ಮೇಜರ್ ರಾಮ ರಾಘೋಬ ರಾಣೆ (ಜೂನ್ ೨೬, ೧೯೧೮ - ಜುಲೈ ೧೦, ೧೯೯೪) ಪರಮವೀರ ಚಕ್ರ ಸಂಮಾನಿತ ಯೋಧರೆಂದು ದೇಶದಲ್ಲಿ ಗೌರವಾನ್ವಿತರಾಗಿದ್ದಾರೆ.

ರಾಮ ರಾಘೋಬ ರಾಣೆ
Bornಜೂನ್ ೨೬, ೧೯೧೮
ಚೆಂಡಿಯಾ, ಕಾರವಾರ, ಕರ್ನಾಟಕ
Diedಜುಲೈ ೧೦, ೧೯೯೪
Awards ಪರಮ ವೀರ ಚಕ್ರ

ಜೀವನ ಬದಲಾಯಿಸಿ

ರಾಮ ರಾಘೋಬ ರಾಣೆ ಜನಿಸಿದ್ದು ಕರ್ನಾಟಕದ ಕಾರವಾರ ಜಿಲ್ಲೆಯ ಚೆಂಡಿಯಾ ಎಂಬಲ್ಲಿ ಜೂನ್ ೨೬, ೧೯೧೮ರಂದು. ಅವರು ಕೊಂಕಣದ ಮರಾಠಾ ಕ್ಷತ್ರೀಯ ಸಮಾಜಕ್ಕೆ ಸೇರಿದವರು. ಅವರು ಸಾಮಾನ್ಯ ಸೈನಿಕನಾಗಿ ಸೇನೆ ಸೇರಿದರು. ಸೇನೆಯಲ್ಲಿ ಜಾಣರಿಗೆ ಸಾಹಸಿಗಳಿಗೆ ಇರುವ ಸದಾವಕಾಶಗಳನ್ನು ಬಳಸಿಕೊಂಡು ಸೇನೆಯಲ್ಲಿ ಅಧಿಕಾರಿಯಾದರು. ಕಾಪ್ಸ್ ಆಫ್ ಇಂಜಿನಿಯರ್ಸ್ನಲ್ಲಿ ಡಿಸೆಂಬರ್ ೧೫, ೧೯೪೭ರಂದು ರಾಮ ರಾಘೋಬ ರಾಣೆ ಕಮಿಶನ್ಸ್ ಅಧಿಕಾರಿಯಾದರು.

ವೀರ ಯೋಧ ಬದಲಾಯಿಸಿ

೧೯೪೭ರ ದೇಶ ವಿಭಜನೆಯ ಕಾಲದಲಿ ಪಾಕಿಸ್ತಾನ ಆಕ್ರಮಿಸಿಕೊಂಡ ಕೆಲವು ಭಾಗಗಳನ್ನು ಮರಳಿ ಪಡೆಯಲು ಭಾರತೀಯ ಸೇನೆ ನೌಕೇರಾದಿಂದ ರಾಜೋರಿಯತ್ತ ಮುನ್ನುಗ್ಗಿತು. ೮ ಎಪ್ರಿಲ್ ೧೯೪೮ರಂದು ಸೆಕೆಂಡ್ ಲೆಫ್ಟಿನೆಂಟ್ ರಾಮ ರಾಘೋಬ ರಾಣೆ (ಬಾಂಬೆ ಇಂಜಿನಿಯರ್ಸ್ ಗ್ರೂಪ್)ಗೆ ಸಾಶೇಖಾ ಹಾಗೂ ರಾಜೋರಿ ಮಾರ್ಗದಲ್ಲಿ ಶತ್ರು ಸೇನೆ ಹುಗಿದಿಟ್ಟ ಸ್ಪೋಟಕಗಳನ್ನು ತೆರವುಗೊಳಿಸುವ ಕಾರ್ಯ ನೀಡಲಾಯಿತು. ಕಾರ್ಯಾಚರಣೆ ಪ್ರದೇಶ ಗುಡ್ಡಗಾಡಿನ ದುರ್ಗಮ ಪ್ರವೇಶವಾಗಿತ್ತು. ಶತ್ರು ಗುಂಡಿನ ಮಳೆಗರೆಯುತ್ತಿದ್ದ. ೪ನೇ ಡೊಗ್ರಾದ ಒಂದು ಭಾಗವಾಗಿದ್ದ ರಾಣೆಯವರ ೩೭ನೇ ಕಂಪನಿಯ ಒಂದು ತುಕಡಿ ಹುಗಿದಿಟ್ಟ ಸ್ಪೋಟಕಗಳನ್ನು ಸುರಕ್ಷಿತವಾಗಿ ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿತು. ತುಕಡಿಯ ಇಬ್ಬರು ಸೈನಿಕರು ಶತ್ರುದಾಳಿಗೆ ವೀರಮರಣವನ್ನಪ್ಪಿದರು. ಸ್ವತಃ ರಾಣೆ ಗಾಯಗೊಂಡರು. ಆದರೂ ಎದೆಗುಂದದೆ ಶತ್ರುಗಳ ದಾಳಿಯ ಮಧ್ಯೆಯೇ ಹುಗಿದಿಟ್ಟ ಸ್ಪೋಟಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಸತತ ಮೂರು ದಿನಗಳ ಕಾಲ ಮುಂದುವರೆಸಿದರು.

ಪರಮವೀರಚಕ್ರ ಬದಲಾಯಿಸಿ

ಕರ್ತವ್ಯದ ಕರೆಯನ್ನು ಮೀರಿ, ಜೀವದ ಹಂಗುತೊರೆದು ಅಪ್ರತಿಮ ಸಾಹಸ ಹಾಗೂ ಶೌರ್ಯದಿಂದ ತಮ್ಮ ತುಕಡಿಯನ್ನು ಹುರಿದುಂಬಿಸಿ ೪ನೇ ಡೊಗ್ರಾ ವೇಗವಾಗಿ ಮುನ್ನುಗ್ಗುವಂತೆ ಮಾಡಿದ ಸೆಕೆಂಡ್ ಲೆಫ್ಟಿನೆಂಟ್ ರಾಮ ರಾಘೋಬ ರಾಣೆ ಅವರಿಗೆ ದೇಶದ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿ ‘ಪರಮವೀರ ಚಕ್ರ’ ಪದಕವನ್ನು ನೀಡಲಾಯಿತು.

ನಿವೃತ್ತಿ ಬದಲಾಯಿಸಿ

ರಾಣೆಯವರು ೧೯೬೮ರ ವರೆವಿಗೂ ರಾಣೆ ಸೇನೆಯ ಸೇವೆಯಲ್ಲಿದ್ದು ಮೇಜರ್ ಆಗಿ ನಿವೃತ್ತಿ ಹೊಂದಿದರು. ‘ಪರಮವೀರ ಚಕ್ರ ಪದಕ’ ಪಡೆದ ನಂತರ ಕೂಡ ರಾಣೆಯವರಿಗೆ ಐದು ಬಾರಿ ಶ್ಲಾಘನಾ ಪತ್ರ (ಮೆನ್ಷನ್ ಇನ್ ಡಿಸ್ಪ್ಯಾಚ್) ನೀಡಲಾಯಿತು. ಇದು ಅವರ ಸೇವಾ ತತ್ಪರತೆಯನ್ನು ಎತ್ತಿ ತೋರಿಸುತ್ತದೆ.

ವಿದಾಯ ಬದಲಾಯಿಸಿ

೧೦ನೇ ಜುಲೈ ೧೯೯೪ರಂದು ಕರ್ನಾಟಕದ ಈ ಏಕೈಕ “ಪರಮವೀರ ಚಕ್ರ ಪದಕ” ಸಂಮಾನಿತ ರಾಮ ರಾಘೋಬ ರಾಣೆ ಇಹ ಲೋಕ ತ್ಯಜಿಸಿದರು. ಕಾರವಾರದಲ್ಲಿ ಅವರ ಪುತ್ಥಳಿ ಸ್ಥಾಪಿಸಲಾಗಿದೆ. ಚಿರನಿದ್ರೆಯಲ್ಲಿರುವ ಈ ‘ಪರಮ ವೀರ’ರು ನಿತ್ಯ ಸ್ಮರಣೀಯರಾಗಿದ್ದಾರೆ.

ಮಾಹಿತಿ ಕೃಪೆ ಬದಲಾಯಿಸಿ

  1. ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿ ವಸಂತ ವಾಯಿ ಅವರ 'ಕಸ್ತೂರಿ ಮಾಸಪತ್ರಿಕೆ ಜುಲೈ 2012' ಸಂಚಿಕೆಯಲ್ಲಿನ ಲೇಖನ
  2. ಇಂಗ್ಲಿಷ್ ವಿಕಿಪೀಡಿಯಾ ಲೇಖನ
  3. ಪರಮವೀರ ಚಕ್ರ ಸಂಮಾನಿತರು Archived 2013-07-14 ವೇಬ್ಯಾಕ್ ಮೆಷಿನ್ ನಲ್ಲಿ.