ಜಾನ್ ಟ್ಯಾವೆರ್ನರ್

ಜಾನ್ ಟ್ಯಾವೆರ್ನರ್ (1490-1545). ಇಂಗ್ಲಿಷ್ ವಾಗ್ಗೇಯಕಾರ. 16ನೆಯ ಶತಕದ ಪೂರ್ವರ್ಧದಲ್ಲಿ ವಾದ್ಯಗೋಷ್ಠಿ ಸಂಗೀತ ಪರಂಪರೆ ಪಡೆದ ಅತ್ಯುಚ್ಚವಾದ ಸಿದ್ಧಿಯನ್ನು ಈತನ ಕೃತಿಗಳಲ್ಲಿ ಕಾಣಬಹುದು. ಇಂಗ್ಲಿಷ್ ಚರ್ಚ್ ಸಂಗೀತಕ್ಕೆ ಈತನ ಕೊಡುಗೆ ಚಿರಸ್ಮರಣೀಯವಾದುದು.

ಲಿಂಕನ್‍ಷೈರಿನ ಟ್ಯಾಟರ್‍ಷಲ್ ಚರ್ಚಿನಲ್ಲಿದ್ದವನು 1526ರಲ್ಲಿ ತನಗಿಷ್ಟವಿಲ್ಲದಿದ್ದರೂ ಒತ್ತಾಯಕ್ಕೆ ಮಣಿದು ಆಕ್ಸ್‍ಫರ್ಡಿನ (ಈಗ ಕ್ರೈಸ್ಟ್ ಚರ್ಚ್ ಎಂಬ ಹೆಸರಿರುವ) ವುಲ್ಸಿಯ ಕಾರ್ಡಿನಲ್ ಕಾಲೇಜಿನ ದೇವಮಂದಿರದ ವೃಂದವಾದ್ಯ ಗೋಷ್ಠಿಯ ಮುಖ್ಯನಾದ. 1528ರಲ್ಲಿ ಧರ್ಮವಿರೋಧಿಯೆಂಬ ಆಪಾದನೆಗೆ ಗುರಿಯಾಗಿ ಸೆರೆಯಲ್ಲಿರಬೇಕಾಯಿತು. ಸಂಗೀತದಲ್ಲಿದ್ದ ಈತನ ಪ್ರತಿಭೆ ಶಿಕ್ಷೆಯನ್ನು ತಪ್ಪಿಸಿತು. ಸೆರೆಯಿಂದ ಬಿಡುಗಡೆಯಾದಮೇಲೆ 1530ರಲ್ಲಿ ಆಕ್ಸ್‍ಫರ್ಡನ್ನು ತೊರೆದು ಲಿಂಕನ್‍ಷೈರಿನ ಬಾಸ್ಟನ್ ಎಂಬ ಊರಿನಲ್ಲಿ ನೆಲೆಸಿದೆ. 1537ರಲ್ಲಿ ಮೊದಲು ಕಾರ್ಪಸ್‍ಕ್ರಿಸ್ಟಿ ಗಿಲ್ಡಿನ ಸದಸ್ಯನಾಗಿಯೂ 1541ರಲ್ಲಿ ಅದರ ಕಾರ್ಯನಿರ್ವಾಹಕರಲ್ಲಿ ಒಬ್ಬನಾಗಿಯೂ ಚುನಾಯಿತನಾದ. 1545ರಲ್ಲಿ ಅದೇ ಊರಿನಲ್ಲಿ ನಿಧನನಾದ.

ಧಾರ್ಮಿಕ ಸುಧಾರಣೆ ಆಗುವುದಕ್ಕೆ ಮುಂಚೆ ಇದ್ದ ಇಂಗ್ಲಿಷ್ ಚರ್ಚ್ ಸಂಗೀತಕ್ಕೆ ಕಳಶಪ್ರಾಯದಂತಿರುವ ಆರು ಸಂಪೂರ್ಣ ಪೂಜಾವಿಧಿ ಕೀರ್ತನಗಳು ಈತನ ಕಾಣಿಕೆ. ಅವುಗಳ ವೈವಿಧ್ಯ, ಸ್ವರಶಿಲ್ಪದಲ್ಲಿ ಕಾಣುವ ಅಮೋಘ ಕೌಶಲ, ಅದ್ಭುತವಾದ ಶಕ್ತಿ ಮತ್ತು ಬೀಸು ಚರ್ಚ್ ಸಂಗೀತ ಸಾಧಿಸಿದ ಅಪೂರ್ವ ಸಿದ್ಧಿಯನ್ನು ನಿದರ್ಶಿಸುತ್ತವೆ. ವಾದ್ಯಸಂಗೀತ ಕ್ಷೇತ್ರದಲ್ಲಿ ಸುಮಾರು ಒಂದೂವರೆ ಶತಮಾನಗಳ ಕಾಲ ಎಲ್ಲ ವಾದ್ಯಸಂಗೀತ ರಚನೆಕಾರರು ಈತ ಮಾಡಿದ ಕೆಲವು ನೂತನ ಸಂಯೋಜನೆಗಳ ಪಡಿಯಚ್ಚನ್ನೇ ಅನುಸರಿಸಿದರು.

ಈತ ಪೂಜಾವಿಧಿ ಕೀರ್ತನಗಳನ್ನಲ್ಲದೆ ಬೈಬಲ್ಲಿನ ವಚನ ಗಾಯನಕ್ಕೆ ಅನೇಕ ಸ್ವರಕುಂದಣಗಳನ್ನು ಭಗವತ್ಸೇವಾಸ್ತೋತ್ರಗಳನ್ನೂ ರಚಿಸಿದ್ದಾನೆ.

ಈತನ 8 ಸಂಪೂರ್ಣ ಪೂಜಾವಿಧಿ ಕೀರ್ತನಗಳಲ್ಲಿ ದಿ ವೆಸ್ಟರ್ನ್ ವಿಂಡ್ ಎಂಬ ಕೃತಿ ತುಂಬ ಶ್ರೇಷ್ಠವಾದುದೆಂದು ಪರಿಗಣಿತವಾಗಿದೆ. ಆದರೆ ಮಿಸಾ ಸೈನೆನಾಮಿನೆ ಇದಕ್ಕಿಂತಲೂ ಸೊಗಸಾಗಿದೆ. ಎಂದು ಕೆಲವರ ಅಭಿಪ್ರಾಯ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: