ಮಾರ್ಕಂಡೇಯ ಪರ್ವತ

(ಮಾರ್ಕ೦ಡೇಯ ಪರ್ವತ ಇಂದ ಪುನರ್ನಿರ್ದೇಶಿತ)

ಚಿನ್ನದ ನಾಡು ಕೋಲಾರ ಜಿಲ್ಲೆಯಲ್ಲಿರುವ ಪುರಾತನ ಪುಣ್ಯಕ್ಷೇತ್ರ ವಕ್ಕಲೇರಿ. ಅರಣ್ಯ ಹಾಗೂ ಬೆಟ್ಟಗುಡ್ಡಗಳಿಂದ ಕೂಡಿದ ಈ ಪ್ರದೇಶದಲ್ಲಿ ಪ್ರಕೃತಿ ಸೌಂದರ್ಯದಿಂದ ಶ್ರೀಮಂತವಾದ ರಮಣೀಯ ಮಾರ್ಕಂಡೇಶ್ವರಸ್ವಾಮಿ ಬೆಟ್ಟವಿದೆ. ಬೆಟ್ಟಕ್ಕೆ ಈ ಹೆಸರು ಬರಲು ಕಾರಣ ಬೆಟ್ಟದ ಮೇಲಿರುವ ಶ್ರೀ ಮಾರ್ಕಂಡೇಶ್ವರಸ್ವಾಮಿಯ ಬೃಹತ್ ದೇವಾಲಯ.

ಬಿಳಿಬೆಟ್ಟ ಭೃಗು ವಂಶಿಯಾದ ಭಾರ್ಗವ ಮಾರ್ಕಂಡೇಯ ನದಿಯ ಉಗಮ ಸ್ಥಾನವಾಗಿದ್ದು, ಬಂಗಾರಪೇಟೆ ತಾಲ್ಲೂಕು ಬೂದಿಕೋಟ ಬಳಿ ಶ್ರೀ ಮಾರ್ಕಂಡೇಯ ಜಲಾಶಯವೇ ಇದೆ.

ವಕ್ಕಲೇರಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಆರಾಧ್ಯ ದೈವವಾಗಿ ಹಾಗೂ ಭಾರ್ಗವ ಪದ್ಮಶಾಲಿ ಜನಾಂಗದ ಕುಲದೈವವಾದ ಮಾರ್ಕಂಡೇಶ್ವರ ಸ್ವಾಮಿ ಅವತಾರದ ಬಗ್ಗೆ ಪುರಾಣದಲ್ಲಿ ಒಂದು ಕಥೆಯಿದೆ.

ಬ್ರಹ್ಮ ಮಾನಸ ಪುತ್ರನಾದ ಭೃಗು ಮಹರ್ಷಿಯ ವಂಶಸ್ಥನಾದ ಮೃಕಂಡು ಮಹಾಮುನಿ ಹಾಗೂ ಮರುಧ್ವತಿ ದೇವಿ ದಂಪತಿಗೆ ಬಹಳ ಕಾಲ ಮಕ್ಕಳಿಲ್ಲದಿದ್ದರಿಂದ ಮೃಕಂಡು ಪುತ್ರಾರ್ಥಿಯಾಗಿ ಪರಮೇಶ್ವರನನ್ನು ಕುರಿತು ತಪಸ್ಸು ಮಾಡಿದ. ತಪಸ್ಸಿಗೆ ಮೆಚ್ಚಿದ ಈಶ್ವರ ಪ್ರತ್ಯಕ್ಷನಾಗಿ ಜ್ಞಾನಿಯೂ ದೈವಭಕ್ತನೂ ಆದ ಅಲ್ಪಾಯುಷಿ ಮಗ ಬೇಕೋ ಅಥವಾ ದೀರ್ಘಾಯುಷಿಯಾದ ಲೋಕಕಂಟಕನಾದ ಮಗ ಬೇಕೋ ಎಂದು ಕೇಳಿದಾಗ, ಮೃಕಂಡು ಅಲ್ಪಾಯುಷಿಯಾದರೂ ಜ್ಞಾನಿಯಾದ ಮಗನೇ ಬೇಕೆನ್ನುತ್ತಾನೆ. ಹೀಗೆ ಅಲ್ಪಾಯುಷಿಯಾಗಿ ಜನಿಸಿದವನೇ ಮಾರ್ಕಂಡೇಯ.[]

ತಾನು ಅಲ್ಪಾಯು ಎಂದು ತಿಳಿದ ಭಾರ್ಗವ ಮಾರ್ಕಂಡೇಯ, ತನ್ನ ತಂದೆ, ತಾಯಿಗಳ ಸಂತುಷ್ಟಿಗಾಗಿ ಶಿವನನ್ನು ಕುರಿತು ತಪವನ್ನಾಚರಿಸುತ್ತಾನೆ. ಆತನ ಆಯುಶ್ ಮುಗಿದ ದಿನ ಈಗಿನ ವಕ್ಕಲೇರಿಯ ಬೆಟ್ಟದ ಶಿಖರದಲ್ಲಿ ಮಾರ್ಕಂಡೇಯ ಶಿವಪೂಜೆಯಲ್ಲಿದ್ದಾಗ, ಅವನ ಪ್ರಾಣ ಕೊಂಡೊಯ್ಯಲು ಬಂದ ಯಮಧರ್ಮ, ಅವನ ಕೊರಳಿಗೆ ಪಾಶ ಹಾಕಿದಾಗ ಮಾರ್ಕಂಡೇಯ ಶಿವಲಿಂಗ ತಬ್ಬಿ ಹಿಡಿಯುತ್ತಾನೆ. ಯಮ ಬಲವಂತ ಮಾಡಿ ಎಳೆದಾಗ, ಲಿಂಗದಿಂದ ಕೋಪವಿಷ್ಟನಾಗಿ ಎದ್ದ ಶಿವ,ತನ್ನ ತ್ರಿಶೂಲದಿಂದ ಯಮನನ್ನೇ ಕೊಲ್ಲಲು ಮುಂದಾಗುತ್ತಾನೆ. ನಂತರ ಶಾಂತನಾಗಿ ಮಾರ್ಕಂಡೇಯನಿಗೆ ಚಿರಂಜೀವಿಯಾಗೆಂದು ವರ ನೀಡುತ್ತಾನೆ.

ಯಮನನ್ನು ಗೆದ್ದು ಚಿರಂಜೀವಿಯಾದ ಭಾರ್ಗವ ಮಾರ್ಕಂಡೇಯನನ್ನು ರಕ್ಷಿಸಲು ಭುವಿಯಲ್ಲಿ ಅವತರಿಸಿದ ಶಿವ ಇದೇ ಬೆಟ್ಟದಲ್ಲಿ ಮಾರ್ಕಂಡೇಶ್ವರನಾಗಿ ಬೆಟ್ಟವೇರಿ ಬರುವ ಭಕ್ತರನ್ನು ಸಲಹುತ್ತಿದ್ದಾನೆ.

ಮಾರ್ಕಂಡೇಯನಿಗೆ ಯಮನ ಪಾಶದಿಂದ ವಿಮುಕ್ತಿಗೊಳ್ಳುವ ವರ ನೀಡಿದ ಕಾರಣದಿಂದ ಇದಕ್ಕೆ ‘ ವರಪುರಿ “ ಎಂದು ಹೆಸರು ಬಂತು ಎಂದು ಸ್ಕಾಂದ ಪುರಾಣದಲ್ಲಿ ಉಲ್ಲೇಖವಿದೆ. ಕ್ರಮಕಪುರಿ ಎಂದೂ ಕರೆಸಿಕೊಂಡಿದ್ದ ಈ ಊರು ನಂತರ ವಕ್ಕಲೇರಿಯಾಯಿತು ಎಂದು ಸ್ಥಳೀಯರು ಹೇಳುತ್ತಾರೆ.

ಈ ದೇವಾಲಯವು ವಿಶಾಲವಾದ ಏಕಶಿಲಾ ಬೆಟ್ಟದ ಮೇಲೆ ನಿರ್ಮಿತವಾಗಿದ್ದು, ಈ ಬೃಹತ್ ವಿಶಾಲವಾದ ಬಂಡೆಯಲ್ಲಿ ಒಂದು ಅಡಿ ಅಗಲದ ಸುಮಾರು ಉದ್ದವಾದ ಕಪ್ಪಾದ ಪಟ್ಟಿಯು ಬಂಡೆಯ ದಕ್ಷಿಣ ಪಾರ್ಶ್ವದಿಂದ ಗರ್ಭಾಂಕಣದವರೆಗೆ ಬಂಡೆಯಲ್ಲಿ ಮೂಡಿ ಬಂದಿದೆ. ಇದರ ಬಗ್ಗೆ ಯಮಧರ್ಮರಾಯನು ಮಾರ್ಕಂಡೇಯನಿಗೆ ಯಮಪಾಶವನ್ನು ಹಾಕಿ ಎಳೆದ ಕುರುಹುಗಳು ಬೆಟ್ಟದ ಮೇಲಿರುವ ಬಾವಿಯಲ್ಲಿ ಇಂದಿಗೂ ಕಾಣಿಸುತ್ತದೆ ಎನ್ನಲಾಗುತ್ತದೆ. ಯಮ ಬಂದು ಎಳೆದಾಗ ಮಾರ್ಕಂಡೇಯ ಶಿವಲಿಂಗವನ್ನು ಕೈಗಳಿಂದ ತಬ್ಬಿ ಹಿಡಿದಾಗ ಮೂಡಿತೆನ್ನಲಾದ ಉಗುರಿನ ಗುರುತುಗಳು ಶಿವಲಿಂಗದ ಮೇಲಿವೆ.

೧೨ನೇ ಶತಮಾನದ ಆದಿಯಲ್ಲಿ ಪ್ರಾರಂಭವಾದ ದೇವಾಲಯ ನಿರ್ಮಾಣ ಕಾರ್ಯ ೧೬ನೇ ಶತಮಾನದವರೆವಿಗೆ ನಡೆಯಿತೆಂಬುದು ಇತಿಹಾಸದಿಂದ ವೇದ್ಯವಾಗುತ್ತದೆ. ಚೋಳರು, ವಿಜಯನಗರದ ಅರಸರು ದೇವಾಲಯ ಅಭಿವೃದ್ಧಿ ಪಡಿಸಿದ್ದಾರೆ. ಇತ್ತೀಚೆಗೆ ೧೯೭೦ರಲ್ಲಿ ಶ್ರೀ ಪಟೇಲ್ ವೆಂಕಟರಾಮೇಗೌಡ ರವರು ಶ್ರಮವಹಿಸಿ ಬೆಟ್ಟ ಹತ್ತಿಬರಲು ಸುಲಭವಾದ ಮೆಟ್ಟಲುಗಳನ್ನು ನಿರ್ಮಿಸಿದ್ದಾರೆ.[]

೧೯೮೮ರಲ್ಲಿ ದೇವಾಲಯಕ್ಕೆ ಗೋಪುರ ನಿರ್ಮಾಣ ಕಾರ್ಯ ಆರಂಭವಾಗಿ, ೧೯೯೦ರಲ್ಲಿ ಅನಾವರಣಗೊಂಡಿತು. ಈ ಸಮಾರಂಭದಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ನೀಲಂ ಸಂಜಿವರೆಡ್ಡಿ ಮತ್ತಿತರರು ಪಾಲ್ಗೊಂಡಿದರು. ೧೯೮೭ರಲ್ಲಿ ಕೆಲವು ಕಿಡಿಗೇಡಿಗಳು ಇಲ್ಲಿದ್ದ ಪುರಾತನ ಸುಬ್ರಮಣ್ಯ, ಪಾರ್ವತಿ, ಗಣಪತಿ ಹಾಗೂ ಶ್ರೀವಳ್ಳಿ ವಿಗ್ರಹಗಳನ್ನು ಭಗ್ನಗೊಳಿಸಿದಾಗ, ವೇಮಗಲ್ ಶಾಸಕರಾಗಿದ್ದ ಶ್ರೀ ಬೈರೇಗೌಡರು ಹೊಸ ವಿಗ್ರಹಗಳನ್ನು ಕೆತ್ತನೆ ಮಾಡಿಸಿ, ೧೯೯೦ರಲ್ಲಿ ಪುನರ್ ಪ್ರತಿಷ್ಠೆ ಮಾಡಿಸಿದರು. ಈ ದೇವಸ್ಥಾನಕ್ಕೆ ಮಹಾದ್ವಾರ, ಬಹೃತ್ ವಿಶಾಲವಾದ ಬಸವಮಂಟಪ, ಕಲ್ಯಾಣ ಮಂಟಪ, ಸುಖನಾಸಿ, ನವರಂಗ, ಯಾಗ ಮಂಟಪ, ಗರ್ಭಾಂಕಣವಿದೆ. ವಿಶಾಲ ಪ್ರಕಾರದಲ್ಲಿ ಮಾರ್ಕಂಡೇಶ್ವರ ಸ್ವಾಮಿಯವರ ಮೂಲಸ್ಥಾನದ ಸುತ್ತಲೂ ವೀರಭದ್ರಸ್ವಾಮಿ, ಸಪ್ತಮಾತೃಕೆಯರು, ವಿಘ್ನೇಶ್ವರಸ್ವಾಮಿ, ಸುಬ್ರಹ್ಮಣ್ಯೇಸ್ವಾಮಿ, ಪ್ರಸನ್ನ ಪಾರ್ವತಾದೇವಿ ಅಮ್ಮನವರು, ಚಂಡಿಕೇಶ್ವರಸ್ವಾಮಿ, ವೆಂಕಟರಮಣ ಸ್ವಾಮಿ, ಕಾಲಭೈರವಸ್ವಾಮಿ ದೇವರುಗಳ ಗುಡಿಗಳಿವೆ.

