ಆರ್ಟಿಯೊಡ್ಯಾಕ್ಟೈಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೨೦ ನೇ ಸಾಲು:
}}
ಸಾಮಾನ್ಯವಾಗಿ ಸೀಳುಗೊರಸುಳ್ಳ ನೀರಾನೆ, ಒಂಟೆ, ಲಾಮ, ಜಿಂಕೆ, ಜಿರಾಫೆ, ಎರಳೆ, ಕುರಿ, ಆಡು, ದನ ಮುಂತಾದ ಪ್ರಾಣಿಗಳನ್ನೊಳಗೊಂಡ ಸ್ತನಿಗಳ ಗುಂಪು. (ಆರ್ಟಿಯೊ=ಜೊತೆ, ಡ್ಯಾಕ್ಟುಲಸ್=ಬೆರಳು). ಇವು ಹುಲ್ಲು, ಸೊಪ್ಪು ಹಾಗೂ ಇತರ ಸಸ್ಯಗಳನ್ನು ತಿಂದು ಜೀವಿಸುವ ಶಾಕಾಹಾರಿಗಳು. ಮುಂದಿನ ಹಾಗೂ ಹಿಂದಿನ ಕಾಲುಗಳಲ್ಲಿ ಎರಡು ಅಥವಾ ನಾಲ್ಕು ಸಮಸಂಖ್ಯೆಯ ಕಾಲ್ಬೆರಳುಗಳಿರುತ್ತವೆ. ಕಾಲುಗಳ ಮುಖ್ಯ ಅಕ್ಷ (ಆ್ಯಕ್ಸಿಸ್) ಮೂರು ಮತ್ತು ನಾಲ್ಕನೆಯ ಕಾಲ್ಬೆರಳುಗಳ ಮಧ್ಯೆ ಸಾಗಿರುತ್ತದೆ. ಪ್ರತಿಯೊಂದು ಕಾಲ್ಬೆರಳೂ ಚೆನ್ನಾಗಿ ಬೆಳೆದಿದ್ದು, ಹೆಚ್ಚು ಕಡಿಮೆ ಒಂದೇ ಗಾತ್ರದಲ್ಲಿರುತ್ತದೆ. ಸಾಮಾನ್ಯವಾಗಿ ಎರಡನೆಯ ಮತ್ತು ಐದನೆಯ ಅಥವಾ ಹೊರಗಿನ ಕಾಲ್ಬೆರಳುಗಳು ಚಿಕ್ಕದಾಗಿರುತ್ತವೆ. ಕೆಲವುವೇಳೆ ಅವು ಪುರ್ಣವಾಗಿ ಇರುವುದಿಲ್ಲ. ಇಂದಿನ ಆರ್ಟಿಯೊಡ್ಯಾಕ್ಟೈಲದ ಮೊದಲನೆಯ ಕಾಲ್ಬೆರಳು ಇಲ್ಲವಾದರೂ ಹಂದಿಯಂತಿದ್ದ ಕೆಲವು ಪ್ರಾಣಿಗಳ ಮುಂದಿನ ಪಾದದಲ್ಲಿ ಅದು ಉಳಿದುಕೊಂಡಿರಬೇಕು.
 
ಆರ್ಟಿಯೊಡ್ಯಾಕ್ಟೈಲಗಳಲ್ಲಿ ಹಿಂದಿನ ಪಾದದಲ್ಲಿ ಮೂರು ಕಾಲ್ಬೆರಳುಗಳನ್ನುಳ್ಳ ವರಾಹಗಳನ್ನು (ಪೆಕರೀಸ್) ಬಿಟ್ಟರೆ, ಈ ಗುಂಪಿನ ಜೀವಿಸಿರುವ ಎಲ್ಲ ಪ್ರಾಣಿಗಳಲ್ಲೂ ಮುಂದಿನ ಮತ್ತು ಹಿಂದಿನ ಪಾದಗಳಲ್ಲಿ ಎರಡು ಅಥವಾ ನಾಲ್ಕು ಕಾಲ್ಬೆರಳುಗಳಿರುತ್ತವೆ. ಈ ಜೀವಿಗಳ ಗುಂಪಿಗೆ ಅನ್ವಯಿಸಿರುವ ಪ್ಯಾರಾಕ್ಸೋನಿಯ ಎಂಬ ಹೆಸರು ಸಹ ಇವುಗಳಲ್ಲಿ ಇಡೀ ಪಾದದ ಮುಖ್ಯ ಅಕ್ಷ ಪ್ರತಿಯೊಂದು ಪಾರ್ಶ್ವ್‌ದಲ್ಲಿ ಅನುಕ್ರಮವಾಗಿರುವ ಮೂರು ಹಾಗೂ ನಾಲ್ಕನೆಯ ಕಾಲ್ಬೆರಳುಗಳ ವ್ಯವಸ್ಥೆಯನ್ನು ಸೂಚಿಸುತ್ತದೆ. ಪೆರಿಸೊಡ್ಯಾಕ್ಟೈಲ ಎಂಬ ಪಂಗಡದ ಪ್ರಾಣಿಗಳಲ್ಲಿ ಬೆಸಸಂಖ್ಯೆಯ ಕಾಲ್ಬೆರಳಿನ ವ್ಯವಸ್ಥೆಯುಂಟು. ಇವುಗಳಲ್ಲಿ ಪ್ರತಿಯೊಂದು ಪಾದದ ಮುಖ್ಯ ಅಕ್ಷ ಯಾವಾಗಲೂ ಇನ್ನಿತರ ಕಾಲ್ಬೆರಳುಗಳಿಗಿಂತ ದೊಡ್ಡದಾಗಿರುವ ಮೂರನೆಯ ಕಾಲ್ಬೆರಳಿನ ಒಂದು ಪಾರ್ಶ್ವ್‌ಕ್ಕೆ ಹೋಗದೆ ಮಧ್ಯೆ ಸಾಗುತ್ತದೆ.
 
