ಡಾ.ಜಿ.ಎಸ್.ಗಾಯಿಯವರು ಭಾರತ ಸರಕಾರದ ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆಯ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಭಾಷಾ ವಿಜ್ಞಾನ,ಭಾರತೀಯ ಇತಿಹಾಸ, ಸಂಸ್ಕೃತಿಗೆ ಸಂಬಂಧಿಸಿದಂತೆ ೮ ಕೃತಿಗಳನ್ನು, ನೂರಕ್ಕೂ ಹೆಚ್ಚು ಸಂಶೋಧನಾತ್ಮಕ ಲೇಖನಗಳನ್ನೂ ಪ್ರಕಟಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿದೆ.

ಗೋವಿಂದರಾವ್ ಗಾಯಿಯವರು ೧೯೧೭ರ ಮಾರ್ಚ್ ೦೩ ರಂದು ವಿಜಯಪುರ ಜಿಲ್ಲೆಯ ಅಥರ್ಗಾ ಎಂಬ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಸ್ವಾಮಿರಾವ್ ಗಾಯಿ ಬಿಜಾಪುರದಲ್ಲಿ ನ್ಯಾಯಾಲಯದಲ್ಲಿ ಉದ್ಯೋಗಿ. ಅವರ ತಾಯಿ ಅಂಬಕ್ಕ. ಅವರಿಗೆ ಒಂಬತ್ತು ಗಂಡು ಮತ್ತು ಒಂದು ಹೆಣ್ಣುಸಂತಾನ. ಕೊನೆಯವರೇ ಗೋವಿಂದರಾವ್.

ಶಿಕ್ಷಣ

ಬದಲಾಯಿಸಿ

ವಿಜಯಪುರದಲ್ಲಿ ಅವರ ಪ್ರೌಢಶಾಲೆಯವರೆಗಿನ ಶಿಕ್ಷಣ ಸಾಗಿತು. .ನಂತರ ಪುಣೆಯಲ್ಲಿ ಫರ್ಗ್ಯುಸನ್ ಕಾಲೇಜಿನಲ್ಲಿ ಪದವಿ ಪಡೆದರು. ಪದವಿಯಲ್ಲಿ, ಸಂಸ್ಕೃತ ಅವರ ಆಯ್ಕೆಯ ವಿಷಯ. ೧೯೩೯ರಲ್ಲಿ ಆನರ್ಸ್ ಪದವಿ ಪಡೆದರು. ಅವರು ಸಂಶೋಧನೆಗೆ ಆರಿಸಿ ಕೊಂಡ ವಿಷಯ ಎಂಟು, ಒಂಬತ್ತು, ಮತ್ತು ಹತ್ತನೇ ಶತಮಾನದ ಶಾಸನಗಳ ಹಿನ್ನೆಲೆಯಲ್ಲಿ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ವ್ಯಾಕರಣ. Historical grammar of old Kannada ಎಂಬ ಪ್ರೌಢ ಮಹಾಪ್ರಬಂಧವನ್ನು ಪ್ರೊ.ಸಿ.ಆರ್.ಶಂಕರನ್ ಅವರ ಮಾರ್ಗ ದರ್ಶನದಲ್ಲಿ ಬಾಂಬೆ ವಿ.ವಿ ಯಿಂದ ಪಿ.ಎಚ್.ಡಿ ಪದವಿಯನ್ನು ಪಡೆದರು.

ವೃತ್ತಿ ಜೀವನ

ಬದಲಾಯಿಸಿ

ಅವರ ಮೊದಲ ಉದ್ಯೋಗ ಪರ್ವ ಮೊದಲಾದುದು ನೀಲಗಿರಿಯ ಉದಕಮಂಡಲದ ಶಾಸನ ತಜ್ಞರ ಕಛೇರಿಯಲ್ಲಿ. ಭಾರತ ಸರ್ಕಾರದ ಶಾಸನ ಸಹಾಯಕನ ಹುದ್ದೆ ಅವರದಾಯಿತು. ಅಲ್ಲಿ ಆರು ವರ್ಷದವರೆಗ ಸೇವೆಸಲ್ಲಿಸಿ , ಮುಂಬಯಿ ಸಂಸ್ಥಾನದಲ್ಲಿದ್ದ ಧಾರವಾಡದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿನ ದ್ರಾವಿಡ ಭಾಷಾಶಾಸ್ತ್ರದ ಪ್ರವಾಚಕರು ಹಾಗೂ ಉಪನಿರ್ದೇಶಕರಾಗಿ ೧೯೪೯ ರಲ್ಲಿನೇಮಕ ಗೊಂಡರು. ಅಲ್ಲಿ ಹಿರಿಯ ವಿದ್ವಾಂಸರಾದ ಆರ್.ಎಸ್. ಪಂಚಮುಖಿ ಮತ್ತು ಎ.ಎಂ ಅಣ್ಣಿಗೇರಿಯವರ ಸಹವಾಸ ಮಾರ್ಗದರ್ಶನ ಸಿಕ್ಕಿತು. ಅದು ಅನೇಕ ಮಹತ್ವದ ಸಂಶೋಧನೆಗಳಿಗೆ ನಾಂದಿಯಾಯಿತು. ಈ ಮಧ್ಯ ಅವರು ಅಮೇರಿಕಾ ಮತ್ತು ಯುರೋಪು ಸಂದರ್ಶಿಸಲು ರಾಕ್ಫೆಲರ್ ಫೌಂಡೇಷನ್ನನ ಫೆಲೋ ಷಿಪ್ ದೊರಕಿತು ನಂತರ ಮತ್ತೆ ಉದಕಮಂಡಲದ ಕೇಂದ್ರ ಸಕಾರದ ಶಾಸನ ತಜ್ಞ ಕಚೇರಿಗೆ ೧೯೫೬ರಲ್ಲಿ ಹಿಂತಿರುಗಿದರು. ಅಲ್ಲಿ ಸಾರ್ಥಕ ಸೇವೆ ಸಲ್ಲಿಸಿ ೧೯೬೨ ರಲ್ಲಿ ಸಂಸ್ಥೆಯ ಅತ್ಯುನ್ನತ ಹುದ್ದೆಯಾದ ಪ್ರಧಾನ ಶಾಸನ ತಜ್ಞ ಹುದ್ದೆಯನ್ನೂ ಅಲಂಕರಿಸಿದರು. ಅವರ ಪರಿಣತೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆ ದೊರಕಿತು. ಎರಡನೇ ಅಂತಾರಾಷ್ಟ್ರೀಯ ಏಷಿಯನ್ ಪುರಾತತ್ವ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾದರು. ಅಲ್ಲಿ ಶಾಸನ ಶಾಸ್ತ್ರ ಮತ್ತು ಲಿಪಿಗೋಷ್ಠಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಅಲಭ್ಯವಾಗಿದ್ದ ಮೌಲಿಕ "ಎಪಿಗ್ರಾಫಿಯಾ ಕರ್ಣಾಟಕ” ಸಂಪುಟಗಳ ಪರಿಷ್ಕರಣ ಮತ್ತು ಪುನರ್ಮುದ್ರಣ ಸಲಹಾ ಸಮಿತಿಯಲ್ಲಿ ಐದು ವರ್ಷ ಸೇವೆ ಸಲ್ಲಸಿದರು. ಈ ಅವಧಿ ಬಹು ಕ್ರಿಯಾಶೀಲವಾಗಿತ್ತು. ಅಂತರಾಷ್ಟ್ರೀಯ ಓರಿಯಂಟಲಿಸ್ಟ್ ಕಾಂಗ್ರೆಸ್ ನ ಆಹ್ವಾನದ ಮೇರೆಗೆ ವಿದೇಶಕ್ಕೆ ಹೋಗಿ ಪ್ರಾಚೀನ ಇತಿಹಾಸ ಗೋಷ್ಠಿಯ ಅಧ್ಯಕ್ಷತೆ ಕಾರ್ಯ ನಿರ್ವಹಿಸಿದರು. ಅವರ ಅಮೋಘ ಸೇವೆಯನ್ನು ಗುರುತಿಸಿ ಮಿಥಿಕ್ ಸೊಸೈಟಿಯು ಪದಕ ಮತ್ತು ತಾಮ್ರ ಪತ್ರವನ್ನೊಳಗೊಂಡ ಪ್ರಶಸ್ತಿ ನೀಡಿ ಗೌರವಿಸಿತು. ಕನ್ನಡ ಸಾಹಿತ್ಯ ಪರಿಷತ್ ಅವರನ್ನು ಎರಡು ಬಾರಿ ಸಮ್ಮೇಳನದಲ್ಲಿ ಗೌರವಿಸಿತು. ಅವರು ಭಾರತೀಯ ಪುರಾಭಿಲೇಖ ಪರಿಷತ್ತಿನ ಸ್ಥಾಪಕ ಅಧ್ಯಕ್ಷರು. ವಿದ್ವಾಂಸರ ಸಂಶೋಧನೆಗೆ ಉತ್ತೇಜನ ನೀಡಲು ವಾರ್ಷಿಕ ಸಮ್ಮೇಳನ ನಡೆಸಿ ಅಲ್ಲಿ ಮಂಡಿಸಲಾದ ಸಂಪ್ರಬಂಧಗಳ ಸಂಪುಟಗಳನ್ನು ಪ್ರಕಟಿಸಿದರು. ಅದು ಯುವ ಸಂಶೋಧಕರ ಬೆಳವಣಿಗೆಗೆ ಕಾರಣವಾಯಿತು.ಅದರಂತೆ ಮೈಸೂರಿನಲ್ಲಿ ದೇ.ಜ.ಗೌ ರೊಡನೆ ಸೇರಿ ಭಾರತೀಯ ಸ್ಥಳನಾಮ ಪರಿಷತ್, ಸ್ಥಾಪಿಸಿದರು ಅದರಿಂದ ಸಂಶೋಧನೆಗೆ ಹೊಸದೊಂದು ರಂಗ ನಿರ್ಮಾಣವಾಯಿತು. ಕರ್ನಾಟಕ ಇತಿಹಾಸ ಅಕಾದೆಮಿಯ ಸ್ಥಾಪನೆಗೆ ಕಾರಣರಾದರು. ಅದು ಯುವ ಸಂಶೋಧಕರಿಗೆ ವರದಾನವಾಗಿ ಕಾರ್ಯ ನಿರ್ವಹಿಸುತ್ತಿದೆ. ತುಮಕೂರಿನ ಸಿದ್ಧಗಂಗಾಕ್ಷೇತ್ರದಲ್ಲಿ, ೧೯೮೮ರ ಅಕ್ಟೋಬರ್ ನಲ್ಲಿ ನಡೆದ ಅದರ ಎರಡನೇ ವಾರ್ಷಿಕ ಸಮ್ಮೇಳನಾಧ್ಯಕ್ಷರಾಗಿ ಮುನ್ನಡೆಸಿದರು. ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಸಿನಿಯರ್ಫೆಲೋ ಆಗಿದ್ದರು. ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಎರಡು ಬಾರಿ ಪಡೆದರು. . ಮೈಸೂರು ಪುರಾತತ್ವ ಇಲಾಖೆಯ ಶತಮಾನೋತ್ಸವದಲ್ಲಿ ರಾಷ್ಟ್ರಪತಿಗಳಿಂದ ಸನ್ಮಾನ ಸಂದಿತು. ಬಾಂಬೆಯ ಏಷಿಯಾಟಿಕ್ ಸೊಸೈಟಿಯ ಫೆಲೋಷಿಪ್, ಅವರಿಗೆ ಪ್ರಾಪ್ತವಾಯಿತು.. ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗಿನ ಅವರ ನಂಟು ಬಹು ಗಾಢ. ಕನ್ನಡ -ಕನ್ನಡ ನಿಘಂಟು ರಚನಾ ಸಮಿತಿಯ ಅಧ್ಯಕ್ಷತೆಯನ್ನು ಮೂರು ವರ್ಷಗಳ ಕಾಲ ೧೯೯೫ರಲ್ಲಿ ಕೊನೆಯುಸಿರು ಇರವವರೆಗೆ ನಿರ್ವಹಿಸಿದರು. ಭಾರದಲ್ಲಿಯೇ ಪ್ರಥಮವಾದ ಶಾಸನಶಾಸ್ತ್ರ ತರಗತಿಗಳು ಸಾಹಿತ್ಯ ಪರಿಷತ್ತಿನಲ್ಲಿ ಪ್ರಾರಂಭವಾಗಲು ಅವರ ಕೊಡುಗೆಯೂ ಇದೆ. ಡಾ. ಗಾಯಿಯವರ ಲೇಖನಗಳು ಬಹುಮಟ್ಟಿಗೆ ಕರ್ನಾಟಕಕ್ಕೇ ಸಂಬಂಧಿಸಿದ್ದರೂ ಬಹುತೇಕ ಪ್ರಕಟವಾಗಿದ್ದು ಇಂಗ್ಲಿಷ್ ಭಾಷೆಯಲ್ಲಿ. ಅದರೂ ಹಲವು ವಿದ್ವತ್ ಪತ್ರಿಕೆಗಳ ಮೌಲ್ಯವನ್ನು ಅವರ ಕನ್ನಡ ಲೇಖನಗಳು ಹೆಚ್ಚಿಸಿವೆ. ಅವರ ಗ್ರಂಥ ರೂಪದ ಪ್ರಕಟಣೆಗಳು ಕಡಿಮೆ. ಆದರೆ ಪ್ರಕಟವಾದ ಎಲ್ಲವೂ ನಿಖರವಾದ ಆಕರ ಗ್ರಂಥಗಳಾಗಿವೆ. ಅವರ ಸಂಶೋಧನಾ ವಿಧಾನವೂ ಅನುಕರಣೀಯ. ಯಾವುದೇ ವಿಷಯದ ಮೇಲಿನ ಸಂಶೋಧನೆಯಾದರೂ ಮೊದಲು ಹಿಂದಿನವರ ಸಂಶೋಧನಾ ವಿವರ ನೀಡಿ ನಂತರವೇ ಹೊಸ ವಿವರ ದಾಖಲಿಸಬೇಕು ಎನ್ನುವುದು ಅವರ ಖಚಿತ ನಿಲುವಾಗಿತ್ತು. ಹಿಂದಿನ ವಿದ್ವಾಂಸರ ಸಂಶೋಧನೆ ಮತ್ತು ಚಿಂತನೆಯೇ ಹೊಸ ಸಂಶೋಧನೆಗಳ ಅಡಿಪಾಯ ಎಂದು ಕಿರಿಯ ವಿದ್ವಾಂಸರು ಅರಿಯಬೇಕು ಎಂಬುದು ಅವರ ಮತ. ಡಾ. ಗಾಯಿ ಅವರ ಸಂಶೋಧನೆಗಳು ಕರ್ನಾಟಕದ ಇತಿಹಾಸ ಮತ್ತು, ಭಾಷೆಗಳಿಗೆ ಖಚಿತತೆ ನೀಡಿದವು. ಅವರ ಸಂಸ್ಕೃತ, ಕನ್ನಡ , ಇಂಗ್ಲಿಷ್, ತಮಿಳು ಮರಾಠಿ ಭಾಷೆಗಳನ್ನು ಬಲ್ಲವರಾಗಿದ್ದರು. ಅವರ ಬಹುಭಾಷಾ ಪ್ರಾವೀಣ್ಯತೆ ತುಲನಾತ್ಮಕ ಅಧ್ಯಯನದಲ್ಲಿ ನೆರವಿಗೆ ನಿಂತಿತು. ಶಾಸನ ಶಾಸ್ತ್ರ, ಲಿಪಿಶಾಸ್ತ್ರ, ಭೂಗೋಳ , ಇತಿಹಾಸ, ಸಾಹಿತ್ಯದ ಆಳವಾದ ಅಧ್ಯಯನವು ಆ ವಿಷಯಗಳ ಆಳವಾದ ತಿಳುವಳಿಕೆ ನೀಡಿತು. ಅದರಿಂದ ಅವರ ಕರ್ನಾಟಕದ ಮತ್ತು ಭಾರತದ ಇತಿಹಾಸ ಮತ್ತು ಸಂಸ್ಕೃತಿಗಳ ಪರಿಷ್ಕೃತ ಅಧ್ಯಯನದಲ್ಲಿ ಸಕ್ರಿಯವಾಗಿ ಪಾಲುಗೊಂಡು ನೆನಪಿಡಬಹುದಾದ ಕೊಡುಗೆ ನೀಡಿದರು. ಅವರ ವಿಶ್ಲೇಷಣೆ ,ಮತ್ತು ವಸ್ತು ನಿಷ್ಠತೆ, ಜಡವಾಗಬಹುದಾದ ಸಂಶೋಧನಾ ಕ್ಷೇತ್ರಕ್ಕೆ ಪುನಶ್ಚೇತನ ನೀಡಿದವು.

