ಚಾರ್ಲ್ಸ್ ಟಾಡ್ (1826-1910). ಬ್ರಿಟಿಷ್ ಖಗೋಳ ವಿಜ್ಞಾನಿ.

1841-1847 ಅವಧಿಯಲ್ಲಿ ರಾಯಲ್ ವೀಕ್ಷಣಾಲಯದಲ್ಲಿ ಸರ್ ಜಾರ್ಜ್ ಎರಿಯ ಕೈಕೆಳಗೆ ಕೆಲಸಮಾಡಿ ಮುಂದೆ 1848ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ವೀಕ್ಷಣಾಲಯದ ಸಹ-ಖಗೋಳವಿಜ್ಞಾನಿ ಆಗಿ ನೇಮಕಗೊಂಡ. ನೆಪ್ಚೂನ್ ಗ್ರಹವನ್ನು ಮೊದಲಿಗೆ ದೂರದರ್ಶಕದ ಮೂಲಕ ಅವಲೋಕಿಸಿದವರಲ್ಲಿ (1866) ಟಾಡ್ ಒಬ್ಬ. ದೂರದರ್ಶಕದ ನೆರವಿನಿಂದ ಚಂದ್ರನ ಡೆಗೂರಿ ಮಾದರಿ ಚಿತ್ರ ತೆಗೆದ (ಬೆಳ್ಳಿ ಫಲಕದ ಇಲ್ಲವೇ ಬೆಳ್ಳಿ ಲೇಪಿತ ತಾಮ್ರಫಲಕದ ಮೇಲೆ ಮೂಡಿಸಲಾಗುವ ಫೋಟೋಗ್ರಾಫ್; ಈ ಫಲಕ ಅಯೊಡೀನಿನ ಇಲ್ಲವೇ ಅಯೊಡೀನ್ ಮತ್ತು ಬ್ರೋಮೀನಿನ ಕ್ರಿಯೆಯಿಂದ ಸಂವೇದಕವಾಗುವಂತೆ ರಚನೆಗೊಂಡಿದೆ. ಈ ಪ್ರಕಾರ ಕೆಮರಾದಲ್ಲಿ ಚಿತ್ರ ತೆಗೆದ ಬಳಿಕ ಪಾದರಸದ ಹಬೆಯಿಂದ ಬಿಂಬವನ್ನು ಪಡೆಯಲಾಗುವುದು). ಖಗೋಳ ಛಾಯಾಚಿತ್ರಣದಲ್ಲಿ ಇದು ಪ್ರಥಮ ಪ್ರಯತ್ನ, 1885ರಲ್ಲಿ ಈತ ಆಸ್ಟ್ರೇಲಿಯ ವಸಾಹತಿನ ಪೋಸ್ಟ್ ಮಾಸ್ಟರ್ ಜನರಲ್ ಆಗಿ ನೇಮಕಗೊಂಡು ಆ ದೇಶಕ್ಕೆ ತೆರಳಿದ. ಅಲ್ಲಿ ಟೆಲಿಗ್ರಾಫ್ ಜಾಲವನ್ನು ಹೆಣೆಯುವುದರಲ್ಲಿ ಈತನ ಪಾತ್ರ ಬಲುಮುಖ್ಯವಾಗಿತ್ತು. ಈ ಹುದ್ದೆಯ ಜೊತೆಯಲ್ಲಿಯೇ ಖಗೋಳವಿಜ್ಞಾನವನ್ನು ಕುರಿತ ವೀಕ್ಷಣೆಗಳನ್ನೂ ಸಂಶೋಧನೆಗಳನ್ನೂ ಮುಂದುವರಿಸಿದ.

ಈತನಿಗೆ ಲಭಿಸಿದ ಗೌರವಗಳಲ್ಲಿ ಮುಖ್ಯವಾದದ್ದು ರಾಯಲ್ ಸೊಸೈಟಿಯ ಫೆಲೊಶಿಪ್.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: