ರೆವರೆಂಡ್ ಎಫ್ ಕಿಟ್ಟೆಲ್

(ರೆವೆರಂಡ್ ಕಿಟ್ಟೆಲ್ ಇಂದ ಪುನರ್ನಿರ್ದೇಶಿತ)

ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ (೧೮೩೨-೧೯೦೩)[],ಜರ್ಮನ್ ಸಂಜಾತ ಕನ್ನಡ ಸಾಹಿತಿ. ಇವರ ಆದ್ಯ ಕರ್ತವ್ಯ ಮತ ಪ್ರಚಾರವಾಗಿದ್ದರೂ ಕೂಡ , ಕನ್ನಡದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದರು. ಕನ್ನಡ-ಇಂಗ್ಲೀಷ್ ನಿಘಂಟುಗಳಲ್ಲಿ ಇವರು ರಚಿಸಿದ ನಿಘಂಟೇ ಮೊದಲನೇಯದಾಗಿದೆ. ಕನ್ನಡ ಭಾಷೆಯಲ್ಲಿ ಸಾಕಷ್ಟು ಸಾಹಿತ್ಯ ಕೃತಿ, ವ್ಯಾಕರಣ ಸಂಬಂಧಿತ ಕೃತಿಗಳನ್ನು ರಚಿಸಿದ್ದಾರೆ.[]

ಫರ್ಡಿನೆಂಡ್ ಕಿಟೆಲ್
ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ (1854)
ಜನನಏಪ್ರಿಲ್ ೮. ೧೮೩೨
ರಾಸ್ಟರ್ ಹಾಫ್, ಜರ್ಮನಿ
ಮರಣಡಿಸೆಂಬರ್ ೧೮, ೧೯೦೩
ಟುಬಿನೆನ್, ಜರ್ಮನಿ
ವೃತ್ತಿಕ್ರೈಸ್ತ ಪಾದ್ರಿಗಳು, ಕನ್ನಡ ಸಂಶೋಧನಾತ್ಮಕ ಬರಹಗಾರರು
ಭಾಷೆಕನ್ನಡ, ಜರ್ಮನ್, ಲ್ಯಾಟಿನ್, ಗ್ರೀಕ್, ಹಿಬ್ರೂ, ಫ್ರೆಂಚ್, ಇಂಗ್ಲೀಷ್, ತಮಿಳು, ತೆಲುಗು, ಮಲಯಾಳಿ
ವಿಷಯಕನ್ನಡ ನಿಘಂಟು, ಕನ್ನಡ ವ್ಯಾಕರಣ, ಕ್ರೈಸ್ತ ಧರ್ಮ
ತಂದೆಗಾಜ್ ಫ್ರೀಟ್ ಕಿಟೆಲ್
ತಾಯಿಟ್ಯುಡೋವ್ ಹೆಲೇನ್ ಹ್ಯೂಬರ್ಟ್

ವೈಯುಕ್ತಿಕ ಜೀವನ

ಬದಲಾಯಿಸಿ

ಇವರು ಜನಿಸಿದ್ದು, ೧೮೩೨ ರಲ್ಲಿ. ಜರ್ಮನಿಯ ಈಶಾನ್ಯ ಸಾಗರದ ತೀರದಲ್ಲಿರುವ ಫ್ರೀಸ್‌ಲ್ಯಾಂಡ್ ನಲ್ಲಿ. ಇದು ಹ್ಯಾನೋವರ್ ಪ್ರಾಂತ್ಯದಲ್ಲಿದೆ. ತಂದೆ ಗಾಜ್ ಫ್ರೀಟ್, ಪಾದ್ರಿಯಾಗಿದ್ದರು. ತಾಯಿ ಟ್ಯುಡೋವ್ ಹೆಲೇನ್ ಹ್ಯೂಬರ್ಟ್, ಇವರ ೬ ಜನ ಮಕ್ಕಳಲ್ಲಿ ಕಿಟೆಲ್ ಹಿರಿಯವರು.೧೮೪೧ ರಿಂದ ೧೮೪೯ ರವರೆಗೆ ತಮ್ಮ ಊರಿನಲ್ಲಿಯೇ ಮಾಧ್ಯಮಿಕ ಶಿಕ್ಷಣವನ್ನು ಕಲಿತರು. ಬಳಿಕ ೧೮೪೯, ಆಗಸ್ಟ್, ೩೦ ಬಾಸೆಲ್ ಮಿಶನ್ ಸಂಸ್ಥೆಯ, ಮಿಶನರಿ ಶಿಕ್ಷಣಕ್ಕೆ ಕಿಟೆಲ್ಲರ ಪರವಾಗಿ ಅವರ ತಂದೆ ಅರ್ಜಿ ಸಲ್ಲಿಸಿ, ೧೮೫೦ ರಲ್ಲಿ ಮಿಶನರಿ ಕಾಲೇಜಿಗೆ ಸೇರಿದರು. ಇವರು ಭಾರತಕ್ಕೆ ಬಂದಾಗ, ಹೀಬ್ರೂ, ಗ್ರೀಕ್, ಲ್ಯಾಟಿನ್, ಫ್ರೆಂಚ್ ಮತ್ತು ಇಂಗ್ಲೀಷ್ ಕಲಿತುಕೊಂಡಿದ್ದರು.

ಕಿಟ್ಟೆಲ್‌ರು, ಮಂಗಳೂರಿನ ಪಾಲಿನ್ ಐತ್, ಎಂಬ ಹುಡುಗಿಯನ್ನು ಮದುವೆಯಾಗಿ ೨ ಮಕ್ಕಳನ್ನು ಪಡೆದರು. ಆದರೆ ಕೇವಲ ೪ ವರ್ಷದ ವೈವಾಹಿಕ ಜೀವನದಲ್ಲೇ ಆಕೆ ಮೃತರಾದರು. ಎರಡನೇ ಮದುವೆ ಪಾಲಿನ್ ಐತ್ ರ ತಂಗಿ ಜ್ಯೂಲಿಯವರ ಜೊತೆಗೆ ಜರ್ಮನಿಯಲ್ಲಿ ಜರುಗಿತು. ಇವರ ವೈವಾಹಿಕ ಜೀವನದಲ್ಲಿ ಮೂರು ಗಂಡು ಮಕ್ಕಳು ಮತ್ತು ಒಂದು ಹೆಣ್ಣುಮಗುವಾಯಿತು.

ವೃತ್ತಿ ಜೀವನ

ಬದಲಾಯಿಸಿ

ಬಾಸೆಲ್ ನಗರದ ಮಿಶನ್ ಸಂಸ್ಥೆಯ ಮೂಲಕ ಭಾರತಕ್ಕೆ ಕಳುಹಿಸಲ್ಪಟ್ಟ ಕಿಟೆಲ್ ೧೮೫೪ರ ಅಕ್ಟೋಬರ್ ೨೦ರಂದು ಮಂಗಳೂರನ್ನು ತಲುಪಿದರು. ಆ ಬಳಿಕ ಅವರು ಧಾರವಾಡಕ್ಕೆ ಬಂದರು. ೧೮೫೬ರ ವರೆಗೆ ಹುಬ್ಬಳ್ಳಿ-ಧಾರವಾಡಗಳಲ್ಲಿ ಮತಪ್ರಚಾರ ಕೆಲಸದಲ್ಲಿ ನಿರತರಾಗಿದ್ದರು. ಆಗ ಆ ಪ್ರದೇಶದಲ್ಲಿದ್ದ ಬ್ರೀಟೀಶ್ ಅಧಿಕಾರಿ, ಕೆ. ಮೋರಿಕ್ ರ ಪರಿಚಯವಾಯಿತು ರೆ.ವೀಗಲ್ ಎಂಬ ಬ್ರಿಟಿಷ್ ಅಧಿಕಾರಿ ಕೂಡ ಧಾರವಾಡದಲ್ಲಿದ್ದರು. ಅವರು ಕನ್ನಡ ಸಾಹಿತ್ಯಾಭ್ಯಾಸವನ್ನು ಮಾಡಿ ಆ ವಲಯದಲ್ಲಿ ಹೆಸರುವಾಸಿಯಾಗಿದ್ದರು. ಆ ದಿನಗಳಲ್ಲಿ ಮತ ಪ್ರಚಾರಕ್ಕಾಗಿ ಸ್ಥಳೀಯ ಜನರೊಂದಿಗೆ ಬೆರೆತು ತಮ್ಮ ವಿಚಾರಗಳನ್ನು ಸ್ಥಳೀಯರ ಭಾಷೆಯಲ್ಲೇ ಸಂವಹಿಸಲು ಸ್ಥಳೀಯ ಭಾಷೆಗಳನ್ನು ಕಲಿಯುವುದು ಅನಿವಾರ್ಯವಾಗಿತ್ತು. ಆದ್ದರಿಂದ ಕಿಟ್ಟೇಲ್ ಅವರು ಧಾರವಾಡದ ಸುತ್ತಮುತ್ತಲಿನ, ದೇಸಿ ಭಾಶೆಗಳನ್ನು ಅರಿಯಲು ಕಾಲುನಡಿಗೆಯಲ್ಲೇ ಹಳ್ಳಿಗಾಡುಗಳಲ್ಲಿ, ಗುಡ್ಡಗಾಡುಗಳಲ್ಲಿ, ನಿರ್ಗಮ ಕಾಡು-ಮೇಡುಗಳಲ್ಲಿ ಊರೂರು ಅಲೆದು, ಆ ಪ್ರದೇಶಗಳ ಆಡುಭಾಷೆಯ ಪರಿಚಯ ಮಾಡಿಕೊಂಡರು. ಇದೇ ಕಾರಣಕ್ಕಾಗಿ ಕಿಟೆಲರು ಮಂಗಳೂರಿಗೆ ಆಗಮಿಸಿ ಅಲ್ಲಿ ಅತ್ಯುತ್ಸಾಹದಿಂದ ಕನ್ನಡ ಅಧ್ಯಯನ ಆರಂಭಿಸಿದರು. ಕನ್ನಡದ ಜೊತೆ ಜೊತೆಯಲ್ಲಿ ಸಂಸ್ಕೃತ, ತುಳು, ಮಲಯಾಳಂ ಭಾಷೆಗಳನ್ನೂ ಪರಿಚಯಿಸಿಕೊಂಡರು. ಹೀಗೆ ಶ್ರಮಪಟ್ಟು ಕನ್ನಡವನ್ನು ಕಲಿತ ಕೇವಲ ೧೩ ವರ್ಷಗಳಲ್ಲೇ, ಹಳಗನ್ನಡ ವ್ಯಾಕರಣ ಸೂತ್ರಗಳು ಎಂಬ ಗ್ರಂಥ ಪ್ರಕಟಣೆ ಮಾಡುವ ಸಾಹಸ ಮಾಡಿದರು. ೧೮೮೩-೮೪ರಲ್ಲಿ ಧಾರವಾಡದ ಬಾಸೆಲ್ ಮಿಶನ್ ಹೈಸ್ಕೂಲಿನ ಪ್ರಾಂಶುಪಾಲರಾಗಿ ಕಿಟ್ಟೆಲರು ಕೆಲಸ ಮಾಡಿದರು. ಧಾರವಾಡದಲ್ಲಿ ಕನ್ನಡಶಾಲೆಯ ಸ್ಥಾಪನೆ ೧೮೩೧ ರಲ್ಲೇ ಆಗಿದ್ದರೂ, ಇಂಗ್ಲಿಷ್ ಶಾಲೆಯ ಸ್ಥಾಪನೆ ಮೊತ್ತ ಮೊದಲು, ಬಾಸೆಲ್ ಮಿಶನ್ ಸಂಸ್ಥೆಯ ಸಹಕಾರದಿಂದ ಆಯಿತು. ಕನ್ನಡ ಭಾಷೆಯಬಗ್ಗೆ ಒಲವಿದ್ದ ಬ್ರಿಟಿಷ್ ಅಧಿಕಾರಿಗಳಾದ, ರಸೆಲ್, ಫ್ಲೀಟ್, ಮತ್ತು ಬಿ. ಎಲ್. ರೈಸ್ ಮುಂತಾದ ಪ್ರಮುಖರು ಕಿಟೆಲ್ಲರ ಭಾಷಾ ಪ್ರಸಾರದಲ್ಲಿ ನೆರವಾದರು. ೧೮೮೬ರ ಅಕ್ಟೋಬರ್ ೧೩ರಂದು ಅವರು ಧಾರವಾಡದಿಂದ ಮಡಿಕೇರಿಗೆ ಹೋದರು.

