ವಿಜಯ ಸಾಸನೂರರು ಕರ್ನಾಟಕದಲ್ಲಿ ಹಿರಿಯ ಐ.ಪಿ.ಎಸ್ ಅಧಿಕಾರಿಯಾಗಿದ್ದರು. ಅಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಗಳಲ್ಲೂ ಸಹ ಸೇವೆ ಸಲ್ಲಿಸಿದ್ದರು. ಕನ್ನಡದಲ್ಲಿ ಸಾಮಾಜಿಕ ಮತ್ತು ಸಾಹಸಮಯ ಪತ್ತೇದಾರಿ ಕಾದಂಬರಿಗಳನ್ನು ರಚಿಸಿದ್ದಾರೆ. ಇವರು ಒಟ್ಟು ೨೬ ಕಾದಂಬರಿಗಳನ್ನು ಹಾಗು ೧೦ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ.ಇವರ ಅನೇಕ ಕಾದಂಬರಿಗಳು ಯಶಸ್ವಿ ಚಲನಚಿತ್ರಗಳಾಗಿವೆ.

ಇವರ ಪತ್ನಿ ವಿದ್ಯುಲ್ಲತಾ ಸಹ ಜನಪ್ರಿಯ ಲೇಖಕಿಯಾಗಿದ್ದಾರೆ.

ಜನನಸಂಪಾದಿಸಿ

ವಿಜಯ ಸಾಸನೂರರು ಹುಟ್ಟಿದ್ದು ವಿಜಯಪುರದಲ್ಲಿ ೧೯೪೮ ರ ಏಪ್ರಿಲ್‌ ೧೪ ರಂದು. ತಂದೆ ಬಿ.ಟಿ. ಸಾಸನೂರ, ತಾಯಿ ಸುಮಿತ್ರಾಬಾಯಿಯವರು.

ಶಿಕ್ಷಣಸಂಪಾದಿಸಿ

ಪ್ರಾರಂಭಿಕ ಶಿಕ್ಷಣ ವಿಜಯಪುರದಲ್ಲಿ. ಎಸ್‌.ಎಸ್‌.ಎಲ್‌.ಸಿ. ಯಲ್ಲಿ ೪ ನೆಯ ರ್ಯಾಂಕ್ ಪಡೆದ ವಿದ್ಯಾರ್ಥಿ. ಬೀದರ್‌ನ ಭೂಮರೆಡ್ಡಿ ಕಾಲೇಜಿನಿಂದ ಪಡೆದ ಬಿ.ಎಸ್ಸಿ. ಪದವಿ (೪ ನೇ ರ್ಯಾಂಕ್‌). ಮುಂಬಯಿ ವಿಶ್ವವಿದ್ಯಾಲಯದಲ್ಲಿ ಜೀವರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಗಾಗಿ ಓದುತ್ತಿರುವಾಗಲೇ ಕೇಂದ್ರಲೋಕ ಸೇವಾ ಆಯೋಗದ (ಐ.ಪಿ.ಎಸ್‌) ಪರೀಕ್ಷೆಗೆ ಕುಳಿತು ಆರನೆಯ ರ್ಯಾಂಕ್‌ ಪಡೆದು ಐಪಿಎಸ್‌ಗೆ ಸೇರಿದರು. ಅತಿ ಕಿರಿಯ ವಯಸ್ಸಿನಲ್ಲಿ ಅಂದರೆ (೨೨ ವರ್ಷ) ಐ.ಪಿ.ಎಸ್‌. ಪಾಸಾದ, ಕನ್ನಡದಲ್ಲಿ ಐ.ಪಿ.ಎಸ್‌ ಪರೀಕ್ಷೆಗೆ ಬರೆದ ಹೆಗ್ಗಳಿಕೆ. ಐ.ಪಿ.ಎಸ್‌. ಅಧಿಕಾರಿಯಾಗಿ ೧೯೭೦ ರಲ್ಲಿ ಸೇವೆಗೆ ಪ್ರವೇಶಿಸಿ ಬೆಂಗಳೂರು, ಕಲಬುರ್ಗಿ ಜಿಲ್ಲೆಗಳಲ್ಲಿ ಎಸ್‌.ಪಿ.ಯಾಗಿ, ಕೇಂದ್ರವಲಯ ಹಾಗೂ ಆಹಾರಘಟಕಗಳ ಡಿ.ಐ.ಜಿ.ಯಾಗಿ, ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡಮಿಯ ನಿರ್ದೇಶಕರಾಗಿ ಹಾಗೂ ಸಾರ್ವಜನಿಕ ದೂರು ವಿಭಾಗದ ಐ.ಜಿ.ಪಿ.ಯಾಗಿ ಪಡೆದ ಕಾರ್ಯಾನುಭವ.

ವೃತ್ತಿಸಂಪಾದಿಸಿ

ದೆಹಲಿಯ ಇಂಟಲಿಜೆನ್ಸ್‌ ಬ್ಯೂರೋದ ಸಹಾಯಕ ನಿರ್ದೇಶಕರಾಗಿಯೂ ಕೆಲಕಾಲ. ಇವಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕರಾಗಿ, ಕನ್ನಡ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ, ಮುಂಬೈ ಸೆನ್ಸಾರ್ ಬೋರ್ಡ್‌ನ ಪ್ರಾದೇಶಿಕ ಅಧಿಕಾರಿಯಾಗಿ, ಮಕ್ಕಳ ಚಲನಚಿತ್ರ ಸಂಸ್ಥೆಯ ಮುಖ್ಯಾಧಿಕಾರಿಯಾಗಿಯೂ ಸಲ್ಲಿಸಿದ ಸೇವೆ. ಸಾಹಿತ್ಯ ಪ್ರೇರಣೆ ದೊರೆತದ್ದೂ ಇವರ ತಂದೆಯಿಂದಲೇ. ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ತಂದೆ, ಮಗನಿಗೆ ಭಗವದ್ಗೀತೆಯ ಎಲ್ಲ ಶ್ಲೋಕಗಳನ್ನೂ ಕಂಠಪಾಠ ಮಾಡಿಸಿದ್ದರಂತೆ. ಗ್ರಂಥಾಲಯಗಳಿಗೆ ತಂದೆಯೊಡನೆ ಹೋಗಿ ಉತ್ತಮ ಗ್ರಂಥಗಳನ್ನೋದುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದರು. ಮನೆಯಲ್ಲಿಯೂ ಸಂಗ್ರಹಿಸಿದ್ದ ಕನ್ನಡ, ಹಿಂದಿ, ಇಂಗ್ಲಿಷ್‌ ಭಾಷೆಗಳ ಉತ್ತಮ ಗ್ರಂಥಗಳನ್ನೋದುವಂತೆ ಪ್ರೇರೇಪಿಸುತ್ತಿದ್ದರು.

ಸಾಹಿತ್ಯಸಂಪಾದಿಸಿ

ಬಿ.ಎಸ್ಸಿ. ಓದುತ್ತಿದ್ದಾಗಲೇ ಇವರು ಪ್ರಕಟಿಸಿದ ಮೊದಲ ಕಥಾ ಸಂಕಲನ ‘ಅಪರಾಜಿತೆ’. ಬೆಟಗೇರಿ ಕೃಷ್ಣಶರ್ಮರು ಮುನ್ನುಡಿ ಬರೆದು ಹಾರೈಸಿದ್ದರೆ ಎಂ.ಎಸ್ಸಿ ಓದುವಾಗ ಹೊರತಂದ ಸಂಕಲನ ‘ಉಡುಗೊರೆ’. ಈ ಸಂಗ್ರಹವನ್ನೂ ಸಿಂಪಿ ಲಿಂಗಣ್ಣನವರೇ ಪ್ರಕಟಿಸಿದರು. ನಂತರ ಹೊರಬಂದ ಕಥಾ ಸಂಕಲನಗಳು ಕುರಿಗಳು, ಕ್ಷಣಗಳು, ಉತ್ಸವ, ಏಕಾಂಗಿ, ನಾವೇನೋ ಹೇಳುತ್ತಿದ್ದೇವೆ, ಶಾಂತಿಗ್ರಾಮದ ಒಂದು ರಾಜಕೀಯ ಅಧ್ಯಾಯ, ಅರಣ್ಯ ಪರ್ವ ಮುಂತಾದ ಸಂಕಲನಗಳು. ಇವುಗಳಲ್ಲಿ ಅಪರಾಜಿತೆ, ಕುರಿಗಳು, ಉಡುಗೊರೆ, ಕ್ಷಣಗಳು ಮತ್ತು ಉತ್ಸವ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ತರಗತಿಗಳಿಗೆ ಪಠ್ಯ ಪುಸ್ತಕವಾಗಿದ್ದವು. ೧೯೬೫ ರಲ್ಲಿಯೇ ಸಣ್ಣ ಕಥೆಗಳನ್ನೂ ಬರೆಯಲು ಪ್ರಾರಂಭಿಸಿದ ಸಾಸನೂರರು ಬರೆದ ಕಥೆಗಳು ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪ್ರಕಟಿತ.

ಇವರು ಮೆಚ್ಚಿಮದುವೆಯಾದ ವಿದ್ಯುಲ್ಲತಾ ರವರೆ, ಸಣ್ಣ ಕಥೆ ಬರೆಯಲು ಕಾರಣ. ಅವರನ್ನು ಮೆಚ್ಚಿಸಲೆಂದೇ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಬರೆಯುತ್ತಿದ್ದರಂತೆ. ವಿದ್ಯುಲ್ಲತಾ ರವರು ಓದುತ್ತಿದ್ದುದು ಸಂಯುಕ್ತ ಕರ್ನಾಟಕ ಪತ್ರಿಕೆ. ಸುಧಾ ವಾರ ಪತ್ರಿಕೆಯಲ್ಲಿ ಸಂಪಾದಕರಾಗಿದ್ದ ಎಂ.ಬಿ.ಸಿಂಗ್‌ರವರು ಕನ್ನಡ ಓದನ್ನು ವ್ಯಾಪಕಗೊಳಿಸಲು ಸಾಹಸಪ್ರಧಾನ ಕಾದಂಬರಿಗಳನ್ನೂ ಬರೆಯಲು ಪ್ರೇರೇಪಿಸಿದಾಗ ಬರೆದ ಚೊಚ್ಚಲ ಕಾದಂಬರಿ ‘ವಿಗ್ರಹ ಚೋರರು’. ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ನಂತರ ಪ್ರಕಟಗೊಂಡ ಕಾದಂಬರಿಗಳು ಅಜಿತ್‌, ಸಾಮ್ರಾಟ್‌, ಗೀತಸಂಗೀತ, ಯುದ್ಧ, ಮಾಯಾ, ಜ್ವಾಲಾಮುಖಿ, ಅಪರಂಜಿ ಮುಂತಾದ ಕಾದಂಬರಿಗಳು ಲಕ್ಷಾಂತರ ಓದುಗರಿಗೆ ತಲುಪಿ ಮೆಚ್ಚುಗೆ ಗಳಿಸಿತು. ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಕಾದಂಬರಿಗಳು ಶಿವತಾಂಡವ, ಇಂದ್ರಜಾಲ ಮತ್ತು ನಿರಂಜನ.

೧೯೭೫ರಲ್ಲಿ ಚನ್ನಪಟ್ಟಣದ ಪೊಲೀಸ್‌ ತರಬೇತಿ ಶಾಲೆಗೆ ಪ್ರಾಂಶುಪಾಲರಾಗಿದ್ದಾಗ ದೇಶದ ಮಂದಿಯ ವಿಚಿತ್ರ ನಡವಳಿಕೆಗಳನ್ನು ಟೀಕಿಸಿ ಬರೆದ ಲೇಖನಗಳ ಸಂಗ್ರಹ ‘ಹುಚ್ಚರ ಸಂತ್ಯಾಗ ಒಂದ್ನಾಕ್ದಿನ’ ಪ್ರಕಟಗೊಂಡನಂತರ ನಾಟಕಕಾರ, ನಟ ಅಶೋಕ ಬಾದರದಿನ್ನಿಯವರು ಇದನ್ನೂ ನಾಟಕವಾಗಿಸಿದರು. ಕನ್ನಡಿಗರಿಗೆ ಅಪರಿಚಿತವಾಗಿದ್ದ ಕ್ಷೇತ್ರವನ್ನೂ ಪರಿಚಯಿಸುವುದಕ್ಕೋಸ್ಕರವೇ ಕಾದಂಬರಿ ಕ್ಷೇತ್ರವನ್ನಾಯ್ದುಕೊಂಡು ಬರೆದು ಹೊಸ ಆಯಾಮವನ್ನೇ ಸೃಷ್ಟಿಸಿದರು. ಸಾಹಿತ್ಯ ಕ್ಷೇತ್ರಕ್ಕಿಂತ ಭಿನ್ನವಾದ ಕಾರ್ಯಕ್ಷೇತ್ರದಿಂದ ಪಡೆದ ಅನುಭವಗಳಿಗೆ ನೈಜ ಚಿತ್ರಣದ ಒತ್ತುಕೊಟ್ಟು ಓದುಗರಲ್ಲಿ ರೋಮಾಂಚನವನ್ನುಂಟು ಮಾಡುವುದರಲ್ಲಿ ಯಶಸ್ವಿಯಾದರು. ವಾಸ್ತವ ನೆಲೆಗಟ್ಟಿನ ಮೇಲೆಯೇ ಕಾದಂಬರಿಗಳನ್ನು ರಚಿಸಿರುವ ಸಾಸನೂರರು ಹೆಚ್ಚು ಒತ್ತುಕೊಟ್ಟು ಬರೆದದ್ದು ಗೂಂಡಾಗಿರಿ, ಗ್ಯಾಂಗ್‌ವಾರ್, ಭಯೋತ್ಪಾದಕತೆಯ ವಿರುದ್ಧ ಪೊಲೀಸರು ನಡೆಸಿದ ಹೋರಾಟ, ಕೇಂದ್ರಗೂಢಚಾರ ಪಡೆಗಳ ಕಾರ್ಯಾಚರಣೆಯ ಬಗ್ಗೆಯೇ. ೧೯೮೯ ರಲ್ಲಿ ಇವರು ಬರೆದ ‘ಸ್ವಸ್ತಿಕ’ ಕಾದಂಬರಿಯಲ್ಲಿ ದೇಶದ ಪ್ರಧಾನಿಯನ್ನೂ ಹತ್ಯೆಮಾಡುವ ಷಡ್ಯಂತ್ರವನ್ನು ಪಾತಕಿಗಳು ರೂಪಿಸುತ್ತಾರೆ. ಆದರೆ ರಕ್ಷಣಾ ಪಡೆಗಳು ಷಡ್ಯಂತ್ರವನ್ನು ಭೇದಿಸಿ ಪ್ರಧಾನಿ’ಯ ಪ್ರಾಣ ಉಳಿಸುವಲ್ಲಿ ಸಫಲರಾಗುತ್ತಾರೆ. ಆದರೂ ಭಯೋತ್ಪಾದಕತೆಯ ಹಾಗೂ ವಿಚ್ಛಿದ್ರ ಕಾರಕ ಶಕ್ತಿಗಳ ವಿರುದ್ಧ ಜನಜಾಗೃತಿಗೊಳಿಸಲು ಹಲವಾರು ಕಾದಂಬರಿಗಳ ಮೂಲಕ ಪ್ರಯತ್ನಿಸಿದ್ದಾರೆ. ಈ ದಿಸೆಯಲ್ಲಿ ಬರೆದ ಕಾದಂಬರಿಗಳು ‘ಶಿವತಾಂಡವ’ ಹಾಗೂ ‘ಉಸಿರು’ ಕಾದಂಬರಿಗಳು. ಇವರ ಐದು ಕಾದಚಂಬರಿಗಳು ಹಾಗೂ ಒಂದು ಕಥೆ ಬೆಳ್ಳಿ ಪರದೆಯನ್ನಲಂಕರಿಸಿದೆ. (ಧ್ರುವತಾರೆ, ಜ್ವಾಲಾಮುಖಿ, ಶಬ್ದವೇಧಿ, ಸವ್ಯಸಾಚಿ, ವಿಗ್ರಹಚೋರರು ಮುಂತಾದವು) ಧ್ರುವತಾರೆ ಕನ್ನಡ ಚಲನ ಚಿತ್ರ ಇವರಿಗೆ ೧೯೮೫-೮೬ ಸಾಲಿನ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿಯನ್ನು ತಂದು ಕೊಟ್ಟಿದೆ. ಮೂರು ಸಾಕ್ಷ್ಯ ಚಿತ್ರಗಳಿಗೆ ನಿರ್ದೇಶಕರಾಗಿದ್ದಲ್ಲದೆ ಹದಿನೆಂಟು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದರು. ಸಾಹಿತಿಯಾಗಿದ್ದಷ್ಟೇ ಅಲ್ಲದೆ ಹಿನ್ನೆಲೆ ಗಾಯಕರಾಗಿಯೂ ‘ಸಂಗೀತ’ ಚಿತ್ರಕ್ಕಾಗಿ ಹಾಡಿದ್ದಾರೆ. ದೂರದರ್ಶನದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟಿದ್ದಾರೆ. ಒಂದು ಧ್ವನಿ ಸುರಳಿ ‘ಹಾಡೆನ್ನ ಕೋಗಿಲೆ’ ಯು ಹೊರಬಂದಿದೆ. ಒಟ್ಟು ೨೬ ಕಾದಂಬರಿಗಳು, ಹತ್ತು ಕಥಾ ಸಂಕಲನಗಳು ಪ್ರಕಟವಾಗಿವೆ.

