ರಸಾನುಭವ: ಕಾವ್ಯ, ನಾಟಕ ಮೊದಲಾದ ಸಾಹಿತ್ಯ ಕೃತಿಗಳ ಆಸ್ವಾದನೆಯಿಂದ ಸಹೃದಯರಲ್ಲಿ ಉಂಟಾಗುವ ಅನುಭವವೇ ರಸಾನುಭವ.[೧] ರಸ, ರಸಾನುಭವವನ್ನು ಕುರಿತಂತೆ ಭಾರತೀಯ ಲಾಕ್ಷಣಿಕರು ವಿಪುಲವಾಗಿ ಚರ್ಚಿಸಿದ್ದಾರೆ.[೨] ನಾಟಕಗಳಲ್ಲಿ ರಸವುಂಟಾಗುವ ಪರಿಯೆಂತು ಎಂಬ ಪ್ರಶ್ನೆಗೆ ಉತ್ತರ ಹೇಳುವುದಕ್ಕಾಗಿ ಭರತನ ನಾಟ್ಯಶಾಸ್ತ್ರದಲ್ಲಿ ಅನೇಕ ಅಧ್ಯಾಯಗಳೇ ಮೀಸಲಾಗಿವೆ. ನಟರು ರಂಗದ ಮೇಲೆ ಬಂದು ಅಭಿನಯಿಸುವುದು ಏನನ್ನು, ಯಾವ ಬಗೆಯಿಂದ, ಏಕೆ ಇತ್ಯಾದಿ ವಿವೇಚನೆಗೆ ಹೊರಟರೆ ಚಿತ್ತವೃತ್ತಿಗಳನ್ನು, ಅಂಗಾದಿ ಅಭಿನಯದಿಂದ, ಪ್ರೇಕ್ಷಕರ ಆನಂದಕ್ಕಾಗಿ ಎಂಬ ಉತ್ತರಗಳನ್ನು ಸುಲಭವಾಗಿ ಹೇಳಬಹುದು. ಚಿತ್ತವೃತ್ತಿಗಳಲ್ಲಿ ಮತ್ತೆ ವಿಭಾಗ ಮಾಡಹೊರಟರೆ ಸ್ಥಾಯಿಭಾವ, ಸಂಚಾರಿಭಾವಗಳೆಂಬ ಎರಡು ಸ್ಪಷ್ಟ ಗುಂಪುಗಳು ಕಾಣುತ್ತವೆ. `ಪ್ರೇಮ ಸ್ಥಾಯಿಭಾವ ಅಭಿವ್ಯಕ್ತವಾಗಲು ಬೇಕಾದ ಕಾರಣಗಳು-ಅನುರೂಪ ಪ್ರೇಯಸಿ ಮತ್ತು ಅನುಕೂಲ ಪ್ರಕೃತಿ ಅದರ ವಿಭಾವಗಳೆನಿಸುತ್ತವೆ. ಪ್ರೇಮದ ಕಾರ್ಯಗಳಾದ ಅಂಗಾಂಗ ವಿನ್ಯಾಸಗಳು ಕಟಾಕ್ಷ ಇತ್ಯಾದಿ ಅನುಭಾವಗಳು. ನಾಟಕದಲ್ಲಿ ನಟರು ಮುಖ್ಯವಾಗಿ ಅಭಿನಯಿಸುವುದು ವಿಭಾವ-ಅನುಭಾವ-ಸಂಚಾರಿ ಭಾವಗಳನ್ನು ಮಾತ್ರ. ನೋಡುತ್ತಿರುವ ಸಹೃದಯರಿಗೆ ತಮ್ಮ ಸ್ಥಾಯಿಭಾವಗಳ ಅನುಭವವಾಗುತ್ತದೆ, ರಸವೆನಿಸುತ್ತದೆ. ಇದನ್ನು ಸೂತ್ರಪ್ರಾಯವಾಗಿ ಭರತನು ಹೇಳಿದ್ದಾನೆ. ನಾಟಕದಲ್ಲಿ ಬರುವ ಗೀತ, ಪದ್ಯ, ಕಥಾಭಾಗ, ಪಾತ್ರಸ್ವರೂಪ, ಕುಣಿತ ಇತ್ಯಾದಿಗಳೆಲ್ಲ ರಸವೇ ಗುರಿ ಎಂದೂ ಭರತ ಹೇಳಿದ್ದಾನೆ. ವಿಶಿಷ್ಟರಸಗಳಲ್ಲಿ ಪುರುಷಾರ್ಥಕ್ಕೆ ನೇರವಾಗಿ ಪ್ರಯೋಜಕವಾದ ಶೃಂಗಾರ, ವೀರ, ಅದ್ಭುತ, ರೌದ್ರಗಳಿಗೆ ಪ್ರಾಧಾನ್ಯವನ್ನೂ ಹಾಸ್ಯ, ಕರುಣ, ಭಯಾನಕ, ಬೀಭತ್ಸಗಳಿಗೆ ಜನ್ಯತ್ವವನ್ನೂ ಅವುಗಳ ಪರಸ್ಪರ ಮೈತ್ರಿ ವಿರೋಧಗಳನ್ನೂ ವರ್ಣ - ದೈವತ್ವಗಳನ್ನೂ ಹೇಳಲಾಗಿದೆ.

ರಸ ಪ್ರತಿಪಾದನೆ ಹಿನ್ನೆಲೆ ಬದಲಾಯಿಸಿ

ಪ್ರಾಚೀನ ರಸ ಪ್ರತಿಪಾದಕರು ಬದಲಾಯಿಸಿ

  1. ಕಾವ್ಯಲಕ್ಷಣಗಳನ್ನು ಮಾತ್ರ ಬರೆಯಹೊರಟ ದಂಡಿ ಭಾಮಹಾದಿಗಳು ವ್ಯಾಪಕಾರ್ಥದ ರಸದ ಅಗತ್ಯ ಕಾವ್ಯದಲ್ಲಿಯೂ ನಾಟಕದಷ್ಟೇ ಮಟ್ಟಿಗೆ ಇರುವುದನ್ನು ಮನಗಂಡುದರಿಂದಲೇ ಅದನ್ನು ಕಾವ್ಯಗುಣವೆಂದು ವಿವರಿಸಿದರು; ಅದರ ನಿಷ್ಪತ್ತಿಗಾಗಿ ಪಂಚ ಸಂಧಿಗಳು (ವಸ್ತು ಸಂವಿಧಾನದ ಘಟಕಗಳು) ಮಹಾಕಾವ್ಯದಲ್ಲೂ ಇರಬೇಕೆಂದರು; ಉದಾತ್ತ ನಾಯಕರೇ ಇಲ್ಲಿಯೂ ಬೇಕೆಂದರು. ಆದರೆ ವರ್ಣನಾಪ್ರಧಾನದ ಕಾವ್ಯಪ್ರಕಾರಗಳಲ್ಲಿ ನಾಟಕದಂತೆ ಚಿತ್ತವೃತ್ತಿಯ ಅಭಿವ್ಯಕ್ತಿಯೇ ಮುಖ್ಯವಾಗಲಾರದೆಂಬ ಭಾವನೆಯಿಂದ ಅವರು ವಿಭಾವಾದಿಗಳ ನಿರೂಪಣೆಗೆ ಕೈಹಾಕಲಿಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ, ಪ್ರಸಂಗವಶದಿಂದ ವಿಶಿಷ್ಟ ಭಾವಗಳು ಸ್ಥಾಯಿ ಅಥವಾ ಸಂಚಾರಿ ಪರಿಪುಷ್ಟಿಗೊಂಡು ಪರಾಕಾಷ್ಠೆಯನ್ನೈದಿದರೆ, ಅವಕ್ಕೆ ವಿಶಾಲಾರ್ಥದಲ್ಲಿ ರಸವತ್, ಪ್ರೇಯೆಸ್ ಮುಂತಾದ ಅಲಂಕಾರಗಳೆಂದು ಸ್ಥಾನವಿತ್ತರು. ವಾಮನನಂತೂ ಕಾವ್ಯಗಳಲ್ಲೆಲ್ಲ ದಶರೂಪಕವೇ ಸರ್ವಶ್ರೇಷ್ಠವೆಂದು ಮುಕ್ತಕಂಠದಿಂದ ಹೇಳಿದ್ದಾನೆ. ಹಾಗೆ ಹೇಳುವಾಗ ನಾಟಕದಲ್ಲಿರುವ ದೃಶ್ಯಾಂತ ಕಾವ್ಯದಲ್ಲಿಲ್ಲವೆಂಬ ಅರಿವೂ ಅವನಿಗಿದೆ. ಪಾತ್ರಗಳ ಸ್ಥಾಯಿಭಾವಗಳ ಪರಿಪುಷ್ಟಿಯೇ ರಸವೆಂಬ ಈ ಅಭಿಪ್ರಾಯ ಕಾಳಿದಾಸ, ಮಾಘ, ಬಾಣ, ಭವಭೂತಿಗಳಿಗೂ ಸಮ್ಮತವಾಗಿದ್ದಂತೆ ತೋರುತ್ತದೆ. ಈ ಅಭಿಪ್ರಾಯದಂತೆ ಕರುಣರಸವಿರುವುದೂ ರಾಮನಲ್ಲಿ (ರಾಮಸ್ಯ ಕರುಣೋರಸಃ) ಎಂಬ ಮಾತು ತಪ್ಪಲ್ಲ; ಅದು ಕೇವಲ ಆನಂದಮಯವಲ್ಲ, ಶೋಕಸಾಂದ್ರವಾಗಿಯೂ ಇರಬಹುದು. ಶೃಂಗಾರಾದಿ ರಸಗಳು ಸುಖಾತ್ಮಕ; ಕರುಣಾದಿಗಳು ದುಃಖಾತ್ಮಕ (ಈ ಮಾತನ್ನು ವಾಮನನೂ ಸ್ಪಷ್ಟವಾಗಿ ಹೇಳಿದ್ದಾನೆ). ಆದರೂ ರಸ ಲೌಕಿಕವಲ್ಲ; ಕಾವ್ಯ ಮಾತ್ರ ನಿಷ್ಠವಾದುದರಿಂದ ಪ್ರೇಕ್ಷಣಕಾಲದಲ್ಲಿ ಪಾತ್ರಗತವಾದ ರಸವೇ ನಟನಲ್ಲಿ ಆರೋಪಿತವಾಗುತ್ತದೆ. ಈ ಪರಂಪರಾಗತ ರಸತತ್ತ್ವದ ವಿವರಣೆ ಸ್ಪಷ್ಟವಾಗಿ ಮೊದಲು ಬರುವುದು ಲೊಲ್ಲಟನ ಬರೆಹದಲ್ಲಿ.
  2. ಇದಕ್ಕಿಂತ ಮುಂದಿನ ಹೆಜ್ಜೆ ಕಾಣುವುದು ಉದ್ಭಟನ ಕಾವ್ಯಾಲಂಕಾರ ಸಂಗ್ರಹದಲ್ಲಿ. ಇವನು ನಾಟ್ಯಶಾಸ್ತ್ರವನ್ನು ಚೆನ್ನಾಗಿ ತಿಳಿದಿದ್ದವನು. ನಾಟಕದಲ್ಲಿ ಸ್ಥಾಯಿಭಾವಗಳು ವಿಭಾವಾದಿಗಳ ಅಭಿನಯದಿಂದ ಸೂಚಿಸಲ್ಪಡುವುದು ಮಾತ್ರ ಸಾಧ್ಯ. ಆದರೆ ಕಾವ್ಯದಲ್ಲಿ ಸ್ವಶಬ್ದಗಳ ವರ್ಣನಾಬಲದಿಂದಲೂ ಅದು ಸಾಧ್ಯವೆಂದು ಈತ ತಿಳಿದಿದ್ದ. ನಾಟಕದಲ್ಲಿ ವಿಭಾವಾದಿಗಳೆಲ್ಲವೂ ಕೂಡಿದ ಮೇಲೆಯೇ ರಸದ ನಿಷ್ಪತ್ತಿ; ಕಾವ್ಯದಲ್ಲಿ ಬರಿಯ ವಿಭಾವ, ಬರಿಯ ಅನುಭಾವಗಳಿಂದಲೂ ರಸಾದಿಗಳ ನಿಷ್ಪನ್ನವಾಗಬಹುದೆಂದು ಈತನ ಸಿದ್ಧಾಂತ. ಆದ್ದರಿಂದ ಈತ ಕಾವ್ಯದಲ್ಲಿ `ಪಂಚರೂಪಾ ರಸಾಃ (ಸ್ವಶಬ್ದ, ಸ್ಥಾಯಿ, ವಿಭಾವ, ಅನುಭಾವ, ಸಂಚಾರಭಾವಗಳಲ್ಲಿ ಯಾವುದೊಂದರ ಮೂಲಕ ಪ್ರತೀತವಾಗತಕ್ಕದು) ಎಂಬ ಹೊಸ ನಿರ್ಣಯವನ್ನು ಸಾರಿದ. ರುದ್ರಟನಂತೂ ಸ್ಪಷ್ಟವಾಗಿ ವಿರಸವನ್ನು ಕಾವ್ಯದೋಷವೆಂದನಲ್ಲದೆ ಮಹಾಕಾವ್ಯಾದಿಗಳಲ್ಲಿ ಹೇಗೆ ರಸಯೋಜನೆಯಾಗಬೇಕೆಂದು ವಿವರಗಳನ್ನೂ ಕೊಟ್ಟ.

ನವೀನ ರಸ ಪ್ರತಿಪಾದಕರು ಬದಲಾಯಿಸಿ

  1. ಆದರೆ ನವೀನ ಸರಣಿಗೆ ಪ್ರತಿಷ್ಠಾಪಕನಾದ ಆನಂದವರ್ಧನನಿಗೆ ಪ್ರಾಚೀನರ ಅಭಿಪ್ರಾಯ ಸರಿಗಾಣಲಿಲ್ಲ. ಒಂದು ಕಡೆ ಉಪಮಾದಿಗಳನ್ನೂ ಇನ್ನೊಂದು ಕಡೆ ರಸಾದಿಗಳನ್ನೂ ಅಲಂಕಾರ ಎಂಬ ಒಂದೇ ಮಾತಿನಿಂದ ವ್ಯವಹರಿಸುವುದನ್ನು ಈತ ಆಕ್ಷೇಪಿಸಿದ. ರಸವು ಆಲಂಕಾರ್ಯ ಅಲಂಕಾರವಲ್ಲ; ಅದು ವ್ಯಂಗ್ಯ - ವಾಚ್ಯವಲ್ಲ; ಅದು ಪ್ರಧಾನ ಗೌಣವಲ್ಲ ಎಂದು ನಿರ್ಧರಿಸಿದ. ಒಂದು ವೇಳೆ ಗೌಣವಾಗಿ ಬಂದರೆ ಆಗ ಮಾತ್ರ ಅಲಂಕಾರವಾಗಬಹುದು, ಅಷ್ಟೆ. ಈ ನೂತನ ವಿಚಾರಧಾರೆಯಲ್ಲಿ ರಸಾದಿಧ್ವನಿಗೆ ಕಾವ್ಯದ ಆತ್ಮತ್ವ ಸುಸ್ಥಿರವಾಯಿತು. ಇದರ ಗ್ರಹಣ ಸಾಮರ್ಥ್ಯವೇ ಸಹೃದಯತ್ವವೆಂಬುದೂ ಸಿದ್ಧವಾಯಿತು. ಉದ್ಭಟನ ಸ್ವಶಬ್ದ ವಾಚ್ಯತ್ವವಾದವನ್ನು ಆನಂದವರ್ಧನ ಖಂಡಿಸಿದ. ಪ್ರಬಂಧರಸಗಳ ವಿಮರ್ಶೆಯನ್ನು ಸೂಕ್ಷ್ಮವಾಗಿ ಮಾಡಿತೋರಿಸಿದ.