ಕೃತಿಗಳು ಹಾಗೂ ಲೇಖನಗಳು

ಬದಲಾಯಿಸಿ

೧೮೬೨ ರಲ್ಲಿ ಬೈಬಲ್ಲಿನ ಹೊಸಒಡಂಬಡಿಕೆಯನ್ನು ಕನ್ನಡಕ್ಕೆ ತಂದರು. ೧೮೬೩ ರಲ್ಲಿ,ಏಸುವಿನ ಜೀವನ ವೃತ್ತಾಂತದ ಕಥನವಾಗಿರುವ ಕಥಾಮಾಲಿಕೆ ಪ್ರಕಟಿಸಿದರು. ಇದರಲ್ಲಿ ೨೮೦ ಭಾಮಿನಿ ಷಟ್ಪದಿ, ೭೫ ವಾರ್ಧಕ ಷಟ್ಪದಿ ಹಾಗೂ ೧೭೫ ಪೂರ್ವೀರಾಗದ ಹಾಡುಗಳಿವೆ. ೧೮೬೫ ರಲ್ಲಿ, "ಸಂಣ ಕರ್ನಾಟಕ ಕಾವ್ಯಮಾಲೆ" ಪದ್ಯಸಂಗ್ರಹ ಬೆಳಕಿಗೆ ಬಂತು. ಇದೇ ಮುಂದೆ, ಕರ್ನಾಟಕ ಕಾವ್ಯಮಾಲೆ ಎಂದು ಪ್ರಕಟಗೊಂಡು ಹಲವಾರು ಆವೃತ್ತಿಗಳ ಬೆಳಕು ಕಂಡಿತು.ಇದರಲ್ಲಿ ‘ಬಸವ ಪುರಾಣ’, ‘ಪ್ರಭುಲಿಂಗಲೀಲೆ’, ‘ಕುಮಾರವ್ಯಾಸ ಭಾರತ’, ‘ಭಾಗವತ’, ‘ಗಿರಿಜಾ ಕಲ್ಯಾಣ’ ಇತ್ಯಾದಿ ಪ್ರಾಚೀನ ಕನ್ನಡ ಕವಿಗಳ ಪದ್ಯಗಳೊಂದಿಗೆ ತಮ್ಮ ಸ್ವಂತ ಕವನಗಳನ್ನೂ ಸೇರಿಸಿ ಈ ಪದ್ಯಗಳಿಗೆ ಸಂಬಂಧಿಸಿದಂತೆ ವಿಸ್ತೃತ ಪದಕೋಶವನ್ನೂ ಕೂಡಿಸಿದ್ದರು. ‘ಸಂಸಾರ ಕ್ರಮ’, ‘ಉಭಯ ಮಾರ್ಗ’, ‘ನಂಬಿ ಜೀವಿಸಿರಿ’, ‘ಡೇನಿಯಲನೂ ಅವನ ಜತೆಗಾರರೂ’ ಎಂಬಿತ್ಯಾದಿ ಪ್ರಬಂಧಗಳನ್ನು ಪ್ರಕತಿಟಿಸಿದರಲ್ಲದೆ ಹಲವಾರು ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳನ್ನೂ ಬರೆದರು. ಹೆನ್ರಿ ಮೊರಿಸ್ ಬರೆದ ‘History of England’ ಎಂಬ ಚರಿತ್ರೆಯ ಗ್ರಂಥವನ್ನು ೧೮೬೪ರಲ್ಲಿ ಕನ್ನಡಕ್ಕೆ ಅನುವಾದಿಸಿದರು. ಅದೇ ವರ್ಷ ಅವರ ‘ಪಂಚತಂತ್ರ’ ಬೆಳಕನ್ನು ಕಂಡಿತು.೧೮೬೫ರಲ್ಲಿ ‘Coorg Superstitions’ ಎಂಬ ಲೇಖನದಲ್ಲಿ ಕೊಡಗಿನಲ್ಲಿಯ ಭೂತಾರಾದನೆಯನ್ನು ಪ್ರಸ್ತಾಪಿಸಿ ಗುಳಿಗ, ಕುಟ್ಟಿಚಾತ, ಕಲ್ಲುರ್ಟಿ, ಪಂಜುರ್ಲಿ, ಕರಿಂಗಾಳಿ ಮೊದಲಾದ ಭೂತಗಳ ಆರಾಧನೆಯನ್ನು ಐತಿಹಾಸಿಕವಾಗಿ ಕಿಟೆಲ್ ಪರಿಶೀಲಿಸಿದ್ದಾರೆ. ‘ಯೇಸು ಕ್ರಿಸ್ತನ ಶ್ರಮ ಚರಿತ್ರೆ’ಯಲ್ಲಿ ಯೇಸು ಅನ್ಯರಿಗಾಗಿ ಪಟ್ಟ ಶ್ರಮದ ಕಥೆ ಇದೆ. ಇದು ಸರಳ ಕನ್ನಡ ಗದ್ಯಶೈಲಿಗೆ ಉತ್ತಮ ಉದಾಹರಣೆಯಾಗಿದೆ. ೧೮೬೫ರಲ್ಲಿ ಕಿಟೆಲ್ಲರಿಂದ ‘ಕನ್ನಡ ಸಂಗೀತಗಳು’ ಎಂಬ ಸಂಕಲನ ರಚಿತವಾಗಿ ಬೆಳಕನ್ನು ಕಂಡಿತು. ಇದರಲ್ಲಿ ದೇಶಿಯ ಕವಿಗಳ ಪದ್ಯಗಳ ಸಂಗ್ರಹವಲ್ಲದೆ ತಮ್ಮ ಸ್ವಂತ ಧಾರ್ಮಿಕ ಕವನಗಳೂ ಇದ್ದವು. ಆ ವರ್ಷ ಪ್ರಾರಂಭಗೊಂಡ ‘ವೃತ್ತಾಂತ ಬೋಧಿನಿ’ ಪತ್ರಿಕೆಯಲ್ಲಿ ಕಿಟೆಲರು ಕನ್ನಡ ಸಾಹಿತ್ಯ ಮತ್ತು ಚರಿತ್ರೆಯನ್ನು ಕುರಿತ ಅನೇಕ ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾರೆ. ಕಿಟೆಲರು ೧೮೬೫ರಲ್ಲಿ ‘ಸಂಕ್ಷೇಪ ವ್ಯಾಕರಣ’ ಎಂಬ ಕನ್ನಡದ ವ್ಯಾಕರಣವನ್ನು ಪ್ರಕಟಿಸಿ ಆ ಬಳಿಕ ಅದನ್ನು ಪರಿಷ್ಕರಿಸಿ ‘ಹಳೆಗನ್ನಡ ವ್ಯಾಕರಣ ಸೂತ್ರಗಳು’ ಎಂಬುದಾಗಿ ೧೮೬೬ರಲ್ಲಿ ಬೆಳಕಿಗೆ ತಂದರು. ೧೮೬೫ರಲ್ಲಿ ಬೆಳಕನ್ನು ಕಂಡ ‘ಸಂಣ ಕರ್ನಾಟಕ ಕಾವ್ಯಮಾಲೆ’ ಎಂಬ ಕವನ ಸಂಗ್ರಹದಲ್ಲಿ ೧೮೬೮ರ ‘ಕರ್ನಾಟಕ ವಾಗ್ವಿಧಾಯಿನಿ’ ಸಾಹಿತ್ಯ ಪತ್ರಿಕೆಯಲ್ಲಿ ರೈಸ್, ಸ್ಯಾಂಡರ್ಸನ್ ಮೊದಲಾದವರೊಡನೆ ಸೇರಿಕೊಂಡು ಕನ್ನಡ ವ್ಯಾಕರಣವನ್ನು ಧಾರಾವಾಹಿಯಾಗಿ ಪ್ರಕಟಿಸಿದ್ದಾರೆ.

೧೮೭೨ರಿಂದ ಅವರು ಇಂಗ್ಲಿಷಿನಲ್ಲಿ ಬರೆದ ೨೪ ಅಮೂಲ್ಯ ಲೇಖನಗಳು ‘Indian Antiquery’ ಎಂಬ ನಿಯತಕಾಲಿಕೆಯಲ್ಲಿ ಸಿಗುತ್ತದೆ. ಅವುಗಳಲ್ಲಿ ದ್ರಾವಿಡ ಸಂಖ್ಯಾವಾಚಕಗಳಲ್ಲದೆ ಹಲವಾರು ದ್ರಾವಿಡ ಪದಗಳ ನಿಷ್ಪತ್ತಿಯನ್ನು ಕುರಿತೂ ಚರ್ಚಿಸಿದ್ದಾರೆ. ಯೂರೋಪಿಯನ್ ಭಾಷೆಗಳಲ್ಲಿಯೂ ಅವರು ಕನ್ನಡ ಹಾಗೂ ಇತರ ದ್ರಾವಿಡ ಭಾಷೆಗಳ ಬಗೆಗೆ ಲೇಖನಗಳನ್ನು ಬರೆದಿದ್ದಾರೆ.

೧೮೭೩ರಲ್ಲಿ ಮಂಗಳೂರು ಬಾಸೆಲ್ ಮಿಶನ್ ಪ್ರಕಟಣಾಲಯದವರು ಕಿಟೆಲರು ಅನುವಾದಿಸಿದ ‘ಹೊಸ ಒಡಂಬಡಿಕೆ’ಯನ್ನು ಬೆಳಕಿಗೆ ತಂದರು. ಇದು ಅವರ ಹೆಸರುವಾಸಿ ಬೈಬಲ್ ಕೃತಿ. ಅದೇ ವರ್ಷ ಕರ್ನಾಟಕದ ವೈಷ್ಣವ ದಾಸರ ಬಗೆಗೆ ಸಂಶೋಧನೆ ನಡೆಯಿಸುತ್ತಾ ಪುರಂದರ, ಕನಕ, ಮಾಧವ, ವಿಠ್ಠಲ, ವಿಜಯದಾಸ, ವೆಂಕಟದಾಸ ಮೊದಲಾದವರ ಕೃತಿಗಳನ್ನು ಸಂಗ್ರಹಿಸಿ, ಅವುಗಳಲ್ಲಿ ಕೆಲವನ್ನು ಇಂಗ್ಲಿಷಿಗೆ ಅವರು ಭಾಷಾಂತರಿಸಿದರು. ೧೮೭೫ರಲ್ಲಿ ‘ಕರ್ನಾಟಕ ಕಾವ್ಯಮಾಲೆ’ ಪ್ರಕಟವಾಯಿತು. ಅದೇ ವರ್ಷ ನಾಗವರ್ಮನ ‘ಛಂದೋಬುಧಿ’ಯನ್ನು ಮುದ್ರಿಸಿ ಪ್ರಕಟಿಸಿದರು. ಅಲ್ಲಿಯತನಕ ತಾಳೆಯಗರಿಗಳಲ್ಲಿದ್ದ ಇಂಥಹ ಕೃತಿಗಳನ್ನು ಪ್ರಕಟಿಸಿದ ಕೀರ್ತಿ ಕಿಟೆಲರಿಗೆ ಸಲ್ಲುತ್ತದೆ. ಕನ್ನಡದಲ್ಲಿ ವೈಜ್ಞಾನಿಕ ರೀತಿಯ ಗ್ರಂಥ ಸಂಪಾದನೆ ಕಿಟೆಲ್ ಅವರಿಂದಲೇ ಆರಂಭವಾದುದರಿಂದ ಅವರೇ ಈ ಕ್ಷೇತ್ರದ ಪಿತಾಮಹರು.

೧೮೭೫ರಲ್ಲಿ “Lingayat Lengends’ ಎಂಬ ತಮ್ಮ ಸುದೀರ್ಘ ಲೇಖನದಲ್ಲಿ ವೀರಶೈವ ಧರ್ಮ, ಇತಿಹಾಸ, ಸಾಹಿತ್ಯದ ಬಗೆಗೆ ಅರ್ಥಗರ್ಭಿತವಾಗಿ ಬರೆದಿದ್ದಾರೆ. ಅದೇ ವರ್ಷ “Jaina, Vaishnava and Shaiva Literature” ಎಂಬ ಸಂಶೋಧನಾತ್ಮಕ ಲೇಖನದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಸ್ಥೂಲ ಚಿತ್ರಣ ನೀಡಿದ್ದಾರೆ. ಇನ್ನೊಂದೆಡೆ ನಿಜಗುಣ ಶಿವಯೋಗಿ ವೀರಶೈವನೆಂದು ಆಧಾರಸಮೇತವಾಗಿ ತೀರ್ಮಾನಿಸಿದ್ದಾರೆ. ೧೮೭೬ರಲ್ಲಿ Washerman Virasena ಎಂಬ ಕಥೆಯ ಮೂಲಕ ವೀರಶೈವ ಪುರಾಣದ ಪರಿಚಯವನ್ನು ಕಿಟೆಲ್ ಮಾಡಿದ್ದಾರೆ. ೧೮೭೭ರಲ್ಲಿ ‘ಕರ್ನಾಟಕ ಕಾವ್ಯಮಂಜರಿ’ಯನ್ನು ಪ್ರಕಟಿಸಿದರು. ಇದರಲ್ಲಿ ಅವರು ಹಳಗನ್ನಡದ ಸೊಗಸಾದ ಪದ್ಯಗಳನ್ನು ಆಯ್ದು, ಸ್ವಕವನಗಳನ್ನೂ ಸೇರಿಸಿದ್ದಾರಲ್ಲದೆ, ಟೀಕೆ, ಶಬ್ದಕೋಶ ಇತ್ಯಾದಿಗಳನ್ನು ಕೂಡಿಸಿದ್ದಾರೆ. ೧೮೭೭ರಲ್ಲಿ ಇಲ್ಲಿಯ ಹವೆಯ ಅನಾನುಕೂಲತೆಯಿಂದಾಗಿ ಕಿಟೆಲ್ ತಮ್ಮ ಶಬ್ದಕೋಶದ ಹಸ್ತಪ್ರತಿಯೊಂದಿಗೆ ಜರ್ಮನಿಗೆ ತೆರಳಿದರು. ೧೮೭೭ರಲ್ಲಿ ‘The Kongu Inscriptions’ ಎಂಬ ಲೇಖನವನ್ನೂ , ೧೮೭೮ರಲ್ಲಿ ‘ಕೆನರೀಸ್ – ಇಂಗ್ಲಿಷ್ ಡಾಯಲಾಗ್’ ಎಂಬ ಪುಸ್ತಕವನ್ನೂ ಬರೆದರು. ಈ ಪುಸ್ತಕದಲ್ಲಿ ಶಿಕ್ಷಕರು ಕಲಿಸುವ ರೀತಿಯನ್ನು ತೋರಿಸಿಕೊಟ್ಟಿದ್ದಾರೆ. ೧೮೮೦ರಲ್ಲಿ ಸಂಸ್ಕೃತ ಸಣ್ಣ ವ್ಯಾಕರಣ ಎಂಬ ಕಿರುಹೊತ್ತಗೆಯನ್ನು ಬರೆದರು. ಅದು ಬಹಳ ಜನಪ್ರಿಯವಾಗಿತ್ತು.

೧೯೦೩ರಲ್ಲಿ ಕಿಟೆಲರ ೪೮೩ಪುಟದ ೨೮ಅಧ್ಯಾಯಗಳ ಬೃಹತ್ ಕನ್ನಡ ವ್ಯಾಕರಣ ಗ್ರಂಥ ‘A Grammar of Kannada Language’ ಬಾಸೆಲ್ ಮಿಶನ್ ಮುದ್ರಣಾಲಯದಲ್ಲಿ ಅಚ್ಚಾಗಿ ಪ್ರಕಟವಾಯಿತು. ಆ ಮಹತ್ತರವಾದ ಕೃತಿಯಲ್ಲಿ, ಹಳಗನ್ನಡ ಮತ್ತು ಹೊಸಗನ್ನಡ ಎಂಬ ಕನ್ನಡದ ಬೆಳವಣಿಗೆಯ ವಿವಿಧ ಘಟ್ಟಗಳ ವಿವರಣೆ ಇದೆಯಲ್ಲದೆ ಪ್ರಾದೇಶಿಕ ಹಾಗೂ ಜನಪದ ಪ್ರಯೋಗಗಳನ್ನು ಕಾಣಬಹುದು. ಕೇಶಿರಾಜನು ೧೮೭೨ ರಲ್ಲಿ ಬರೆದ ಶಬ್ದಮಣಿದರ್ಪಣ ವೆಂಬ ಗ್ರಂಥದ ಸಂಪಾದನೆ, ಮತ್ತು ಪುನರ್‌ಪ್ರಕಟಣೆ ಯನ್ನು ಮಾಡಿದರು. ಕಿಟೆಲರು ಕೇಶಿರಾಜನ ಬಗ್ಗೆ ಬರೆದ ಪ್ರಥಮ ಪರಿಷ್ಕೃತ ಲೇಖನ ಇದರಲ್ಲಿದೆ. ಈ ಪುಸ್ತಕವನ್ನು ಆಗಲೇ ಜೆ. ಗ್ಯಾರೆಟ್, ಎಂಬುವರು ೧೮೬೮ ರಲ್ಲಿ ಬರೆದು ಪ್ರಕಟಿಸಿದ್ದರು. ರೆ.ಎಫ್. ಕಿಟೆಲ್ಲರು ಪಂಚತಂತ್ರದ ಬಗ್ಗೆಯೂ ಬರೆದಿದ್ದಾರೆ. ಕೇವಲ ಬರವಣಿಗೆಯಲ್ಲದೆ, ಮನುಕುಲದ ಎಲ್ಲಾ ಸೇವಾಕ್ಷೇತ್ರಗಳಲ್ಲೂ ಅವರು ಮುಂದಿದ್ದರು.