ಕೃತಿಗಳು

ಬದಲಾಯಿಸಿ
  • "Historical grammar of old Kannada" (೧೯೪೬) ಮೂರು ಶತಮಾನಗಳ ಇತಿಹಾಸ , ಶಾಸನ ಮತ್ತು ಕನ್ನಡ ಭಾಷೆಯ ಸಮಗ್ರ ಚಿತ್ರ ನೀಡುತ್ತದೆ. ತದನಂತರ ಲಿಪಿ ಶಾಸ್ತ್ರದಮೇಲೆ ,ಶಾಸನ ಕುರಿತಾದ ನಾಲ್ಕು ಗ್ರಂಥಗಳನ್ನು ಇಂಗ್ಲಿಷ್ ನಲ್ಲಿ ರಚಿಸಿರುವರು.
  • "Inscriptions of early Kadamba’s “ ೧೯೯೬ ರಲ್ಲಿಪ್ರಕಟವಾದ ಕೊನೆಯ ಕೃತಿ.
  • ಕಾಳಿದಾಸ ಮತ್ತು ಭವಭೂತಿ ಕೃತಿಗಳನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿರುವರು . ‘ಎಪಿಗ್ರಾಫಿಯಾ ಇಂಡಿಕಾ’ದಲ್ಲಿ ಪ್ರಕಟವಾದ ಲೇಖನಗಳು ೪೨ ಇನ್ನಿತರ ಸಂಶೋದನ ಪತ್ರಿಕೆಗಳಲ್ಲಿ ಭಾಷಾಶಾಸ್ತ್ರ, ಕುರಿತ ೯ ಲೇಖನಗಳು, ಸಂಶೋಧನೆಯ ೫೩ ಲೇಖನಗಳು ಪ್ರಕಟವಾಗಿವೆ. ಸಂಪಾದಿತ ಕೃತಿಗಳು ೪. ಅವರು ಇಲಾಖೆಯಲ್ಲಿರುವಾಗ ಪ್ರಕಟಗೊಂಡ ಎಲ್ಲ ಪ್ರಕಟಣೆಗಳಲ್ಲೂ ಅವರ ವಿದ್ವತ್ತಿನ, ನಿಖರತೆಯ ಮತ್ತು ಅಚ್ಚುಕಟ್ಟುತನದ ಛಾಯೆ ಎದ್ದುಕಾಣುತ್ತದೆ.

ಸಾಹಿತ್ಯ ಪರಿಷತ್ತಿನ ಕನ್ನಡ -ಕನ್ನಡ ನಿಘಂಟುವಿನ ಎಂಟನೆಯ ಮತ್ತು ಅಂತಿಮ ಸಂಪುಟ ಕಾರ್ಯವನ್ನು ನಿರ್ವಹಿಸಿ ಅದು ಅಚ್ಚಿನ ಮನೆ ಸೇರದ ಮೇಲೆ ೧೯೯೫ರಲ್ಲಿ ಕಾಲವಶರಾದರು ಆಗ ಅವರಿಗೆ ೭೮ ವರ್ಷ ವಯಸ್ಸು.[][][]

ಉಲ್ಲೇಖಗಳು

ಬದಲಾಯಿಸಿ
  1. "GAI, GOVINDA SWAMIRAO, b. 1922". Archived from the original on 2020-09-29. Retrieved 2021-02-25.
  2. Indian history and epigraphy
  3. Hyperleap