ಆನಂದವರ್ಧನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವರ್ಗ
ಟ್ಯಾಗ್: 2017 source edit
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧ ನೇ ಸಾಲು:
'''ಆನಂದವರ್ಧನ''' ಭಾರತೀಯ ಕಾವ್ಯಮೀಮಾಂಸೆಯ ಇತಿಹಾಸದಲ್ಲಿ ಉತ್ತಮ ಸಾಹಿತ್ಯಾಭಿರುಚಿ ಉಜ್ವಲ ಪ್ರತಿಭೆ, ಉನ್ನತ ತಾತ್ವಿಕ ವಿಚಾರ ಎಲ್ಲದರಲ್ಲೂ ಅದ್ವಿತೀಯವೆನಿಸಿ ಅಗ್ರಸ್ಥಾನಕ್ಕೆ ಅರ್ಹನಾದ ವಿಮರ್ಶಕ.ಆನಂದವರ್ಧನನ ದೇಶ [[ಕಾಶ್ಮೀರ]]ದವನು, ಕಾಲ ಸುಮಾರು ಕ್ರಿ.ಶ. 850.
 
==ಕೃತಿಗಳು==
ಈತ ಶಾಸ್ತ್ರದಲ್ಲಿ ಪರಿಣತನೂ ಕವಿಗಳಲ್ಲಿ ಗಣ್ಯನೂ ಆಗಿದ್ದುದನ್ನು ಈತನ ಮಿಕ್ಕದ ಕೃತಿಗಳು (ತತ್ವಾಲೋಕ, ದೇವೀಶತಕ, ವಿಷಮಬಾಣಲೀಲಾ ಇತ್ಯಾದಿ) ನಿದರ್ಶಿಸುತ್ತವೆ. ಇವು ಈಗ ಉಪಲಬ್ಧವಿಲ್ಲ; ಕಡೆಯದು ಪ್ರಾಕೃತ ಮಹಾಕಾವ್ಯ. [[ಅವಂತಿವರ್ಮ]]ನ ಆಸ್ಥಾನದಲ್ಲಿ ಆನಂದವರ್ಧನ ಮನ್ನಣೆ ಪಡೆದ ವಿಷಯ [[ಕಲ್ಹಣ]]ನ [[ರಾಜತರಂಗಿಣಿ]]ಯಲ್ಲಿ ಉಕ್ತವಾಗಿದೆ. ಈತ ಪೂರ್ವ ಸಂಪ್ರದಾಯಗಳ ಪರಿಷ್ಕಾರದಿಂದ ತೃಪ್ತನಾಗಲಿಲ್ಲ. ತನ್ನದೇ ಆದ ಹೊಸ ಪ್ರಸ್ಥಾನವನ್ನು ಜಗತ್ತಿಗೆ ಸಾರಿದ. ಅದಕ್ಕೆ ಧ್ವನಿ ಎಂಬ ಅಪೂರ್ವ ಹಾಗೂ ಅನ್ವರ್ಥಕ ಹೆಸರನ್ನಿತ್ತ. ಗುಣ, ರೀತಿ, ಅಲಂಕಾರ, ವೃತ್ತಿ, ಸಂಘಟನೆ ಮುಂತಾದ ಹಿಂದಿನ ಪ್ರಕ್ರಿಯೆಗಳಲ್ಲಿ ಸಾರವತ್ತಾದ ಅಂಶವೆಷ್ಟು, ನಿಸ್ಸಾರವಾದ ಅಂಶವೆಷ್ಟು, ನಿಸ್ಸಾರವಾದುದನ್ನೇ ಸಾರವೆಂದು ಅನೇಕ ಪಂಡಿತರು ಕೂಡ ಭ್ರಮಿಸುವಂತೆ ಆದುದೇಕೆ, ಕಾವ್ಯವಿಮರ್ಶೆಗೆ ಶಾಸ್ತ್ರಪಂಡಿತರು ಸರಿಯಾದ ಅಧಿಕಾರಿಗಳೆನ್ನಬಹುದೆ, ಕವಿ ಪ್ರತಿಭೆಗೂ ಸಹೃದಯನ ಪ್ರತಿಭೆಗೂ ಇರುವ ಸಾಮರಸ್ಯ ಯಾವ ಮಟ್ಟದ್ದು, ಮಹಾಕವಿಗಳ ಉತ್ತಮ ಕೃತಿಗಳ ರಹಸ್ಯವೇನು, ರಸೌಚಿತ್ಯದ ನಿಯಮಗಳಾವುವು, ಕಾವ್ಯಗಳಲ್ಲಿ ತಾರತಮ್ಯ ಬರುವುದು ಯಾವುದರಿಂದ, ಕವಿ ಪ್ರತಿಭೆಯನ್ನು ಗುರುತಿಸಲು ಸಹೃದಯನಿಗೆ ಸಾಧಕಗಳಾವುವು- ಇವೇ ಮುಂತಾದ ಮೂಲಭೂತ ತಾತ್ವಿಕಪ್ರಶ್ನೆಗಳನ್ನು ಪ್ರಥಮತಃ ಎತ್ತಿ, ಎಲ್ಲಕ್ಕೂ ಸರ್ವಗ್ರಾಹ್ಯವಾಗುವಂಥ ನಿಸ್ಸಂದಿಗ್ಧ ಉತ್ತರಗಳನ್ನು ತರ್ಕಶುದ್ಧವೂ ಯುಕ್ತಿಪೂರ್ಣವೂ ಆದ ಶೈಲಿಯಲ್ಲಿ ಸೂಚಿಸಿದ್ದಲ್ಲದೆ ಸಹೃದಯರೊಪ್ಪುವಂತೆ ನೂರಾರು ಸುಂದರ ಕಾವ್ಯ ಲಕ್ಷ್ಯಗಳಲ್ಲಿ ತನ್ನ ವಿನೂತನ ತತ್ವವನ್ನು ಸಮನ್ವಯ ಮಾಡಿ ತೋರಿಸಿದ ಉಜ್ವಲ ಯಶಸ್ಸು ಆನಂದವರ್ಧನನದು. ಆ ಯಶಸ್ಸಿಗೆ ಆಧಾರಸ್ತಂಭವಾದ ಮಹಾಗ್ರಂಥವೇ [[ಧ್ವನ್ಯಾಲೋಕ]] (ಧ್ವನಿಯ ಬೆಳಕು). ಮುಖ್ಯವಾಗಿ ಹಿಂದಿನದು ಕವಿಗಳಿಗೆ ಅನುಕೂಲವಾಗುವಂಥ ಕೈಪಿಡಿಗಳನ್ನು ಬರೆದಿದ್ದರು. ಮೊತ್ತಮೊದಲಿಗೆ ಸಹೃದಯರ ದೃಷ್ಟಿಯನ್ನು ಪ್ರಧಾನವಾಗಿಟ್ಟುಕೊಂಡು ಅದರ ದೃಷ್ಟಿಯಿಂದಲೇ ಮೂಲತತ್ತ್ವಗಳನ್ನೆಲ್ಲ ಪುನರ್ವಿವೇಚನೆ ಮಾಡಹೊರಟ ಈ ಗ್ರಂಥಕ್ಕೆ ಸಹೃದಯಾಲೋಕವೆಂಬ ಹೆಸರೂ ಸಮುಚಿತವಾಗಿದೆ. ಹಿಂದಿನ ಲಾಕ್ಷಣಿಕರ ಬರೆವಣಿಗೆ ವಿವರಣಾತ್ಮಕವೂ ವಿಭಜನಾತ್ಮಕವೂ ಆಗಿದ್ದರೆ ಆನಂದವರ್ಧನನದು ವಿಚಾರಾತ್ಮಕವೂ ಸಂಯೋಜನಾತ್ಮಕವೂ ಆಗಿದೆಯೆನ್ನಬಹುದು. ಅಲಂಕಾರ, ಗುಣ ಇತ್ಯಾದಿಗಳ ಭೇದ ಪಬೇಧಗಳ ಸಂಖ್ಯಾನದಲ್ಲಿ ಪ್ರಾಚೀನರಿಗೆ ಶ್ರದ್ಧೆ ಹೆಚ್ಚು. ಪ್ರಕ್ರಿಯೆಗಳ ಸ್ವರೂಪವನ್ನು ಕುರಿತ ಶಾಸ್ತ್ರೀಯ ವಿವೇಚನೆ ಅವರಲ್ಲಿ ಕಡಿಮೆ. ಆದರೆ ಆನಂದವರ್ಧನನ ಗ್ರಂಥವೆಲ್ಲ ಕಾವ್ಯದ ಆತ್ಮ ಸ್ವರೂಪ ಪ್ರದರ್ಶನಕ್ಕಾಗಿಯೇ ಮೀಸಲಾಗಿದೆಯೆಂದರೂ ಸಲ್ಲುತ್ತದೆ. ಬಳಕೆಯ ವ್ಯವಹಾರದಲ್ಲಿ ಕಾಣದ, ಶಾಸ್ತ್ರದ ಪಂಕ್ತಿಗಳಲ್ಲಿ ದೊರೆಯದ, ಆದರೆ ಉತ್ತಮ ಕಾವ್ಯದಲ್ಲಿ ತಪ್ಪದೆ ಇದ್ದೇ ತೀರುವ ಅರ್ಥವಾವುದೋ ಅದೇ ಕಾವ್ಯದ ತಿರುಳು. ಅದಕ್ಕೇ ಧ್ವನಿಯೆಂಬ ಹೆಸರು. ಅದು ಪಂಡಿತರಿಗೂ ಅಗೋಚರವಾಗಬಹುದು. ಕೇವಲ ಸಹೃದಯರು ಮಾತ್ರ ಅದನ್ನು ಅರಿತು ಸವಿಯಲಾರ್ಪರು. ಅದೇ ಮಹಾಕವಿ ವಾಣಿಯ ಪರಮರಹಸ್ಯ. ಹೀಗೆ ಶಬ್ದಗಳಿಗೆ ಮೇಲಾಗಿ ಅರ್ಥಗಳಿಗೆ ಕಾವ್ಯದಲ್ಲಿ ಮಾತ್ರ ಕಾಣುವ ವ್ಯಂಜಕತ್ವ ಶಕ್ತಿಯನ್ನು ತಾರ್ಕಿಕರೂ ಮೀಮಾಂಸಕರೂ ವೈಯಾಕರಣರೂ ಒಪ್ಪುವಂತೆ ಅವರವರ ದಾರ್ಶನಿಕ ಯುಕ್ತಿಗಳಿಂದಲೇ ಸಾಧಿಸಿರುವ ಆನಂದವರ್ಧನನ ಸಾಮರ್ಥ್ಯವನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಧ್ವನಿಯೆಂದರೆ ಯಾರೋ ಕೆಲವರಿಗೆ ಮಾತ್ರ ಕಾಣುವ ಭ್ರಮೆ, ಅದನ್ನು ಇನ್ನೊಬ್ಬರಿಗೆ ತೋರಿಸುವುದು ಅಶಕ್ಯ ಎಂಬ ಅಪವಾದವನ್ನು ಸಮೂಲವಾಗಿ ಉಚ್ಛಾಟನೆ ಮಾಡುವಂತೆ ಧ್ವನಿಪ್ರಪಂಚದ ವೈಶಾಲ್ಯವನ್ನು ಸುಸ್ಪಷ್ಟವಾಗಿ ಚಿತ್ರಿಸಿ, ಅದರ ಒಂದೊಂದು ಪರಿಯನ್ನೂ ಸೋದಾಹರಣವಾಗಿ ನಿರ್ಣಯಿಸಿರುವ ಕಾರ್ಯವಂತೂ ಅಚ್ಚರಿಗೊಳಿಸುವಂಥದು. ಹೀಗೆ ಧ್ವನಿತತ್ವದ ಪ್ರತಿಷ್ಠಾಪನೆ, ಸ್ವರೂಪ ನಿರೂಪಣೆ, ಶಾಸ್ತ್ರೀಯ ಯುಕ್ತಿಗಳಿಂದ ಸಮರ್ಥನೆ, ಭೇದ-ಪ್ರಭೇದ ನಿರ್ಣಯ, ಧ್ವನಿತತ್ತ್ವದ ಅಂಗೀಕಾರದಿಂದಾಗುವ ಲಾಭ ಹಾಗೂ ತಿರಸ್ಕಾರದಿಂದಾಗುವ ಹಾನಿಗಳ ಪ್ರದರ್ಶನ ಇಷ್ಟನ್ನೂ ಒಳಗೊಂಡಿರುವ ಗ್ರಂಥವೇ ಧ್ವನ್ಯಾಲೋಕವೆನ್ನಬಹುದು. ಸಾಹಿತ್ಯ ವಿಮರ್ಶೆಯ ಮೂಲವಿಚಾರಗಳ ಮಂಡನದಲ್ಲಿ, ವಿವೇಚನೆಯಲ್ಲಿ, ವಿಸ್ತರಣೆಯಲ್ಲಿ ಆನಂದವರ್ಧನ ಹೊಸ ಹೆಜ್ಜೆಗಳನ್ನಿಟ್ಟಿದ್ದಾನೆ. ಅವನ ಅಭಿಪ್ರಾಯವನ್ನು ಒಪ್ಪದವರೂ ಕೂಡ ಆತನನ್ನು ಗೌರವಿಸುವಷ್ಟು ದೊಡ್ಡ ಕಾರ್ಯ ಮಾಡಿದ್ದಾನೆ.
"https://kn.wikipedia.org/wiki/ಆನಂದವರ್ಧನ" ಇಂದ ಪಡೆಯಲ್ಪಟ್ಟಿದೆ