ಜುಬಿನ್ ಮೆಹ್ತಾ

ಜುಬಿನ್ ಮೆಹ್ತಾ (ಏಪ್ರಿಲ್ ೨೯, ೧೯೩೬) ಭಾರತೀಯ ಪೌರತ್ವ ಪಡೆದ ವಿಶ್ವಪ್ರಸಿದ್ಧ ಪಾಶಿಮಾತ್ಯ ಸಂಗೀತ ಸಾಧಕರಾಗಿದ್ದಾರೆ. ಬೃಹತ್ ವಾದ್ಯಗೋಷ್ಠಿಗಳ ನಿರ್ವಹಣೆ, ಸಂಗೊಈತ ಸಂಯೋಜನೆಗಳಲ್ಲಿ ಅವರು ವಿಶ್ವಮಾನ್ಯರಾಗಿದ್ದಾರೆ.

ಜುಬಿನ್ ಮೆಹ್ತಾ
Zubin Mehta 1.jpg
ಜನನಏಪ್ರಿಲ್ ೨೯, ೧೯೩೬
ಮುಂಬಯಿ
ರಾಷ್ಟ್ರೀಯತೆಭಾರತೀಯರು
ಉದ್ಯೋಗಪಾಶ್ಚಿಮಾತ್ಯ ಸಂಗೀತ ನಿರ್ವಾಹಕ, ನಿರ್ದೇಶಕರು

ಜೀವನಸಂಪಾದಿಸಿ

ಪಾಶ್ಚಾತ್ಯ ಸಂಗೀತ ಸಾಧಕರಲ್ಲಿ ಪ್ರಮುಖ ಭಾರತೀಯರಾದ ಜುಬಿನ್ ಮೆಹ್ತಾ ಅವರು ಏಪ್ರಿಲ್ ೨೯, ೧೯೩೬ರಂದು ಮುಂಬಯಿನ ಪಾರ್ಸಿ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಮೆಹ್ಲಿ ಅವರು ಪಿಟೀಲು ವಾದಕರಲ್ಲದೆ ಬಾಂಬೆ ಸಿಂಫೋನಿ ವಾದ್ಯಗೋಷ್ಟಿಯನ್ನು ನಡೆಸುತ್ತಿದ್ದರು. ಜುಬಿನ್ ಮೆಹ್ತಾರ ವಿದ್ಯಾಭ್ಯಾಸ ಮುಂಬಯಿನ ಸೈಂಟ್ ಮೇರಿ ಶಾಲೆ ಮತ್ತು ಸೈಂಟ್ ಗ್ಸೇವಿಯರ್ ಕಾಲೇಜುಗಳಲ್ಲಿ ನೇರವೇರಿತು. ಜುಬಿನ್ ಮೆಹ್ತಾರು ಶಾಲೆಯಲ್ಲಿದ್ದ ದಿನಗಳಲ್ಲಿ ಜೋಸೆಫ್ ಡಿ ಲೈಮಾ ಅವರಿಂದ ಪಿಯಾನೋ ವಾದನವನ್ನು ಕಲಿತರು.

ಮೆಹ್ತಾರವರಿಗೆ ಮೊದ ಮೊದಲಿಗೆ ವೈದ್ಯರಾಗಬೇಕೆಂಬ ಅಭಿಲಾಶೆಯಿತ್ತು. ಆದರೆ ಅವರ ಹಾದಿ ತೆರೆದಿದ್ದು ಸಂಗೀತದತ್ತ. ಅವರು ತಮ್ಮ ಹದಿನೆಂಟನೆಯ ವಯಸ್ಸಿನ ವೇಳೆಗೆ ವಿಯೆನ್ನಾದಲ್ಲಿ ಸಂಗೀತ ವಿದ್ಯಾರ್ಥಿಯಾದರು. ಹ್ಯಾನ್ಸ್ ಸ್ವರೋಸ್ಕಿ ಅವರ ಗುರುಗಳಾಗಿದ್ದರು. ಪ್ರಸಿದ್ಧ ಸಂಗೀತಗಾರರಾದ ಕ್ಲಾಡಿಯೋ ಅಬ್ಬಾಡೋ ಮತ್ತು ಡೇನಿಯಲ್ ಬರೆನ್ ಬೊಯಿಮ್ ಮೆಹ್ತಾರ ಸಹಪಾಠಿಗಳು. ಅಮೆರಿಕದಲ್ಲಿ ನೆಲೆಸಿರುವ ಜುಬಿನ್ ಮೆಹ್ತಾ ಇಂದೂ ತಮ್ಮ ಭಾರತೀಯ ಪೌರತ್ವವನ್ನು ಉಳಿಸಿಕೊಂಡಿದ್ದಾರೆ.

ವಿಶ್ವಮಾನ್ಯ ಸಂಗೀತ ನಿರ್ವಾಹಕಸಂಪಾದಿಸಿ

ಜುಬಿನ್ ಮೆಹ್ತಾರು ೧೯೫೮ರ ವರ್ಷದಲಿ ವಿಯೆನ್ನಾದಲ್ಲಿ ತಮ್ಮ ಪ್ರಥಮ ಸಂಗೀತ ಪ್ರದರ್ಶನವನ್ನು ನೀಡಿದರು. ಅದೇ ವರ್ಷ ಅವರು ಲಿವರ್ ಪೂಲ್ನಲ್ಲಿ ನಡೆದ ಅಂತರರಾಷ್ಟ್ರೀಯ ಸಂಗೀತ ನಿರ್ವಹಣಾ ಸ್ಪರ್ಧೆಯಲ್ಲಿ ಜಯಶೀಲರಾಗಿ ರಾಯಲ್ ಲಿವರ್ ಪೂಲ್ ಫಿಲ್ ಹಾರ್ಮೋನಿಕ್ ತಂಡದ ಸಹ ನಿರ್ವಾಹಕರಾಗಿ ಗೌರವಾನ್ವಿತ ಹುದ್ಧೆಯನ್ನು ಅಲಂಕರಿಸಿದರು. ಅದಾದ ಶೀಘ್ರದಲ್ಲೇ ಅವರು ೧೯೬೦ರ ವರ್ಷದಲ್ಲಿ ಮಾಂಟ್ರಿಯಲ್ ಸಿಂಫೋನಿ ಸಂಗೀತ ಗೋಷ್ಟಿಯ ಸಂಗೀತ ನಿರ್ದೇಶಕರ ಹುದ್ಧೆಯನ್ನು ಅಲಂಕರಿಸಿದರು. ಈ ಹುದ್ಧೆಯಲ್ಲಿ ಅವರು ೧೯೬೨ರಿಂದ ೧೯೭೮ರ ವರೆಗೆ ಮುಂದುವರೆದರು. ೧೯೭೮-೧೯೯೧ ಅವಧಿಯಲ್ಲಿ ಮೆಹ್ತಾರು ನ್ಯೂಯಾರ್ಕ್ ಫಿಲ್ ಹಾರ್ಮೋನಿಕ್ ಸಮೂಹದ ಸಂಗೀತ ನಿರ್ದೇಶಕರು ಮತ್ತು ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸುವುದರ ಮೂಲಕ ಆ ಪ್ರತಿಷ್ಟಿತ ಹುದ್ಧೆಯನ್ನು ಅತ್ಯಂತ ಸುದೀರ್ಘ ಕಾಲದವರೆಗೆ ಅಲಂಕರಿಸಿದ್ದ ಕೀರ್ತಿಗೆ ಪಾತ್ರರಾದರು.

ದಿ ಇಸ್ರೇಲ್ ಫಿಲ್ಹಾರ್ಮೋನಿಕ್ ಸಂಗೀತ ಗೋಷ್ಠಿಯು, ಮೆಹ್ತಾರನ್ನು ೧೯೬೯ರ ವರ್ಷದಲ್ಲಿ ತನ್ನ ಮಾರ್ಗದರ್ಶಕನ್ನನ್ನಾಗಿಯೂ, ೧೯೭೭ರಲ್ಲಿ ಸಂಗೀತ ನಿರ್ದೇಶಕನನ್ನಾಗಿಯೂ, ೧೯೮೧ರಲ್ಲಿ ಜೀವಾವಧಿಯ ಸಂಗೀತ ನಿರ್ದೇಶಕರನ್ನಾಗಿಯೂ ಹೆಸರಿಸಿ ಆದರಿಸಿತು.

೧೯೮೫ರಿಂದ ಮೊದಲ್ಗೊಂಡಂತೆ ಮೆಹ್ತಾ ಅವರು ಫ್ಲಾರೆನ್ಸಿನ ಟೀತ್ರೋ ಡೆಲ್ ಮಗ್ಗಿಯೋ ಮ್ಯೂಸಿಕಲ್ ಫಿಯೋರೆನ್ಶಿಯೋದ ಪ್ರಧಾನ ನಿರ್ವಾಹಕರಾಗಿದ್ದಾರೆ. ಇದಲ್ಲದೆ ೧೯೯೮ರಿಂದ ೨೦೦೬ರ ಅವಧಿಯಲ್ಲಿ ಅವರು ಮ್ಯೂನಿಚ್ಚಿನ ಬವೇರಿಯನ್ ಸ್ಟೇಟ್ ಒಪೇರಾದ ಸಂಗೀತ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದರು. ಮ್ಯೂನಿಚ್ ಫಿಲ್ ಹಾರ್ಮೋನಿಕ್ ಸಮೂಹವು ಮೆಹ್ತಾರನ್ನು ತನ್ನ ಗೌರವ ನಿರ್ವಾಹಕರನ್ನಾಗಿಸಿಕೊಂಡಿತು. ಇದಲ್ಲದೆ ಸ್ಪೈನ್ ದೇಶದ ಸಂಗೀತ ಗೋಷ್ಠಿಗಳ ನಿರ್ವಾಹಕತ್ವದ ಗೌರವ ಸಹಾ ಮೆಹ್ತಾರಿಗೆ ಲಭಿಸಿದೆ.

ವಿಶ್ವಪ್ರಸಿದ್ಧ ಕಾರ್ಯಕ್ರಮಗಳುಸಂಪಾದಿಸಿ

ಮೆಹ್ತಾರವರು ವಿಯೆನ್ನಾದಲ್ಲಿ ಜರುಗುವ ಪ್ರತಿಷ್ಟಿತ ನವ ವರ್ಷೋತ್ಸವದ ಕಚೇರಿಗಳನ್ನು ೧೯೯೦, ೧೯೯೫, ೧೯೯೮ ಮತ್ತು ೨೦೦೭ರ ವರ್ಷಗಳಲ್ಲಿ ನಡೆಸಿಕೊಟ್ಟಿದ್ದಾರೆ. ಜುಬಿನ್ ಮೆಹ್ತಾ ಅವರು ಸಿತಾರ್ ಮಾಂತ್ರಿಕ ರವಿಶಂಕರ್ ಅವರ ಸಿತಾರ್ ಕಚೆರಿಯನ್ನು ಸಹಾ ಶಂಕರ ಮತ್ತು ಲಂಡನ್ ಫಿಲ್ ಹಾರ್ಮೋನಿಕ್ ಗೋಷ್ಠಿಯ ಜೊತೆಗೂಡಿ ಧ್ವನಿಮುದ್ರಿಸಿದ್ದಾರೆ.

೧೯೯೦ರ ವರ್ಷದಲ್ಲಿ ಜುಬಿನ್ ಮೆಹ್ತಾರವರು ರೋಮ್ ನಗರದಲ್ಲಿ ನಡೆದ ಪ್ರಪ್ರಥಮ ಮೂರು ಟೆನರ್ಸ್ ಕಚೇರಿಗಳೆಂದು ಪ್ರಖ್ಯಾತವಾಗಿರುವ ಡೆಲ್ ಮ್ಯಾಗಿಯೋ ಮ್ಯೂಸಿಕಲ್ ಫಿಯೋರೆನ್ಟಿನೋ ಸಂಗೀತ ಗೋಷ್ಠಿ ಮತ್ತು ಟಿಯೇಟ್ರೋ ಡೆಲ್ ಒಪೇರಾ ಡಿ ರೋಮಾ ವಾದ್ಯಗೋಷ್ಠಿಗಳನ್ನು ನಿರ್ವಹಿಸಿದರು. ೧೯೯೪ರಲ್ಲಿ ಅವರು ಮತ್ತೊಮ್ಮೆ ಟೆನರ್ಸ್ ಜೊತೆಗೂಡಿ ಲಾಸ್ ಏಂಜೆಲಿಸ್ ಡಾಡ್ಜರ್ಸ್ ಅಂಗಣದಲ್ಲಿ ನಡೆದ ಕಚೇರಿಯನ್ನು ನಿರ್ವಹಿಸಿದರು. ೧೯೯೨ರಲ್ಲಿ ಪ್ರತಿಯೊಂದು ಅಭಿವ್ಯಕ್ತಿಯೂ ಪ್ರಕಟಪಡಿಸಿದ ನಿರ್ದಿಷ್ಟ ವೇಳೆಯಲ್ಲಿ ಕ್ರಮಬದ್ಧವಾಗಿ ಜರುಗುವಂತಹ ಅದ್ಭುತ ಟೋಸ್ಕ ಎಂಬ ಪ್ರದರ್ಶನವನ್ನು ನಿರ್ವಹಿಸಿದರು. ಈ ಪ್ರದರ್ಶನದಲ್ಲಿ ಕ್ಯಾಥೆರಿನ್ ಮಾಲ್ಫಿಟಾಂಗೋ, ಪ್ಲಾಸಿಡೋ ಡೊಮಿಂಗೋ, ರುಗ್ಗೆರೋ ರೈಮೊಂಡಿ ಮುಂತಾದ ಪ್ರಖ್ಯಾತ ಕಲಾವಿದರಿದ್ದರು. ಈ ಕಾರ್ಯಕ್ರಮ ರೋಮ್ ಬ್ಯಾಸಿಲಿಕಾದ ಸೈಂಟ್ ಅಂಡ್ರಿಯಾ ಡೆಲ್ಲಾ ವಲ್ಲೆಯಿಂದ ನೇರಪ್ರಸಾರಗೊಂಡಿತು.

