ರೋಸರಿ
ರೋಸರಿ ಎನ್ನುವುದು ಕೆಥೊಲಿಕ್ ಕ್ರೈಸ್ತ ಸಮುದಾಯದವರು ಪ್ರಾರ್ಥನೆಗಾಗಿ ಹಾಗೂ ಜಪಕ್ಕಾಗಿ ಬಳಸುವ ಮಾಲೆ. ಕೆಥೊಲಿಕ್ ಕ್ರಿಶ್ಚಿಯನ್ನರಿಗೆ ಮಾತೆ ಮರಿಯಾ ಕೊಟ್ಟ ಅದ್ಭುತ ವರ 'ರೋಸರಿ'[೧][೨] ಎನ್ನಲಾಗಿದೆ. ಈ ಪವಿತ್ರ ಮಾಲೆಯಿಂದಾಗಿ ಮಾತೆ ಮರಿಯಾಳನ್ನು ರೋಸರಿ ಮಾತೆ ಎಂದೇ ಸ್ತುತಿಸುತ್ತಾರೆ. ಧಾರ್ಮಿಕ ಸಾಧನೆಯ ಸಹವರ್ತಿ ಈ ಜಪಮಾಲೆ[೩].




ಇತಿವೃತ್ತ ಸಂಪಾದಿಸಿ
- ಹಿಂದೆ ಚರ್ಚಿನ ಫಾದರ್‍ಗಳ ಕೈಯಲ್ಲಿರುವ ಶಾಸ್ತ್ರ ಗ್ರಂಥ ಜನಸಾಮಾನ್ಯರಿಗೆ ಸಿಗುತ್ತಿರಲಿಲ್ಲ. ಅಲ್ಲದೆ ಬೈಬಲ್‍ನಲ್ಲಿರುವ ೧೫೦ ಕೀರ್ತನೆಗಳನ್ನು ಪಠಿಸುವ ಸಂದರ್ಭದಲ್ಲಿ ಎಲ್ಲರಿಗೂ ಅವುಗಳನ್ನು ಲೆಕ್ಕದಲ್ಲಿ ಇಡುವುದಕ್ಕಾಗುತ್ತಿರಲಿಲ್ಲ. ಹಾಗಾಗಿ ಉದ್ದನೆಯ ಹಗ್ಗಕ್ಕೆ ಕಲ್ಲುಗಳನ್ನು ಕಟ್ಟಿಕೊಂಡು ಲೆಕ್ಕಮಾಡಲಾಗುತ್ತಿತ್ತು.
- ಬಳಿಕ ಕಲ್ಲುಗಳ ಬದಲಿಗೆ ಮಣಿಗಳು, ಮರದ ತುಂಡುಗಳು ಮೊದಲಾದ ವಸ್ತುಗಳನ್ನು ಬಳಸುವ ಕ್ರಮ ರೂಢಿಗೆ ಬಂತು. ಆರಂಭದ ಶತಮಾನಗಳ ದಾಖಲೆ ಗಮನಿಸಿದರೆ ಆಗ ಪ್ರಾರ್ಥನೆಗಾಗಿ ಗಂಟು ಹಾಕಿದ್ದ ಹಗ್ಗ(ಪ್ರೇಯರ್ ರೋಪ್)ವನ್ನು ಬಳಸುತ್ತಿದ್ದರಂತೆ. ಸುಮಾರು ಮೂರನೆ ಶತಮಾನದಲ್ಲಿ ಈಜಿಪ್ಟಿನ ಮರುಭೂಮಿಯಲ್ಲಿ ವಾಸಿಸುತ್ತಿದ್ದ ಕ್ರೈಸ್ತ ಸಂತರು ಈ ಹಗ್ಗಗಳನ್ನು ಬಳಸುತ್ತಿದ್ದರು.
- ಇವುಗಳಲ್ಲಿ ಹತ್ತು ಗಂಟುಗಳಿರುವ, ಕೈಗೆ ಉಂಗುರದಂತೆ ಧರಿಸುವ ಹಗ್ಗಗಳಿಂದ ಆರಂಭಿಸಿ, ೩೩, ೫೦, ೧೦೦, ೫೦೦ ಗಂಟುಗಳಿರುವ ಹಗ್ಗಗಳವರೆಗೆ ಹಲವಾರು ವೈವಿಧ್ಯಗಳಿವೆ. ಇದು ಆಯಾ ಭಕ್ತರ ವಿಶ್ವಾಸವನ್ನು ಹಾಗೂ ಅನುಷ್ಠಾನ ಕ್ರಮವನ್ನು ಅವಲಂಬಿಸಿವೆ.
ರೋಸರಿ ಪದದ ನಿಷ್ಪತ್ತಿ ಸಂಪಾದಿಸಿ
'ರೋಸರಿ'ಗೆ ಕೊಂಕಣಿಯಲ್ಲಿ 'ಕ್ವಾಂತ್' ಎನ್ನುತ್ತಾರೆ. ಇದು ಮೂಲತಃ ಲ್ಯಾಟಿನ್‍ನ 'ಕ್ವಾಂತೊ' ಶಬ್ದದಿಂದ ಬಂದಿದೆ. ಕ್ವಾಂತೊ ಅಂದರೆ 'ಕೌಂಟ್'ಎಂದರ್ಥ. ಹಾಗೆಂದರೆ ಲೆಕ್ಕ ಮಾಡು ಎಂದಾಗುತ್ತದೆ. ಇದೇ ಶಬ್ದ ಮಲಯಾಳಮ್ ಭಾಷೆಯಲ್ಲಿ 'ಗೊಂತು' ಎಂದಾಗಿದೆ. ರೋಸರಿ ಎಂಬ ಹೆಸರಿನ ಕನ್ನಡ ಅವತರಣಿಕೆ ಜಪಮಾಲೆ. ರೋಸರಿ ಎಂದರೆ 'ಗುಲಾಬಿ ಹೂವಿನ ಹಾರ ಅಥವಾ ಕಿರೀಟ' ಎಂಬ ಅರ್ಥವಿದೆ.
ರೊಸರಿ ಪ್ರಾರ್ಥನೆಯ ಕ್ರಮ ಸಂಪಾದಿಸಿ
- ಸಂತ ಡೊಮಿನಿಕರು ತಿಳಿಸಿದ ಕ್ರಮವನ್ನು ಅನುಸರಿಸಿ ಕೆಥೊಲಿಕರು ರೋಸರಿ ಪ್ರಾರ್ಥನೆಯನ್ನು ಮಾಡುತ್ತಾರೆ. ರೋಸರಿಯಲ್ಲಿ ೫೪ ಹಾಗೂ ೫ ಮಣಿಗಳು ಜೊತೆಗೆ ಒಂದು ಶಿಲುಬೆ ಇರುತ್ತದೆ. ಮಾಲೆಯ ಮಣಿಗಳು ಒಂದಕ್ಕೊಂದು ತಾಗಿಕೊಂಡಿರ ಬಾರದು ಎಂಬ ಕಾರಣಕ್ಕೆ ಪ್ರತಿ ಮಣಿಯ ನಡುವೆ ಚಿಕ್ಕ ಚಿಕ್ಕ ಗಂಟುಗಳಿರುತ್ತವೆ. ಮಾಲೆಯನ್ನು ತಿರುಗಿಸುವಾಗ ತೋರು ಬೆರಳನ್ನು ಬಳಸ ಬಾರದು. ಅದರ ಬದಲಾಗಿ ಮಧ್ಯದ ಬೆರಳನ್ನು ಬಳಸಬೇಕು.
- ಜಪಮಾಲೆಯನ್ನು ಇನ್ನೊಬ್ಬರಿಗೆ ಕಾಣದಂತೆ ಧರಿಸಬೇಕು. ಎರಡು ಅಥವಾ ಮೂರನೆ ಶತಮಾನದಲ್ಲಿ ಪಾದ್ರಿಗಳು 'ಹಳೆಯ ಒಡಂಬಡಿಕೆ'ಯ ಸ್ತುತಿಗೀತೆಗಳನ್ನು ಪಠಿಸಲು ರೋಸರಿಯನ್ನು ಬಳಸುತ್ತಿದ್ದರು. ಸಾಮೂಹಿಕವಾಗಿ ೫೦, ೧೦೦ ಇಲ್ಲವೆ ೧೫೦ ಬಾರಿ ಪಠಿಸುವುದು ಕ್ರಮ.
- ಮೊದಲಿಗೆ ಶಿಲುಬೆಗೆ ನಮಸ್ಕಾರ ಅಂದರೆ ಎದೆಯ ಮುಂದೆ ಕ್ರಾಸ್(ಕೂಡಿಸು) ಚಿಹ್ನೆ. ಬಳಿಕ ಕ್ರಿಸ್ತನ ಶಿಷ್ಯರು ಬೋದಿಸಿದ ಸೂತ್ರಗಳನ್ನು(ಅಪಾಸಲ್ಸ್ ಕ್ರೀಡ್) ಹೇಳುವುದು.
- 'ಪರಮ ಪಿತನೇ' (ಅವರ್ ಫಾದರ್) ಹೇಳುವುದು.
- ಮೂರು ಬಾರಿ 'ನಮೋ ಮರಿಯಾ'(ಹೆಯಿಲ್ ಮೇರಿ) ಹೇಳುವುದು.
- ದೇವರ ಕೀರ್ತಿಯನ್ನು ಸ್ತುತಿಸುವುದು (ಗ್ಲೋರಿ ಬೇ ಟು ದ ಫಾದರ್)
- ಮೊದಲ ಧಾರ್ಮಿಕ ಸತ್ಯ (ಫಸ್ಟ್ ಮಿಸ್ಟರಿ) ಹೇಳಿ, ಬಳಿಕ ಪರಮಪಿತನೇ ಹೇಳುವುದು.
- ದೇವರ ಕೀರ್ತಿಯನ್ನು ಮತ್ತೆ ಮತ್ತೆ ಸ್ತುತಿಸುವುದು.
- ಎರಡನೆಯ ಧಾರ್ಮಿಕ ಸತ್ಯಗಳನ್ನು(ಸೆಕೆಂಡ್ ಮಿಸ್ಟರಿ) ಹೇಳಿ, ಪರಮಪಿತನೇ ಹೇಳುವುದು.
- ಪುನಃ 'ನಮೋ ಮರಿಯಾ'(ಹೆಯಿಲ್ ಮೇರಿ) ಹೇಳುವುದು.
ಆಕರ ಸಂಪಾದಿಸಿ
- ತರಂಗ ವಾರಪತ್ರಿಕೆ- ಡಿಸೆಂಬರ್-೨೮, ೨೦೧೭