ನಾಗಾರಾಧನೆಯು ನಾಗಗಳನ್ನು ಆರಾಧಿಸುವ ಒಂದು ಬಗೆ.[] ತುಳುನಾಡು ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಕರಾವಳಿ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ವಿಶಿಷ್ಟ ಸಂಪ್ರದಾಯಗಳಲ್ಲಿ ಇದೂ ಒಂದಾಗಿದೆ.[] ಇದನ್ನು ತುಳುವ ಸಮುದಾಯದವರು ಆಚರಿಸುತ್ತಾರೆ. ನಾಗರಹಾವುಗಳನ್ನು ಕೇವಲ ದೇವತೆಗಳಾಗಿ ನೋಡಲಾಗುವುದಿಲ್ಲ, ಅನೇಕ ಸಾಮಾಜಿಕ, ಧಾರ್ಮಿಕ ಮತ್ತು ಪರಿಸರ ಕಾರಣಗಳಿಗಾಗಿ ಗೌರವಿಸಬೇಕಾದ ಮತ್ತು ರಕ್ಷಿಸಬೇಕಾದ ಪ್ರಾಣಿ ಜಾತಿಯಾಗಿ ನೋಡಲಾಗುತ್ತದೆ.[][]

ಬೆಳ್ಳೆ ಬ್ರಹ್ಮಸ್ಥಾನದಲ್ಲಿ ನಾಗಪಾತ್ರಿ
ಬೆಳ್ಳೆ ಬಡಗುಮನೆ, ಮೂಡುಬೆಳ್ಳೆ, ಉಡುಪಿಯಲ್ಲಿ ನಾಗಬನ
ಉಡುಪಿಯ ಬೆಳ್ಳೆ ಬ್ರಹ್ಮಸ್ಥಾನದಲ್ಲಿ ನಡೆದ ಮಂಡಲದಲ್ಲಿ ನಾಗಬ್ರಹ್ಮ ಮತ್ತು ನಾಗಕನ್ನಿಕೆಯ ಒಕ್ಕೂಟ
ನಾಗಮಂಡಲದ ಸಮಯದಲ್ಲಿ ಚಿತ್ರಿಸಿದ ಮಂಡಲ

ಹಿನ್ನೆಲೆ

ಬದಲಾಯಿಸಿ

ದಕ್ಷಿಣ ಭಾರತದ ಹಲವು ನೆಲೆಗಳಲ್ಲಿ 'ನಾಗ'ನನ್ನು ದೈವವಾಗಿ ಪೂಜಿಸುವ ಪರಿಪಾಠ ತುಂಬಾ ಪ್ರಾಚೀನವಾದುದು. ಪಶ್ಚಿಮ ಘಟ್ಟದಿಂದ ಕರಾವಳಿಯವರೆಗಿನ ದಟ್ಟಾರಣ್ಯ ಪ್ರದೇಶ ಈ ನಾಗಾರಾಧನೆಯ ಮೂಲ ಭೂಮಿ ಎಂದು ಹೇಳಲಾಗುತ್ತದೆ. ನಾನಾ ವಿಧವಾದ ಸರ್ಪ ಸಮೂಹಗಳಿಂದ ತುಂಬಿಹೋಗಿದ್ದ ಈ ಕಾಡುಗಳು ಅಲ್ಲಿನ ಮೂಲನಿವಾಸಿಗಳ ತಾಣವೂ ಆಗಿದ್ದ ಕಾರಣ ಈ ಸರ್ಪಗಳ ಬಗೆಗಿದ್ದ ಮೂಲಭಯ ಹಾಗೂ ವಿಸ್ಮಯ ನಾಗಾರಾಧನೆಗೆ ಕಾರಣವಾಗಿರಬೇಕು ಎಂಬುದು ಹಲವು ವಿದ್ವಾಂಸರ ಅಭಿಪ್ರಾಯ. ಅಲ್ಲದೆ,ಇಲ್ಲಿನ ಹಲವು ಬುಡಕಟ್ಟು ಜನರ ದೃಷ್ಟಿಯಲ್ಲಿ ಸರ್ಪ ಫಲೋತ್ಪತ್ತಿಯ ಸಂಕೇತವಾಗಿ ಕೂಡ ಆರಾಧನೆಗೆ ಒಳಪಟ್ಟಿದೆ. ದಕ್ಷಿಣಕನ್ನಡದ ಪ್ರಸಿದ್ಧ ವಿದ್ವಾಂಸರಾದ ದಿ.ಎಂ. ಗೋವಿಂದ ಪೈ ಅವರು "ಇಲ್ಲಿನ ದಕ್ಷಿಣ-ಉತ್ತರಕನ್ನಡ ಕರಾವಳಿ ಪ್ರದೇಶಕ್ಕೆ ನಾಗರ ಖಂಡವೆಂದು ಹೆಸರಿತ್ತಲ್ಲದೆ, ಇಲ್ಲಿ 'ನಾಗ' ರೆಂಬ ಆದಿವಾಸಿಗಳು ವಾಸಿಸುತ್ತಿದ್ದರು. ಸರ್ಪ ಕುಲ ಲಾಂಛನವಾಗಿದ್ದ ಈ ಜನರಲ್ಲಿ ಸರ್ಪಾರಾಧನೆ ಒಂದು ಸ್ಥಳೀಯ ಮತಾಚರಣೆಯಾಗಿ ಬಳಕೆಯಾಗುತ್ತಿದ್ದಿರಬೇಕು" ಎಂದು ಹೇಳುತ್ತಾರೆ. ಕರಾವಳಿಯ ಖ್ಯಾತ ಪ್ರಾಚೀನ ಅರಸು ಮನೆತನಗಳಲ್ಲಿ ಒಂದಾದ 'ಅಳುಪ' ವಂಶಕ್ಕೆ ಈ ಎಂಬ ಹೆಸರು ಬಂದದ್ದು ಶೇಷ ಎಂಬ ಪದದ ಪರ್ಯಾಯ ಪದವಾದ 'ಅಲುಕ' ಎಂಬ ತದ್ಭವ ರೂಪದಿಂದ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಶ್ರೀ ಸೋಮವಂಶದ ಅಳುಪ ದೊರೆಗಳ ಶಿಲಾಶಾಸನ ಒಂದರಲ್ಲಿ ಮೇಲೆ ಸುರುಳಿ ಹಾಕಿ ಕುಳಿತು ಹೆಡೆಬಿಚ್ಚಿದ ಹಾವಿನ ನಕ್ಷೆ ಇದೆ. ಪ್ರೊ. ಕ.ವೆಂ. ರಾಜಗೋಪಾಲ ಅವರು ನಾಗನ ಪ್ರಾಚೀನತೆಯನ್ನು ಅರಸಲು, ಬನವಾಸಿಪ್ರಾಕೃತ ಶಿಲಾಶಾಸನವೊಂದರ ಮೊರೆ ಹೋಗುತ್ತಾರೆ. ಮಹಾಭೋಜನ ನಾಗಸಿರಿ ಎಂಬ ನಾಟಕದಲ್ಲಿ ನಾಗಸಿರಿಯು ಒಂದು ತಟಾಕವನ್ನು ಕಟ್ಟಿಸಿದುದಲ್ಲದೆ ಬೌದ್ಧವಿಹಾರಗಳನ್ನು ಕಟ್ಟಿಸಿ ಈ ನಾಗಪ್ರತಿಮೆಯನ್ನು ಪ್ರತಿಷ್ಠೆ ಮಾಡಲು ಕಾರಣಳಾಗುತ್ತಾಳೆ. ಅಲ್ಲದೆ ಇಲ್ಲಿಯ ವಿಷಯದಲ್ಲಿ ಬನವಾಸಿಯ ನಾಗಸಿರಿಯ ಸಂಬಂಧವು ಅರ್ಥಪೂರ್ಣವಾದುದು. ಈ ಶಾಸನವು ಸೂಚಿಸುವಂತೆ ಇದೊಂದು ಬೌದ್ಧ ತಾಂತ್ರಿಕ ಸಂಬಂಧ ಆಚರರಣೆಯಾಗಿದ್ದು ಸನ್ನತಿ (ಗುಲ್ಬರ್ಗಾ ಜಿಲ್ಲೆ) ಎಂಬಲ್ಲಿ ದೊರೆತಿರುವ ನಾಗಪ್ರತಿಮೆಯೂ ಬನವಾಸಿಯ ಪ್ರತಿಮೆಯ ಆಶಯದ್ದೇ ಆಗಿರುವುದಲ್ಲದೆ ಅದರ ಬೌದ್ಧ ಸಂಬಂಧವು ಸ್ಪಷ್ಟವಾಗಿದೆ. ಕ್ರಿ.ಶ. ೧೪೫೮ರ ಬಾರ್ಕೂರಿನ ಶಾಸನವೊಂದರಲ್ಲಿ 'ಮಂಡಲ', 'ಬ್ರಹ್ಮಯಕ್ಷಿ' ಇತ್ಯಾದಿ ಪದಗಳು ಅನೇಕ ವಲಯಗಳಲ್ಲಿ ಬಳಕೆಯಾಗಿದ್ದು,ಇಲ್ಲಿ ನಾಗನ ಜೊತೆಗೆ ಯಕ್ಷಿಯರ ಸಂಬಂಧವನ್ನು ಮೊದಲಿನಿಂದಲೂ ಕಲ್ಪಿಸಲಾಗಿದೆ.

ಕರಾವಳಿ ಪ್ರದೇಶದ ನಾಗಾರಾಧನೆಯನ್ನು ಕುರಿತು ವಿಶೇಷ ಅಧ್ಯಯನ ಮಾಡಿರುವ ಶ್ರೀ ಎ.ವಿ. ನಾವಡ ಅವರು ಅಲ್ಲಿನ ಇತರೆ ದೈವಗಳೊಂದಿಗೆ ನಾಗನ ಸಂಬಂಧವನ್ನು ಹೀಗೆ ನಿರೂಪಿಸುತ್ತಾರೆ, "ಕರಾವಳಿಯ ಉಪಾಸನ ಪಂಥದ ಇತಿಹಾಸವನ್ನು ಗಮನಿಸಿದಾಗ ಆ ಪ್ರದೇಶದ ಆದಿಮೂಲ ದೈವ ನಾಗನೇ ಇರಬೇಕು. ಎಲ್ಲ ಜನವರ್ಗದವರೂ ನಾಗನನ್ನು ಬೇರೆ ಬೇರೆ ರೂಪಗಳಲ್ಲಿ ಭಿನ್ನಭಿನ್ನ ಆರಾಧನಾ ಪ್ರಕಾರಗಳಿಂದ ಪೂಜಿಸುತ್ತಾ ಬಂದಿರುವುದು ಕಂಡುಬರುತ್ತದೆ. ತುಳುವ ಪ್ರದೇಶದ ಆಲಡೆ (ಬೆರ್ಮರ ಗುಂಡ) ನಾಗನನ್ನು ಒಳಗೊಂಡಿರುವ ಒಂದು ದೈವಸಂಕೀರ್ಣ. ಇಲ್ಲಿ ನಾಗ, ಬೆರ್ಮರ್, ನಂದಿಗೋಣ, ಲೆಕ್ಕೆಸಿರಿ ಮತ್ತು ಕ್ಷೇತ್ರಪಾಲರಿಗೆ ಆರಾಧನೆ ನಡೆಯುತ್ತದೆ. ಕನ್ನಡ ಪ್ರದೇಶದಲ್ಲಿ ಇದಕ್ಕೆ ಸಂವಾದಿಯಾದ 'ಚಿತ್ತೇರಿ' ಎಂಬ ದೈವ ಸಂಕೀರ್ಣವಿದ್ದು ಅಲ್ಲಿ ನಾಗ, ಬ್ರಹ್ಮ,ನಂದಿ, ಚಿಕ್ಕು ಮತ್ತು ಕ್ಷೇತ್ರಪಾಲ ಮತ್ತಿತರಿಗೆ ಆರಾಧನೆ ನಡೆಯುತ್ತದೆ. ನಾಗನು ವಿಭಿನ್ನ ದೇವತೆಗಳೊಂದಿಗೆ ಸಮಾವೇಶಗೊಂಡು ಪೂಜಿತನಾಗುವುದು ಒಂದು ವಿಶಿಷ್ಟ ಸಂಗತಿ. ವಿಷ್ಣು (ಅನಂತಪದ್ಮನಾಭ) ಶಿವ (ಅನಂತೇಶ್ವರ), ಶಕ್ತಿ, ಗಣಪತಿ, ಯಕ್ಷಿ, ಬೊಬ್ಬರ್ಯರೊಂದಿಗೆ ಸಮಾವೇಶಗೊಂಡು ಆರಾಧ್ಯನಾಗಿರುವುದು ಕಂಡುಬರುತ್ತದೆ. ನಾಗ ಮತ್ತು ಸ್ಕಂದರು ಕರಾವಳಿಯ ಜಿಲ್ಲೆಗಳಲ್ಲಿ ಅಭಿನ್ನರಾಗಿ ಆರಾಧನೆಗೊಳ್ಳುವುದನ್ನು ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ (ಪುತ್ತೂರು ತಾಲ್ಲೂಕು) ಕುಡುಪು (ಮಂಗಳೂರು ತಾಲ್ಲೂಕು) ಕಾಳಾವರ (ಕುಂದಾಪುರ ತಾಲ್ಲೂಕು) ಮತ್ತಿತರೆಡೆಗಳಲ್ಲಿ ಗುರುತಿಸಬಹುದು. ಜಿಲ್ಲೆಕನ್ನಡ ಪ್ರದೇಶದ ನಾಡವರ ಮನೆಯ ಆವರಣದೊಳಗೆ ಆರಾಧ್ಯದೈವ ಸ್ವಾಮಿ (ನಾಗ)ಯನ್ನು ಹಾಗೂ ಮೇರರ ಕಾಡ್ಮನೆಗಳಲ್ಲಿ ಕಾಡ್ಯನನ್ನು ಹುತ್ತದ, ಕಲಶದ ರೂಪದಲ್ಲಿ ಗುರುತಿಸಿ ಆರಾಧಿಸಲಾಗುತ್ತದೆ".

ಕರಾವಳಿಯಲ್ಲಿ ನಾಗಾರಾಧನೆ

ಬದಲಾಯಿಸಿ

ಕರ್ನಾಟಕದ ಕರಾವಳಿ ಪ್ರದೇಶದ ತುಳುನಾಡಿನಲ್ಲಿ ನಾಗ ಬಹು ಜನಪ್ರಿಯ ಆರಾಧ್ಯ ದೈವ.[] ತುಳುವ ಪ್ರದೇಶದ ಆಲಡೆ, ಬೆರ್ಮಸ್ಥಾನಗಳಲ್ಲಿ 'ಬೆರ್ಮರ್' ಆದಿಮೂಲ ದೈವವಾಗಿದ್ದು, ಅದು ಸಂತಾನಾಭಿವೃದ್ಧಿ ದೇವತೆ ಎಂದು ಹೇಳಲಾಗುತ್ತದೆ. ಇಲ್ಲಿಯೇ ತುಳುವರು ತಮ್ಮ ಪಿತೃಪೂಜೆಯನ್ನು ನಡೆಸುತ್ತಾರೆ. ಈ ಬ್ರಹ್ಮನನ್ನು ನಾಗಬ್ರಹ್ಮನ ಚಿತ್ರಣಗಳಲ್ಲಿ ಆತನನ್ನು ದೇಹದ ಕೆಳಭಾಗದಲ್ಲಿ ಸರ್ಪರೂಪಿಯಾಗಿಯೂ, ಮೇಲ್ಭಾಗದಲ್ಲಿ ರಾಜದಂಡ ಅಥವಾ ಖಡ್ಗವನ್ನು ಹಿಡಿದ ಮನುಷ್ಯನಾಗಿಯೂ ರೂಪಿಸಿದೆ. ಈ ನಾಗ ಹಾಗೂ ಬ್ರಹ್ಮನ ಚಿತ್ರಣಗಳು ಅರಸನಿಗಿರುವ ಎರಡು ಪರಸ್ಪರ ಪೂರಕ ಕರ್ತವ್ಯಗಳಾದ ರಕ್ಷಣೆ ಹಾಗೂ ಸಂಪದಭಿವೃದ್ಧಿಯನ್ನು ಸೂಚಿಸುತ್ತವೆ. ತುಳುನಾಡಿನ ಅನೇಕ ಬೆರ್ಮರಗುಂಡಗಳಲ್ಲಿ ಆರಾಧನೆಯು ಬ್ರಾಹ್ಮಣೇತರ ಆರ್ಚಕರಿಂದಲೇ ನಡೆಯುತ್ತಿದೆ. ಪೀಟರ್ ಕ್ಲಾಸ್ ಹೇಳುವಂತೆ "ಬೆರ್ಮರ್ ಮೂಲತಃ ರಾಜನಾಗಿದ್ದ ಒಬ್ಬ ವನದೇವತೆ. ಆದರೆ ಆತ ಲೌಕಿಕ ಅರಸನೊಂದಿಗೆ ನಿಕಟ ಸಂಬಧವನ್ನು ಹೊಂದಿದ್ದನು. ರಾಜ್ಯದ ಜೀವಕಳೆ, ಸಂಪದಭಿವೃದ್ಧಿ ಹಾಗೂ ನಿಯಾಮಕ ವ್ಯವಸ್ಥೆಗಳನ್ನು ಕಾಪಾಡಲು ರಾಜನು ಬೆರ್ಮರರನ್ನು ಆರಾಧಿಸಿ ಸಂತೃಪ್ತಿಗೊಳಿಸಬಾಕಾಗಿತ್ತು. ಬೆರ್ಮರ ವಾಸಸ್ಥಾನ ಕಾಡು. ಅಲ್ಲಿನ ಪ್ರಾಣಿಗಳ ಮತ್ತು ಅಲೌಕಿಕ ಜೀವಿಗಳ ಮೇಲೆ ಈ ವನಾಧಿಪತಿಯ ಹತೋಟಿಯಿಂದಾಗಿ ಇದು ಭಯಾನಕ ಪ್ರದೇಶವಾಗಿದೆ. ಇಲ್ಲಿನ ಪ್ರಾಣಿಗಳಲ್ಲಿ ಸರ್ಪವು ಸಂತಾನಾಭಿವೃದ್ಧಿಗೆ ಸಂಬಂದಿಸಿದ್ದಾಗಿದೆ. ಆಲಡೆ ಅಥವಾ ಬ್ರಹ್ಮ ಸ್ಥಾನಗಳು ಮುಂದೆ ಕಾಲಾನುಕ್ರಮದಲ್ಲಿ ವೈದಿಕೀಕರಣಕ್ಕೆ ಒಳಗಾಗಿ ಶೈವ ದೇವಾಲಯಗಳಾಗಿ ಬ್ರಾಹ್ಮಣ ಪೂಜೆಗೊಳಗಾದುದನ್ನು ಗಮನಿಸಬೇಕು. ಉದಾಹರಣೆಗೆ ಹಿರಿಯಡಕದ ವೀರಭದ್ರ ದೇವಾಲಯ, ನಂದಳಿಕೆ ಹಾಗೂ ಕಬತ್ತಾರಿನ ಮಹಾಲಿಂಗೆಶ್ವೇರ ದೇವಾಲಯ. ಜಿಲ್ಲೆಯ ಕನ್ನಡ ಪ್ರದೇಶಗಳಲ್ಲಿ ತುಳುನಾಡಿನ ಆಲಡೆ ಅಥವಾ ಬೆರ್ಮರಗುಂಡಕ್ಕೆ ಸಂವಾದಿಯಾಗಿ ಚಿತ್ತೇರಿ ಎಂಬ ದೈವಸಂಕೀರ್ಣ ಕಂಡುಬರುತ್ತದೆ. ಇಂತಹ ಚಿತ್ತೇರಿಗಳು ಸಮೀಪದ ಬಂಟ, ನಾಡವರ ಮನೆತನಗಳ ಆಡಳಿತಕ್ಕೆ ಒಳಪಟ್ಟಿರುತ್ತದೆ. ಆದರೆ ಬ್ರಾಹ್ಮಣ ಅರ್ಚಕರಿಂದಲೇ ಪೂಜೆ ನಡೆಯುತ್ತಿರುವುದು ಕಂಡುಬರುತ್ತದೆ. ಚಿತ್ತೇರಿಯಲ್ಲಿ ಇಷ್ಟೇ ದೈವಗಳಿರಬೇಕೆಂದು ನಿಗದಿಯಿಲ್ಲ. ನಾಗ, ಬ್ರಹ್ಮ, ಹಾಯ್ಗುಳಿ, ಚಿಕ್ಕು, ಕ್ಷೇತ್ರಪಾಲ, ಕಲ್ಕುಡ, ಚೌಂಡಿ ಮುಂತಾದ ದೈವಗಳು ಇಲ್ಲಿ ನೆಲೆಸಿರುತ್ತವೆ. ಇವುಗಳಲ್ಲಿ ಪ್ರಧಾನ ನಾಗ ಹಾಗೂ ಬ್ರಹ್ಮ. ಕೆಲವು ಚಿತ್ತೇರಿಗಳಲ್ಲಿ ವರ್ಷಕೊಮ್ಮೆ 'ನಾಗಮಂಡಲ' ನಡೆಸುವುದೂ ಉಂಟು. ಕುಟುಂಬದ ಸಂತಾನಫಲ ಸಂಮೃದ್ಧಿಯಲ್ಲಿ ಈ ಚಿತ್ತೇರಿಯ ನಾಗ ಹಾಗೂ ಬ್ರಹ್ಮನ ಪಾತ್ರ ಮಹತ್ವದ್ದು ಎಂದು ಜನ ತಿಳಿಯುತ್ತಾರೆ. ಮಾರುಕಟ್ಟೆ, ಮಂದಾರ್ತಿ, ಪಡುಬಿದ್ರಿ, ಹಿರಿಯಡ್ಕ ಮುಂತಾದೆಡೆ ವೈದ್ಯರು ನಾಗಮಂಡಲ, ಢಕ್ಕೆಬಲಿಯನ್ನು ಹೋಲುವ ಬ್ರಹ್ಮ ಮಂಡಲ ಎಂಬ ಆಚರಣೆಯನ್ನು ನಡೆಸುತ್ತಾರೆ".

ಕರಾವಳಿ ಪ್ರದೇಶದಾದ್ಯಂತ ಕಂಡುಬರುವ ವಿಶಿಷ್ಟ 'ನಾಗಬನ'ಗಳು ಆ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿದ್ದ ನಾಗಾರಾಧನೆಗೆ ಸಾಕ್ಷಿಯಾಗಿವೆ. ಗಿಡಮರಗಳಿರುವ ತೋಪಿನಲ್ಲಿ 'ನಾಗಶಿಲೆ'ಯನ್ನು ಪ್ರತಿಷ್ಠಾಪಿಸಿ ಆ ಜಾಗವನ್ನು 'ನಾಗಬನ' ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನಾಗಬನದಲ್ಲಿ ವಟ, ಅಶ್ವತ್ಥ, ಬೈಣೆ ಮುಂತಾದ ಮರಗಳಿರಬೇಕೆಂಬ ನಿಯಮವಿದೆ. ಕರ್ನಾಟಕದ ಬಯಲುನಾಡಿನಲ್ಲಿಯೂ ಇಂಥ ನಾಗಬನಗಳನ್ನು ಕಾಣಬಹುದು. ಆ ಪ್ರದೇಶಗಳಲ್ಲಿ ಅವುಗಳನ್ನು 'ನಾಗರಕಲ್ಲು' ಎಂದು ಕರೆಯಲಾಗುತ್ತದೆ. ಅರಳೀಮರದ ಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಇಂತಹ ಸಾವಿರಾರು ನಾಗರಕಲ್ಲುಗಳನ್ನು ನಾವು ಕಾಣಬಹುದು. ಕೋಲಾರ ಜಿಲ್ಲೆಯ ವಿದುರಾಶ್ವತ್ಥದ ಮರಗಳ ತೋಪಿನಲ್ಲಿ ನೂರಾರು ನಾಗರಕಲ್ಲುಗಳು ವೈವಿಧ್ಯಮಯವಾಗಿ ಪ್ರತಿಷ್ಠಾಪಿತವಾಗಿರುವುದನ್ನು ನೋಡಬಹುದಾಗಿದೆ. 'ಅರಳಿಮರ' ಮತ್ತು 'ನಾಗ' ಇವೆರಡೂ ಫಲೋತ್ಪತ್ತಿಯ ಪ್ರತೀಕಗಳೇ ಆಗಿದ್ದು ವಿಶೇಷವಾಗಿ ಹೆಣ್ಣುಮಕ್ಕಳು ಇವುಗಳ ಪೂಜೆ ಮಾಡುವುದನ್ನು ನಾಡಿನಾದ್ಯಂತ ಕಾಣಬಹುದಾಗಿದೆ. ಈ ಮೂಲಕ ವೃಕ್ಷಕ್ಕೂ ನಾಗನಿಗೂ ಇರುವ ಅವಿನಾಭಾವ ಸಂಬಂಧ ಕೂಡ ವ್ಯಕ್ತವಾಗುತ್ತದೆ.[]

ಹುತ್ತ ಮತ್ತು ನಾಗ

ಬದಲಾಯಿಸಿ

ಕಲ್ಲಿನಲ್ಲಿ ಕೆತ್ತಿದ ನಾಗನನ್ನು ಬನಗಳಲ್ಲಿ ಪೂಜಿಸುವ ಪದ್ಧತಿ ಒಂದಾದರೆ, ನಾಗನ ಆವಾಸಸ್ಥಾನವಾದ ಹುತ್ತವನ್ನೇ ಪೂಜಿಸುವುದು ಮತ್ತೊಂದು ಪದ್ಧತಿ. ಈ ಪದ್ಧತಿ ಕೂಡ ನಾಡಿನಾದ್ಯಂತ ಜನಪ್ರಿಯವಾಗಿದೆ. ಇದು ಅತ್ಯಂತ ಪ್ರಾಚೀನ ಪದ್ಧತಿ ಎಂಬ ನಂಬಿಕೆಯೂ ಉಂಟು. ಬೇರೆ ಬೇರೆ ಹೆಸರುಗಳಿಂದ ಆರಾಧಿಸಲ್ಪಡುತ್ತಿರುವ ಇವತ್ತಿನ ಎಷ್ಟೋ ದೈವಗಳ ಮೂಲಸ್ಥಾನ ಹಿಂದೆ 'ಹುತ್ತ'ಗಳಾಗಿದ್ದು ನಾಗಾರಾಧನೆಯ ಮೂಲ ಕೇಂದ್ರಗಳಾಗಿದ್ದವು ಎಂಬ ನಂಬಿಕೆಯೂ ಇದೆ. ಇಲ್ಲಿನ ಮೂಲನಿವಾಸಿಗಳಾದ ಹೊಲೆಮಾದಿಗರನ್ನೊಳಗೊಂಡು ಅನೇಕ ಬುಡಕಟ್ಟುಗಳು ಪೂಜಿಸುತ್ತಿದ್ದ ಹುತ್ತಗಳ ಮೇಲೆ ಪಶುಪಾಲಕರಾಗಿ ಬಂದ ವಲಸೆಗಾರರು ಸ್ವಯಂಭೂಲಿಂಗಗಳನ್ನು ಸ್ಥಾಪಿಸಿದರು ಎಂಬುದು ಕೆಲವು ವಿದ್ವಾಂಸರ ವಾದ. ಅಂದರೆ ಫಲದಾಯಿತ್ವಕ್ಕೆ ಸಂಕೇತವಾದ ಯೋನಿ (ಹುತ್ತ) ಹಾಗೂ ಸೃಷ್ಟಿಗೆ ಕಾರಣವಾದ ಶಿಶ್ನ (ಲಿಂಗ)ಗಳನ್ನು ಬೆಸೆಯುವ ಮೂಲಕ ಪುರುಷ ಮತ್ತು ಪ್ರಕೃತಿಯರಲ್ಲಿ ಸಮನ್ವಯತೆಯನ್ನು ತಂದುದು ಇದರ ಹಿಂದಿನ ಮಹತ್ವ ಎಂಬುದೂ ಕೆಲವರ ಅಭಿಪ್ರಾಯ. ಒಟ್ಟಾರೆ ನಾಗನ ಆವಾಸಸ್ಥಾನವಾದ ಹುತ್ತ ಪ್ರಾಚೀನ ಕಾಲದಿಂದಲೂ ಪೂಜಿಸಲ್ಪಡುತ್ತಿತ್ತು ಎಂಬುದು ಸ್ಪಷ್ಟ.

ನಾಗರ ಪಂಚಮಿ

ಬದಲಾಯಿಸಿ

ಉತ್ತರ ಕರ್ನಾಟಕ ಭಾಗದಲ್ಲಿ ಇಂದಿಗೂ ಅಸ್ಥಿತ್ವದಲ್ಲಿರುವ ನಾಗರ ಪಂಚಮಿ ಮುಖ್ಯವಾಗಿ ಹೆಣ್ಣು ಮಕ್ಕಳ ಹಬ್ಬ. ಆ ದಿನದ ನಾಗಪೂಜೆ ವಿಶೇಷವಾದದು. ಶ್ರಾವಣ ಮಾಸದಲ್ಲಿ ಬರುವ ಈ ಹಬ್ಬದಂದು ಜಾತಿ ಭೇಧವಿಲ್ಲದೇ ಎಲ್ಲ ವರ್ಗಗಳ ಹೆಂಗಸರು ಹುತ್ತದ ಪೂಜೆ ಮಾಡುತ್ತಾರೆ. ಹುತ್ತಕ್ಕೆ ಹಾಲೆರೆಯುವುದು. ತಂಬಿಟ್ಟಿನ ಆರತಿ ಮಾಡುವುದು, ನಾಗರ ಪ್ರತಿಮೆಗೆ ಪೂಜೆ ಮಾಡುವುದು ಮುಂತಾಗಿ ಹಲವು ಆಚರಣೆಗಳು ಅಂದು ನಡೆಯುತ್ತದೆ.