೧೯೯೪ರ ವರ್ಷದಲ್ಲಿ ಮೆಹ್ತಾ ಅವರು ಪುರಾತನ ಸರ್ಜೇವೋ ನ್ಯಾಷನಲ್ ಲೈಬ್ರರಿ ಸ್ಮಾರಕದ ಬಳಿ ಯುಗೋಸ್ಲಾವಿಯಾದ ಯುದ್ಧಗಳಲ್ಲಿ ಸಂತ್ರಸ್ತರಾದವರ ನೆರವಿಗಾಗಿ ಸರ್ಜೇವೋ ಸಿಂಫೋನಿ ಆರ್ಕೆಸ್ಟ್ರಾ ಜೊತೆಗೂಡಿ ‘ಮೊಜರತ್ ರೆಖೀಮ್’ ಪ್ರದರ್ಶನವನ್ನು ನಡೆಸಿದರು. ಮುಂದೆ ೧೯೯೯ರಲ್ಲಿ ಜರ್ಮನಿ, ೧೯೮೪ರಲ್ಲಿ ಮುಂಬಯಿ, ೧೯೯೪ರಲ್ಲಿ ನ್ಯೂಯಾರ್ಕ್ ಮುಂತಾದೆಡೆ ಕಾರ್ಯಕ್ರಮಗಳನ್ನು ಅವರು ನಡೆಸಿದರು. ೧೯೯೭ ಮತ್ತು ೧೯೯೮ರ ಅವಧಿಯಲ್ಲಿ ಅವರು ಚೀನಾದ ಸಿನಿಮಾ ನಿರ್ದೇಶಕ ಜಾಂಗ್ ಯಿಮೌ ಅವರ ಜೊತೆಗೂಡಿ ಇಟಲಿ ಮತ್ತು ಚೀನಾದ ಫರ್ಬಿಡನ್ ಸಿಟಿಯ ನೈಜ ಆವರಣದಲ್ಲಿ ಜಿಯಾಕೊಮಿ ಪುಸ್ಸಿನಿ ಅವರ ಕೃತಿಯಾಧಾರಿತ ಟುರಾನ್ ಡಾಟ್ ಒಪೇರಾ ಎಂಬ ರೂಪಕವಾಗಿ ೩೦೦ ಸಹಾಯಕರು ಮತ್ತು ೩೦೦ ಸೇನಾನಿಗಳನ್ನು ಒಳಗೊಂಡ 9 ಚಾರಿತ್ರಿಕ ಪ್ರದರ್ಶನಗಳನ್ನು ನಿರ್ವಹಿಸಿದರು. ಈ ಕಾರ್ಯಕ್ರಮದ ಕುರಿತಾದ ಸಾಕ್ಷಚಿತ್ರವು ಮೆಹ್ತಾ ಅವರ ನಿರೂಪಣೆಯಲ್ಲಿ ಟುರಾನ್ ಡಾಟ್ ಪ್ರಾಜೆಕ್ಟ್ ಎಂಬ ಹೆಸರಿನಲ್ಲಿ ಮೂಡಿಬಂದಿದೆ.

೨೦೦೫ರ ವರ್ಷದಲ್ಲಿ ಮೆಹ್ತಾ ಅವರು ರಾಯಲ್ ಕನ್ಸರ್ಟ್ ಆರ್ಕೆಸ್ಟ್ರಾ ಅವರ ಜೊತೆಗೂಡಿ ಬಕ್ನರ್ಸ್ ಸಿಂಫೋನಿ ಎಂಟು ಕಾರ್ಯಕ್ರಮವನ್ನು ನಡೆಸಿದರು. ಡಿಸೆಂಬರ್ ೨೬, ೨೦೦೫ರಂದು ಅವರು ಚೆನ್ನೈನ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಆಶ್ರಯದಲ್ಲಿ ಬವೇರಿಯನ್ ಸ್ಟೇಟ್ ಆರ್ಕೆಸ್ಟ್ರಾದೊಂದಿಗೆ ಹಿಂದೂ ಮಹಾಸಾಗರದ ಸುನಾಮಿ ಸಂತ್ರಸ್ತರ ನೆರವಿಗಾಗಿ ಕಾರ್ಯಕ್ರಮವೊಂದನ್ನು ನಡೆಸಿದರು.

