ಕಣಿವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಎರಡು ಬೆಟ್ಟಗಳ ನಡುವಿನ ಇಕ್ಕಟ್ಟಾದ ಮತ್ತು ಆಳವಾದ ಪ್ರದೇಶ, ಕಂದರ,ಕಿಬ್ಬರಿ
Content deleted Content added
ಹೊಸ ಲೇಖನ
( ಯಾವುದೇ ವ್ಯತ್ಯಾಸವಿಲ್ಲ )

೧೩:೪೨, ೧೭ ಡಿಸೆಂಬರ್ ೨೦೧೫ ನಂತೆ ಪರಿಷ್ಕರಣೆ

ಕಣಿವೆ : ವಿಸ್ತಾರವೂ ಕಡಿದೂ ಮುಮ್ಮೈ ಉಳ್ಳದ್ದೂ ಆದ ದಿಣ್ಣೆಗಳ ನಡುವೆಯೋ ಬೆಟ್ಟಗಳ ಅಥವಾ ಪರ್ವತಗಳ ಶ್ರೇಣಿಗಳ ನಡುವೆಯೋ ಇರುವ, ಸಾಮಾನ್ಯವಾಗಿ ಹೊರಕ್ಕೆ ತೆರೆದುಕೊಂಡಿರುವ, ಉದ್ದನೆಯ ತಗ್ಗು (ವ್ಯಾಲಿ). ಭೂಮಿಯ ಮೇಲ್ಪದರ ತಳಾಭಿಮುಖವಾಗಿ ಮಡಿಸಿಕೊಂಡು ಸಮಾನರೇಖೆಯ ಕಡೆಗೆ ಇಳಿವೋರೆಯಾಗಿ ಆದದ್ದು ಕೇಂದ್ರಮುಖಾವನತ (ಸಿನ್ಕ್ಲೈನಲ್) ಕಣಿವೆ. ಸ್ತರಭಂಗದಿಂದ ಅಥವಾ ಖನಿಜರೇಖೆಯ ವಿಚ್ಛಿತ್ತಿಯಿಂದ ಸಂಭವಿಸಿದ್ದು ಸೀಳು ಕಣಿವೆ. ಇವೆರಡೂ ಭೂರಚನೆಯ ವ್ಯತ್ಯಾಸದಿಂದ ಆದಂಥ ಕಣಿವೆಗಳು. ನದಿ ಅಥವಾ ಹಿಮಪ್ರವಾಹದಿಂದ, ಅದರ ಆಕ್ರಮಣಕ್ಕೆ ಪುರ್ವಭಾವಿಯಾಗಿಯೋ ಅನುಗುಣ ವಾಗಿಯೋ ಸಂಭವಿಸುವ ನಾನಾ ಕ್ರಿಯೆಗಳಿಂದಾಗಿ, ಕಣಿವೆಗಳು ಸಂಭವಿಸುವುದೂ ಉಂಟು.

Calchaquí Valleys in Argentina
U-shaped valley in Glacier National Park, Montana, USA
Romsdalen in Western Norway is an almost vertical valley.
Fljótsdalur in East Iceland, a rather flat valley (in Scotland, this type of valley is called a "strath")

ಕೇಂದ್ರಮುಖಾವನತ ಕಣಿವೆಗಳು

ಭೂವರ್ತುಲಕ್ಕೆ ಸ್ಪರ್ಶಕವಾಗಿಯೋ ಅದರ ಸಮತಲದಲ್ಲೋ ಎರಡು ಬಲಗಳು ಹೊರಟು ಒಂದೇ ಬಿಂದುವಿನ ಕಡೆಗೆ ಚಲಿಸಿದಾಗ ಅಥವಾ ಎರಡು ವಿರುದ್ಧ ದಿಕ್ಕುಗಳಿಂದ ಒಂದೇ ಸಮತಲದ ಕಡೆಗೆ ಚಲಿಸಿದಾಗ ನಡುವಣ ಶಿಲೆಗಳು ಸಂಕುಚಿತಗೊಳ್ಳುತ್ತವೆ. ಇದರ ಫಲವಾಗಿ ಮೂಲ ಶಿಲೆಗಳು ಮೊದಲು ಆಕ್ರಮಿಸಿಕೊಂಡಿದ್ದಕ್ಕಿಂತ ಕಡಿಮೆ ಪ್ರದೇಶವನ್ನಾಕ್ರಮಿಸಿಕೊಳ್ಳುವುದರಿಂದ ಈ ಬಗೆಯ ಕಣಿವೆಗಳು ಸಂಭವಿಸುತ್ತವೆ. ಈ ಕ್ರಿಯೆಗಳ ಫಲವಾಗಿ ನೆಲದ ಒಂದು ಭಾಗ ಉಬ್ಬಾಗಿಯೂ (ವಿಮುಖಾವನತ) ಇನ್ನೊಂದು ಭಾಗ ತಗ್ಗಾಗಿಯೂ (ಕೇಂದ್ರಮುಖಾವನತ)-ಸಮುದ್ರದ ಅಲೆಗಳಂತೆ-ಪರಿಣಮಿಸುತ್ತದೆ. ಹಿಮಾಲಯ, ಆರಾವಳಿ, ಆಲ್ಪ್‌್ಸ, ರಾಕಿ ಮುಂತಾದ ಪರ್ವತಶ್ರೇಣಿಗಳ ನಡುವಣ ಕಣಿವೆಗಳು ಈ ರೀತಿಯಾಗಿ ಸಂಭವಿಸಿದಂಥವು.

ಸೀಳು ಕಣಿವೆ

ಭೂಮಿಯ ಒಳಗಡೆ ಸಂಭವಿಸುವ ಬಲಗಳು ಬೇರೆ ಬೇರೆ ದಿಕ್ಕುಗಳ ಕಡೆಗೆ ಹರಿದಾಗ ಭೂಮಿಯ ಮೇಲಣ ಶಿಲೆಗಳು ಏರುಪೇರಾಗುತ್ತವೆ. ಒಂದು ಭಾಗ ಕುಸಿದು ಇನ್ನೊಂದು ಭಾಗ ಹಾಗೆಯೇ ಇರುತ್ತದೆ. ಒಂದು ರೇಖೆಯ ಉದ್ದಕ್ಕೂ ಸ್ತರಭಂಗದಿಂದಾಗಿ ಭೂಚಿಪ್ಪಿನ ಒಂದು ಭಾಗ ಜಾರಿಕೊಂಡಾಗ ಗೋಡೆಯಂತೆ ಕಡಿದಾದ ಅಂಚುಗಳುಳ್ಳ ಸೀಳುಕಣಿವೆಯ ರಚನೆಯಾಗುತ್ತದೆ. ಸ್ಕಾಟ್ಲೆಂಡಿನ ಮಿಡ್ಲೆಂಡ್ ಕಣಿವೆ, ರ್ಹೈನ್ ಕಣಿವೆ, ಮೃತಸರೋವರದ ಭಾಗ, ಜಾರ್ಡನ್ ಕಣಿವೆ, ಇವು ಕೆಲವು ಉದಾಹರಣೆಗಳು. ನರ್ಮದಾ ಮತ್ತು ತಪತೀ ನದೀ ಕಣಿವೆಗಳೂ ಈ ವರ್ಗಕ್ಕೆ ಸೇರಿದವೆಂದು ಕೆಲವು ಭೂಗೋಳವಿಜ್ಞಾನಿಗಳ ಮತ. ಕಲ್ಲಿದ್ದಲಿನ ನಿಕ್ಷೇಪವಿರುವ ದಾಮೋದರ ಕಣಿವೆಯೂ ಈ ತೆರನಾದದ್ದು.

ನದೀಕಣಿವೆ

ಎತ್ತರದ ನೆಲದ ಮೇಲೆ ಬಿದ್ದ ನೀರು ಕೋಟ್ಯಂತರ ವರ್ಷಗಳಿಂದ ಹರಿಯುತ್ತಿರುವುದರ ಪರಿಣಾಮವಾಗಿ ನೆಲದ ಮೃದುವಾದ ಭಾಗ ಕೊಚ್ಚಿಹೋಗಿ ಕಣಿವೆಗಳು ನಿರ್ಮಾಣವಾಗುತ್ತವೆ. ಇವು ನದಿಗಳ ಉಗಮಸ್ಥಾನಗಳೂ ಆಗಿರುತ್ತವೆ. ಒಮ್ಮೊಮ್ಮೆ ಇಂಥ ಕಣಿವೆಗಳು ಕಮರಿಗಳನ್ನು ನಿರ್ಮಿಸಿ ಪ್ರಕೃತಿಯ ರಮ್ಯಭೀಕರಣ ದೃಶ್ಯಗಳನ್ನೊದಗಿಸುತ್ತವೆ. ನದೀ ಪ್ರವಾಹದ ಮತ್ತು ಭೂಸವೆತದ ಪರಿಣಾಮವಾಗಿ ನದೀಬಯಲಿನಲ್ಲೂ ಕಣಿವೆಗಳು ನಿರ್ಮಾಣವಾಗುವುದುಂಟು.

ನದೀಕಣಿವೆಯನ್ನು ಮೇಲ್ಕಣಿವೆ, ಮಧ್ಯದ ಕಣಿವೆ, ಕೆಳಕಣಿವೆ ಎಂಬುದಾಗಿ ವಿಭಾಗಿಸಬಹುದು. ನದಿಯ ಪ್ರಾರಂಭದೆಸೆಯದು ಮೇಲ್ಕಣಿವೆ. ಇದು ಸಾಮಾನ್ಯವಾಗಿ ಪರ್ವತ ಪ್ರದೇಶಗಳಲ್ಲಿರುವುದರಿಂದ ನಗ್ನೀಕರಣಕಾರ್ಯ ಹೆಚ್ಚಾಗಿ, ಇಳಿಮುಖ ಕೊರೆತ ಹೆಚ್ಚಾಗಿರುತ್ತದೆ. ಇದರ ಪರಿಣಾಮವಾಗಿ ಕಡಿದಾದ ಪಕ್ಕಗಳುಳ್ಳ ಗಿ ಆಕಾರದ ಕಣಿವೆಗಳ ನಿರ್ಮಾಣವಾಗುತ್ತದೆ. ಕಡಿದಾದ ಪಕ್ಕಗಳು ಕಠಿಣಶಿಲಾಭಾಗಗಳಾಗಿದ್ದು, ಆಳವಾದ ಗೋಡೆಗಳಂತೆ ನಿಂತಿರುತ್ತವೆ. ಕಾಲೊರಾಡೋ ನದೀ ಕಣಿವೆಯಲ್ಲಿ ಶೃಂಗಲಂಬವಾದ ಪಕ್ಕಗಳುಳ್ಳ ಇಂಥ ಆಳವಾದ ಕಮರಿಗಳನ್ನು ಕಾಣಬಹುದು. ಇಂಥ ಪ್ರದೇಶಗಳಲ್ಲಿ ಇದ್ದಕ್ಕಿದ್ದಂತೆ ಭಿನ್ನಸ್ವರೂಪದ, ಕಠಿಣವಲ್ಲದ ಶಿಲಾಸ್ತರಗಳು ಕಂಡುಬಂದಾಗ ಭೂಸವೆತದ ಕಾರ್ಯ ತೀವ್ರವಾಗಿ ಜಲಪಾತಗಳು ನಿರ್ಮಾಣವಾಗುತ್ತವೆ. ನದಿಯ ಮಧ್ಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಆಳವಾದ ಕಣಿವೆಗಳು ಇರುವುದಿಲ್ಲ. ಇಲ್ಲಿ ಸರೋವರಗಳು ಸಂಭವಿಸುವುದು ಸಾಮಾನ್ಯ. ಕೆಳಕಣಿವೆಯಲ್ಲಿ ಯಾವ ರೀತಿಯ ವಿಶೇಷವೂ ಇರುವುದಿಲ್ಲ.

ನದೀಕಣಿವೆಗಳಲ್ಲಿ ಕೆಲವು ಶುಷ್ಕಕಣಿವೆಗಳೂ ಇರುವುದುಂಟು. ನೀರು ಬೇರೆ ಕಡೆ ಹರಿಯತೊಡಗುವುದರಿಂದ ಇಲ್ಲವೆ ಪಾತ್ರದ ನೆಲದಲ್ಲಿ ನೀರು ಇಂಗಿ ಹೋಗುವುದರಿಂದ ಈ ಬಗೆಯ ಕಣಿವೆಗಳು ನಿರ್ಮಾಣವಾಗುತ್ತದೆ. ಇವು ಮೃತಕಣಿವೆಗಳು.

ಕಣಿವೆಗಳು ಯುವಾವಸ್ಥೆಯಲ್ಲಿದ್ದಾಗ ಗಿ ಆಕಾರದಲ್ಲಿದ್ದು ಕಡಿಮೆ ಉಪನದಿಗಳನ್ನು ಪಡೆದಿರುತ್ತವೆ. ವಿಕಾಸಗೊಂಡ ಕಣಿವೆಗಳು ವಿಶಾಲ. ಇಲ್ಲಿ ಉದ್ದುದ್ದನೆಯ ಉಪನದಿಗಳಿರುತ್ತವೆ. ಹಳೆಯ ಕಣಿವೆಗಳಿಗೆ ಇಳಿಜಾರು ಕಡಿಮೆ. ಪ್ರವಾಹಗಳು ವಿಶಾಲವಾಗಿರುತ್ತದೆ.

