ಯೋಹಾನ್ ಟಾಲರ್ (1300-1361). ಜರ್ಮನಿಯ ಡೊಮಿನಿಕನ್ ಕ್ರೈಸ್ತ ಪಂಥದ ಭಿಕ್ಷು. ರೈನ್‍ಲ್ಯಾಂಡ್ ಅನುಭಾವಿಗಳಲ್ಲಿ ಒಬ್ಬ.

ಯೋಹಾನ್ ಟಾಲರ್ ನ ಮೂರ್ತಿ

1300ರಲ್ಲಿ ಸ್ಟ್ರ್ಯಾಸ್‍ಬರ್ಗ್‍ನಲ್ಲಿ ಹುಟ್ಟಿದ. ಮೊದಲು ಅದೇ ಊರಿನ ಡೊಮಿನಿಕನ್ ಕಾನ್ವೆಂಟಿನಲ್ಲಿಯೂ ಅನಂತರ ಕೊಲೋನಿನ ಕ್ರೈಸ್ತಮಠದಲ್ಲಿಯೂ ವಿದ್ಯಾಭ್ಯಾಸವಾಯಿತು. ಬಳಿಕ ಹುಟ್ಟಿದೂರಿನಲ್ಲೇ ಕ್ರೈಸ್ತಬೋಧಕನಾದ. ಕಾರಣಾಂತರಗಳಿಂದ ಕೆಲವು ಕಾಲ ದೇಶಾಂತರ ವಾಸಮಾಡಿ ಬಾಸೆಲ್‍ನಲ್ಲಿ ಧರ್ಮಬೊಧಕನಾದ. 1352ರಲ್ಲಿ ಸ್ಟ್ರ್ಯಾಸ್‍ಬರ್ಗಿಗೆ ಹಿಂತಿರುಗಿದ. ತಾಮಸ್ ಅಕ್ವಿನಸ್‍ನ ತತ್ತ್ವಜ್ಞಾನವನ್ನನುಸರಿಸಿ ತನ್ನ ಬೋಧನೆಯನ್ನು ರೂಪಿಸಿಕೊಂಡಿದ್ದ ಈತನ ಮೇಲೆ ಮೀಸ್ಟರ್ ಎಕ್‍ಹಾರ್ಟನ ಸಾತ್ತ್ವಿಕ ಪ್ರಭಾವ ತುಂಬ ಇತ್ತು.

ಪ್ರವಚನ ಮತ್ತು ಮತಾಭಿಪ್ರಾಯ

ಬದಲಾಯಿಸಿ

ಧರ್ಮದ ಜಿಜ್ಞಾಸೆಗಿಂತ ಅದರ ಆಚರಣೆಯಲ್ಲಿ ಈತನಿಗೆ ಹೆಚ್ಚು ಆಸಕ್ತಿ. ಆಚರಣೆಗೆ ತಾರದ ಧರ್ಮತತ್ತ್ವಗಳ ಬೋಧನೆಯಲ್ಲಿ ಏನೂ ಹುರುಳಿಲ್ಲವೆಂಬುದು ಈತನ ಅಭಿಮತ.

ರೈನ್‍ಲ್ಯಾಂಡಿನಲ್ಲಿ ಎಕ್‍ಹಾರ್ಟ್ ಮತ್ತು ಸೂಸೊ ಅವರ ಸತ್ಪ್ರಭಾವಕ್ಕೊಳಗಾದ ಒಂದೇ ಮನಸ್ಸಿನ ಸಾತ್ತ್ವಿಕರನ್ನು ತನ್ನ ಧಾರ್ಮಿಕ ಪ್ರವಚನಗಳಲ್ಲಿ ದೇವರ ಮಿತ್ರರು ಎಂದು ಕರೆಯುತ್ತ ಟಾಲರ್ ಅನೇಕ ಒಳ್ಳೆಯ ಮಾತುಗಳನ್ನು ಹೇಳಿದ್ದಾನೆ. ಈತನ ಉಪನ್ಯಾಸಗಳೂ ಪ್ರವಚನಗಳೂ ತಮ್ಮ ಸೊಗಸಾದ ಭಾಷೆಯಿಂದಲೂ ಮೋಹಕವಾದ ಗದ್ಯಶೈಲಿಯಿಂದಲೂ ಪರಿಣಾಮಕಾರಿಯಾದ ಧಾರ್ಮಿಕ ಸಾಹಿತ್ಯವಾಗಿವೆ. ನಡುಗಾಲದ ಜರ್ಮನ್ ಭಾಷೆಯಲ್ಲಿ ರಚಿತವಾದ ಈ ಪ್ರವಚನಗಳು ಮಹಾಸುಧಾರಣೆಯ ಪ್ರವರ್ತಕನೂ ಪ್ರಾಟೆಸ್ಟಂಟ್ ಕ್ರೈಸ್ತಪಂಗಡದ ಮೂಲ ಆಚಾರ್ಯಪುರಷನೂ ಆದ ಮಾರ್ಟಿನ್ ಲ್ಯೂಥರನಿಗೆ ತುಂಬ ಪ್ರಿಯವಾಗಿದ್ದುವಂತೆ.

ಎಕ್‍ಹಾರ್ಟ್, ಸೂಸೊ ಮತ್ತು ಟಾಲರ್ ರೈನ್‍ಲ್ಯಾಂಡಿನ ಶರಣತ್ರಯರೆಂದು ಹೆಸರಾಗಿದ್ದರು.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: