ಮಲ್ಲಿಕಾ ಕಡಿದಾಳ್ ಮಂಜಪ್ಪ

(ಮಲ್ಲಿಕಾ ಇಂದ ಪುನರ್ನಿರ್ದೇಶಿತ)

ಮಲ್ಲಿಕಾ ಕಡಿದಾಳ್ ಮಂಜಪ್ಪ ಇವರು ಚಿಕ್ಕಮಗಳೂರಿನಲ್ಲಿ ೧೯೨೦ ಜೂನ್ ೧೬ರಂದು ಜನಿಸಿದರು. ಇವರ ತಾಯಿ ಪಾರ್ವತಮ್ಮ ; ತಂದೆ ಬಾಗೆಮನೆ ಚೆನ್ನೇಗೌಡ. ಇವರು ೬೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಕೆಲವನ್ನು ಇಲ್ಲಿಕೊಡಲಾಗಿದೆ:

ಮಲ್ಲಿಕಾ ಬದಲಾಯಿಸಿ

ಮಹಿಳೆಯರು ಸಾಂಸ್ಕೃತಿಕ, ಸಾಹಿತ್ಯಾರಂಗದಲ್ಲಿ ಹೆಚ್ಚು ಪ್ರವೇಶ ಪಡೆಯದಿದ್ದ ದಿನಗಳಲ್ಲಿ ತಿರುಮಲಾಂಬ, ಕಲ್ಯಾಣಮ್ಮ, ಕೊಡಗಿನ ಗೌರಮ್ಮ- ಮೊದಲಾದ ಸ್ತ್ರೀಯರು ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಕಡೆಗೆ ಆಸಕ್ತಿ ತೋರಿದರು. ‘ಹೆಣ್ತನ’ ನಿರ್ಲಕ್ಷ್ಯಕ್ಕೆ ಒಳಗಾಗಬೇಕಾದ ಪರಿಕಲ್ಪನೆಯ, ಬದಲಿಗೆ ಅದು ಸಮಾಜದ, ಬದುಕಿನ ಮತ್ತೊಂದು ಪ್ರಜ್ಞೆಯನ್ನು ದಾಖಲಿಸುವ ವಿಚಾರ ಎಂದು ಈ ಮಹಿಳೆಯರು ಭಾವಿಸಿದರು. ಬಹುಶಃ ನಮ್ಮ ಆಧುನಿಕ ಕನ್ನಡದ ಮೊದಲ ತಲೆಮಾರಿನ ಮಹಿಳೆಯರು ಇವರು ಎಂದು ಗುರುತಿಸಿಕೊಳ್ಳಬಹುದು. ಅದಾದ ನಂತರ ಸ್ವಾತಂತ್ರೋತ್ತರದಲ್ಲಿ ದಿಟ್ಟವಾಗಿ ಬರವಣಿಗೆಯನ್ನು ಪ್ರಾರಂಭಿಸಿದ ಡಾ.ಎಂ.ಕೆ ಇಂದಿರಾ, ತ್ರಿವೇಣಿ, ವಾಣಿ, ಶ್ರೀಮತಿ ರಾಜವಾಡೆ- ಮೊದಲಾದ ಲೇಖಕಿಯರು ಸಾಹಿತ್ಯದ ಜನಪ್ರೀಯತೆಗೆ ಕಾರಣರಾದರು. ಈ ಹಂತ ಹೆಣ್ಣಿನ ಮನಸ್ಸಿನ ಅನಾವರಣದ ಎರಡನೇಯ ಘಟ್ಟ ಎಂದು ಕರೆಯಬಹುದೇನೋ? ಇಂತಹ ಒಂದು ಘಟ್ಟದಲ್ಲಿ ಕಾಣಿಸಿಕೊಳ್ಳುವ ಲೇಖಕಿ, ಶ್ರೀಮತಿ ಮಲ್ಲಿಕಾ ಅವರು.

ಹುಟ್ಟು ಮತ್ತು ಬೆಳವಣಿಗೆ ಬದಲಾಯಿಸಿ

ತಂದೆ ಬಾಗಮನೆ ಚೆನ್ನೇಗೌಡ, ತಾಯಿ ಪಾರ್ವತಮ್ಮ ನವರ ಹನ್ನೊಂದು ಮಕ್ಕಳಲ್ಲಿ ನಾಲ್ಕನೇಯವರಾಗಿ ಜನಿಸಿದ ಲಕ್ಷ್ಮಿದೇವಿ, ಖ್ಯಾತ ವಕೀಲರು, ಸ್ವತಃ ಲೇಖಕರು, ರಾಜಕಾರಣಿಗಳೂ ಆದ ಕಡಿದಾಳ್ ಮಂಜಪ್ಪನವರನ್ನು ಕೈಹಿಡಿದು ‘ಮಲ್ಲಿಕಾ’ ಎಂಬ ಕಾವ್ಯನಾಮದಿಂದ ಬರವಣಿಗೆಯ ಬದುಕನ್ನು ಪ್ರಾರಂಭಿಸಿದರು. ಬಾಗಮನೆ ಕುಟುಂಬದಲ್ಲಿ ಸುಸಂಸ್ಕೃತ ವಾತಾವರಣವಿದ್ದರೂ, ಮಲ್ಲಿಕಾ ಅವರಿಗೆ ಶಾಲೆಗಳು ಕಾಫಿತೋಟದಿಂದ ತುಂಬಾ ದೂರದಲ್ಲಿ ಇದ್ದುದ್ದರಿಂದ ಶಾಲಾಶಿಕ್ಷಣ ದೊರಕಲಿಲ್ಲ. ಶಾಲೆಗೆ ಹೋಗುವ ಸಾಧ್ಯತೆಗಳಿಲ್ಲದಿದ್ದರೂ, ಮನೆಯಲ್ಲಿಯೇ ಓದು, ಬರಹ. ಒಂಭತ್ತರ ಬಾಲೆ ಲಕ್ಷ್ಮಿಗೆ ಸಿಕ್ಕಿದ ಯಾವುದೊ ಒಂದು ಕಾದಂಬರಿ, ಮುಂದೆ ಆಕೆ ಬರಹದ ಬದುಕಿನತ್ತ ಹೊರಳಲು ಪ್ರೇರಣೆ ನೀಡಿತು. ಇಪ್ಪತ್ತರ ಹರೆಯದಲ್ಲಿ ಮದುವೆ, ಸಂಸಾರದ ಜವಾಬ್ದಾರಿ, ಮಕ್ಕಳು- ಇವೆಲ್ಲದರ ನಡುವೆ ಕೇವಲ ಅಧ್ಯಯನ, ಓದು. ಪತಿಯದು ರಾಜಕೀಯದ ಬದುಕು, ಈಕೆಯದು ಸಾಹಿತ್ಯಿಕ ಬದುಕಾಯಿತು. ಈ ಅವಧಿಯಲ್ಲಿಯೇ ಮಲ್ಲಕಾ ಅವರು ಕನ್ನಡದ ಎಲ್ಲ ಹಿರಿಯ ಕವಿಗಳು, ಬಂಗಾಳಿ ಕಾದಂಬರಿಕಾರರಾದ ಶರಶ್ಚಂದ್ರ, ಬಂಕಿಮಚಂದ್ರರ ಕಾದಂಬರಿಗಳನ್ನು ಚೆನ್ನಾಗಿ ಓದಿಕೂಂಡರು. ಜೊತೆ ಜೊತೆಗೇ ಕನ್ನಡದ ಕವಿ ಕುವೆಂಪುರವರ ದಟ್ಟ ಪ್ರಭಾವ. ಹಾಗೆಯೇ ತಾಯಿ ಪಾರ್ವತಮ್ಮನವರು ಹೇಳುತ್ತಿದ್ದ ಜನಪದ ಕತೆಗಳೂ ಅತೀವವಾದ ಪರಿಣಾಮ ಬೀರಿದವು. ಜೊತೆ ಜೊತೆಗೇ ಹಳಗನ್ನಡ ಸಾಹಿತ್ಯದ ಮೇಲೆ ಅಪಾರ ಒಲವು.

ಕಾದಂಬರಿಗಳು ಬದಲಾಯಿಸಿ

1966ರಿಂದ ಬರವಣಿಗೆ ಪ್ರಾರಂಭಿಸಿದ ಮಲ್ಲಕಾ ಅವರು ಕಾದಂಬರಿ, ಸಣ್ಣಕತೆ, ಕವಿತೆ ಪೌರಾಣಿಕ ನಾಟಕ, ಗದ್ಯ ಕತೆ, ಉಪನಿಶತ್ ಕಾವ್ಯ, ಶಿಶು ಸಾಹಿತ್ಯ, ಕೊನೆಗೆ ಮಹಾಕಾವ್ಯ- ಕನ್ನಡ ಸಾಹಿತ್ಯದ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಪ್ರವೇಶಿಸಿ ಕೃತಿ ರಚನೆ ಮಾಡಿದ ಲೇಖಕಿಯಾಗಿದ್ದಾರೆ. ಒಟ್ಟು 55 ವಿವಿಧ ರೀತಿಯ ಕೃತಿಗಳನ್ನು ರಚಿಸಿರುವ ಮಲ್ಲಿಕಾ ಅವರು ತಡವಾಗಿಯೇ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದವರು. ಇವರ ಮೊದಲನೇಯ ಕೃತಿ ‘ಜೀವನ ಗಂಗಾ’, ದೇಶಕ್ಕೆ ಸ್ವಾತಂತ್ರ್ಯ ಬಂದು ಅನೇಕ ವರ್ಷಗಳೇ ಉರುಳಿದರೂ, ನಮ್ಮ ದೇಶದ ಹೆಣ್ಣಿನ ಬದುಕಿನಲ್ಲಿ ಇನ್ನೂ ಬರಬೇಕಾಗಿರುವ ಸ್ವಾತಂತ್ರ್ಯ, ಅವಳ ದಾಸ್ಯದ ಸ್ಥಿತಿಯನ್ನು ಕುರಿತು ಹೇಳುತ್ತದೆ. ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ, ಬಂದೊದಗಿರುವ ಸ್ವಾತಂತ್ರ್ಯ ದಾರಿದ್ರ್ಯ, ಆರ್ಥಿಕ ದಾರಿದ್ರ್ಯ ಅದಕ್ಕೆ ಕಾರಣವಾಗಿರುವ ಪುರುಷನ ದೌರ್ಜನ್ಯ, ಅಮಾನವೀಯ ನೀತಿಗಳನ್ನು ಪ್ರಶ್ನಿಸುತ್ತಾರೆ. ‘ವಂದೇ ಮಾತರಂ’ ಕೃತಿಯಲ್ಲಿ ಮಲ್ಲಿಕಾ ರವರು ರಾಜಕೀಯ ಚಿತ್ರಣಗಳನ್ನು ನೀಡುತ್ತಾರೆ. ರಾಜಕಾರಣ, ರಾಜಕೀಯ ಬದುಕನ್ನು ಒಬ್ಬ ರಾಜಕೀಯ ನಾಯಕರ ಪತ್ನಿಯಾಗಿ ಬಹು ಹತ್ತಿರದಿಂದ ಕಂಡಿರುವ ಮಲ್ಲಿಕಾ ಅವರು ಇದರ ಬಗೆಗೆ ತುಂಬಾ ಖಚಿತವಾಗಿ ಬರೆಯುತ್ತಾರೆ. ಕನ್ನಡದಲ್ಲಿ ವೈದ್ಯಕೀಯ ಬದುಕನ್ನು ಅತ್ಯಂತ ಸಮಗ್ರವಾಗಿ ಮೊಟ್ಟ ಮೊದಲ ಬಾರಿಗೆ ಚಿತ್ರಿಸಿದ್ದೇನೆ’ ಎಂದು ಸ್ವತಃ ಲೇಖಕಿಯೇ ಹೇಳಿಕೊಳ್ಳುವ ‘ಡಾ. ಅಘೋರ’ ಎಂಬ ಕಾದಂಬರಿಯಲ್ಲಿ ವೈದ್ಯಕೀಯ ಕಾಲೇಜುಗಳು, ಅಲ್ಲಿನ ವಿದ್ಯಾರ್ಥಿ ಜೀವನ, ದಾದಿಯರು ವೈದ್ಯರ ನಡುವಿನ ಸಂಬಂಧ- ಇವುಗಳನ್ನು ಹೇಳಿದರೂ, ಡಾ.