ಪ್ರಶಸ್ತಿಗಳುಸಂಪಾದಿಸಿ

ಗೂಂಡಾಗಿರಿ, ಗ್ಯಾಂಗ್‌ವಾರ್, ಮಾರಾಮಾರಿಯ ದುರಳ ಮನಸ್ಸಿನಾಳಕ್ಕೆ ಇಳಿದು ನೋಡುವ ಪೊಲೀಸ್‌ ಕಾರ್ಯಾಚರಣೆಯ ಸಾಹಸ ಕಾದಂಬರಿಗಳ ಕರ್ತೃವನ್ನೂ ಹುಡುಕಿಕೊಂಡುಬಂದ ಪ್ರಶಸ್ತಿಗಳು ಹಲವಾರು. ಕರ್ನಾಟಕ ಸಾಹಿತ್ಯ ಅಕಾಡಮಿಯು ೧೯೯೭ ರಲ್ಲಿ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಶಿವಮೊಗ್ಗ ಸಾಹಿತ್ಯ ಸಮ್ಮೇಳನ (೧೯೭೬) ದಲ್ಲಿ ‘ಆಡಳಿತದಲ್ಲಿ ಕನ್ನಡ’ ಗೋಷ್ಠಿಯಲ್ಲಿ ಪ್ರಬಂಧಮಂಡನೆ, ಕಲಬುರ್ಗಿಯ ಸಾಹಿತ್ಯ ಸಮ್ಮೇಳನ (೧೯೮೭) ದಲ್ಲಿ ಸಾಹಿತ್ಯ ಗೋಷ್ಠಿಯ ಉದ್ಘಾಟನೆ, ಮುಧೋಳ ಸಾಹಿತ್ಯ ಸಮ್ಮೇಳನದ (೧೯೯೫) ಶಿಕ್ಷಣ ಮತ್ತು ಸಮುದಾಯ ಗೋಷ್ಠಿಯ ಅಧ್ಯಕ್ಷತೆ ಮುಂತಾದ ಗೌರವಗಳು. ೧೯೯೧ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೯೪ ರಲ್ಲಿ ಅತ್ಯುತ್ತಮ ಸೇವೆಗಾಗಿ ರಾಷ್ಟ್ರಪತಿಗಳ ಪದಕವೂ ಸಂದಿದೆ. ಇವರು ತೀರಿಕೊಳ್ಳುವ ಒಂದು ತಿಂಗಳು ಮುಂಚೆಯಷ್ಟೇ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್‌ ಪದವಿ ನೀಡಿತ್ತು.

ಕೃತಿಗಳುಸಂಪಾದಿಸಿ

ಕಾದಂಬರಿಗಳು

 • ಯುದ್ಧ
 • ಇಂದ್ರಜಾಲ
 • ವಿಗ್ರಹಚೋರರು/ಸಾಮ್ರಾಟ್
 • ಅಜಿತ್
 • ಜ್ವಾಲಾಮುಖಿ
 • ಶಬ್ದವೇಧಿ
 • ಸವ್ಯಸಾಚಿ
 • ಗೀತಸಂಗೀತ
 • ಉಸಿರು
 • ಚಿಗುರು
 • ರಾಜಹಂಸ
 • ನಿರಂಜನ
 • ಅಪರಂಜಿ
 • ಪಾಂಚಜನ್ಯ
 • ಮಾಯಾ
 • ಶಿವತಾಂಡವ
 • ಸ್ವಸ್ತಿಕ್
 • ಪ್ರಳಯ


ಕಥಾಸಂಕಲನ

 • ಅಪರಾಜಿತೆ
 • ಉಡುಗೊರೆ
 • ಶಾಂತಿಗ್ರಾಮದ ರಾಜಕೀಯ
 • ಕುರಿಗಳು
 • ಕ್ಷಣಗಳು
 • ಉತ್ಸವ
 • ಮೃಗಜಲ
 • ಏಕಾಂಗಿ


ಚಲನಚಿತ್ರಗಳು

 • ಅಪರಂಜಿ ( "ಧುೃವತಾರೆ" ಹೆಸರಿನಲ್ಲಿ ಚಿತ್ರವಾಗಿದೆ. )
 • ಜ್ವಾಲಾಮುಖಿ
 • ಸವ್ಯಸಾಚಿ
 • ಅಜಿತ್
 • ಶಬ್ದವೇಧಿ
 • ವಿಗ್ರಹಚೇೂರರು/ಸಾಮ್ರಾಟ ( "ಮಹಾಪ್ರಚಂಡರು" ಹೆಸರಿನಲ್ಲಿ ಚಿತ್ರವಾಗಿದೆ. )

ನಿಧನಸಂಪಾದಿಸಿ

ಇವರು ೦೧.೦೩.೨೦೦೧ರಲ್ಲಿ ನಿಧನರಾದರು.