ಕನ್ನಡಕಾವ್ಯದ ಶೈಕ್ಷಣಿಕ ಪುನರ್ರಚನೆಯ ಪ್ರಯತ್ನ ಕೈಗೊಳ್ಳಲಾಯಿತು. ೧೪ ಹಸ್ತಪ್ರತಿಗಳ ಸಹಾಯದಿಂದ ನಾಗವರ್ಮನ, ಛಂದೋಂಬುಧಿ ಸಂಗ್ರಹ ೧೮೭೫ ರಲ್ಲಿ ಇದು ಅತ್ಯಂತ ಮಹತ್ವದ ಬೆಳವಣಿಗೆ. ಅವರು ಗದಗ, ಧಾರವಾಡ, ಮೈಸೂರು, ಕೊಡಗು, ಮಡಿಕೇರಿಗಳಲ್ಲಿ ಸುತ್ತಿ ಹಸ್ತಪ್ರತಿಗಳನ್ನು ಸಂಗ್ರಹಿಸಿದರು. ಇದಕ್ಕೆ ಬಿ. ಎಲ್.ರೈಸ್ ಮತ್ತು ತಿರುಮಲೆ ಶಾಮಣ್ಣನವರ ಸಹಾಯವೂ ಸಿಕ್ಕಿತು.

ಕಿಟೆಲರ ಕೊನೆಯ ಗ್ರಂಥವಾದ A Grammar of the Kannada Language (೧೯೦೩) ಕೃತಿ ತಮ್ಮ ಕೈ ಸೇರಿದ ಕೆಲವೇ ದಿನಗಳಲ್ಲಿ ಡಿಸೆಂಬರ್ ೧೯, ೧೯೦೩ರಂದು ಕಿಟೆಲರು ನಿಧನರಾದರು.

ಕನ್ನಡ ಪತ್ರಿಕೆಯ ಸಂಪಾದನೆ

ಬದಲಾಯಿಸಿ
  • ಆಗಿನ ಮುಂಬಯಿ ಪ್ರಾಂತ್ಯದಿಂದ ಕನ್ನಡಿಗರ ಪರವಾಗಿ, " ವಿಚಿತ್ರ ವರ್ತಮಾನ ಸಂಗ್ರಹ" ವೆಂಬ ಪತ್ರಿಕೆ, ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು. [ತಿಂಗಳಿಗೆ ೨ ಬಾರಿ] ಈ ಪತ್ರಿಕೆಯ ಸಂಪಾದನೆಯನ್ನು ೧೮೬೨ ರಲ್ಲಿ, ಕಿಟೆಲ್ಲರೂ, ೧೮೬೩ ರಲ್ಲಿ ಕ್ರಮವಾಗಿ, ಜೆ. ಮ್ಯಾಕ್ ರವರೂ ವಹಿಸಿಕೊಂಡು ಕೆಲಸ ಮಾಡಿದರು.
  • ಬಿ. ಎಲ್. ರೈಸ್ ಅವರು ನಡೆಸುತ್ತಿದ್ದ ‘ಅರುಣೋದಯ’ ಪತ್ರಿಕೆಯ ಸಹ ಸಂಪಾದಕರಾಗಿ ಸಹಾ ದುಡಿದಿದ್ದಾರೆ.
  • ೧೮೬೪ ರಲ್ಲಿ ಕನ್ನಡ ಪಾಠಗಳ ೩ನೆಯ ಪುಸ್ತಕವನ್ನು ಹೊರತಂದರು. ಅದರಲ್ಲಿ ಇಂಗ್ಲೆಂಡ್ ದೇಶದ ಚರಿತ್ರೆಯ ಭಾಗವನ್ನು ಮಕ್ಕಳಿಗೆ ಪರಿಚಯಿಸುವ ಪ್ರಯತ್ನಮಾಡಿದರು.
  • ೧೮೬೭ ರಲ್ಲಿ, ತಾಯ್ನಾಡಿನಿಂದ ಮರಳಿ ಧಾರವಾಡಕ್ಕೆ ಆಗಮನ. ೧೮೭೨ ರಲ್ಲಿ, ಇಂಡಿಯನ್ ಅಂಟಿಕ್ವಿಟಿ, ಎಂಬ ಪತ್ರಿಕೆ ಪ್ರಾರಂಭಿಸಿದರು. ಈ ಪತ್ರಿಕೆಯಲ್ಲಿ ಕನ್ನಡದ ಬಗ್ಗೆ, ಆಂಗ್ಲ ಭಾಷೆಯಲ್ಲಿ ಬರೆದ ಲೇಖನಗಳ ಸಂಕಲನ.