  2. ನಾಟ್ಯಶಾಸ್ತ್ರಕ್ಕೆ ವ್ಯಾಖ್ಯಾನ ಮಾಡಹೊರಟ ದಾರ್ಶನಿಕರಲ್ಲಿ ಶಂಕುಕನು ಲೊಲ್ಲಟನ ವಾದಕ್ಕೆ ಆಕ್ಷೇಪಣೆಗಳನ್ನೆತ್ತಿದ. ಚಿತ್ರದ ಕುದುರೆಯ ಅನುಭವ ಎಲ್ಲರಿಗೂ ಉಂಟು. ಆದರೆ ಅದು ಸತ್ಯ, ಮಿಥ್ಯೆ, ಸಂಶಯ, ಭ್ರಾಂತಿ ಯಾವುದೆನ್ನಲೂ ಕಷ್ಟ. ಹಾಗೆಯೇ ನಾಟಕ ನಟರ ಅನುಕರಣ, ಆ ಅನುಭವವೂ ವಿಶಿಷ್ಟವೇ. ಪಾತ್ರಗತವಾದ ಸ್ಥಾಯಿಭಾವದ ಅನುಭವ ನಮಗೆ ನೇರವಾಗಿ ಬರುವುದು ಅಶಕ್ಯ. ನಮ್ಮಿಂದ ಅದು ಕೇವಲ ಅನುಮಿತವಾಗಬಹುದು. ಆದುದರಿಂದ ರಸನಿಷ್ಪತ್ತಿಯೆಂದರೆ ಸಾಮಾಜಿಕರು ಮಾಡುವ ರಸದ ಅನುಮಿತಿಯೆಂದು ತಾರ್ಕಿಕ ಯುಕ್ತಿಗಳನ್ನು ಮುಂದೆ ಮಾಡಿದ.
  3. ರಸವೆಂದರೆ ಆನಂದಮೀಮಾಂಸೆಯ ಹೊರತು ತಾರ್ಕಿಕಯುಕ್ತಿ ಪ್ರದರ್ಶನವಲ್ಲವೆಂದು ಸ್ಪಷ್ಟವಾಗಿ ಮನಗಂಡ ಯಶಸ್ಸು ಭಟ್ಟನಾಯಕನದು. ರಸವು ಸುಖೈಕರೂಪವೇ ಹೊರತು ಸುಖದುಃಖ ಮಿಶ್ರಣವಲ್ಲವೆಂದು ಈತ ಮೊತ್ತಮೊದಲು ಸಾಧಿಸಿದ. ರಸವು ಸಾಮಾಜಿಕನ ಮನಸ್ಸಿನಲ್ಲಿ ಸ್ವಗತ, ಪರಗತ ಮುಂತಾದ ವಿಕಲ್ಪಗಳಿಗೆ ಪ್ರಸಕ್ತಿಯೇ ಇಲ್ಲದ ಅಲೌಕಿಕ ರೀತಿಯಲ್ಲಿ, ಸಾಧಾರಣೀಕೃತ ರೂಪದಲ್ಲಿ, ಅಸಾಧ್ಯವಾಗುತ್ತದೆ. ಅದು ಸತ್ತ್ವೋದ್ರೇಕದಿಂದ ಉಂಟಾದ ಆತ್ಮಾನಂದಕ್ಕೆ ಸಮಾನವೆನ್ನಬೇಕು. ವೈಯಕ್ತಿಕ ರಾಗ ದ್ವೇಷಾದಿಗಳಿಗೆ ಅಲ್ಲಿ ಎಡೆಯಿಲ್ಲ. ಇದು ಕಾವ್ಯಾನಂದದ ವೈಶಿಷ್ಟ್ಯ. ಆದರೆ ಈತ ಆನಂದವರ್ಧನ ಹೇಳಿದಂತೆ ರಸ ವ್ಯಂಗ್ಯವೆನ್ನಲು ಸಿದ್ಧನಾಗಲಿಲ್ಲ. ರಸವನ್ನು