ವಿಶಾಲ ಕರ್ನಾಟಕ-ಹುಬ್ಬಳಿಯಲ್ಲಿ ಎಸ್.ವಿ.ಜಠಾರ್‍ರು 1938ರಲ್ಲಿ ಆರಂಭಿಸಿದ ವಾರಪತ್ರಿಕೆ. ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸಚಿವರೂ ಆದ ಕೆ.ಎಫ್.ಪಾಟೀಲ್ 1947ರಲ್ಲಿ ಈ ಪತ್ರಿಕೆಯನ್ನು ಕೊಂಡು, ದಿನಪತ್ರಿಕೆಯಾಗಿ ಪರಿವರ್ತಿಸಿದರು. ದೈನಿಕವಾಗಿ ಪರಿವರ್ತನೆಗೊಂಡ ವಿಶಾಲ ಕರ್ನಾಟಕಕ್ಕೆ ಪಾಟೀಲ ಪುಟ್ಟಪ್ಪ(1947-49) ಎಚ್.ಆರ್.ಇಂಗಿ ಅನಂತರ ಕೆ.ಎಫ್.ಪಾಟೀಲರು ಸಂಪಾದಕರಾಗಿದ್ದರು. ಕರ್ನಾಟಕ ಏಕೀಕರಣ, ನಾಡು ನುಡಿಯ ರಕ್ಷಣೆ ಈ ಪತ್ರಿಕೆಯ ಧ್ಯೇಯಗಳಾಗಿದ್ದವು.

ಉತ್ತರ ಕರ್ನಾಟಕ, ಮುಂಬೈ-ಕರ್ನಾಟಕ ಪ್ರಾಂತಗಳಲ್ಲಿ ಹೆಚ್ಚು ಪ್ರಸಾರವಿದ್ದ ಈ ಪತ್ರಿಕೆ ಪ್ರತಿ ವರ್ಷ ದೀಪಾವಳಿ ವಿಶೇಷ ಸಂಚಿಕೆಯನ್ನು ಹೊರತರುತ್ತಿತ್ತು.

ಕೆ.ಎಫ್.ಪಾಟೀಲರು ತಮ್ಮ ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ಕಾರಣ ಪತ್ರಿಕೆಗೆ ಹೆಚ್ಚು ಗಮನ ಕೊಡಲಾಗದೆ ಪತ್ರಿಕೆ ನಿಂತಿತು. ಉತ್ತರ ಕರ್ನಾಟಕದ ಸಹಕಾರಿ ಧುರೀಣ ಕೆ.ಎಚ್.ಪಾಟೀಲ್ 1964ರಲ್ಲಿ ಪತ್ರಿಕೆಗೆ ಪುನರ್ಜನ್ಮ ನೀಡಿದರು. 1976ರಲ್ಲಿ ವಿಶಾಲ ಕರ್ನಾಟಕದ ಬೆಂಗಳೂರು ಆವೃತ್ತಿಯೂ ಆರಂಭವಾಯಿತು. ಆದರೆ ಅದಕ್ಕೆ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ. ಕೆ.ಎಚ್.ಪಾಟೀಲರ ನಂತರ ಎಚ್.ಕೆ.ಪಾಟೀಲರ ನೇತೃತ್ವದಲ್ಲಿ ಹುಬ್ಬಳ್ಳಿಯಿಂದಲೇ ಈ ದೈನಿಕ ಪ್ರಕಟವಾಗುತ್ತಿತ್ತು.

ಕೆ.ಎಫ್.ಪಾಟೀಲರು ಇದರಲ್ಲಿ ಬರೆಯುತ್ತಿದ್ದ ಪವಿತ್ರ ಕುರಾನ್ ಲೇಖನಮಾಲೆ, ನಾರದ ಮುನಿ; ಎಸ್.ಆರ್.ಪಾಟೀಲರ ಮಹಾಯೋಗಿ ವೇಮನನನ್ನು ಕುರಿತ ಲೇಖನಗಳು, ಪಿ.ಎಲ್.ಬಂಕಾಪೂರರ ಕೋಟಿ ಜನಕ್ಕೆ ಬಿಸಿ-ಈ ಲೇಖನ ಮಾಲೆಗಳು ಪ್ರಸಿದ್ಧವಾದವು. ಶೈಕ್ಷಣಿಕ ಸಮಸ್ಯೆಗಳನ್ನು ಕುರಿತಂತೆ ಈ ಪತ್ರಿಕೆ ವಿಶೇಷ ಲೇಖನಗಳನ್ನು ಪ್ರಕಟಿಸುತಿತ್ತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: