ಜರಾಶಾಸ್ತ್ರ

ಜರಾಶಾಸ್ತ್ರವು ಪ್ರಾಣಿಗಳ ಹಾಗೂ ಮಾನವನ ಮುಪ್ಪು(ವೃದ್ಧಾಪ್ಯ, ಜರಾ -ಸಂಸ್ಕೃತ ಶಬ್ದಗಳು) ಮತ್ತು ಅದರ ಸಮಸ್ಯೆಗಳಿಗೆ

ಜರಾಶಾಸ್ತ್ರ (ಜೆರಂಟಾಲಜಿ)ವು ಪ್ರಾಣಿಗಳ ಹಾಗೂ ಮಾನವನ ಮುಪ್ಪು(ವೃದ್ಧಾಪ್ಯ, ಜರಾ -ಸಂಸ್ಕೃತ ಶಬ್ದಗಳು) ಮತ್ತು ಅದರ ಸಮಸ್ಯೆಗಳಿಗೆ ಸಂಬಂಧಿಸಿದ ಶಾಸ್ತ್ರ .

ವೃದ್ಧಾಪ್ಯ

ಬದಲಾಯಿಸಿ

ಪ್ರಪಂಚದಲ್ಲಿ ಪ್ರತಿಯೊಂದು ವಸ್ತುವೂ-ಅದು ಸಜೀವವೇ ಆಗಿರಲಿ ನಿರ್ಜೀವವೇ ಆಗಿರಲಿ-ತನ್ನದೇ ಆದ ರೀತಿಯಲ್ಲಿ ಬೆಳೆವಣಿಗೆ ಹೊಂದುತ್ತದೆ, ವೃದ್ಧಿಯಾಗುತ್ತದೆ. ಕಾಲಕ್ರಮೇಣ ಕ್ಷೀಣವಾಗುತ್ತ ಬಂದು ಕಟ್ಟಕಡೆಗೆ ಸಾಯುತ್ತದೆ. ಇಲ್ಲವೆ ನಾಶವಾಗುತ್ತದೆ. ಈ ಕಾರಣದಿಂದಲೇ ಯಾವುದೇ ಜೀವಿಯ ಜೀವಮಾನದಲ್ಲಿ ಜನನ, ಶೈಶವ, ಬಾಲ್ಯ, ಯೌವನ, ಪ್ರೌಢಾವಸ್ಥೆ, ವೃದ್ಧಾಪ್ಯ, ಸಾವು ಎಂಬ ವಿವಿಧ ಘಟ್ಟಗಳು ಗಡಿಯಾರದ ಮುಳ್ಳಿನ ಚಲನೆಯಂತೆ ಕಂಡು ಬರುತ್ತವೆ. ಜನನದಿಂದ ಯೌವನಾವಸ್ಥೆ ಮತ್ತು ಪ್ರೌಢಾವಸ್ಥೆಗಳ ಕಡೆಗೆ ಮುಂದುವರಿಯುವ ಚಟುವಟಿಕೆಗಳು ಏರುಮುಖವಾಗಿರುತ್ತವೆ. ಆದರೆ ಫ್ರೌಢಾವಸ್ಥೆಯಿಂದ ಸಾವಿನವರೆಗೆ ಇಳಿಮುಖವಾಗಿರುತ್ತವೆ. ಈ ಇಳಿಮುಖದ ಬೆಳೆವಣಿಗೆಯನ್ನೇ ಮುಪ್ಪಾಗುವಿಕೆ, ವೃದ್ಧಾಪ್ಯ ಎಂದು ಕರೆಯುವುದು.

ವೃದ್ಧಾಪ್ಯದ ಪ್ರಕ್ರಿಯೆ

ಬದಲಾಯಿಸಿ

ಜೀವನದ ಉತ್ತರೋತ್ತರ ಕಂಡುಬರುವ ಈ ವೃದ್ಧಾಪ್ಯದ ಹಂತದಲ್ಲಿ ಆನುವಂಶೀಯತೆ, ಆಹಾರ, ದೇಹಕ್ರಿಯಾವಿಶೇಷದಲ್ಲಾಗುವ ಬದಲಾವಣೆಗಳು, ಹವೆ, ಸಮಾಜ ಪದ್ಧತಿ ಮೊದಲಾದ ಘಟಕಗಳು ಪರಸ್ಪರ ಪ್ರತಿಕ್ರಿಯೆಗಳನ್ನು ತೋರುತ್ತವೆ. ಇವುಗಳಲ್ಲಿ ಏರುಪೇರಾದರೆ ಮುಪ್ಪಾಗುವಿಕೆಯ ಪ್ರಕ್ರಿಯೆಗಳ ವೇಗದಲ್ಲೂ ಬದಲಾವಣೆಗಳಾಗುತ್ತವೆ. ಮುಪ್ಪಾಗುವಿಕೆಯ ಬಗ್ಗೆ ಎರಡು ಅಭಿಪ್ರಾಯಗಳು ಇವೆ. ಒಂದರ ಪ್ರಕಾರ ವೃದ್ಧಾಪ್ಯ ಪ್ರಕೃತಿಬದ್ಧನಾದ ಜೀವನದ ಒಂದು ಹಂತ. ದೇಹದೊಳಗಿನ ಪ್ರಕ್ರಿಯೆಗಳು ಮುಪ್ಪಾಗುವಿಕೆಯನ್ನು ಅನಿವಾರ್ಯವಾಗಿ ಚುರುಕುಗೊಳಿಸುತ್ತವೆ. ಇನ್ನೊಂದು ದೃಷ್ಟಿಯಲ್ಲಿ ವೃದ್ಧಾಪ್ಯ ಬೆಳೆವಣಿಗೆಯ ಜೊತೆಯಲ್ಲಿಯೇ ಪ್ರಾರಂಭದಿಂದಲೂ ಗುಪ್ತಗಾಮಿನಿಯಂತೆ ದೇಹದ ಒಳಗೆ ನಡೆಯುತ್ತಿದ್ದು ಇಳಿವಯಸ್ಸಿನಲ್ಲಿ ಪ್ರಕಟವಾಗುವ ಒಂದು ಕ್ರಿಯಾವಿಶೇಷ. ಅಂದರೆ ಈ ಪ್ರಾರಂಭದ ಹಂತದಿಂದಲೂ ರೋಗಗಳು ಮತ್ತು ಶರೀರ ಕ್ರಿಯಾವಿಶೇಷದಲ್ಲಿನ ಲೋಪದೋಷಗಳು ಅನುಕ್ರಮವಾಗಿ ಸಂಗ್ರಹವಾಗುವುದರಿಂದ ಇವುಗಳ ಅಧಿಕ್ಯದಿಂದ ವೃದ್ಧಾಪ್ಯ ಅನಿವಾರ್ಯವಾಗುತ್ತದೆ. ಅಂತೂ ಮೇಲಿನ ಎರಡು ಅಭಿಪ್ರಾಯಗಳ ಪ್ರಕಾರವೂ ವೃದ್ಧರಲ್ಲಿ ಪರಿಸರದ ಆಗುಹೋಗುಗಳಿಗೆ ಪರಿಹೊಂದಾಣಿಕೆಯಾಗುವ ಶಕ್ತಿ ಸಾಮರ್ಥ್ಯಗಳು ಕ್ರಮಕ್ರಮವಾಗಿ ಕುಂದುತ್ತ ಹೋಗಿ ಕೊನೆಗೆ ಸಾವು ಪ್ರಾಪ್ತವಾಗುತ್ತದೆ.

ವೃದ್ಧರಿಗೆ ಸಂಬಂಧಿಸಿದ ಸಮಸ್ಯೆಗಳ ಅಧ್ಯಯನ

ಬದಲಾಯಿಸಿ

ಸಮಾಜದಲ್ಲಿ ವೃದ್ಧರ ಸಂಖ್ಯೆ ಅಧಿಕಗೊಳ್ಳುತ್ತಿರುವುದರಿಂದ ವೃದ್ಧರಿಗೆ ಸಂಬಂಧಿಸಿದ ಸಮಸ್ಯೆಗಳ ಅಧ್ಯಯನ 1940 ರಿಂದೀಚೆಗೆ ಹೆಚ್ಚಾಗಿದೆ. ಜರಾಶಾಸ್ತ್ರದ ಅಧ್ಯಯನ ಕ್ಷೇತ್ರಗಳು ಕೇವಲ ಒಂದೆರಡು ಶಾಸ್ತ್ರಗಳ ಮಿತಿಗೆ ಒಳಪಡದೆ ಜೀವಶಾಸ್ತ್ರ, ಜೀವರಸಾಯನಶಾಸ್ತ್ರ, ಶರೀರಕ್ರಿಯಾಶಾಸ್ತ್ರ, ಮನೋವಿಜ್ಞಾನ, ವೈದ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರಗಳನ್ನು ಒಳಗೊಂಡಿವೆ. ಆದ್ದರಿಂದಲೇ ಇದರ ಅಧ್ಯಯನದ ವಿಧಿವಿಧಾನಗಳು ಆಯಾ ಶಾಸ್ತ್ರಗಳ ವಿಧಿವಿಧಾನಗಳನ್ನು ಅನುಸರಿಸುತ್ತವೆ. ತತ್ಛಲವಾಗಿ ಇದರ ವಿಧಿ ವಿಧಾನಗಳು ಬಗೆಬಗೆಯಾಗಿರುತ್ತವೆ. ಮುಪ್ಪಾಗುವಿಕೆಯ ಕ್ರಿಯಾವಿಶೇಷಗಳ ಮತ್ತು ವೃದ್ಧರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸುವುದು ಮತ್ತು ಸಮಾಜದ ಮೇಲೆ ಬೀಳುವ ವೃದ್ಧರ ಹೊರೆಯನ್ನು ಕಡಿಮೆ ಮಾಡಿ ಅವರನ್ನು ಸುಧಾರಿಸುವುದು ಈ ಶಾಸ್ತ್ರದ ಮೂಲ ಉದ್ದೇಶವೇ ಹೊರತು ವೃದ್ಧರ ಆಯುಷ್ಯವನ್ನು ಹೆಚ್ಚಿಸುವುದಾಗಲೀ ಸಮಾಜದಲ್ಲಿ ಇವರ ಸಂಖ್ಯೆಯನ್ನು ಅಧಿಕಗೊಳಿಸುವುದಾಗಲೀ ಇದರ ಗುರಿಯಲ್ಲ. ಜರಾಶಾಸ್ತ್ರದಲ್ಲಿ ನಾಲ್ಕು ಪ್ರಮುಖ ವಿಭಾಗಗಳನ್ನು ಗುರುತಿಸಬಹುದು:

1 ಮಾನವನೇ ಮೊದಲಾದ ಸಮಸ್ತ ಪ್ರಾಣಿಗಳ ಮುದಿಯಾಗುವಿಕೆಗೆ ಸಂಬಂಧಿಸಿದ ಸಾಮಾನ್ಯ ಜೈವಿಕ ದೃಷ್ಟಿ.

2 ಮುಪ್ಪಿಗೆ ಸಂಬಂಧಿಸಿದ ದೇಹಕ್ರಿಯಾತ್ಮಕ ಅಧ್ಯಯನಗಳು. ಇದರಲ್ಲಿ ವ್ಯಕ್ತಿಯ ರೋಗಸಂಬಂಧದ ಪ್ರಕ್ರಿಯೆಗಳೂ ರೋಗವೈಜ್ಞಾನಿಕ ವಿಚಲನೆಗಳೂ ಸೇರಿರುತ್ತವೆ. ಈ ಕ್ಷೇತ್ರ ವಾಸ್ತವವಾಗಿ ವೈದ್ಯಶಾಸ್ತ್ರಕ್ಕೆ ಸೇರಿದ್ದು. ವೃದ್ಧರ ರೋಗಲಕ್ಷಣ, ಪರೀಕ್ಷೆ, ರೋಗನಿರೋಧ, ಔಷಧೋಪಚಾರ, ವೈದ್ಯೋಪಚಾರಗಳನ್ನು ಒಳಗೊಂಡಿರುವ ಈ ಶಾಸ್ತ್ರಕ್ಕೆ ಜೆರಿಯಾಟ್ರಿಕ್ಸ್ ಅಥವಾ ಜರಾರೋಗಶಾಸ್ತ್ರ ಎಂದು ಹೆಸರು.

3 ವೃದ್ಧಾಪ್ಯಕ್ಕೆ ಸಂಬಂಧಿಸಿದ ಮನೊವೈಜ್ಞಾನಿಕ ದೃಷ್ಟಿ.

4 ಜೀವಸಂದಣಿಯಲ್ಲಿ ವೃದ್ಧರಸಂಖ್ಯೆ ಅಪಾರವಾದಾಗ ತಲೆದೋರುವ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು.

ಮುಪ್ಪಾಗುವಿಕೆಗೆ ಸಂಬಂಧಿಸಿದ ಜೈವಿಕ ದೃಷ್ಟಿ

ಬದಲಾಯಿಸಿ

ಮುಪ್ಪಾಗುವುದು ಎಲ್ಲ ಜೀವಿಗಳಲ್ಲಿ ಕಂಡುಬರುವ ಪ್ರಕೃತಿದತ್ತವಾದ ಒಂದು ಜೈವಿಕ ಪ್ರಕ್ರಿಯೆ. ಒಂದು ಜೀವಿಯ ಆಯುಷ್ಯ ವಿವಿಧ ಜೀವಿಗಳಲ್ಲಿ ಬಗೆಬಗೆಯಾಗಿರುತ್ತದೆ. ಕೆಲವು ಜಾತಿಯ ಅಮೆಗಳ ಸರಾಸರಿ ಆಯುಸ್ಸು 177 ವರ್ಷಗಳು. ಮಾನವರಲ್ಲಿ ಕೂಡ ನೂರು ವರ್ಷಗಳನ್ನು ದಾಟಿರುವ ಕೆಲವರನ್ನು ಕಾಣಬಹುದು. ಆದರೆ ಎಳೆವಯಸ್ಸಿನಲ್ಲಿಯೇ ಹಲವು ಬಗೆಯ ರೋಗಗಳಿಗೆ ಬಲಿಯಾಗುವುದರಿಂದಲೂ ಪೌಷ್ಟಿಕಾಹಾರವನ್ನು ಸೇವಿಸದೆ ಇರುವುದರಿಂದಲೂ ಮಾನವನ ಸರಾಸರಿ ಜೀವಿತಾವಧಿ ಕಡಿಮೆಯಾಗಿದೆ. ಅಂತೂ ಆನುವಂಶಿಕ ಗುಣವಿಶೇಷ, ಪೋಷಣೆ, ರೋಗ, ವಿಕಿರಣ, ದೇಹದ ತಾಪ ಮೊದಲಾದುವು ಸರಾಸರಿ ಆಯುಷ್ಯದ ಮೇಲೆ ಪ್ರಮುಖವಾಗಿ ಪ್ರಾಬಲ್ಯ ಬೀರುವ ಘಟಕಗಳು. ಕಡಿಮೆವರ್ಷಗಳ ಕಾಲ ಬದುಕುವ ದಂಪತಿಗಳಲ್ಲಿ ಹುಟ್ಟುವ ಮಕ್ಕಳ ಸರಾಸರಿ ಆಯುಷ್ಯ ಕಡಿಮೆಯಾಗುತ್ತದೆ. ಹಾಗೆಯೇ ಹೆಚ್ಚುವರ್ಷಗಳ ಕಾಲ ಬದುಕುವ ಸಾಮರ್ಥ್ಯವುಳ್ಳ ಕುಟುಂಬದಲ್ಲಿ ಹುಟ್ಟುವ ಮಕ್ಕಳು ದೀರ್ಘಕಾಲ ಬದುಕುತ್ತವೆ. ಪೌಷ್ಟಿಕಾಹಾರವನ್ನು ಸೇವಿಸುವವನ ಸರಾಸರಿ ಆಯುರ್ಮಾನ ಅಂಥ ಆಹಾರವನ್ನು ಸೇವಿಸದವನ ಆಯುರ್ಮಾನಕ್ಕಿಂತ ಬಹು ಉತ್ತಮವಾಗುತ್ತದೆ. ರೋಗನಿರೋಧಶಕ್ತಿ ಕೂಡ ಆನುವಂಶಿಕ. ಅಲ್ಲದೆ ರೋಗಗಳೂ ಆಯುಸ್ಸನ್ನು ಮೊಟಕುಗೊಳಿಸುತ್ತವೆ.

ಮಾನವರಲ್ಲಿ ವೃದ್ಧಾಪ್ಯ ಯಾವ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ ಎನ್ನುವುದನ್ನು ನಿರ್ಧರಿಸುವುದು ಕಷ್ಟವಾದರೂ ಇದು ಮಾನವನ ವಯಸ್ಸಿನ 40-60 ವರ್ಷಗಳ ನಡುವಣ ಹಂತದಲ್ಲಿ ಯಾವಾಗಲಾದರೂ ಪ್ರಾರಂಭವಾಗಬಹುದು. ಈ ಹಂತದಲ್ಲಿ ಅಥವಾ ಇದಕ್ಕೂ ಮುನ್ನವೇ ಜೀವಿಯ ಅಂಗರಚನೆಗಳಲ್ಲಿ ಹಾಗೂ ದೇಹಕ್ರಿಯಾವಿಶೇಷಗಳಲ್ಲಿ ಕ್ರಮಕ್ರಮವಾಗಿ ಬದಲಾವಣೆಗಳು ಆರಂಭವಾಗುತ್ತವೆ. ಕಪ್ಪುಕೂದಲು ಬೆಳ್ಳಗಾಗುವುದು ಜರಾವಸ್ಥೆಯ ಪ್ರಾರಂಭ ಲಕ್ಷಣ. ಅಂಗಾಂಗಗಳ ಒಳಗೆ ಆಗುವ ಬದಲಾವಣೆಗಳಿಂದ ಮೇಲಿನ ಧರ್ಮ ಸುಕ್ಕು ಸುಕ್ಕಾಗುತ್ತದೆ. ಈ ಬದಲಾವಣೆಗಳಲ್ಲಿ ಕೆಲವು ಸಾಮಾನ್ಯವಾಗಿ ದೀರ್ಘಕಾಲ ನಿಧಾನವಾಗಿ ಮುನ್ನಡೆಯತಕ್ಕವು. ಆದ್ದರಿಂದಲೇ ಮುಪ್ಪಾಗುವಿಕೆಗೆ ಸಂಬಂಧಿಸಿದ ಸಮಸ್ಯೆ ಮತ್ತು ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಜೀವಕೋಶಗಳ ಹಾಗೂ ಅವುಗಳ ಒಳಗೆ ನಡೆಯುವ ಜೈವಿಕ ಪ್ರತಿಕ್ರಿಯೆಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.

ಜೀವಕೋಶಗಳು ಬಹುಕೋಶಿಕ ಜೀವಿಗಳ ಅಂಗ ಅಂಗಾಂಶಗಳಲ್ಲಿ ಕಂಡುಬರುವ ಮೂಲಭೂತಘಟಕಗಳು. ಇವುಗಳ ಕ್ರಿಯಾ ಚಟುವಟಿಕೆಗಳು ಪೂರ್ವಾರ್ಧದಲ್ಲಿದ್ದಂತೆ ಉತ್ತರಾರ್ಧದಲ್ಲಿರುವುದಿಲ್ಲ. ಈ ಬದಲಾವಣೆಗೆ ಜೀವಕೋಶದಲ್ಲಿ ಹುದುಗಿರುವ ರಾಸಾಯನಿಕ ಕ್ರಿಯಾವಿನ್ಯಾಸದಲ್ಲಿ ಕ್ರಮಕ್ರಮವಾಗಿ ತಲೆದೋರುವ ಮಾರ್ಪಾಡುಗಳೇ ಕಾರಣ. ಈ ಮಾರ್ಪಾಟಿನ ಬಗ್ಗೆ ಜೀವಕೋಶಶಾಸ್ತ್ರಜ್ಞರು ಕಳೆದ 10-20 ವರ್ಷಗಳಿಂದ ಸಂಶೋಧನೆ ನಡೆಸಿ ಕಾರಣಗಳನ್ನು ಹುಡುಕುತ್ತಿದ್ದಾರೆ. ಇವರ ಸಂಶೋಧನೆ ತೃಪ್ತಿಕರವಾದ ಸಿದ್ಧಿಯನ್ನು ಪಡೆಯುದಿದ್ದರೂ ಸಾಕಷ್ಟು ತಿಳಿವಳಿಕೆಯನ್ನು ನೀಡಿದೆ. ಅಲ್ಲದೆ ದೇಹಕ್ರಿಯಾತ್ಮಕ ಹಾಗೂ ಜೀವರಾಸಾಯನಿಕ ಅಧ್ಯಯನಗಳು ಜೀವಕೋಶಗಳ ಮುಪ್ಪು ಸಾವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿವೆ. ಪ್ರತಿಯೊಂದು ಬಹುಕೋಶಿಕ ಜೀವಿಯೂ ಪ್ರಾರಂಭದಲ್ಲಿ ಒಂದೇ ಒಂದು ಜೀವಕೋಶದಿಂದ (ನಿಷೇಚಿತ ಅಂಡಾಣು) ತನ್ನ ಜೀವನವನ್ನು ಪ್ರಾರಂಭಿಸುತ್ತದೆ. ಈ ಜೀವಕೋಶ ಕ್ರಮ ಕ್ರಮವಾಗಿ ಎರಡು, ನಾಲ್ಕು, ಎಂಟು, ಹದಿನಾರು ಮುಂತಾಗಿ ವಿಭಜನೆಹೊಂದಿ ಬಹುಕೋಶಿಕ ಜೀವಿಯಾಗಿ ಪರಿವರ್ತನೆ ಹೊಂದುತ್ತದೆ. ಬೆಳೆವಣಿಗೆ ಮುಂದುವರಿದಂತೆ ಜೀವಕೋಶಗಳಲ್ಲಿ ವಿಭೇದನೆಯಾಗಿ, ನರ, ಸ್ನಾಯು, ರಕ್ತ ಮೊದಲಾದ ಜೀವಕೋಶಗಳು ರೂಪುಗೊಳ್ಳುತ್ತವೆ. ಕೊನೆಕೊನೆಗೆ ಜೀವನದ ಒಂದು ಹಂತದಲ್ಲಿ ಜೀವಕೋಶಗಳು ವಿದಲನ ಹೊಂದುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಆದರೆ ದೇಹದ ಕೆಲವೆಡೆ ಕೆಲವು ಜೀವಕೋಶಗಳು ಜೀವನ ಪರ್ಯಂತ ವಿದಲನವಾಗುವುದರಿಂದ ಅವುಗಳ ಸಂಖ್ಯೆ ಹೆಚ್ಚುತ್ತದೆ. ಈೀವಕೋಶಗಳಿಗೆ ವಯಸ್ಸಾದಂತೆ ಅವುಗಳ ಕಾರ್ಯನಿರ್ವಹಣಾ ಸಾಮರ್ಥ್ಯ ಕುಂದುತ್ತದೆ. ಕೊನೆಗೆ ಅವು ಸಾಯುತ್ತವೆ. ಅಂತೂ ಬೆಳೆವಣಿಗೆಯ ಹಂತದಲ್ಲಿ ಕಂಡುಬರುವ ಜೀವಕೋಶಗಳ ಉತ್ಪತ್ತಿಯ ಪ್ರಮಾಣ ವೃದ್ಧಾಪ್ಯದಲ್ಲಿರುವುದಿಲ್ಲ. ವೃದ್ಧಾಪ್ಯದಲ್ಲಿ ಜೀವಕೋಶಗಳ ಇಳುಮುಖದ ಉತ್ಪತ್ತಿಗೆ ಜೀವಕೋಶಗಳಲ್ಲಿ ದೇಹಕ್ರಿಯಾಶಕ್ತಿ ಕುಂದುವುದೇ ಕಾರಣ. ಈ ಕ್ರಿಯಾಶಕ್ತಿಯನ್ನು ಉತ್ತಮಪಡಿಸಿದ್ದೇ ಆದರೆ ಸಾವನ್ನು ಹೆಚ್ಚು ಕಾಲ ಮುಂದೂಡಬಹುದು, ಜೀವನವನ್ನೇ ಮಾರ್ಪಡಿಸಬಹುದು. ಜೀವಕೋಶಗಳ ವಿಭಜನೆಯ ಸಂಯಂತ್ರದಲ್ಲಿ ಬದಲಾವಣೆಗಳಾಗಬೇಕಾದರೆ, ಪರಿಸರದ ಲೋಪದೋಷಗಳು ಕಾರಣವಿರಬೇಕೆಂದೂ ತತ್ಛಲವಾಗಿ ಜೀವಕೋಶಗಳಿಗೆ ಮುಪ್ಪು ಮತ್ತು ಸಾವು ಪ್ರಾಪ್ತವಾಗುತ್ತದೆಯೆಂದೂ ಅಲೆಕ್ಸಿಸ್ ಕ್ಯಾರೆಲ್ ಪ್ರಯೋಗಾತ್ಮಕವಾಗಿ ತೋರಿಸಿಕೊಟ್ಟಿದ್ದಾನೆ. ಅವನು ಕೋಳಿಯ ಭ್ರೂಣದ ಹೃದಯದಿಂದ ತೆಗೆದ ಜೀವಕೋಶಗಳನ್ನು ಪೋಷಕಮಾಧ್ಯಮದಲ್ಲಿಟ್ಟು 34 ವರ್ಷಗಳ ಕಾಲ ಬೆಳೆಸಿ ನೋಡಿದ್ದಾನೆ. ಇಂಥ ಜೀವಕೋಶಗಳು ಮೂಲಜೀವಕೋಶಗಳಷ್ಟೇ ಚಟುವಟಿಕೆಯಿಂದ ವಿಭಜನೆ ಹೊಂದುವ ಸಾಮರ್ಥ್ಯವನ್ನು ಉಳಿಸಿಕೊಂಡಿರುತ್ತವೆಂದು ತೋರಿಸಿಕೊಟ್ಟಿದ್ದಾನೆ. ಅಂದರೆ ಸೂಕ್ತ ಪರಿಸರದಲ್ಲಿ ಎಲ್ಲ ಜೀವಕೋಶಗಳೂ ಅಮರವಾಗಿರುತ್ತವೆಂಬುದು ಈ ಪ್ರಯೋಗದ ತಿರುಳು. ಪೋಷಕ ಮಾಧ್ಯಮದ ಸ್ವಚ್ಛತೆಯನ್ನು ಉಳಿಸಿಕೊಳ್ಳಲು ಮಾಧ್ಯಮವನ್ನು ಎರಡು ದಿನಗಳಿಗೊಮ್ಮೆ ಬದಲಾಯಿಸುತ್ತಿರಬೇಕು. ಪರಿಸರ ಮಾಧ್ಯಮದಲ್ಲಿ ಚಯಾಪಚಯ ಕ್ರಿಯೆಯ ಉತ್ಪನ್ನಗಳು ಸಂಗ್ರಹವಾಗುವುದರಿಂದ ಜೀವಕೋಶಗಳ ಬದುಕಿನ ಕ್ರಿಯಾವಿನ್ಯಾಸದಲ್ಲಿ ಅಡೆತಡೆಗಳಾಗುತ್ತವೆ. ಬಾಹ್ಯ ಮತ್ತು ಪರಿಸರದ ಕ್ರಿಯಾ ವಿನ್ಯಾಸಗಳಲ್ಲಿ ಏರುಪೇರಾದರೆ ಜೀವಕೋಶಗಳ ಸಾವಿಗೆ ನಾಂದಿಯಾಗುತ್ತದೆ. ಅಂತೂ ದೇಹದೊಳಗಿನ ಜೀವಕೋಶಗಳ ಸಾವಿಗೆ ಆಕ್ಸಿಜನ್ ಹಾಗೂ ಪೋಷಕಾಂಶಗಳ ಸರಬರಾಜಿನಲ್ಲಿ ಅಡೆತಡೆಗಳುಂಟಾಗುವುದೇ ಕಾರಣ. ಜೀವಕೋಶದ ಸಾವಿನ ಬಗ್ಗೆ ವಿಜ್ಷಾನಿಗಳು ಮೂರು ಪರಿಕಲ್ಪನೆಗಳನ್ನು ಮುಂದಿಟ್ಟಿದ್ದಾರೆ.

(A) ದೇಹದಲ್ಲಿರುವ ಜೀವಕೋಶಗಳಿಗೆ ಆಗಾಗ್ಗೆ ಕೆಲವು ಅತ್ಯಗತ್ಯವಾದ ವಸ್ತುಗಳ ಕೊರತೆಯುಂಟಾಗುತ್ತದೆ, ಆಗ ಜೀವಕೋಶಗಳು ದಣಿದು ಸಾಯುತ್ತವೆ.

(b) ಜೀವಕೋಶಗಳ ಚಯಾಪಚಯಕ್ರಿಯೆಗೆ ಅತ್ಯಗತ್ಯವಾದ ಪ್ರೋಟೀನು ಅಣುಗಳ ರಾಸಾಯನಿಕ ಕ್ರಿಯೆಗಳಲ್ಲಿ ಲೋಪದೋಷಗಳು ತಲೆದೋರುವುದರಿಂದ ಜೀವಕೋಶಗಳ ಸಾವಿಗೆ ಕಾರಣವಾಗುತ್ತದೆ.

(C) ಜೀವಕೋಶದಲ್ಲಿ ಹುದುಗಿರುವ ಜೀನ್ಯಾತ್ಮಕ ವಸ್ತುವಾದ ಡಿಆಕ್ಸಿರೈಬೋ ನ್ಯೂಕ್ಲಿಯಿಕ್ ಆಮ್ಲದಲ್ಲಿ (ಡಿಎನ್‍ಎ) ಲೋಪದೋಷಗಳುಂಟಾಗಿ, ಅದರ ಕ್ರಿಯಾ ವಿಶೇಷದಲ್ಲಿ ನ್ಯೂನತೆಗಳು ತುಂಬಿ ದೋಷಪೂರ್ಣವಾದ ಹೊಸ ಹೊಸ ಎಂಜೈಮುಗಳು ಉತ್ಪತ್ತಿಯಾಗುವುದರಿಂದ ಜೀವಕೋಶಗಳು ಮುದಿಯಾಗಿ ಕೊನೆಗೆ ಸಾಯುತ್ತವೆ.

ಮುಪ್ಪಿಗೆ ಸಂಬಂಧಿಸಿದ ದೇಹಕ್ರಿಯಾತ್ಮಕ ಅಧ್ಯಯನಗಳು

ಬದಲಾಯಿಸಿ

ದೇಹಕ್ಕೆ ವಯಸ್ಸಾದಂತೆ ಅಂಗಮಂಡಲದ ಕ್ರಿಯಾವಿಶೇಷಗಳು ಕ್ರಮಕ್ರಮವಾಗಿ ಕುಂದುತ್ತ ಬರುತ್ತವೆ. ಹೀಗೆ ಕುಂದಲು ಪ್ರಾರಂಭಿಸುವುದು ಪ್ರಾಯಶಃ 30-35ನೆಯ ವಯಸ್ಸಿನಲ್ಲಿ. ಕಣ್ಣಿನ ದೃಷ್ಟಿ ಮಂದವಾಗುತ್ತ ಬರುತ್ತದೆ. ಹಲವು ಸಂದರ್ಭಗಳಲ್ಲಿ ನಲವತ್ತು ವರ್ಷ ವಯಸ್ಸಾದರೆ ಕನ್ನಡಕವನ್ನು ಧರಿಸುವುದು ಅನಿವಾರ್ಯವಾಗುತ್ತದೆ. ಓಡಾಡುವುದರಲ್ಲಿ ಚುರುಕುತನ ಕಡಿಮೆಯಾಗುತ್ತ ಬರುತ್ತದೆ. ಜೀರ್ಣಶಕ್ತಿ, ಗ್ರಹಣಸಾಮರ್ಥ್ಯ, ರೋಗನಿರೋಧಕ ಸಾಮರ್ಥ್ಯ, ಇಮ್ಯೂನಿಟಿ ಕಡಿಮೆಯಾಗುತ್ತ ಬರುತ್ತವೆ. ಪರಿಸರದ ಬದಲಾವಣೆಗಳಿಗೆ ತೋರುವ ಪ್ರತಿಕ್ರಿಯೆಯ ತೀಕ್ಷ್ಣತೆ ಕೂಡ ಕುಂಠಿತವಾಗುತ್ತದೆ. ಈ ಬದಲಾವಣೆಗಳು ಸಾಮಾನ್ಯವಾಗಿ ಕ್ರಮಕ್ರಮವಾಗಿ ತಲೆದೋರುತ್ತವೆಯೇ ಹೊರತು ದಿಢೀರನೆ ಪ್ರಕಟವಾಗುವುದು ಅಪರೂಪ.

ವೃದ್ಧಾಪ್ಯವನ್ನು ರೋಗವೆಂದು ಪರಿಗಣಿಸುವುದು ತಪ್ಪು, ಜರಾವಸ್ಥೆ ಜೀವನದ ಕೊನೆಯಲ್ಲಿನ ಇಳಿಮುಖದ ಬೆಳವಣಿಗೆ. ಕೆಲವು ಕಾಯಿಲೆಗಳು-ಆರ್ಟೀರಿಯೋ ಸ್ಕೀರ್ಲೋಸಿಸ್ ಅಥವಾ ಅಪಧಮನಿಗಳ ಕಾಠಿಣ್ಯ; ಹೈಪರ್‍ಟೆನ್‍ಪನ್ ಅಥವಾ ತೀವ್ರರಕ್ತದ ಒತ್ತಡ, ಮಧುಮೇಹ (ಸಿಹಿಮೂತ್ರರೋಗ), ವಾತರೋಗ, ಸಂಧಿವಾಯು, ಶ್ರೋಣಿತವಾತ, ಏಡಿಗಂತಿ, ಕಣ್ಣುಪೊರೆ-ಇವು ವೃದ್ಧದಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ, ಆದರೆ ಇವು ವೃದ್ಧರಿಗೆ ಮಾತ್ರ ಸೀಮಿತವಾದುವಲ್ಲ. ಜರಾಶಾಸ್ತ್ರದ ವ್ಯಾಪ್ತಿಯಲ್ಲಿ ಮುದುಕರ ಆರೋಗ್ಯ ಮತ್ತು ಮುದುಕರ ರೋಗರುಜಿನಗಳಲ್ಲದೆ ಪ್ರಸಾಮಾನ್ಯ ವೃದ್ಧಮಾನ್ಯ ವೃದ್ಧರಲ್ಲಿ ಕಂಡುಬರುವ ಬದಲಾವಣೆಗಳನ್ನು ಅಧ್ಯಯನ ಮಾಡಬಹುದು. ಪ್ರಸಾಮಾನ್ಯ ವೃದ್ಧಾಪ್ಯದ ಕ್ರಿಯಾವಿಶೇಷಗಳಲ್ಲಿ ಕಂಡುಬರುವ ಸೂಕ್ಷ್ಮ ಬದಲಾವಣೆಗಳನ್ನು ಗುರುತಿಸಲು ಪ್ರಯತ್ನಿಸಬಹುದು. ಈ ರೋಗಗಳನ್ನು ಸಂಪೂರ್ಣವಾಗಿ ವಾಸಿಮಾಡಲು ಸಾಧ್ಯವಾಗದಿದ್ದರೂ ಅವುಗಳ ತೀವ್ರತೆಯನ್ನು ತಡೆಗಟ್ಟುವ ಅಥವಾ ಶಮನಗೊಳಿಸುವ ಪ್ರಯತ್ನಗಳನ್ನು ನಡೆಸಬಹುದು. ಅಲ್ಲದೆ ನಿತ್ರಾಣಗೊಳಿಸುವ ಕಾಯಿಲೆಗಳ ತೀವ್ರತೆಯನ್ನು ದುರ್ಬಲಗೊಳಿಸಬಹುದು.

ಹೃದಯಸಂಬಂಧದ ಹಾಗೂ ರಕ್ತಪರಿಚಲನೆಗೆ ಸಂಬಂಧಿಸಿದ ಕಾಯಿಲೆಗಳಾದ ಅಪಧಮನಿಗಳ ಕಾಠಿಣ್ಯ ಮತ್ತು ತೀವ್ರರಕ್ತದ ಒತ್ತಡಗಳು ವೃದ್ಧಾಪ್ಯ ಪೂರ್ವದಲ್ಲಿಯೇ ಕಾಣಿಸಿಕೊಳ್ಳುವುದುಂಟು. ಈ ಕಾಯಿಲೆಗಳು ಮಧ್ಯವಯಸ್ಸು ದಾಟಿದ ಗಂಡಸರು ಹೆಂಗಸರೆನ್ನದೆ ಬಲಿತೆಗೆದುಕೊಳ್ಳುತ್ತವೆ. ಇವುಗಳಿಂದುಂಟಾಗುವ ಮರಣಸಂಖ್ಯೆ ಇತರ ಕಾರಣಗಳಿಂದ ಉಂಟಾಗುವ ಮರಣಸಂಖ್ಯೆಗಿಂತಲೂ ಹಿರಿದು. ಜರಾವಸ್ಥೆಯ ಕಾಯಿಲೆಗಳಲ್ಲಿ ಕೆಲವು ಸಾಮಾನ್ಯ ಲಕ್ಷಣಗಳನ್ನು ಗುರುತಿಸಬಹುದು.

(A) ವೃದ್ಧಾಪ್ಯಕ್ಕೆ ಸಂಬಂಧಿಸಿದ ರೋಗಗಳಿಗೆ ದೇಹದೊಳಗಣ ದೇಹಕ್ರಿಯಾ ಲೋಪದೋಷಗಳು ಕಾರಣವೇ ವಿನಃ ಬಾಹ್ಯಪರಿಸರದ ಸೋಂಕುಕಾರಕಗಳಲ್ಲ.

(b) ಅಂಗಕ್ಷಯ ಕಾಯಿಲೆಗಳು ವ್ಯಕ್ತಿಯನ್ನು ಬಹುದೀರ್ಘಕಾಲ ನಿತ್ರಾಣಗೊಳಿಸುತ್ತವೆ.

(c) ವೃದ್ಧರಲ್ಲಿ ಒಂದಕ್ಕಿಂತಲೂ ಹೆಚ್ಚಿನ ರೋಗಗಳು ಒಮ್ಮೆಗೇ ತಲೆದೋರುತ್ತವೆ.

ಆದಕಾರಣ ವೈದ್ಯನಾದವ ಬಹುಮುಖದ ಕ್ರಿಯಾವಿನ್ಯಾಸವನ್ನು ತಹಬಂದಿಗೆ ತರುವ ಪ್ರಯತ್ನ ಮಾಡಬೇಕಾಗುತ್ತದೆ. ಜರಾವಸ್ಥೆಯ ಹಲವು ರೋಗಗಳು ಪ್ರಕಟವಾಗುವುದ್ಕಕೆ ಹಲವು ವರ್ಷಗಳ ಹಿಂದೆಯೇ ಅಂದರೆ 2-20 ವರ್ಷಗಳ ಕಾಲ ಶರೀರದಲ್ಲಿ ಗುಪ್ತವಾಗಿ ಹುದುಗಿರುತ್ತವೆ. ಈ ಕಾರಣದಿಂದಲೇ ಇವುಗಳ ಸೂಚನೆ ಯಾವುದೂ ವೃದ್ಧರಲ್ಲಿ ಕಂಡುಬರುವುದಿಲ್ಲ. ಅನೇಕ ವೇಳೆ ವೈದ್ಯ ಬೇರೆ ಬೇರೆ ಕಾಯಿಲೆಗಳನ್ನು ಗುಣಪಡಿಸುವಾಗ ಇವು ಪ್ರಕಟವಾಗಬಹುದು.

ವೃದ್ಧಾಪ್ಯದಲ್ಲಿ ವಿಶಿಷ್ಟವಾದ ಕಾಯಿಲೆಗಳಲ್ಲದೆ ಇಳಿವಯಸ್ಸಿನ ಪ್ರಬಲ ಶತ್ರುಗಳಿಂದ ಕೊಬ್ಬುದೇಹ, ಡೊಳ್ಳು ಹೊಟ್ಟೆ ಇವೂ ಕಾಣಿಸಿಕೊಳ್ಳುತ್ತವೆ. ಆದ್ದರಿಂದ 30-40 ವರ್ಷ ದಾಟಿದ ಮಾನವ ತನ್ನ ದೇಹದಲ್ಲಿ ಹೆಚ್ಚು ಕೊಬ್ಬನ್ನು ಬೆಳೆಸಿಕೊಳ್ಳದೇ ಇರುವುದು ಒಳ್ಳೆಯದು. ಮುಪ್ಪಿನಲ್ಲಿ ತಲೆದೋರುವ ಅಂಗಸಂಬಂಧದ ಹಾಗೂ ಅಂಗಗಳನ್ನು ಕ್ಷೀಣಿಸುವ ಕಾಯಿಲೆಗಳ ಬಗ್ಗೆ ವೈದ್ಯರ ಸಲಹೆಗಳನ್ನು ನಡುವಯಸ್ಸು ದಾಟಿದವ ಆಗಾಗ್ಗೆ ಪಡೆಯುತ್ತಿರುವುದು ಒಳ್ಳೆಯದು. ಇದರಿಂದ ವೃದ್ಧಾಪ್ಯದಲ್ಲಿ ತಲೆಯೆತ್ತುವ ರೋಗಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗುತ್ತದೆ.

ವೃದ್ಧಾಪ್ಯದ ಬಗ್ಗೆ ಮನೋವೈಜ್ಞಾನಿಕ ದೃಷ್ಟಿ

ಬದಲಾಯಿಸಿ

ವೃದ್ಧಾಪ್ಯ ಪ್ರಾಪ್ತವಾದ ಮೇಲೆ ಬಾಹ್ಯ ಪರಿಸರದ ಪ್ರಚೋದನೆಗಳಿಗೆ ತೀಕ್ಷ್ಮವಾದ ಪ್ರತಿಕ್ರಿಯೆ ತೋರಿಸುವುದು ಕಡಿಮೆಯಾಗುತ್ತದೆ. ಶ್ರವಣ ಹಾಗೂ ದೃಷ್ಟಿ ಸಾಮರ್ಥ್ಯಗಳು ಕಡಿಮೆಯಾಗುತ್ತವೆ. ಬೌದ್ಧಿಕ, ಮಾನಸಿಕ ಮತ್ತು ಭಾವೋದ್ರೇಕ ಸಂಬಂಧಗಳಲ್ಲಿ ಬದಲಾವಣೆಗಳಾಗುತ್ತವೆ. ಕಲಿಕೆಯ ಸಾಮರ್ಥ್ಯ ಎಳೆಯ ವಯಸ್ಸಿನಲ್ಲಿರುವಷ್ಟು ತೀಕ್ಷ್ಮವಾಗಿರುವುದಿಲ್ಲವೆಂದು ಮನೋವಿಜ್ಞಾನಿಗಳ ಅಭಿಪ್ರಾಯ. ವೃದ್ಧರಲ್ಲಿ ದೇಹದ ಬೆಳೆವಣಿಗೆಯ ವೇಗ ಕಡಿಮೆಯಾದರೂ ತಾಳ್ಮೆ ಮತ್ತು ಸಹನಾ ಶಕ್ತಿ ಹೆಚ್ಚುತ್ತವೆ. ವೃದ್ಧರ ತೀರ್ಪು ಯುವಕರ ತೀರ್ಪಿಗಿಂತ ತೃಪ್ತಿಕರವಾಗಿರುತ್ತದೆ.

ವೃದ್ಧಾಪ್ಯದಲ್ಲಿ ಜನರ ದೇಹಶಕ್ತಿ ಮತ್ತು ಹಣಗಳಿಕೆಯ ಸಾಮರ್ಥ್ಯ ಕಡಿಮೆಯಾಗುವುದರಿಂದ ಯುವಜನದ ಪರಿಸರದಲ್ಲಿ ವೃದ್ಧರು ಪರಿಹೊಂದಾಣಿಕೆಯಾಗಬೇಕಾಗುತ್ತದೆ. ಯುವಜನಾಂಗ ವೃದ್ಧರ ಹೊರೆ ಹೊರಬೇಕಾಗುತ್ತದೆ. ಒಂದು ಕಾಲಕ್ಕೆ ಅವರ ಮಾತಿಗೆ ಬೆಲೆಯಿರುತ್ತದೆ. ಆದರೆ ವೃದ್ಧಾಪ್ಯಕ್ಕೆ ಕಾಲಿಟ್ಟಮೇಲೆ ಅವರ ಮಾತಿಗೆ ಬೆಲೆಯಿಲ್ಲವಾಗಬಹುದು. ಅಂಥ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಶಕ್ತಿ ಅವರಿಗಿದ್ದರೆ ಸಮಾಜದಲ್ಲಿ ಶಾಂತಿಯಿರುತ್ತದೆ. ಆದ್ದರಿಂದ ವೃದ್ಧರು ಬದಲಾಗುವ ಪರಿಸರಕ್ಕೆ ಹೊಂದಿಕೊಳ್ಳುವುದು ಲೇಸು.

ಸಾಮಾಜಿಕ ಹಾಗೂ ಅರ್ಥಿಕ ಸಮಸ್ಯೆ

ಬದಲಾಯಿಸಿ

ವೃದ್ಧಾಪ್ಯ ಸಮಾಜದ ಸಮಸ್ಯೆಯೂ ಹೌದು. ಅರ್ಥಿಕ ಪ್ರಶ್ನೆಯೂ ಹೌದು. ಇದು ಇತ್ತೀಚಿನ ದಶಕಗಳಲ್ಲಿ ಜಟಿಲವಾಗಲು ಪ್ರಾರಂಭಿಸಿದೆ. ಇದಕ್ಕೆ ಸಮಾಜದಲ್ಲಿ ವೃದ್ಧರ ಸಂಖ್ಯೆ ಅಧಿಕವಾಗುತ್ತಿರುವುದೇ ಕಾರಣ. ಏಕೆಂದರೆ ಹುಟ್ಟಿದ ಮಗುವಿನ ಸರಾಸರಿ ಜೀವನ ಅವಧಿ ಅಥವಾ ಆಯುರ್ಮಾನ ಪ್ರಪಂಚಾದ್ಯಂತ ಅಧಿಕವಾಗಿದೆ. ಭಾರತದಲ್ಲಿ ಹುಟ್ಟಿದ ಮಗುವಿನ ಜೀವನದ ಅವಧಿ 1910-11ರಲ್ಲಿ 23 ವರ್ಷಗಳಿದ್ದು 1951-61 ರಲ್ಲಿ 45ಕ್ಕೆ ಏರಿದೆ. 2021 ಕ್ಕೆ 69.96 ವರ್ಷ ತಲುಪಿದೆ. [೧][೧]. ಜೀವನದ ಅವಧಿಯ ಏರಿಕೆ ಮುಂದುವರಿದ ರಾಷ್ಟ್ರಗಳಲ್ಲಂತೂ ಇನ್ನೂ ಗಮನಾರ್ಹವಾಗಿದೆ. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ 1850ರಲ್ಲಿ ಹುಟ್ಟಿದ ಮಗುವಿನ ಸರಾಸರಿ ಜೀವನದ ಅವಧಿ 39 ವರ್ಷಗಳಿದ್ದು ; ಇದು 1960ರಲ್ಲಿ 69ಕ್ಕೆ ಏರಿತು. ಅಲ್ಲದೆ ಅಂಕೆ ಅಂಶಗಳ ಪ್ರಕಾರ ಅಲ್ಲಿ ಈ ಶತಮಾನದ ಪೂರ್ವಾರ್ಧದಲ್ಲಿಯೇ ಒಟ್ಟು ಜನಸಂಖ್ಯೆ ಎರಡರಷ್ಟೂ 65 ವರ್ಷ ಮೇಲ್ಪಟ್ಟವರ ಗಣನೀಯವಾಗಿ ಏರಲೇಬೇಕು. ಮುಂದುವರಿದ ರಾಷ್ಟ್ರವೆನಿಸಿಕೊಂಡಿರುವ ಫ್ರಾನ್ಸಿನಲ್ಲಿ ಹತ್ತುವರ್ಷಗಳ ಹಿಂದೆ 65 ವರ್ಷ ದಾಟಿದವರ ಸಂಖ್ಯೆ ಒಟ್ಟು ಜನಸಂಖ್ಯೆಯ 12% ಇತ್ತು. ಹಿಂದುಳಿದ ರಾಷ್ಟ್ರಗಳಲ್ಲಿ ಇದು 3%-4% ಇರಬಹುದು. ಕಳೆದ ಒಂದು ಶತಮಾನದಿಂದಲೂ ವೈದ್ಯಕೀಯ ರಂಗದಲ್ಲಿ ನಡೆದಿರುವ ಸಂಶೋಧನೆಗಳು ಶಿಶುಗಳ ಹಾಗೂ ಬಾಲಕ ಬಾಲಕಿಯರ ಸೋಂಕುಕಾರಕ ಕಾಯಿಲೆಗಳನ್ನು ತಡೆಗಟ್ಟಿರುವುದೇ ಈ ಬದಲಾವಣೆಗೆ ಕಾರಣ. ಅದರೆ ಇಲ್ಲಿ ಒಂದು ಅಂಶವನ್ನು ಗಮನಿಸುವುದು ಲೇಸು. ವೈದ್ಯಕೀಯ ಸಂಶೋಧನೆಗಳು ಎಳೆವ ಯಸ್ಸಿನವರ ಅಕಾಲಮರಣವನ್ನು ತಡೆಗಟ್ಟಿರುವಂತೆ ಇಳಿವಯಸ್ಸಿನವರ ರೋಗರುಜಿನಗಳನ್ನು ನಿವಾರಿಸಲು ಸಾಧ್ಯವಾಗಿಲ್ಲ. ಏಕೆಂದರೆ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ 1850ರಲ್ಲಿ ಒಬ್ಬ ಮನುಷ್ಯ 60 ವರ್ಷ ಬದುಕಿದ್ದರೆ ಅವನು ಮುಂದೆ ಸರಾಸರಿ 16 ವರ್ಷ ಬದುಕಿ ತನ್ನ 76ನೆಯ ವಯಸ್ಸಿನಲ್ಲಿ ಸಾಯುತ್ತಿದ್ದ. ಆದರೆ 1957ರಲ್ಲಿ ಅದೇ ವಯಸ್ಸಿನ ಮನುಷ್ಯ ಮುಂದೆ ಸರಾಸರಿ 17 ವರ್ಷ ಬಾಳುವಂತಾಯಿತು. ಅಂದರೆ ಒಂದು ಶತಮಾನದ ಕಾಲದಲ್ಲಿ ಹುಟ್ಟಿದ ಮಗುವಿನ ಸರಾಸರಿ ಜೀವನದ ಅವಧಿ 30 ವರ್ಷಗಳು ಹೆಚ್ಚಾದರೆ, 60 ವರ್ಷದವರಲ್ಲಿ ಅದು ಕೇವಲ ಒಂದು ವರ್ಷ ಹೆಚ್ಚಾದಂತಾಯಿತು.

ಸಮಾಜದಲ್ಲಿ ವೃದ್ಧರ ಸಂಖ್ಯೆ ಹೆಚ್ಚಿದಂತೆ ವೈಯುಕ್ತಿಕ. ಅರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಜಟಿಲವಾಗಿ ಅಧಿಕಗೊಳ್ಳುತ್ತವೆ. ಚಟುವಟಿಕೆಯಿಂದ ಜೀವನ ಸಾಗಿಸದವರನ್ನು ಇಳಿವಯಸ್ಸಿನಲ್ಲಿ ಬದಲಾಗುತ್ತಿರುವ ಜಗತ್ತಿಗೆ ಉಪಯೋಗಿಸಿಕೊಳ್ಳುವ ವಿಧಿವಿಧಾನಗಳನ್ನು ಸಮಾಜಶಾಸ್ತ್ರಜ್ಞರು ಕಂಡುಹಿಡಿಯಬೇಕಾಗುತ್ತದೆ. ದೃಢಕಾಯರಾದ ವೃದ್ಧರಿಗೆ ಸೂಕ್ತವಾದ ಉದ್ಯೋಗಗಳನ್ನು ಕಲ್ಪಿಸಬೇಕಾಗುತ್ತದೆ. ಇಲ್ಲವಾದಲ್ಲಿ ಅವರ ಹೊರೆ ಅವರ ಮಕ್ಕಳ ಮೇಲೆ ಅಥವಾ ಅವರಿಗಿಂತ ಚಿಕ್ಕ ವಯಸ್ಸಿನವರ ಮೇಲೆ ಬೀಳುತ್ತದೆ. ಅಲ್ಲದೆ ಹಲವು ಸಂದರ್ಭಗಳಲ್ಲಿ ವೃದ್ಧಾಪ್ಯದಲ್ಲಿ ತಮ್ಮ ಜೀವನಕ್ಕೆ ಬೇಕಾಗುವಷ್ಟು ಸಂಪಾದಿಸಿಕೊಳ್ಳುವ ಸಾಮರ್ಥ್ಯ ಕಡಿಮೆ ಆಗಿರುವುದು. ಅವರಿಗೆ ವಯಸ್ಸು ಹೆಚ್ಚಾದಂತೆ ಓಡಾಡುವುದು. ನಿತ್ಯಕರ್ಮ ಮಾಡುವುದು ಕಠಿಣವೆನಿಸುತ್ತದೆ. ಇದರಿಂದ ಇವರು ಯುವ ಸಮಾಜಕ್ಕೆ ಹೊರೆಯಾಗುತ್ತಾರೆ. ವೃದ್ಧಾಪ್ಯವೇತನಗಳನ್ನು ಕಲ್ಪಿಸುವುದು. ವಸತಿ ಗೃಹಗಳನ್ನು ನಿರ್ಮಿಸುವುದು. ರೋಗಗ್ರಸ್ಥ ಮುದುಕರಿಗೆ ಔಷಧೋಪಚಾರಗಳನ್ನು ನಡೆಸುವುದು ಸಮಾಜದ ಕರ್ತವ್ಯವಾಗುತ್ತದೆ. ಈ ಹೊರೆಯನ್ನು ಸರ್ಕಾರ ಹೊರಬೇಕಾಗುತ್ತದೆ.

ವೃದ್ಧರ ಸಮಸ್ಯೆ ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಜಟಿಲವಾಗಿದೆ. ಇದಕ್ಕಾಗಿ ಅಲ್ಲಿಯ ಸರ್ಕಾರಗಳು ವೃದ್ಧರಿಗಾಗಿ ಯೋಗ್ಯ ಯೋಜನೆಗಳನ್ನು ರೂಪಿಸಿಕೊಳ್ಳತ್ತಿವೆ. ಜೀವವಿಮಾಸಂಸ್ಥೆಗಳು, ರಾಸಾಯನಿಕ ಹಾಗೂ ಔಷಧಾಗಾರಗಳು ಹೆಚ್ಚು ಹಣ ವ್ಯಯಮಾಡಿ ವೃದ್ಧರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದು ಅವರ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿವೆ.

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಇವನ್ನೂ ನೋಡಿ

ಬದಲಾಯಿಸಿ