 
U-shaped valley on the Afon Fathew near Dolgoch
 
Yosemite Valley from an airplane
 
A glaciated valley in the Mount Hood Wilderness showing a characteristic U-shape, the bottom's rocky 'rubble' accretion and the broad shoulders

ಹಿಮರೇಖೆಗಿಂತ ಎತ್ತರವಾದ ಪರ್ವತಪ್ರದೇಶಗಳಲ್ಲಿರುವ ಹಿಮ ಪ್ರವಾಹಗಳು ಇಳಿಜಾರಾಗಿರುವ ಕಡೆ ಹರಿಯುತ್ತದೆ. ಇವು ಹರಿಯುವಾಗ ತಳಭಾಗವನ್ನು ಕೊರೆದು ಅಗಲ ಮಾಡಿ, ಅಡ್ಡಮುಖ ಸಮತಟ್ಟಾದ ತಳವನ್ನೂ ಕಡಿದಾದ ಪಕ್ಕಗಳನ್ನೂ ನಿರ್ಮಾಣ ಮಾಡುತ್ತವೆ. ಇಂಥವು ಬಾನೆ ಇಲ್ಲವೆ ಬೋಗುಣಿಯಾಕಾರದ U ಕಣಿವೆಗಳು.

ಹಿಮಪ್ರವಾಹಗಳು ಮುಖ್ಯವಾಗಿ ಹರಿಯುವಂಥವು ಮೂಲ ಕಣಿವೆಗಳು. ಇವನ್ನು ಸೇರುವ ಕಣಿವೆಗಳು ಉಪಕಣಿವೆಗಳು. ಮೂಲಕಣಿಗಳಲ್ಲಿ ಭೂಸವೆತ ಸಾಮಾನ್ಯವಾಗಿ ತೀವ್ರಗತಿಯಲ್ಲಿ ಆಗುವುದರಿಂದ ಅವು ಹೆಚ್ಚು ಆಳಕ್ಕೆ ಇಳಿಯುತ್ತವೆ. ಉಪಕಣಿವೆಗಳಲ್ಲಿ ಭೂಸವೆತ ಕಡಿಮೆ. ಅವು ಮೂಲಕಣಿವೆಗಳ ಮೇಲ್ಭಾಗದಲ್ಲಿರುತ್ತವೆ. ಅವು ತೂಗುಕಣಿವೆಗಳು. ಹಿಮಪ್ರವಾಹಗಳು ಕಣ್ಮರೆಯಾಗಿ ನೀರು ಹರಿಯಲು ಪ್ರಾರಂಭವಾದಾಗ ಜಲಪಾತಗಳು ಸಂಭವಿಸುತ್ತವೆ.

U ಆಕಾರದ ಕಣಿವೆಗಳ ಮೂಲದಲ್ಲಿ ಅರ್ಧ ಚಂದ್ರಾಕಾರದ ಪಾತ್ರವಿರುತ್ತದೆ. ಇದಕ್ಕೆ ಲಂಬವಾಗಿರುವ ಹಿಂಬದಿ ಮತ್ತ ಪಕ್ಕಗಳುಂಟು. ನೋಡಲು ಇದು ಆರಾಮ ಕುರ್ಚಿಯಂತಿರುತ್ತದೆ. ಇದು ರಂಗಕಣಿವೆ. ಈ ಕಣಿವೆಯ ತಳದಲ್ಲಿರುವ ಕೆಲವು ತಗ್ಗುಗಳಲ್ಲಿ ನೀರು ತುಂಬಿ ಡೊಣೆಗಳಾಗುವುದುಂಟು.

ಸಮುದ್ರ ಮತ್ತು ಸಾಗರಗಳ ತಳಗಳಲ್ಲೂ ಅನೇಕ ಪರ್ವತಶ್ರೇಣಿಗಳಿವೆ. ಇವುಗಳ ನಡುವೆಯೂ ಅಲ್ಲಲ್ಲಿ ಕಣಿವೆಗಳುಂಟು. ಇವುಗಳಲ್ಲಿ ಕೆಲವು ಕೊಲೊರಾಡೋವಿನ ಕಮರಿಗಳಂತಿರುತ್ತವೆ. ಹಡ್ಸನ್ ನದಿ ಅಟ್ಲಾಂಟಿಕ್ ಸಾಗರದೊಳಗೆ ಮುಂದುವರಿಯುತ್ತದೆ. ಇದು ಹಡ್ಸನ್ ಕಮರಿ-ಸೀಳುಕಣಿವೆಯಿಂದ ಆದದ್ದು.

ಬಾಹ್ಯ ಸಂಪರ್ಕಗಳು

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಣಿವೆ&oldid=635258" ಇಂದ ಪಡೆಯಲ್ಪಟ್ಟಿದೆ