ಮೃಣಾಲಿನಿ ಸಾರಾಭಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
( ಯಾವುದೇ ವ್ಯತ್ಯಾಸವಿಲ್ಲ )

೧೭:೩೬, ೧೧ ಆಗಸ್ಟ್ ೨೦೨೦ ನಂತೆ ಪರಿಷ್ಕರಣೆ

ಸಾರಾಭಾಯಿ, ಮೃಣಾಲಿನಿ 1918-. ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದೆ. ನಿತ್ಯನೂತನ ಪ್ರಯೋಗಗಳ ರಂಗ ಸಂಯೋಜನೆಗಳಲ್ಲಿ ಹೆಸರುವಾಸಿಯಾದವರು. ಅರ್ಧ ಶತಮಾನಕ್ಕೂ ಹಿಂದೆ 1948ರಲ್ಲಿ ಅಹಮದಾಬಾದಿನಲ್ಲಿ ಸಂಗೀತ, ನೃತ್ಯ, ನಾಟಕ ಹಾಗೂ ಸೂತ್ರದಗೊಂಬೆ ಯಾಟ ಮೊದಲಾದ ಕಲೆಗಳ ಅಕಾಡೆಮಿ ದರ್ಪಣವನ್ನು ಸ್ಥಾಪಿಸಿ ರಾಷ್ಟ್ರದ ಸಾಂಸ್ಕøತಿಕ ನೆಲೆಯನ್ನು ಪ್ರಪಂಚಮಾನ್ಯಗೊಳಿಸಿದ ಕೀರ್ತಿ ಇವರದು. ಇಂದಿಗೂ ಇವರೇ ದರ್ಪಣದ ನಿರ್ದೇಶಕಿ. ಅಭಿವೃದ್ಧಿಗಾಗಿ ದರ್ಪಣ ಎಂಬುದು ಇದರ ಘೋಷವಾಕ್ಯ.

ಬಾಲ್ಯದಿಂದಲೇ ತಮ್ಮ ಆಸಕ್ತಿಯನ್ನು ನೃತ್ಯಕಲೆಯಲ್ಲಿ ತೊಡಗಿಸಿ ಕೊಂಡರು. ಪಂದನಲ್ಲೂರು ಶೈಲಿಯ ಪ್ರಸಿದ್ಧ ಗುರು ಮೀನಾಕ್ಷಿ ಸುಂದರಮ್ ಪಿಳ್ಳೈಯವರಲ್ಲಿ ಭರತನಾಟ್ಯವನ್ನು ಕಲಿತರು. ಗುರು ಕುಂಜುಕುರುಪ್ ಅವರಲ್ಲಿ ಕಥಕ್ಕಳಿಯನ್ನೂ ಕಲ್ಯಾಣಿ ಕುಟ್ಟಿ ಅಮ್ಮಾ ಅವರಲ್ಲಿ ಮೋಹಿನಿ ಅಟ್ಟಮ್ ನೃತ್ಯವನ್ನೂ ಅಭ್ಯಾಸ ಮಾಡಿದರು. ಜಾವ ಮತ್ತು ಅಮೆರಿಕದಲ್ಲಿ ನಾಟಕಕಲೆಯಲ್ಲಿ ವಿಶೇಷ ತರಬೇತಿಯನ್ನು ಪಡೆದರು.

ಅಣುವಿಜ್ಞಾನ ಕ್ಷೇತ್ರದ ಪ್ರವರ್ತಕರಲ್ಲಿ ಒಬ್ಬರಾದ ಬಾಹ್ಯಾಕಾಶ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರನ್ನು ವಿವಾಹವಾಗಿ ಅಹಮದಾಬಾದಿ ನಲ್ಲಿ ನೆಲೆಸಿದರು. ಇವರು ಅಹಿಂಸಾ ತತ್ತ್ವದ ಪರಮ ಅನುಯಾಯಿ. ಗಾಂಧೀಜಿಯವರ ಸಬರಮತಿ ಆಶ್ರಮದಿಂದ ಅನತಿ ದೂರದಲ್ಲಿ ಇವರ ದರ್ಪಣ ಸಂಸ್ಥೆಯಿದೆ. ತಮ್ಮ ನೃತ್ಯ ತಂಡದ ಮೂಲಕ ಅಹಿಂಸೆಯ ಸಂದೇಶವನ್ನು ಪ್ರಪಂಚದಾದ್ಯಂತ ನೀಡುತ್ತ ಬಂದಿದ್ದಾರೆ. ಇವರು ಇತ್ತೀಚೆಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಆಹ್ವಾನದ ಮೇರೆಗೆ ಚೆನ್ನೈನಲ್ಲಿ ನೃತ್ಯಪ್ರದರ್ಶನವನ್ನು ನೀಡಿದರು (2004). ಅದೊಂದು ಅಪರೂಪದ ಪ್ರದರ್ಶನ. ಟೂ ಲೈವ್ಸ್ ಇನ್ ಡಾನ್ಸ್ ಅಂಡ್ ಟೂ ಮೋರ್ ಎಂಬುದು ಈ ನೃತ್ಯದ ಶೀರ್ಷಿಕೆ.

