ಜಾನ್ ಟಿಂಡಾಲ್ (1820-1893). ಐರ್ಲೆಂಡಿನ ಭೌತವಿಜ್ಞಾನಿ. ವಿಕಿರಣ ಉಷ್ಣದ ಮೇಲಿನ ಸಂಶೋಧನೆಗಳಿಂದ ಪ್ರಖ್ಯಾತನಾದ.

ಬದುಕು ಬದಲಾಯಿಸಿ

ಜನನ 1820ರ ಆಗಸ್ಟ್ 2ರಂದು. ವಿದ್ಯಾಭ್ಯಾಸಾನಂತರ, 1840ರಲ್ಲಿ ಐರಿಷ್ ಸೈನಿಕ ಸಾಮಗ್ರಿ ಮೋಜಣಿ (ಅಡ್ರ್ನೆನ್ಸ್ ಸರ್ವೆ) ವಿಭಾಗದಲ್ಲಿ ಉದ್ಯೋಗಕ್ಕೆ ಸೇರಿದ. ಮುಂದೆ 1842ರಲ್ಲಿ ಇಂಗ್ಲಿಷ್ ಮೋಜಣಿ ವಿಭಾಗಕ್ಕೆ ವರ್ಗವಾಯಿತು. 1844-1847ರ ಅವಧಿಯಲ್ಲಿ ರೇಲ್ವೆ ಮೋಜಣಿ ಎಂಜಿನಿಯರ್ ಆಗಿ ದುಡಿದ. ಅನ್ವಿತ ವಿಜ್ಞಾನ ಶಿಕ್ಷಣದಲ್ಲಿ ಪ್ರಾಯೋಗಿಕ ಮತ್ತು ಪ್ರಯೋಗಶಾಲೆಯ ಕಾರ್ಯಗಳನ್ನು ಅಳವಡಿಸಿಕೊಂಡಿದ್ದ ಹೆಮ್ಸ್‍ಫೈರಿನ ಕ್ವಿನ್‍ವುಡ್ ಕಾಲೇಜನ್ನು ಟಿಂಡಾಲ್ ಓರ್ವ ಶಿಕ್ಷಕನಾಗಿ ಸೇರಿದ (1847). ಜರ್ಮನಿಯ ಮಾರ್‍ಬರಿ ವಿಶ್ವವಿದ್ಯಾಲಯಕ್ಕೆ ತೆರಳಿ ಅಲ್ಲಿ ಬುನ್‍ಸೆನ್ನನ ಕೈಕೆಳಗೆ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿಯನ್ನು ಪಡೆದು ಕ್ವೀನ್‍ವುಡಿಗೆ ಮರಳಿದ (1851). ಮರುವರ್ಷ ಈತ ರಾಯಲ್ ಸೊಸೈಟಿಯ ಸದಸ್ಯನಾಗಿ (ಫೆಲೋ) ಆಯ್ಕೆಗೊಂಡ. 1853ರಲ್ಲಿ ರಾಯಲ್ ಇನ್ಸ್ ಟಿಟ್ಯೂಶನ್ನಿನಲ್ಲಿ ನಿಸರ್ಗಶಾಸ್ತ್ರದ ಪ್ರಾಚಾರ್ಯನಾಗಿ ನೇಮಕಗೊಂಡು ಅಲ್ಲಿ ಮೈಕಲ್ ಫ್ಯಾರಡೆಯ ಸಹೋದ್ಯೋಗಿ ಹಾಗೂ ಮಿತ್ರನಾಗಿ ದುಡಿದ. ಫ್ಯಾರಡೆಯ ಅನಂತರ ಟಿಂಡಾಲನೇ ಈ ಸಂಸ್ಥೆಯ ನಿರ್ದೇಶಕನಾಗಿ (1867) ಕಾರ್ಯವಹಿಸಿಕೊಂಡ. 1887ರಲ್ಲಿ ಈ ಹುದ್ದೆಯಿಂದ ನಿವೃತ್ತನಾದ. 1893ರ ಡಿಸೆಂಬರ್ 4ರಂದು ಆಕಸ್ಮಿಕ ವಿಷಷ್ರಾಶನದಿಂದಾಗಿ ಮೃತನಾದ.

ಸಾಧನೆ ಬದಲಾಯಿಸಿ

1856ರಲ್ಲಿ ಟಿಂಡಾಲ್ ಆಲ್ಪ್ಸ್ ಪರ್ವತಶ್ರೇಣಿಗಳನ್ನು ಸಂದರ್ಶಿಸಿ ಹಿಮಾಂಶುಗಳ ರಚನೆ ಮತ್ತು ಚಲನೆಗಳನ್ನು ಕುರಿತು ಅಧ್ಯಯನ ನಡೆಸಿದ. 1859 ರಿಂದ 1871ರವರೆಗೆ ಈತ ನಡೆಸಿದ ವಿಸರಣಾತ್ಮಕ ಉಷ್ಣದ (ರೇಡಿಯಂಟ್ ಹೀಟ್) ವೈಶಿಷ್ಟ್ಯ ಮತ್ತು ಗುಣಲಕ್ಷಣಗಳನ್ನು ಕುರಿತಾದ ಸಂಶೋಧನೆಗಳು ವಿಜ್ಞಾನಕ್ಷೇತ್ರಕ್ಕೆ ಟಿಂಡಾಲನ ಅತಿಮಹತ್ತ್ವದ ಕೊಡುಗೆಗಳು. ವಿಸರಣಾತ್ಮಕ ಉಷ್ಣಕ್ಕೆ ಅನಿಲ ಮತ್ತು ಆವಿಗಳ ಪಾರದರ್ಶಕತೆ ಮತ್ತು ಅಪಾರದರ್ಶಕತೆಗಳ ವಿಚಾರವಾಗಿ ಈತನ ಶೋಧನೆಗಳು ಹಲವು ಇವೆ. ಹವಾ ವಿಜ್ಞಾನದಲ್ಲಿ (ಮೀಟಿಯರಾಲಜಿ) ಹೆಚ್ಚಿನ ಮಹತ್ತ್ವವನ್ನು ಪಡೆದಿರುವ ಪರಿಶುದ್ಧ ಆವಿಯ ಅವಶೋಷಕಸಾಮಥ್ರ್ಯವನ್ನು (ಅಬ್‍ಸಾರ್ಪ್‍ಟಿವ್ ಪವರ್) ಖಚಿತವಾಗಿ ನಿರ್ಧರಿಸಿದ. ಕಾರ್ಬನ್ ಬೈ ಸಲ್ಫೈಡಿನಲ್ಲಿ ಅಯೊಡೀನ್ ದ್ರಾವಣವು ರೋಹಿತದ ದೃಗ್ಗೋಚರ ಭಾಗದ ಅಲೆಗಳಿಗೆ ಪೂರ್ಣ ಅಪಾರದರ್ಶಕವಾಗಿದೆ. ಆದರೆ ಉದ್ದವಾದ ಅತಿರಕ್ತ ಅಲೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪಾರದರ್ಶಕವಾಗಿದೆ ಎಂದು ಮೊತ್ತಮೊದಲಾಗಿ ಶೋಧಿಸಿದಾತ ಟಿಂಡಾಲ್. ಆಕಾಶದ ನೀಲಿ ಬಣ್ಣವನ್ನು ವಿಶದೀಕರಿಸಲು ಈತ ಹಲವು ಪ್ರಯೋಗಗಳನ್ನು ಮಾಡಿದ. ಬೆಳಕಿನ ದಂಡ ನಿಲಂಬಿತ ಕಣಗಳಿರುವ (ಸಸ್ಪೆಂಡೆಡ್ ಪಾರ್ಟಿಕಲ್ಸ್) ದ್ರವದ ಮೂಲಕ ಹಾದುಹೋಗುವಾಗ ಉಂಟಾಗುವ ವಿಲಕ್ಷಣ ವಿದ್ಯಮಾನದ ಕಡೆಗೆ ಲಕ್ಷ್ಯ ಸೆಳೆದವ ಟಿಂಡಾಲ್. ದ್ರವದಲ್ಲಿರುವ ನಿಲಂಬಿತ ಕಣಗಳಿಂದ ಬೆಳಕು ಹೊಂದುವ ಚದರಿಕೆಯನ್ನು ಟಿಂಡಲ್ ಪರಿಣಾಮ (ನೋಡಿ- ಟಿಂಡಲ್-ಪರಿಣಾಮ) ಎಂದೇ ಕರೆಯಲಾಯಿತು. ಫ್ಯಾರಡೆ ಶೋಧಿಸಿದ ರೆಜಿಟೇಶನ್ನನ್ನು, ಅಂದರೆ ಎರಡು ಕೊನೆಗಳಲ್ಲಿ ಭಾರವನ್ನು ಹೊತ್ತಿರುವ ಒಂದು ಸರಿಗೆಯನ್ನು ಬರ್ಫದ ತುಂಡಿನ ಮಧ್ಯದಲ್ಲಿ ತೂಗಹಾಕಿದಾಗ ಅದು ಬರ್ಫವನ್ನು ಇಬ್ಭಾಗಿಸದೆ ಇನ್ನೊಂದು ಬದಿಗೆ ಸರಿಯಬಲ್ಲುದು ಎಂಬುದನ್ನು ಸೊಗಸಾದ ಪ್ರಯೋಗದಿಂದ ತೋರಿಸಿದ ಖ್ಯಾತಿ ಟಿಂಡಾಲನದು. ಶಬ್ದ ಪ್ರಸಾರಕ್ಕೆ ವಾಯುವಿನ ಅಪಾರ ದರ್ಶಕತೆಯನ್ನು ಕುರಿತು ಸಹ ಟಿಂಡಾಲ್ ಅಧ್ಯಯನ ಮಾಡಿದ್ದ, ವಿಜ್ಞಾನಕ್ಕೆ ಟಿಂಡಾಲನ ಕೊಡುಗೆ ಮೂಲಭೂತ ಸಂಶೋಧನೆಗಳಿಗಿಂತಲೂ ಹೆಚ್ಚಾಗಿ ಕ್ಲಿಷ್ಟಕರ ಸಮಸ್ಯೆಗಳನ್ನು ಅತಿ ಸರಳಗೊಳಿಸಿ ವಿವರಿಸುವುದರಿಂದ ಆಗಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: