ಪುಷ್ಪಕೃಷಿ ಮತ್ತು ಮಾರುಕಟ್ಟೆ

ಪುಷ್ಪ ಕೃಷಿ ಎಂಬುದು ಇತ್ತೀಚಿನ ದಿನಗಳವರೆಗೆ ಕೇವಲ ಮನೆಯಂಗಳದಲ್ಲಿ ಅದಕ್ಕಾಗಿ ಇಲ್ಲವೇ, ದೇವರ ಪೂಜೆಗಾಗಿ ಅಥವಾ ಮನೆಯೊಳಗಿನ ಅಲಂಕಾರಕ್ಕಾಗಿ ಮಾತ್ರ ಪ್ರಾಧಾನ್ಯತೆ ಪಡೆದಿತ್ತು. ಆದರೆ ಇದೀಗ ಇದೊಂದು ಪ್ರಮುಖ ಕೃಷಿ ಉದ್ದಿಮೆಗಾಗಿ ನಮ್ಮಲ್ಲಿ ಹೊರ ಹೊಮ್ಮುತ್ತಿದೆ. ಪುಷ್ಪ ಕೃಷಿಯನ್ನುವುದು ವಾಣಿಜ್ಯ ರೀತಿಯಲ್ಲಿ ಕೈಗೊಳ್ಳಲು ಹಲವು ರೀತಿಯ ಪ್ರೇರಣೆಗಳನ್ನಿಂದು ವಿವಿಧ ಇಲಾಖೆಗಳು, ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಸರಕಾರಗಳು ಕೊಡಲಾರಂಭಿಸಿದ್ದು, ಪರಿಣಾಮವಾಗಿ ಈ ಕ್ಷೇತ್ರಕ್ಕಿಂದು ವಿಫುಲ ಅವಕಾಶಗಳು ಒದಗಿ ಬರಲಾರಂಭಿಸಿವೆ.

ಹನ್ನೆರಡು ಜಾತಿಯ ಹೂವುಗಳು ಅಥವಾ ವಿವಿಧ ವಂಶಗಳಿಗೆ ಸೇರಿದ ಹೂವುಗಳ ಗೊಂಚಲುಗಳನ್ನು ತೋರಿಸುತ್ತಿರುವ ಭಿತ್ತಿಚಿತ್ರ
ಪುಷ್ಪ
ಪುಷ್ಪ ಮಾರುಕಟ್ಟೆ

ಪುಷ್ಪಕೃಷಿ ಬದಲಾಯಿಸಿ

  • ವಿಶ್ವದಾದ್ಯಂತ ಹೂವುಗಳನ್ನು ಬಯಸದ ಕ್ಷೇತ್ರಗಳಿಲ್ಲ. ಅವುಗಳ ಅಂದಕ್ಕೆ ಮಾರು ಹೋಗದ ವ್ಯಕ್ತಿಗಳಿಲ್ಲ. ಇವನ್ನು ಆಸ್ವಾದಿಸದ ಜನರಿಲ್ಲ, ಈ ದೃಷ್ಟಿಯಿಂದ ಇವುಗಳ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಲೆಂದೇ ಒಂದು ಅಂತರಾಷ್ಟ್ರೀಯ ಸಂಘವಿದ್ದು, ಈ ಸಂಘವು ಪುಷ್ಪಗಳ ಉತ್ಪಾದನೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಮಾಹಿತಿಗಳನ್ನು ಪ್ರಕಟಿಸಿ ಗ್ರಾಹಕರಿಗೆ ಮತ್ತು ಉತ್ಪಾದಕರಿಗೆ ಅಗತ್ಯ ಪರಿಸರವನ್ನು ನಿರ್ಮಿಸುತ್ತಿದೆ.
  • ನಮ್ಮ ಹುಟ್ಟಿನಿಂದ ಹಿಡಿದು ಸಾವಿನತನಕ ನಡೆಯುವ ಎಲ್ಲಾ ಕಾರ್ಯಗಳಿಗೂ ನಾನಾ ರೀತಿಯ ಪುಷ್ಪಗಳು ಅತ್ಯಗತ್ಯ. ಈ ಪುಷ್ಪಗಳು ನಮ್ಮ ಸುಖ-ದುಃಖಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಈ ದೃಷ್ಟಿಯಿಂದ ಇವಿಂದು ಎಲ್ಲರ ಆಕರ್ಷಣಾ ಬಿಂದುಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಪುಷ್ಪಗಳಿಗಿರುವ ಬೇಡಿಕೆ ಅಧಿಕಗೊಳ್ಳುತ್ತಿದ್ದು, ಇದರಿಂದಾಗಿ ಇವುಗಳ ವಾಣಿಜ್ಯ ರೀತಿಯ ವ್ಯವಸಾಯಕ್ಕೆ ಮಹತ್ವ ನೀಡಲಾಗುತ್ತಿದೆ.
  • ಪುಷ್ಪಗಳು ಮತ್ತು ಅಲಂಕಾರಿಕ ಗಿಡಗಳಿಗೆ ಅಧಿಕ ಬೇಡಿಕೆ ಬರಲಾರಂಭಿಸಿದೆ. ಪುಷ್ಪ ಕೃಷಿಯಲ್ಲಿಂದು ತುಂಡು ಮಾಡಬಲ್ಲ ಹೂವುಗಳು, ಬಿಡಿಯಾದ ಹೂಗಳು, ಅಲಂಕಾರಿಕ ಎಲೆಗಿಡಗಳು, ಪೊದರುಗಳು, ಬಳ್ಳಿಗಳು, ಮುಳ್ಳುಗಳು, ವಾರ್ಷಿಕ, ಬಹು ವಾರ್ಷಿಕ, ಹುಲ್ಲು, ಬಿದಿರು, ದುಂಡನೆಯ, ಅಗಲ ಎಲೆಯ ಅಲಂಕಾರಿಕ ಗಿಡಗಳಲ್ಲೂ ಏಕಬೀಜ ವರ್ಗದ ಬಹುವರ್ಣದ ಹೂಬಿಡುವ ಸಸ್ಯಗಳು, ಕೆಂಪು ಮತ್ತು ನೀಲ ಕೆಂಪು ಪುಷ್ಪವುಳ್ಳ ಪೊದರು ಬಳ್ಳಿ, ಸೇವಂತಿಗೆ, ಮಲ್ಲಿಗೆ, ಗುಲಾಬಿ, ನೀರಲ್ಲಿರುವ ಸಸ್ಯಗಳು, ಕಲ್ಲಿನಲ್ಲಿ ಬೆಳೆಯುವ ಸಸ್ಯಗಳು ಇತ್ಯಾದಿಗಳಿವೆ.
  • ಇವೆಲ್ಲವುಗಳಿಗೂ ಆಂತರಿಕ ಮತ್ತು ಅಂತರಾಷ್ಟ್ರೀಯ ಬೇಡಿಕೆಯಿದ್ದು ಇವುಗಳೊಂದಿಗೆ ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ಬೇಡಿಕೆಯಿದ್ದು ಇವುಗಳೊಂದಿಗೆ ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ವಿಶಿಷ್ಟ ಪುಷ್ಪಗಳ ಸಂಶೋಧನೆಯಾಗಿ ಅವುಗಳಿಗೂ ಅಧಿಕ ಬೇಡಿಕೆಯಿದೆ. ಈ ಸಾಲಿನಲ್ಲಿ ಬರುವ ಪುಷ್ಪಗಳೆಂದರೆ ಯೂರೋ, ಮೊಂಕ್ಸ್‌ಹುಡ್‌, ಕಾಂಗರೂ ಪಾವ್‌ ಮುಂತಾದವುಗಳು

ಭಾರತದಲ್ಲಿ ಪುಷ್ಪ ಕೃಷಿ ಬದಲಾಯಿಸಿ

 
ಮದುವೆಮನೆಗಳಲ್ಲಿ ಪುಷ್ಪದ ಅಲಂಕಾರ
  • ಭಾರತದಲ್ಲಿ ಪುಷ್ಪ ಕೃಷಿ ನಿಧಾನವಾಗಿಯಾದರೂ ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಇಲ್ಲಿ ಇನ್ನಷ್ಟು ಬೆಳವಣಿಗೆಗೆ ವಿಪುಲ ಅವಕಾಶಗಳಿವೆ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿರುವ ನಾನಾ ರೀತಿಯ ಹವಗುಣ, ಉತ್ತಮ ಮಣ್ಣು, ಕಡಿಮೆ ಮಟ್ಟದ ಉತ್ಪಾದನಾ ವೆಚ್ಚ ಇತ್ಯಾದಿ. ನಮ್ಮಲ್ಲಿ ವಾಣಿಜ್ಯ ರೀತಿಯ ಪುಷ್ಪ ಕೃಷಿಗೆ ಪ್ರಾಮುಖ್ಯತೆ ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿದ್ದು, ಒಟ್ಟಾರೆಯಾಗಿ ಇದರ ಒಟ್ಟು ವಿಸ್ತೀರ್ಣ ಸುಮಾರು ೮೯,೦೦೦ ಹೆಕ್ಟೇರ್‌ಗಳಷ್ಟಾಗಿದೆ.
  • ಭಾರತದ ಎಲ್ಲಾ ರಾಜ್ಯಗಳಲ್ಲೂ ಈ ಕೃಷಿಯಿದ್ದರೂ, ವಾಣಿಜ್ಯ ರೀತಿಯಲ್ಲಿ ಇದನ್ನು ಹೆಚ್ಚಾಗಿ ಕರ್ನಾಟಕ, ತಮಿಳುನಾಡು, ಹರಿಯಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ರಾಜಸ್ತಾನ, ದೆಹಲಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತಿದೆ. ಇದರ ಒಟ್ಟು ವಿಸ್ತೀರ್ಣ ಇನ್ನಷ್ಟು ಹೆಚ್ಚುವ ಸಂಭವವಿದೆ.
  • ಪುಷ್ಪ ಕೃಷಿಯ ಒಟ್ಟು ವಿಸ್ತೀರ್ಣದ ಬಹುಪಾಲು ಸಾಂಪ್ರದಾಯಿಕ ಪದ್ಧತಿಯಡಿಯಲ್ಲಿದ್ದು, ಆಧುನಿಕ ಹಸಿರು ಮನೆ ಪದ್ಧತಿಯಡಿ ಕೇವಲ ೬೦೦ ಹೆಕ್ಟೇರ್ ಪ್ರದೇಶವಿದೆ. ಪುಷ್ಪ ಕೃಷಿಯಲ್ಲಿರುವ ಒಟ್ಟು ವಿಸ್ತೀರ್ಣದ ಮೂರನೆ ಎರಡು ಭಾಗದಲ್ಲಿ ಸಾಂಪ್ರದಾಯಿಕ ಪುಷ್ಪಗಳಾದ ಚೆಂಡುಮಲ್ಲಿಗೆ, ಮಲ್ಲಿಗೆ, ಗುಲಾಬಿ, ಸೇವಂತಿಗೆ, ಸುಗಂಧ ರಾಜ, ಮುಂತಾದವುಗಳನ್ನು ಬೆಳೆಸಲಾಗುತ್ತಿದೆ.
  • ಇವುಗಳೊಂದಿಗೆ ಇತರ ಪುಷ್ಪಗಳಾದ ದುಂಡು ಹೂ, ಆರ್ಕಿಡ್, ಅಂಥೋರಿಯಂ ಇತ್ಯಾದಿಗಳಿಗೂ ಪ್ರಾಶಸ್ತ್ಯ ಕೊಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಸಿರುಮನೆ ವ್ಯವಸ್ಥೆಯಡಿಯಲ್ಲಿ ನಾನಾ ರೀತಿಯ ಹೂಗಳನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಬಂದಾಗ ಪೂರೈಸುವ ಉದ್ದೇಶದಿಂದ ಬೆಳೆಸಲಾಗುತ್ತಿದೆ

ಮಾರುಕಟ್ಟೆ ಬದಲಾಯಿಸಿ

  • ಆಂತರಿಕವಾಗಿ ದಕ್ಷಿಣದ ರಾಜ್ಯಗಳಲ್ಲಿ ಪುಷ್ಪಗಳಿಗಿರುವ ಬೇಡಿಕೆ ಉತ್ತರದ ರಾಜ್ಯಗಳಿಗೆ ಹೋಲಿಸಿದಾಗ ಅಧಿಕ ಪ್ರಮಾಣದ್ದಾಗಿದೆ. ಸಾಂಪ್ರದಾಯಿಕ ಪುಷ್ಪಗಳಿಗಿರುವ ಬೇಡಿಕೆಯೊಂದಿಗೆ ಆಧುನಿಕ ಅಲಂಕಾರಿಕ ಪುಷ್ಪಗಳಿಗೂ ಹೆಚ್ಚಿನ ಬೇಡಿಕೆ ಇತ್ತೀಚಿನ ವರ್ಷಗಳಲ್ಲಿ ಅಧಿಕಗೊಳ್ಳುತ್ತಿದೆ. ಇವೆಲ್ಲ ನಮ್ಮಲ್ಲಿ ಇವಕ್ಕಿರುವ ವಿಫುಲ ಅವಕಾಶಗಳನ್ನು ಎತ್ತಿ ತೋರಿಸುತ್ತಿವೆ.
  • ಭಾರತದಲ್ಲಿ ಪುಷ್ಪಗಳ ವ್ಯಾಪಾರ ಅಧಿಕ ಪ್ರಮಾಣದಲ್ಲಿ ಮುಂಬಯಿ, ಪೂನಾ, ಬೆಂಗಳೂರು, ಚೆನೈ, ಹೈದರಾಬಾದ್, ದೆಹಲಿ, ಚಂಡೀಗಢ, ಲಕ್ನೋ ಮತ್ತು ಕಲ್ಕತ್ತಾಗಳಲ್ಲಿ ನಡೆಯುತ್ತಿದೆ. ನಮ್ಮಲ್ಲಿರುವ ಮಾರುಕಟ್ಟೆ ವ್ಯವಸ್ಥೆಯು ಎರಡು ರೀತಿಯಲ್ಲಿದ್ದು, ಮೊದಲನೆಯ ವ್ಯವಸ್ಥೆಯು ತೀರ ಅಸಂಘಟಿತ ರೀತಿಯಲ್ಲಿದ್ದು, ಇಲ್ಲಿ ಸಣ್ಣ ಸಣ್ಣ ಕೃಷಿಕರು ಉತ್ಪಾದಿಸುತ್ತಿರುವ ವಿವಿಧ ಹೂಗಳನ್ನು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡಲಾಗುತ್ತಿದೆ.