ಕಿರಿಯ ವಯಸ್ಸಿನಲ್ಲಿ ಹಠಾತ್ತನೆ ಒದಗಿದ ಪತಿವಿಯೋಗ ಮೃಣಾಲಿನಿ ಯವರನ್ನು ಕುಗ್ಗಿಸಿತಾದರೂ ನೃತ್ಯಕಲೆ ಇವರ ಬಾಳಸಂಗಾತಿಯಾಯಿತು. ಪರಿಸರದ ಬಗ್ಗೆ ಅಪಾರ ಕಾಳಜಿ ಇರುವ ಇವರು ಒಬ್ಬ ಕ್ರಿಯಾಶೀಲ ಪರಿಸರಪ್ರೇಮಿಯೂ ಹೌದು. ಆಪ್ತರೊಡನೆ ಸೇರಿ ಪ್ರಕೃತಿ ಎಂಬ ಒಂದು ಸಂಸ್ಥೆಯನ್ನೂ ಕಟ್ಟಿದ್ದಾರೆ. ಇವರು ಬರೆಹಗಾರ್ತಿ ಹಾಗೂ ಕವಯಿತ್ರಿಯೂ ಹೌದು. ತಮ್ಮ ವಿದ್ವತ್ಪೂರ್ಣ ಬರೆಹಗಳಿಂದ ಭರತನಾಟ್ಯ, ಕಥಕ್ಕಳಿಗಳ ಬಗ್ಗೆ ಮಹತ್ತ್ವದ ಕೊಡುಗೆಯನ್ನು ಕೊಟ್ಟಿದ್ದಾರೆ. ಕಾದಂಬರಿ, ಕವಿತೆ, ಮಕ್ಕಳ ಸಾಹಿತ್ಯ ರಚಿಸಿದ್ದಾರೆ.

ಇವರು ಕಟ್ಟಾ ಸಂಪ್ರದಾಯವಾದಿಯಾದರೂ ನೃತ್ಯಕ್ಷೇತ್ರದ ನವ್ಯ ಪ್ರಯೋಗಗಳನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಸಮಕಾಲೀನ ಸಮಸ್ಯೆ ಹಾಗೂ ವಿಷಯಗಳ ಬಗ್ಗೆ ಇವರು ನೃತ್ಯ ರೂಪಕಗಳನ್ನು ರಚಿಸಿ ಸಂಯೋಜಿಸಿದ್ದಾರೆ. ಒಣಗುತ್ತಿರುವ ಗಂಗೆ (ಡ್ರೈಯಿಂಗ್ ಗಂಗಾ), ವರದಕ್ಷಿಣೆಯಿಂದ ಮರಣ, ನೀರಿನ ಸಮಸ್ಯೆ, ಅಂತರಕೋಮಿನ ಸಂಬಂಧ, ಮಹಿಳೆಯರ ಮೇಲಿನ ದೌರ್ಜನ್ಯ - ಇವು ಇಂಥ ಕೆಲವು. ನಿರಂತರವಾಗಿ ಕಲೆಯಲ್ಲಿ ಹೊಸತನವನ್ನು ಅರಸುವ ಇವರು ಕಥಕ್ಕಳಿಯ ಸಾಂಪ್ರದಾ ಯಿಕ ಉಡುಗೆ ತೊಡುಗೆಗಳಿಲ್ಲದೆ ಸರಳ ಉಡುಪಿನಲ್ಲಿ ಕಥಕ್ಕಳಿಯನ್ನು ಪ್ರದರ್ಶಿಸಿದ್ದುಂಟು. ತಮ್ಮ ತಂಡದವರೊಂದಿಗೆ ದೇಶ ವಿದೇಶಗಳಲ್ಲಿ ವ್ಯಾಪಕವಾಗಿ ಸಂಚರಿಸಿ ಪ್ರಪಂಚಕ್ಕೆ ಭಾರತೀಯ ನೃತ್ಯ ಸಂದೇಶವನ್ನು ಕೊಟ್ಟ ಹೆಗ್ಗಳಿಕೆ ಇವರದು. ಇವರ ಪ್ರತಿಭೆಯನ್ನು ಗುರುತಿಸಿ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗೌರವ ಪ್ರಶಸ್ತಿಗಳನ್ನು ನೀಡಿ ಇವರನ್ನು ಗೌರವಿಸಲಾಗಿದೆ.

ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆದ ನೃತ್ಯಾಂಗನೆ ಮಲ್ಲಿಕಾ ಸಾರಾಭಾಯಿ ಇವರ ಮಗಳು.