ಪ್ರಶಸ್ತಿ ಗೌರವಗಳುಸಂಪಾದಿಸಿ

ಮೆಹ್ತಾ ಅವರು ತಮ್ಮ ಬೃಹತ್ ವಾದ್ಯಗೊಷ್ಟಿಯ ನಿರ್ವಹಣಾ ಸಾಮರ್ಥ್ಯಗಳಿಗಾಗಿ ಪ್ರಾರಂಭದಿಂದಲೂ ವಿಶ್ವದಾದ್ಯಂತ ಪಂಡಿತರ ಮತ್ತು ಸಂಗೀತಪ್ರಿಯರ ಮೆಚ್ಚುಗೆ ಗಳಿಸಿದ್ದಾರೆ.

ಮೆಹ್ತಾ ಅವರ ಅಪ್ರತಿಮ ಸಾಮರ್ಥ್ಯವು ೧೯೭೨ರ ವರ್ಷದ ಬಿಲ್ಲಿ ದಿ ಮೌಂಟನ್ ಎಂಬ ಗೀತೆಯಲ್ಲಿ ಸ್ತುತಿಸಲ್ಪಟ್ಟಿದೆ. ೧೯೯೧ರಲ್ಲಿ ಇಸ್ರೇಲ್ ದೇಶದ ಗೌರವ ಅವರಿಗೆ ಸಂದಿದೆ. ೧೯೯೫ರ ವರ್ಷದಲ್ಲಿ ಲಾರಿಯೇಟ್ ಆಫ್ ವುಲ್ಫ್ ಪ್ರೈಜ್ ಇನ್ ಆರ್ಟ್ಸ್ ಗೌರವ ಮೆಹ್ತಾರಿಗೆ ಸಂದಿದೆ. ೧೯೯೯ರ ವರ್ಷದಲ್ಲಿ ಸಂಯುಕ್ತ ರಾಷ್ಟ್ರಗಳ ಒಕ್ಕೂಟದ ‘ಶಾಂತಿ ಮತ್ತು ಸೌಹಾರ್ದತೆಯ ಜೀವಮಾನ ಸಾಧನೆಗಾಗಿನ ಗೌರವ’ ಅವರಿಗೆ ಸಂದಿದೆ. ಭಾರತ ಸರ್ಕಾರವು ೧೯೬೬ರ ವರ್ಷದಲ್ಲಿ ಪದ್ಮಭೂಷಣ ಮತ್ತು ೨೦೦೧ರ ವರ್ಷದಲ್ಲಿ ಅವರಿಗೆ ಪದ್ಮವಿಭೂಷಣ ಗೌರವವನ್ನು ಅರ್ಪಿಸಿದೆ. ಇದಲ್ಲದೆ ಅವರಿಗೆ ವಿಶ್ವದಾದ್ಯಂತ ನೂರಾರು ಪ್ರತಿಷ್ಟಿತ ಗೌರವಗಳು ಸಂದಿವೆ.

ಜುಬಿನ್ ಮೆಹ್ತಾರ ಜೀವಮಾನ ಸಾಧನೆಗಳನ್ನು ಬಿಂಬಿಸುವ ‘ಪೋರ್ಟರೈಟ್ ಆಫ್ ಜುಬಿನ್ ಮೆಹ್ತಾ’ ಎಂಬ ಸಾಕ್ಷಚಿತ್ರವನ್ನು ಟೆರ್ರಿ ಸ್ಯಾಂಡರ್ಸ್ ಅವರು ನಿರ್ಮಿಸಿದ್ದಾರೆ.

ವಿದ್ಯಾಕ್ಷೇತ್ರದಲ್ಲಿಸಂಪಾದಿಸಿ

೨೦೦೯ರ ವರ್ಷದಲ್ಲಿ ಮೆಹ್ತಾ ಅವರ ಹೆಸರಿನಲ್ಲಿ ಇಸ್ರೇಲಿನ ಹಲವೆಡೆಗಳಲ್ಲಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.