬೇಕು. ಹಂಬು ಇಳಿಸುವಾಗ ಅದರ ಪಕ್ಕದ ರೆಂಬೆಗಳನ್ನು ಕತ್ತರಿಸಿ ಹಾಕಬೇಕು.
ಸಾಮಾನ್ಯವಾಗಿ ಎಲೆ ಬಳ್ಳಿಯನ್ನು ಮಿಶ್ರಬೆಳೆಯಾಗಿ ಬೆಳೆಯುತ್ತಾರೆ. ಔಗು ಕಾಲುವೆ ಮತ್ತು ದೊಡ್ಡ ಅಥವಾ ಮುಖ್ಯ ಕಾಲುವೆಗಳ ನಡುವೆ ಹಂಬು ನೆಡುತ್ತಾರೆ. ಪರಂಗಿಯನ್ನು ಕೂಡ ಇದೇ ರೀತಿ ಬೆಳೆಸಬಹುದು. ನೆರಳು ಮತ್ತು ಆಶ್ರಯಕ್ಕಾಗಿ ನೆಟ್ಟ ನುಗ್ಗೆ ಅಥವಾ ಅಗಸೆ ಮರಗಳು ಫಲವನ್ನು ಕೊಡುವುದರಿಂದ ಅವನ್ನು ಸಹ ಮಿಶ್ರಬೆಳೆ ಎಂದೇ ಕರೆಯಬಹುದು. ಎಲೆ ಹಂಬು ನೆಟ್ಟ ಹೊಸದರಲ್ಲಿ ಸೌತೆ, ಹುರುಳಿ ಮುಂತಾದುವನ್ನು ಬೆಳೆಯಬಹುದು. ಅದರ ಹಂಬು ದೊಡ್ಡದಾದಮೇಲೆ ಬಾಳೆ, ಪರಂಗಿ ಮತ್ತು ಅಡಕೆಯನ್ನು ಬಿಟ್ಟು ಮತ್ತೆ ಯಾವ ಮಿಶ್ರ ಬೆಳೆಯನ್ನು ತೆಗೆಯಲು ಸಾಧ್ಯವಿಲ್ಲ.
 
ಎಲೆ ಎರಡು ತಿಂಗಳಿಗೆ ಒಂದಾವರ್ತಿ ಕುಯ್ಲಿಗೆ ಬರುತ್ತದೆ. ಹದವಾದ ಎಲೆಗಳನ್ನು ಮಾತ್ರ ಚಾಕುವಿನಿಂದ ಕುಯ್ದು ಜೋಡಿಸಿ ಕಟ್ಟುಗಳಾಗಿ ಕಟ್ಟುತ್ತಾರೆ. ಹೆಬ್ಬೆರಳಿನ ತುದಿಗೆ ಲೋಹದ ಉಗುರನ್ನು ಹಾಕಿಕೊಂಡು ಎಲೆಗಳನ್ನು ಚಿವುಟಿ ತೆಗೆಯುವುದೂ ಉಂಟು. ಇಂಥ ಲೋಹದ ಉಗುರನ್ನು ಎಲೆಯುಗುರು ಎನ್ನುತ್ತಾರೆ. ನೇರ ಉಗುರುಗಳಿಂದಲೇ ಚಿವುಟಿದರೆ ಬಳ್ಳಿಗೆ ನಂಜಾಗುತ್ತದೆ. ಎಲೆ ಬಿಡಿಸುವವರನ್ನು ಉಗುರರು ಎಂದೇ ಕರೆಯುತ್ತಾರೆ. ಚೆನ್ನಾಗಿ ಬೇಸಾಯ ಮಾಡಿದ ತೋಟ ವರ್ಷಕ್ಕೆ ಎಕರೆ ಒಂದಕ್ಕೆ ಸುಮಾರು ಎರಡು ಲಕ್ಷ ಎಲೆಗಳನ್ನು ಕೊಡುತ್ತದೆ. ಆಗಾಗ ನೆಲಕ್ಕೆ ಊರುತ್ತಿದ್ದರೆ ಚೆನ್ನಾಗಿ ಬೆಳೆದ ಹಂಬು ಅರವತ್ತು ವರ್ಷ ಫಲಕೊಡುತ್ತದೆಂದು ಬೇಸಾಯಗಾರರ ಅಭಿಪ್ರಾಯ.
 
ವೀಳ್ಯದೆಲೆಗೆ ಸಾಮಾನ್ಯವಾಗಿ ಬರುವ ರೋಗವೆಂದರೆ ಬೂದಿರೋಗ. ಅದು ಬಂದಾಗ ಎಲೆಗಳ ಕೆಳಗಡೆ ಬೂದಿಗಟ್ಟಿದಂತಾಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರಿಹೋಗುತ್ತವೆ. ಇದನ್ನು ತಡೆಯಲು ಗಂಧಕದ ಪುಡಿಯನ್ನು ಎರಚಬೇಕು; ರೋಗ ಹರಡದಂತೆ ತೋಟವನ್ನು ಸ್ವಚ್ಛವಾಗಿಟ್ಟಿರಬೇಕು.
 
ಎರೆಹುಳು ಭೂಮಿಯಲ್ಲಿ ತೂತುಗಳನ್ನು ಕೊರೆದು ನೀರು ನಿಲ್ಲುವಂತೆ ಮಾಡುವುದ ರಿಂದ ಚೌಗು ಹಿಡಿದು ಹಂಬುಗಳು ಸಾಯುತ್ತವೆ. ಕೆಲವು ಸಾರಿ, ಎರೆ ಹುಳುಗಳು ನೆಲದಂತೆ ಹಂಬುಗಳನ್ನೂ ಕೊರೆಯಬಹುದು. ಯುಕ್ತ ರಾಸಾಯನಿಕಗಳ ಪುಡಿಯನ್ನು ರಂಧ್ರಗಳ ಒಳಗಡೆ ಹೋಗುವಂತೆ ಮಾಡಿ ಹುಳುಗಳನ್ನು ಕೊಲ್ಲಬೇಕು.
 
ಎಲೆತೋಟ ಬಹು ಲಾಭದಾಯಕವಾದ ಉದ್ಯಮ, ಬೆಳೆದ ಎಲೆಯಲ್ಲಿ ಬಹುಪಾಲು ದೇಶೀಯ ಮಾರುಕಟ್ಟೆಯಲ್ಲೇ ಖರ್ಚಾಗುತ್ತದೆ. ಸ್ವಲ್ಪ ಭಾಗ ರಫ್ತಾಗುವುದೂ ಉಂಟು. ಭಾರತ ತಾನು ಬೆಳೆದ ಎಲೆಯನ್ನು ಯುನೈಟೆಡ್ ಕಿಂಗ್ಡಮ್, ಕೀನ್ಯ, ಏಡನ್, ಪುರ್ವ ಪಾಕಿಸ್ತಾನ, ಬಹ್ರೇನ್ ದ್ವೀಪಗಳು, ಕುವಾಯಿತ್, ನೇಪಾಲ ಮತ್ತು ಇತರ ಸ್ಥಳಗಳಿಗೆ ರಫ್ತಾಗುತ್ತದೆ.
ಎಲೆಯ ಲಕ್ಷಣಗಳು, ಉಪಯೋಗಗಳು: ತಾಂಬುಲದೊಡನೆಯೊ ಹಾಗೆಯೊ ಸೇವಿಸಿದಾಗ ವೀಳ್ಯದೆಲೆ ಸುವಾಸನೆಯನ್ನು ಕೊಡುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ನರಗಳನ್ನು ಉತ್ತೇಜಿಸುತ್ತದೆ. ತಿಂದ ಆಹಾರ ಜೀರ್ಣಿಸಲು ಸಹಾಯ ಮಾಡುತ್ತದೆ. ಕಫ, ಕೆಮ್ಮು ಮೊದಲಾದ ಗಂಟಲ ಮತ್ತು ಎದೆಯ ರೋಗಗಳನ್ನು ಶಮನಮಾಡುತ್ತದೆ. ಎಲೆಗಳಿಂದ ಬೆಚ್ಚಾರ (ಪೌಲ್ಟೀಸ್) ಮಾಡಿ ಕುರು ಮೊದಲಾದ ಚರ್ಮರೋಗಗಳಿರುವ ಎಡೆಗೆ ಕಟ್ಟುತ್ತಾರೆ. ಹೊಸ ಎಲೆಯಲ್ಲಿ ಈ ಅಂಶಗಳಿವೆ : (ಶೇಕಡ) ತೇವ 85.4; ಪ್ರೋಟೀನು 3.1; ಕೊಬ್ಬು 0.8;
ಶರ್ಕರ ಷಿಷ್ಠಾದಿಗಳು 6.1; ನಾರು 2.3; ಖನಿಜ ವಸ್ತು 2.3 ಕ್ಯಾಲ್ಸಿಯಂ 230 ಮಿಗ್ರಾಂ; ರಂಜಕ 40 ಮಿಗ್ರಾಂ; ಕಬ್ಬಿಣ 7 ಮಿಗ್ರಾಂ; ಅಯಾನೀಕೃತವಾಗಬಲ್ಲ ಕಬ್ಬಿಣ 3.5 ಮಿಗ್ರಾಂ; ಕೆರೊಟೀನ್ 9.600 ಐ.ಯು; ತಯಾಮಿನ್ 70ಮಿಗ್ರಾಂ; ರೈಬೊಪ್ಲೇವಿನ್ 30ಮಿಗ್ರಾಂ; ನಿಕೋಟಿನಿಕ್ ಅಮ್ಲ 0.7 ಮಿಗ್ರಾಂ ಸಿ ಜೀವಾತು 5.0 ಮಿಗ್ರಾಂ/100 ಗ್ರಾಂ; ಅಯೋಡಿನ್ 3.4 ಮಿ.ಗ್ರಾಂ./100 ಗ್ರಾಂ; ಪೊಟ್ಯಾಸಿಯಂ ನೈಟ್ರೇಟ್ ಶೇ. 0.26-0.42. ಬೊಂಬಾಯಿಯ ಎಲೆಗಳಲ್ಲಿ ಈ ಅಂಶಗಳಿವೆ: ಗ್ಲೂಕೋಸ್ 1.4-3.2; ಸುಕ್ರೋಸ್ 0.6-2.5; ಷಿಷ್ಠ 1.0-1.2;
ತೈಲಾಂಶ 0.8-1.8; ಟ್ಯಾನಿನ್ ಶೇ. 1.0-1.3.
 
ಎಲೆಯಲ್ಲಿನ ತೈಲಾಂಶವನ್ನು ಪ್ರತ್ಯೇಕಿಸಿ ಅನೇಕ ಔಷಧಗಳಲ್ಲಿ ಬಳಸುತ್ತಾರೆ. ಎಲೆಗಳನ್ನು ಎಣ್ಣೆ, ಬೆಣ್ಣೆ ಇತ್ಯಾದಿಗಳೊಡನೆ ಹಾಕಿ ಕಾಯಿಸಿದಾಗ ಜಿಡ್ಡಿನಲ್ಲಿರುವ ಕಮಟುನಾತ ಮಾಯವಾಗಿ ಶುಭ್ರವಾಗುತ್ತದೆ. (ಡಿ.ಎಂ.)
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಲೆತೋಟ |ಎಲೆತೋಟ}}
"https://kn.wikipedia.org/wiki/ಎಲೆತೋಟ" ಇಂದ ಪಡೆಯಲ್ಪಟ್ಟಿದೆ