ಮುನಿ ಸೇವೆ

ಬದಲಾಯಿಸಿ

ದಕ್ಷಿಣ ಕರ್ನಾಟಕಕೃಷಿಕ ಜನಾಂಗದವರು ದೀಪಾವಳಿ ನಂತರ ಮತ್ತು ಸುಗ್ಗಿ ತಿಂಗಳಿನ ಒಳಗಾಗಿ ಈ ಮುನಿಸೇವೆ ಮಾಡುತ್ತಾರೆ. ಮುನಿ, ಮುನಿಯಪ್ಪ, ಮುನಿಸ್ವಾಮಿ ಎಂದರೆ ನಾಗಪ್ಪ ಎಂದೇ ಅರ್ಥ. ಅನೇಕ ಮುನೀಶ್ವರನ ಗುಡಿಗಳನ್ನು ಆ ಭಾಗದಲ್ಲಿ ಕಾಣಬಹುದು. ರಾಗಿಯ ಹೊಲ ಬೆಳೆದು ನಿಂತಾಗ ನಾಗರಹಾವು ಹೊಲ ಹೊಕ್ಕು ಉದ್ದಕ್ಕೆ ನಿಂತು ಬೆಳೆಯ ಅಳತೆ ನೋಡುತ್ತದೆ ಎಂಬ ನಂಬಿಕೆ ಇದೆ. ಹೊಲದಲ್ಲಿ ಮೂಡುವ ಯಾವುದೇ ಹುತ್ತವನ್ನು ರೈತರು ಹಾಳು ಮಾಡುವುದಿಲ್ಲ. ಹುತ್ತ ಬೆಳೆದಷ್ಟು ಹೊಲ ಹುಲುಸಾಗುತ್ತದೆ ಎಂದು ರೈತರು ನಂಬುತ್ತಾರೆ. ಇಂಥ ಬೆಳೆಯ ಸಂದರ್ಭದಲ್ಲಿ 'ಮುನಿಸೇವೆ' ಅಥವಾ ಮುನಿ' ಮಾಡುತ್ತಾರೆ. ಒಂದು ಹೆಡಿಗೆಯಲ್ಲಿ ದವಸಧಾನ್ಯ ಇತ್ಯಾದಿ ಅಡುಗೆ ಸಾಮಾನುಗಳು, ಮತ್ತೊಂದು ಬಿದಿರುಪುಟ್ಟಿಯಲ್ಲಿ ಹಣ್ಣುಕಾಯಿ, ಕುಂಕುಮದ ಪೂಜಾಸಾಮಾನುಗಳನ್ನು ಹೊತ್ತು ಒಂದು ಕೋಳಿ ಹುಂಜದ ಸಮೇತ ಹೊಲಕ್ಕೆ ಹೋಗುತ್ತಾರೆ. ಹುತ್ತಕ್ಕೆ ಪೂಜೆಮಾಡಿ ಕೋಳಿ ಬಲಿ ಕೊಟ್ಟು ಹುತ್ತದಿಂದ ಸ್ವಲ್ಪ ದೂರದಲ್ಲಿ ಒಲೆ ಹೂಡಿ ಅಡುಗೆ ಮಾಡುತ್ತಾರೆ. ಒಬ್ಬಿಬ್ಬರನ್ನು ಊಟಕ್ಕೆ ಆಹ್ವಾನಿಸಿ, ತಾವು ಊಟ ಮಾಡುತ್ತಾರೆ. ಕೆಲವು ಮನೆತನಗಳವರು 'ಮರಿ' ಕಡಿದು ಅಂದರೆ ಕುರಿ ಮೇಕೆಗಳ ಬಲಿ ಕೊಟ್ಟು 'ದೊಡ್ಡ ಊಟ' ಮಾಡಿ ಹತ್ತಾರು ಜನಕ್ಕೆ ಊಟ ಹಾಕುವ ಸಂಪ್ರದಾಯವೂ ಇದೆ. ನಾಗಾರಾಧನೆ ಸಮೃದ್ಧಿಗೆ ಸಂಬಂಧಿಸಿದ ಆಚರಣೆಯಾಗಿ ಇಲ್ಲಿ ಕಂಡುಬರುತ್ತದೆ.

ತುಳುನಾಡಿನ ನಾಗಾರಾಧನೆಯ ವೈವಿಧ್ಯಗಳು

ಬದಲಾಯಿಸಿ

ನಾಗಮಂಡಲ, ಢಕ್ಕೆಬಲಿ, ಸರ್ಪಂಕಳ ಹಾಗೂ ಕಾಡ್ಯನಾಟ ಎಂಬ ಆಚರಣೆಗಳು ನಾಗಾರಾಧನೆಯ ವೈವಿಧ್ಯತೆಯನ್ನು ಪರಿಚಯಿಸುತ್ತವೆ.[] ತುಳುನಾಡಿನ ಹೆಣ್ಣುಮಕ್ಕಳ ಆರಾಧನೆಯಂದೇ ಹೆಸರಾದ 'ಸಿರಿ' ಕೂಡ ನಾಗಾರಾಧನೆಯ ಜೊತೆ ತಳಕು ಹಾಕಿಕೊಂಡಿದೆ.

ಉಲ್ಲೇಖಗಳು

ಬದಲಾಯಿಸಿ