ವಿಲಿಯಮ್ ಟೆಲ್-ಸ್ವಿಟ್‍ಜರ್‍ಲೆಂಡಿನ ಸ್ವಾತಂತ್ರ್ಯಕ್ಕೆ ಹೋರಾಡಿದನೆನ್ನಲಾದ ವ್ಯಕ್ತಿ. ಈತನ ಬಗೆಗೆ ಅನೇಕ ಆಖ್ಯಾಯಿಕೆಗಳು ಹುಟ್ಟಿಕೊಂಡಿವೆ.

ಗೆಸ್ಲರನ ಟೊಪ್ಪಿಗೆಗೆ ಗೌರವ ಸಲ್ಲಿಸದ್ದಕ್ಕಾಗಿ ವಿಲಿಯಮ್ ಟೆಲ್ಲನ ಬಂಧನದ ಚಿತ್ರಣ

ಕ್ರಿ.ಶ.1482ರಲ್ಲಿ ಬರೆದ ಮೆಲ್ ಕಿಯೊರ್‍ರಸ್ ಚಾರಿತ್ರಿಕಲೇಖನದಲ್ಲಿ ಈತನ ವಿಷಯವಾಗಿ ಅನೇಕ ವಿವರಗಳು ಕಂಡುಬರುತ್ತವೆ.

ದಂತಕಥೆ ಬದಲಾಯಿಸಿ

ಈತ ಸ್ವಿಟ್‍ಜರ್‍ಲೆಂಡಿನ ಊರಿ ಎಂಬ ಸ್ಥಳದ ನಿವಾಸಿ. ಒಮ್ಮೆ ಈತ ತನ್ನ ಮಗನೊಂದಿಗೆ ನಗರಕ್ಕೆ ಬಂದ. ಮಾರುಕಟ್ಟೆಯ ಚೌಕದಲ್ಲಿ ಇರಿಸಿದ್ದ ಆ ನಗರದ ದಂಡಾಧಿಕಾರಿ (ಬೈಲಿಫ್) ಗೆಸ್ಲರನ ಟೊಪ್ಪಿಗೆಗೆ ಗೌರವ ಸಲ್ಲಿಸುವುದು ಅಂದಿನ ಸಾಮಾನ್ಯ ಪದ್ಧತಿಯಾಗಿತ್ತು. ಆದರೆ ಟೆಲ್ ಹಾಗೆ ಗೌರವ ಸಲ್ಲಿಸದೆ ಮುಂದೆ ಹೋದದ್ದರಿಂದ ಸೈನಿಕರು ಆತನನ್ನು ಎಳೆದು ತಂದು ಆ ಅಧಿಕಾರಿಯ ಮುಂದೆ ನಿಲ್ಲಿಸಿದರು. ಈತ ಬಾಣಪ್ರಯೋಗದಲ್ಲಿ ಅತ್ಯಂತ ಕುಶಲಿ ಎಂದರಿತಿದ್ದ ಆ ಅಧಿಕಾರಿ ಈತನ ಬಿಡುಗಡೆಗೆ ಒಂದು ಷರತ್ತು ಹಾಕಿದ. ವಿಲಿಯಮನ ಮಗನ ತಲೆಯ ಮೇಲೆ ಒಂದು ಸೇಬಿನ ಹಣ್ಣನ್ನು ಇರಿಸಲಾಯಿತು. ವಿಲಿಯಮ್ ಆ ಹಣ್ಣನ್ನು ತನ್ನ ಬಾಣದಿಂದ ಅರ್ಧಕ್ಕೆ ಕತ್ತರಿಸಿ ಹಾಕಬೇಕಾಗಿತ್ತು. ಮೊದಲು ಈ ಷರತ್ತಿಗೆ ಒಪ್ಪಲು ಅನುಮಾನಿಸಿದರೂ ಕೊನೆಗೆ ಒಪ್ಪಿಕೊಂಡು ಸೇಬಿನ ಹಣ್ಣನ್ನು ವಿಲಿಯಮ್ ಸಲೀಸಾಗಿ ಕತ್ತರಿಸಿ ಹಾಕಿ ಷರತ್ತಿನಂತೆ ಬಿಡುಗಡೆ ಪಡೆದುಕೊಂಡ. ಆದರೆ ಅಧಿಕಾರಿಯ ದೃಷ್ಟಿ ಈತನ ಸೊಂಟದಲ್ಲಿದ್ದ ಇನ್ನೂಂದು ಬಾಣದ ಮೇಲೆ ಬಿತ್ತು. ಆ ಬಾಣದ ಬಗ್ಗೆ ವಿವರ ಕೇಳಿದಾಗ ವಿಲಿಯಮ್ ಒಂದು ವೇಳೆ ತನ್ನ ಮಗನ ಪ್ರಾಣ ಹೋಗಿದ್ದರೆ ಆ ಬಾಣ ಅಧಿಕಾರಿಯನ್ನು ಕೊಲ್ಲುತ್ತಿತ್ತು ಎಂದು ಹೇಳಿದ ಆಗ ವಿಲಿಯಮನನ್ನು ಮತ್ತೆ ಬಂಧಿಸಿ ಆ ಅಧಿಕಾರಿಯ ದೋಣಿಗೆ ಕೊಂಡೊಯ್ದರು. ಇದ್ದಕಿದ್ದ ಹಾಗೆ ಬಿರುಗಾಳಿ ಎದ್ದುದರಿಂದ ಆ ದೋಣಿಯನ್ನು ವಿಲಿಯಮನೇ ಕಾಪಾಡಬೇಕಾಯಿತು. ದೋಣಿ ಯಾವ ಅಪಘಾತಕ್ಕೂ ಈಡಾಗದೆ ಸುರಕ್ಷಿತವಾಗಿ ದಡವನ್ನು ಮುಟ್ಟಿದಾಗ ವಿಲಿಯಮ್ ಗೆಸ್ಲರನನ್ನು ಕೊಂದು ತಪ್ಪಿಸಿಕೊಂಡ. ಅಧಿಕಾರಿಯ ಕೊಲೆ ಮುಂದಿನ ಕ್ರಾಂತಿಗೆ ನಾಂದಿಯಾಯಿತು. ಮುಂದೆ ಅನತಿಕಾಲದಲ್ಲಿಯೇ ಸ್ವಿಸ್ ಒಕ್ಕೂಟ ರಚನೆಯಾಯಿತು. ಆದರೆ ಸ್ವಿಸ್ ಇತಿಹಾಸಕಾರರು ವಿಲಿಯಮ್ ಟೆಲ್ ಎಂಬ ವೀರನಿದ್ದನೆಂಬ ಮಾತನ್ನು ಒಪ್ಪಿಲ್ಲ.

ಸಂಸ್ಕೃತಿಯಲ್ಲಿ ಬದಲಾಯಿಸಿ

ಜರ್ಮನ್ ನಾಟಕಕಾರ ಯೊಹಾನ್ ಕ್ರಿಸ್ಟೋಫ್ ಫ್ರೆಡ್ರಿಜ್ ಫಾನ್ ಷಿಲರ್(1750-1805) ನಾಟಕವನ್ನೂ ಇಟಲಿಯ ರೋಸ್ಸಿನಿ ಒಂದು ಆಪೆರವನ್ನೂ ವಿಲಿಯಮ್ ಟೆಲ್ಲನ ಬಗ್ಗೆ ರಚಿಸಿದ್ದಾರೆ.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: