ನಟ್ಸುಮೆ ಸೊಸೆಕಿ ಫೆಬ್ರವರಿ ೯, ೧೮೬೭ - ಡಿಸೆಂಬರ್‍ ೯, ೧೯೧೬ ಅವರನ್ನು ಆಧುನಿಕ ಜಪಾನಿನ ಅತಿ ಪ್ರಖ್ಯಾತ ಸಾಹಿತಿ ಎನ್ನಬಹುದು.

ಟೋಕಿಯೋ ಇಂಪೀರಿಯಲ್ ವಿಶ್ವವಿದ್ಯಾನಿಲಯದಲ್ಲಿ ವಿಶಿಷ್ಟ ಮನ್ನಣೆಗಳನ್ನು ಪಡೆದು ಪದವೀಧರರಾದ ಮೇಲೆ ಅಧ್ಯಾಪಕ ವೃತ್ತಿ ಕೈಗೊಂಡರು. ಆದರೆ ಬಹು ಬೇಗ ಕೆಲಸಕ್ಕೆ ತಿಲಾಂಜಲಿಯಿತ್ತು, ಆಂಗ್ಲೇಯ ಸಾಹಿತ್ಯದಲ್ಲಿ ಇನ್ನು ಹೆಚ್ಚಿನ ಸಂಶೋಧನೆ ನಡೆಸಲು ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು. ಹತ್ತು ವರ್ಷಗಳ ಹಿಂದೆ ತಾವು ಓದಿದ ವಿಶ್ವವಿದ್ಯಾಲಯದಲ್ಲೇ ಅಧ್ಯಾಪಕರಾಗಲು ಮತ್ತೆ ಜಪಾನಿಗೆ ಮರಳಿದರು. ನಾಲ್ಕು ವರ್ಷಗಳ ನಂತರ ಆ ವೃತ್ತಿಯನ್ನೂ ಬಿಟ್ಟರು. ಆದರೆ ‘ಟೋಕಿಯೊ ಅಸಾಹಿ ಶಂಬನ್’ ಎಂಬ ಸಂಸ್ಥೆಯ ಸಾಹಿತ್ಯವಿಭಾಗದ ಮೇಲ್ವಿಚಾರಕರಾಗಿ ಕೆಲಸ ಮಾಡುವ ಸುಯೋಗ ಒದಗಿತು. ಅವರು ಕಾದಂಬರಿಕಾರರೆಂದು ಹೆಸರು ಪಡೆಯಲು ಪ್ರಾರಂಭವಾದದ್ದು ಇಲ್ಲಿಂದಲೇ. ಅಲ್ಲಿಯ ತನಕ ಅವರೊಬ್ಬ ಕವಿ ಹಾಗು ಲಘು ಪ್ರಬಂಧಗಳ ಲೇಖಕರೆಂದು ಜನತೆಗೆ ಪರಿಚಿತರಾಗಿದ್ದರು. ಕಾಲಕ್ರಮೇಣ ಅವರ ಲೇಖನಿ ಕಾದಂಬರಿಗಳಿಗೆ ಮೀಸಲಾಗುತ್ತ ಬಂತು.

‘ಲಂಡನ್ನಿನ ಶಿಖರ’ (ಟವರ್‍ ಆಫ್ ಲಂಡನ್) ಮತ್ತು ‘ನಾನೊಂದು ಬೆಕ್ಕು’ (ಐ ಆಮ್ ಎ ಕ್ಯಾಟ್) ಎಂಬ ಕೃತಿಗಳ ಪ್ರಕಟನೆಯಿಂದ ಅವರು ಅತ್ಯಲ್ಪ ಕಾಲದಲ್ಲೇ ಕೀರ್ತಿವಂತರಾದರು. ‘ನಾನೊಂದು ಬೆಕ್ಕು’ ಎಂಬ ಕಾದಂಬರಿ ಜನಪ್ರಿಯ ಸಾಹಿತ್ಯ ಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಇದರ ವಿಷಯ ಗಹನವಾಗಿದೆ. ಪೊಫೆಸರೊಬ್ಬರ ಗೃಹಕೃತ್ಯದ ಜೀವಾಳವನ್ನೆಲ್ಲ ಅಲ್ಲಿದ್ದ ಬೆಕ್ಕಿನ ದೃಷ್ಟಿಯಲ್ಲಿ ಚಿತ್ರಿಸಲಾಗಿದೆ. ಕಡೆಯ ಪ್ರಸಂಗದಲ್ಲಿ ಬೆಕ್ಕು ಸತ್ತಾಗ ಓದುಗರು ವಾಸ್ತವವಾಗಿ ಕಣ್ಣೀರು ಸುರಿಸಿದರಂತೆ.

ಉಲ್ಲೇಖನ ಬದಲಾಯಿಸಿ

[೧][೨][೩]

  1. https://www.britannica.com/biography/Natsume-Soseki
  2. https://www.goodreads.com/book/show/762476.Kokoro
  3. https://www.japantimes.co.jp/culture/2016/11/26/books/hidden-heart-natsume-soseki/