  • ಈ ವ್ಯವಸ್ಥೆಯಲ್ಲಿ ಉತ್ಪಾದಕನಿಗೆ ದೊರಕುತ್ತಿರುವ ಬೆಲೆ ಗ್ರಾಹಕನು ಕೊಡುವ ಬೆಲೆಯ ಶೇಕಡಾ ೩೦ರಷ್ಟಾಗಿದೆ. ಎರಡನೆಯ ವ್ಯವಸ್ಥೆಯಲ್ಲಿ ರಫ್ತಿನ ಉದ್ದೇಶ ಇಟ್ಟುಕೊಂಡು ಹೆಚ್ಚಿನ ಪ್ರಮಾಣದ ಹೂಡಿಕೆಯನ್ನು ಮಾಡಿ ವಿದೇಶಿ ಮಾರುಕಟ್ಟೆಯಲ್ಲಿ ಆಕರ್ಷಣೆಗೊಳಗಾಗಿರುವ ಹೂವುಗಳನ್ನು ಉತ್ಪಾದಿಸುವ ಉದ್ದಿಮೆದಾರರಿದ್ದು, ಇವರಲ್ಲಿ ಟಾಟಾ, ಬಿರ್ಲಾ, ಥಾಪರ್, ಎಂ.ಆರ್.ಎಫ್ ಸಮೂಹ, ಗೊಯೆಂಕಾ ಸಮೂಹ, ಹಲವು ಬಹು ರಾಷ್ಟ್ರೀಯರು ಸೇರಿದ್ದಾರೆ.
  • ಈ ಎಲ್ಲಾ ಉದ್ದಿಮೆದಾರರು ಮುಖ್ಯವಾಗಿ ತುಂಡು ಹೂವುಗಳಾದ ಗುಲಾಬಿ, ಗ್ಲಾಡಿಯೋಲಿ, ಜರ್ಬರ, ಅಂಥೋರಿಯಂ, ದಹ್ಲಿಯಾಸ್, ಸುಗಂಧ ರಾಜ, ಆರ್ಕಿಡ್‌ಗಳ ಉತ್ಪಾದನೆಯನ್ನು ಹಸಿರು ಮನೆ ಮತ್ತಿತರ ವ್ಯವಸ್ಥೆಗಳ ಮೂಲಕ ಕೈಗೊಂಡು ತಾವೇ ಮಾರಾಟ ವ್ಯವಸ್ಥೆಯನ್ನು ಕೈಗೊಳ್ಳುತ್ತಿದ್ದಾರೆ.
  • ಭಾರತದಲ್ಲಿ ಉತ್ಪಾದಿಸಲ್ಪಡುವ ಪುಷ್ಪಗಳಿಗೆ ಆಂತರಿಕವಾಗಿ ಹೋಟೇಲುಗಳು ಅದರಲ್ಲೂ ಮುಖ್ಯವಾಗಿ ತಾರಾ ಹೋಟೇಲುಗಳು ಪ್ರಮುಖ ಗ್ರಾಹಕರು, ಇದರೊಂದಿಗೆ ದೊಡ್ಡ ಉದ್ದಿಮೆದಾರರು, ವಿಮಾನ ನಿಲ್ದಾಣಗಳು ಇವೆಲ್ಲಾ ಪುಷ್ಪಗಳಿಗಿರುವ ಪ್ರಮುಖ ಮಾರು ಕಟ್ಟೆ ಗಳು. ದೇಶಕ್ಕೆ ಆಗಮಿಸುವ ವಿದೇಶಿಯರು ಹೆಚ್ಚಾದಂತೆ ಪುಷ್ಪಗಳಿಗಿರುವ ಆಂತರಿಕ ಮಾರುಕಟ್ಟೆಯೂ ವಿಸ್ತರಿಸುತ್ತಿರುವುದನ್ನು ಕಳೆದ ಹಲವು ವರ್ಷಗಳ ಬೇಡಿಕೆಯಿಂದ ತಿಳಿದುಕೊಳ್ಳಲಾಗಿದೆ.
 
ಕೃಷಿಕ್ಷೇತ್ರ

ಅಂತರಾಷ್ಟ್ರೀಯ ಮಟ್ಟದಲ್ಲಿ ಪುಷ್ಪಕೃಷಿ ಮತ್ತು ಬೇಡಿಕೆ ಬದಲಾಯಿಸಿ

  • ಪುಷ್ಪ ಕೃಷಿ ಮತ್ತು ಅವುಗಳ ಬಳಕೆ ಪ್ರತಿಯೊಂದು ರಾಷ್ಟ್ರಗಳಲ್ಲೂ ಆಗುತ್ತಿದ್ದರೂ ಕಳೆದ ಎರಡು ದಶಕಗಳಿಂದೀಚೆಗೆ ಈ ಕೃಷಿಯ ಬಗ್ಗೆ ಆಸಕ್ತಿ ಹೆಚ್ಚಾಗಿ ಇದರ ವಿಸ್ತೀರ್ಣವು ಅಧಿಕ ಗೊಳ್ಳುತ್ತಲಿದೆ. ಇದಕ್ಕೆ ಪೂರಕವಾದ ವಾತಾವರಣವನ್ನು ಜಾಗತೀಕರಣವು ಸೃಷ್ಟಿಸಿದ್ದು ಪರಿಣಾಮವಾಗಿ ಸಾಂಪ್ರದಾಯಿಕವಲ್ಲದ ರಾಷ್ಟ್ರಗಳಲ್ಲೂ ಇದಕ್ಕೆ ಮಹತ್ವ ದೊರಕುತ್ತಲಿದೆ.
  • ಸಾಂಪ್ರದಾಯಿಕವಾಗಿ ಪುಷ್ಪ ಕೃಷಿ ಮತ್ತು ಬಳಕೆಗೆ ಪ್ರಸಿದ್ಧಿಯನ್ನು ಪಡೆದ ರಾಷ್ಟ್ರಗಳೆಂದರೆ ನೆದರ್ ಲ್ಯಾಂಡ್, ಇಟಲಿ, ಜರ್ಮನಿ ಮತ್ತು ಜಪಾನ್‌ಗಳಾಗಿವೆ. ಇತ್ತೀಚಿನ ವರ್ಷಗಳಲ್ಲಿ ಸಾಂಪ್ರದಾಯಿಕವಲ್ಲದ ರಾಷ್ಟ್ರಗಳಾದ ಲ್ಯಾಟಿನ್ ಅಮೇರಿಕಾ, ಆಫ್ರಿಕಾ ಮತ್ತು ಏಷಿಯಾಗಳಲ್ಲಿ ಈ ಬಗ್ಗೆ ಆದ್ಯತೆ ದೊರಕಲಾರಂಭಿಸಿದೆ. ನಾನಾ ರೀತಿಯ ಪುಷ್ಪಗಳಿಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಧಿಕ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಮೊದಲ ಪಂಕ್ತಿಯಲ್ಲಿ ಪಶ್ಚಿಮ ಯುರೋಪು ಅಮೇರಿಕಾ ಮತ್ತು ಜಪಾನ್‌ಗಳು ಸೇರಿವೆ.
  • ವಾರ್ಷಿಕವಾಗಿ ವಿಶ್ವ ಮಾರುಕಟ್ಟೆಗೆ ರಫ್ತಾಗುತ್ತಿರುವ ವಿವಿಧ ರೀತಿಯ ಪುಷ್ಪ ಮತ್ತು ಅಲಂಕಾರಿಕ ಗಿಡಗಳ ಒಟ್ಟು ಮೌಲ್ಯ ಸುಮರು ೭,೬೬೨, ೯೨೪ ಸಾವಿರ ಡಾಲರ್ ಗಳಾಗಿದ್ದು, ನೆದರ್ ಲ್ಯಾಂಡ್‌‌ನ ಪಾಲು ಇದರಲ್ಲಿ ಶೇಕಡಾ ೫೦ ರಷ್ಟಾಗಿದೆ. ಬಳಕೆಯ ದೃಷ್ಟಿಯಿಂದ ವಿಶ್ವದಲ್ಲಿ ಜರ್ಮನಿಯ ಪಾಲು ಅತ್ಯಧಿಕ, ಆ ಬಳಿಕದ ಸ್ಥಾನಗಳು ಕ್ರಮವಾಗಿ ಅಮೇರಿಕಾ, ಇಂಗ್ಲೆಂಡ್, ಫ್ರಾನ್ಸ್, ನೆದರ್ ಲ್ಯಾಂಡ್‌ಗಳದ್ದಾಗಿದೆ.

ಬೇಡಿಕೆ ಯಾಕಾಗಿ? ಬದಲಾಯಿಸಿ

ಪುಷ್ಪಗಳಿಗಿರುವ ಬೇಡಿಕೆ ನಾನಾ ರೀತಿಯದ್ದಾಗಿದ್ದು, ಭಾರತದಲ್ಲಿ ಅತ್ಯಧಿಕ ಪ್ರಮಾಣ ಪೂಜೆ ಮತ್ತು ಹಬ್ಬಗಳಿಗಾಗಿ ಬಳಕೆಯಾಗುತ್ತಿದೆ. ಇಡೀ ವಿಶ್ವವನ್ನು ಬೇಡಿಕೆ ದೃಷ್ಟಿಯಿಂದ ಗಣನೆಗೆ ತೆಗೆದುಕೊಂಡಲ್ಲಿ ಶೇಕಡಾ ೪೫ ರಷ್ಟು ಉಡುಗೊರೆಗೆ, ಶೇಕಡಾ ೨೫ ಹುಟ್ಟುಹಬ್ಬ ಮತ್ತು ಮದುವೆಗಳಿಗೆ ಮತ್ತು ಉಳಿದವು ಮನೆಯ ಅಲಂಕಾರ ಮತ್ತಿತರ ಸಮಾರಂಭಗಳಿಗಾಗಿ ಉಪಯೋಗಿಸಲಾಗುತ್ತಿದೆ. ಜಪಾನಿನಲ್ಲಿ ತುಂಡು ಹೂವುಗಳಿಗೆ ಅಧಿಕ ಬೇಡಿಕೆಯಿದ್ದು, ಐರೋಪ್ಯ ರಾಷ್ಟ್ರಗಳು ಉತ್ತಮ ಗುಣಮಟ್ಟದ ದೀರ್ಘಕಾಲ ಬಾಳಬಲ್ಲ ಅಲಂಕಾರಿಕ ಗಿಡಗಳಿಗೆ ಹೆಚ್ಚಿನ ಒತ್ತು ನೀಡುತ್ತಿವೆ.

ಭಾರತದಿಂದ ಪುಷ್ಪಗಳ ರಫ್ತು ಬದಲಾಯಿಸಿ

 
ಪುಷ್ಪಕೃಷಿಕ್ಷೇತ್ರ

ಕೃಷಿಕ್ಷೇತ್ರದಲ್ಲಿ ತನ್ನದೇ ಆದ ಪರಂಪರೆ ಭಾರತದ್ದಾಗಿದ್ದರೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಪಾಲು ಅತ್ಯಲ್ಪ. ಇದೇ ಸ್ಥಿತಿ ಪುಷ್ಪ ಕೃಷಿ ಕ್ಷೇತ್ರದ್ದಾಗಿದೆ. ಹೀಗಿದ್ದರೂ ಕಳೆದೊಂದು ದಶಕದಿಂದೀಚೆಗೆ ಸರಕಾರಗಳು ಕೊಡುತ್ತಿರುವ ಪ್ರೋತ್ಸಾಹಗಳಿಂದಾಗಿ ನಮ್ಮಲ್ಲಿಂದು ಹಲವು ಪುಷ್ಪ ಕೃಷಿ ಘಟಕ ರಫ್ತಿನ ದೃಷ್ಟಿ ಇಟ್ಟುಕೊಂಡು ನಾನಾ ರೀತಿಯ ಹೂವುಗಳನ್ನು ಬೆಳೆಸಿ ರಫ್ತು ಮಾಡುತ್ತಿದೆ. ಈ ರೀತಿಯ ಘಟಕಗಳು ಹೆಚ್ಚಾಗಿ ಮುಂಬಯಿ, ಬೆಂಗಳೂರು, ದೆಹಲಿ, ಚೆನೈ, ಹೈದರಾಬಾದ್‌ಗಳಂತ ಮೆಟ್ರೋಗಳಲ್ಲಿ ಡಚ್ ಮತ್ತು ಇಸ್ರೇಲಿ ತಜ್ಞರ ಸಲಹೆಯಂತೆ ತಾಂತ್ರಿಕತೆಯನ್ನು ಅಳವಡಿಸಿ ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲಾ ಉದ್ದಿಮೆದಾರರು ಹಸಿರುಮನೆ ಮತ್ತಿತ್ತರ ಮೂಲಭೂತ ವ್ಯವಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದಿಂದ ರಫ್ತು ಮಾಡುತ್ತಿರುವ ಪುಷ್ಪಗಳನ್ನು ಮುಖ್ಯವಾಗಿ ೪ ವಿಭಾಗಗಳಲ್ಲಿ ಗುರುತಿಸಿಕೊಳ್ಳಬಹುದು. ಅವುಗಳೆಂದರೆ,

  1. ತುಂಡುಹೂಗಳು: ಈ ತುಂಡು ಹೂವುಗಳನ್ನು ಒಂದನೆಯದಾಗಿ ಹಸಿಯಾಗಿ ಪುಷ್ಪಗುಚ್ಛ ಮತ್ತು ಅಲಂಕಾರಕ್ಕಾಗಿ ಬಳಸಲು ರಫ್ತು ಮಾಡುವುದಾದಲ್ಲಿ ಇನ್ನೊಂದೆಡೆಯಲ್ಲಿ ಅವನ್ನು ಬೇರೆ ಬೇರೆ ರೀತಿಯ ಬಳಕೆಗಾಗಿ ಒಣಗಿಸಿ ಇಲ್ಲವೆ ತೊಳೆದು ಕೂಡ ರಫ್ತು ಮಾಡಲಾಗುತ್ತಿದೆ.
  2. ಬಲ್ಬುಗಳು, ನಳಿಕೆಗಳು, ಬೇರು ಸಹಿತ ಇತ್ಯಾದಿ ರೂಪಗಳಲ್ಲಿ.
  3. ಜೀವವಿರುವ ಬೇರು ಸಹಿತ ತುಂಡುಗಳು.
  4. ಪುಷ್ಪಗುಚ್ಛಗಳ ತಯಾರಿಗಾಗಿ ರೆಂಬೆಗಳು, ಗಿಡದ ಬೇರೆ ಬೇರೆ ಭಾಗಗಳು, ಹಸಿ, ಒಣ ಇತ್ಯಾದಿ ರೂಪಗಳಲ್ಲಿ, ಭಾರತದಿಂದ ರಫ್ತಾಗುತ್ತಿರುವ ನಾನಾ ರೀತಿಯ ಪುಷ್ಪ ಮತ್ತದರ ಉತ್ಪನ್ನಗಳ ಒಟ್ಟು ಮೌಲ್ಯದಲ್ಲಿ ಶೇಕಡಾ ೭೨ ತುಂಡು ಹೂವುಗಳದ್ದಾದರೆ, ರೆಂಬೆ, ಗಿಡದ ಬೇರೆ ಭಾಗಗಳ ಪಾಲು ಶೇಕಡಾ ೧೭, ಜೀವವಿರುವ ಗಿಡಗಳ ಪಾಲು ಶೇಕಡಾ ೯ ಆಗಿವೆ. ಭಾರತದ ಪುಷ್ಪಗಳಿಗಿರುವ ಮುಖ್ಯ ವಿದೇಶಿ ಮಾರುಕಟ್ಟೆಗಳೆಂದರೆ ಅಮೇರಿಕಾ, ನೆದರ್ ಲ್ಯಾಂಡ್, ಜಪಾನ್, ಜರ್ಮನಿ ಮತ್ತು ಇಂಗ್ಲೆಂಡ್‌ ಗಳಾಗಿವೆ.

ಇವುಗಳನ್ನು ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