ದತ್ತಾತ್ರೇಯ ಕೃಷ್ಣಾಜಿ ಭಾರದ್ವಾಜ

ದತ್ತಾತ್ರೇಯ ಕೃಷ್ಣಾಜಿ ಭಾರದ್ವಾಜ ಇವರು ೧೮೯೧ ಡಿಶಂಬರ ೨೯ರಂದು ಬೆಂಗಳೂರು ಜಿಲ್ಲೆಯ ಹೊಸಕೋಟೆಯಲ್ಲಿ ಜನಿಸಿದರು. ತಂದೆ ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ಊರಿನವರು. ಕೃಷ್ಣಾಜಿ ಕುಂದಗೋಳಕರ ಎಂದೇ ಅವರ ಹೆಸರು.ಮೈಸೂರು ಸಂಸ್ಥಾನದಲ್ಲಿ ಜಮೀನು ಮೋಜಣಿ ಮಾಡಿಸುವ ಉದ್ದೇಶದಿಂದ ಮೈಸೂರು ಮಹಾರಾಜರು ಕರೆಯಿಸಿದ ಮೋಜಣಿದಾರರಲ್ಲಿ ಕೃಷ್ಣಾಜಿ ಕುಂದಗೋಳಕರ ಒಬ್ಬರು. ಭಾರದ್ವಾಜರ ತಾಯಿ ಭೀಮಾಬಾಯಿ. ಚಿಕ್ಕಂದಿನಲ್ಲಿಯೆ ತಾಯಿ ನಿಧನರಾದರು. ಭಾರದ್ವಾಜರ ಶಿಕ್ಷಣ ಬೆಂಗಳೂರಿನ ಸೆಂಟ್ರಲ್ ಪ್ರೌಢಶಾಲೆಯಲ್ಲಿ ಆಯಿತೆಂದು ತಿಳಿದು ಬರುತ್ತದೆ. ಆ ದಿನಗಳಲ್ಲಿ (ಸು.೧೯೦೦) ಬೀಸುತ್ತಿರುವ ರಾಷ್ಟ್ರೀಯತೆಯ ಗಾಳಿ ಭಾರದ್ವಾಜರ ಮೇಲೆ ತೀವ್ರ ಪ್ರಭಾವ ಬೀರಿತು.

ಕೌಟಂಬಿಕ ಬದಲಾಯಿಸಿ

ಕ್ರಿ.ಶ.೧೯೧೩ರ ಸುಮಾರಿನಲ್ಲಿ ದತ್ತಾತ್ರೇಯ ಭಾರದ್ವಾಜರ ವಿವಾಹ ಮೈಸೂರಿನ ಅರಮನೆಯಲ್ಲಿ ಪೇಶಕಾರರಾಗಿದ್ದ ವೆಂಕೋಬರಾಯರ ಮಗಳು ಕಮಲಾಬಾಯಿಯವರ ಜೊತೆ ಜರುಗಿತು. ಇವರಿಗೆ ಐವರು ಗಂಡು ಮಕ್ಕಳು ಹಾಗು ಮೂವರು ಹೆಣ್ಣು ಮಕ್ಕಳು.

ಶಿಕ್ಷಣ ಹಾಗು ಉದ್ಯೋಗ ಬದಲಾಯಿಸಿ

ಮ್ಯಾಟ್ರಿಕ್ಯುಲೇಶನ್ನಿಗೆ ಶಿಕ್ಷಣ ನಿಲ್ಲಿಸಿದ್ದ ಭಾರದ್ವಾಜರು ೧೯೧೩ರ ಸುಮಾರಿನಲ್ಲಿ ಒಕ್ಕಲಿಗರ ಪತ್ರಿಕೆಯ ಉಪಸಂಪಾದಕರಾಗಿ ಕೆಲಸಕ್ಕೆ ತೊಡಗಿದರು. ಅನಿ ಬೆಸೆಂಟರಿಂದ ಮಂಗಳೂರಿನಲ್ಲಿ ಸ್ಥಾಪಿತವಾದ ರಾಷ್ಟ್ರೀಯ ವಿದ್ಯಾವರ್ಧಿನಿ ಸಭಾ ಎಂಬ ಸಂಸ್ಥೆಯವರು ಇವರ ಲೇಖನಗಳಿಂದ ಹಾಗು ಚಟುವಟಿಕೆಗಳಿಂದ ಪ್ರಭಾವಿತರಾಗಿ ಇವರಿಗೆ ವಿದ್ಯಾರ್ಥಿವೇತನವನ್ನು ನೀಡಿದರು. ಭಾರದ್ವಾಜರು ನ್ಯಾಶನಲ್ ಕಾಲೇಜಿನಲ್ಲಿ ‘ರಾಜ್ಯಶಾಸ್ತ್ರ’ ಮತ್ತು ‘ಪತ್ರಿಕೋದ್ಯಮ’ ಗಳ ಅಧ್ಯಯನ ಮಾಡಿದರು. ಶ್ರೀಮತಿ ಬೆಸೆಂಟರು ಲಂಡನ್‍ನಲ್ಲಿ ಹೆಚ್ಚಿನ ಅಧ್ಯಯನ ಮಾಡಲು ನೀಡಿದ ನೆರವನ್ನು ಭಾರದ್ವಾಜರು ತಿರಸ್ಕರಿಸಿ, ಬೆಸೆಂಟ ಅವರೇ ಮಂಗಳೂರಿನಲ್ಲಿ ಸ್ಥಾಪಿಸಿದ ರಾಷ್ಟ್ರೀಯ ಶಿಕ್ಷಕಿಯರ ಶಾಲೆಯಲ್ಲಿ ಅಧ್ಯಾಪಕರಾದರು.

ಮಹಾತ್ಮಾ ಗಾಂಧೀಜಿಯವರ ತತ್ವದಿಂದ ಪ್ರಭಾವಿತರಾಗಿದ್ದ ಭಾರದ್ವಾಜರು ಆ ಮಾದರಿಯ ಜೀವನವನ್ನೇ ನಡೆಯಿಸಿದರು. ದಿನವೂ ಚರಕದಿಂದ ನೂಲುತ್ತಿದ್ದರು. ಇವರ ಮನೆಯೂ ಸಹ ಅತಿಥಿ, ಅಭ್ಯಾಗತರಿಗೆ ಆಶ್ರಯತಾಣವಾಗಿತ್ತು. ೧೯೨೦ರಲ್ಲಿ ಇವರು ರಾಷ್ಟ್ರೀಯ ಶಿಕ್ಷಕಿಯರ ಕಾಲೇಜಿನ ಅಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿ, ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ತಾವೇ ಸಂಪಾದಕರಾಗಿದ್ದ ತಿಲಕ ಸಂದೇಶ ಪತ್ರಿಕೆಯಲ್ಲಿ ಬರೆದ ಲೇಖನಕ್ಕಾಗಿ ಒಂದೂವರೆ ವರ್ಷ ಜೈಲುವಾಸವನ್ನು ಅನುಭವಿಸಿದರು.

ಆಯುರ್ವೇದಕೀಯ ಬದಲಾಯಿಸಿ

೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿ ದುಡಿದ ನಂತರ, ಭಾರದ್ವಾಜರು ಧಾರವಾಡಕ್ಕೆ ಬಂದು ನೆಲೆಸಿದರು. ಆದರೆ ಅಲ್ಲಿಯ ರಾಜಕೀಯದಲ್ಲಿ ಮನನೊಂದ ಭಾರದ್ವಾಜರು ೧೯೨೫ರಲ್ಲಿ ಬೆಂಗಳೂರಿಗೆ ಬಂದರು. ಸುಪ್ರಸಿದ್ಧ ತಾರಾನಾಥಪ್ರೇಮಾಯತನ ಸಂಸ್ಥೆಯಲ್ಲಿ ಆಯುರ್ವೇದವನ್ನು ಅಭ್ಯಾಸ ಮಾಡಿ, ಬೆಂಗಳೂರಿನಲ್ಲಿ ರಾಮಕೃಷ್ಣ ಚಿಕಿತ್ಸಾಲಯದ ಮೂಲಕ ಆಯುರ್ವೇದ ಸೇವೆಯನ್ನು ನೀಡತೊಡಗಿದರು. ಅಲ್ಲದೆ ೧೯೩೮ರಲ್ಲಿ ರಾಮಕೃಷ್ಣ ವಿದ್ಯಾಪೀಠ ಸ್ಥಾಪಿಸಿ ಆಯುರ್ವೇದವನ್ನು ಕಲಿಸತೊಡಗಿದರು.

೧೯೩೦ರಲ್ಲಿ ನಿಖಿಲ ಭಾರತ ಆಯುರ್ವೇದ ವಿದ್ಯಾಪೀಠದ ಸ್ಥಾನಿಕ ಕೇಂದ್ರದ ಅಧ್ಯಕ್ಷರಾಗಿದ್ದರು. ೧೯೩೮ರಲ್ಲಿ ನಿಖಿಲ ಭಾರತ ಆನುವಂಶಿಕ ವೈದ್ಯ ಹಕೀಮರ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ೧೯೩೯ರಲ್ಲಿ ಸಿರ್ಸಿ, ಉತ್ತರಕನ್ನಡ ಜಿಲ್ಲೆಯ ವೈದ್ಯ ಹಕೀಮರ ಸಮ್ಮೆಳನದ ಅಧ್ಯಕ್ಷರಾಗಿದ್ದರು. ೧೯೪೦-೪೨ರಲ್ಲಿ ನಿಖಿಲ ಭಾರತ ಆಯುರ್ವೇದ ಮಹಾಸಮ್ಮೇಳನದ ದಕ್ಷಿಣ ಭಾರತದ ಕಾರ್ಯದರ್ಶಿಗಳಾಗಿದ್ದರು. ೧೦೪೭ರಲ್ಲಿ ನಡೆದ ನಿಖಿಲ ಕರ್ನಾಟಕ ಆಯುರ್ವೇದ ಪ್ರಚಾರ ಪರಿಷತ್ತಿನ ಅಧ್ಯಕ್ಷರಾಗಿದ್ದರು.

ಪತ್ರಿಕೋದ್ಯಮ ಬದಲಾಯಿಸಿ

೧೯೧೩ರಲ್ಲಿ ಭಾರದ್ವಾಜರು ಒಕ್ಕಲಿಗರ ಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ೧೯೨೧ರ ಸುಮಾರಿನಲ್ಲಿ ಮಂಗಳೂರಿನಲ್ಲಿದ್ದಾಗ ತಿಲಕ ಸಂದೇಶ ಮತ್ತು ಸ್ವರಾಜ ಡೈರಿ ಪತ್ರಿಕೆಗಳ ಸಂಪಾದರಾಗಿದ್ದರು.

೧೯೨೫ರಲ್ಲಿ ಬೆಂಗಳೂರಿನಲ್ಲಿ ಡಾ. ಕುರ್ತಕೋಟಿಯವರು ಪ್ರಕಟಿಸುತ್ತಿದ್ದ ಸಂಸ್ಕೃತದ ಸಂಶೋಧನಾತ್ಮಕ ಮಾಸಪತ್ರಿಕೆಯ ಉಪಸಂಪಾದಕರಾಗಿದ್ದರು. ೧೯೨೬ರಿಂದ ೧೯೨೮ರವರೆಗೆ ಮಕ್ಕಳ ಪುಸ್ತಕವೆಂಬ ಮಕ್ಕಳ ಮಾಸಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದರು. ೧೯೨೫ರಿಂದ ೧೯೩೧ರವರೆಗೆ ರಂಗಭೂಮಿ ಎಂಬ ಕಲೆಗಾಗಿ ಮೀಸಲಾದ ಕನ್ನಡ ಮಾಸಪತ್ರಿಕೆಯ ಪ್ರಮುಖ ಸಂಪಾದಕರಾಗಿದ್ದರು. ಇದರಂತೆ ಸುಬೋಧ ರಾಮರಾಯರು ಪ್ರಕಟಿಸುತ್ತಿದ್ದ ಸುಬೋಧ ಮಾಸಪತ್ರಿಕೆಗೆ ಅಂಕಣವನ್ನು ಕೆಲಕಾಲ ಬರೆದಿದ್ದಾರೆ. ಪ್ರಚಲಿತ ಪ್ರಪಂಚ ಎಂಬ ಅಂಕಣವನ್ನು ಕೆಲಕಾಲ ಬರೆದಿದ್ದಾರೆ. ಅಲ್ಲದೆ ಆ ಕಾಲದ ಪ್ರಮುಖ ಪತ್ರಿಕೆಗಳಾದ ಜಯಂತಿ, ಜಯ ಕರ್ನಾಟಕ, ಜೀವನ, ಕನ್ನಡ ನುಡಿ, ವಿಶ್ವ ಕರ್ನಾಟಕ, ನಗುವನಂದ ಮೊದಲಾದ ನಿಯತಕಾಲಿಕಗಳಿಗೂ ಅನೇಕ ಲೇಖನಗಳನ್ನು ಬರೆದಿದ್ದಾರೆ.

ಹಿಂದಿ ಪ್ರಚಾರ ಬದಲಾಯಿಸಿ

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹಿಂದಿ ಭಾಷಾ ಪ್ರಚಾರವು ರಾಷ್ಟ್ರೀಯ ಚಳುವಳಿಯ ಒಂದು ಭಾಗವೇ ಆಗಿತ್ತು. ಭಾರದ್ವಾಜರು ೧೯೩೦ರಲ್ಲಿ ಹಿಂದಿ ಪ್ರಚಾರ ಪರಿಷತ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದರು. ಬೆಂಗಳೂರಿನ ನ್ಯಾಶನಲ್ ಹೈಸ್ಕೂಲಿನಲ್ಲಿ ಉಚಿತ ಹಿಂದಿ ತರಗತಿಗಳನ್ನು ನಡೆಯಿಸಿದರು.

ಸಾಹಿತ್ಯ ಬದಲಾಯಿಸಿ

ಭಾರದ್ವಾಜರು ತಮ್ಮ ಇಂಗ್ಲಿಷ್-ಕನ್ನಡ ನಿಘಂಟುವಿನಂದಾಗಿ ಬಹಳ ಪ್ರಸಿದ್ಧರಾಗಿದ್ದಾರೆ. ಆದರೆ ಅವರು ರಚಿಸಿದ ಕೃತಿಗಳು ವೈವಿಧ್ಯಪೂರ್ಣವಾಗಿವೆ.

ದತ್ತಾತ್ರೇಯ ಕೃಷ್ಣಾಜಿ ಭಾರದ್ವಾಜರ ಜೀವನ ಚರಿತ್ರೆ ಒಳಗೊಂಡ ಪುಸ್ತಕ:

ಕನ್ನಡದ ಗರಡಿಯಾಳು ದ. ಕೃ. ಭಾರಧ್ವಾಜ - ಕೋ. ವಸಂತಲಕ್ಷಿ

ದತ್ತಾತ್ರೇಯ ಕೃಷ್ಣಾಜಿ ಭಾರದ್ವಾಜರು ೧೯೫೩ ಫೆಬ್ರುವರಿ ೨೨ರಂದು ನಿಧನರಾದರು.

ಆವರ ನಿಧನದ ವಾರ್ತೆ ಹಾಗೂ ಅವರು ಸಾಹಿತ್ಯಕ್ಕೆ ಸಲ್ಲಿಸಿದ ಕೊಡುಗೆಗಳ ನೆನಪುಗಳನ್ನೊಳಗೊಂಡ ಪತ್ರಿಕೆಗಳ ಅಂಕಣಗಳು -