ವ್ಯಂಗ್ಯವೆಂದೊಪ್ಪಿದರೆ ಅದು ಕಾವ್ಯದಿಂದ ಮಾತ್ರವೇ ಹೇಗೆ ಬರುತ್ತದೆಂಬುದನ್ನು ಸರಿಯಾಗಿ ವಿವರಿಸಿದಂತಾಗುವುದಿಲ್ಲವೆಂಬುದು ಇವನ ಭಾವನೆ. ವ್ಯಂಜಕತ್ವವ್ಯಾಪಾರ ಕಾವ್ಯಕ್ಕೆ ಮಾತ್ರ ಸೀಮಿತವಲ್ಲ; ಕಾವ್ಯದಲ್ಲೇ ಅದರ ಸೌಂದರ್ಯವೆಂದರೂ ಆನಂದವರ್ಧನ ವ್ಯಂಗ್ಯ ಪ್ರಾಧಾನ್ಯವಾದಿ ಹೊರತು ವ್ಯಾಪಾರ ಪ್ರಾಧಾನ್ಯವಾದಿಯಲ್ಲ, ರಸೈಕಪ್ರವಣ ವ್ಯಾಪಾರವೇ ಕಾವ್ಯದ ಆತ್ಮವೆನ್ನಬೇಕೆಂಬುದು ಭಟ್ಟನಾಯಕನ ಅಭಿಸಂಧಿ. ಈ ವ್ಯಾಪಾರದಲ್ಲಿ ವಸ್ತು ಅಲಂಕಾರಗಳಿಗೆ ಪ್ರವೇಶವಿರಲಾರದು. ಇವನ ಪ್ರಕಾರ ಕಾವ್ಯದಲ್ಲಿರುವುದೆಲ್ಲ ಒಂದೇ ವ್ಯಾಪಾರ, ರಸಪರ ವ್ಯಾಪಾರ. ಅದರ ಮೂರು ಅಂಶಗಳೆಂದರೆ ಅಭಿಧಾ, ಭಾವಕತ್ವ (ಸಾಧರಣೀಕರಣ) ಮತ್ತು ಭೋಜಕತ್ವ (ಚರ್ವಣಾ). ಹೀಗೆ ರಸಮೀಮಾಂಸೆಯಲ್ಲಿ ಆಳವಾದ ವಿವೇಚನೆ ಭಟ್ಟನಾಯಕನಿಂದಾಯಿತು.
  4. ರಸಮೀಮಾಂಸೆಯ ಕಡೆಯ ಮಾತನ್ನು ಹೇಳಿದ ಕೀರ್ತಿ ಅಭಿನವಗುಪ್ತನದು. ಇವನು ಭಟ್ಟನಾಯಕನ ಮತದ ಮುಖ್ಯಾಂಶಗಳನ್ನೆಲ್ಲ ಧ್ವನಿತತ್ತ್ವದಲ್ಲಿಯೇ ಅಳವಡಿಸಿಕೊಂಡು ಆತ ಹೇಳುವ ನಾಮಾಂತರಗಳನ್ನು ನಿರಾಕರಿಸುತ್ತಾನೆ. ವ್ಯಂಜನಾವ್ಯಾಪಾರಕ್ಕೆ ಚರ್ವಣಾ ವಿಶ್ರಾಂತವಾದ ಸಾಮಥ್ರ್ಯವಿರುವುದನ್ನು ಸಾಧಿಸುತ್ತಾನೆ. ರಂಗದ ಮೇಲೆ ಪ್ರದರ್ಶಿತವಾಗುವುದು ಪಾತ್ರಗತ ಭಾವವೆಂದೇ ನಿಯಮವಿಲ್ಲ; ದುಷ್ಯಂತ ವರ್ಣಿಸುವ ಜಿಂಕೆಯ ಭಯವು ಪ್ರೇಕ್ಷಕರಿಗೆ ಆಸ್ವಾದ್ಯವಾಗಿ ಭಯಾನಕ ರಸವೆನ್ನಿಸಬಹುದು. ಆದ್ದರಿಂದ ಸಾಧಾರಣೀಕೃತವಾದ ಚಿತ್ತವೃತ್ತಿ ಅಲೌಕಿಕ ವಿಭಾವಾದಿಗಳಿಂದ ವ್ಯಂಗ್ಯವಾಗಿ ವರ್ಣನೀಯ ವಿಷಯದಲ್ಲಿ ತನ್ಮಯೀಭವದ ಯೋಗ್ಯತೆಯುಳ್ಳ ಸಹೃದಯರ ಮನಸ್ಸಿನಲ್ಲಿ ಹೃದಯಸಂವಾದ ಹೊಂದಿ ರಸವೆನಿಸುತ್ತದೆ. ಸ್ಥಾಯಿಭಾವಗಳು ಸಂಸ್ಕಾರ ರೂಪವಾಗಿ ಎಲ್ಲರಲ್ಲೂ ಇದ್ದೇ ಇರುತ್ತವೆ. ಇವುಗಳ ಉದ್ಬೋಧಕ್ಕೆ ಕಾವ್ಯಾದಿಗಳು ಸಹಾಯಕವಾಗುತ್ತವೆ, ಅಷ್ಟೆ; ಅಖಂಡಾನಂದರೂಪವಾದ ರಸ ಒಮ್ಮೊಮ್ಮೆ ಬಾರದಿರುವುದಕ್ಕೆ ವಿಘ್ನಗಳ ಅಸ್ತಿತ್ವವೇ ಕಾರಣ. ರಸಿಕತೆಯ ಸಂಸ್ಕಾರ ಸಾಲದೆ ಇರುವುದು, ವೈಯಕ್ತಿಕ ವಿಚಾರಗಳ ಉದಯ, ಕವಿಯ ದೋಷ ಮುಂತಾದುದೇ ವಿಘ್ನಗಳು. ಈ ವಿಘ್ನಗಳಿಲ್ಲದಿದ್ದರೆ ತಟ್ಟನೆ ರಸಾನುಭವವುಂಟಾಗುತ್ತದೆ. ಹೃದಯಕ್ಕೆ ವಿಶ್ರಾಂತಿಯುಂಟಾಗುತ್ತದೆ. ಆದ್ದರಿಂದಲೇ ಕರುಣ ರಸದಲ್ಲಿಯೂ ಸುಖಾನುಭವವುಂಟು. ಚಿತ್ತಚಾಂಚಲ್ಯವೇ ದುಃಖ, ಚಿತ್ತವಿಶ್ರಾಂತಿಯೇ ಸುಖ. ಅಭಿನವಗುಪ್ತನ ವಿವರಣೆಯಲ್ಲಿ ರಸದ ವ್ಯಾಖ್ಯೆ ತಾತ್ತ್ವಿಕ ತಳಪಾಯವನ್ನು ಪಡೆಯಿತು. ಹೀಗೆ ಅಬೋಧಪೂರ್ವವಾದ ಅಲೌಕಿಕ ಚಮತ್ಕಾರವೇ ರಸ. ಇದು ಅಖಂಡ ಆತ್ಮವಿಶ್ರಾಂತ ಸಹೃದಯನಿಗೆ ಮಾತ್ರ ವೇದ್ಯವಾಗುವಂಥದ್ದು.

ಉಲ್ಲೇಖ ಬದಲಾಯಿಸಿ

  1. ಭರತಮುನಿ, ನಾಟ್ಯಶಾಸ್ತ್ರ
  2. ತೀ.ನಂ.ಶ್ರೀಕಂಠಯ್ಯ, ೧೯೫೨. ಭಾರತೀಯ ಕಾವ್ಯ ಮೀಮಾಂಸೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ರಸಾನುಭವ&oldid=938482" ಇಂದ ಪಡೆಯಲ್ಪಟ್ಟಿದೆ