ಇವುಗಳ ಪಾದಗಳ ರಚನೆ ಆಶ್ಚರ್ಯಕರವಾಗಿದೆ. ಪ್ರತಿಯೊಂದು ಪಾದದ ನಾಲ್ಕು ಕಾಲ್ಬೆರಳುಗಳು ನೆಲವನ್ನು ಮುಟ್ಟುವ ನೀರಾನೆಯನ್ನು (ಹಿಪಪಾಟಮಸ್) ಬಿಟ್ಟರೆ, ಆರ್ಟಿಯೊಡ್ಯಾಕ್ಟೈಲ ಗುಂಪಿನ ಇತರ ಪಾಣಿಗಳಲ್ಲಿ, ನಡೆಯುವಾಗ ಪ್ರತಿಯೊಂದು ಪಾದದ ಮಧ್ಯದ ಎರಡು ಕಾಲ್ಬೆರಳುಗಳು ತುದಿಯ ಮೇಲೆ ಆಧಾರವಾಗಿರುತ್ತವೆ. ಒಂಟೆಗಳ ಹೊರತು. ಇತ್ತೀಚಿನ ಎಲ್ಲ ಆರ್ಟಿಯೊಡ್ಯಾಕ್ಟೈಲಗಳ ಕಾಲ್ಬೆರಳುಗಳು ಗೊರಸುಗಳಲ್ಲಿ ಅಳವಟ್ಟಿವೆ. ಆದರೆ ಒಂಟೆಗಳಲ್ಲಿ, ಮಧ್ಯದ ಎರಡು ಕಾಲ್ಬೆರಳುಗಳು ಪಾದದ ಅಂಗಾಲೆನಿಸಿರುವ ಒಂದು ಅಗಲವಾದ ಸಿಂಬಿಯಲ್ಲಿ ಸೇರಿರುವದು. ಉತ್ತರ ಅಮೆರಿಕದ ಅಳಿದುಹೋದ ಅಗ್ರಿಯೊಖೀರಸ್ನ ಗೊರಸುಗಳು ಮೊನಚಾದ ಉಗುರುಗಳಂತಿದ್ದವು. ಇಂದು ಬದುಕುಳಿದಿ ರುವ ಸಂಬಂಧಿಗಳಲ್ಲಿ ಪಾದಗಳ ಮೂಳೆಗಳ ಮಾರ್ಪಾಡಿನೊಂದಿಗೆ, ಮುಂಗಾಲಿನ ಅಲ್ನ ಕ್ಷೀಣಿಸಿವೆ. ಶೆವ್ರೋಟೇನ್ ಎಂಬ ಸಣ್ಣ ಕಸ್ತೂರಿ ಮೃಗಗಳನ್ನು ಹೊರತುಪಡಿಸಿ ಇಂದಿನ ಇನ್ನಿತರ ಆರ್ಟಿಯೊಡ್ಯಾಕ್ಟೈಲಗಳ ತೋಳು ಮೂಳೆಗಳಲ್ಲಿ ಎಂಟೆಪಿಕಾಂಡೈಲಾರ್ ರಂಧ್ರಗಳಿರುವುದಿಲ್ಲ. ಆದರೆ ಹಿಂಗಾಲಿನಲ್ಲಿ ಫಿಬ್ಯುಲ ಅವಶೇಷವಾಗಿ ಉಳಿದುಕೊಂಡರೂ ತೊಡೆ ಮೂಳೆಯ (ಫೀಮರ್) ಮೂರನೆಯ ಟ್ರೊಕ್ಯಾಂಟರ್ ಸಂಪುರ್ಣವಾಗಿ ಇಲ್ಲವಾಗಿದೆ.
 
ಇವುಗಳ ದೇಹದ ರಚನಾವೈಖರಿ ಕುತೂಹಲಕಾರಿಯಾಗಿದೆ. ಬಹು ಸಂಖ್ಯೆಯ ಆರ್ಟಿಯೊಡ್ಯಾಕ್ಟೈಲಗಳು ತಮ್ಮ ತಲೆಯ ಮುಂಭಾಗದಲ್ಲಿ ಜೋಡಿ ಕೊಂಬುಗಳನ್ನು ಪಡೆದಿವೆ. ಆದರೆ ಅಳಿದುಹೋದ ಹಲವು ಜಿಂಕೆಗಳಲ್ಲಿ ಮೂರನೆಯ ಕೊಂಬು ಇದ್ದಿರಬೇಕು. ಇವುಗಳಲ್ಲಿ ಗಂಡು ಪ್ರಾಣಿಗಳಲ್ಲಿ ಮಾತ್ರ ಕೊಂಬುಗಳು ಇರುವುದು ಕಂಡುಬರುತ್ತದೆ. ಇಂದಿನ ಕುರಿಗಳಲ್ಲೂ ಈ ವೈಶಿಷ್ಟ್ಯವನ್ನು ಕಾಣಬಹುದು. ಆರ್ಟಿಯೊಡ್ಯಾಕ್ಟೈಲಗಳ ಮೂತಿ ಉದ್ದ. ಬುರುಡೆಯ ಪಟ್ಟಿ ಚಿಕ್ಕದು. ಮೂಗಿನ ಮೂಳೆಗಳು ಹಿಂದಕ್ಕೆ ವಿಸ್ತರಿಸಿಲ್ಲ; ಕಣ್ಣಿನ ಗುಳಿ ಮೂಳೆಯಿಂದ ಸಂಪುರ್ಣವಾಗಿ ಆವರಿಸಿದೆ. ಇವುಗಳಲ್ಲಿ ಕತ್ತಿನ ಕೆಳಗಣ ಅಡ್ಡೆಲುಬು (ಕ್ಲಾವಿಕಲ್) ಇರುವುದಿಲ್ಲ. ಜಿರಾಫೆಯನ್ನೂ ಒಳಗೊಂಡು ಇವುಗಳೆಲ್ಲದರಲ್ಲೂ ಕತ್ತಿನ ಏಳು ಕಶೇರು ಮಣಿ (ವರ್ಟಿಬ್ರೇ)ಗಳಿರುವುವು. ಸಾಮಾನ್ಯವಾಗಿ ಎದೆಯ ಕಶೇರುಮಣಿಗಳ ಸಂಖ್ಯೆ ಒಂಟೆಯಲ್ಲಿ ೧೨ ಇದ್ದರೆ ನೀರಾನೆಯಲ್ಲಿ ೧೫ ಅಥವಾ ೧೬ರವರೆಗೆ ಇರುತ್ತದೆ. ಇಂದು ಬದುಕುಳಿದಿರುವ ಆರ್ಟಿಯೊಡ್ಯಾಕ್ಟೈಲಗಳಲ್ಲಿ ಎದೆಯ ಹಾಗೂ ನಡುವಿನ ಕಶೇರುಮಣಿಗಳ ಒಟ್ಟು ಸಂಖ್ಯೆ ೧೯ನ್ನು ಮೀರುವುದಿಲ್ಲ. ಇವುಗಳಲ್ಲಿ ಐದು ಲಾಂಗೂಲ ಕಶೇರುಮಣಿಗಳಿರುತ್ತವೆ. ಬಾಲದ ಕಶೇರುಮಣಿಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ.
 
ಮೇಲಿನ ದವಡೆ ಹಾಗೂ ಕೆಳದವಡೆಯ ಪ್ರತಿಯೊಂದು ಪಾರ್ಶ್ವ್‌ದಲ್ಲಿರುವ ಮೂರು ಬಾಚಿಹಲ್ಲುಗಳೂ ಒಂದು ಕೋರೆಹಲ್ಲೂ ನಾಲ್ಕು ಮುಂದವಡೆಯ ಹಲ್ಲುಗಳೂ ಮೂರು ಹಿಂದವಡೆ ಹಲ್ಲುಗಳೂ ಸೇರಿ ಒಟ್ಟು ೪೪ ಹಲ್ಲುಗಳಿವೆ. ಅನೇಕ ಮೆಲುಕುಹಾಕುವ ಪ್ರಾಣಿಗಳಲ್ಲಿ ಮೇಲಿನ ಕೋರೆ ಹಲ್ಲುಗಳೂ ಮೊದಲಿನ ಮುಂದವಡೆ ಹಲ್ಲುಗಳೂ ಸಾಮಾನ್ಯವಾಗಿ ಇರುವುದಿಲ್ಲ. ಇವುಗಳಲ್ಲಿ ಮುಂದಿನ ಬಾಚಿ ಹಲ್ಲುಗಳಲ್ಲೊಂದು ಉದ್ದವಾದ ದಂತವಾಗಿ ಬೆಳೆಯಬಹುದಾದರೂ ಕೆಲವು ವೇಳೆ ಅದು ಇರುವುದೇ ಇಲ್ಲ. ಹಂದಿ ಮತ್ತು ನೀರಾನೆಗಳ ಲ್ಲಿಯ ಕೆಳಗಿನ ಕೋರೆಹಲ್ಲು ಚೆನ್ನಾಗಿ ಬೆಳೆದಿರುವುದುಂಟು. ಆದರೆ ಮೆಲಕು ಪ್ರಾಣಿಗಳಲ್ಲಿ ಅದು ಕ್ಷೀಣಿಸಿರುತ್ತದೆ. ಹಲವು ವೇಳೆ ಅದು ಬಾಚಿ ಹಲ್ಲಿನಂತೆ ಮಾರ್ಪಟ್ಟಿರುವುದುಂಟು.
ಆರ್ಟಿಯೊಡ್ಯಾಕ್ಟೈಲಗಳ ದವಡೆ ಹಲ್ಲುಗಳ ರಚನೆಯಲ್ಲಿ ಎರಡು ವಿಧಗಳುಂಟು. ಬ್ರಾಕಿಯೋಡಾಂಟ್ ವಿಧದ ದವಡೆ ಹಲ್ಲುಗಳು ಸಾಮಾನ್ಯವಾಗಿ ತಗ್ಗಿದ ಶಿಖರವನ್ನುಳ್ಳವು. ಆದರೆ ಡಿಪ್ತೊಡಾಂಟ್ ಎಂಬ ವಿಧದ ದವಡೆ ಹಲ್ಲುಗಳು ಎತ್ತರದ ಶಿಖರವನ್ನು ಪಡೆದಿರುವುವು. ಈ ದವಡೆ ಹಲ್ಲುಗಳ ಶೃಂಗವನ್ನು ನಿರೂಪಿಸುವ ಮಿನಾಯಿಯ ಎನಾಮಲ್ ಪದರಗಳ ತಳಗಳು ಅರೆಯುವ ಹೊರಭಾಗದಿಂದ ಕಾಣಿಸುವುದಿಲ್ಲ. ಬ್ರಾಕಿಯೋಡಾಂಟ್ ದವಡೆ ಹಲ್ಲುಗಳ ಮೂರು ಇಲ್ಲವೆ ನಾಲ್ಕು ಮುಖ್ಯ ಶೃಂಗಗಳು ಸಾಮಾನ್ಯವಾಗಿ ಶಂಖದ ರೀತಿಯಲ್ಲಿವೆ. ಈ ರೀತಿ ಇದ್ದಾಗ ಇವುಗಳನ್ನು ಬ್ಯೂನೊಡಾಂಟ್ ಎಂದು ಕರೆಯುತ್ತಾರೆ. ಶೃಂಗಗಳ ಇನ್ನೊಂದು ವಿಧದ ರಚನೆ ಹಿಪ್ಸೊಡಾಂಟ್ ದವಡೆ ಹಲ್ಲುಗಳಲ್ಲಿದೆ. ಈ ಹಿಪ್ಸೊಡಾಂಟ್ ದವಡೆ ಹಲ್ಲುಗಳ ಮುಖ್ಯ ಶೃಂಗಗಳು ಸಾಧಾರಣವಾಗಿ ಅರ್ಧಚಂದ್ರಾಕೃತಿಯಲ್ಲಿವೆ. ಇಂಥ ದವಡೆ ಹಲ್ಲುಗಳನ್ನು ಸೆಲೆನೊಡಾಂಟ್ ಎನ್ನುತ್ತಾರೆ. ಆದರೆ ಮಧ್ಯಮ ಎತ್ತರದ ದವಡೆ ಹಲ್ಲಿನ ಶಿಖರಗಳಲ್ಲಿ ಒಂದು ಪಾರ್ಶ್ವ್‌ದ ಶೃಂಗಗಳು ಬ್ಯೂನೊಡಾಂಟ್ ಆಗಿದ್ದು ಎದುರು ಪಾರ್ಶ್ವ್‌ದ ಶೃಂಗಗಳು ಸೆಲಿನೊಡಾಂಟ್ ಆಗಿರುವುದೂ ಉಂಟು. ಈ ಮಾದರಿಯ ದವಡೆ ಹಲ್ಲನ್ನು ಬ್ಯೂನೊಸೆಲಿನೊಡಾಂಟ್ ಎಂದು ಕರೆಯುತ್ತಾರೆ, ಆರ್ಟಿಯೊಡ್ಯಾಕ್ಟೈಲ್ಗಳ ವರ್ಗೀಕರಣದಲ್ಲಿ ದವಡೆ ಹಲ್ಲುಗಳ ಹಾಗೂ ಕೈ ಕಾಲು ಮೂಳೆಗಳ ರಚನೆ ಉಪಯುಕ್ತ ಆಧಾರಗಳೆನಿಸಿವೆ.
 
ಸಾಮಾನ್ಯವಾಗಿ ಎಲ್ಲ ಆರ್ಟಿಯೊಡ್ಯಾಕ್ಟೈಲ್ಗಳಲ್ಲಿ ಜೀರ್ಣಾಂಗ ದೀರ್ಘವಾಗಿಯೂ ವಿಸ್ತಾರವಾಗಿಯೂ ಇದೆ. ಅವೆಲ್ಲ ಸಸ್ಯಾಹಾರಿಗಳಾಗಿದ್ದುದರಿಂದ ಹೆಚ್ಚಿನ ಪ್ರಮಾಣದಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಅಂಥ ಅಂಗವ್ಯೂಹ ಅಗತ್ಯ. ಮೆಲುಕು ಹಾಕುವ ಆರ್ಟಿಯೊಡ್ಯಾಕ್ಟೈಲಗಳು ಆಹಾರವನ್ನು ಜೀರ್ಣಿಸಲು ನೆರವಾಗುವ ವಿಶಿಷ್ಟ ಅಂಗರಚನೆಯನ್ನು ಪಡೆದುಕೊಂಡಿವೆ. ಜೀವಿಸಿರುವ ಮೆಲಕುಪ್ರಾಣಿಗಳಲ್ಲಿ ಜಠರ ಸಾಧಾರಣವಾಗಿ ನಾಲ್ಕು ಗೂಡು (ಭಾಗ)ಗಳಾಗಿ ವಿಭಾಗವಾಗಿರುತ್ತದೆ. ಒಮ್ಮೆ ನುಂಗಿದ ಆಹಾರವನ್ನು ಬಾಯಿಗೆ ಮತ್ತೆ ತೆಗೆದುಕೊಂಡು ಅಗಿದು ನುಂಗಲು ಅನುಕೂಲಿಸುವಂತಿದೆ. ಜಠರದ ಮೊದಲಿನ ಎರಡು ಗೂಡುಗಳಲ್ಲಿ ಆಹಾರ ಸೂಕ್ಷ್ಮಜೀವಿಗಳಿಂದ ವಿಭಜನೆಯಾಗುವುದುಂಟು. ಹಂದಿ ಮತ್ತು ನೀರಾನೆಗಳಲ್ಲಿ ಜಠರ ಸರಳವಾಗಿದ್ದು, ಮೆಲುಕು ಹಾಕುವುದಕ್ಕೆ ಅನುಕೂಲವಿಲ್ಲ. ಆರ್ಟಿಯೊಡ್ಯಾಕ್ಟೈಲಗಳು ಸಾಮಾನ್ಯವಾಗಿ ಒಂದು ಅಂಧಾಂತ್ರವನ್ನೂ (ಸೀಕಂ) ಒಂದು ಪಿತ್ತಕೋಶವನ್ನೂ ಪಡೆದಿರುವುದುಂಟು. ಇವುಗಳಲ್ಲಿ ಕೆಲವೇ ಸ್ತನ್ಯಗ್ರಂಥಿಗಳಿವೆ. ಅವು ಹೊಟ್ಟೆ ಮತ್ತು ತೊಡೆಯ ನಡುವಿನ ತನಕ ತಗ್ಗಿನ ಭಾಗದಲ್ಲಿರುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅವು ಹೊಟ್ಟೆಯ ಭಾಗದಲ್ಲಿರುವುವು. ಗರ್ಭಕೋಶ ಇಬ್ಭಾಗವಾಗಿರುತ್ತದೆ. ನೀರಾನೆಯ ವಿನಾ ಎಲ್ಲಾ ಆರ್ಟಿಯೊಡ್ಯಾಕ್ಟೈಲಗಳಲ್ಲಿ ವೃಷಣಗಳು ವೃಷಣಕೋಶದಲ್ಲಿ ಇಳಿದಿರುವುದುಂಟು. ನೀರಾನೆಯಲ್ಲಿ ಹಾಗೆ ಇಳಿಯದೆ ಉದರದಲ್ಲೇ ಉಳಿದಿದೆ. ವಿವಿಧ ನಮೂನೆಯ ಗರ್ಭವೇಷ್ಟನಗಳು (ಪ್ಲ್ಯಾಸೆಂಟ) ಇವುಗಳಲ್ಲಿರುವುದುಂಟು.
 
ಆರ್ಟಿಯೊಡ್ಯಾಕ್ಟೈಲಗಳಲ್ಲಿ ಚರ್ಮಗ್ರಂಥಿಗಳು ಚೆನ್ನಾಗಿ ರೂಪುಗೊಂಡಿವೆ. ಇವುಗಳಲ್ಲಿ ಸ್ತನ್ಯಗ್ರಂಥಿಗಳು ಯಾವಾಗಲೂ, ಹೊಟ್ಟೆ ಹಾಗೂ ತೊಡೆಯ ಮಧ್ಯದ ತಗ್ಗಿನ ಭಾಗದಲ್ಲಿರುವುದು ಕಂಡುಬರುತ್ತದೆ. ಕೆಲವು ವೇಳೆ ಹಂದಿಯಲ್ಲಿರುವಂತೆ ಉದರ ಭಾಗದಲ್ಲಿಯೂ ಇರಬಹುದು. ಪ್ರಾಣಿಗಳಲ್ಲಿ ವಾಸನೆಯ (ಓಡರಿಫೆರಸ್) ಗ್ರಂಥಿಗಳೂ ಕಂಡುಬರುತ್ತವೆ. ಹೊಟ್ಟೆ, ತೊಡೆಯ ಮಧ್ಯದಭಾಗ, ಉದರದ ಭಾಗಗಳು, ಬೆನ್ನಿನ ಮಧ್ಯಭಾಗ, ಕಣ್ಣಿನ ಮುಂಭಾಗ, ಹಣೆ, ಪಾದ ಮುಂತಾದ ದೇಹದ ಅನೇಕ ಭಾಗಗಳಲ್ಲಿ ಅವು ಇರುವುವು. ಈ ಗುಂಪಿನ ಪ್ರಾಣಿಗಳಲ್ಲಿ ಘ್ರಾಣೇಂದ್ರಿಯ ತೀರ ಚುರುಕಾಗಿದೆ. ಈ ಪ್ರಾಣಿಗಳ ಶ್ರವಣಶಕ್ತಿಯೂ ಚುರುಕು, ಆದರೆ ದೃಷ್ಟಿಶಕ್ತಿ ಅಷ್ಟೇನೂ ಚೆನ್ನಾಗಿ ವೃದ್ಧಿಯಾಗಿಲ್ಲ. ಬಹುಪಾಲು ಆರ್ಟಿಯೊಡ್ಯಾಕ್ಟೈಲಗಳು ನಿಶಾಚರಿಗಳು; ಈ ಕಾರಣದಿಂದಲೇ ಅವು ಆಹಾರವನ್ನು ಹುಡುಕುವಾಗಲೂ ಹಾಗೂ ಸ್ವಂತ ಮತ್ತು ಇತರ ಕುಲಗಳ ಪ್ರಾಣಿಗಳನ್ನು ಗುರುತಿಸುವುದಕ್ಕೂ ವಾಸನೆಯನ್ನೇ ಅವಲಂಬಿಸಿವೆ. ಹಗಲಿನಲ್ಲಿ ಹಾಗೂ ಬಯಲಿನಲ್ಲಿ ವಾಸಿಸುವ ಆರ್ಟಿಯೊಡ್ಯಾಕ್ಟೈಲಗಳು, ತಾವು ಬದುಕಿ ಉಳಿಯಲು ದೃಷ್ಟಿಗಿಂತ ವಾಸನೆ ಮತ್ತು ಧ್ವನಿಗಳ ಸಹಾಯವನ್ನು ಅವಲಂಬಿಸಿವೆ. ವಾಸನೆ ಇವುಗಳಲ್ಲಿ ಸಂಘಜೀವನವನ್ನು ಉತ್ತೇಜಿಸುವದೂ ಅಲ್ಲದೆ ಅದನ್ನು ಸಾಂಕೇತಿಕ ವಿನಿಮಯಕ್ಕೂ ಬಳಸುತ್ತವೆ.
 
ಜೀವಂತ ಆರ್ಟಿಯೊಡ್ಯಾಕ್ಟೈಲಗಳು ನೆಲವಾಸಿಗಳು. ಮೇಕೆಗಳಂತೆ ಕೆಲವು ಬೆಟ್ಟ, ಗುಡ್ಡಗಳನ್ನು ಹತ್ತಬಲ್ಲವಾದರೆ. ಇನ್ನು ಕೆಲವು ನೀರಾನೆಯಂತೆ ನೀರಿನಲ್ಲಿರಬಲ್ಲವು. ಅವುಗಳಲ್ಲಿ ಆಹಾರವನ್ನು ಅಗಿಯುವ ಸ್ವಭಾವವಂತೂ ಇಲ್ಲವೇ ಇಲ್ಲ. ಎಲ್ಲ ಆರ್ಟಿಯೊಡ್ಯಾಕ್ಟೈಲಗಳೂ ಸಾಮಾನ್ಯವಾಗಿ ಸಸ್ಯಾಹಾರಿಗಳು. ಆದರೆ ಹಂದಿಗಳು ಮಾತ್ರ ಸರ್ವಭಕ್ಷಕಗಳು. ಹೆಚ್ಚಿನ ಆರ್ಟಿಯೊಡ್ಯಾಕ್ಟೈಲಗಳು ಗುಂಪಿನಲ್ಲಿ ಜೀವಿಸುತ್ತವೆ. ಕೆಲವು ಜಾತಿಗಳು ಗಮನಾರ್ಹವಾಗಿ ಹಲವು ಎರಳೆಗಳು (ಆಂಟಿಲೋಪ್), ಕಾಟಿಗಳು (ಬೈಸನ್), ಕ್ಯಾರಿಬೊ ಹಾಗೂ ಬೆಳ್ದುಟಿಯ ಪೆಕರೀಸ್ಗಳು ನೂರು ಇಲ್ಲವೆ ಸಾವಿರಾರು ಸಂಖ್ಯೆಯ ಮಂದೆಗಳಲ್ಲಿ ಜೀವಿಸುತ್ತವೆ.
 
ಸಾಧಾರಣವಾಗಿ ಗಂಡು ಮತ್ತು ಹೆಣ್ಣುಗಳು ಋತುಕಾಲದಲ್ಲಿ ಒಟ್ಟಿಗಿರುವುದನ್ನು ಬಿಟ್ಟರೆ, ಯಾವಾಗಲೂ ಪ್ರತ್ಯೇಕವಾಗಿಯೇ ಜೀವಿಸುತ್ತವೆ. ಸಂತಾನವೃದ್ಧಿಯ ಕಾಲದಲ್ಲಿ ಸಹಜವಾಗಿ ಗಂಡುಗಳು ಹೆಣ್ಣುಗಳ ಮೇಲಿನ ಪ್ರಭುತ್ವಕ್ಕೋಸ್ಕರ ಒಂದರೊಡನೊಂದು ಹೋರಾಡುವುದುಂಟು. ಸಾಮಾನ್ಯವಾಗಿ ಸಮಶೀತೋಷ್ಣವಲಯದ ಪ್ರಾಣಿಗಳಲ್ಲಿ ಕಾಮೋದ್ರೇಕ ಮಾಗಿ ಕಾಲದಲ್ಲಿ ಉಂಟಾದರೆ, ಉಷ್ಣವಲಯದ ಪ್ರಾಣಿಗಳಲ್ಲಿ ವರ್ಷದ ವಿವಿಧ ಕಾಲಗಳಲ್ಲಿ ಸಂಭವಿಸಬಹುದು. ಗರ್ಭಧಾರಣೆಯ ಕಾಲ ಸಾಮಾನ್ಯವಾಗಿ ಸಣ್ಣ ಗಾತ್ರದ ಆರ್ಟಿಯೊಡ್ಯಾಕ್ಟೈಲಗಳಿಗಿಂತ ದೊಡ್ಡ ಗಾತ್ರದವುಗಳಲ್ಲಿ ದೀರ್ಘವಾಗಿರುತ್ತದೆ. ಸಮಶೀತೋಷ್ಣವಲಯದಲ್ಲಿರುವ ಮೆಲುಕುಪ್ರಾಣಿಗಳಿಗೆ ವಸಂತಕಾಲದಲ್ಲೂ ಉಷ್ಣವಲಯಗಳ ಲ್ಲಿರುವ ಪ್ರಾಣಿಗಳಿಗೆ ಮಳೆಗಾಲದ ಪ್ರಾರಂಭದ ಸರಿಸುಮಾರಿಗೂ ಒಂದು, ಎರಡು ಇಲ್ಲವೆ ಅಪರೂಪವಾಗಿ ಮೂರು ಮರಿಗಳು ಹುಟ್ಟುವುದುಂಟು. ಸಾಕಿದ ಹಂದಿಗಳು ಒಂದು ಸೂಲಿಗೆ ಸಾಮಾನ್ಯವಾಗಿ ಹದಿನಾಲ್ಕರವರೆಗೆ ಮರಿಗಳನ್ನು ಹಾಕಬಹುದು. ಗೊರಸುಳ್ಳ ಈ ಎಳೆಯ ಸಸ್ತನಿಗಳು ಹುಟ್ಟಿದ ಕೆಲವೇ ಗಂಟೆಗಳೊಳಗೆ ತಮ್ಮ ತಾಯಿಯನ್ನು ಹಿಂಬಾಲಿಸುವುವು. ಆಸ್ಟ್ರೇಲಿಯ, ಅಂಟಾರ್ಕ್ಟಿಕ್ ಪ್ರದೇಶಗಳನ್ನು ಬಿಟ್ಟರೆ ಆರ್ಟಿಯೊಡ್ಯಾಕ್ಟೈಲ ಗಳು ಎಲ್ಲ ಭೂಖಂಡಗಳಲ್ಲೂ ವಾಸಿಸುತ್ತವೆ. ಹಂದಿ, ಜಿಂಕೆ ಮತ್ತು ಎಮ್ಮೆಗಳು ನ್ಯೂಗಿನಿ, ನ್ಯೂಜಿಲೆಂಡ್, ಟಾಸ್ಮೇನಿಯ ಹಾಗೂ ಅಂಟಾರ್ಕ್ಟಿಕ್ ಪ್ರದೇಶದ ದ್ವೀಪಗಳನ್ನು ಬಿಟ್ಟರೆ, ಹಲವು ದೊಡ್ಡ ದ್ವೀಪಗಳಲ್ಲೂ ಸಾಕುಪ್ರಾಣಿಗಳಾಗಿ ಜೀವಿಸುತ್ತವೆ. ಬೇಸಾಯ ಹಾಗೂ ಬೇಟೆಯ ಆರ್ಟಿಯೊಡ್ಯಾಕ್ಟೈಲಗಳನ್ನು ಮಾನವ ಸರಿಯಾಗಿ ಮೇವು ದೊರಕುವ ಎಲ್ಲ ಭಾಗಗಳಿಗೂ ತಂದು ಸಾಕುತ್ತಿದ್ದಾನೆ.
 
 
==ವರ್ಗೀಕರಣ==
 
ಇಂದು ಕಾಣಸಿಗುವ ಹಾಗೂ ಅಳಿದುಹೋದ ಆರ್ಟಿಯೊಡ್ಯಾಕ್ಟೈಲ ಗಳನ್ನು ಸಾಮಾನ್ಯವಾಗಿ ಸೂಯಿಫಾರಮ್ಗಳು, ಟೈಲೊಪೋಡಗಳು ಮತ್ತು ರೂಮಿನೆನ್ಷಿಯ ಎಂಬ ಮೂರು ಉಪಗಣಗಳನ್ನು ಗುರುತಿಸಲಾಗಿದೆ.
 
==ಸೂಯಿಫಾರಮ್ಗಳು==
 
ಜೀವಿಸಿರುವ ಆರ್ಟಿಯೊಡ್ಯಾಕ್ಟೈಲಗಳಲ್ಲಿ, ಹಂದಿ, ಪೆಕರೀಸ್, ನೀರಾನೆ- ಈ ಪ್ರಾಣಿಗಳನ್ನು ಸೂಯಿಫಾರಮ್ ಗುಂಪಿಗೆ ಸೇರಿಸಲಾಗಿದೆ. ಇವುಗಳ ಜಠರಗಳು ಹೆಚ್ಚು ಕಡಿಮೆ ವಿಶೇಷಭಾಗಗಳಾಗಿ ಪುನರ್ ವಿಭಾಗಿಸಲ್ಪಟ್ಟಿದ್ದರೂ ಇವು ಮೆಲುಕುಹಾಕುವುದಿಲ್ಲ. ಇವುಗಳಲ್ಲಿ ಸಾಮಾನ್ಯವಾಗಿ ಒಂದರಿಂದ ಮೂರರವರೆಗೆ ಮೇಲ್ದವಡೆಯ ಪ್ರತಿ ಪಾರ್ಶ್ವ್‌ದಲ್ಲೂ ಬಾಚಿ ಹಲ್ಲುಗಳಿವೆ. ಇವುಗಳಲ್ಲಿ ಕೆಳಗಿನ ಬಾಚಿ ಹಲ್ಲುಗಳು ಮುಂದಕ್ಕೆ ಚಾಚಿಕೊಂಡಿವೆ. ಇವುಗಳ ಕೋರೆಹಲ್ಲುಗಳು ಚೆನ್ನಾಗಿ ಬೆಳೆದಿದ್ದು, ದಾಡೆಯಂತಿರುವುದನ್ನು ನೋಡಬಹುದು. ಸಾಮಾನ್ಯವಾಗಿ ಯಾವಾಗಲೂ ಬೆಳೆಯುತ್ತಿರು ವದೇ ಕೋರೆ ಹಲ್ಲುಗಳ ವೈಶಿಷ್ಟ್ಯ. ಸೂಯಿಫಾರಮ್ಗಳ ದವಡೆಗಳು ಬ್ಯೂನೋಡಾಂಟ್ ಮಾದರಿಯದು. ಕಣ್ಣಿನ ಗೂಡು ಟೆಂಪೊರಲ್ ಫಾಸದಿಂದ ಬೇರ್ಪಟ್ಟಿರುವುದಿಲ್ಲ. ಇವುಗಳಿಗೆ ಕೊಂಬುಗಳಿರುವುದಿಲ್ಲ. ಸೂಯಿಫಾರಮ್ಗಳಲ್ಲಿ ಅಲ್ನ ಹಾಗೂ ಫಿಬ್ಯುಲ ವಿಶೇಷವಾಗಿ ರೂಪುಗೊಂಡಿಲ್ಲವೆಂದೇ ಹೇಳಬಹುದು. ಪಾದದಲ್ಲಿರುವ ಮಧ್ಯದ ಎರಡು ಮೂಳೆಗಳು, ಕ್ಯಾನನ್ ಮೂಳೆಯಾಗಿ ರಚನೆಹೊಂದಲು, ಸಂಪುರ್ಣವಾಗಿ ಒಂದುಗೂಡಿಲ್ಲ.
 
ಹಂದಿಗಳು ಯುರೋಪಿನಲ್ಲಿ ಸು. ೨೫,೦೦೦,೦೦೦-೩೦,೦೦೦,೦೦೦ ವರ್ಷಗಳ ನಡುಗಾಲದ ಪುರ್ವದಲ್ಲಿ ಕಾಣಿಸಿಕೊಂಡವು. ಆಲಿಗೊಸೀನ್ ಕಾಲದ ಪೇಲಿಯೋಕೀರಸ್ ಅನ್ನು ಸೂಯಿಡೀ ಎಂಬ ನೈಜ ಹಂದಿಯ ಬಳಗದ ಮೂಲವೆಂದೇ ಪರಿಗಣಿಸಬಹುದು. ಇದು ಅಳಿದುಹೋಗುವುದಕ್ಕಿಂತ ಮುಂಚೆ, ಭಾರತ ಹಾಗೂ ಆಫ್ರಿಕಗಳಲ್ಲಿ ಮಯೊಸೀನ್ ಕಾಲದ ಪ್ರಾರಂಭದಲ್ಲಿ ಕಾಣಿಸಿಕೊಂಡಿತು. ಇದು ಅನಂತರ ಏಷ್ಯ ಖಂಡಕ್ಕೆ ಮತ್ತು ಪ್ಲೈಯೊಸೀನ್ ಕಾಲದಲ್ಲಿ ಭಾರತಕ್ಕೂ ಹರಡಿತು. ಏಷ್ಯಾದ ಪಿಗ್ಮಿ ಹಂದಿ (ಪೋರ್ಕುಲ), ಈಸ್ಟ್ ಇಂಡಿಯಾದ ಬ್ಯಾಬಿರುಸ್ಸ, ಆಫ್ರಿಕದ ನದಿಹಂದಿ (ಪೋಟವೋಕೀರಸ್) ಹಾಗೂ ಫ್ರೆಷ್ ಹಂದಿ, ಹೈಲೋಕೀರಸ್ ಮುಂತಾದವುಗಳೇ ಹಂದಿಯ ಬಳಗದ ಬದುಕಿರುವ ಇನ್ನಿತರ ಪ್ರತಿನಿಧಿಗಳು.
 
ಟಯಸ್ಸೂಯಿಡೀ ಬಳಗದ ನೈಜಪೆಕರಿಗಳು ಯುರೋಪಿನಲ್ಲಿ ಇದೇ ಸರಿಸುಮಾರಿನ ಸಮಯದಲ್ಲಿ ವಿಕಾಸಗೊಂಡಿರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಇವು ನೈಜ ಹಂದಿಗಳಿಗಿಂತ ಮುಂಚಿತವಾಗಿಯೇ ಕಾಣಿಸಿಕೊಂಡಿರಬೇಕೆಂಬ ಅಭಿಪ್ರಾಯವೂ ಉಂಟು. ಆದರೆ ಈಗ ಜೀವಿಸಿರುವ ಪೆಕ್ಕೆರಿಗಳು ಅಮೆರಿಕದ ಉಷ್ಣವಲಯದಲ್ಲಿರುವ ಕೇವಲ ಎರಡು ಜಾತಿಗಳಿಂದ ಪ್ರತಿನಿಧಿಸಲ್ಪಟ್ಟಿವೆ. ಕೊರಳುಪಟ್ಟಿಯ ಪೆಕರಿ-ಪಕರಿ ಜಾಕು ಹಾಗೂ ದೊಡ್ಡದಾದ ಬೆಳ್ದುಟಿಯ ಪೆಕರಿ (ಟಯಸ್ಸು ಪೆಕರಿ) ಇವುಗಳೇ ಈಗ ಜೀವಿಸಿರುವ ಪ್ರತಿನಿಧಿಗಳು.
 
