ಹೊಸಗನ್ನಡ ಕಾವ್ಯದ ಬೆಳವಣಿಗೆ ಇಪ್ಪತ್ತನೇ ಶತಮಾನದ ಆದಿಯಲ್ಲಿ ಇಂಗ್ಲಿಷ್ ಸಾಹಿತ್ಯ ದ ಪ್ರಭಾವದಿಂದ ಕನ್ನಡ ಸಾಹಿತ್ಯವು ಹೊಸ ಹುಟ್ಟನ್ನು ಪಡೆದು ಹಳೆಗನ್ನಡ -ನಡುಗನ್ನಡ ಸಾಹಿತ್ಯಕ್ಕಿಂತ ಬೇರೆಯಾದ ನವೋದಯ ಸಾಹಿತ್ಯವೆಂದು ಹೊಸ ಸಾಹಿತ್ಯ ಪ್ರಕಾರ ದಲ್ಲಿ ಕಾಣಿಸಿಕೊಂಡಿತು. ಇದು ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಕಾವ್ಯ, ಕವನ, ಭಾವಗೀತೆ, ಹೀಗೆ ವಿವಿಧ ಪ್ರಕಾರಗಳಲ್ಲಿ ಬಹುಬೇಗ ಅಭಿವೃದ್ಧಿ ಪಡೆದು ವಿಫುಲ ಸಾಹಿತ್ಯ ಬೆಳವಣಿಗೆಗೆ ಕಾರಣವಾಯಿತು. ಇದರಲ್ಲಿ ಮುಖ್ಯವಾದ ಕಾವ್ಯ ಪ್ರಕಾರಗಳಲ್ಲಿ, ಭಾವಗೀತೆ, ಕವನ, ಕಗ್ಗ, ವಚನದ ಲಕ್ಷಣದ ಮತ್ತು ರಗಳೆ ಛಂದಸ್ಸಿನ ಸಾನೆಟ್ ಮಾದರಿಯ ಪದ್ಯಗಳು ಮುಖ್ಯವಾದವು.

ಕಾವ್ಯ

ನವೋದಯ ಕಾವ್ಯವು ಮುಖ್ಯವಾಗಿ ಭಾವಗಳ ತೀವ್ರತೆಯ ಅಭಿವ್ಯಕಿಗೆ ಪ್ರಾಮುಖ್ಯತೆ ಕೊಟ್ಟಿತು. ಭಾವುಕತೆ, ಉತ್ಸಾಹ, ಸಮೃದ್ಧಿ ಆ ಕಾವ್ಯಗಳ ಪ್ರಮುಖ ಲಕ್ಷಣ. ಹಿಂದಿನ ಕಾವ್ಯ ಪರಂಪರೆಗೆ ಬೇರೆಯಾದ ಲಕ್ಷಣ, ಛಂದಸ್ಸು ಮತ್ತು ಶೈಲಿಯಿಂದ ಹೊಸಬಗೆಯ ಕಾವ್ಯದ ಪ್ರಕಾರ ವಾದ ಭಾವಗೀತೆ, ಕವನಗಳು ೨೦ನೇ ಶತಮಾನದ ಆದಿಯಿಂದ ಇಲ್ಲಿಯವರೆಗೂ ಕಾಲಕ್ಕೆ ತಕ್ಕಂತೆ ಶೈಲಿ, ಭಾವನೆ, ಚಿಂತನೆ, ಅಭಿವ್ಯಕ್ತಿಗಳಲ್ಲಿ ಬದಲಾವಣೆ ಹೊಂದುತ್ತಾ ಸಮೃದ್ಧವಾಗಿ ಬೆಳೆಯಿತು. ಆಧುನಿಕ ಕನ್ನಡದ ರೂವಾರಿಗಳು ಮತ್ತು ಜನಕರೆನಿಸಿದ ಶ್ರೀ ಬಿ.ಎಂ.ಶ್ರೀಕಂಠಯ್ಯ / ಬಿ.ಎಂ.ಶ್ರೀ ಅವರು ತಮ್ಮ ಇಂಗ್ಲಿಷ್ ಗೀತೆಗಳು ಎಂಬ ಹೊಸಕನ್ನಡದ ಇಂಗ್ಲಿಷ್ ಕವನಗಳ ಅನುವಾದಿತ ಕವನ ಸಂಕಲವನ್ನು ಹೊರತಂದರು. ಅಲ್ಲದೆ ಕನ್ನಡ ಭಾಷೆ ಸಾಹಿತ್ಯವನ್ನು ಬೆಳೆಸುವ ಬಗೆಗೆ ಅನೇಕ ಲೇಖನಗಳನ್ನೂ, ಉಪನ್ಯಾಸಗಳನ್ನೂ ನೀಡಿದರು. ಅದು ಉಳಿದ ನವೋದಯ ಕವಿಗಳಿಗೆ ಪ್ರೇರಣೆಯಾಗಿ ಕನ್ನಡದಲ್ಲಿ ಹೊಸ ಬಗೆಯ ಸಾಹಿತ್ಯ ಹುಲುಸಾಗಿ ಬೆಳೆಯಲು ಕಾರಣವಾಯಿತು. ಶ್ರೀ ಕುವೆಂಪು, ಶ್ರೀ ದ.ರಾ.ಬೇಂದ್ರೆ ಅವರು ನಂತರದ ದಿನಗಳಲ್ಲಿ ತಾತ್ವಿಕ ಕಾವ್ಯ ಗಳ ರಚನೆಗಳನ್ನು ಮಾಡಿದರು. ಅವರ 'ನಾಕುತಂತಿ']., ಕೆ.ಎಸ್.ನ, ಪು.ತಿ.ನ ರವರು ಈ ನವೋದಯ ಕಾವ್ಯಕ್ಕೆ ಹೆಚ್ಚಿನ ಮೆರುಗು ಕೊಟ್ಟರು. ಇಂಗ್ಲಿಷ್ ಗೀತೆಗಳು ಕವನ ಸಂಕಲದಿಂದ ಉದಾಹರಣೆ: (ನ್ಯೂಮನ್` ಬರೆದ Lead kindly Light - ಪದ್ಯದ ಅನುವಾದ) ಕರುಣಾಳು, ಬಾ, ಬೆಳಕೆ,- ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು. ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ; ಕೈ ಹಿಡಿದು ನಡೆಸೆನ್ನನು - ಇತ್ಯಾದಿ ಮಕ್ಕಳ ಸಾಹಿತ್ಯ ಈ ನವೋದಯ ಕಾವ್ಯದ ಕಾಲದಲ್ಲಿ ಮಕ್ಕಳ ಸಾಹಿತ್ಯವೂ ಬೆಳೆಯಿತು, ಜಿ.ಪಿ.ರಾಜರತ್ನಂ, ದೇವುಡು, ಡಾ.ದೊಡ್ಡೇರಿ ವೆಂಕಟಗಿರಿರಾವ್, (ಕಲಾ ಕುಮಾರ -ಡಾ.ಡಿ.ವಿ.ರಾವ್), ಹೊಯಿಸಳ, ಕೈಯಾರ ಕಿಂಙಣ್ಣ ರೈ, ಟಿ.ಎಂ.ಆರ್. ಸ್ವಾಮಿ, ಸಿದ್ದಯ್ಯ ಪುರಾಣಿಕ, ಮೊದಲಾದವರು ಮಕ್ಕಳ ಕವನ, ಚುಟುಕ, ಮಕ್ಕಳ ಕಥೆಗಳನ್ನು ಬರೆದು ಮಕ್ಕಳ ಸಾಹಿತ್ಯವನ್ನು ಅಭಿವೃದ್ಧಿ ಪಡಿಸಿದರು. ಜಾನಪದ ಸಾಹಿತ್ಯ ಜಾನಪದ ಹಾಡು, ಗಾದೆ, ಒಗಟು,ಒಡಪು, ಗೀಗೀ ಪದ ಮತ್ತು ಲಾವಣಿಗಳ ಸಂಗ್ರಹವನ್ನು ಕೆಲವರು ಶ್ರದ್ಧೆಯಿಂದ ಮಾಡಿದರು. ಇದು ಕನ್ನಡ ಜಾನಪದ ಸಾಹಿತ್ಯದ ಬೆಳವಣಿಗೆಗೆ ಕಾರಣವಾಯಿತು. ಕನ್ನಡದ ವಿಶಿಷ್ಟ ಜಾನಪದ ಕಲೆಯಾದ ಯಕ್ಷಗಾನ ಕಲೆಯೂ ಈ ಸಮಯದಲ್ಲಿ ಅಭಿವೃದ್ಧಿ ಹೊಂದಿತು. ಶ್ರೀ ಶಿವರಾಮ ಕಾರಂತರು ಯಕ್ಷಗಾನ ಕಲೆಯಲ್ಲಿ ಸಂಶೋಧನೆ ಸುಧಾರಣೆಗಳನ್ನು ಮಾಡಿ ಆ ಕಲೆಗೆ ಹೊಸರೂಪ, ಜಾಗತಿಕ ಪ್ರಾಮುಖ್ಯತೆ ತಂದುಕೊಟ್ಟರು. ಕನ್ನಡ ಜಾನಪದ ವಿಭಾಗ ಬಹು ದೊಡ್ಡದು. ಹಳ್ಳಿಗರು ಅವಿದ್ಯಾವಂತರಾದರೂ ನೂರಾರು ವರ್ಷಗಳಿಂದ ತಮ್ಮ ಕಾವ್ಯ ಪ್ರತಿಭೆಯಿಂದ ಲಾವಣಿ, ಕೋಲಾಟದ ಪದ, ಪದ, ರಾಗೀ ಬೀಸುವ ಪದ; ಜೀವನದ ಸುಖ ದುಃಖದ ಪದಗಳನ್ನು ರಚನೆ ಮಾಡಿ ಹಾಡಿದರು. ಅವನ್ನು ಬಾಯಿಂದ ಬಾಯಿಗೆ ಕಲಿತು (ಮೌಖಿಕವಾಗಿ), ನೆನಪಿನಲ್ಲಿ ಇಟ್ಟುಕೊಂಡು -ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ದಾಟಿಸುತ್ತಿದ್ದರು. ಅದರ ಮೌಲ್ಯವನ್ನು ಕೆಲವರು ಅರಿತು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಅದರ ಧಾಖಲಾತಿ ಪ್ರಾರಂಭವಾಯಿತು ; ಅದರಲ್ಲಿರುವ ಸಹಜವಾದ ನೋವು -ನಲಿವುಗಳ ಅಭಿವ್ಯಕ್ತಿ ಕೆಲವೊಮ್ಮೆ ಆಧುನಿಕ ಕಾವ್ಯ- ಕವನಗಳ ರೂಪಕ-ಉಪಮೆಗಳನ್ನು ಮೀರಿಸುತ್ತದೆ. ಉದಾಹರಣೆಗೆ : ಜವರಾಯ ಬಂದಾರೆ ಬರಿಕೈಲಿ ಬರಲಿಲ್ಲ | ಕುಡಗೋಲು ಕೊಡಲೀಯ ಹಿಡಿತಂದ | (ಕೊಡಲ್ಯೊಂದ ಹಿಡಿತಂದ ) ಕುಡಗೋಲು ಕೊಡಲೀಯ ಹಿಡಿತಂದ ಜವರಾಯ | ಒಳ್ಳೊಳ್ಳೆ ಮರನಾ ಕಡಿಬಂದ || ಯಮನ ಲೆಕ್ಕಾಚಾರ ತಿಳಿಯುವುದಿಲ್ಲ. ಪಾಪಿಷ್ಟರನ್ನೂ, ಮುದುಕರನ್ನೂ, ವಾಸಿಯಾಗದ ರೋಗಿಗಳನ್ನು ಬಿಟ್ಟು ಆರೋಗ್ಯವಾಗಿರುವ ಯುವಕರನ್ನೂ, ಯುವತಿಯರನ್ನು, ಬಾಲಕ/ಬಾಲಕಿಯರನ್ನೂ ತನ್ನ ಲೋಕಕ್ಕೆ ಎಳೆದೊಯ್ಯತ್ತಾನೆ. ಈ ನೋವು ಹಾಡಾಗಿ ಹೊರಹೊಮ್ಮಿದೆ. ಇಲ್ಲಿ ಬಂದಿರುವ ರೂಪಕ ಯಾವ ಕಾವ್ಯಕ್ಕೂ ಕಡಿಮೆ ಇಲ್ಲ.

ಕನ್ನಡ ಭಾಷೆಯ ಅಭಿವೃದ್ಧಿ ಇದೇ ಸಮಯದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗಾಗಿ ಕನ್ನಡ ಶಬ್ದಕೋಶ ಕನ್ನಡ ವ್ಯಾಕರಣ, ಛಂದಸ್ಸು, ಅಲಂಕಾರ ಈ ಬಗೆಯ ಕನ್ನಡ ಭಾಷಾಶಾಸ್ತ್ರದ ಬೆಳವಣಿಗೆಯೂ ಆಯಿತು. ಮಕ್ಕಳಿಗಾಗಿ ಮೈಸೂರು ವಿದ್ಯಾ ಇಲಾಖೆ ಪ್ರಕಟಿಸಿದ ಶ್ರೀ ತೀ.ನಂ. ಶ್ರೀಕಂಠಯ್ಯ ನವರ 'ಕನ್ನಡ ಮಧ್ಯಮ ವ್ಯಾಕರಣ' ಮತ್ತು ಪ್ರೌಢರಿಗಾಗಿ ಬರೆದ 'ಕನ್ನಡ ಕೈಪಿಡಿ' ಪ್ರಸಿದ್ಧವಾದವು. ಹೆಚ್ಚು ಮಾಹಿತಿಯುಳ್ಳ ಕನ್ನಡ -ಇಂಗ್ಲಿಷ್ ಕನ್ನಡ ಶಬ್ದಕೋಶವನ್ನು ಮೊದಲು ರೆ.ಜೆ.ಎಫ್. ಕಿಟ್ಟೆಲ್ ರಚಿಸಿದರು. ಅದಕ್ಕೂ ಮೊದಲೇ ಆ ಬಗೆಯ ಶಬ್ದಕೋಶವನ್ನು ಕ್ರಿಶ್ಚಿಯನ್ ಮತದ ಪಾದರಿಯವರು ರಚಿಸಿದ್ದರು. ರೆ.ಜೆ.ಎಫ್. ಕಿಟ್ಟಲ್ ರವರ ಶಬ್ದ ಕೋಶವು ಸಮಗ್ರವಾಗಿದೆ. ನಂತರ ಶ್ರೀ ಶಿವರಾಮ ಕಾರಂತರು ೧೯೫೨ ರಲ್ಲಿ ಕನ್ನಡ-ಕನ್ನಡ ನಿಘಂಟು- ಸಿರಿಗನ್ನಡ ಅರ್ಥಕೋಶವನ್ನು ರಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೭೫ ರಲ್ಲಿ ಕನ್ನಡ -ಕನ್ನಡ ಅರ್ಥಕೊಶ, ಸಂಕ್ಷಿಪ್ತ ಕನ್ನಡ ನಿಘಂಟು ಹೊರಬಂದಿತು. ಮೈಸೂರು ವಿಶ್ವವಿದ್ಯಾಲಯದಿಂದ ಸಮಗ್ರವಾದ ಕನ್ನಡ-ಇಂಗ್ಲಿಷ್-ಕನ್ನಡ ನಿಘಂಟು ರಚಿಸಲ್ಪಟ್ಟಿತು.