ಕನ್ನಡ-ಇಂಗ್ಲೀಷ್ ನಿಘಂಟಿನ ರಚನೆ

ಬದಲಾಯಿಸಿ
  • ಕಿಟ್ಟೆಲ್ ರು ವ್ಯಾಕರಣ ಮತ್ತು ಛಂದಸ್ಸಿಗೆ ಒತ್ತು ಕೊಟ್ಟಿದ್ದರು. ಕಿಟೆಲ್ಲರು ಎಂದೆಂದಿಗೂ ಅವಿಸ್ಮರಣೀಯರಾಗಿರುವುದು ಅವರ ಕನ್ನಡ-ಇಂಗ್ಲೀಷ್ ನಿಘಂಟುವಿನಿಂದ[] ಅದಕ್ಕೆ ಮುನ್ನವೇ ರೀವ್ ಮತ್ತು ಗಿಲ್‌ ಕ್ರಿಸ್ಟ್ -ಬೇರೆ-ಬೇರೆಯಾಗಿಯೇ ಕನ್ನಡ- ಇಂಗ್ಲಿಷ್ ಶಬ್ದಕೋಶಗಳ ರಚನೆಮಾಡಿದ್ದರು. ಆದರೆ, ಪಾಂಡಿತ್ಯಪೂರ್ಣ ಬರಹಕ್ಕೆ ಕಿಟೆಲ್ ಹೆಸರುವಾಸಿಯಾಗಿದ್ದರು. ೧೮೭೨ ರಲ್ಲಿ ಸೂಕ್ಷ್ಮವಾಗಿ ಅದರ ರೂಪರೇಷೆಗಳನ್ನು ತಯಾರಿಸಿದರು. ತಮ್ಮ ಅನವರತ ಅಭ್ಯಾಸ, ಪರಿಶ್ರಮಗಳಿಂದ ಮುಂದಿನ ೨೦ ವರ್ಷಗಳಲ್ಲಿ ಅಂದರೆ, ೧೮೯೨ ರಲ್ಲಿ ಕನ್ನಡ ನಿಘಂಟನ್ನು ಪೂರ್ಣಗೊಳಿಸಿ ೭೦,೦೦೦ ಪದಗಳನ್ನೊಳಗೊಂಡ ಹಸ್ತಪ್ರತಿಯನ್ನು ಬಾಸೆಲ್ ಮಿಶನ್ ಗೆ ಒಪ್ಪಿಸಿದರು.[]
  • ಕನ್ನಡಭಾಷೆಯನ್ನು ಅರಿಯಲು ಪ್ರಯತ್ನಿಸುತ್ತಿದ್ದ ಬ್ರಿಟಿಷರಿಗೆ ಈ ಪ್ರಯತ್ನ ಬಹಳವಾಗಿ ಹಿಡಿಸಿತು. ೧೮೯೪ರಲ್ಲಿ ಈ ನಿಘಂಟನ್ನು ಮದರಾಸು ವಿಶ್ವವಿದ್ಯಾಲಯ ಪ್ರಕಟಿಸಿತು. ಸರ್ ವಾಲ್ಟರ್ ಎಲಿಯಟ್ ಎಂಬ ಅಧಿಕಾರಿ, ಹಣದ ಸಹಾಯಕ್ಕೆ ಶಿಫಾರಸು ಮಾಡುವುದಾಗಿ ಆಶ್ವಾಸನೆ ಕೊಟ್ಟನು. ಆ ಸಮಯದಲ್ಲಿ ನಡೆದ ಯುದ್ಧದಲ್ಲಿ, ಕಿತ್ತೂರು ರಾಣಿ ಚೆನ್ನಮ್ಮನವರು, ಎಲಿಯಟ್ ರವರನ್ನು ಸೆರೆ ಹಿಡಿದು, ಕಾರಾಗೃಹದಲ್ಲಿಟ್ಟರು. ಜೈಲಿನಿಂದ ಬಿಡುಗಡೆಯಾದ ಮೇಲೆ, ಅವರು ಧಾರವಾಡದ ಸಹಾಯಕ ಕಲೆಕ್ಟರ್ ಆದರು.
  • ೧೮೮೨ರಲ್ಲಿ ಕಿಟೆಲ್ ಧಾರವಾಡಕ್ಕೆ ಬಂದು ಕನ್ನಡ –ಇಂಗ್ಲಿಷ್ ಶಬ್ದಕೋಶದ ರಚನಾಕಾರ್ಯವನ್ನು ಮುಂದುವರೆಸಿದರು. ೧೮೮೯ರಲ್ಲಿ ‘ಹಳಗನ್ನಡ ವ್ಯಾಕರಣ ಸೂತ್ರಗಳು’ ಪ್ರಕಟವಾಯಿತು. ಅದೇ ವರ್ಷ ಧಾರವಾಡದ ಅನೇಕ ವಿದ್ವಾಂಸರೊಂದಿಗೆ ವಿಚಾರ ವಿನಿಮಯ ನಡೆಯಿಸಿ ‘ಕನ್ನಡ-ಇಂಗ್ಲಿಷ್ ಶಬ್ದಕೋಶ’ದ ಹಸ್ತ ಪ್ರತಿಯನ್ನು ಮುದ್ರಣಕ್ಕಾಗಿ ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್ಸಿಗೆ ಒಪ್ಪಿಸಿದರು. ಅದು ೧೮೯೪ರಲ್ಲಿ ಬೆಳಕನ್ನು ಕಂಡಿತು. ಕನ್ನಡದಲಿ ಶಬ್ಧಕೋಶದ ರಚನೆಯ ಪರಂಪರೆಯೇ ಇದ್ದು, ೧೦ನೇ ಶತಮಾನದ 'ರನ್ನ ಕಂದ' ದಿಂದ ಹಿಡಿದು ಹಲವಾರು ಶಬ್ಧಕೋಶಗಳು ಲಭ್ಯ ಇವೆ. ಇದು ಮೊದಲ ಕನ್ನಡಕ್ಕೆ ಇಂಗ್ಲಿಷ್ ಶಬ್ಧ ಒದಗಿಸಿದ ಕೋಶ. ಕಿಟೆಲ್ಲರ ‘ಕನ್ನಡ-ಇಂಗ್ಲಿಷ್ ಶಬ್ದಕೋಶ’ ಕನ್ನಡದ ಹಾಗೂ ಭಾರತೀಯ ಭಾಷೆಗಳಲ್ಲಿ ಅತ್ಯಂತ ಪ್ರಮಾಣಬದ್ಧವಾದ ಹಾಗೂ ವೈಜ್ಞಾನಿಕ ಪದ್ಧತಿಯನ್ನೊಳಗೊಂಡ ಸರ್ವಸಂಗ್ರಾಹಕ ವಿವರಣಾತ್ಮಕ ಶಬ್ದಕೋಶವಾಗಿದೆ. ಈ ಮೇರುಕೃತಿಯಲ್ಲಿ ೧೭೬೨ ಬೃಹತ್ ಗಾತ್ರದ ಪುಟಗಳಿವೆಯಲ್ಲದೆ ಸುಮಾರು ೭೦,೦೦೦ ಶಬ್ಧಗಳನ್ನು ಅದು ಒಳಗೊಂಡಿದೆ. ಈ ಕೋಶದ ಪುಟ ಪುಟಗಳಲ್ಲಿ ಕಿಟೆಲರ ಅಪಾರ ವಿದ್ವತ್ತು ಪುಟಿದು ಕಾಣುತ್ತದೆ. ೧೮೮೯ರಿಂದ ಅದರ ಮುದ್ರಣ ಪ್ರಾರಂಭಗೊಂಡು ೧೮೯೪ರಲ್ಲಿ ಅದು ಮುಗಿದಾಗ ಕಿಟೆಲರು ಕಣ್ಣುನೋವು ಮತ್ತು ತಲೆನೋವುಗಳಿಂದ ನರಳುತ್ತಿದ್ದರು. ತಮ್ಮ ಹುಟ್ಟೂರಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗಲೇ ಶಬ್ದಕೋಶ ಪರಿವೀಕ್ಷಣಾ ಕಾರ್ಯವನ್ನು ಮಾಡಿದ್ದರಲ್ಲದೆ ಬಹು ಉಪಯುಕ್ತ ಮುನ್ನುಡಿಯನ್ನು ಬರೆದು ೧೮೯೩ರಲ್ಲಿ ಕಳುಹಿಸಿದರು. ೧೮೯೪ರಲ್ಲಿ ಕಿಟೆಲರ ಪರಮೋಚ್ಚವಾದ ಈ ಕೃತಿ ಬೆಳಕನ್ನು ಕಂಡಿತು. ಕೋಶದಲ್ಲಿ ಅಡಕವಾಗಿರುವ ಅಪಾರವಾದ ಶಬ್ದಸಂಪತ್ತು, ಕನ್ನಡದ ವಿವಿಧ ಪ್ರಾದೇಶಿಕ ಹಾಗೂ ಸಾಮಾಜಿಕ ಉಪಭಾಷೆಗಳ ಮಾತುಗಳು; ಗಾದೆ ನಾಣ್ಣುಡಿಗಳು; ಹಳಗನ್ನಡ, ಹೊಸಗನ್ನಡ ಪ್ರಯೋಗಗಳು ಕಿಟೆಲರ ಪರಿಶ್ರಮ, ಕರ್ತವ್ಯನಿಷ್ಠೆ, ಅಚ್ಚುಕಟ್ಟುತನ, ವೈಜ್ಞಾನಿಕತೆ, ವಿದ್ವತ್ತುಗಳೆಲ್ಲವನ್ನೂ ಪ್ರತಿಬಿಂಬಿಸುತ್ತವೆ.
  • ೧೮೭೧ರವೇಳೆಗೆ ಬಾಸೆಲ್ ಮಿಶನ್ ಸಂಸ್ಥೆ ಕಿಟೆಲರ ಕನ್ನಡ ಭಾಷಾ ಪ್ರಭುತ್ವ ಹಾಗೂ ವಿದ್ವತ್ತನ್ನು ಗಮನಿಸಿ ಕನ್ನಡ-ಇಂಗ್ಲಿಷ್ ಶಬ್ದಕೋಶವನ್ನು ರಚಿಸಲು ಅವರನ್ನು ಒತ್ತಾಯಿಸಿತು. ೧೮೭೨ರಲ್ಲಿ ಕಿಟೆಲರು ಕೇಶೀರಾಜನ ‘ಶಬ್ದಮಣಿದರ್ಪಣ’ವನ್ನು ೯ ಹಸ್ತಪ್ರತಿಗಳ ಆಧಾರದಿಂದ ಸಂಪಾದಿಸಿ ಅಲ್ಲಿಯ ಸೂತ್ರಗಳ ಸಾರಾಂಶವನ್ನು ಇಂಗ್ಲಿಷಿಗೆ ಭಾಷಾಂತರಿಸಿದರು.

ಪ್ರಶಸ್ತಿ ಸನ್ಮಾನಗಳು

ಬದಲಾಯಿಸಿ
  • ಕಿಟೆಲರ ಚಿರಸ್ಮರಣೀಯ ಕೃತಿಯಾದ ಕನ್ನಡ –ಇಂಗ್ಲಿಷ್ ಡಿಕ್ಷನರಿ (೧೮೯೪)ಯನ್ನು ಅಂದು ಭಾರತದಲ್ಲಿ ಯಾರೂ ಗಮನಿಸದಿದ್ದರೂ ಜರ್ಮನಿಯ ಟ್ಯುಬಿಂಗನ್ ವಿಶ್ವವಿದ್ಯಾಲಯ ಅದನ್ನು ಗುರುತಿಸಿ ಕಿಟೆಲರಿಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಕೃತಾರ್ಥಗೊಂಡಿತು. ಕನ್ನಡದ ಕಾರ್ಯಕ್ಕೆ ಸಂದ ಪ್ರಪ್ರಥಮ ಡಾಕ್ಟರೇಟ್ ಪದವಿಯಿದು.
  • ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಸಂಸ್ಥೆ ಯ ವತಿಯಿಂದ ಗೌರವ [೧೮೯೦] ಸದಸ್ಯತ್ವವನ್ನು ಕೊಡಲಾಯಿತು. ಕನ್ನಡ ಭಾಷೆಯನ್ನು ಬೆಳೆಸಲು ಒಬ್ಬ ವಿದೇಶಿ ಪಾದ್ರಿ ಮಾಡಿದ ಸಾಧನೆ, ಒಂದು ಅಪೂರ್ವ ಸಂಗತಿಯಾಗಿದೆ.

ಸ್ಮರಣೆ

ಬದಲಾಯಿಸಿ

೧೯೦೩ ರಲ್ಲಿ, ರೆವರೆಂಡ್ ಎಫ್.ಕಿಟೆಲ್ ತಮ್ಮ ತಾಯ್ನಾಡಿನಲ್ಲೆ ದೈವಾಧೀನರಾದರು. ೨೦೦೩ ರಲ್ಲಿ ಅವರ ಮರಣ ಶತಮಾನೋತ್ಸವ ದಿನವನ್ನು ಜರ್ಮನಿ ಮತ್ತು ಕರ್ನಾಟಕದಲ್ಲಿ ಆಚರಿಸಲಾಯಿತು. ಕಿಟೆಲ್ಲರ ಕನ್ನಡ ಭಾಷೆಯ ಪ್ರೇಮ ಮತ್ತು ಅದನ್ನು ಕಾರ್ಯಗತಗೊಳಿಸಲು ಜೀವನವಿಡೀ ತಮ್ಮ ಅಮೂಲ್ಯ ಸಮಯವನ್ನು ಮುಡಿಪಾಗಿಟ್ಟರು. ಆ ದಿನ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ರೆ.ಎಫ್. ಕಿಟೆಲ್ ರವರ ಕನ್ನಡ ಭಾಷೆಗೆ ಕೊಟ್ಟ ಸಂಪತ್ತುಗಳನ್ನು ಮನಸಾರೆ ನೆನೆಯಲಾಯಿತು. ಇಂದು ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ಮೇಯೋಹಾಲ್ ಬಳಿ, ರೆ.ಕಿಟ್ಟೆಲ್ ರವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಅದೂ ಅಲ್ಲದೆ, ಬೆಂಗಳೂರಿನ ಆಸ್ಟಿನ್ ಟೌನ್ ಪ್ರದೇಶವನ್ನು "ರೆವರೆಂಡ್ ಕಿಟೆಲ್ ನಗರ" ವೆಂದು ಹೊಸದಾಗಿ ನಾಮಕರಣ ಮಾಡಲಾಗಿದೆ. ಈ ಮಹಾನುಭಾವರ ನೆನಪಿಗಾಗಿ ಧಾರವಾಡದಲ್ಲಿ ಕಿಟೆಲ್ ಕಾಲೇಜು ಸ್ಥಾಪನೆಯಾಗಿದೆ. 'ಇವು ಕರ್ನಾಟಕದ ಜನತೆ, ಕಿಟೆಲ್ ರವರ ಜ್ಞಾಪಕಾರ್ಥವಾಗಿ ಅರ್ಪಿಸಿದ ಅನುಪಮ ಶ್ರದ್ಧಾಂಜಲಿಗಳು'.

ವರಕವಿ, ದ.ರಾ.ಬೇಂದ್ರೆಯವರ ಮಾತಿನಲ್ಲಿ ಹೇಳಬೇಕೆಂದರೆ, ಕನ್ನಡಕೆ ಕನ್ನಡಿಯ ಹಿಡಿದು, ದುಡಿದವ ನೀನು ಎಂದಿದ್ದಾರೆ. “ಶಾಸ್ತ್ರೀಯವಾದ ಮಾರ್ಗದಲ್ಲಿ ಕನ್ನಡ ವಿದ್ವತ್ತು ಬೆಳೆಯುವುದಕ್ಕೆ ಕಿಟೆಲ್ ಶ್ರಮಿಸಿದರು. ಕನ್ನಡದ ಋಷಿಗಳಲ್ಲಿ ಅವರೂ ಒಬ್ಬರು. ಜರ್ಮನಿಯಲ್ಲಿ ಹುಟ್ಟಿದ ಅವರು ಕನ್ನಡಿಗರಾಗಿ ಮೆರೆದರು. ಅವರನ್ನು ಸ್ಮರಿಸಿಕೊಳ್ಳುವುದು ಪವಿತ್ರ ವಸ್ತುವೊಂದನ್ನು ಧ್ಯಾನಿಸಿದಂತೆ ಪುಣ್ಯಕರವಾದದ್ದು.” ಸಂಶೋದಕ ಮತ್ತು ಬರಹಗಾರರಾದ ಡಿ. ಎಲ್. ಎನ್ ಎಂದು ಅಭಿಪ್ರಾಯಪಟ್ಟಿದ್ದಾರೆ

ಕಿಟೆಲ್ ವಿರಚಿತ "ಕಾವ್ಯಮಾಲೆ" ಯಿಂದ ಆಯ್ದ ಪದ್ಯಗಳು

ಬದಲಾಯಿಸಿ

೧. ನಾಂದಿ ಪದ್ಯ

ಶ್ರೀ ಜನಾರ್ಚಿತ ಸತ್ಯಸಾಕ್ಷಿಯೆ

ಭೂಜನೈಕೊ ಗುರುವೆ, ದೇವಜ
ರಾಜಿಪವನೀ ರವಿಯೆ, ಸುಪಥವೆ, ಜೀವದಧಿಪತಿಯೆ
ತೇಜದುದಯವೇ, ದೇವಕಾಂತಿಯೆ
ಮೂಜಗನ್ನಾಥೇಸೊ, ನಿನ್ಮುಖ

ಮಾಜಿಕೊಳ್ಳದೆ, ಮೂಡು ಭಕ್ತರ ಹೃದಯಕಮಲದೊಳು

೨.ಸಮುದ್ರದಲ್ಲಿ ಬಿರುಗಾಳಿ ಬೀಸಿದಾಗ

ಒಂದು ದಿನದಲ್ಲೇಸು ತನ್ನೊಡ

ಬಂದ ಶಿಷ್ಯರ ಸಹಿತ ಹಡಗವ

ನೆಂದಿನಂದದಿಯೇರಿ ಹೋಗಲಕಾಸಮಯದೊಳಗೇ

ಸುಂದರಾನಿಲ ಶಾಂತಿಯಿದ್ದೆಡೆ

ಮುಂದಘೋರದ ಕಂಪವೇಳಲ್

ಕಂದದಿಂದಲಿ ನಿದ್ದೆ ಮಾಡುತಲೇಸು ಮಲಗಿಹನೂ

ಜ್ಯೋತಿ -ಮಂಡಲವಡಗಿ ಬಿರ್ರನೆ

ವಾತ ಬೀಸಲು ಕಡಲಿನಲ್ಲಲೆ

ಘಾತವಾಗುತ ಥೋರಥೋರದ ತೆರೆಗಳುಕ್ಕುತಲೆ

ಘಾತ ಪೊದಗುವ ಹಾಗೆ ಹಡಗವ

ಜಾತಕಾತರದಲೆಗಳದರಿಸ-

ಲಾತನಡಿಗಡೆ ಶಿಷ್ಯರೋಡುತ ಬಂದು ಕೂಗಿದರೂ

ಒಡೆಯ ಈ ಪರಿ ತೆರೆಯು ಹಡಗವ

ಹೊಡೆಯೆ ಚಿಂತೆಯು ನಿಂಗೆ ಹತ್ತದೆ

ಯೊಡೆದು ಹೋದೀತೀಗ ಯೆಲ್ಲರು ನಶಿಸಿಯೇವೆನ್ನೇ

ಮಡಿವ ಭಯದವರನ್ನು ತನ್ನಯ

ದಡಿಯಲೆಚ್ಚತ್ತಿಕ್ಷಿಸೇಸುವು

ನುಡಿದ ಪವನವ ಕಡಲ ಬೆದರಿಸಿ ಸುಮ್ಮನಿರಿಸಿದನೂ

ಶಾಂತಿಯಾಯಿತು ಘಾಳಿ ನಿಂತುವಿ

ಕಾಂತಿ ಪಸರಿಸಿತೆಳೆಯ ಬಿಸಿಲಿಂ

ಕ್ರಾಂತಿ ಕರ್ತನು ಬಳಿಕ ಶಿಷ್ಯರಿಗೊರೆದನಿಂತೆಂದೂ

ಭ್ರಾಂತರಾದಿರಿ ಹೇಡಿಗಳೆ ಯಾ

ಕಾಂತುಕೊಳ್ಳದೆ ನನ್ನ ಶಕ್ತಿ

ಕ್ಷಾಂತಿ ಮಾಡುವದೆಷ್ಟೊ ಸತ್ಯಾವೆ ನಿಮ್ಮಪನಂಬಿಕೆಯಾ

ಪಾಪಸಾಗರ ದಾಟಿ ಸಗ್ಗಕೆ

ಪೋಪ ಹಡಗವನೇಸುವೊಡೆಯನು

ಕಾಪು ಕಾಯ್ವುದು; ಕಾಯದಿದ್ದರೆ ಕೇಳಿರಾಳುಗಳೇ

ದೀಪವಿಲ್ಲದ ಗಾಢದಿರುಳಲಿ

ಶಾಪದಲೆಗಳು ಹೊಡೆದು ಬಡೆಯಲು

ತಾಪದಿಂ ನೀವಲೆಗಳೊಳ್ ಮುಳುಮುಳುಗಿ ಹೋಗುವಿರಿ.

೩.ಯೇಸುಕ್ರಿಸ್ತನ ಬಂಧನ

ನುಡಿಯಲೆಂತು ದಯೆಯ ಪತಿಯು

ತಡೆಯದಖಿಲ ಕಳ್ಳರೆದ್ದು

ಹಿಡಿದರವನ ಶುಚಿ ಕರದಿ

ಯಡನೆ ಯಡನೇ ಬಂಧಿಸೀದರು

ಒಡನೇ ಪೇತ್ರನೆಂಬ ಶಿಷ್ಯ

ತಡೆಯಲಾರ -ದೊರೆಯೊಳಿಂದ

ಖಡುಗ ಹಿಡಿದು ಪೆಟ್ಟು ಹೊಡೆಯೆ

ಎಡಿದು ಹರಿಯಿತೊಂದು ಕಿವಿಯು

ಉಗುಳು ನೆತ್ತರವುಳ್ಳ ಕ್ರಿಸ್ತನ

ಜಗುಲಿಯಲ್ನಿಲಿಸಧಿಪನೆಂದನು

ಮಿಗಿಲು ಬಾಧಿಸಿ ತಪ್ಪು ಸಿಗದೀ ನರನ ದೃಷ್ಟಿಸಿರಿ

ಜಗದ ಕರ್ತಗೆ ಮುಳ್ಳುಮುಕುಟವು

ರಗುತ ಬಣ್ಣದ್ದಂಗಿಯಿದ್ದುದು

ಮಗಳಿಯಧಿಪನು ನೋಡಿರೆಂಥಾ ನರನೆಯೆಂದೊರೆದಾ

೪.ಯೇಸುವನ್ನು ವಧಾಸ್ಥಾನಕ್ಕೆ ಒಯ್ಯುವಾಗ

ವೈದರಾತನ ದಂಡಿನಾಳ್ಗಳು

ಹೊಯಿದರಾತನ ಬಾರು ಹಗ್ಗದಿ

ಗೈದರಾತಗೆ ಹಾಸ್ಯ, ರಾಜನ ಸೋಗ ತೊಡಿಸುತಲೆ

ಕೊಯ್ದರಾತನ ತಲೆಯ ಮುಳ್ಳಿಂ

ಬೈಯ್ದರಾತನ ರಾಜ ಎನುತಲಿ

ಕೈದುವೆನುತಲೆ ಕೊಟ್ಟ ಬೆತ್ತದಿ ಹೊಡೆದರಾತನಿಗೆ

ನರರೆ ಕೇಳಿರಿ, ದೇವರಾಜ್ಯದ

ಮರುಮ ದೇವಜ ತಾನೆಯೊರೆದುದ

ಮರೆಯದಿರ್ರೀ ರಾಜ್ಯಗಡಿಯೋಳ್ ಶೇರಬೇಕೆಂದೂ

ಅರಸಿಕೊಳ್ವರೆ ಶ್ರೇಷ್ಠ ಮುತ್ತನು

ಧರೆಯ ವರ್ತಕ ಜನರಲೊಬ್ಬನು

ಹೊರಟುಹೋದನು ದಿಕ್ಕುದಿಕ್ಕಿಗೆ ಬೇಸರಾಗದಲೇ

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ರೆವರೆಂಡ್ ಎಫ್. ಕಿಟೆಲ್", ಡಾ. ಶ್ರೀನಿವಾಸ ಹಾವನೂರ
  2. 'An Indian to the Indians ? : On the initial Failure and the Popsthumous Success.. 'Kittel's journey to India in 1853', P.112
  3. "Kannada-English Dictionary [Hardcover]". Archived from the original on 2016-03-14. Retrieved 2014-08-11.
  4. 'ರೆವರೆಂಡ್ ಕಿಟ್ಟೆಲ್ ರ, ಕನ್ನಡ ನಿಘಂಟು'