ನೀರಾನೆಗಳ ಬಳಗ ಮೂರು ಜಾತಿಗಳನ್ನೊಳಗೊಂಡಿದೆ. ಇವುಗಳ ಪೈಕಿ ಹೆಕ್ಸಪ್ರೋಟೋಡಾನ್ ಎಂಬುದು ಮಾತ್ರ ನಿರ್ನಾಮವಾಗಿಹೋಗಿದೆ. ಈ ಜಾತಿ ಸು. ೨೦,೦೦೦,೦೦೦ ವರ್ಷಗಳ ಹಿಂದೆ, ಮಯೋಸೀನ್ ಕಾಲದ ಕೊನೆಯಲ್ಲಿ ಮೆಡಿಟರೇನಿಯನ್ ಪ್ರದೇಶ ಹಾಗು ಭಾರತದಲ್ಲಿ ಕಾಣಿಸಿಕೊಂಡಿತೆನ್ನುವರು. ಇದು ಪ್ಲೈಸ್ಟೋಸೀನ್ ಕಾಲದವರೆಗೂ ಮುಂದುವರಿಯಿತೆಂದು ತರ್ಕಿಸಿದ್ದಾರೆ. ಈಗ ಜೀವಿಸಿರುವ ನೀರಾನೆಗಳಲ್ಲಿ ಒಂದಾದ ಹಿಪಪಾಟಮಸ್ ಆ್ಯಂಫೀಬಿಯಸ್ ಎನ್ನುವ ನೀರಾನೆ ಈಗ ಆಫ್ರಿಕದಲ್ಲಿ ಸಹರದ ದಕ್ಷಿಣ ಭಾಗಕ್ಕೆ ಮಿತಿಗೊಳಿಸಲ್ಪಟ್ಟಿದೆ. ಈ ನೀರಾನೆ ಪ್ಲೈಯೋಸೀನ್ ಕಾಲದ ಪ್ರಾರಂಭದಲ್ಲಿ ಆಫ್ರಿಕ ಹಾಗೂ ಯುರೋಪ್ಗಳಿಗೆ ವಲಸೆ ಹೋಗಿ ಇಂಗ್ಲೆಂಡನ್ನು ಪ್ಲೈಸ್ಟೋಸೀನ್ ಕಾಲದಲ್ಲಿ ತಲುಪಿತೆಂದು ನಿರ್ಣಯಿಸಿದ್ದಾರೆ. ಕೆಲವು ವೇಳೆ ನದಿಯ ಕುದುರೆ ಎಂದು ಕರೆಸಿಕೊಳ್ಳುವ ನೀರಾನೆ ಸು. ೩೧/೩' ಉದ್ದವಿರುವುದುಂಟು. ಇದು ಚೆನ್ನಾಗಿ ಈಜಬಲ್ಲದು. ಈ ಬಳಗದ ಮೂರನೆಯ ಪ್ರತಿನಿಧಿ ಪಶ್ಚಿಮ ಆಫ್ರಿಕದ ಗಿಡ್ಡ ನೀರಾನೆಯಾದ ಕೀರೋಪ್ಸಿಸ್ ಲೈಬೀರಿಯಾನ್ಸಿಸ್. ಇದು ಸಾಮಾನ್ಯವಾಗಿ ನಾಲ್ಕು ಟನ್ಗಳಷ್ಟು ತೂಕವಿರಬಹುದು.
 
==ಟೈಲೊಪೋಡ==
 
ಟೈಲೊಪೋಡ ಉಪಕ್ರಮ ಕ್ಯಾಮಿಲಿಡೀ ಮತ್ತು ಸಿಫೋಡಾಂಟಿಡೀ ಎಂಬ ಎರಡು ಬಳಗಗಳಿಂದ ಕೂಡಿದೆ. ಕ್ಯಾಮಿಲಿಡೀ ಬಳಗ ಇತ್ತೀಚಿನ ಒಂಟೆಗಳನ್ನು ಹಾಗೂ ಲಾಮಗಳನ್ನು ಒಳಗೊಂಡಿದೆ. ಆದರೆ ಸಿಫೋಡಾಂಟಿಡೀ ಎಂಬುದು ಕಣ್ಮರೆಯಾದ ಪ್ರಾಣಿಗಳ ಗುಂಪು. ಒಂಟೆಗಳು ತಮ್ಮ ಕಾಲುಗಳಲ್ಲಿ ಸಿಂಬಿಯಿರುವ ಕಾಲ್ಬೆರಳುಗಳನ್ನು ಪಡೆದಿವೆ. ಅವಕ್ಕೆ ಮೆಲುಕಾಡಲು ಅನುಕೂಲಕರ ಜಠರವಿದೆ. ಇತರೆ ಎಲ್ಲ ಸಸ್ತನಿಗಳಲ್ಲಿ ಗೋಳಾಕಾರದ ಕೆಂಪುರಕ್ತಕಣಗಳಿದ್ದರೆ, ಒಂಟೆಗಳಲ್ಲಿ ಅವು ಅಂಡಾಕಾರವಾಗಿರುತ್ತವೆ. ಒಂಟೆಮರಿಗಳಲ್ಲಿ ಪ್ರತಿಯೊಂದು ದವಡೆಗಳಲ್ಲೂ ಮೂರು ಮೇಲಿನ ಬಾಚಿಹಲ್ಲುಗಳಿರುತ್ತವೆ. ಪ್ರಾಯಕ್ಕೆ ಬಂದ ಒಂಟೆಗಳಲ್ಲಿ ಮೂರನೆಯ ಪಾರ್ಶ್ವ್‌ದ ಬಾಚಿಹಲ್ಲು ಮಾತ್ರ ದೃಢವಾಗಿ ಉಳಿದುಕೊಂಡಿರುತ್ತದೆ. ಬಾಚಿಹಲ್ಲುಗಳಿಂದ ಭಿನ್ನವಾಗಿರುವ ಕೋರೆಹಲ್ಲುಗಳು ಮೇಲಿನ ಹಾಗೂ ಕೆಳಗಿನ ದವಡೆಗಳಲ್ಲಿವೆ. ಇವುಗಳ ದವಡೆ ಹಲ್ಲುಗಳು ಸೆಲಿನೋಡಾಂಟ್ ಹಾಗೂ ಹಿಪ್ಸೊಡಾಂಟ್ ರೀತಿಯವಾಗಿವೆ. ಒಂಟೆಗಳ ಹೊಟ್ಟೆಯಾಗಲಿ ಡುಬ್ಬವಾಗಲಿ ಜನಸಾಮಾನ್ಯರು ಹೇಳುವಂತೆ ನೀರಿನ ಕೋಶವಾಗಿ ಉಪಯೋಗವಾಗುವುದಿಲ್ಲ.
 
ಮರುಭೂಮಿಯ ಹಡಗು ಎನಿಸಿಕೊಂಡಿರುವ ಒಂಟೆಗಳು ಉತ್ತರ ಅಮೆರಿಕದಲ್ಲಿ ಇಯೊಸೀನ್ ಕಾಲದ ಪ್ರಾರಂಭದಲ್ಲಿ, ಸುಮಾರು ೪೦,೦೦೦,೦೦೦ ವರ್ಷಗಳ ಹಿಂದೆ ಹುಟ್ಟಿದವೆಂದು ವಿಜ್ಞಾನಿಗಳ ಅಭಿಪ್ರಾಯ. ಅವುಗಳು ಪ್ಲೈಸ್ಟೋಸೀನ್ ಏಷ್ಯಾ ಹಾಗೂ ದಕ್ಷಿಣ ಅಮೆರಿಕಗಳಲ್ಲಿ ಹರಡುವುದಕ್ಕೆ ಮುಂಚೆ ಕುದುರೆಗಳಂತೆ, ಉತ್ತರ ಅಮೆರಿಕ ಖಂಡದಲ್ಲಿಯೇ ವಿಕಾಸ ಹೊಂದಿರಬೇಕು. ಒಂಟೆಗಳಲ್ಲಿ ಎರಡು ಪ್ರಭೇದಗಳಿವೆ: ಅರೇಬಿಯದ ಒಂದು ಡುಬ್ಬವುಳ್ಳ, ಕ್ಯಾಮೆಲಸ್ ಡ್ರೊಮೆಡೇರಿಯಸ್ ಮತ್ತು ತುರ್ಕಿಸ್ತಾನದ ಎರಡು ಡುಬ್ಬವುಳ್ಳ, ಕ್ಯಾಮೆಲಸ್ ಬ್ಯಾಕ್ಟ್ರಿಯಾನಸ್. ದಕ್ಷಿಣ ಅಮೆರಿಕಕ್ಕೆ ಸೀಮಿತವಾಗಿರುವ ಲಾವi ಕ್ಯಾಮಿಲಿಡೀ ಬಳಗಕ್ಕೆ ಸೇರಿದ ಇನ್ನೊಂದು ಜೀವಿ. ಲಾಮ ಒಂಟೆಗಿಂತ ಗಾತ್ರದಲ್ಲಿ ಚಿಕ್ಕದು. ಒಂಟೆಗಿರುವಂತೆ ಡುಬ್ಬವಿಲ್ಲ. ತುಪ್ಪಟವನ್ನು ಹೊಂದಿರುವ ಈ ಲಾಮ ದಕ್ಷಿಣ ಅಮೆರಿಕದ ಹೇರು ಹೊರುವ ಪ್ರಾಣಿಯಾಗಿದೆ.
 