ನವರಂಗದಲ್ಲಿರುವ ದ್ವಾರ ಪಾಲಕರ ವಿಗ್ರಹಗಳು ಗಮನಸೆಳೆಯುವಂತಿವೆ. ಈ ದೇವಾಲಯದ ಕಲ್ಯಾಣ ಮಂಟಪ ಹಾಗೂ ನವರಂಗದಲ್ಲಿರುವ ಕಂಬಗಳು ಅತಿ ಸುಂದರವಾದ ಸೂಕ್ಷ್ಮ ಕೆತ್ತನೆಯಿಂದ ಮನಸೂರೆಗೊಳ್ಳುತ್ತವೆ.

ಮಹಾ ಶಿವರಾತ್ರಿ ದಿನ ಎರಡು ದಿನ ಬೆಟ್ಟದ ಮೇಲೆ ಜಾತ್ರೆ ನಡೆಯುತ್ತದೆ. ಜಾತ್ರೆಯ ಸಂದರ್ಭದಲ್ಲಿ ಮಾರ್ಕಂಡೇಶ್ವರ ಸ್ವಾಮಿಯವರ ಬ್ರಹ್ಮರಥೋತ್ಸವ ಹಾಗೂ ಪದ್ಮಶಾಲಿ ಸಮಾಜದವರಿಂದ ಧ್ವಜಾರೋಹಣ, ಪರಮೇಶ್ವರನಿಗೆ ನಡೆಯುವ ಹತ್ತು ತಲೆ ಇಪ್ಪತ್ತು ಕೈಗಳ ರಾವಣ ವಾಹನೋತ್ಸವ ವಕ್ಕಲೇರಿ ಗ್ರಾಮದಲ್ಲಿ ನೆರವೇರುತ್ತದೆ. ಇದನ್ನು ನೋಡಲು ಎರಡು ಕಣ್ಣು ಸಾಲದು ಎಂದರೆ ಅತಿಶಯೋಕ್ತಿಯಲ್ಲ. ಆಷಾಡ ಶುದ್ಧ ತದಿಗೆಯಂದು ಬೆಟ್ಟದ ಮೇಲೆ ಶ್ರೀ ಮಾರ್ಕಂಡೇಯಸ್ವಾಮಿಯ ಜಯಂತಿ ನಡೆಯುತ್ತದೆ.

ಈ ದೇವಾಲಯದ ಬೆಟ್ಟದ ಸುತ್ತಲೂ ೧೭೩೦ ಎಕರೆ ಜಮೀನು ಅರಣ್ಯ ಇಲಾಖೆಯ ಸ್ವಾಧೀನದಲ್ಲಿದ್ದು, ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದೆ.ಈಗ ಶ್ರೀ ಮಾರ್ಕಂಡೇಶ್ವರ ದೇವಾಲಯ ಅಭಿವೃದ್ದಿ ದತ್ತಿ (ರಿ) ರವರು ದೇವಾಲಯದ ಅಭಿವೃದ್ದಿ ಕಾರ್ಯಗಳು ಹಾಗೂ ನಿತ್ಯ ಪೂಜೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಈ ದೇವಾಲಯ ಹಿಂಭಾಗದ ಸುಮಾರು ೩ ಪರ್ಲಾಂಗ್ ದೂರದಲ್ಲಿ ಬಿಳಿ ಬೆಟ್ಟವಿದ್ದು ಇಲ್ಲಿ ವೀರಾಂಜನೇಯ ದೇವಾಲಯ ಇದೆ. ಈ ಪ್ರದೇಶಕ್ಕೆ ರಾಮಾಯಣ ಕಾಲದಲ್ಲಿ ಲವಕುಶ ಹಾಗೂ ಸೀತಾರಾಮರು ಬಂದಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿಯ ಒಂದು ಗುಹೆಯಲ್ಲಿ ಮಕ್ಕಳು ಮಲಗುವಂತಹ ಶಿಲಾ ತೊಟ್ಟಿಲುಗಳಿದ್ದು, ಇಲ್ಲಿ ಲವಕುಶರು ಮಲಗುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.

ಉಲ್ಲೇಖಗಳು

ಬದಲಾಯಿಸಿ