ಮೆಕೆನ್ರೊ, ಜಾನ್ 1959- . ಅಮೆರಿಕದ ಹೆಸರಾಂತ ಟೆನಿಸ್ ಆಟಗಾರ.

ಪಶ್ಚಿಮ ಜರ್ಮನಿಯ ವೆಬಿಸ್‍ಬೆಡನ್ ಎಂಬಲ್ಲಿ 16 ಫೆಬ್ರುವರಿ 1959ರಂದು ಜನಿಸಿದ. ತಂದೆ ಅಮೆರಿಕದಲ್ಲಿ ಕೆಲಸಮಾಡುತ್ತಿದ್ದುದರಿಂದ ಅಮೆರಿಕಕ್ಕೆ ಬಂದ. ಹ್ಯಾಂಪಾ ಪಮನ್ ಮತ್ತು ಟೋನಿ ಫೆಲೋಫಾಕ್ಸ್ ಎಂಬವರ ಬಳಿ ಟೆನಿಸ್‍ನಲ್ಲಿ ತರಬೇತಿ ಪಡೆದ. ಎಡಗೈ ಆಟಗಾರನಾದ ಈತ ಟೆನಿಸ್‍ನಲ್ಲಿ ತನ್ನದೇ ಆದ ಶೈಲಿಯನ್ನು ಉಳಿಸಿಕೊಂಡಿದ್ದಾನೆ. ಈತ ನಾಲ್ಕು ಬಾರಿ ಅಮೆರಿಕ ಮುಕ್ತ ಟೆನಿಸ್ ಪ್ರಶಸ್ತಿಯನ್ನೂ (1979,1980,1981,1984) ಮೂರು ಬಾರಿ ವಿಂಬಲ್ಡನ್ ಪ್ರಶಸ್ತಿಯನ್ನೂ (1981,1983,1984) ಗಳಿಸಿದ. ಪಿ. ಫ್ಲೆಮಿಂಗ್ ಎಂಬವನ ಜೊತೆಗೂಡಿ ಆಡಿ ನಾಲ್ಕು ಬಾರಿ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿಯನ್ನು ಈತ ಪಡೆದುಕೊಂಡಿದ್ದಾನೆ (1979,1981,1983,1984). ಟೆನಿಸ್ ಕೋರ್ಟ್‍ನಲ್ಲಿ ಅತಿಯಾದ ವರ್ತನೆಗೆ ಪ್ರಸಿದ್ಧವಾಗಿರುವ ಈತ ಅನೇಕ ಬಾರಿ ದೊಡ್ಡ ಮೊತ್ತದ ದಂಡವನ್ನು ತೆತ್ತಿರುವುದೂ ಉಂಟು. ಖಾಸಗೀ ಜೀವನದಲ್ಲಿ ಸರಳ ವ್ಯಕ್ತಿಯಾದ ಈತ ತಾನು ಪ್ರೀತಿಸಿದ ಟೇಟಂ ಓನಿಯಲ್ ಎಂಬಾಕೆಯನ್ನು 1986ರಲ್ಲಿ ವಿವಾಹವಾದ ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೆಕೆನ್ರೊನ ಸಹೋದರ ಜಾನ್ ಪ್ಯಾಟ್ರಿಕ್ ಮೆಕೆನ್ರೊ ಕೂಡ ಖ್ಯಾತ ಟೆನಿಸ್ ಆಟಗಾರ.