ಅಘೋರನ ಬದುಕನ್ನು ಹೇಳುವುದೇ ಮುಖ್ಯವಾಗಿ ಉಳಿದ ಪ್ರಸಂಗಗಳು ಕೇವಲ ಪ್ರಾಸಂಗಿಕವಾಗುತ್ತದೆ. ವೈದ್ಯನೊಬ್ಬ ಕೇವಲ ವ್ಯಕ್ತಿ ಒಬ್ಬನ ಆರೋಗ್ಯಕ್ಕಷ್ಟೇ ಜವಾಬ್ದಾರನಲ್ಲ, ಸಮಾಜದ ಸ್ವಾಸ್ಥ್ಯಕ್ಕೂ ಕಾರಣನಾಗುತ್ತಾನೆ ಎಂಬ ವಸ್ತುವನ್ನು ಆಧರಿಸಿದ ಈ ಕಾದಂಬರಿಯಲ್ಲಿ ಪ್ರಮುಖವಾಗಿ ಮಲ್ಲಿಕಾ ಅವರು ಯಾವುದೇ ವೃತ್ತಿಯಲ್ಲೂ ಮಾನವೀಯತೆ ಮುಖ್ಯ, ಎಂದು ಹೇಳುತ್ತಾರೆ. ಇದರ ಮುಂದುವರಿಕೆ ಡಾ. ಕಮಲೇಶ್ ಕಾದಂಬರಿಯಲ್ಲಿ ಕಾಣಿಸಿಕೂಳ್ಳುತ್ತದೆ. ಅವರ ‘ಮನೋನ್ಮಣಿ’ ಕಾದಂಬರಿಯಲ್ಲಿ ಮುಖ್ಯವಾಗಿ ದಯೆ, ಸೇವಾ ಮನೋಭಾವ ಮಾನವ ಧರ್ಮದ ಸತ್ವವಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾರೆ. ಇದರ ನಾಯಕಿ ಮನೋನ್ಮಣಿಯ ದ್ವೇಷಾಸೂಯೆಗಳಿಗೆ ಒಳಗಾದ ಹಗೆಗಳಿಂದ ಮನೆಗೆ ಬೆಂಕಿ ಬಿದ್ದು ಹತ್ತಿ ಉರಿದರೂ, ಆಕಸ್ಮಿಕವಾಗಿ ಆಕೆ ಪಾರಾಗಿತ್ತಾಳೆ. ಕ್ರೈಸ್ತರ ಆಶ್ರಯದಲ್ಲಿ ಬೆಳೆದು ಸಮಾಜಸೇವಕಿಯಾಗಿ ಸಮಾಜದ ಋಣವನ್ನು ತೀರಿಸಲು ಮುಂದಾಗುವುದು ಕಾದಂಬರಿಯ ಮುಖ್ಯ ಕಥಾವಸ್ತು. ಈ ಕಾದಂಬರಿಯ ಮುಖ್ಯ ಕಥಾಕೇಂದ್ರದಲ್ಲಿ ಸ್ವಾತಂತ್ರ್ಯ ಪೂರ್ವದ ಕೋಮು ಗಲಭೆಯ ವಿಚಾರಗಳು ಪ್ರಸ್ತಾಪಿತವಾಗಿದೆ. ಕುಟುಂಬದ ಹಿರಿಯ ಕುಡುಕನಾಗಿ, ದುಶ್ಚಟಗಳ ದಾಸನಾದಾಗ, ಹೆಣ್ಣಿಗೆ ಒದಗುವ ದುರಂತ ಕುಟುಂಬದ ಅನಾಥೆಯ ಬಗೆಗೆ ‘ಸಂತ್ರಾಸಿನಿ’ ಕಾದಂಬರಿ ಹೇಳುತ್ತದೆ. ಈ ಕಾದಂಬರಿಯ ಹೆಣ್ಣುಗಳಾದ ಗೌರಮ್ಮಾ ಆಗಲಿ, ಶ್ಯಾಮಲಾ ಆಗಲಿ ಶಕೀಲಾ ಆಗಲಿ ಪುರುಷನ ದೌರ್ಜನ್ಯಕ್ಕೆ, ಅವನ ಶೋಷಣೆಗೆ, ದಬ್ಬಾಳಿಕೆಗೆ ಒಳಗಾದವರೇ. ಶಕೀಲಾ ಮಾರ್ಕ್ಸ್ ಸಿದ್ಧಾಂತದ ಬಗೆಗೆ ಆಸಕ್ತಿ ತೋರಿದರೂ, ಸಂಪ್ರದಾಯ ಮತ್ತು ಹೊಸ ಬದುಕು ಇವೆರಡನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲಾರಳು. ಮಲ್ಲಿಕಾ ಅವರ ಕಾದಂಬರಿಗಳ ಮೇಲೆ ಬಂಗಾಳಿ ಕಾದಂಬರಿಗಳ ದಟ್ಟವಾದ ಪ್ರಭಾವವಿದೆ.

ಕಥೆಗಳು ಬದಲಾಯಿಸಿ

ಮಲ್ಲಿಕಾ ಅವರು ಸಾಕಷ್ಟು ಸಣ್ಣಕಥೆಗಳನ್ನು ರಚಿಸಿದ್ದಾರೆ. ‘ಕಮಲಾನಿಕಥಾ’, ‘ಶ್ರೀ ಹರ್ಷಲಾ’, ‘ಮಣಿಕರ್ಣಿಕಾ’, ಫಾಲ್ಗುಣೀ ಪರ್ವ’, ವೈಶಾಖೀ ಪರ್ವ’- ಮುಂತಾದವು ಅವರ ಸಣ್ಣ ಕಥಾಸಂಕಲನಗಳು. ‘ಶ್ರೀಮುಖೀ’ ಕಥಾಸಂಕಲನದ ಅನೇಕ ಕಥೆಗಳು ಪ್ರಭಾವಿತ ಕಥೆಗಳಾಗಿವೆ. ಉದಾಹರಣೆಗೆ ಗೌರಮ್ಮ ಎನ್ನುವ ಆಸ್ಪತ್ರೆಯ ದಾದಿಯ ಕಥೆ, ಕುವೆಂಪು ಅವರ ಔದಾರ್ಯ ಕಥೆಯನ್ನು ನೆನಪು ಮಾಡಿಕೊಡುತ್ತದೆ. ವೈಜ್ಞಾನಿಕ ಜಗತ್ತಿನಲ್ಲಿ ವಿಜ್ಞಾನಿಗಳ ನಡುವಿನ ಸ್ವರ್ಧೆ, ದ್ವೇಷಾಸೂಯೆಗಳು, ದುಷ್ಟ ಆಲೋಚನೆಗಳನ್ನು ‘ಮಾರಕ ಸುರ’ ಕಥೆಯಲ್ಲಿ ಹೇಳುತ್ತಾರೆ. ಆಂಗ್ಲ ಪತ್ತೇದಾರಿ ಕಥೆಗಳ ಛಾಯೆಯನ್ನು ಇವರ ಕಥೆಗಳಲ್ಲಿ ಕಾಣಬಹುದು. ‘ಶ್ರೀಮುಖೀ' ಕಥೆ ಹಡಗು ದುರಂತದಲ್ಲಿ ಆಕಸ್ಮಿಕವಾಗಿ ಏಕಾಕಿಯಾಗಿ ಪ್ರಾಣ ಸಹಿತ ಉಳಿದು, ಎಚಿದೂ ಕಳೆದುಕೊಂಡಿದ್ದ ಸಹೋದರಿಯನ್ನು ವಿದೇಶೀ ನೆಲದಲ್ಲಿ ಸಂಧಿಸುವ ಕಥೆಯಾಗಿದೆ.

ಕವನ ಬದಲಾಯಿಸಿ

ಮಲ್ಲಿಕಾ ಅವರು ಕಾದಂಬರಿ,ಕಥೆಗಳನ್ನು ಬಿಟ್ಟು ಹಚ್ಚಿನ ಸಂಖ್ಯೆಯಲ್ಲಿ ಕವನಗಳನ್ನು ಕಾವ್ಯಗಳನ್ನು ರಚಿಸಿದ್ದಾರೆ. ಅದರಲ್ಲಿ ಮುಖ್ಯವಾದವು, ‘ಗಗನ ಕುಸುಮ’. ‘ಕಲ್ಯಾಣ ಕುಸುಮ’, ಕಸ್ತೂರಿ ಮಾಲಿಕೆ, ಬಕುಳರಾಜಿ, ನಾದಬಿಂದು, ಮಂದಾರ ಮಾಲಾ, ಚಂಪಕರಾಜಿ, ಹೀಗೆ ಹದಿನೈದು ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. ಇದಲ್ಲದೆ ಸಂಜೀವನ ಕಾವ್ಯ ಎಂಬ ಶೀರ್ಷಿಕೆಯ ಅಡಿಯಲ್ಲಿ ಮಂಗಳ ಭಾರತಿ , ಕಲ್ಯಾಣ ಭಾರತಿ, ಉತ್ತರೋತ್ತರಣಿ, ರಾಗಾನುರಾಗಿಣಿ, ಪ್ರಫುಲ್ಲ ಭಾರತ ಎಂಬ ಐದು ಸಂಜೀವನ ಕಾವ್ಯಗಳನ್ನು ರಚಿಸಿದ್ದಾರೆ. ಅವರ ನಾದ ಬಿಂದು, ಗಾನತೀರ್ಥ ದಲ್ಲಿ ಸುಮಾರು 118 ಪದ್ಯಗಳಿವೆ. ಹೂ, ಹಕ್ಕಿ ಗುಣಗಾನವೇ ಪ್ರಮುಖ ಗುರಿ. ಸಂಸ್ಕೃತ ಭೂಯಿಷ್ಟ ಪದಪುಂಜಗಳಿಂದ ಕೂಡಿದ ಮಲ್ಲಿಕಾ ಅವರ ಕವಿತೆ ಕೂಡಿದೆ. ಅವರ ಗಗನ ಕುಸುಮ ಕವನ ಸಂಕಲನವು 1984ರಲ್ಲಿ ಪ್ರಕಟಗೊಂಡ, ಸುಮಾರು 80 ಕವನಗಳನ್ನುಳ್ಳ ಕವನ ಸಂಕಲನ. ಅನೇಕ ಕವನಗಳು ಇಂಗ್ಲೀಷ್ ಶೀರ್ಷಿಕೆಯನ್ನು ಒಳಗೂಂಡಿದೆ. ಓ ಹೆನ್ರಿ, ಕ್ರಾಕಟೋವ, ಗ್ರಾಂಡ್ ಮಾ ನೋಸೆಸ್, ಜೀನ್ ಪಾಲ್ ಸಾತ್ರ್ರೆ, ವಲ್ರ್ಡ್‍ವಾರ್- ಈ ಕವನ ಶೀರ್ಷಿಕೆ ಇಂಗ್ಲೀಷ್ ಆದರೂ ಶೈಲಿ ಮಾತ್ರ ಹಳಗನ್ನಡದ್ದು. ಉದಾಹರಣೆಗೆ ಗ್ರಾಂಡ್ ಮಾ ನೋಸೆಸ್‍ನಲ್ಲಿ- ಅಂದು ತನ್ನ ಆಯುರ್ಮಾನದಾ ಶತಾಬ್ದಿಯಲಿ ಮಿಂದು ದಣಿದೂಡಂ ರೇಖಿಸುರ್ತಿಳೈ ಚಿತ್ರಗಳಂ ಗ್ರಾಂಡ್ ಮಾ ನೋಸೆಸ್ ನಿಜದಿ.

‘ಓ ಹೆನ್ರಿ’ ‘ಅಮೆರಿಕೆಯ ಸಾಹಿತ್ಯ ಜಗದಿ ಅಂದು ಪ್ರಖ್ಯಾತ ನಾಮನಿರ್ದಾ ಓ ಹೆನ್ರಿ ದನಗಾಹಿತನದಿಂ ತನ್ನಯ ಜೀವನನಾರೈದಂ’ ಇದರ ಜೊತೆಗೆ ಸಂಸ್ಕೃತ ಶೀರ್ಷಿಕೆಯನ್ನೊಳಗೂಂಡ ಅನೇಕ ಕವನಗಳಿವೆ. ಉದಾ. ‘ಉತ್ತಿಷ್ಠತ ಜಾಗೃತ’, ‘ಕೋಶವಾನ್ ಆಚಾರ್ಯಃ’, ‘ತವಕೃಪಾ ಸಂಪತ್ತಿ’ ‘ಜೀವನಕುಸುಮ’ದಲ್ಲಿರುವ ಅರವೂತ್ತೊಂದು ಕವನಗಳಲ್ಲಿ ನೆಹರು, ಲೆನಿನ್- ಮುಂತಾದ ಮಹಾಪುರುಷರನ್ನು ಕುರಿತ ಜೀವನಚಿತ್ರಣಗಳಿವೆ. ಇದರೊಂದಿಗೆ ಪ್ರಾರ್ಥನಾರೂಪದ ಕವಿತೆಗಳೇ ಹೆಚ್ಚಿವೆ. ಮಲ್ಲಿಕಾ ಅವರು ‘ಐಂದ್ರಕೀರ್ತಿ ಕೇತನಂ’ ಎಂಬ ಗದ್ಯ ಕಾವ್ಯಗಳನ್ನು ಬರೆದಿದ್ದಾರೆ. ಸಂಪೂರ್ಣ ಹಳಗನ್ನಡವೂ ಅಲ್ಲದ, ನಡುಗನ್ನಡವೂ ಅಲ್ಲದ, ಹೂಸಗನ್ನಡವೂ ಅಲ್ಲದ, ಆದರೆ ಇವೆಲ್ಲವನ್ನೂ ಒಳಗೊಂಡ ಭಾಷಾಬಳಕೆ ಇಲ್ಲಿ ನಡೆಯುತ್ತದೆ. ಮಹಾಭಾರತದಲ್ಲಿ ಬರುವ ಅರ್ಜುನನ ಪುತ್ರ ಅಭಿಮನ್ಯುವಿನ ಬಿಲ್ವಿದ್ಯೆಯ ಸಾಹಸಪ್ರೌಢಿಮೆಯ ಕತೆ ‘ಐಂದ್ರಕೀರ್ತಿ ಕೇತನಂ’ದಲ್ಲಿದೆ. ಸಂಪೂರ್ಣವಾಗಿ ಕೆಂಪುನಾರಾಯಣ, ಮುದ್ದಣ್ಣ, ಪಂಪರ ಪ್ರಭಾವಕ್ಕೆ ಒಳಗಾದ ಭಾಷಾಶೈಲಿ ಇದೆ. ಪದ್ಮ ವ್ಯೂಹವನ್ನು ಭೇದಿಸಲು ಹೋದ ಬಾಲಕ ಅಭಿಮನ್ಯುವಿನ ಶೌರ್ಯ, ಪರಾಕ್ರಮದ ವರ್ಣನೆಗಳಿವೆ. ವೈರಿಗಳು ರಚಿಸಿದ ವ್ಯೂಹವನ್ನು ಭೇದಿಸಿ, ಅವರನ್ನು ಸದೆ ಬಡಿದು, ಮಡಿದು ವೀರಮರಣವನ್ನಪ್ಪಿದ ಆತನನ್ನು ‘ಐಂದ್ರಕೀರ್ತಿ ಕೇತನ’ ಎಂದು ವರ್ಣಿಸಿದ್ದಾರೆ. 256 ಪುಟಗಳನ್ನೂಳಗೂಂಡ ಕೃತಿ ಇದಾಗಿದೆ.

ಮಹಾಕಾವ್ಯ ಬದಲಾಯಿಸಿ

ಮಲ್ಲಿಕಾ ಅವರ ಸಾಹಿತ್ಯ ಕೃತಿಗಳಲ್ಲಿ ಗಮನಿಸಲೇಬೇಕಾದ ಪ್ರಮುಖ ಕೃತಿ, ‘ವಿವೇಕಾನಂದ ವಿಜಯಂ’ ಮಹಾಕಾವ್ಯ ಸಾಹಿತ್ಯ ಶುದ್ಧವಾಗಿರಬೇಕು, ಗಂಭೀರವಾಗಿರಬೇಕು, ಎತ್ತರಕ್ಕೇರಬೇಕು, ‘ಮಹಾಕಾವ್ಯ ಬರೆದರೇನೇ ಸಾಹಿತ್ಯಕ್ಕೆ ಪೂರ್ಣತ್ವ’ ಉಂಟಾಗುವುದು ಎಂಬ ಪ್ರಬಲನಂಬಿಕೆ ಹಾಗೂ ಈ ಕೃತಿ ರಚನೆಯ ಹಿನ್ನಲೆಯಲ್ಲಿವೆ. ಮಹಾಭಾರತ,ರಾಮಾಯಣಗಳ ರಾಮ, ಕೃಷ್ಣರೇ ಮಹಾಕಾವ್ಯದ ನಾಯಕರು. ಆದರೆ ತಾವು ಈ ಸಿದ್ದ ವಸ್ತುವನ್ನು ಆಧರಿಸಿ ಬಿಟ್ಟು ಐದು ವರ್ಷಗಳ ಕಾಲ ತಪಸ್ಸಿನಂತೆ ಈ ಮಹಾಕಾವ್ಯವನ್ನು ರಚಿಸಿದುದಾಗಿ ಹೇಳಿಕೂಳ್ಳುತ್ತಾರೆ. 1,274 ಪುಟಗಳ 600ರೂಗಳ ಮುಖಬೆಲೆ ಹೊತ್ತ ಮಲ್ಲಿಕಾ ಅವರ ಈ ಬೃಹತ್ ಗ್ರಂಥ ಪ್ರಕಟಣೆಯಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಒಂದು ಲಕ್ಷ ರೂಗಳ ಧನ ಸಹಾಯ ಪಡೆದುಕೂಂಡಿದೆ. ಮಹಾಕಾವ್ಯಗಳ ಕಾಲ ಮುಗಿಯಿತು ಎನ್ನುವಾಗಲೇ ‘ರಾಮಾಯಣ ದರ್ಶನಂ’ 'ಭಾರತ ಸಿಂಧುರಶ್ಮಿ’ ‘ಶ್ರೀಹರಿ ಚರಿತೆ’ 'ಭವ್ಯ ಮಾನವ’ ‘ಯುಗಸಂಧ್ಯ’ ದಂತಹ ಮಹಾಕಾವ್ಯಗಳು ಕಾಣಿಸಿಕೂಂಡಿವೆ. ಈ ಮಹಾಕಾವ್ಯಗಳು ಪೌರಾಣಿಕ ಕಥೆಯನ್ನಿಟ್ಟುಕೂಂಡು ಸಮಕಾಲೀನ ಬದುಕಿನ ವ್ಯಾಖ್ಯಾನವನ್ನು ಮಾಡುತ್ತದೆ. ಮಹಾ ಕವಿಗೆ ಕಥೆ ನೆಪ. ಜೀವನ ದರ್ಶನ ಪ್ರಮುಖ ಗುರಿ. ಹೀಗಾಗಿ ಮಹಾಕಾವ್ಯಕ್ಕೂಂದು ಉದ್ದೇಶವಿರುತ್ತದೆ. ಆದ್ದರಿಂದಲೇ ಎಷ್ಟೂ ಸಂದರ್ಭದಲ್ಲಿ ಮಹಾಕಾವ್ಯಗಳನ್ನು ದೃಢ ವಾಸ್ತವದ ನೆಲೆಯಿಂದಲೇ ನೋಡಲು ಕಷ್ಟವಾಗಬಹುದು. ಮಲ್ಲಿಕಾ ಅವರು ಆಯ್ಕೆ ಮಾಡಿಕೂಂಡಿರುವ ವಸ್ತು, ನಮ್ಮ ಸಮಕಾಲೀಕ ಸಂದರ್ಭದ ಚಾರಿತ್ರಿಕ ಪುರುಷನ ಬದುಕು. ವಿವೇಕಾನಂದರು ಭಾರತೀಯ ಬದುಕಿನ ಪುನರುತ್ಥಾನದ ಸಂದರ್ಭದಲ್ಲಿ ಬಹಳ ಮುಖ್ಯ ಪಾತ್ರವಹಿಸಿದ್ದರು. ಸಾಮಾಜಿಕ ಬದುಕಿನ ಆತ್ಮ ಜಾಗೃತಿಗೆ ಪ್ರಯತ್ನಿಸಿದವರು. ಇಷ್ಟಲ್ಲಾ ಅಂಶಗಳು ಹಿನ್ನಲೆಯಲ್ಲಿದ್ದರೂ, ‘ಜೀವನ ಚರಿತ್ರೆ’ ಯ ವಸ್ತು ನಿರ್ವಹಣೆ ಎಷ್ಟರ ಮಟ್ಟಿಗೆ ಸಹಾಯಕಾರಿ ಎಂಬ ಪ್ರಶ್ನೆ ಇದ್ದೇ ಇರುವಂತಹದು. ಅನೇಕ ಸಂದರ್ಭದಲ್ಲಿ ಇಂತಹ ಜೀವನ ಚರಿತ್ರೆಗಳು ವಾಸ್ತವದ ಗಡಿ, ಗೆರೆಗಳನ್ನು ದಾಟಲಾರದೆ ಮಿತಿಗೂಳಪಡಬಹುದು. ವಸ್ತುವಿಗೊಂದು ಮಿತಿಯನ್ನು ಹಾಕಿಕೊಂಡೇ ಹೊರಡುವ ಕೃತಿಕಾರ ತನ್ನ ಕೃತಿಗೆ ಎಷ್ಟರ ಮಟ್ಟಿನ ಸಮಗ್ರತೆಯನ್ನು ತಂದು ಕೊಡಲು ಸಾಧ್ಯ? ಇಂತಹ ಅನೇಕ ಪ್ರಶ್ನೆಗಳನ್ನು ತನ್ನ ಗರ್ಭದಲ್ಲಿಟ್ಟುಕೊಂಡೇ ‘ವಿವೇಕಾನಂದ ವಿಜಯಂ’ ಕೃತಿ ಮೈದಳದಿದೆ. ಕನ್ನಡದಲ್ಲಿ ಸ್ವಾಮಿ ವಿವೇಕಾನಂದರನ್ನು ಕುರಿತು ರಚಿತಗೊಂಡಿರುವ ಕೆಲವು ಕೃತಿಗಳನ್ನಷ್ಟೇ ಆಧಾರವಾಗಿಟ್ಟುಕೊಂಡು ಸರಳವಾಗಿ ಕಥೆಯನ್ನು ಹೇಳಿಕೊಂಡು ಹೋಗಿದ್ದಾರೆ.

ಕಾದಂಬರಿ ಬದಲಾಯಿಸಿ

  • ಜೀವನಗಂಗಾ
  • ವಂದೇ ಮಾತರಂ
  • ಡಾ| ಅಘೋರ

ಕವನ ಸಂಕಲನ ಬದಲಾಯಿಸಿ

  • ಗಾನತೀರ್ಥ
  • ನಾದಬಿಂದು
  • ವಿಜಯಗಾಥಾ

ಮಹಾಕಾವ್ಯ ಬದಲಾಯಿಸಿ

  • ವಿವೇಕಾನಂದ ವಿಜಯಂ

ಪುರಸ್ಕಾರ ಬದಲಾಯಿಸಿ