ರಾಕೇಶ್ ಶರ್ಮಾ (ಜನನ: ೧೩ ಜನವರಿ, ೧೯೪೯) ಅಂತರಿಕ್ಷಯಾನ ಮಾಡಿದ ಪ್ರಪ್ರಥಮ ಭಾರತೀಯ. ೩ ಏಪ್ರಿಲ್, ೧೯೮೪ರಲ್ಲಿ ಸೋವಿಯತ್ ಅಂತರಿಕ್ಷ ನೌಕೆ ಸೋಯಜ್ ಟಿ-೧೧ರಲ್ಲಿ ಪ್ರಯಾಣಿಸಿ ಸುಮಾರು ೮ ದಿನ ಅಂತರಿಕ್ಷದಲ್ಲಿ ಕಳೆದರು.

ರಾಕೇಶ್ ಶರ್ಮಾ

ಜೀವನ ಬದಲಾಯಿಸಿ

ರಾಕೇಶ್ ಶರ್ಮಾ ೧೩ ಜನವರಿ, ೧೯೪೯ರೊಂದು ಭಾರತದ ಪಂಜಾಬ್ ಪ್ರಾಂತ್ಯದ ಪಟಿಯಾಲಾ ನಗರದಲ್ಲಿ ಜನಿಸಿದರು.ಭಾರತೀಯ ವಾಯು ಸೇನೆಯಲ್ಲಿ ಪರೀಕ್ಷಕ ವೈಮಾನಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮಾ, ೨೦ ಸೆಪ್ಟೆಂಬರ್, ೧೯೮೨ರಲ್ಲಿ ಅಂತರಿಕ್ಷಯಾನಿಯಾಗಿ ಆಯ್ಕೆಯಾದರು. ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ರಾಕೇಶ್ ಶರ್ಮಾ ಮತ್ತು ವಿಂಗ್ ಕಮ್ಯಾಂಡರ್ ರವೀಶ್ ಮಲ್ಹೊತ್ರಾ ಆಯ್ಕೆಯಾಗಿ ರಷ್ಯಾದ ಯೂರಿ ಗಗಾರಿನ್ ಕೇಂದ್ರದಲ್ಲಿ ಮತ್ತು ಬೆಂಗಳೂರಿನ ಇಸ್ರೋ ಕೇಂದ್ರಗಳಲ್ಲಿ ಅಂತರಿಕ್ಷಯಾನಕ್ಕಾಗಿ ತರಬೇತಿ ಪಡೆದರು. ಕೊನೆಯಲ್ಲಿ ರಾಕೇಶ್ ಶರ್ಮಾರನ್ನು ಅಂತರಿಕ್ಷಯಾನ ಮಾಡುವ ವ್ಯಕ್ತಿ ಮತ್ತು ಅವರ ಬದಲಿ ರವೀಶ್ ಮಲ್ಹೊತ್ರಾ ಎಂದು ನಿರ್ಧರಿಸಲಾಯಿತು. ಸೋವಿಯತ್ ಗಗನಯಾತ್ರಿ ಯೂರಿ ಮ್ಯಾಲಶೇವ್ ನೇತ್ವತ್ವದಲ್ಲಿ ಹಾಗು ಗೆನಡಿ ಸ್ಟ್ರೆಕಲೋವ್ ಜೊತೆಯಲ್ಲಿ ರಾಕೇಶ್ ೩ ಏಪ್ರಿಲ್, ೧೯೮೪ರೊಂದು ಇಂದಿನ ಕಜಖಸ್ಥಾನದಲ್ಲಿರುವ ಬೈಕನೌರ್ ಅಂತರಿಕ್ಷಾ ಉಡಾವಣಾ ಕೇಂದ್ರದಿಂದ ಹಾರಿದ ಸೋಯಜ್ ಟಿ-೧೧ ಏರಿ ಸಲ್ಯೂಟ್-೭ ಅಂತರಿಕ್ಷ ನಿಲ್ದಾಣ ಸೇರಿದರು. ತಮ್ಮ ೩೫ ವರ್ಷದಲ್ಲಿ ಅಂತರಿಕ್ಷಯಾನ ಮಾಡಿದ ರಾಕೇಶ್ ಸಲ್ಯೂಟ್-೭ ಅಂತರಿಕ್ಷ ನಿಲ್ದಾಣದಲ್ಲಿ ೮ ದಿನ ಕಳೆದು ಹಲವಾರು ಪ್ರಯೋಗಗಳು ಮತ್ತು ಛಾಯಾಗ್ರಹಣ ನೆಡಸಿದರು. ಈ ಸಾಧನೆಯಿಂದಾಗಿ ಭಾರತ ಅಂತರಿಕ್ಷಯಾನ ಕೈಗೊಂಡ ೧೪ನೆ ರಾಷ್ಟ್ರ ಮತ್ತು ರಾಕೇಶ್ ಅಂತರಿಕ್ಷಯಾನ ಮಾಡಿದ ೧೩೮ನೆ ಯಾತ್ರಿ ಎಂಬ ದಾಖಲೆ ಸೃಷ್ಟಿಯಾಯಿತು. ೧೧ ಏಪ್ರಿಲ್, ೧೯೮೪ರೊಂದು ರಾಕೇಶ್ ಸೋಯಜ್ ಟಿ-೧೦ ಏರಿ ಭೂಮಿ ಸೇರಿದರು. ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅಂತರಿಕ್ಷದಿಂದ ಭಾರತ ಹೇಗೆ ಕಾಣುತ್ತದೆ ಎಂದು ಕೇಳಿದಾಗ ಕವಿ ಮುಹಮ್ಮದ್ ಇಕ್ಬಾಲರ ಸಾರೆ ಜಹಾಂ ಸೆ ಅಚ್ಛಾ ಹಿಂದೂಸ್ಥಾನ್ ಹಮಾರಾ (ಎಲ್ಲಾ ನಾಡಿಗಿಂತ ಹಿಂದೂಸ್ಥಾನ ಶ್ರೇಷ್ಟ) ಕವಿತೆಯ ಸಾಲುಗಳನ್ನು ರಾಕೇಶ್ ವಾಚಿಸಿದ ಪ್ರಸಂಗ ಬಹು ಜನಪ್ರಿಯವಾಯಿತು. ತಮ್ಮ ಸಾಧನೆಗಾಗಿ ೧೯೮೫ರಲ್ಲಿ ಭಾರತ ಸರ್ಕಾರದಿಂದ ರಾಕೇಶ್ ಅಶೋಕ ಚಕ್ರ ಪದಕ ಪಡೆದರು. ಯಾನದ ನಂತರ ವಾಯುಸೇನಾ ಪಡೆಯಿಂದ ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎ‌ಎಲ್)ಸೇರಿ ಪರೀಕ್ಷಕ ವೈಮಾನಿಕರಾಗಿ ಕಾರ್ಯ ನಿರ್ವಹಿಸಿದರು. ಕೊನೆಯಲ್ಲಿ ವಿಂಗ್ ಕಮ್ಯಾಂಡರ್ ಹುದ್ದೆ ಅಲಂಕರಿಸಿ, ೨೦೦೧ರಲ್ಲಿ ರಾಕೇಶ್ ಎಚ್‌ಎ‌ಎಲ್‌ನಿಂದ ನಿವೃತ್ತರಾದರು.

ಉಲ್ಲೇಖಗಳು ಬದಲಾಯಿಸಿ

ಬಾಹ್ಯ ಸಂಪರ್ಕ ಕೊಂಡಿಗಳು ಬದಲಾಯಿಸಿ