ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ, ಪತ್ರಕರ್ತ ಹಾಗೂ ಪುಸ್ತಕ ಪ್ರಕಾಶಕರಾದ ಶ್ರೀ ಭಾಲಚಂದ್ರ ಘಾಣೇಕರ ಇವರು ೧೯೧೦ ನವೆಂಬರ್ ೩ರಂದು ತಮ್ಮ ತಾಯಿಯ ತವರೂರು ಗದಗ ಜಿಲ್ಲೆಯ ಜಂತ್ಲಿಯಲ್ಲಿ ಜನಿಸಿದರು. ಇವರ ತಾಯಿ ಲಕ್ಷ್ಮೀಬಾಯಿ; ತಂದೆ ವೆಂಕಟರಾಯರು.

ಬಾಲ್ಯ ; ಶಿಕ್ಷಣ ಬದಲಾಯಿಸಿ

ಭಾಲಚಂದ್ರ ಘಾಣೇಕರರ ಪ್ರಾಥಮಿಕ ವಿದ್ಯಾಭ್ಯಾಸ ಕೆಲಕಾಲ ತಂದೆಯ ಸೋದರತ್ತೆಯ ಊರಾದ ಹಾವನೂರಿನಲ್ಲಿ, ಆ ಬಳಿಕ ಹುಬ್ಬಳ್ಳಿ ಹತ್ತಿರದ ಮಿಶ್ರಿಕೋಟಿಯಲ್ಲಿ ನಡೆಯಿತು. ೧೯೨೧ರಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದ ತಮ್ಮ ತಂದೆ ಪ್ರಾರಂಭಿಸಿದ ರಾಷ್ಟ್ರೀಯ ವಿದ್ಯಾಶಾಲೆಯಲ್ಲಿ ಕಲಿಯಲು ಪ್ರಾರಂಭಿಸಿದರು. ಎರಡು ವರ್ಷಗಳ ನಂತರ ಅದು ಬಂದಾಗಿದ್ದದ್ದರಿಂದ ಹುಬ್ಬಳ್ಳಿಯ ರಾಷ್ಟ್ರೀಯ ಶಾಲೆಗೆ ಸೇರಿದರು. ಆ ನಂತರ ಮಧುಕರಿ ವೃತ್ತಿಯನ್ನವಲಂಬಿಸಿ ಧಾರವಾಡರಾಷ್ಟ್ರೀಯ ವಿದ್ಯಾಶಾಲೆಯನ್ನು ಸೇರಿದರು. ಈ ಶಾಲೆಯಲ್ಲಿ ದ.ರಾ.ಬೇಂದ್ರೆ, ಶಂ.ಬಾ.ಜೋಶಿ,ಬೆಟಗೇರಿ ಕೃಷ್ಣಶರ್ಮ, ಆಲೂರು ವೆಂಕಟರಾಯರು ಮೊದಲಾದ ಸಾಹಿತಿಗಳಲ್ಲದೆ, ರಂಗನಾಥ ದಿವಾಕರ,ಹುಕ್ಕೇರಿಕರ ಮೊದಲಾದ ಕನ್ನಡ ಪ್ರೇಮಿಗಳು ಹಾಗು ಸ್ವಾತಂತ್ರ್ಯಹೋರಾಟಗಾರರು ಪಾಠ ಪ್ರವಚನ ಮಾಡುತ್ತಿದ್ದರು. ಇದೆಲ್ಲದರ ಪರಿಣಾಮವಾಗಿ ಶ್ರೀ ಘಾಣೇಕರರು ಹಾಗು ಅಲ್ಲಿ ಕಲಿತ ಮೇವುಂಡಿ ಮಲ್ಲಾರಿ ಮೊದಲಾದ ಅನೇಕ ವಿದ್ಯಾರ್ಥಿಗಳು ಸಾಹಿತಿಗಳಾಗಿ ಹಾಗು ರಾಷ್ಟ್ರಾಭಿಮಾನಿಗಳಾಗಿ ಹೊರಹೊಮ್ಮಿದರು.ಕಲಿಯುತ್ತಿರುವಾಗಲೆ ಘಾಣೇಕರರು ಬೋರ್ಡ ಪೇಂಟಿಂಗ, ಬಿಸ್ಕೀಟ ತಯಾರಿಕೆ, ಪೇಪರ ಹಂಚುವದು ಮೊದಲಾದ ಕೆಲಸ ಮಾಡುತ್ತ ಜೀವನ ಸಾಗಿಸಬೇಕಾಗಿತ್ತು.


ಸ್ವಾತಂತ್ರ್ಯ ಹೋರಾಟ ಬದಲಾಯಿಸಿ

೧೯೩೦ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಈ ತರುಣ ಪ್ರಭಾತಫೇರಿ, ಹೆಂಡದಂಗಡಿಯ ಪಿಕೆಟಿಂಗ್, ಸಿಂದೀ ಗಿಡ ಕದಿಯುವದು, ವಿದೇಶಿ ಬಟ್ಟೆಗಳ ಪಿಕೆಟಿಂಗ್ ಮೊದಲಾದ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿಕರನಿರಾಕರಣೆಯ ಚಳುವಳಿಯನ್ನು ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಸಂಘಟಿಸಿದರು. ಕಾಂಗ್ರೆಸ್ ಕರಪತ್ರಗಳನ್ನು ಗುಟ್ಟಾಗಿ ಮುದ್ರಿಸಿ, ಹಂಚುವ ಕೆಲಸವಂತೂ ಯಾವಾಗಲೂ ಇವರದೆ ಆಗಿತ್ತು. ಅಂಕೋಲಾ ಸತ್ಯಾಗ್ರಹ ಮಂಡಳದ ೬ನೆಯ ಸರ್ವಾಧಿಕಾರಿಯಾಗಿ ಭಾಷಣಬಂದೀ ಹುಕುಮು ಮುರಿದದ್ದಕ್ಕಾಗಿ ಕಾರವಾರ ಜಿಲ್ಲೆಯಲ್ಲಿ ೬ ತಿಂಗಳು ಕಠಿಣ ಶಿಕ್ಷೆಯನ್ನು ಅನುಭೋಗಿಸಿದರು. ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದ್ದಕ್ಕಾಗಿ ಮತ್ತೇ ೧೫ ತಿಂಗಳ ಕಠಿಣ ಸಜೆಯನ್ನು ಅಹಮದನಗರ ಜಿಲ್ಲೆಯ ವಿಸಾಪುರ ಜೈಲಿನಲ್ಲಿ ಅನುಭೋಗಿಸಿದರು. ೧೯೪೨ ಚಳುವಳಿಯಲ್ಲಿ ಡೆಟಿನ್ಯೂ ಆಗಿ ಬೆಳಗಾವಿ ಜಿಲ್ಲೆಯ ಹಿಂಡಲಗಿ ಜೈಲಿನಲ್ಲಿ ಸೇರಿದರು.

ಪತ್ರಕರ್ತ,ಸಾಹಿತಿ ಬದಲಾಯಿಸಿ

೧೯೩೧ ಮಾರ್ಚಿನಲ್ಲಿ ಗಾಂಧಿ-ಐರ್ವಿನ್ ಒಪ್ಪಂದದ ಪ್ರಕಾರ ಬಂದಿಗಳ ಬಿಡುಗಡೆಯಾಯಿತು. ಹೊರಬಂದ ಘಾಣೇಕರರು ‘ಸಮಾಜೋನ್ನತಿ ಪುಷ್ಪಮಾಲೆ’ ಎನ್ನುವ ಒಂದಾಣೆ ಪುಸ್ತಕಮಾಲೆ ಪ್ರಾರಂಭಿಸಿದರು. ಇದರ ಪ್ರಥಮ ಪುಸ್ತಕ ಅವರೇ ಬರೆದ “ಗಾಂಧೀ ಹುಚ್ಚು”. ಜೊತೆಗೆಯೆ ಶ್ರೀ ಜಠಾರರವರ ‘ರಾಜಹಂಸ’ ಹಾಗು ‘ಸದಾನಂದ’ ಪತ್ರಿಕೆಗಳ ಉಪಸಂಪಾದಕರಾಗಿ ಕೆಲಸ ಮಾಡಿದರು. ಆ ಬಳಿಕ ‘ಸಮಾಜ’ ಎನ್ನುವ ಮಾಸಪತ್ರಿಕೆಯನ್ನು ಸಹ ಪ್ರಾರಂಭಿಸಿದರು. ಅದನ್ನು ಕೆಲಕಾಲ ಬಸವರಾಜ ಕಟ್ಟೀಮನಿಯವರಿಗೆ ಒಪ್ಪಿಸಿ, ತಾವು ‘ಪ್ರಜಾಮತ’ ದ ಉಪಸಂಪಾದಕರಾಗಿ ದುಡಿದರು. ನಂತರ ‘ಪ್ರತಿಭಾ’ ಎನ್ನುವ ಮಾಸಪತ್ರಿಕೆ ಪ್ರಾರಂಭಿಸಿದರು.


೧೯೪೨ರ ಚಳುವಳಿಯ ನಂತರ ‘ಪ್ರತಿಭಾ ಗ್ರಂಥಮಾಲೆ’ ಹಾಗು ‘ಸಮಾಜ ಪುಸ್ತಕಾಲಯ’ ಪ್ರಾರಂಭಿಸಿದರು. ಪ್ರತಿಭಾ ಗ್ರಂಥಮಾಲೆಯ ಪ್ರಥಮ ಪುಸ್ತಕ ದೇವುಡು ಬರೆದ “ಘಾಟೀ ಮುದುಕ”. ಇಲ್ಲಿಯವರೆಗೂ ಈ ಸಂಸ್ಥೆಗಳಿಂದ ಸುಮಾರು ೨೦೦೦ ವಿವಿಧ ಬಗೆಯ ಕೃತಿಗಳು ಪ್ರಕಟವಾಗಿವೆ. ಸುಮಾರಾಗಿ ದ.ರಾ.ಬೇಂದ್ರೆಯವರ ಎಲ್ಲ ಕೃತಿಗಳು ಸಮಾಜ ಪುಸ್ತಕಾಲಯದಿಂದಲೇ ಪ್ರಕಟವಾಗಿವೆ.


ಇತರ ಬದಲಾಯಿಸಿ

ಘಾಣೇಕರರು ೧೯೪೪ ಹಾಗು ೧೯೪೭ರಲ್ಲಿ ನಡೆದ ಧಾರವಾಡ ನಗರಸಭೆಯ ತ್ರೈವಾರ್ಷಿಕ ಚುನಾವಣೆಯಲ್ಲಿ ಸತತವಾಗಿ ಆರಿಸಿ ಬಂದರು. ಎರಡು ವರ್ಷ ಸ್ಥಾಯಿ ಸಮಿತಿಯ ಸದಸ್ಯರಾಗಿ ಹಾಗು ಒಂದು ವರ್ಷ ಉಪಾಧ್ಯಕ್ಷರಾಗಿ ಸೇವೆ ಸಾಲ್ಲಿಸಿದರು.

ಧಾರವಾಡಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಮಂಡಳದ ಸದಸ್ಯರಾಗಿ ಮೂರು ವರ್ಷ ಹಾಗು ಚೇರ್ಮನ್ ಆಗಿ ಒಂದು ವರ್ಷ ಕೆಲಸ ಮಾಡಿದ್ದಾರೆ.


ಕೌಟಂಬಿಕ ಬದಲಾಯಿಸಿ

ಭಾಲಚಂದ್ರ ಘಾಣೇಕರ ಇವರ ವಿವಾಹ ೧೯೩೪ ಡಿಸೆಂಬರದಲ್ಲಿ ಜರುಗಿತು. ಸ್ವಾತಂತ್ರ್ಯ ಹೋರಾಟದಲ್ಲಿ ಇವರ ಹೆಂಡತಿ ಪತಿಗೆ ಸಂಪೂರ್ಣ ಬೆಂಬಲ ನೀಡಿದರು. ಇವರ ಗಂಡು ಮಕ್ಕಳಾದ ಮನೋಹರ ಭಾಲಚಂದ್ರ ಘಾಣೇಕರ ಹಾಗು ರವೀಂದ್ರ ಭಾಲಚಂದ್ರ ಘಾಣೇಕರ ಇವರು ಪುಸ್ತಕಾಲಯ ಹಾಗು ಮುದ್ರಣಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಸುಧಾ ಹಾಗು ಸಿಂಧು ಮದುವೆಯಾಗಿದ್ದಾರೆ.


ಕೃತಿಗಳು ಬದಲಾಯಿಸಿ

ಭಾಲಚಂದ್ರ ಘಾಣೇಕರರವರು ಬರೆದ ಕೃತಿಗಳು ಇಂತಿವೆ:

ಕತೆ ಬದಲಾಯಿಸಿ

  • ನಾನೇ ಹೊಲೆಯ
  • ಸನಾತನೀ ಸೂಳೆ
  • ಬಂಗಾರದ ಹೊಗೆ
  • ಕಲಿತ ಹೆಂಡತಿ
  • ನೌಕರಿ
  • ಸಿಡಿಲು
  • ನಾರಿರತ್ನ
  • ವಿಧವಾ ಕುಮಾರಿ
  • ಗಾಂಧೀ ಹುಚ್ಚು
  • ರಾವಬಹಾದ್ದೂರ
  • ಸೌಭಾಗ್ಯವತಿ
  • ದೇವರಿಗೆ ಲಂಚ

ಏಕಾಂಕಗಳು ಬದಲಾಯಿಸಿ

  • ಗಾಂಧೀಟೋಪಿ
  • ಬಡವರ ರೊಟ್ಟಿ
  • ರೈತರ ಭಾಗ್ಯೋದಯ ( ಈ ನಾಟಕವನ್ನು ಬ್ರಿಟಿಷ್ ಸರಕಾರ ಪ್ರತಿಬಂಧಿಸಿತ್ತು)

ಚುಟುಕು ಬದಲಾಯಿಸಿ

  • ಚಾಟಿ ಚುಟುಕುಗಳು

ಅನುವಾದ ಬದಲಾಯಿಸಿ

  • ಶ್ಯಾಮನ ತಾಯಿ (ಮರಾಠಿ ಮೂಲ ಕಾದಂಬರಿ: ಸಾನೇ ಗುರೂಜಿ)
  • ಪ್ರತಿಬಿಂಬ ( ಕಾಣೇಕರರ ಮರಾಠಿ ಕಥಾ ಸಂಗ್ರಹ)

ಮಕ್ಕಳ ಸಾಹಿತ್ಯ ಬದಲಾಯಿಸಿ

  • ಗುಡಗುಡಿಯ ರಹಸ್ಯ
  • ಲೋಕಮಾನ್ಯ ಟಿಳಕ
  • ಸ್ವಾಮೀ ರಾಮತೀರ್ಥ
  • ಲಾಲಾ ಲಜಪತರಾಯ
  • ಮಕ್ಕಳ ರಾಮಾಯಣ
  • ಭಗವಾನ ರಮಣ ಮಹರ್ಷಿ

ಧಾರ್ಮಿಕ ಬದಲಾಯಿಸಿ

  • ವೇದಾಂತ ಪರಮಾತ್ಮ
  • ಆತ್ಮಾರಾಮ
  • ಶ್ರೀಪಾದಚರಿತಾಮೃತ

ಸಂಕಲನ ಬದಲಾಯಿಸಿ

  • ಗಾಂಧೀ ದರ್ಶನ (ಸಾಕ್ಷಿಚಿತ್ರ)
  • ಪ್ರಾರ್ಥನಾ ಮಂಜರಿ

ಜೊತೆ ಲೇಖಕರೊಡನೆ ಬದಲಾಯಿಸಿ

  • ಆಜಾದ್ ಹಿಂದ್
  • ಬಿರುಗಾಳಿ (ನಾ.ಸಿ.ಫಡಕೆಯವರ ಕಾದಂಬರಿ)


ಭಾಲಚಂದ್ರ ಘಾಣೇಕರರು ೨೦೦೪ ಅಕ್ಟೋಬರ ೮ರಂದು ನಿಧನರಾದರು.