ಯುರೋಪಿನ ಇಯೋಸೀನ್ನ ನಡುಗಾಲ ಹಾಗೂ ಆಲಿಗೋಸೀನ್ಗಳಲ್ಲಿದ್ದ, ಪ್ರಾಚೀನ ಚಂದ್ರ-ದಂತ (ಸೆಲಿನೊಡಾಂಟ್) ಸ್ತನಿಗಳು ಸಿಫೊಡಾಂಟೀಡೀ ಕುಟುಂಬಕ್ಕೆ ಸೇರಿವೆ. ಒಂಟೆಗಳಿಗೆ ಬಹು ಸಮೀಪವಾಗಿ ಕಂಡರೂ ಇವು ಒಂಟೆಗಳ ಪುರ್ವಿಕರಲ್ಲ. ಟೈಲೊಪೋಡಗಳಿಗೆ ಕೊಂಬಿಲ್ಲದಿರುವುದೇ ವೈಶಿಷ್ಟ್ಯ.
 
==ರೂಮಿನೆನ್ಷಿಯ==
 
ಮೆಲುಕು ಹಾಕುವ ಈ ಪ್ರಾಣಿಸಮೂಹ ಬಹು ವಿಸ್ತಾರವಾಗಿ ಪಸರಿಸಿ, ಬಹಳವಾಗಿ ಮಾರ್ಪಟ್ಟು ಅತ್ಯಧಿಕ ಸಂಖ್ಯೆಯಲ್ಲಿರುವ ಗೊರಸುಳ್ಳ ಪ್ರಾಣಿಗಳೆನಿಸಿವೆ. ಇವು ಪ್ರಪಂಚದ ಸಸ್ಯಾಹಾರಿ ಪ್ರಾಣಿಗಳಲ್ಲೇ ಮುಖ್ಯವಾದವು. ಸುಮಾರು ೩೦,೦೦೦,೦೦೦ ವರ್ಷಗಳಿಗಿಂತಲೂ ಹಿಂದಿನ ಇತಿಹಾಸ ಹೊಂದಿವೆ. ಇವುಗಳ ಮೆಲುಕು ಹಾಕುವ ಸ್ವಭಾವದಿಂದಾಗಿ ರೂಮಿನೆನ್ಷಿಯ ಎಂಬ ಹೆಸರು ಇವಕ್ಕೆ ಅನ್ವಯಿಸುತ್ತದೆ. ಇವುಗಳ ಜಠರ ಪರಸ್ಪರ ಸಂಬಂಧವಿರುವ ನಾಲ್ಕು ಕೋಣೆಗಳಾಗಿದ್ದು, ಮೆಲುಕಾಡುವುದಕ್ಕೆ ಸಹಾಯಕವಾಗಿದೆ. ಅವಸರದಲ್ಲಿ ತಿಂದ ಆಹಾರವನ್ನು, ಅನಂತರ ಪುನಃ ಹೊಟ್ಟೆಯಿಂದ ಬಾಯಿಗೆ ತೆಗೆದುಕೊಂಡು ಹಲ್ಲುಗಳಿಂದ ಅರೆದು ತಿನ್ನುವುದೇ ಮೆಲುಕು ಹಾಕುವುದು. ಆಹಾರವನ್ನು ನುಂಗಿದಾಗ, ಮೊದಲು ರೂಮೆನ್ ಎಂಬ ಮೊದಲಿನ ಕೋಣೆಗೆ ಬರುತ್ತದೆ. ಆಹಾರ ಇಲ್ಲಿ ಕಿಣ್ವನದಿಂದ (ಫರ್ಮೆಂಟೇಷನ್) ಮೃದುವಾಗುತ್ತದೆ. ಈ ರೀತಿ ಮೃದುವಾದ ಆಹಾರ ಅನಂತರ ಜೇನುಗೂಡಿನಂತಿರುವ ರೆಟಿಕ್ಯುಲಮ್ ಎಂಬ ಎರಡನೆಯ ಕೋಣೆಯನ್ನು ಪ್ರವೇಶಿಸುತ್ತದೆ. ಇಲ್ಲಿ ಆಹಾರ ಮತ್ತಷ್ಟು ಹುಳಿಯುತ್ತದೆ. ಇಲ್ಲಿಂದ ಆಹಾರ ಉಂಡೆಗಳ ರೂಪದಲ್ಲಿ ಬಾಯಿಗೆ ಬರುತ್ತದೆ. ಪ್ರತಿಯೊಂದು ಉಂಡೆಯನ್ನೂ ಅದು ಪುರ್ಣವಾಗಿ ಜಗಿದು, ಪುನಃ ನುಂಗುತ್ತದೆ. ಸ್ರಾವ ದ್ರವ ರೂಪದ ಆಹಾರ ರೆಟಿಕ್ಯುಲಮ್ ಒರಟು ಭಾಗಗಳ ಮೂಲಕ ಸೋಸಲ್ಪಟ್ಟು, ಮೂರು ಹಾಗೂ ನಾಲ್ಕನೆಯ ಕೋಣೆಗಳಿಗೆ ಬರುತ್ತದೆ. ಸಾಲ್ಜೇರಿಯಮ್ ಎಂಬ ಮೂರನೆಯ ಹಾಗೂ ಅಬೋಮೇಸಮ್ ಎಂಬ ನಾಲ್ಕನೆಯ ಕೋಣೆಗಳಲ್ಲಿ ಆಹಾರದ ಜೀರ್ಣಕ್ರಿಯೆ ಮುಂದುವರಿಯುತ್ತದೆ.
Line ೭೫ ⟶ ೫೪:
==ಬಾಹ್ಯ ಸಂಪರ್ಕಗಳು==
*[http://www.ultimateungulate.com/NewTaxonomy.html Ungulate Taxonomy: A new perspective from Groves and Grubb (2011)]
 
[[ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಜೀವಶಾಸ್ತ್ರ]]
"https://kn.wikipedia.org/wiki/ಆರ್ಟಿಯೊಡ್ಯಾಕ್ಟೈಲ" ಇಂದ ಪಡೆಯಲ್ಪಟ್ಟಿದೆ