ಸದ್ದು-ಸುದ್ದಿ ಮಾಡದೇ ಇರುವ ಎಷ್ಟೋ ಸ್ಥಳಗಳಂತೆ ಬಿಳುಗುಂದವೆಂಬ ಊರೊಂದು ಕೊಡಗಿನಲ್ಲಿದೆ. ಹಾಗೆ ನೋಡಿದರೆ ಕೊಡಗೇ ಹೆಚ್ಚು ಸದ್ದು ಮಾಡದ ಜಿಲ್ಲೆ. ಮಳೆಗಾಲದಲ್ಲಿ ಹೆಚ್ಚು ಮಳೆ ಬಿದ್ದಾಗ ಭಾಗಮಂಡಲದಲ್ಲಿ ತ್ರಿವೇಣಿಸಂಗಮ ಮುಳುಗಿ ಹೋಗಿದೆ; ಕೆ ಆರ್ ಎಸ್ ಅಣೆಕಟ್ಟಲ್ಲಿ ನೀರಿನ ಮಟ್ಟ ಎಲ್ಲಿವರೆಗೆ ಬಂದಿದೆ; ಬೆಂಗಳೂರಿನಲ್ಲಿ ನೀರಿನ ಅಭಾವವಿರಲಾರದು - ಎಂಬಿತ್ಯಾದಿ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ತಮಿಳು ನಾಡಿನವರೂ ಕೊಡಗಿನ ಮಳೆಯನ್ನು ಗಮನಿಸುತ್ತಾರೆ. ಕಾವೇರಿ ವಿವಾದ ಕೇಳಿಬರುತ್ತದೆ. ಅಷ್ಟೇ! ಈಗ ಪ್ರವಾಸೀ ಜಿಲ್ಲೆಯಾಗಿರುವುದರಿಂದ ವೆಬ್‍ಸೈಟ್‍ಗಳಲ್ಲಿ ಚಿತ್ರ, ಲೇಖನಗಳು ಕಾಣಸಿಗುತ್ತವೆ.

ಬಿಳುಗುಂದ ಬಹುಶಃ ನಲುವತ್ತೈವತ್ತು ಕೊಡವ ಕುಟುಂಬಗಳಿರುವ ಗ್ರಾಮ. ವಿರಾಜಪೇಟೆಯ ಪೂರ್ವಕ್ಕೆ, ಅಮ್ಮತ್ತಿ-ಸಿದ್ದಾಪುರದ ಮಾರ್ಗವಾಗಿ ಮಡಿಕೇರಿಗೆ ಹೋಗುವ ರಸ್ತೆಯಲ್ಲಿ ಈ ಊರಿದೆ. ವಿರಾಜಪೇಟೆಯಿಂದ ಸುಮಾರು ನಾಲ್ಕು ಕಿ ಮೀ ದೂರದವರೆಗೆ ಈ ಮಾರ್ಗದಲ್ಲಿ ಸಾಗಿದರೆ, ಕೊಮ್ಮೆಹೊಳೆಯ ಸೇತುವೆ ದಾಟಿದ ಬಳಿಕ ಸಿಗುವ ಎರಡನೇ ಬಲದ ರಸ್ತೆಯೊಂದು ಗದ್ದೆಗಳ ನಡುವೆ ಸಾಗಿ ಈ ಊರೊಳಕ್ಕೆ ಹೋಗುತ್ತದೆ. ಬಿಳುಗುಂದ ಹಿಂದಿನ ಕಾಲದಲ್ಲಿ "ಬೋಂದ" ಎಂಬ ಅಪಭ್ರಂಶಿತವಾಗಿ ಕರೆಯಲ್ಪಡುತಿತ್ತು. ಆಗ ಮುನ್ನೂರು ಕುಟುಂಬಗಳಿದ್ದುವಂತೆ. ಬಳಿಕ ಬೋಂದದಿಂದ ಬೇರ್ಪಟ್ಟು ನಲುವತ್ತೊಕ್ಕಲು ಮತ್ತು ಪುದಿಕೋಟೆ ಎಂಬ ಊರುಗಳಾದವು. ಉಳಿದ ಭಾಗಕ್ಕೆ ಬಿಳುಗುಂದವೆಂಬ ಹೆಸರೇ ಉಳಿಯಿತು.

ಪಾಂಡವರು ಅಜ್ಞಾತವಾಸದಲ್ಲಿದ್ದಾಗ ರಾತ್ರಿಯೆಲ್ಲಾ ಒಂದು ಕಡೆಯಿಂದ ಇನ್ನೊಂದಕ್ಕೆ ಪ್ರಯಾಣಿಸುತ್ತಿದ್ದರಂತೆ. ಬೆಳಕು ಹರಿದಾಗ ಕಾಡಿನಲ್ಲಿ ಅವಿತುಕೊಳ್ಳುತ್ತಿದ್ದರಂತೆ. ಹಾಗೆ ಸಂಚರಿಸುತ್ತಾ ಕೊಡಗಿನ ಪ್ರದೇಶದಲ್ಲಿ ಒಂದು ರಾತ್ರಿ ಕಳೆಯುತ್ತಿದ್ದಾಗ ಮೂಡು ದಿಕ್ಕಿನ ಬೆಟ್ಟದ ಹಿಂದಿನಿಂದ ಬೆಳಕು ಹರಿದುಬಂತು. ಅವರು ಅಲ್ಲಿಯೇ ಆ ದಿನ ತಂಗಿದರು. ಬೆಳಗಾದ ಆ ಪ್ರದೇಶ ಕುಂದ(ಗುಡ್ಡ)ವಾದ್ದರಿಂದ ಬಿಳುಗುಂದವೆಂದು ಕರೆದರು. ಇದು ಪ್ರತೀತಿ. ಕಥೆ. ನಂಬದಿರಬೇಕಾದರೆ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗದು. ಬಿಳುಗುಂದ ಎನ್ನುವುದು ಕೊಡವ, ಇಲ್ಲವೇ ಕನ್ನಡ ಪದ; ದಾಕ್ಷಿಣಾತ್ಯ ಪದ. ಉತ್ತರದಿಂದ ಬಂದ ಪಾಂಡವರು ತಿಳಿಯದ ನುಡಿ. ಅವರು ಆ ಹೆಸರನ್ನಿಟ್ಟಿರುವುದೆಂದರೆ ನಂಬಲಾಗದು.


ತುಲಾ ಒಂದರಂದು ನಡೆಯುವ ಕಾವೇರಿ ಸಂಕ್ರಮಣದಂದು ಕೊಡಗಿನಲ್ಲೆಲ್ಲಾ ‘ಪೊಂಗ’ ಮರದ ರೆಂಬೆಯನ್ನು ಆಳೆತ್ತರಕ್ಕೆ ಕತ್ತರಿಸಿ, ಅದರ ಒಂದು ಕೊನೆಯನ್ನು ಗೇಣುದ್ದಕ್ಕೆ ಸೀಳಿ, ‘ಕೈಬಳ’ವೆಂಬ ಬಳ್ಳಿಯನ್ನು ಎರಡು ಸುತ್ತು ಸಿಂಬಿಯಂತೆ ಸುತ್ತಿ ಆ ಸೀಳಿನಲ್ಲಿ ಸಿಕ್ಕಿಸುವರು. ಇದಕ್ಕೆ ‘ಬೊತ್ತ್’ ಎನ್ನುವರು. ಅದನ್ನು ಎಲ್ಲಾ ಭತ್ತದ ಗದ್ದೆಗಳು, ಮನೆಯೆದುರು, ಬಾವಿ, ಕೊಟ್ಟಿಗೆಗಳು, ಗೊಬ್ಬರದ ಗುಂಡಿ, ಮುಂತಾದ ಸ್ಥಳಗಳಲ್ಲಿ ನೆಲದಲ್ಲಿ ಚುಚ್ಚಿ ನೆಟ್ಟಗೆ ನಿಲ್ಲಿಸುವರು. ಬೊತ್ತ್ ಎಂದರೆ ಬೆದರು ಎಂದರ್ಥ. ಬೆಳೆದು ನಿಂತ ಭತ್ತದ ಪೈರನ್ನು ಇಲಿಗಳಿಂದ ರಕ್ಷಿಸಲು ಈ ಬೊತ್ತನ್ನು ನೆಡುತ್ತಾರೆ. ಬಿಳುಗುಂದ ಊರಿನ ನುತ್ತಲಿನ ಊರುಗಳಲ್ಲಿ ಬೊತ್ತನ್ನು ನೆಡುವುದಿಲ್ಲ. ಬದಲಿಗೆ "ಕಾಂಡ"ವೆಂಬ ಹಾಲು ಸುರಿಸುವ ಗಿಡದ ರೆಂಬೆಯನ್ನು ನೆಡುತ್ತಾರೆ. ಆದರೆ ಬಿಳುಗುಂದದಲ್ಲಿ ಏನನ್ನೂ ನೆಡುವುದಿಲ್ಲ. ಬದಲು ಅಂದು ಈ ಊರಿನ ಪ್ರತಿ ಮನೆಯಲ್ಲಿ ಬೆಳಿಗ್ಗೆ ಕೋಳಿಯ ಮೊದಲ ಕೂಗಿಗೆದ್ದು, ಒಂದು ಕುಡಿಬಾಳೆಯೆಲೆಯ ಮೇಲೆ ಮೂರು ಪುಟ್ಟ ದೋಸೆ, ವೀಳ್ಯದೆಲೆ, ಅಡಿಕೆಗಳನ್ನಿಟ್ಟು, ಅದರ ಮೇಲೆ ಉರಿಯುವ ಹೂಬತ್ತಿಯನ್ನಿಟ್ಟು, ತಮ್ಮ ಗದ್ದೆಗೆ ಕೊಂಡೊಯ್ಯುತ್ತಾರೆ. ಗದ್ದೆಯ ಏರಿಯನ್ನು ಅಡ್ಡಕ್ಕೆ ಕತ್ತರಿಸಿ ಅಲ್ಲಿ ಹುಲ್ಲಿನ ಹಾಸನ್ನು ಬೆಳೆಸಿರುತ್ತಾರೆ, ಇದರ ಮೂಲಕ ನೀರು ಮೇಲಿನ ಗದ್ದೆಯಿಂದ ಕೆಳಗಿನದಕ್ಕೆ ಹರಿಯುತ್ತದೆ. ಇದನ್ನು 'ಕುಂಬೆ'ಯೆಂದು ಕರೆಯುತ್ತಾರೆ. ಬಾಳೆಯೆಲೆಯ ಮೇಲಿರುವುವನ್ನು ಈ ಕುಂಬೆಯ ಮೇಲೆ ಪೂರ್ವಾಭಿಮುಖವಾಗಿಟ್ಟು, "ಪಾಂಡವ, ಕೌರವ! ಕೂ, ಕೂ" ಎಂದು ಮೂರು ಬಾರಿ ಕೂಗಿ ಕರೆದು ಕೈಮುಗಿದು ಮನೆಗೆ ಮರಳುತ್ತಾರೆ. ತಮ್ಮ ವಂಶ ಪೂರ್ವಜರಾದ ಕುರುಕುಲದವರು ತಮ್ಮ ಬೆಳೆಗಳನ್ನು ರಕ್ಷಿಸುತ್ತಾರೆಂದು ನಂಬಿಕೆ.

ಪಾಂಡವರು ತಮ್ಮ ಅಜ್ಞಾತವಾಸದಲ್ಲಿ ಕೊಡಗಿನಲ್ಲಿ ಇದ್ದರೆನ್ನಲು ಸಾಕ್ಷಿಯೆಂಬಂತೆ ಹಲವು ಸ್ಮಾರಕಗಳಿವೆ. ಪಾಂಡವ ಪಾರೆ(ಬಂಡೆಗಲ್ಲು), ಭೀಮನಕಲ್ಲು, ಇತ್ಯಾದಿ. ಕುರುಕ್ಷೇತ್ರದ ಮಹಾಯುದ್ಧದ ಬಳಿಕ ಉಳಿದ ಕುರುವಂಶದವರು ದಕ್ಷಿಣಕ್ಕೆ ಬಂದು ಕೊಡಗಿನಲ್ಲಿ ನೆಲೆಸಿ, ಕುರು>ಕುಡು>ಕೊಡವರಾದರೆಂದು ಒಂದು ಅಭಿಪ್ರಾಯ. ಕೊಡವರ ಜಾನಪದ ಹಾಡು (ಬಾಳೋ ಪಾಟ್ಟ್)ಗಳಲ್ಲೂ ಕೊಡವರ ಮೂಲ ವಂಶಸ್ಥರು ಪಾಂಡವ-ಕೌರವರೆಂದಿದೆ.

ಬಿಳುಗುಂದದಲ್ಲಿ ಯಾವುದೇ ಘಟನೆಗಳು ನಡೆಯುವುದೇ ಇಲ್ಲವೇನೋ ಎಂಬ೦ತಿರುತ್ತದೆ. ಬೆಳಿಗ್ಗೆ ಐದೂವರೆ ಆರು ಗಂಟೆಗೆ ಆರಕಟ್ಟುವ ದಿನಗಳಾದರೆ ಕೊಟ್ಟಿಗೆಯಿಂದ ಎತ್ತು-ಕೋಣಗಳನ್ನು ಗದ್ದೆಗೆ ಉಳಲು, "ಹೈ, ಹಿದಿಕ್, ಏಯ್! ಎಲ್ಲಿಗೆ, ಬಾ ಈಕಡೆ!" ಎಂದೆಲ್ಲಾ ಜೋರು ಮಾಡುತ್ತಾ ಹೊಡೆದುಕೊಂಡು ಹೋಗುವ ಗದ್ದಲ. ಪುತ್ತರಿ ಹಬ್ಬ ಕಳೆದು ಕುಯಿಲು, ಹೊರೆ ಸಾಗಿಸಿ, ಕಣದಲ್ಲಿ ಮೆದೆ ಕಟ್ಟಿದ ಮೇಲೆ ನಸುಕಿನಲ್ಲಿ ಹಿಂದಿನ ರಾತ್ರಿಯ ಒಕ್ಕಲು ಕೆಲಸದ ಮುಂದುವರಿದ ಭಾಗ - ಹುಲ್ಲು ತೆಗೆಯುವುದು, ಬೋಟಿ (ಕಣದ ಮಧ್ಯದಲ್ಲಿ ನಿಲ್ಲಿಸಿರುವ ಮರದ ಅಥವಾ ಕಲ್ಲಿನ ಕಂಬ)ಯ ಸುತ್ತಲೂ ಹರಡಿರುವ ಭತ್ತದ ಮೇಲೆ ಪಸರಿಸಿರುವ ಹುಡಿಹುಲ್ಲನ್ನು ಕೊಕ್ಕೆಯಲ್ಲಿ "ಸ್ವಿಶ್...ಸ್ವಿಶ್..." ಎಂದು ಬೇರ್ಪಡಿಸುವ ಸದ್ದು, ಉಷೆಯ ಗಾಳಿಯಲ್ಲಿ ಹುಲ್ಲಿನ ಹುಡಿ-ಧೂಳು ಮಿಶ್ರಿತ ಭತ್ತವನ್ನುಕೈಮೊರದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಬೀರುವ ಶಬ್ದ, ಸಣ್ಣ ಗೊರಗದಂತಿರುವ ಬೀಸುವ ಮೊರದ ಸುಂಯ್‍ಗುಟ್ಟುವ ದನಿ...

ಈ ದಿನಗಳನ್ನು ಬಿಟ್ಟರೆ ಬೇರೆ ದಿನಗಳಲ್ಲಿ ಹೊತ್ತಾರೆ ಇಷ್ಟು ಬೇಗನೆ ಎದ್ದು, ಭುಜದ ಮೇಲೆ ಗುದ್ದಲಿ ಹಿಡಿದು ಗದ್ದೆಗೆ ಹೋದರೆ ಏನೂ ಸದ್ದಾಗದು. ಜತೆಗೆ ಕಕ್ಕಡ (ಕಟಕ) ತಿಂಗಳಿನಲ್ಲಿ "ಧೋ" ಎಂದು ಬೀಳುವ ಮಳೆಯಲ್ಲಿ ಬೇರೆ ಸದ್ದೇನೂ ಕೇಳಿಸದು. ಆ ಸಮಯದಲ್ಲಿ ಮದುವೆಗಳಂತೂ ಇರುವುದಿಲ್ಲ. ಯಾರಾದರೂ ಸತ್ತು, ಜೋಡಿಗುಂಡು ಹೊಡೆದರೆ ಆ ಸದ್ದೂ ಕೇಳಿಸದೆ, ಸಾವುಮನೆಯಿಂದ ಆಳು ಬಂದು ತಿಳಿಸಿದಾಗಲೇ ಗೊತ್ತಾಗುವುದು. ಈಗಲಾದರೂ ಫೋನಿವೆ. ಆದರೆ ಮಳೆಗಾಲದಲ್ಲಿ ಕರೆಂಟೇ ಇಲ್ಲದಿರುವಾಗ ಫೋನಿನ ಸಂಪರ್ಕವೂ ಇರುವದಿಲ್ಲ.

ಹತ್ತೊಂಭತ್ತನೇ ಶತಮಾನದ ಕೊನೆಯಲ್ಲಿಯೇ ಊರಿನಲ್ಲಿ ಪ್ರಾಥಮಿಕ ಶಾಲೆಯಿತ್ತು. ಅದು ಕೇರಿಯ ಸ್ಮಶಾನದ ಬಳಿ! ಸುಮಾರು ಐವತ್ತು ವರ್ಷಗಳ ಬಳಿಕ ಅಲ್ಲಿಂದ ಅರ್ಧ ಕಿಲೋಮೀಟರ್ ದೊಡ್ಡ ರಸ್ತೆಯ ಕಡೆಗೆ ಹೊಸ ಶಾಲೆ ತೆರೆದರು. ಮೊದಲು ಐದನೇ ತರಗತಿಯವರೆಗಿದ್ದು ಬಳಿಕ ಆರನೇ ಮತ್ತು ಏಳನೇ ತರಗತಿಗಳನ್ನು ತೆರೆಯಲಾಯಿತು.

ಬಿಳುಗುಂದದಲ್ಲಿ ಮುಖ್ಯವಾದ ಎರಡು ದೇವಸ್ಥಾನಗಳಿವೆ: ಒಂದು ಭದ್ರಕಾಳಿಯದು; ಮತ್ತೊಂದು ಮಾದೇವ(ಈಶ್ವರ)ನದು. ಪ್ರತಿ ವರ್ಷ ಸೌರಮಾನ ಪದ್ಧತಿಯ ಕಾದ್ಯಾರ್ (ವೃಷಭ, ಅಂದರೆ ಮೇ ತಿಂಗಳ ನಡು ಭಾಗದಲ್ಲಿ) ತಿಂಗಳ ಮೊದಲ ಮೂರು ದಿನಗಳಲ್ಲಿ ಭದ್ರಕಾಳಿಯ ಬೋಡ್ ನಮ್ಮೆ (ಬೇಡುವ ಹಬ್ಬ) ನಡೆಸುತ್ತಾರೆ. ಮೀನ್ಯಾರ್ (ಮೀನ ಮಾಸ) ತಿಂಗಳ ೧೦-೧೧ರಲ್ಲಿ, ಅಂದರೆ ಮಾರ್ಚ್ ತಿಂಗಳಿನಲ್ಲಿ, ಮಾದೇವನ ಹಬ್ಬವನ್ನಾಚರಿಸುತ್ತಾರೆ. ಶಿವರಾತ್ರಿಯ ಪೂಜೆಯನ್ನು ಮಾದೇವನ ದೇವಸ್ಥಾನದಲ್ಲಿ ಆಚರಿಸಿದರೆ ಕೈಲ್ ಪೊಳ್ದ್ ಹಬ್ಬದಂದು ಭದ್ರಕಾಳಿ ದೇವಸ್ಥಾನದಲ್ಲಿ ಊರವರು ಸೇರಿ ಪಕ್ಕದ ಗುಡ್ಡದ ಮೇಲೆ ತೆಂಗಿನಕಾಯಿಗೆ ಕೋವಿಯ ಈಡು ಹೊಡೆಯಲು ಹೋಗುತ್ತಾರೆ.

ಕೊಡಗಿನ ಪ್ರತಿ ಊರಿಗೆ ಕಡಿಮೆ ಪಕ್ಷ ಒಂದು ದೇವರ ಕಾಡಿದ್ದು ಅಲ್ಲಿ ಬೇಟೆಯ ದೇವರಾದ ಅಯ್ಯಪ್ಪನ ಸ್ಥಾನವಿರುತ್ತದೆ. ಸ್ಥಾನವೆಂದರೆ ಕಾಡಿನ ನಡುವಿನಲ್ಲಿ (ಕಡಿದರೆ) ಹಾಲು ಒಸರುವ ದೊಡ್ಡ ಮರವೊಂದಕ್ಕೆ ವಿಶಾಲವಾದ ಕಟ್ಟೆಯನ್ನು ಕಟ್ಟಿ, ಮರದ ಬುಡದಲ್ಲಿ ಮಣ್ಣಿನಿಂದ ಮಾಡಿದ ಕೆಲವು ಕಾಡು ಪ್ರಾಣಿಗಳ ಹಾಗೂ ಬೇಟೆನಾಯಿಗಳ ಬೊಂಬೆಗಳನ್ನಿಟ್ಟಿದ್ದಾರೆ. ಮೊಳವುದ್ದದ ಒಂದೆರಡು ಶೂಲಗಳನ್ನೂ ನೆಟ್ಟಿದ್ದಾರೆ. ಬಿಳುಗುಂದದಲ್ಲಿ ಈ ರೀತಿಯ ಎಂಟು ದೇವರ ಕಾಡುಗಳಿವೆ. ಇದರಿಂದ ಈ ಗ್ರಾಮ ಎಷ್ಟು ವಿಶಾಲವೆಂದು ಅಂದಾಜಿಸಬಹುದು. ಇವುಗಳಲ್ಲಿ ಪ್ರಮುಖವಾದವು ಎರಡು: ಒಂದು - ಉತ್ತರಾಟ್ ಅಯ್ಯಪ್ಪನದು. ಇದು ಊರಿನ ಉತ್ತರ ಕೊನೆಯಲ್ಲಿದೆ. ಇನ್ನೊಂದು ಊರಿನ ನೈಋತ್ಯ ದಿಕ್ಕಿನಲ್ಲಿರುವ ಕ್‍ರ್ಲ್ ಕಾಡ್ ಅಯ್ಯಪ್ಪನದು. ಇಲ್ಲಿ ವರ್ಷಕ್ಕೊಮ್ಮೆ ಬಿರ್ಚಿಯಾರ್ (ಸೌರಮಾನ ದ ವೃಶ್ಚಿಕ ಮಾಸ) ತಿಂಗಳಲ್ಲಿ, ಅಂದರೆ ನವಂಬರ್ - ಡಿಸೆಂಬರ್ ತಿಂಗಳಲ್ಲಿ, ಹಬ್ಬ ನಡೆಯುತ್ತದೆ. ಈ ಹಬ್ಬಕ್ಕೆ ‘ಧಾರೆ ಪೂಜೆ’ ಎನ್ನುತ್ತಾರೆ.

ಭದ್ರಕಾಳಿ ದೇವಸ್ಥಾನದಿಂದ ಅನತಿ ದೂರದಲ್ಲಿ ಮಸೀದಿಯಿದೆ. ಅದರ ಸುತ್ತಮುತ್ತಲಲ್ಲಿ ಮುಸ್ಲಿಮರ ಮನೆಗಳಿವೆ. ಟಿಪ್ಪುವು ಕೊಡಗನ್ನು ಆಕ್ರಮಿಸಿದ್ದ ಕಾಲದಲ್ಲಿ ಅವನೊಡನೆ ಬಂದವರ ಸಂತತಿಗಳಿವರು ಎಂದು ಹೇಳುತ್ತಾರೆ. ಊರಿನ ಜನನ, ಮದುವೆ, ಮರಣೇತ್ಯಾದಿ ಸಂದರ್ಭಗಳಲ್ಲಿ ಇವರೂ ಕೊಡವರೂ ಪರಸ್ಪರ ಸೇರುತ್ತಾರೆ. ಇವರಲ್ಲದೆ ಊರಲ್ಲಿ ಅಗಸರ, ಐರಿ(ಬಡಗಿ)ಗಳ, ಪಣಿಕರ ಕೆಲವೇ ಕುಟುಂಬಗಳ ಜತೆಗೆ ಕೊಡವ ಪದ್ಧತಿಯನ್ನು ಆಚರಿಸುವ ಕೆಂಬಟಿ ಹರಿಜನರೂ, ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ ಬಂದ ‘ಮೂಡುಸೀಮೆ ಬಡಗ’ರೆಂದು ಕರೆಸಿಕೊಳ್ಳುವ ಹರಿಜನರೂ ಇದ್ದಾರೆ. ಕಮ್ಮಾರ ಮತ್ತು ನಾಪಿತರ ಒಂದೊಂದು ಕುಟುಂಬವೂ ಇದ್ದವು; ಆದರೆ ಕಳೆದ ಐವತ್ತರ ದಶಕದಲ್ಲಿ ಹೆಚ್ಚಿನ ಕಸುಬನ್ನು ಹುಡುಕಿಕೊಂಡು ಬೇರೆಡೆಗೆ ಹೊರಟು ಹೋದರು.